(www.vknews.in) ; ಗ್ರಹಿಕೆ…….” ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ….” ಭಾರತರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ……..
ಎಷ್ಟೋ ಬಾರಿ ಈ ಮಾತು ನಮ್ಮೊಳಗೆ ಹೌದು, ಇದು ನಿಜ ಎನಿಸುತ್ತಿರುತ್ತೆ. ಏಕೆಂದರೆ ಕೆಲವೊಮ್ಮೆ ನಾವು ನಮ್ಮದಲ್ಲದ, ನಾವು ಮಾಡಿರದ ಆರೋಪಗಳನ್ನು ನಮ್ಮ ಮೇಲೆ ಹೊರಿಸಿದಾಗ ಮನಸ್ಸು ತಳಮಳಗೊಳ್ಳುತ್ತದೆ. ಮಾನಸಿಕ ಒತ್ತಡಕ್ಕೊಳಗಾಗುತ್ತದೆ. ನಮ್ಮ ತಪ್ಪು ನಮಗೆ ಪಶ್ಚಾತಾಪದ ಭಾವನೆ ಮೂಡಿಸಿದರೆ, ನಮ್ಮದಲ್ಲದ ತಪ್ಪು ಹಿಂಸಾತ್ಮಕ ಮನಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ. ಇದು ಭಂಡ ವ್ಯಕ್ತಿತ್ವದವರಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಎಲ್ಲವನ್ನು ಸಾಧ್ಯವಾದಷ್ಟು ಸಮ ಪ್ರಮಾಣದಲ್ಲಿಯೋ ಅಥವಾ ನಿರ್ಲಕ್ಷದ ಮನೋಭಾವದಲ್ಲಿಯೋ ಅಥವಾ ಅಜ್ಞಾನದ ರೀತಿ ತಮಗೆ ಅನ್ವಯಿಸುವುದೇ ಇಲ್ಲ ಎಂದು ಪರಿಗಣಿಸಿದಾಗ ಇದು ಅಷ್ಟಾಗಿ ಬಾಧಿಸುವುದಿಲ್ಲ….
ಏಕೆ ಹೀಗೆ ಎಂದರೆ ಈ ಸಮಾಜದಲ್ಲಿ ಗ್ರಹಿಕೆ ಎಂಬ ಭಾವ ಮತ್ತು ಅರಿವು ನಿಜಕ್ಕೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮೊಳಗೆ ಈ ಗ್ರಹಿಕೆ ಸರಿಯಾಗಿ ಅರ್ಥವಾಗುವಷ್ಟು ನಮ್ಮ ವ್ಯಕ್ತಿತ್ವ ರೂಪುಗೊಂಡಿರುವುದೇ ಇಲ್ಲ. ಆಗ ಅದು ತಪ್ಪಾಗಿ ಮತ್ತು ಸುಲಭವಾಗಿ ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಳ್ಳುತ್ತದೆ. ಇದು ಜೀವನದ ಎಲ್ಲ ಕ್ಷೇತ್ರಗಳಿಗೂ, ಎಲ್ಲಾ ವರ್ಗದ, ಎಲ್ಲಾ ವಯೋಮಾನದವರಿಗೂ ಸಮ ಪ್ರಮಾಣದಲ್ಲಿ ಅನ್ವಯಿಸುತ್ತದೆ…..
ನಮ್ಮಲ್ಲಿ ಸರಿಯಾದ ಗ್ರಹಿಕೆ ಮೂಡಲು ಅಧ್ಯಯನ, ಚಿಂತನೆ, ಅನುಭವ, ಹೃದಯ ವೈಶಾಲ್ಯತೆ, ಶ್ರಮ, ಕ್ಷಮಾಗುಣ, ಕರುಣೆ, ತ್ಯಾಗ, ಸಹಕಾರ, ಸಮನ್ವಯ ಮುಂತಾದ ಎಲ್ಲಾ ಗುಣಗಳು ಸಮ್ಮಿಲನವಾಗಿರಬೇಕಾಗುತ್ತದೆ. ಆಗ ಮಾತ್ರ ಅದು ಸಾಧ್ಯ. ಉದಾಹರಣೆಗೆ ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನು ಗ್ರಹಿಸುವಲ್ಲಿ ಗೌತಮ ಬುದ್ಧ ಒಂದು ಮಾದರಿಯಾದರೆ, ಸಾಮಾಜಿಕ ಬದುಕನ್ನು ಗ್ರಹಿಸುವಲ್ಲಿ ಬಸವಣ್ಣ ಮತ್ತೊಂದು ಮಾದರಿಯಾಗುತ್ತಾರೆ, ಹಾಗೆಯೇ ಶೋಷಣೆಯನ್ನು ಗ್ರಹಿಸುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ರಾಜಕೀಯವನ್ನು ಗ್ರಹಿಸುವಲ್ಲಿ ಕೌಟಿಲ್ಯನೆಂಬ ಚಾಣಕ್ಯ, ಧರ್ಮ ಮತ್ತು ಆಧ್ಯಾತ್ಮವನ್ನು ಗ್ರಹಿಸುವಲ್ಲಿ ಸ್ವಾಮಿ ವಿವೇಕಾನಂದರು, ನೈತಿಕ ವ್ಯಕ್ತಿತ್ವವನ್ನು ಗ್ರಹಿಸುವಲ್ಲಿ ಮಹಾತ್ಮ ಗಾಂಧಿಯವರು ಹೀಗೆ ಅನೇಕರು ತಮ್ಮ ಗ್ರಹಿಕೆಯಿಂದಲೇ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗಿ, ಮಾದರಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ……
ಆ ಗ್ರಹಿಕೆ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ಇತರರ ಬಗ್ಗೆ ನಾವು ಅಥವಾ ನಮ್ಮ ಬಗ್ಗೆ ಇತರರು ಹೇಳುವುದನ್ನೇ ನಾವು ಸುಲಭವಾಗಿ ನಂಬುತ್ತೇವೆ. ಆ ಬಗ್ಗೆ ಸಮಗ್ರ ಚಿಂತನೆ ಮಾಡುವುದಿಲ್ಲ. ಅದರಲ್ಲಿ ಕೆಲವೊಮ್ಮೆ ನಿಜ ಇರಬಹುದೇ ಆದರೂ ಒಟ್ಟಾರೆಯಾಗಿ ಇನ್ನೊಬ್ಬರು, ಮುಖ್ಯವಾಗಿ ಅವರ ನೆಗೆಟಿವ್ ಅಥವಾ ನಕಾರಾತ್ಮಕ ಅಥವಾ ಕೆಟ್ಟ ಗುಣಗಳನ್ನು ಹೇಳಿದರೆ ನಾವು ಅದನ್ನೇ ನಂಬಿ ಅವರ ಬಗ್ಗೆ ಅಭಿಪ್ರಾಯ ಹೊಂದುತ್ತೇವೆ…..
ಇದು ಇಂದಿನ ಸಮಾಜದ ಜನರ ಮಾನಸಿಕ ಸ್ಥಿತಿ. ಯಾರೋ ಒಬ್ಬರು ಅವನು ಎಡಪಂಥೀಯ ಎಂತಲೋ ಅಥವಾ ಇನ್ನೊಬ್ಬರು ಆತ ಬಲಪಂಥೀಯ ಎಂತಲೋ ಅಥವಾ ಆತ ಮುಖವಾಡದ ಎಡಬಿಡಂಗಿ ಅಂತಲೋ, ಅಥವಾ ಆತ ಭ್ರಷ್ಟ ಎಂತಲೋ ಅಥವಾ ಅವಕಾಶವಾದಿ ಎಂತಲೋ ಅಥವಾ ಕೆಟ್ಟವನು ಎಂತಲೋ ಹೀಗೆ ಏನಾದರೂ ಹೇಳಿದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅವರೊಂದಿಗೆ ಮಾತುಕತೆ ನಡೆಸಿ, ಮನದಟ್ಟು ಮಾಡಿಕೊಂಡ ನಂತರವೇ ನಾವು ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ಇತರರು ಹೇಳುವ ಸುಳ್ಳನ್ನೇ ನಿಜ ಎಂದು ನಂಬಿ ನಮ್ಮ ಆತ್ಮಕ್ಕೆ ನಾವು ಮೋಸ ಮಾಡಿಕೊಳ್ಳುತ್ತೇವೆ…..
ಈ ಆಧುನಿಕ ಕಾಲದ ಮಾಧ್ಯಮ ಕ್ರಾಂತಿಯ ಸಂದರ್ಭದಲ್ಲಿ ಅಬ್ದುಲ್ ಕಲಾಂ ಅವರ ಮಾತುಗಳನ್ನು ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸುಳ್ಳುಗಳೇ ಈ ಜಗತ್ತನ್ನು ಆಳುವ ದಿನಗಳು ದೂರವಿಲ್ಲ……
ಬ್ರೇಕಿಂಗ್ ನ್ಯೂಸ್ ಗಳು, ವಾಟ್ಸಾಪ್ ಯೂನಿವರ್ಸಿಟಿಗಳು, ಸೋಷಿಯಲ್ ಮೀಡಿಯಾ ತತ್ವಜ್ಞಾನಿಗಳು ಇಡಿ ಸಮಾಜವನ್ನು ಆಕ್ರಮಿಸಿ ಕೃತಕ ಭಾವನೆಯ, ಮನಸ್ಸುಗಳ, ಚಿಂತನೆಯ, ವಿಚಾರಗಳ ನವ ಸಮಾಜ ನಿರ್ಮಾಣವಾಗುವುದು ಖಚಿತ. ಎಚ್ಚರಿಕೆ ಇರಲಿ…….
— ವಿವೇಕಾನಂದ. ಎಚ್. ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.