(www.vknews.in) ; ಮೋಜಿಯ ಮೈಮೇಲೆ ದೇವರು ಬಂದಿದೆಯೆಂದು ಆ ದಿನ ಸಂಜೆ ಮೆಂಬರ್ ಮೂಗಣ್ಣ ಸ್ಕೂಟಿಯನ್ನೇರಿ ಊರ ಮುಂದಣ ಓಣಿಯ ಕಡೆಗೆ ಹೊರಟ ಅತ್ತ ಹೆಂಡತಿ ಬಸಮ್ಮ “ಕುಪ್ಪಿನಕೇರಿಯ ನ್ಯಾಯಬೆಲೆ ಅಂಗಡಿಯಲ್ಲಿ ಸೀಮೆಣ್ಣಿ ಅಕ್ಕಿ ಕೊಡಕುಂತಾರಂತೆ ಬಣಕಾರ್ರು ಹೋಗಿ ಬರಾದ್ಬುಟ್ಟು ಪರ್ರ್ಯೋ ಅಂತ ತಿರುಗಾಕುಂತಾತಲ್ಲೋ ಇದು ಮೂಳ” ಎಂದು ಬಾಂಡೆ ಸಾಮಾನು ತಿಕ್ಕುತ್ತಾ ಕುಳಿತಳು.
ಸಂಜೆಯಾದ್ದರಿಂದ ದನ-ಕರುಗಳ ಪೋಷಣೆಯಲ್ಲಿ ಇನ್ನಿತರ ಸಂಜೆ ಕಾರ್ಯಕ್ರಮಗಳಲ್ಲಿ ಓಣಿಯ ಮಂದಿ ಬ್ಯುಸಿಯಗಿದ್ದರೂ, ಮೋಜಿಯ ಮೈಮೇಲೆ ದೇವರು ಬಂದಿದೆಯೆಂದು ಮೋಜಿಯ ಮನೆಯ ಕಡೆಗೆ ಗುಂಪು ಗುಂಪಾಗಿ ಓಣಿಯ ಜನ ಧಾವಿಸುತ್ತಿದ್ದರು ದನದ ಕೊಟ್ಟಿಗೆಯ ಮೂಲೆಯಲ್ಲಿ ಅಡಿಕೆ ಎಲೆ ಜಡುಮುತ್ತಾ ಕುಳಿತಿದ್ದ ಮಾಲಜ್ಜಿ ಪಿಚಕ್ ಪಿಚಕ್ ಎಂದು ಸಗಣಿ ರಾಡಿಯಲ್ಲಿ ಬಳಿದ ಅಂಗಳದ ತುಂಬ ರಕ್ತದ ಕಲೆಗಳಂತೆ ಉಗುಳಿ ರಂಗು ಮಾಡುತ್ತಾ “ಈ ಮೋಜಿಗ್ಯಾವ ದೇವ್ರು ಬಂತಪ್ಪಾ ಯಪ್ಪಾ ಅಯ್ಯೋ ಶಿವನಾಟ್ವೇ! ಕುರಿ ಕಾದಕಂತ ಇದ್ದ ಹುಡುಗ ಅದು ಮೊಬ್ಬುಡುಗ ಬ್ಯಾರೆ ಎನ್ ಕತಿಯೋ ಸುಡುಗಾಡು ಸಿವಪ್ನಿಗೆ ಗೊತ್ತಾಗಬೇಕು ಬುಡು” ಮೋಜಿ ಕುರಿ ಕಾಯಲು ಹೋಗಿ ಮನೆಗೆ ಬಂದವನೇ ತಡ ವಿಚಿತ್ರವಾಗಿ ಮೈ ಮೈ ಮುರಿಯುತ್ತಾ, ಕಣ್ಣುಗಳನ್ನು ಮುಚ್ಚಿಕೊಂಡು ಯಾವ್ಹ್,,,,,ಯಾವ್ಹ್,,,,, ಎಂದು ಕೂಗಡುವುದನ್ನು ನೋಡಿದರೆ ಎಂತವರಿಗೂ ಭಯ ಮತ್ತು ಒಂಥರಾ ಭಕ್ತಿ ಮೂಡುತ್ತಿತ್ತು ಓಣಿಯ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗು ಹೊದ್ದುಕೊಂಡು ಕೈಯಲ್ಲಿ ಚೊಂಬು ನೀರು, ಎರಡು ಊದಿನ ಕಡ್ಡಿ ಹಿಡಿದುಕೊಂಡು ಕಾಲಿಗೆ ನೀರು ಸುರಿದು, ಮಾರಿಗೆ ಊದಿನ ಕಡ್ಡಿ ಬೆಳಗಿ ಕೈಮುಗಿದು ಮೂಲೆಯಲ್ಲಿ ನಿಂತರು ಮೆಂಬರ್ ಮೂಗಣ್ಣ ಮೋಜಿಯ ಬಳಿ ಬಂದವನೇ ಬೇವಿನ ತಪ್ಪಲು ಹಿಡಿದು ಮೋಜಿಯ ಹಿಂದೆ ನಿಂತು ಭುಜಗಳನ್ನು ಹಿಡಿದುಕೊಂಡು “ಸಾಂತ್ವಾಗವ್ವ ಯವ್ವಾ ಇಷ್ಟ್ ರಾಪ್ ಮಾಡಬ್ಯಾಡ ನೀನು ಹಿಂಗ ರಾಪಾದ್ರ ನಮಗೇನ್ ಅರ್ಥ ಆಕಾತೇಳು ಸಾಂತಿಯಿಂದ ಹೇಳು” ಎಂದಾಗ ಮೋಜಿ ತನ್ನ ಕೆನ್ನಾಲಗೆಯನ್ನ ಹೊರ ಚಾಚಿ ವಿಚಿತ್ರವಾದ ಬಯಕೆಯೊಂದನ್ನು ಅರ್ಥ ಮಾಡಿಕೊಂಡ ಬಾಳಜ್ಜಿ ಹತ್ತಿ ಹಳ್ಳಿಯಿಂದ ಬತ್ತಿ ಹೊಸೆದು ದೀಪದ ಎಣ್ಣೆಯಲ್ಲಿ ನೆನೆಸಿ ಕಡ್ಡಿ ಗೀರಿ ಬತ್ತಿ ಹಚ್ಚಿ ಮೋಜಿಯ ಕೆನ್ನಾಲಗೆಯ ಮೇಲಿರಿಸಿದ್ದೇ ತಡ ಮೋಜಿ ಕರ ಕರನೆ ಉರಿವ ಬತ್ತಿಯನ್ನು ಜಗಿದು ಮೆಂಬರ್ ಮೂಗಣ್ಣನ ಕೈಯಲ್ಲಿದ್ದ ಬೇವಿನ ತಪ್ಪಲನ್ನು ಬಾಯಲ್ಲಿ ಕಚ್ಚಿ ಜಗಿದು ಆಕಾಶವನ್ನೇ ದಿಟ್ಟಿಸಿ ನೋಡಿ ಜೋರಾಗಿ ನಗುತ್ತಾ “ಏನ್ರಪಾ ನನ್ಮಕ್ಳ ಈ ಮೋಜಿ ಮೈ ಮ್ಯಾಲೆ ಬಂದ ನನ್ನ ನಿಮ್ ತಾಯಿ ದುರುಗವ್ವನ ಅನುಮಾನ್ದಿಲೇ ನೋಡ್ತೀರಿ, ಆತು ನೋಡ್ರಿ ಇವತ್ತು ಹೊತ್ತು ಮುಳುಗಿ ಬೆಳುಕರಿಯೋದ್ರೊಳಗ ಮಳಿ ಬಂದು ಹಳ್ಳ ಹರಿಲಿಲ್ಲ ಅಂದಾಗ ನಾನು ಮೋಜಿ ಕರಕೊಂಡು ಈ ಊರ್ ಬಿಡಲಿಲ್ಲ ಅಂದಾಗ ಕೇಳ್ರಿ” ಎಂದು ಆರ್ಭಟಿಸುತ್ತಿದ್ದ ಮೋಜಿಯ ದೇಹದಿಂದ ದೇವರು ನಿರ್ಗಮನವಾಯಿತು.
ಸಣ್ಣ ಮೂಗವ್ವ ಜೋಳದ ಹಿಟ್ಟನ್ನು ನಾದಿಕೊಳ್ಳುತ್ತಾ ರೊಟ್ಟಿ ಬೇಯಿಸಲು ಕಟ್ಟಿಗೆ ಮೂಲೆಯ ಒಳಗಡೆ ಒಂದು ಕಟ್ಟಿಗೆ ಇಲ್ಲವೆಂದಾಗ ಗಂಡ ಸಣ್ಣ ಹನುಮಂತಣ್ಣ ತನ್ನ ಕಣದೊಳಗಿರುವ ತಂಗಡಿಕಿ ಕಟ್ಟಿಗೆಯನ್ನು ಕಡಿದುಕೊಂಡು ಬರಲು ಹೆಗಲ ಮೇಲೆ ಕೊಡಲಿಯನ್ನಿಡಿದು ಬಾಯಲ್ಲಿ ಮೋಟು ಬೀಡಿಯನ್ನು ಸೇದುತ್ತಾ ಸಂದಿಯೊಳಗಡೆ ಗೋಲಿ ಆಡುತ್ತಿದ್ದ ಮಗನನ್ನು ಗದರಿಸಿ ʼಬಾರಲೇ ಕಣದಾಕ ಹೋಗಿ ಕಟಿಗಿ ಕಡ್ಕಂಡು ಬರೋನೆಂದುʼ ಕರೆದುಕೊಂಡು ಹೊರಟ. ಮುಂಗಾರು ಆರಂಭವಾಗಿ ತುಂಬಾ ದಿನವಾದರೂ ಮಳೆ ಬಾರದಿರುವುದನ್ನು ಕಂಡ ಸಣ್ಣ ಹನುಮಂತಣ್ಣನಿಗೆ ಅಡವಿ ಬೇಟೆಯನ್ನು ತಿಂದು ತುಂಬಾ ದಿನವಾಯಿತು.
ಈ ಬಾರಿ ಮಳೆ ಬರುವುದೇ ಡೌಟು! ಇನ್ನೂ ಈ ಭೂಮಿಯೊಳಗಿನ ಅಡವಿ ಬೇಟೆ ಹೊರ ಬರುವುದು ಕಷ್ಟ ಅಡವಿ ಬೇಟೆಯ ರುಚಿ ನೋಡಿ ತುಂಬಾ ದಿವಸಗಳೇ ಕಳೆದವೆಂದು ಬೀಡಿ ಸೇದಿ ಹೊಗೆ ಬಿಡುತ್ತಾ ತದೇಕಚಿತ್ತದಿಂದ ಅಡವಿ ಬೇಟೆಯ ಬಗ್ಗೆಯೇ ಯೋಚಿಸುತ್ತಿದ್ದ ತಂದೆಯನ್ನು ಕಂಡ ಮಗ ಕೊಟ್ರೇಶಿ “ಯಾಕಪ್ಪಾ ಏನೂ ಮಾತಾಡ್ತಿಲ್ಲ” ಎಂದಾಗ ಬೇಸರದಿಂದ ಬೀಡಿ ಎಸೆದ ಸಣ್ಣ ಹನುಮಂತಣ್ಣ “ಏನಂತ ಹೇಳಲೇ ತಮ್ಮಾ ಈ ವರ್ಷ ಮಳಿ ಹೋಗಿ ಮುಗಿಲಿಗಿ ಕುಂತಾತಿ ನನಿಗೆ ಅಡವಿ ಬ್ಯಾಟಿ ಅಂದ್ರ ಬಾಳ ಇಷ್ಟ ಮುಂಗಾರಿ ಬಂತಂದ್ರ ಎರಡ್ಮೂರ್ಸಲನಾದ್ರೂ ಅಡವಿ ಬ್ಯಾಟಿ ರುಚಿ ನೋಡ್ತಿದ್ದೆ ಈ ವರುಸ ರುಚಿ ನೋಡೋದಿರ್ಲಿ ಬ್ಯಾಟಿ ನೋಡಾಕು ಆಗಲಿಲ್ಲ”. ಎಂದು ಹೇಳುತ್ತಿರುವಾಗಲೇ ಸಣ್ಣ ಹನುಮಂತಣ್ಣನ ದೋಸ್ತಿ ಕಂದಾಳ್ ರಾಮಣ್ಣ ಜೋರಾಗಿ ಕೂಗುತ್ತಾ “ಎಲ್ಲೆಲ್ಲಿ ಹುಡುಕೋದಲೇ ಹನುಮ ನಿನ್ನ, ಮೋಜಿಗೆ ದೇವರು ಬಂದು ಇವತ್ತು ರಾತ್ರಿ ಕಳಿಯಾದ್ರಾಗ ಹಳ್ಳ ಹರಿಯೋ ಮಳಿ ಆಕಾತಂತ ಹೇಳ್ಯಾನ ನಡೀ ನಾಳೆ ಅಡವೀಗೋಗನು ಬ್ಯಾಟಿ ಆಡಿ ಮಸಾಲಿ ಹರದು ನಾಲಿಗೆ ಕಸ್ಮಳ ಕಳ್ಕಳಾನು” ಎಂದಾಗ ಸುತ್ತಲೂ ಮೋಡ ನೋಡಿದ ಸಣ್ಣ ಹನುಮಂತಣ್ಣ ಒಂದು ಏಟು ಕೊಡಲಿಯಿಂದ ಕಟ್ಟಿಗೆ ತುಂಡರಿಸಿ ಸೊಂಟದ ಮೇಲೆ ಕೈಯಿಟ್ಟು ನಿಂತುಕೊಂಡು “ನಡಿಯಲೇ ಕೋಡಿ ಗಮ್ಮಿಲ್ಲ ಗಮ್ಮತ್ತಿಲ್ಲ ಮಾಡಿಲ್ಲ ಮಾರಿಲ್ಲ ಯಾ ಮಳಿ ಬರುತಾತಿ ಕೋಡಿ ಆ ಮಬ್ಬ ಮೋಜಿಗ್ಯಾವ ದೇವ್ರೂ ಬರ್ತಾತಿ ಹುಚ್ ಕೋಡಿ ” ಎಂದು ಹೇಳಿದಾಗ ಕಂದಾಳ್ ರಾಮಣ್ಣ “ಲೇ ಹನುಮಾ ಒಂದವ್ಯಾಳೆ ಮಳಿ ಬರಲಿಲ್ಲಂದ್ರ ಮೋಜಿ ಊರ್ ಬಿಟ್ ಹೊಕ್ಕೀನಿ ಅಂತ ಹೇಳ್ಯಾನ ನಾಲಿಗೆನಾ ಸರಿಯಾಗಿ ಹೊಳ್ಳಸಾಕ ಬರದಿದ್ದ ಮೋಜಿ ಪಂಡಿತರ ತರ ದೇವ್ರ ನುಡಿ ಹೇಳ್ತಾನಂದ್ರ ಮೋಜಿ ಮಾತಿನ್ಯಾಗ ದೈವಾಂಸ ಐತಿ” ಎಂದೇಳಿ ಅರೆಗಳಿಗೆಯಾಗಲಿಲ್ಲ ಇಳಿ ಸಂಜೆಯಲ್ಲಿ ಮೋಡಗಳೆಲ್ಲಾ ಯಾವುದೋ ಒತ್ತಡಕ್ಕೆ ಸಿಲುಕಿ ಅತ್ತಿತ್ತ ಓಡುವಂತೆ ವಾತವರಣ ಕಾಣಿಸಿತು ಕಟ್ಟಿಗೆ ಮೂಟೆ ಕಟ್ಟುವುದರೊಳಗೆ ಜೋರಾಗಿ ಗಾಳಿ ಬೀಸುತ್ತಾ ಢಣಾಲ್! ಎಂದು ಎಲ್ಲಿಯೋ ಬಹು ದೂರದಲ್ಲಿ ಗುಡುಗಿನ ಸಪ್ಪಳ ಕೇಳಿ ಸಣ್ಣ ಹನುಮಂತಣ್ಣನ ಅಡವಿ ಬೇಟೆಯನಾಡಲು ಮನಕ್ಕೆ ಇನ್ನಿಲ್ಲದಂತ ಒಳಗೊಳಗೆ ಬೇಟೆಯ ದಿಕ್ಸೂಚಿ ಸಂಚರಿಸಿತು ಸಂತೋಷದಿಂದ ಮತ್ತೊಂದು ಬೆಂಕಿ ಕಡ್ಡಿ ಗೀರಿ ಇಬ್ಬರೂ ಒಂದೇ ಕಡ್ಡಿಯಲ್ಲಿ ಬೀಡಿಗೆ ಬೆಂಕಿ ಹಚ್ಚಿಕೊಂಡು ನಾಳೆಯ ಬೇಟೆಗೆ ಭತ್ನಳ್ಳಿ ಕೆಮ್ಮಾಳದ ಕಡೆಗೆ ಹೋಗಬೆಂದು ನಿರ್ಧರಿಸಿ ಮಳೆಯ ಬರುವುಕೆಯ ಭಯದಿಂದ ಮನೆಗೆ ಸೇರಿದರು.
ಕೊಟ್ರೇಶಿಗೆ ತಂದೆ ಸಣ್ಣನುಮಂತಣ್ಣನ ಬಾಯಲ್ಲಿ ಕೇಳಿದ ಅಡವಿ ಬೇಟೆ ಯಾವುದೆಂಬುದೇ ಗೊಂದಲವಾಯಿತು ಈ ಅಡವಿ ಬೇಟೆ ಯಾವುದಿರಬಹುದೆಂದು ಏನೇನೋ ಯೋಚಿಸುತ್ತಾ ಮನೆಯ ಅಂಗಳದಲ್ಲಿ ಆಕಾಶವನ್ನೆ ನೋಡುತ್ತಾ ಮಲಗಿದದ್ದಾಗ ಮೇಲಿಂದ ಎರಡು ಹನಿ ತಪ್ಪೆಂದು ಕೊಟ್ರೇಶಿಯ ಮುಖದ ಮೇಲೆ ರಾಚಿದಾಗ ತನ್ನ ತಾಯಿ ಹನುಮವ್ವ ಮುದ್ದೆ ತೊಟ್ಟಿ ಮಾಳಿಗೆಗೆ ಚರಗದ ರೂಪದಲ್ಲಿ ನೀರೆಸೆದಿರಬಹುದೆಂದು ಹಾಗೆಯೇ ಯೋಚಿಸುತ್ತಾ ಮಲಗಿದ ಕೊಟ್ರೇಶಿಯನ್ನು ತಾಯಿ ಹನುಮವ್ವ ಎಚ್ಚರಿಸಿ ಮಳೆ ಬರುತ್ತಿದೆ ಒಳಗೆ ಬಾ ಎಂದು ಗದರಿಸಿದಾಗ ಗಾಬರಿಯಿಂದ ರದ್ದ ಕೊಟ್ರೇಶಿ ಕಂದಾಳ್ ರಾಮಣ್ಣ ಹೇಳಿದ ಮೋಜಿಯ ಮೈಮೇಲೆ ಬಂದ ದೇವರ ಕತೆಯೇ ಕಣ್ಮುಂದೆ ಬಂತು ಊಟ ಮಾಡವಾಗಲೂ ಕೊಟ್ರೇಶಿ ಏನನ್ನೋ ಯೋಚಿಉತ್ತಿದ್ದುದನ್ನು ಕಂಡ ಸಣ್ಣನುಮವ್ವ “ಲೋ ಬಾಡ್ಯಾ ಏನಾಗೇತಿ ನಿನಗ ಉಣ್ಣಲೋ ಮಂಗ” ಎಂದಾಗ ಕೊಟ್ರೇಶಿ ಕುತೂಹಲ ತಾಳಲಾರದೇ “ಬೇ ತವ್ವಾ ಅಪ್ಪ ಮತ್ತೆ ಕಂದಾಳ್ ರಾಮಣ್ಣ ನಾಳೆ ಯೋನೋ ಅಡವಿ ಬ್ಯಾಟಿಗೆ ಹೊಕ್ಕಾರಂತೆಬೇ ಏನ್ ಬ್ಯಾಟೇ ಬೇ ಅದು” ಎಂದಾಗ ಸಣ್ಣನುಮವ್ವ “ಯಾವುದೋ ಮೊಲದ್ದೋ, ಬೆಕ್ಕಿಂದೋ,ಅಡವಿಲಿದೋ ಬ್ಯಾಟಿಗೊಕ್ಕಾರನ್ಸುತ್ತ ತಿಂದು ಒಳಗ ಮಕ್ಕಲೋ ಮಳಿ ಬರಂಗೈತಿ” ಎಂದು ಹೇಳಿ ಮುದ್ದೆ ತಯಾರಿಸುತ್ತಿರುವಾಗ ರಪ ರಪನೆ ಮಳೆ ಸುರಿಯಲಿಕ್ಕಿತು ಸಣ್ಣನುಮಂತಪ್ಪ ಹರಿದ ಮೆಟ್ಟುಗಳನ್ನು ದಬ್ಬಣದಿಂದ ಹೊಲಿದುಕೊಳ್ಳುತ್ತಾ ಕುರಿ ಬುತ್ತಿಗೆಂದಿಟ್ಟುಕೊಂಡಿದ್ದ ಸೈಡ್ ಬ್ಯಾಗನ್ನು ಗುರುತು ಮಾಡಿ ಇಟ್ಟುಕೊಂಡು ಏನೆನೋ ಹಣಿಮಾಡಿಕೊಳ್ಳುತ್ತಿದ್ದ ತಂದೆ ಸಣ್ಣನುಂತಣ್ಣನ ಅಡವೀ ಬೇಟೆಯ ತಯಾರಿಯನ್ನು ನೋಡಿದ ಕೊಟ್ರೇಶಿ ತನ್ನ ತಾತ ಹೇಳುತ್ತಿದ್ದ ಹಂದಿ ಶಿಖಾರಿ ಹಾಗೂ ಈಚಲು ಮರದ ಗೆಡ್ಡೆಯ ಶಿಖಾರಿಯ ದೃಶ್ಯಗಳನ್ನೇ ನೆನಪಿಸಿಕೊಂಡು ಮುಸುಕಿನ ಜೋಳಕ್ಕೆ ಹಂದಿ ಕಾಟವಿರಬಹುದು ನಾಳೆ ಬೃಹತ್ ಹಂದಿಯ ಶಿಖಾರಿಯೇ ಇರಬಹುದೆಂದು ಯೋಚಿಸುತ್ತಾ ಹಾಗೆಯೇ ಮಲಗಿದ್ದ ಕೊಟ್ರೇಶಿಯ ಕನಸ್ಸಿನಲ್ಲಿ ತಂದೆ ಸಣ್ಣನುಮಂತಪ್ಪ ಹಾಗೂ ಕಂದಾಳ್ ರಾಮಣ್ಣ ಅಡವಿ ಹೊಲದಲ್ಲಿ ಬೃಹತ್ ಕಾಡು ಹಂದಿಯೊಂದನ್ನು ಬೇಟೆಯಾಡಲು ಪಂಜಿನ ಕವಾಯತು ಹಿಡಿದು ಕಾದು ಕುಳಿತಿದ್ದಾಗ ಹಿಂದಿನಿಂದ ಬಂದ ಮೂರ್ನಾಲ್ಕು ಹಂದಿಯ ಹಿಂಡೊಂದು ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದು ದಿಕ್ಕಾಪಾಲಾಗಿ ಉರುಳಾಡಿಸಿ ಗಾಯಗೊಳಿಸಿ ರಕ್ತಕಾರಿಕೊಂಡು ತಂದೆ ಸಣ್ನನುಮಂತಪ್ಪನಿದ್ದುದನ್ನು ಕಂಡ ಕೊಟ್ರೇಶಿ ʼಯಪ್ಪೋʼ ಎಂದ ಜೋರಾಗಿ ಮುಲುಗಿ ಕನಸ್ಸಿಂದ ಎಚ್ಚರಗೊಂಡು ಬಾಗಿಲ ಕಡೆ ನೋಡಿದಾಗ ಬಾಗಿಲ ಚಿಲಕ ತೆಗೆದ ತುಸು ಬೆಳಕಿನಲ್ಲಿ ಮಳೆ ಬಂದು ನಿಂತಿದ್ದರ ಬಗ್ಗೆ ಅರಿವಾಯಿತು.
ಅಯ್ಯೋ ಇದೊಂದು ಕನಸ್ಸೇ ಎಂದು ಪಕ್ಕದಲ್ಲಿ ಮಲಗಿದ್ದ ತಂದೆ ಇಲ್ಲದಿದ್ದುದನ್ನು ಕಂಡು ಚಪ್ಪಲಿ ಮತ್ತು ಕೈ ಚೀಲ ಇಟ್ಟಿದ್ದ ಕಡೆ ಕಣ್ಣಾಡಿಸಿದ ತಂದೆ ಅಡವಿ ಬೇಟೆಗೆ ಹೋಗಿದ್ದಾರೆ ಬರುವವರೆಗೂ ಎಚ್ಚರದಿಂದರಬೇಕೆಂದು ಕಣ್ಣು ಬಿಟ್ಟುಕೊಂಡು ಮಲಗಿದ್ದ ಕೊಟ್ರೇಶಿಗೆ ಮೋಜಿ ಇಂದು ಮಳೆ ಬಂದೇ ಬರುತ್ತದೇ ಮಳೆ ಬಾರದಿದ್ದರೆ ಊರು ಬಿಡುವುದಾಗಿ ಹೇಳಿದ್ದ ಇಂದು ಮಳೆ ಬಂದೆ ಬಿಟ್ಟಿದೆ ಮೋಜಿ ಒಬ್ಬ ಕುರಿಗಾಹಿ ಮೊಬ್ಬು ಹುಡುಗ ಇವನು ಮಳೆಯ ಬರುವಿಕೆಯ ಬಗ್ಗೆ ಹೇಳಿದ್ದ ಮಳೆ ಬಂದದ್ದು ಎನೇನೋ ಚಿತ್ರಣಗಳು ಕಣ್ಮುಂದೆ ಬಂದು ಕೊಟ್ರೇಶಿ ದುಪ್ಪಡಿ ಹೊದ್ದುಕೊಂಡು ಮಲಗಿದ.
ಮುಂಜಾನೆ ಸುಮಾರಿಗೆ ಬಾಗಿಲು ತೆರೆದುದ್ದರ ಬಗ್ಗೆ ಕೊಟ್ರೇಶಿಯ ಅರಿವಿಗೆ ಬಂತಾದರೂ ಕನಸಿರಬಹುದೆಂದು ಕಣ್ಮುಚ್ಚಿಕೊಂಡು ಮಲಗಿದ ಕೊಟ್ರೇಶಿ ನಿದ್ದೆಗೆ ಜಾರಿದ ವೇಳೆಗೆ ಸಣ್ಣನುಮಂತ ಮತ್ತು ಕಂದಾಳ್ ರಾಮಣ್ಣ ಕೈಯಲ್ಲಿ ಲಾಟೀನು ಹಿಡಿದು ತಲೆಗೆ ಗೋಣಿಚೀಲದ ತೊಪ್ಪೆಯನ್ನಾಕಿಕೊಂಡು ಜೊತೆಗೆ ಕರಿ ನಾಯಿಯೊಂದಿಗೆ ಭತ್ನಳ್ಳಿಯ ಕೆಮ್ಮಾಳದ ಕಡೆಗೆ ಬಂದರು ಮಳೆಯೆಂದರೆ ಎಂತಹಾ ಮಳೆ “ಅಬ್ಬಾ! ಮೋಜಿಯ ಮಾತಲ್ಲಿ ನಿಜವಾಗಿಯೂ ದೈವಾಂಶ ಇದೆ ಲೇ ರಾಮ ನಾನು ಇಂತ ಮಳೆ ನೋಡಿ ಅದೆಷ್ಟೋ ವರ್ಷಾತು ಅಡವಿ ಬ್ಯಾಟಿ ಭರ್ಜರಿ ಸಿಗುತಾವು ನಡಿಯಲೇ ಆ ಮೂಲಿ ಕಡಿಗೆ ಬ್ಯಾಟಿ ಸಿಕ್ರ ಕುಂತಗಂಡು ಕೀಳಬ್ಯಾಡ ಬ್ಯಾಟಿ ಕೈ ತಪ್ಪಿ ಹೊಕ್ಕಾವು ಅಪ್ಪಿ ತಪ್ಪಿನೂ ಬ್ಯಾಟಿ ಹೆಸರಿಟ್ಟು ಕರಿಬ್ಯಾಡಲೇ ರಾಮಣ್ಣ” ಎಂದು ಹೇಳುತ್ತಾ ಲಾಟೀನು ಹಿಡಿದು ಮುಂದೆ ಸಾಗುತ್ತಿರುವಾಗ ಸಣ್ಣನುಮಂತಣ್ಣ ಹದ್ದಿನಂತಹ ಕಣ್ಣಿಗೆ ಬ್ಯಾಟೆಯ ರಾಶಿಯೇ ಮಣ್ಣಿನಿಂದ ಹೊರ ಹೊಮ್ಮಿರುವುದು ಬೆಳ್ಳಿಯ ರಾಶಿಯಂತೆ ಕಂಡು ಸಂತೋಷದಿಂದ ಆಸೆಗಣ್ಣಿನಿಂದ ಬಾಗಿ ಒಂದೊಂದೆ ಬೆಳ್ಳಿಯ ತುಂಡನ್ನು ಭೂಮಿಯಿಂದ ಕಿತ್ತು ತನ್ನ ಜೋಳಿಗೆಯಂತ ಸೈಡ್ ಬ್ಯಾಗಿಗೆ ತುಂಬಿಕೊಂಡ ಎತ್ತ ನೋಡಿದರೂ ಅಡವಿ ಬೇಟೆಯೇ ಕಂಡ ಸಂತೋಷದಲ್ಲಿದ್ದ ಕಂದಾಳ್ ರಾಮಣ್ಣ “ಎಂತಾ ಬ್ಯಾಟೆಲೇ ನನ್ನ ಜೀವಮಾನದಲ್ಲಿಯೇ ಇಷ್ಟೊಂದು ಬ್ಯಾಟಿ ಆಡಿಲ್ಲ ಬುಡು” ಎಂದು ಅಡವಿ ಬೇಟೆಯ ಹೆಸರೇಳಿದ್ದೇ ತಡ ಅಡವಿ ಬೇಟೆಯೆಲ್ಲಾ ಮಾಯಾವಾಗಿ ಬೆಳಗಾಯಿತು ಬೇಟೆಗಾರರು ಊರ ಕಡೆ ಮುಖ ಮಾಡಿದರು.
ಹುಣಸೇಮರದ ಮೇಲೆ ಕುಳಿತ ಕಾಗೆಗಳು ಕಾಆ….. ಕಾಅಅಆಆಅಅಅ ಎಂದು ತಿಪ್ಪೆಯಲ್ಲಿದ್ದ ಕೋಳಿಗಳು ಕೊಕ್ಕಕೋಓಓಒಓಒಓಓಓಓಒ ಎಂದು ಕೂಗುವ ಸದ್ದಿಗೆ ಕೊಟ್ರೇಶಿಗೆ ಎಚ್ಚರವಾಗಿ ಮೂಗಿಗ್ ತಾಯಿ ಹರಿದ ಮಸಾಲೆಯ ವಾಸನೆ ಮೂಗಿಗೆ ರಾಚಿತು ಸಣ್ಣನುಮವ್ವ ಒಲೆಯ ಮುಂದೆ ಕುಳಿತು ಎನನ್ನೋ ಬೇಯಿಸುತ್ತಿದ್ದಳು ಕೊಟ್ರೇಶಿ ಎದ್ದವನೇ ತಾಯಿಯ ಬಳಿ ಹೋಗಿ ಅಡವಿ ಬೇಟೆ ಎಲ್ಲಿ ಎಂದು ಕೇಳಿದಾಗ ಮನೆಯ ನೆಲುವಿನ ಮೇಲೆ ತೂಗು ಹಾಕಿದ್ದ ಪಾತ್ರೆಯ ಕಡೆಗೆ ಬೆರಳು ಮಾಡಿ ತೋರಿದಾಗ ಓಡಿ ಹೋಗಿ ನೋಡಿದಾಗ ʼಅಣಬೆʼಯು ಪಾತ್ರೆಯಲ್ಲಿತ್ತು ಇದನ್ನು ಕಂಡ ಕೊಟ್ರೇಶಿ “ಅಡವಿ ಬ್ಯಾಟಿ ಎಂದೇಳಿ ಇದೇನಿದು ಅಣಬಿ ತಂದಾನ ಅಪ್ಪಾ” ಎಂದಾಗ ಸಣ್ಣನುಮವ್ವ ಅಣಬೆ ಕೀಳಲು ಹೋಗುತ್ತೇವೆಂದು ಹೇಳಿದರೆ ಅಣಬೆಗಳು ಸಿಗುವುದಿಲ್ಲ ಆದ್ದರಿಂದ ಅಣಬೆಗಳನ್ನು ಹೆಸರಿನಿಂದ ಕರೆಯುವುದಿಲ್ಲ, ಕುಳಿತುಕೊಂಡು ಕಿತ್ತರೆ ಅಣಬೆ ಮಾಯವಾಗುವೆಂದು ವಾಡಿಕೆ ಇರುವುದರಿಂದ ಅಡವಿ ಬೇಟೆ ಎಂದು ಕರೆಯುತ್ತಾರೆಂದು ಸಣ್ಣನುಮವ್ವ ಹೇಳುತ್ತಾ ಮಸಾಲೆಯಲ್ಲಿ ಅಡವಿ ಬೇಟೆಯನ್ನು ಬೇಯಿಸಿ ಬೆಳಗ್ಗೆ ಪಾಕೇಟು ಸಾರಾಯಿ ಸೇವಿಸಿ ಬಂದ ಸಣ್ಣನುಮಂತ, ಕಂದಾಳ್ ರಾಮಣ್ಣ, ಸಣ್ಣನುಮವ್ವ ಮತ್ತು ಕೊಟ್ರೇಶಿ ಅಡವಿ ಬೇಟೆ ಸವಿದರು.
— ಕೆ.ಶ್ರೀಧರ್(ಕೆ.ಸಿರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.