(www.vknews.in) : ಶಿಕ್ಷಕರ ದಿನಾಚರಣೆ ಸೆಪ್ಟೆಂಬರ್ 5…………
ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ – ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ – ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ……..
ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ – ಮನ ಬಿಚ್ಚಿ – ಮುಂದಿನ 25 ವರ್ಷಗಳಲ್ಲಿ ಮೌಲ್ಯಯುತ ಬಲಿಷ್ಠ ಭಾರತ ನಿರ್ಮಾಣವಾಗಲು……..
ಅಕ್ಷರ ಕಲಿಸುವವರು ನೀವಲ್ಲವೇ – ಅಧ್ಯಯನ ಮಾಡಲು ಮಾರ್ಗ ಸೂಚಿಸುವವರು ನೀವಲ್ಲವೇ – ಚಿಂತಿಸಲು ಪ್ರೇರೇಪಿಸುವವರು ನೀವಲ್ಲವೇ – ಅನ್ಯಾಯದ ವಿರುದ್ಧ ಸಿಡಿದೇಳಲು ಪ್ರೋತ್ಸಾಹಿಸುವವರು ನೀವಲ್ಲವೇ – ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುವವರು ನೀವಲ್ಲವೇ……
ಭ್ರಷ್ಟ ವ್ಯವಸ್ಥೆಯ ವಿರುದ್ಧ ನೀವೇ ಮೌನವಾದರೆ, ಮೌಢ್ಯಗಳ ವಿರುದ್ಧ ನೀವೇ ಮೌನವಾದರೆ, ಜಾತಿ ಪದ್ದತಿಯು ವಿರುದ್ಧ ನೀವೇ ಮೌನವಾದರೆ, ಚುನಾವಣಾ ಅಕ್ರಮಗಳ ವಿರುದ್ಧ ನೀವೇ ಮೌನವಾದರೆ ಸಮಾಜದ ಭವಿಷ್ಯವೇನು……
ಸತ್ಯದ ಪರವಾಗಿ ಮಾತನಾಡಲು ಹೇಳಿ ಕೊಟ್ಟವರು ನೀವು, ದೇಶ ಭಕ್ತಿಯ ಪಾಠ ಮಾಡಿದವರು ನೀವು, ಮಾನವೀಯ ಮೌಲ್ಯಗಳನ್ನು ಬಿತ್ತಿದವರು ನೀವು, ಸಂವಿಧಾನ ಹಕ್ಕು – ಕರ್ತವ್ಯಗಳ ಬಗ್ಗೆ ಎಚ್ಚರಿಸಿದವರು ನೀವು……
ಈಗ ನೀವೇ ರಾಜಿಯಾದರೆ ಮುಂದೇನು ?
” ಚೋರ್ ಗುರು ಚಂಡಾಲ್ ಶಿಷ್ಯ ” ಎಂಬ ಆಡುಮಾತಿನ ಒಂದು ವಾಕ್ಯವನ್ನು ಹಾಸ್ಯದ ಅರ್ಥದಲ್ಲಿ, ಶಿಕ್ಷಕರ ದಿನದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾ…………….
ಈಗಲೂ ಸಮಾಜದಲ್ಲಿ ಅಲ್ಪ ಸ್ವಲ್ಪ ಮರ್ಯಾದೆ ಗೌರವ ಉಳಿಸಿಕೊಂಡಿರುವ ಏಕೈಕ ವೃತ್ತಿ ಶಿಕ್ಷಕರದು……..
ಪೋಲೀಸರು, ಡಾಕ್ಟರುಗಳು, ಬ್ಯಾಂಕಿನವರು, ಪತ್ರಕರ್ತರು, ಅಧಿಕಾರಿಗಳು, ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಸಮಾಜ ಸೇವಕರು ಮುಂತಾದ ಎಲ್ಲರೂ ವೇಗದ, ಆಧುನಿಕ, ವ್ಯಾವಹಾರಿಕ ಜಗತ್ತಿನಲ್ಲಿ ಮೌಲ್ಯ ಮತ್ತು ಕರ್ತವ್ಯ ಪಾಲನೆಯಲ್ಲಿ ಶಿಥಿಲವಾಗುತ್ತಾ ಸಾಗುತ್ತಿದ್ದಾರೆ…..
ಆದರೆ, ಕೆಲವು ಅಪರೂಪದ ನೀತಿಗೆಟ್ಟ ಶಿಕ್ಷಕರನ್ನು ಹೊರತುಪಡಿಸಿ, ಬಹುತೇಕ ಎಲ್ಲರೂ ಒಂದಷ್ಟು ಸಭ್ಯತೆ, ಜವಾಬ್ದಾರಿ ಮತ್ತು ಸಾಮಾಜಿಕ ಕಾಳಜಿ ಉಳ್ಳವರಾಗಿದ್ದಾರೆ. ಆ ಕಾರಣಕ್ಕಾಗಿಯೇ ಸಮಾಜ ಇನ್ನೂ ಸಂಪೂರ್ಣವಾಗಿ ನಾಶವಾಗದೆ ಉಳಿದಿದೆ….
ಒಂದು ಪ್ರಖ್ಯಾತ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಹೀಗೆ ಹೇಳಿದರು ” ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ಮತ್ತು ಪೋಷಕರು ತೆಗೆದುಕೊಳ್ಳುವ ಶ್ರಮ ಮತ್ತು ಜವಾಬ್ದಾರಿಯ ಶೇಕಡಾ 25% ರಷ್ಟು ಸಹ ವಿದ್ಯಾರ್ಥಿಗಳು ತೆಗೆದುಕೊಳ್ಳುವುದಿಲ್ಲ. ಶಿಕ್ಷಕರು ಮತ್ತು ಪೋಷಕರಿಗೆ ಹೊರೆಯಾಗುತ್ತಾ ಮಕ್ಕಳಿಗೆ ಹಗುರವಾಗುತ್ತಾ ಸಾಗುತ್ತಿದೆ ಇಂದಿನ ಶಿಕ್ಷಣ ವ್ಯವಸ್ಥೆ ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು…..
ಅಕಾಡೆಮಿಕ್ ಆಗಿ ಇಂದು ಕಲಿಕೆ ಬಹಳ ಸುಲಭವಾಗಿದೆ. ಅಂದಿನ 10th ಅಥವಾ SSLC ಯನ್ನು ಮಾನದಂಡವಾಗಿ ಇಟ್ಟುಕೊಂಡು ಹೇಳಬೇಕೆಂದರೆ ಅದನ್ನು ಪಾಸು ಮಾಡುವುದೇ ಬಹುದೊಡ್ಡ ಸಾಧನೆಯಾಗಿತ್ತು. ಫಸ್ಟ್ ಕ್ಲಾಸ್ ( ಶೇಕಡ 6೦% ) ಬಂದರೆ ಆತನೇ ಅತಿ ಬುದ್ದಿವಂತನೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ನಗರದ ಎಷ್ಟೋ ಶಾಲೆಗಳಲ್ಲಿ ಶೇಕಡಾ 9೦% ಅಂಕಗಳು ಬಂದರೂ ಪ್ರವೇಶ ಸಿಗುವುದು ಕಷ್ಟವಾಗಿದೆ…..
ಶಿಕ್ಷಕನೇ ಸಮಾಜದ ಅತಿಮುಖ್ಯ ವ್ಯಕ್ತಿ ಎಂಬ ವ್ಯವಸ್ಥೆಯಿಂದ ಆಧುನಿಕ ಶಿಕ್ಷಣ ಬದಲಾದ ಪರಿಸ್ಥಿತಿಯನ್ನು ತೆಲುಗಿನಲ್ಲಿ ಹೀಗೆ ವರ್ಣಿಸಲಾಗಿದೆ. ಅದರ ಕನ್ನಡ ಅರ್ಥ ” ಎಲ್ಲೂ ಕೆಲಸ ಮಾಡಲು ಯೋಗ್ಯನಲ್ಲದ ಅಯೋಗ್ಯನಿಗೆ ಉದ್ಯೋಗ ನೀಡುವ ಕೊನೆಯ ಇಲಾಖೆ ಎಜುಕೇಶನ್ ಡಿಪಾರ್ಟ್ಮೆಂಟ್ ” ಹಾಸ್ಯ ಭರಿತ ವ್ಯಂಗ್ಯ ಇಲ್ಲಿದ್ದರು ಸ್ವಲ್ಪ ಮಟ್ಟಿಗೆ ವಾಸ್ತವವೂ ಆಗಿದೆ……
ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಗುರುಗಳೇ ಮತ್ತು ಪ್ರತಿಯೊಬ್ಬರೂ ಶಿಕ್ಷಕರೇ. ಕಲಿಕೆ ಕಲಿಸುವಿಕೆ ಮಾನವ ಜನಾಂಗದ ಅಂತ್ಯದವರೆಗೂ ಸಾಗುತ್ತಲೇ ಇರುತ್ತದೆ…..
ಆದರೆ, ಅಕ್ಷರಗಳೋ, ಕಲೆಯೋ, ತಾಂತ್ರಿಕತೆಯೋ, ಚಾಕಚಕ್ಯತೆಯೋ, ಇನ್ನೇನೋ ಕಲಿಕೆಗಿಂತ ಮುಖ್ಯವಾಗಿ ಪ್ರೀತಿ ವಿಶ್ವಾಸ ವಿನಯ ಮಾನವೀಯತೆ, ಜೀವಪರ ಸಹಜೀವನ, ಪರಿಸರ ರಕ್ಷಣೆ ಮುಂತಾದ ಅಂಶಗಳ ಕಲಿಕೆಯೇ ಅತ್ಯುತ್ತಮ ಮತ್ತು ಮೊದಲ ಆಧ್ಯತೆಯಾಗಬೇಕು. ಆಗ ಮಾತ್ರ ನಾಗರಿಕ ಸಮಾಜ ಸುಸ್ಥಿತಿಯಲ್ಲಿ ಇರಲು ಸಾಧ್ಯ…
ಹೊಟ್ಟೆ ಪಾಡಿನ ಆಧುನಿಕ ಶಿಕ್ಷಣ ಹೊಟ್ಟೆ ತುಂಬಿದಂತೆ ಬದುಕಿನ ಸಾರ್ಥಕತೆಯ ಶಿಕ್ಷಣವಾಗಲಿ ಎಂಬ ನಿರೀಕ್ಷೆಯಲ್ಲಿ…..
ಗುರುಗಳೆಂಬ ಕಲಿಸುವವರು ನಮ್ಮ ಸಮಾಜದಲ್ಲಿ ಇನ್ನು ಮುಂದಾದರು ಅತ್ಯುತ್ತಮ ಸ್ಥಾನ ಗೌರವ ಮತ್ತು ಯೋಗ್ಯತೆ ಪಡೆಯಲಿ ಎಂದು ಆಶಿಸುತ್ತಾ…..
” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ” ಎಂಬ ಮಾತನ್ನು
” ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ ” ಎನ್ನೋಣವೇ…….
ಅದೊಂದೇ ಭರವಸೆ ಈಗ ಉಳಿದಿರುವುದು……
ಆಧುನಿಕ ಕಾಲದ ಕಡ್ಡಾಯ ಶಿಕ್ಷಣದ ಸಂದರ್ಭದಲ್ಲಿ ಮನುಷ್ಯನ ತಿಳಿವಳಿಕೆ ಅಧೀಕೃತವಾಗಿ ಮೂಡುವುದೇ ಶಾಲೆ ಮತ್ತು ಶಿಕ್ಷಕರ ಪ್ರಭಾವದಿಂದ. ಅನಧಿಕೃತವಾಗಿ ಕುಟುಂಬ ಪರಿಸರಗಳ ಪ್ರಭಾವ ಬೀರುತ್ತದೆ ನಿಜ. ಆದರೆ ಯೋಚನೆಯ ವಿವಿಧ ಆಯಾಮಗಳು ಟಿಸಿಲೊಡೆಯುವುದೇ ಶಿಕ್ಷಣದ ಕಲಿಕಾ ಕ್ರಮದಲ್ಲಿ. ಅಂದರೆ ಶಿಕ್ಷಕರೇ ನಮ್ಮ ಬದುಕಿನ ಅತ್ಯಂತ ಪ್ರಮುಖ ಮಾರ್ಗದರ್ಶಿಗಳು…..
ಇದರ ಒಟ್ಟು ಸಾರಾಂಶವನ್ನು ಹೀಗೆ ಹೇಳಬಹುದು. ಒಬ್ಬ ವ್ಯಕ್ತಿ ಶಿಕ್ಷಣ ಮತ್ತು ಶಿಕ್ಷಣದಿಂದಲೇ ಬಹುತೇಕ ರೂಪಗೊಳ್ಳುವುದಾದರೆ ಇಡೀ ಸಮಾಜ ಇದೇ ವ್ಯಕ್ತಿಗಳ ಸಮೂಹ. ಅಂದರೆ ಶಿಕ್ಷಣ ಶಿಕ್ಷಕರು ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು….
ಆದರೆ ಭಾರತೀಯ ಸಮಾಜದ ಈ ಕ್ಷಣದ ಪ್ರಾಕೃತಿಕ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ನೋಡಿದಾಗ ಎಲ್ಲಾ ಒಳ್ಳೆಯದರ ನಡುವೆ ನಿರಾಸೆ ಮತ್ತು ಬೇಸರವೇ ಹೆಚ್ಚು ಎದ್ದು ಕಾಣುತ್ತದೆ. ಕಾರಣ ಶಿಕ್ಷಣ ಮತ್ತು ಶಿಕ್ಷಕರ ನೈತಿಕ ಮೌಲ್ಯಗಳು ಸಹ ಗಣನೀಯವಾಗಿ ಕುಸಿಯುತ್ತಿದೆ. ಕಾರಣಗಳು, ನೆಪಗಳು, ಅನಿವಾರ್ಯಗಳು ಹಲವಿರಬಹುದು. ಆದರೆ ವಾಸ್ತವ ಮಾತ್ರ ಕಠೋರ……
ಕ್ರಿಸ್ತ ಪೂರ್ವ ಕಾಲ ಘಟ್ಟದಲ್ಲಿ ಅಥವಾ ಭಾರತದ ಸ್ವಾತಂತ್ರ್ಯ ಪೂರ್ವದ ಕಾಲಘಟ್ಟಕ್ಕೆ ಈಗಿನ ಆಧುನಿಕ ಶಿಕ್ಷಣ ಪಡೆದ ಸಮಾಜಕ್ಕೆ ಹೋಲಿಕೆ ಮಾಡಿದಾಗ ತಿಳಿವಳಿಕೆ ಮತ್ತು ನಡವಳಿಕೆಯ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ. ರಕ್ಷಣೆ, ಸೌಲಭ್ಯ, ಸ್ವಾತಂತ್ರ್ಯ, ಸಮಾನತೆ, ಅನುಕೂಲ, ತಂತ್ರಜ್ಞಾನ ಎಲ್ಲವೂ ಈಗ ಅತ್ಯುತ್ತಮ ಮಟ್ಟದಲ್ಲಿದೆ. ಆದರೆ ನಾಗರಿಕ ಸಮಾಜದ ಮೂಲ ಆಶಯಗಳು ಮಾತ್ರ ನಿಕೃಷ್ಟವಾಗಿದೆ. ಮನುಷ್ಯ ಮುಖವಾಡದ ರಾಕ್ಷಸ ರೂಪಗಳು ಅನಾಗರಿಕ ಸಮಾಜವನ್ನು ನೆನಪಿಸುತ್ತಿದೆ. ಅದರ ಹೊಣೆಗಾರಿಕೆ ಸಹ ನೇರವಾಗಿ ಶಿಕ್ಷಣ ಮತ್ತು ಶಿಕ್ಷಕರತ್ತ ಬೊಟ್ಟು ಮಾಡುತ್ತಿದೆ….
ಹಿಂದೆ ಶಿಕ್ಷಕರ ಮೇಲೆ ಇದ್ದ ಆರೋಪಗಳು ಕೇವಲ ಕೆಲವರಿಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಆ ಆರೋಪಗಳು ಇಂದು ಸಾರ್ವತ್ರಿಕವಾಗುತ್ತಿವೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿ ಸಂಬಳಕ್ಕಾಗಿ ದುಡಿಯುವ ಹೊಟ್ಟೆಪಾಡಿನ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲರೂ ಹೊಟ್ಟೆಪಾಡಿಗಾಗಿ ದುಡಿಯುವವರೇ ಎಂಬುದು ವಾಸ್ತವ, ಆದರೆ ವೃತ್ತಿ ಧರ್ಮವನ್ನು ಸಹ ಅತ್ಯಂತ ಪ್ರಾಮಾಣಿಕವಾಗಿ ಮತ್ತು ದಕ್ಷವಾಗಿ ಇಷ್ಟಪಟ್ಟು ಪ್ರೀತಿಯಿಂದ ಪಾಲಿಸಬೇಕು. ಶಿಕ್ಷಕರು ಮತ್ತು ವೈದ್ಯರ ಮೇಲೆ ಈ ಜವಾಬ್ದಾರಿ ಹೆಚ್ಚು. ಅಲ್ಲಿ ಬಹಳಷ್ಟು ಶಿಕ್ಷಕರು ಎಡವುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂಬಳ ಮೀರಿದ ಬಾಂಧವ್ಯ ಮತ್ತು ಒಡನಾಟ ಸಾಧಿಸುವಲ್ಲಿ ವಿಫಲವಾಗುತ್ತಿದ್ದಾರೆ. ವರ್ಗಾವಣೆ ಎಂಬುದು ಪೋಲೀಸ್ ಇಲಾಖೆಯ ರೀತಿ ದಂಧೆಯಾಗಿದೆ. ಕೆಲವರು ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ರಾಜಕಾರಣಿ ಬಾಲಂಗೋಚಿ ಅಥವಾ ಪುಡಾರಿಗಳಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ಜೂಜು ಮತ್ತು ಚೀಟಿ – ಬಡ್ಡಿ ವ್ಯವಹಾರಗಳಲ್ಲಿ ಸಹ ಹೆಚ್ಚು ಹೆಚ್ಚು ಕಾಲ ಕಳೆಯುತ್ತಾರೆ. ಇನ್ನೂ ಹಲವಾರು ಎಂದಿನಂತೆ ದುರಭ್ಯಾಸಗಳ ದಾಸರಾಗಿದ್ದಾರೆ. ಯಾವುದೋ ಪಕ್ಷದ ಅನಧಿಕೃತ ಚುನಾವಣಾ ಏಜೆಂಟ್ ಗಳೇ ಆಗಿದ್ದಾರೆ. ಶಿಕ್ಷಕಿಯರಲ್ಲಿ ಸಹ ಕೆಲವರು ಸಮಯ ಕೊಲ್ಲುವುದಷ್ಟೇ ಮುಖ್ಯ ಎನ್ನವಂತೆ ಕಾರ್ಯನಿರ್ವಹಿಸಿ ಸಮಯ ಮುಗಿದ ತಕ್ಷಣ ಮನೆಗೆ ಓಡುತ್ತಾರೆ….
ಪರೀಕ್ಷಾ ಕೇಂದ್ರಗಳಲ್ಲಿ ಸಹ ಅನೇಕ ಅವ್ಯವಹಾರಗಳಿಗೆ ಕಾರಣರಾಗಿ ಕೆಟ್ಟ ಹೆಸರು ತಂದುಕೊಂಡಿದ್ದಾರೆ. ಹೀಗೆ ಸಾಲು ಸಾಲು ತಪ್ಪುಗಳು ಆಗುತ್ತಿವೆ…..
ಇದರ ಜೊತೆಗೆ ಸರ್ಕಾರಗಳು ಸಹ ಶಿಕ್ಷಕರನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಾ ಪಠ್ಯೇತರ ವಿಷಯಗಳಲ್ಲಿ ಅವರನ್ನು ತೊಡಗಿಸಿ ಒತ್ತಡ ನಿರ್ಮಾಣ ಮಾಡಿ ಪಾಠ ಮಾಡಲು ಸಮಯವಿಲ್ಲದಂತೆ ಮಾಡಿದೆ. ಟಾರ್ಗೆಟ್ ಫಲಿತಾಂಶ ನಿಗದಿಪಡಿಸಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರಿಗೇ ಹೆಚ್ಚು ಜವಾಬ್ದಾರಿ ವಹಿಸಿ ಶಿಕ್ಷಣದ ಹಾದಿ ತಪ್ಪಿಸಿದೆ. ಶಿಕ್ಷಕರ ಸಂಘಗಳ ಚುನಾವಣೆ ಮತ್ತು ವಿಧಾನ ಪರಿಷತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಶಿಕ್ಷಕರೇ ಮತದಾರರಾದರು. ಅಲ್ಲಿಯೂ ಮಾದರಿಯಾಗಬೇಕಾದ ಶಿಕ್ಷಕರೇ ಹಣ ಪಡೆದು ಭ್ರಷ್ಟರಾಗಿರುವುದು ಬಹಿರಂಗ ಸತ್ಯ…..
ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರು ಬೋದಿಸುವ ವೈಜ್ಞಾನಿಕ ಮಾಹಿತಿ ಮತ್ತು ಸಾರ್ವತ್ರಿಕ ಸತ್ಯಗಳಿಗೆ ವಿರುದ್ಧವಾಗಿ ಮೌಡ್ಯಗಳನ್ನು ಬಿತ್ತುವ ಅನೇಕ ಕಾರ್ಯಕ್ರಮಗಳು ಅನರ್ಹರಿಂದಲೇ ಪ್ರತಿನಿತ್ಯ ಪ್ರಸಾರ ಮಾಡುವಾಗ ಯಾವುದೇ ಶಿಕ್ಷಕರು ಅಥವಾ ಶಿಕ್ಷಕ ಸಂಘಟನೆಗಳು ಅದನ್ನು ಪ್ರತಿಭಟಿಸಿ ಹೇಳಿಕೆ ನೀಡುವುದನ್ನು ಮಾಡದೆ ಕಣ್ಣು ಮುಚ್ಚಿ ಕುಳಿತು ಅದನ್ನು ಮೌನವಾಗಿ ಸಹಿಸುವುದು ತಮ್ಮ ವೃತ್ತಿಗೆ ಮಾಡುವ ಅವಮಾನ. ಅದರ ಪರಿಣಾಮ ಕಳ್ಳ ಸುಳ್ಳರು ಮುಖ್ಯವಾಹಿನಿಯಲ್ಲಿ ಬೇಡಿಕೆ ಪಡೆದು ಸುಳ್ಳು ಮತ್ತು ಮಾಢ್ಯಗಳನ್ನು ಪ್ರಸಾರ ಮಾಡುತ್ತಿದ್ದಾರೆ…..
ಹೇಳಲು ಸಾಕಷ್ಟಿದೆ. ಆದರೆ ಶಿಕ್ಷಕರು ಸೂಕ್ಷ್ಮ ಜೀವಿಗಳು. ಪರಿಸ್ಥಿತಿಯನ್ನು ಬೇಗ ಗ್ರಹಿಸುತ್ತಾರೆ ಎಂಬ ಭರವಸೆಯೊಂದಿಗೆ……..
ಶಿಕ್ಷಕರ ದಿನದ ಶುಭಾಶಯಗಳು…..
— ವಿವೇಕಾನಂದ. .ಎಚ್..ಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.