(www.vknews.in) : ಹಝ್ರತ್ ಯೂಸುಫರನ್ನು ಬಾವಿಗೆ ಎಸೆದ ಅವರ ಸಹೋದರರು ಅವರ ಶರೀರದಿಂದ ಮೊದಲೇ ಕಳಚಿದ್ದ ಅವರ ಖಮೀಸಿಗೆ (Shirts) ದ್ಸಬಹ್ ಮಾಡಿದ ಮೇಕೆಯ ರೋಮ ಮಿಶ್ರಿತ ರಕ್ತವನ್ನು ಹಚ್ಚಿ ಸಂಜೆಯಾಗುವಾಗ ಮನೆಗೆ ತಲುಪಿದರು. ಅದು ಸಾಮಾನ್ಯವಾಗಿ ತಲುಪುವುದಕ್ಕಿಂತ ತುಂಬಾ ತಡವಾಗಿಯಾಗಿತ್ತು. ಆ ಕಾರಣದಿಂದ ಹಝ್ರತ್ ಯಅ್ಖೂಬರು ತುಂಬಾ ಸಮಯ ಮನೆಯ ಎದುರ ಜಗಲಿಯಲ್ಲಿ ಕುಳಿತು ಅವರನ್ನು ಕಾಯುತ್ತಾ ಇದ್ದರು.
ಸಹೋದರರು ಮನೆ ತಲುಪುತ್ತಿದ್ದಂತೆಯೇ ಬಹಳ ಜೋರಾಗಿ ಅಳಲು ಶುರುಮಾಡಿದರು. ಒಬ್ಬನು “ನನ್ನ ಯೂಸುಫ್! ನನ್ನ ತಮ್ಮ ಯೂಸುಫ್ ಹೋದ! ಪಾಪ ನನಗಿಂತ ಬೇಗ ಹೋದ” ಎಂದು ಹೇಳಿ ಕಿರುಚುವುದಾದರೆ ಮತ್ತೊಬ್ಬ ತಲೆಗೆ ಕೈಯಿಟ್ಟು ಬೊಬ್ಬೆ ಹಾಕುತ್ತಿದ್ದ. ಒಟ್ಟಿನಲ್ಲಿ ಎಲ್ಲಾ ಸಹೋದರರ ಮುಖದಲ್ಲೂ ಬೇಸರದ ಅಲೆ ಕಾಣುತ್ತಿತ್ತು. ಇದನ್ನು ಕಂಡಾಗ ಹಝ್ರತ್ ಯಅ್ಖೂಬರಿಗೆ ತನ್ನ ಮಗ ಯೂಸುಫ್ನಿಗೆ ಏನೋ ಅನಾಹುತ ಆಗಿದೆ ಎಂದು ಭಾವಿಸಿ ಅವರಿಗೆ ಮೂರ್ಛೆ ತಪ್ಪಿದಂತಾಯಿತು. ಮನೆಯೊಳಗೆ ಪ್ರವೇಶಿಸಿದ ಸಹೋದರರು “ಅಪ್ಪಾಜೀ.., ಒಂದು ದೊಡ್ಡ ದುರಂತವಾಗಿದೆ. ನಮಗೆ ಅದನ್ನು ಹೇಳಲು ನಾಲಗೆ ಮಗುಚುವುದಿಲ್ಲ. ನಾವು ಆಟವಾಡುತ್ತಿರುವಾಗ ನಮ್ಮ ಆಹಾರ ಪದಾರ್ಥಗಳು ಮತ್ತು ಇತರ ಸಾಮಾನನ್ನು ನೋಡಿಕೊಳ್ಳಲು ನಾವು ಯೂಸುಫುನನ್ನು ಆಟದ ಬಯಲಿನ ಒಂದು ಬದಿಯಲ್ಲಿ ಕೂರಿಸಿದ್ದೆವು.
ಅಷ್ಟರಲ್ಲಿ ಒಂದು ತೋಳ ಕಾಡಿನಿಂದ ಬಂದು ಅವನನ್ನು ಕಚ್ಚಿಕೊಂಡು ಹೋಯಿತು. ನಾವು ಹೇಳುವುದು ಸಂಶಯವಿದ್ದರೆ ಅವನು ಧರಿಸಿದ್ದ ಈ ಖಮೀಸನ್ನು ನೋಡಿ. ಇದು ಅವನ ಖಮೀಸ್. ನಾವು ತೋಳದಿಂದ ಅವನನ್ನು ರಕ್ಷಿಸಲು ಹೋದಾಗ ಖಮೀಸು ಮಾತ್ರ ನಮ್ಮ ಕೈಗೆ ಸಿಕ್ಕಿತು. ತೋಳ ಅವನನ್ನು ಕಚ್ಚಿಕೊಂಡು ಹೋಗಿ ಕೊನೆಗೆ ಸಂಪೂರ್ಣವಾಗಿ ತಿಂದುಬಿಟ್ಟಿತು” ಎಂದು ಹೇಳಿ ನಟನೆ ಮಾಡಿ ರಕ್ತ ಹರಡಿದ ಖಮೀಸನ್ನು ಅವರ ಮುಂದಿಟ್ಟರು.
ಬಹಳ ಬುದ್ದಿವಂತನಾದ ಹಝ್ರತ್ ಯಅ್ಖೂಬರು ಆ ಖಮೀಸನ್ನು ಬಹಳ ಸೂಕ್ಷ್ಮವಾಗಿ ನೋಡಿದರು. ಆದರೆ ಅದರಲ್ಲಿ ಎಲ್ಲೂ ತೋಳದ ಉಗುರು ಸ್ಪರ್ಶವಾದದ್ದು ಕಾಣಲಿಲ್ಲ. ಆಗ ಅವರಿಗೆ ಇವರು ಹೇಳುವುದು ಅಪ್ಪಟ ಸುಳ್ಳೆಂದು ತಿಳಿಯಿತು ಆಗ ಅವರಲ್ಲಿ ಹೇಳಿದರು: “ನೀವು ಹೇಳುವುದು ಅಪ್ಪಟ ಸುಳ್ಳು. ಯಾವತ್ತೂ ಪ್ರವಾದಿಯೊಬ್ಬರ ಮಕ್ಕಳನ್ನು ತೋಳ ಹಿಡಿಯದು. ಅದು ಸುಳ್ಳು. ಹಾಗಿದ್ದರೆ ಆ ತೋಳವನ್ನು ಹಿಡಿದು ತನ್ನಿರಿ. ಇಲ್ಲವಾದರೆ ನಾನು ಮಕ್ಕಳೆಂದು ನೋಡದೆ ತಮ್ಮನ್ನು ನಾಶ ಮಾಡಲು ಅಲ್ಲಾಹನಲ್ಲಿ ದುಆ ಮಾಡುತ್ತೇನೆ” ಎಂದು.
ಕೂಡಲೇ ಅವರು ಕಾಡಿಗೆ ಹೋಗಿ ಒಂದು ತೋಳವನ್ನು ಹಿಡಿದು ತಂದರು. ಆಗ ಹಝ್ರತ್ ಯಅ್ಖೂಬರು ಅವರಲ್ಲಿ ಕೇಳಿದರು. “ಇದು ಮಗ ಯೂಸುಫ್ನನ್ನು ಹಿಡಿದ ತೋಳ ಎಂದು ತಮಗೆ ಹೇಗೆ ಖಚಿತವಾಗಿ ಗೊತ್ತಾಯಿತು?” ಅದಕ್ಕೆ ಅವರು “ಅದು ಯಾವಾಗಲೂ ನಾವು ಆಡು ಮೇಯಿಸುವಾಗ ಆ ಕಡೆ ಬರುತ್ತಿತ್ತು. ಇವತ್ತು ಕೂಡ ಬಂದಾಗ ಅದೇ ತೋಳವೆಂದು ನಮಗೆ ಖಚಿತವಾಗಿ ಗೊತ್ತಾಯಿತು” ಎಂದು ಹೇಳಿ ಹಝ್ರತ್ ಯಅ್ಖೂಬರನ್ನು ವಂಚಿಸಲು ನೋಡಿದರು.
ಹಝ್ರತ್ ಯಅ್ಖೂಬರು ಎರಡು ಕೈಗಳನ್ನು ಎತ್ತಿ “ಅಲ್ಲಾಹ್.., ನಿನಗೆ ಎಲ್ಲವೂ ಸುಲಭ. ಅದ್ದರಿಂದ ಈಗಲೇ ಈ ತೋಳದ ಬಾಯಿಯಿಂದ ನಿಜ ಸಂಗತಿ ಬರಬೇಕು. ನಿನ್ನ ಖುದುರತಿನಿಂದ ಈ ತೋಳ ಮಾತನಾಡಬೇಕು” ಎಂದು ದುಆ ಮಾಡಿದರು. ಅಷ್ಟರಲ್ಲಿ ತೋಳ ಹೇಳಿತು: “ಲಾ ಇಲಾಹ ಇಲ್ಲಲ್ಲಾಹ್… ಓ ಪ್ರವಾದಿಯವರೇ, ನಾನು ಈ ಊರಿನವನಲ್ಲ. ಬೇರೆ ಕಡೆಯವನು. ನನ್ನ ಒಂದು ಮರಿ ಕಾಣೆಯಾಗಿ ಕೆಲವು ದಿನಗಳಾಯಿತು. ನಾನು ಈಗ ಅದನ್ನು ಹುಡುಕಿ ಬರುವಾಗ ಇವರು ನನ್ನನ್ನು ಹಿಡಿದು ಹೊಡೆಯುತ್ತಾ ಇಲ್ಲಿಗೆ ತಂದಿದ್ದಾರೆ. ನಾನು ಯಾಕೆ ಪ್ರವಾದಿಯೊಬ್ಬರ ಮಗನನ್ನು ತಿನ್ನಬೇಕು? ಯಾವತ್ತೂ ಯಾವ ತೋಳವೂ ಹಾಗೆ ಮಾಡಲಾರದು. ಇವರು ಹೇಳುವುದು ಅಪ್ಪಟ ಸುಳ್ಳು. ಆದ್ದರಿಂದ ನನ್ನನ್ನು ದಯಮಾಡಿ ಬಿಟ್ಟುಬಿಡಿ. ನಾನು ನನ್ನ ದಾರಿಗೆ ಹೋಗುತ್ತೇನೆ” ಎಂದು.
ನಂತರ ಹಝ್ರತ್ ಯಅ್ಖೂಬರ ನಿರ್ದೇಶದಂತೆ ತೋಳವನ್ನು ಕಾಡಿಗೆ ಬಿಡಲಾಯಿತು. ತೋಳವು ಅದರ ಹಾದಿಯಲ್ಲಿ ಹೋಯಿತು.
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಮತ್ತು ಇಮಾಮ್ ಇಸ್ಮಾಯೀಲ್ ಹಿತ್ತಿಯವರ ರೂಹುಲ್ ಬಯಾನ್ ಎಂಬ ಗ್ರಂಥದಿಂದ..
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಮುಂದುವರಿಯುವುದು….
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.