(www.vknews.in) : ತನ್ನ ಮನೆಗೆ ಹೊಸದಾಗಿ ಬರುವ ಸೊಸೆಯನ್ನು ಹತ್ತಿರ ಕೂರಿಸಿ, ಬಹಳ ಪ್ರೀತಿಯಿಂದ ಮನೆಯ ಮೇಲ್ನೋಟದ ಕುರಿತು ಅತ್ತೆ ಮಾಹಿತಿ ನೀಡಬೇಕು. ಈ ಮನೆ ನಿನ್ನದೇ. ಯಾವುದೇ ವಿಷಯದಲ್ಲಿ ಹೆದರಬೇಕಾಗಿಲ್ಲ. ನಿನ್ನ ಜತೆ ನಾನಿದ್ದೇನೆಂದು ಸೊಸೆಯನ್ನು ಮಗಳಂತೆ ಸಮಾಧಾನಪಡಿಸಬೇಕು. ಯಾವ ಕಾರಣಕ್ಕೂ ಮನೆಗೆ ಕೆಲಸದಾಕೆಯನ್ನು ತರಿಸಿದಂತಾಗಬಾರದು. ಮಗನ ಬಾಳನ್ನು ಬೆಳಗಿಸುವ ಮತ್ತು ಕುಟುಂಬವನ್ನು ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಮುಂದಕ್ಕೊಯ್ಯುವವಳೆಂದು ಅರಿಯಬೇಕು. ಹೊಸ ಜನ, ಹೊಸ ಪರಿಸರದಿಂದ ಸೊಸೆಗೆ ಒಂದಷ್ಟು ಆತಂಕ, ಭೀತಿಯಾಗುವುದು ಸಹಜ. ಸಾರಿಗೆ ಉಪ್ಪು ಜಾಸ್ತಿ ಆಯಿತೋ, ಚಹಾಕ್ಕೆ ಸಕ್ಕರೆ ಕಮ್ಮಿಯಾಯ್ತೋ… ಹೊಸತನದಿಂದಾಗಿ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಭಯ ಆಕೆಯನ್ನು ಕಾಡುತ್ತಿರುತ್ತದೆ.
ಆದರೆ ಅತ್ತೆ ಧೈರ್ಯ ಕೊಟ್ಟು ಪರವಾಗಿಲ್ಲವೆಂದು, ಹತ್ತಿರವಾಗಿಸಿದರೆ ಆಕೆ ಎಲ್ಲವನ್ನೂ ತಿದ್ದಿ ಸರಿಪಡಿಸುತ್ತಾಳೆ. ಆಕೆ ಪದೇಪದೇ ತವರಿಗೆ ಹೋಗುವುದಕ್ಕಿಂತ ಮತ್ತು ಅದಕ್ಕಾಗಿ ಪತಿಯೊಂದಿಗೆ ಜಗಳಾಡುವುದಕ್ಕಿಂತ ಪತಿ ಮನೆಯನ್ನೇ ಇಷ್ಟಪಡುವಳು.
ಪರಿಸ್ಥಿತಿಯನ್ನು ಅರಿತು ಪತಿ, ಅತ್ತೆ-ಮಾವರ ಸಾನಿಧ್ಯವನ್ನು ಬಯಸುವಳು. ಅವರಲ್ಲಿ ತನ್ನ ಹೆತ್ತವರನ್ನು ಕಾಣುವಳು. ಅತ್ತೆ-ಮಾವನವರಿಗೆ ತನ್ನೊಂದಿಗಿರುವ ಪ್ರೀತಿ-ಕಾಳಜಿಯನ್ನು ಗುರುತಿಸುವಳು. ಪತಿಯನ್ನು ತಬ್ಬಿಕೊಂಡು ಮತ್ತೆ ಮತ್ತೆ ಭಾವುಕಳಾಗುವಳು. ಹಲವೊಮ್ಮೆ ಆಕೆಯ ತವರು ಮನೆಯವರು ಪದೇಪದೇ ಫೋನಾಯಿಸಿ, ಊಟ ಆಯಿತಾ, ಕಾಫಿ ಕುಡಿದ್ಯಾ, ಸಾರು ಯಾರು ಮಾಡಿದ್ದು, ಏನು ತಿಂಡಿ, ಏನು ಮಾಡ್ತಾ ಇದ್ದೀ, ನೀನೊಬ್ಬಳೇ ಕೆಲಸ ಮಾಡುವುದಾ, ದೊಡ್ಡ ಸೊಸೆಗೆ ಏನೂ ಕೆಲಸವಿಲ್ವಾ? ನೀನು ತುಂಬಾ ಕ್ಷೀಣಿಸಿದಂತಿದ್ದಿ. ಜಾಗೃತೆ ಮಾಡು… ಎಂಬಿತ್ಯಾದಿ ಕೇಳಿದ್ದನ್ನೇ ಮತ್ತೆಮತ್ತೆ ಕೇಳುವುದು. ಕುಟುಂಬದಲ್ಲಿ ಫಿತ್ನ ಹರಡಿ ನೆಮ್ಮದಿಗೆ ಹುಳಿ ಹಿಂಡುವುದು ಸರಿಯಲ್ಲ. ಅದಕ್ಕಾಗಿ ಫೋನ್ನ ಮೇಲೆ ಫೋನ್ ಮಾಡಿ, ಒಬ್ಬೊಬ್ಬರೇ ಸರತಿಯ ಸಾಲಲ್ಲಿ ನಿಂತು ಭಯಪಡಿಸುವುದು, ಜತೆಗೆ ಪತಿ ಮನೆಯ ನ್ಯೂನತೆಗಳನ್ನು ತಪಾಸಣೆ ನಡೆಸುವುದು… ಎಲ್ಲರೂ ಹಾಗೆ ಮಾಡುತ್ತಾರೆ ಎಂದಲ್ಲ. ಆದರೆ ಇಂತಹ ಹವ್ಯಾಸಗಳು ಒಳ್ಳೆಯದ್ದಲ್ಲ. ಅದು ಕೆಟ್ಟ ಪರಿಣಾಮ ಬೀರುತ್ತದೆ.
ಈಗಾಗಲೇ ತಿಳಿಸಿದಂತೆ, ದಂಪತಿಗಳ ನಡುವೆ ವಿಷ ಹಿಂಡುವ ಯಾರೇ ಆಗಲಿ ಬಹುದೊಡ್ಡ ಪಾತಕಿಗಳು. ಆದ್ದರಿಂದ ಪತಿ ಮನೆಯ ಯಾವುದೇ ಕೊರತೆ, ನ್ಯೂನತೆಗಳನ್ನು ತವರಿಗೆ ಬಿಟ್ಟುಕೊಡಬಾರದು. ತವರಿನ ಕೊರತೆಗಳನ್ನು ಪತಿ ಮನೆಯಲ್ಲೂ ಹಂಚಬೇಕಾಗಿಲ್ಲ.
ಮುಂದುವರಿಯುವುದು..
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.