(www.vknews.in) : ದಂಪತಿಗಳ ಸಂಬಂಧವನ್ನು ಗಂಡ, ಹೆಂಡತಿ ಎಂದು ವಿಭಜಿಸದೆ ಝೌಜ್ (ಜೋಡಿ) ಎಂಬ ಮನೋಹರವಾದ ಪದದೊಂದಿಗೆ ಪವಿತ್ರ ಕುರ್ಆನ್ ಕೌಟುಂಬಿಕ ಭದ್ರತೆಗೆ ಅಡಿಪಾಯ ಹಾಕಿದೆ. ಒಬ್ಬರಿಗೊಬ್ಬರು ಬಿಟ್ಟಗಲಲಾಗದ, ದೂರ ಸರಿಸಲಾಗದ ಬಲಿಷ್ಠ ನಂಟಿಗೆ ಜೋಡಿ ಎನ್ನಲಾಗುತ್ತದೆ. ಆದ್ದರಿಂದ ಒಬ್ಬರ ನೋವು, ವೇದನೆಯನ್ನು ಕಂಡು ಮತ್ತೊಬ್ಬರು ಖುಷಿ ಪಡುವಂತದ್ದಲ್ಲ. ಚಪ್ಪಾಳೆ ತಟ್ಟುವಂತಿಲ್ಲ. ಬದುಕಿನ ಪ್ರತಿಯೊಂದು ನೋವು, ನಲಿವು, ಸವಾಲುಗಳನ್ನು ಜತೆ ಜತೆಯಾಗಿ ಹಂಚಿಕೊಂಡು ಕೂಡಿ ಬಾಳುವುದರ ಹೆಸರೇ ದಾಂಪತ್ಯ. ಜೋಡಿಗಳ ಈ ಬಾಂಧವ್ಯವನ್ನು ದ್ವಿಚಕ್ರ ವಾಹನಕ್ಕೆ ಹೋಲಿಸಬಹುದು. ದ್ವಿಚಕ್ರ ವಾಹನದ ಹಿಂದಿನ ಚಕ್ರ ಪಂಚರ್ ಆದರೆ, ಮುಂದಿನದ್ದು ಸರಿಯಿದೆಯಲ್ಲ ಎಂದು ಪಂಚರ್ ಸರಿಪಡಿಸದೆ ಮುಂದೆ ದಾಟುವಂತಿಲ್ಲ.
ಅಥವಾ ಮುಂದಿನ ಚಕ್ರ ಪಂಚರ್ ಆಗಿದ್ದು, ಹಿಂದಿನದ್ದು ಸರಿಯಿದೆಯೆಂದು ಓಡಿಸುವಂತೆಯೂ ಇಲ್ಲ. ಒಂದನ್ನು ಕಡೆಗಣಿಸಿ ಮತ್ತೊಂದರಲ್ಲಿ ಚಲಿಸಲಾಗದು. ಹಠಹಿಡಿದು ಚಲಾಯಿಸಿದರೆ ಚಕ್ರದ ರಿಮ್ ವಕ್ರವಾಗುತ್ತದೆ. ಅದರ ಕಡ್ಡಿಗಳೂ ಹಾಳಾಗುತ್ತದೆ. ಮುಂದಕ್ಕೆ ಚಲಿಸಲಾಗದೆ ಕೆಳಕ್ಕೆ ಬೀಳಿಸುತ್ತದೆ. ಹಾಗೆಯೇ ಸತಿ-ಪತಿಗಳು ಸದಾ ಒಬ್ಬರಿಗೊಬ್ಬರು ಹಿತ ಬಯಸುವ, ಬಾಧ್ಯತೆ ನಿರ್ವಹಿಸುವ ಪ್ರೀತಿಯ ಜೋಡಿಗಳು. ಈ ಸತ್ಯವನ್ನು ಅರಿತವರಿಗೇ ಸವಾಲುಗಳ ಮಕರಂದ ಹೀರಿ ಕುಟುಂಬದಲ್ಲಿ ನಕ್ಕುನಲಿದಾಡಲು ಸಾಧ್ಯವಾಗುವುದು. ಇಸ್ಲಾಮ್ನ ದೃಷ್ಟಿಯಲ್ಲಿ ದಾಂಪತ್ಯವೆಂಬುದು ಬಹಳ ಪವಿತ್ರವಾದುದು. ಅದರ ಹಕ್ಕು ಬಾಧ್ಯತೆಗಳು ಆರಾಧನೆಗೆ ಸಮಾನವಾದುದು. ಒಂಟಿಯಾಗಿದ್ದ ಅಥವಾ ಏಕಾಂಗಿಯಾಗಿದ್ದವರನ್ನು ಪ್ರಬಲ ಕರಾರಿನೊಂದಿಗೆ ಜೋಡಿಸುವುದೇ ಮದುವೆ ಎಂಬ ಇಬಾದತ್. ಆದ್ದರಿಂದ ಯಾವ ಕಾರಣಕ್ಕೂ ಕರಾರು ಹರಾಜಾಗ ಬಾರದು. ದುರ್ಬಲವಾಗ ಬಾರದು. ಜತೆಗೂಡಿ ಬಹಳ ನಿಷ್ಠೆಯಿಂದ ಪಾಲಿಸ ಬೇಕಾದ ಕರಾರದು.
“ಸುಂದರ ನಾಳೆಗೆ, ಸುಮಧುರ ಬಾಳಿಗೆ” ಇಸ್ಲಾಮ್ ಧಾರಾಳ ಮಾರ್ಗದರ್ಶನ ನೀಡಿದೆ. ಬೆಳಕಿನ ದಾರಿ ತೋರಿಸಿದೆ. ಜೋಡಿಗಳು ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟು ಪರಸ್ಪರ ಹಗೆತನವಿಟ್ಟುಕೊಳ್ಳದೆ, ಸದಾ ಕೂಡಿ ಬಾಳುವುದನ್ನು ಕುರ್ಆನ್ ಪ್ರೋತ್ಸಾಹಿಸುತ್ತದೆ. ಪ್ರವಾದಿವರ್ಯ(ಸ)ರೂ ಜೋಡಿಗಳ ಭದ್ರತೆಗೆ ಧಾರಾಳ ಮುತ್ತುರತ್ನಗಳ ಮೌಲ್ಯಗಳನ್ನು ಹೆಣೆದಿದ್ದಾರೆ. ನಿಜವಾಗಿ ವಿವಾಹವೆಂಬುದು ಬರೀ ಶಾರೀರಿಕ ಮಿಲನದ ಹೆಸರಲ್ಲ. ಶಾರೀರಿಕವಾಗಿಯೂ ಮಾನಸಿಕವಾಗಿಯೂ ಕೂಡಿ ಬಾಳುವುದೇ ದಾಂಪತ್ಯ ವಿಜಯದ ಬಲಿಷ್ಠ ಗುಟ್ಟು. ಅದರ ಸವಿಯೇ ಬಹು ಟೇಸ್ಟು. ಪರಸ್ಪರ ಪ್ರೀತಿ, ವಿಶ್ವಾಸ, ದಯೆ, ವಾತ್ಸಲ್ಯಗಳೇ ದಾಂಪತ್ಯ ವಿಜಯದ ಭದ್ರ ಬುನಾದಿ. ಆದರೆ ಈ ಸತ್ಯವನ್ನು ಬಹುತೇಕರು ಅರಿತಿಲ್ಲ.
ಆದ್ದರಿಂದಲೇ ಕುಟುಂಬದಲ್ಲಿ ಸದಾ ಒಡಕು, ಬಿರುಕು ಮೂಡುತ್ತದೆ. ಗಲಾಟೆ, ರಂಪಾಟಗಳು ಬೀದಿ ಪಾಲಾಗುತ್ತವೆ. ವಿಚ್ಛೇದನ, ಕೊಲೆ, ಆತ್ಮಹತ್ಯೆ, ಅಕ್ರಮ ಚಾಟಿಂಗ್ ಮತ್ತು ಅನೈತಿಕ ಸಂಬಂಧಗಳು ಅದೆಷ್ಟೋ ಕುಟುಂಬಗಳ ಮಾನಸಿಕ ನೆಮ್ಮದಿಯನ್ನು ಕೆಡಿಸಿ ನುಚ್ಚುನೂರಾಗಿಸಿದೆ. ಮುಸ್ಲಿಮ್ ಸಮುದಾಯದಲ್ಲೂ ಇಂತಹ ದುರಂತಗಳು ಘಟಿಸುತ್ತಿರುವುದಂತೂ ಬಹಳ ಖೇದಕರ. ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಸಮುದಾಯ ಮುತ್ತನ್ನು ಕಳೆದುಕೊಂಡ ಚಿಪ್ಪಿನಂತಾಗಿದೆ. ಯಾಕೆ ಹೀಗಾಯಿತೆಂದು ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ. ನಾವೆಲ್ಲೋ ಎಡವಿದ್ದೇವೆ… ಮುಂದುವರಿಯುವುದು..
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.