(www.vknews.in) : ಹಝ್ರತ್ ಇಸ್ಹಾಖ್ ರವರು ಸಣ್ಣ ಪ್ರಾಯದಲ್ಲೇ ತಂದೆ ಪ್ರವಾದಿ ಇಬ್ರಾಹೀಮ್ (ಅ) ರವರೊಂದಿಗೆ ಬೈತುಲ್ ಮುಖದ್ದಸ್ ಮಸೀದಿಗೆ ಯಾವಾಗಲೂ ನಮಾಝಿಗೆ ಹೋಗುತ್ತಿದ್ದರು. ಒಂದು ದಿನ ಹಝ್ರತ್ ಇಬ್ರಾಹೀಮರು ಮಸೀದಿಯಲ್ಲಿ ನಮಾಝ್ ಮಾಡಿ ಅಲ್ಲಿ ಸ್ವಲ್ಪ ವಿಶ್ರಾಂತಿಗೆ ಬೇಕಾಗಿ ಮಲಗಿದಾಗ ತಾನರಿಯದೆ ನಿದ್ರೆಗೆ ಜಾರಿದರು. ಅಲ್ಲಿ ಅವರಿಗೆ “ಒಂದು ಬಲಿ ಕೊಡಬೇಕೆಂದು” ಒಬ್ಬರು ಬಂದು ಹೇಳುವ ಒಂದು ಕನಸು ಬಿತ್ತು. ತಡಮಾಡದೆ ಮರುದಿನವೇ ಒಂದು ಕೋಣವನ್ನು ದ್ಸಬಹ್ ಮಾಡಿ ಅದರ ಮಾಂಸವನ್ನು ಬಡವರಿಗೆ ದಾನ ಮಾಡಿದರು. ಅಂದು ಮಗ ಇಸ್ಹಾಖರಿಗೆ ಸುಮಾರು ಏಳು ವರ್ಷ ಪ್ರಾಯವಾಗಿತ್ತು.
ಮಾರನೆಯ ದಿನವೂ ನಿದ್ರೆಯಲ್ಲಿ ಅದೇ ವ್ಯಕ್ತಿ ಬಂದು ಹೇಳಿದರು. “ನೀವು ಇವತ್ತು ಕೊಟ್ಟ ಬಲಿದಾನ ಸಾಕಾಗದು. ಅದಕ್ಕಿಂತಲೂ ಉತ್ತಮವಾದ ಒಂದು ಖುರ್ಬಾನಿ ಮಾಡಬೇಕು” ತಡಮಾಡದೆ ಅವರು ಒಂದು ಒಂಟೆಯನ್ನು ಚೂರಿಹಾಕಿ ಅದರ ಮಾಂಸ ಬಡವರಿಗೆ ದಾನಕೊಟ್ಟರು. ಸುಬ್ಹಾನಲ್ಲಾಹ್..! ಮೂರನೆಯ ರಾತ್ರಿಯೂ ಅದೇ ವ್ಯಕ್ತಿ ಬಂದು ಒಂಟೆಗಿಂತಲೂ ಒಂದು ಉತ್ತಮವಾದ ಬಲಿದಾನ ಮಾಡಬೇಕೆಂದು ಕನಸಲ್ಲಿ ನಿರ್ದೇಶ ಕೊಟ್ಟರು. ಆಗ ಹಝ್ರತ್ ಇಬ್ರಾಹೀಮರು ಆ ವ್ಯಕ್ತಿಯಲ್ಲಿ ಕೇಳಿದರು. ಒಂದು ಒಂಟೆಗಿಂತ ದೊಡ್ಡ ಬಲಿದಾನ ಯಾವುದು? ನೀವೇ ಹೇಳಿರಿ. ನನಗೆ ಅದು ಏನೆಂದು ಅರ್ಥವಾಗುವುದಿಲ್ಲ” ಆಗ ಆ ವ್ಯಕ್ತಿ ಹತ್ತಿರದಲ್ಲೇ ಮಲಗಿದ್ದ ಕಂದ ಹಝ್ರತ್ ಇಸ್ಹಾಖರತ್ತ ಸನ್ನೆ ಮಾಡಿದರು. ಕೂಡಲೇ ಎಚ್ಚೆತ್ತ ಇಬ್ರಾಹೀಮರು ತನ್ನ ಏಳು ವರ್ಷ ಪ್ರಾಯದ ಕಂದ ಇಸ್ಹಾಖರನ್ನು ತನ್ನ ಹತ್ತಿರ ಕರೆದು ಕೇಳಿದರು. “ಓ ನನ್ನ ಕಂದಾ.., ನಿನಗೆ ನನ್ನಲ್ಲಿ ಪ್ರೀತಿ ಮತ್ತು ಗೌರವ ಇದೆಯಾ? ಹಾಗಿದ್ದರೆ ನಾನು ಹೇಳುವ ಯಾವ ಕಾರ್ಯವನ್ನು ಮಾಡಲು ಅಥವಾ ಅನುಸರಿಸಲು ನೀನು ತಯಾರಿದ್ದಿಯಾ?” ಆಗ ಇಸ್ಹಾಖರು ಹೇಳಿದರು. “ಅಪ್ಪಾಜೀ.., ತಾವು ಹೇಳುವ ಯಾವುದನ್ನೂ ಮಾಡಲು ನಾನು ತಯಾರಿದ್ದೇನೆ. ಒಂದು ವೇಳೆ ನನ್ನ ಶಿರಸನ್ನು ತಾವು ತುಂಡು ಮಾಡುವುದಾದರೂ ನಾನು ಅದಕ್ಕೆ ಶಿರಸಾ ಬದ್ಧನಾಗಿದ್ದೇನೆ”
ಪುಟ್ಟ ಮಗನ ಮಾತು ಕೇಳಿದಾಗ ಮಗನು ಅನುಸರಣೆ ಮಾಡಿದ್ದರಲ್ಲಿ ತಂದೆ ಹಝ್ರತ್ ಇಬ್ರಾಹೀಮರಿಗೆ ಸಂತೋಷವಾದರೂ ಅವರ ಒಳಗಿನ ದುಃಖ ಏನೆಂದು ಅವರಿಗೆ ಮತ್ತು ಜಗದೊಡೆಯನಾದ ಅಲ್ಲಾಹನಿಗೆ ಮಾತ್ರ ಗೊತ್ತಿತ್ತು. ಅಲ್ಲಾಹನ ತೀರ್ಮಾನವಾದ್ದರಿಂದ ತಡಮಾಡದೆ ಮನೆಗೆ ಹೋಗಿ ಒಂದು ಹರಿತವಾದ ಕತ್ತಿ ಮತ್ತು ಹಗ್ಗವನ್ನು ಚೀಲದಲ್ಲಿ ಹಾಕಿ ಮಗನನ್ನು ಕರಕೊಂಡು ದೂರದ ಒಂದು ಬೆಟ್ಟದತ್ತ ಹೋದರು.
ಇತ್ತ ಸಮಯ ಸಾಧಿಸುತ್ತಿದ್ದ ಇಬ್ಲೀಸನು ಮನೆಯೊಡತಿ ತಾಯಿ ಬೀವಿ ಸಾರರವರ ಬಳಿ ಬಂದು ಹೇಳಿದನು. “ನಿಮಗೆ ಒಂದು ವಿಷಯ ಗೊತ್ತಾ? ನಿಮ್ಮ ಪತಿ ಮಗ ಇಸ್ಹಾಖರನ್ನು ಬಲಿಕೊಡಲು ಕಾಡಿಗೆ ಕೊಂಡು ಹೋಗುತ್ತಿದ್ದಾರೆ. ಕೈಯಲ್ಲಿ ಕತ್ತಿ, ಹಗ್ಗ ಎಲ್ಲಾವೂ ಇದೆ. ಈಗಲೇ ಹೋದರೆ ಬಚಾವು ಮಾಡಬಹುದು. ಆದ್ದರಿಂದ ಕೂಡಲೇ ಹೋಗಿ, ಮಗನ ಜೀವ ಉಳಿಸಿರಿ” ಆಗ ಬೀವಿ ಸಾರರವರು ಕೇಳಿದರು. “ಅದು ಯಾಕೆ ಬಲಿ ಕೊಡುವುದು?” ಆಗ ಇಬ್ಲೀಸನು “ಅದು ಏನೋ ಅವನ ಅಲ್ಲಾಹನ ತೀರ್ಮಾನ ಆಗಿರಬೇಕು” ಎಂದು ಉತ್ತರ ಕೊಟ್ಟನು. ಇದನ್ನು ಕೇಳಿದ ಬುದ್ಧಿವಂತೆಯಾದ ಬೀವಿ ಸಾರರವರು ಹೇಳಿದರು. “ಅಲ್ಲಾಹನ ತೀರ್ಮಾನವಾದರೆ ಹಾಗೆಯೇ ನಡೆಯಲಿ. ಅದರಲ್ಲಿ ತಾಯಿಯಾದ ನನಗೆ ಯಾವುದೇ ಬೇಸರವಿಲ್ಲ” ಎಂದು.
ಇನ್ನು ಇಲ್ಲಿ ಬಚಾವು ಆಗುವುದು ಕಷ್ಟವೆಂದು ತಿಳಿದ ಆತ ಕಾಡಿನತ್ತ ಬಲಿದಾನ ಮಾಡಲು ಹೋಗುತ್ತಿದ್ದ ತಂದೆ ಮತ್ತು ಮಗನನ್ನು ಹಿಂಬಾಲಿಸಿ ನಡೆದನು. ಬಳಿಕ ಇಸ್ಹಾಖರನ್ನು ಕರೆದು ಹೇಳಿದನು. “ಓ ಇಸ್ಹಾಖ್ ನೀನು ಯಾವ ಕಡೆ ಹೋಗುತ್ತಿರುವಿ? ನಿನ್ನ ತಂದೆಯ ಕೈಯಲ್ಲಿರುವ ಚೀಲದಲ್ಲಿ ಏನು ಸಾಮಾನು ಉಂಟೆಂದು ನೋಡಿದೆಯಾ? ಅವರು ನಿನ್ನನ್ನು ಕೊಲ್ಲಲು ಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಕೂಡಲೇ ತಪ್ಪಿಸಿಕೊಳ್ಳು” ಎಂದು.
ಮಗ ಇಸ್ಹಾಖರಿಗೆ ಈ ಅಗೋಚರ ವ್ಯಕ್ತಿಯಿಂದ ಈ ಶಬ್ದ ಕೇಳಿದಾಗ ತಂದೆಯನ್ನು ಕರೆದು ಹೇಳಿದರು. “ಅಪ್ಪಾ .. ಅದೇನು ಏನೋ ಒಂದು ಅಗೋಚರ ವ್ಯಕ್ತಿಯ ಶಬ್ದ? ನಿಮಗೆ ಅದು ಕೇಳಿಸುತ್ತಿಲ್ಲವೇ?” ತಂದೆ ಹೇಳಿದರು. “ಅದೆಲ್ಲಾ ಕೇಳುತ್ತಿದೆ. ಆದರೆ ಈಗ ಅದರ ಕಡೆಗೆ ಗಮನ ಹರಿಸುವ ಸಮಯವಲ್ಲ. ಅದರ ಬಗ್ಗೆ ಮತ್ತೆ ಹೇಳುತ್ತೇನೆ. ಈಗ ಬೇಗ ಮುಂದಕ್ಕೆ ನಡೆ” ಎಂದು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.