ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್):ಅರಣ್ಯದ ಹಸಿರು ಹೊದಿಕೆ ಮಾನವ ಸೇರಿದಂತೆ ಕೋಟ್ಯಂತರ ಜೀವಿಗಳ ಜೀವನಾಡಿಯಾಗಿದ್ದು, ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರತಿ ದೇಶ ತನ್ನ ಒಟ್ಟು ಭೂಭಾಗದ ಪೈಕಿ ಶೇ.33 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಈ ವಿಷಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಅವರು ಬುಧವಾರ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶದಲ್ಲಿ ಜಿಲ್ಲಾಡಳಿತ,ಅರಣ್ಯ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ”ದಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಜನಸಂಖ್ಯೆಯ ಹೆಚ್ಚಳ,ಅಭಿವೃದ್ಧಿ ಮತ್ತು ಒತ್ತುವರಿ ಮತ್ತಿತರ ಕಾರಣಗಳಿಂದಾಗಿ ಅರಣ್ಯದ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಒಟ್ಡು ಭೂಭಾಗದಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕೆಂಬ ಮಾನದಂಡವನ್ನು ನಾವು ಪೂರೈಸಲಾಗುತ್ತಿಲ್ಲದಿರುವುದು ದುರದೃಷ್ಟಕರ. ಉತ್ತಮ ಗಾಳಿ,ಬೆಳಕು,ನೀರು ಮಾನವ ಸೇರಿದಂತೆ ಸಕಲ ಜೀವರಾಶಿಗಳು ಜೀವಂತವಾಗಿರಲು ಮತ್ತು ಆರೋಗ್ಯದಿಂದ ಇರಲು ಅತ್ಯಗತ್ಯವಾಗಿ ಬೇಕಾಗಿದೆ. ಆದರೆ, ಇದಕ್ಕೆ ಅರಣ್ಯ ಎಂಬ ಹಸಿರು ಹೊದಿಕೆ ನಿಗದಿತ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಅರಿಯಬೇಕು. ಕೇವಲ ಸಸಿ ನೆಟ್ಟರೆ ಸಾಲದು. ಅದನ್ನು ಮರವಾಗುವಂತೆ ಸಂರಕ್ಷಣೆ ಮಾಡಿದಾಗ ಮಾತ್ರ ಸಸಿ ಹಾಕಿದ್ದು ಸಾರ್ಥಕವಾಗುತ್ತದೆ. ಹಸಿರು ಪ್ರದೇಶವನ್ನು ವಿಸ್ತರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರವನ್ನು ಬಿಟ್ಟು ಹೋಗಬೇಕು. ಅರಣ್ಯ ಸಂರಕ್ಷಣೆ ವಾಡುವ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಸಾರ್ವಜನಿಕರು ಎಲ್ಲರೂ ಗಿಡ ಮರಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಬೆಳೆಸಬೇಕು.ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ, ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದವರನ್ನು ಸ್ಮರಿಸಲು ಈ ದಿನವು ಪ್ರಮುಖ ದಿನವಾಗಿದೆ.ಅಧಿಕಾರಿಗಳು ಸಾರ್ವಜನಿಕರಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕಾಡು ನಾಶದಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಅನೇಕ ಸಂಘ ಸಂಸ್ಥೆಗಳು ಅರಣ್ಯ ರಕ್ಷಣೆ ಮಾಡುವಲ್ಲಿ ಸಕ್ರೀಯವಾಗಿ ಕಾರ್ಯೋನ್ಮುಖರಾಗಬೇಕು. ಅರಣ್ಯ ಸಂರಕ್ಷಣೆ ಮಾಡಿದಾಗ ಮಾತ್ರ ಪರಿಸರ ಸಮತೋಲನ ವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಎಂ.ಆರ್ ಮಂಜುನಾಥ್ ಅವರು ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ವೇಳೆ ಅರಣ್ಯ ಹುತಾತ್ಮರರಿಗೆ ಮೌನ ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿನ್ನಪ್ಪಯ್ಯ, ವಲಯ ಅರಣ್ಯ ಅಧಿಕಾರಿ ವಾಸುದೇವ ಮೂರ್ತಿ, ಸಾಮಾಜಿಕ ಅರಣ್ಯ ವಿಭಾಗದ ಎಂ.ಸಿ ಗೀತಾ, ಗಸ್ತು ಅರಣ್ಯ ಪಾಲಕ ರಾಮಪ್ಪ, ಕ್ಷೇಮಾಭಿವೃದ್ಧಿ ಅರಣ್ಯ ನೌಕರರ ಸಂಘ ಸುಬ್ಬಾರೆಡ್ಡಿ, ಹಾಗೂ ಅರಣ್ಯ ಇಲಾಖೆ ಸಿಬಂದ್ದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಎಂ.ಎ. ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.