(www.vknews.in) : ಬೇಡ ಗೆಳೆಯ ಮರುಗದಿರು, ನಿನ್ನ ಕಣ್ಣೀರು ಈ ಪಾಪಿ ಮನುಷ್ಯರಿಗಾಗಿ ಹಾಕದಿರು. ಹಿಂದೊಮ್ಮೆ ನಿನ್ನ ವರ್ಗದ ಕರುಳ ಕುಡಿಯನ್ನು ಭೂಮಿಗೆ ಬರಲು ಅನುಮತಿಸದೆ ಕೊಂದ ಪಾಪಿಗಳು ಕಣೋ ನಾವು.
ಬೇಡ ಕರಿ ಗೆಳೆಯ ಬೇಸರ ಪಡದಿರು. ನಿನಗಿರುವ ಕರುಣೆಯೂ ಕೂಡ ಮನುಷ್ಯ ಮಕ್ಕಳಿಗೆ ಇಲ್ಲವಾಯಿತು. ನಿನ್ನ ಕಣ್ಣೀರಿಗೆ ಬೆಲೆ ಇದೆ ಕಣೋ, ಅದಕ್ಕೆ ನಾವು ಅರ್ಹರಲ್ಲ ಹಾಗಾಗಿ ದಯವಿಟ್ಟು ಅದನ್ನು ನಮ್ಮ ಮೇಲೆ ಸುರಿಸದಿರು.
ಬೇಡ ಆನೆ ರಾಯನೇ ಕಣ್ಣೀರು ಹಾಕದಿರು. ನೀನು ಗಾತ್ರದಲ್ಲಿ ಮಾತ್ರ ಅಲ್ಲ ಕಣೋ ದೊಡ್ಡವನು, ಹೃದಯದಲ್ಲೂ ದೊಡ್ಡವನು, ನಿನ್ನ ಕಣ್ಣೀರನ್ನು ಹಾಳಾದ ಈ ಜನಕೆ ಸುರಿಸದಿರು. ನಿನ್ನ ಮನ ಮಿಡಿದಷ್ಟೂ ಈ ಮನುಷ್ಯ ಮನಸ್ಸು ಮಿಡಿಯಲಿಲ್ಲ ಕಣೋ.
ಬೇಡ ಗಜ ರಾಯನೇ, ಮರುಕ ಪಡದಿರು. ಇಲ್ಲಿ ಮನುಷ್ಯರೇ, ಮನುಷ್ಯರ ಸಾವಿನಲ್ಲಿ ಸಂತೋಷ ಪಟ್ಟು ಕುಣಿಯುತ್ತಿದ್ದಾರೆ, ಮತ್ತೆ ನೀನ್ಯಾಕೋ ಅಳುತ್ತೀಯ.? ಬೇಡ ಮಿತ್ರ ನಿನ್ನ ಕಾಳಜಿಗೆ ಇವರು ಯೋಗ್ಯರಲ್ಲ ಕಣೋ.
ನಿನ್ನ ಮನದ ವಿಶಾಲತೆ ಕಂಡು, ನಿನ್ನಂತಹ ಮೂಕ ಪ್ರಾಣಿಯಾದರೂ, ನಾನು ಆಗಬಾರದಿತ್ತೆ ಎಂದು ಅಸೂಯೆ ಆಗುತ್ತಿದೆ ಕಣೋ ನಿನ್ನ ಮೇಲೆ. ನೀನು ನೋಡಿದರೆ ನಮ್ಮನ್ನೇ ನಿನ್ನ ಮಡಿಲಿನಲ್ಲಿ ಮಲಗಲು ಅನುಮತಿ ಕೊಡುತ್ತಿದ್ದೀಯ.
ಇಲ್ಲ ಕಣೋ ಕರಿ, ನಿನ್ನಷ್ಟು ಒಳ್ಳೆಯವರು ನಾವಲ್ಲ ಕಣೋ. ಬಿಡುವು ಮಾಡಿ ನಿನ್ನ ಬಳಿ ಬರಲೇ, ಕಲಿಸಿ ಕೊಡುವೆಯಾ ಗೆಳೆಯ ನಿನ್ನ ಕರುಣೆಯನ್ನು.? ನಿನ್ನ ಗಾತ್ರವನ್ನು ಕಂಡು ಎಲ್ಲರೂ ಭಯ ಪಟ್ಟರು. ಆದರೆ ನಿನ್ನ ವಿಶಾಲವಾದ ಮನವನ್ನು ನಮಗೆ ಕಾಣಲು ಸಾಧ್ಯವಾಗಲೇ ಇಲ್ಲ ಕಣೋ.
ಬೇಕಿದ್ದರೆ, ನಿನಗೂ ನಮ್ಮ ಮೇಲೆ ಕ್ರೂರತೆ ತೋರಿಸಬಹುದಿತ್ತು, ಅದಕ್ಕೆ ಯಾವುದೇ ಕೇಸೂ ಇಲ್ಲ, ಶಿಕ್ಷೆಯೂ ಇರಲಿಲ್ಲ. ಯಾರೂ ನಿನ್ನನ್ನು ಕೇಳುವವರು ಇಲ್ಲ, ಕ್ರೂರತೆ ತೋರಿಸಬೇಕಾದ ನೀನೆ ಕರುಣೆ ತೋರಿಸುತ್ತಿದ್ದೀಯ, ಆದರೆ ಕರುಣೆ ತೋರಿಸಬೇಕಾದವರು ಇಲ್ಲಿ ಕ್ರೂರತೆಯ ಎಲ್ಲೆಯನ್ನೇ ದಾಟಿದ್ದಾರೆ.
ಹೆಸರಿಗೆ ಮಾತ್ರವಲ್ಲ ಕಣೋ ನೀನು ಗಜರಾಜ, ನಿನ್ನ ಸ್ವಭಾವಕ್ಕೂ ನೀನು ರಾಜನೇ. ನಿನ್ನ ಕಣ್ಣೀರು ಯಾವತ್ತೂ ವ್ಯರ್ಥವಾಗಲ್ಲ, ನಿನಗೆ ಮನುಷ್ಯರಿಂದ ಯಾಬ ಲಾಭ ಸಿಗದಿದ್ದರೂ, ನಿನ್ನೊಡೆಯ ನಿನ್ನ ಯಾವತ್ತೂ ಬಿಡಲಾರನು.
ಗೆಳೆಯ ಇಲ್ಲಿ ಕೆಲವರು, ಮನುಷ್ಯರ ಹೆಣವನ್ನು ಕಂಡು ಜಿಹಾದಿ, ಖುಬೂರಿ ಎಂದು ನಕ್ಕರು, ಗೇಲಿ ಮಾಡಿದರು, ನೀನು ಅದೇ ಮನುಷ್ಯರ ಸ್ಥಿತಿಕಂಡು ನಿನ್ನ ಮಡಿಲನ್ನೇ ಬಿಟ್ಟು ಕೊಟ್ಟೆ, ನಿಜಕ್ಕೂ ನೀನೆ ಕಣೋ ನಿಜವಾದ ರಾಜ ಗಜರಾಜ.
@ಮುಹಮ್ಮದ್ ಇಲ್ಯಾಸ್ ಪಿಲಿಕೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.