(www.vknews.in) ; ಈಗ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಕ ಸಂಘರ್ಷಗಳ ನಡುವೆ ಇದೇ ನವೆಂಬರ್ ನಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಂದೆ ಅಧ್ಯಕ್ಷರಾಗಿ ನಂತರ ಸೋಲು ಕಂಡು ಈಗ ಮತ್ತೆ ಗೆಲುವಿಗಾಗಿ ಪ್ರಯತ್ನಿಸುತ್ತಿರುವ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರತೀಯ ಮೂಲದ ಈಗಿನ ಜೋ ಬೈಡನ್ ಸರ್ಕಾರದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಸ್ಪರ್ಧಿಸಿದ್ದಾರೆ…..
ಎಲ್ಲಾ ವಿಷಯದಲ್ಲೂ ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾ ದೇಶದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಕುತೂಹಲದ ವಿಷಯ ಮಾತ್ರವಲ್ಲ, ಅದು ಮಹತ್ವದ ವಿಷಯವೂ ಹೌದು. ಭಾರತವು ಸೇರಿದಂತೆ ವಿಶ್ವದ ಶಾಂತಿ ಬಯಸುವ ಎಲ್ಲ ದೇಶಗಳಿಗೂ ಈ ಫಲಿತಾಂಶ ಮುಖ್ಯವಾಗುತ್ತದೆ….
ರಷ್ಯಾ ಉಕ್ರೇನ್ ನಡುವಿನ ಯುದ್ಧ ಇನ್ನೂ ಸಕ್ರೀಯವಾಗಿದೆ, ಇಸ್ರೇಲ್ ಹಮಾಸ್ ನಡುವಿನ ಯುದ್ಧ ಮಧ್ಯಪ್ರಾಚ್ಯದ ಇತರ ದೇಶಗಳಿಗೂ ವ್ಯಾಪಿಸುತ್ತಿದೆ. ಚೀನಾ ಪಕ್ಕದ ತೈವಾನ್ ದೇಶವನ್ನು ಆಕ್ರಮಿಸಲು ಹೊಂಚು ಹಾಕುತ್ತಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಆಗಾಗ ತರಲೆ ತಂಟೆಗಳನ್ನು ಮಾಡುತ್ತಲೇ ಇದ್ದಾನೆ. ಆಫ್ರಿಕಾದ ದೇಶಗಳು ಆಂತರಿಕ ಕಲಹದಿಂದ ಬೆಂದು ಬಸವಳಿದಿವೆ. ದಕ್ಷಿಣಾ ಏಷ್ಯಾದ ಕೆಲವು ದೇಶಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗಾಗಿ ದಂಗೆಗಳಾಗುತ್ತಿದವೆ……
ಇಂತಹ ಸಂದರ್ಭದಲ್ಲಿ ವಿಶ್ವವನ್ನು ನಿಯಂತ್ರಿಸುವ ಒಂದು ಶಕ್ತಿ ಯಾರ ನಾಯಕತ್ವದಲ್ಲಿ ಮುಂದಿನ ನಾಲ್ಕು ವರ್ಷಗಳು ಮುನ್ನಡೆಯುತ್ತದೆ ಎಂಬುದು ಬಹು ಮುಖ್ಯವಾಗುತ್ತದೆ. ಬಹುತೇಕ ಅತ್ಯಂತ ತೀವ್ರ ಬಲಪಂಥೀಯ ಚಿಂತನೆಯ ಡೊನಾಲ್ಡ್ ಟ್ರಂಪ್ ಮತ್ತು ಅಷ್ಟೇ ತೀವ್ರ ಎಡಪಂಥೀಯ ಚಿಂತನೆಯ ಕಮಲ ಹ್ಯಾರಿಸ್ ಇಬ್ಬರಲ್ಲಿ ಒಬ್ಬರ ಆಯ್ಕೆ ಆಗಬೇಕಾಗುತ್ತದೆ. ಇಲ್ಲಿ ಕಮಲಾ ಹ್ಯಾರಿಸ್ ಭಾರತೀಯರು ಎನ್ನುವ ಕಾರಣದಿಂದ ಆಕೆಯನ್ನು ಬೆಂಬಲಿಸಬೇಕಾಗಿಲ್ಲ. ಹಾಗೆಯೇ ಡೊನಾಲ್ಡ್ ಟ್ರಂಪ್ ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯ ಮಿತ್ರರು ಮತ್ತು ಬಲಪಂಥೀಯರು ಎಂಬ ಕಾರಣಕ್ಕಾಗಿ ಅವರನ್ನು ಬೆಂಬಲಿಸಬೇಕಾಗಿಲ್ಲ. ಸಮಗ್ರವಾಗಿ ವ್ಯಕ್ತಿ, ವ್ಯಕ್ತಿತ್ವ ದೇಶ, ವಿಶ್ವ ಇವುಗಳನ್ನು ಸ್ವಲ್ಪ ಮಟ್ಟದಲ್ಲಿ ಪರಿಶೀಲಿಸಿ ನಾವು ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ……
ಆ ದೃಷ್ಟಿಯಿಂದ ನಿಜಕ್ಕೂ ನೀವು ವಿಶ್ವ ಶಾಂತಿ ಬಯಸುವರೇ ಆಗಿದ್ದರೆ, ಡೊನಾಲ್ಡ್ ಟ್ರಂಪ್ ವ್ಯಕ್ತಿ, ವ್ಯಕ್ತಿತ್ವ ಮತ್ತು ಶಾಂತಿಯ ದೃಷ್ಟಿಯಿಂದ ಖಂಡಿತವಾಗಿಯೂ ಅಪಾಯಕಾರಿ ಆಯ್ಕೆಯಾಗುತ್ತಾರೆ. ಅವರ ಹಿಂದಿನ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲಿ ತೆಗೆದುಕೊಂಡು ತೀರ್ಮಾನಗಳು, ನಡೆದುಕೊಂಡ ರೀತಿ, ಅಧಿಕಾರ ಹಸ್ತಾಂತರ ಸಮಯದಲ್ಲಿ ವರ್ತಿಸಿದ ಬಗೆ, ಅವರ ಮೇಲಿನ ಆರೋಪಗಳು ಮತ್ತು ಅವರ ಒಟ್ಟು ನೈತಿಕ ವ್ಯಕ್ತಿತ್ವ ಎಲ್ಲವನ್ನೂ ಗಮನಿಸಿದಾಗ ಹಾಗು ಅವರ ಆಡಳಿತದ ಅವಧಿಯಲ್ಲಿ ಚೀನಾ ಬಲಿಷ್ಠವಾಗಿ ವಿಶ್ವದ ವ್ಯವಹಾರದಲ್ಲಿ ಮುಂಚೂಣಿಗೆ ಬರಲು ಟ್ರಂಪ್ ಅವರ ಅಪ್ರಬುದ್ಧ ಆಡಳಿತ ವಿಧಾನವೇ ಕಾರಣ ಎಂದು ಅಂತರಾಷ್ಟ್ರೀಯ ವಿಚಾರಗಳ ಬಗ್ಗೆ ಮತ್ತು ಅಮೆರಿಕಾದ ಬಲಿಷ್ಠತೆಯ ಬಗ್ಗೆ ಮಾಹಿತಿ ಇರುವವರಿಗೆ ಅರ್ಥವಾಗುತ್ತದೆ. ಆ ನಿಟ್ಟಿನಲ್ಲಿ ಇವರಿಬ್ಬರ ಮಧ್ಯೆ ಕಮಲಾ ಹ್ಯಾರಿಸ್ ಖಂಡಿತವಾಗಲೂ ಉತ್ತಮ ಆಯ್ಕೆ ಎನಿಸುತ್ತದೆ. ಮುಂದೆ ಭವಿಷ್ಯದಲ್ಲಿ ಕಮಲಾ ಹ್ಯಾರಿಸ್ ನಡವಳಿಕೆಯಲ್ಲಿ ಏನಾದರೂ ಬದಲಾವಣೆ ಆಗಬಹುದು, ಆದರೆ ಈ ಕ್ಷಣದಲ್ಲಿ ನಿಜಕ್ಕೂ ಭಾರತೀಯ ಅಮೆರಿಕನ್ನರು ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವುದು ಉತ್ತಮ ಆಲೋಚನೆಯೇ ಸರಿ….
ಏಕೆಂದರೆ, ಕನಿಷ್ಠ ಒಂದಷ್ಟು ಪ್ರಜಾಪ್ರಭುತ್ವ ಮೌಲ್ಯಗಳ ಪ್ರಬುದ್ಧತೆಯಾದರು ಕಮಲಾ ಹ್ಯಾರಿಸ್ ಅವರಿಗೆ ಇದೆ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿ ಅತ್ಯಂತ ವಿವೇಚನೆ ಇಲ್ಲದೆ ಅಕ್ರಮಣಕಾರಿ ನಿಲುವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡರೆ ಪರಿಸ್ಥಿತಿ ಮೂರನೇ ವಿಶ್ವ ಮಹಾ ಯುದ್ಧದತ್ತ ಸಾಗಬಹುದು. ಅಂತಿಮವಾಗಿ ಅಮೆರಿಕ ನೇತೃತ್ವದ ನ್ಯಾಟೋಪಡೆಯೇ ಗೆಲ್ಲುವ ಸಾಧ್ಯತೆ ಇರಬಹುದಾದರು ಅದರಿಂದಾಗಿ ಇಡೀ ವಿಶ್ವವೇ ವಿನಾಶ ಅಂಚಿಗೆ ಬಂದು ನಿಲ್ಲುತ್ತದೆ……
ಇಂದಿನ ಅಂತರಾಷ್ಟ್ರೀಯ ಪರಿಸ್ಥಿತಿಗೆ ಅಕ್ರಮಣಕಾರಿ ನಾಯಕತ್ವಕ್ಕಿಂತ ಬುದ್ಧಿಶಾಲಿ, ಪ್ರಬುದ್ಧತೆಯ ನಾಯಕತ್ವ ಬೇಕಾಗುತ್ತದೆ. ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸುವ ವ್ಯಕ್ತಿತ್ವ ಬೇಕಾಗುತ್ತದೆ. ರೊನಾಲ್ಡ್ ಟ್ರಂಪ್ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೆ ಸ್ವೇಚ್ಛಾಚಾರಿಯಾಗಿ ಬದುಕನ್ನು ನಡೆಸುತ್ತಿರುವ ವ್ಯಕ್ತಿ. ಅವರಿಗೆ ಅಧಿಕಾರ ಮತ್ತು ಅದನ್ನು ತನ್ನ ಮನಸ್ಸಿಗೆ ಬಂದಂತೆ ಚಲಾಯಿಸುವ ಮೂಲ ಗುಣ ಆಂತರಿಕವಾಗಿ ಬೆಳೆದು ಬಂದಿದೆ. ಅವರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ತಿಳಿಯುತ್ತದೆ….
ಅದೇ ಸಮಯದಲ್ಲಿ ಇಲ್ಲಿಯವರೆಗೆ ಕಮಲಾ ಹ್ಯಾರಿಸ್ ಅವರು ಆಡಳಿತಾತ್ಮಕ ವಿಷಯದಲ್ಲಿ ಘನತೆಯಿಂದಲೇ ನಡೆದುಕೊಂಡಿದ್ದಾರೆ. ಯಾವುದೇ ರೀತಿಯ ಅತಿರೇಕದ ವರ್ತನೆ ತೋರಿಸಿಲ್ಲ. ಒಂದಷ್ಟು ಸಂವೇದನಾಶೀಲತೆ ಅವರಲ್ಲಿ ಕಂಡುಬರುತ್ತದೆ. ಇಂತಹ ಸಂಘರ್ಷಮಯ ಸಮಯದಲ್ಲಿ ಕಮಲ ಹ್ಯಾರಿಸ್ ಆಯ್ಕೆಯಾದರೆ ಉತ್ತಮ ಎಂಬುದು ನಮ್ಮ ವೈಯಕ್ತಿಕ ಅಭಿಪ್ರಾಯ. ಭಾರತೀಯ ಅಮೆರಿಕನ್ ಮತದಾರರ ಆಯ್ಕೆ ಹೆಚ್ಚು ವಿವೇಚನೆಯಿಂದ ಕೂಡಿರಲಿ ಎಂದು ಮನವಿ ಮಾಡಿಕೊಳ್ಳುತ್ತಾ…….
— ವಿವೇಕಾನಂದ. ಎಚ್. ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.