(www.vknews. in) ; ಸಿರಿಧಾನ್ಯಗಳನ್ನು ಅದರಲ್ಲಿರುವ ಕಬ್ಬಿಣ ನಾರು ಹಾಗೂ ಇತರ ಖನಿಜಾಂಶ ಮತ್ತು ಪೋಷಕಾಂಶಗಳ ಉಪಯುಕ್ತತೆಯನ್ನು ಗಮನದಲ್ಲಿಟ್ಟುಕೊಂಡು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಸಿರಿಧಾನ್ಯಗಳೆಂದು ವಿಂಗಡಿಸಲಾಗಿದೆ. ರಾಗಿ ಎನ್ನುವುದು ಬಹುಪಯೋಗಿ ಸಿರಿಧಾನ್ಯವಾಗಿದ್ದು ತಟಸ್ಥ ಸಿರಿಧಾನ್ಯವಾಗಿದೆ. ಇದರಲ್ಲಿ ನಾರಿನಂಶ ಹಿತ ಮಿತವಾಗಿ ಇರುತ್ತದೆ. 3 ರಿಂದ 4 ಗಂಟೆಗಳಲ್ಲಿ ಜೀರ್ಣವಾಗಿಸುವ ಗ್ಲೂಕೋಸನ್ನು ಸರಿಯಾದ ಪ್ರಮಾಣದಲ್ಲಿ ರಕ್ತದಲ್ಲಿ ಇರುವಂತೆ ಮಾಡುತ್ತದೆ. ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹೊಂದಿರುವುದರಿಂದ ಮೂಳೆಗಳನ್ನು ಬಲಪಡಿಸಿ, ಅಸ್ಥಿರಂದ್ರತೆಯಾಗದಂತೆ ತಡೆಯುತ್ತದೆ. ಮುದ್ದೆ, ಕೇಕ್, ರೊಟ್ಟಿ, ದೋಸೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಆಹಾರವಾಗಿ ಬಳಸುವ ರಾಗಿ ಒಂದು ರೀತಿಯಲ್ಲಿ ಬಡವನ ಪಾಲಿನ ಅಮೃತ ಎಂದರೂ ಆತಿಶಯೋಕ್ತಿಯಾಗದು.
ರಾಗಿ ಎಂಬ ಬಹಳ ಪುಟ್ಟದಾದ ಧಾನ್ಯ, ಪೌಷ್ಟಿಕಾಂಶಗಳ ಮತ್ತು ಖನಿಜಾಂಶಗಳ ಕಣಜವಾಗಿರುತ್ತದೆ. ಈ ಕಾರಣದಿಂದಲೇ …ರಾಮ ಧಾನ್ಯ ಎಂದೂ ಕರೆಯುತ್ತಾರೆ. ಬರೀ ಆಹಾರವಾಗಿ ಮಾತ್ರವಲ್ಲದೆ ರೋಗ ನಿವಾರಕವಾಗಿಯೂ ರಾಗಿಯನ್ನು ಬಳಸುತ್ತಾರೆ. ರಾಗಿಯ ವಿಶಿಷ್ಟ ಗುಣವೆಂದರೆ ತ್ರಿದೋಷ ಶಾಮಕ ಅಂದರೆ ವಾತ, ಪಿತ್ತ ಮತ್ತು ಕಫ ಎಲ್ಲವನ್ನೂ ಶಮನ ಮಾಡುತ್ತದೆ.ರಾಗಿ ಸಸ್ಯ ಮೂಲದ್ದಾಗಿದ್ದು, ನೈಸರ್ಗಿಕ ಕಬ್ಬಿಣಾಂಶದ ಕಣಜ. ಅತೀ ಸುಲಭವಾಗಿ ಜೀರ್ಣವಾಗುತ್ತದೆ. ರಾಗಿಯಲ್ಲಿ ಇರುವ ವಿಟಮಿನ್ ‘ಸಿ’ ಸತ್ವ, ಕಬ್ಬಿಣಾಂಶವನ್ನು ಪೂರ್ಣವಾಗಿ ಹೀರಲು ನೆರವಾಗುತ್ತದೆ. ಅದೇ ರೀತಿ ರಕ್ತಹೀನತೆಗೆ ರಾಗಿ ರಾಮಬಾಣ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ರಾಗಿ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ರಾಗಿಯನ್ನು ಅತಿಯಾಗಿ ಸಂಸ್ಕರಿಸದೇ ಬಳಸುವುದರಿಂದಾಗಿ ತನ್ನ ಹೊಟ್ಟಿನ ಅಂಶವನ್ನು ಹಾಗೂ ಪೌಷ್ಟಿಕಾಂಶವನ್ನು ಕಾಪಾಡಿಕೊಳ್ಳುತ್ತದೆ. ಪ್ರತಿ 100 ಗ್ರಾಂ ರಾಗಿಯಲ್ಲಿ 7 ಗ್ರಾಂ ಪ್ರೊಟೀನ್, 72 ಗ್ರಾಂ ಶರ್ಕರಪಿಷ್ಟ, 42 ಮಿಲಿಗ್ರಾಂ ಕ್ಯಾರೋಟಿನ್, 2.7 ಗ್ರಾಂ ಖನಿಜ, 1.1 ಮಿಲಿಗ್ರಾಂ ನಿಯಾನಿನ್, 1.2 ಗ್ರಾಂನಷ್ಟು ನಾರಿನಂಶ ಇರುತ್ತದೆ.
ರಾಗಿಯಲ್ಲಿ ಅಧಿಕ ನಾರಿನಂಶ, ಕಡಿಮೆ ಕೊಬ್ಬಿನಂಶ, ಅನ್ಸ್ಯಾಚುರೇಟೆಡ್ ಪ್ಯಾಟಿ ಆಮ್ಲ ಇರುವುದರಿಂದ ಬೊಜ್ಜು ನಿವಾರಣೆಗೆ ಅತೀ ಉತ್ತಮ ಆಹಾರವಾಗಿದೆ. ರಾಗಿಯಲ್ಲಿನ ನಿಯಾಸಿನ್ ರಕ್ತದೊಂದಿಗೆ ಕೆಟ್ಟ ಕೊಲೆಸ್ಟ್ರಾಲ್ ಬೆರೆಯದಂತೆ ತಡೆಯುತ್ತದೆ ಮತ್ತು ದೇಹಕ್ಕೆ ಹೆಚ್ಚು ಅವಶ್ಯವಿರುವ ಹೆಚ್.ಡಿ.ಎಲ್ ಕೊಲೆಸ್ಟ್ರಾಲ್ (ಅಧಿಕ ಸಾಂಧ್ರತೆ ಇರುವ ಕೊಲೆಸ್ಟ್ರಾಲ್) ಪ್ರಮಾಣವನ್ನು ಹೆಚ್ಚಿಸುತ್ತದೆ. ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿ ಹೃದಯವನ್ನು ಕಾಪಾಡುತ್ತದೆ. ರಾಗಿಯಲ್ಲಿನ ಮೆಗ್ನಿಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಾಗಿಯಲ್ಲಿ ಇರುವ ಅಮಿನೋ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಥವಾ ಆಂಟಿ ಆಕ್ಸಿಡೆಂಟ್ಗಳು ಉಚಿತ ಅಮೂಲಾಗ್ರಗಳಿಂದ (ಫ್ರೀ ರ್ಯಾಡಿಕಲ್) ಉಂಟಾಗುವ ತೊಂದರೆಯನ್ನು ತಪ್ಪಿಸುತ್ತದೆ. ಅವಿನೋ ಆಮ್ಲಗಳು ಮನಸ್ಸನ್ನು ಶಾಂತಗೊಳಿಸಿ, ಉದ್ವೇಗ, ಖಿನ್ನತೆಯನ್ನು ನಿಯಂತ್ರಿಸುತ್ತದೆ. ನಿದ್ರಾಹೀನತೆಯನ್ನು ತಡೆಯುತ್ತದೆ. ಮನಸ್ಸಿನ ಒತ್ತಡವನ್ನು ನಿಯಂತ್ರಿಸಿ, ಮನಸ್ಸಿಗೆ ಆರಾಮ ಉಂಟುಮಾಡುತ್ತದೆ. ರಾಗಿಯಲ್ಲಿ ಇರುವ ಟ್ರಿಷ್ಟೋಪ್ಯಾನ್ ಎಂಬ ಅಮಿನೋ ಆಮ್ಲ ಅಧಿಕ ಹಸಿವನ್ನು ತಗ್ಗಿಸುತ್ತದೆ ಮತ್ತು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುತ್ತದೆ, ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ರಾಗಿ ಸಹಕಾರಿಯಾಗುತ್ತದೆ.
ರಾಗಿಯಿಂದ ತಯಾರಿಸಿದ ಆಹಾರ ಸೇವಿಸಿದಾಗ, ಒಂದೇ ಬಾರಿಗೆ ಗ್ಲೂಕೋಸ್ ಮಟ್ಟ ಏರುವುದಿಲ್ಲ. ಹಂತ ಹಂತವಾಗಿ ನಿಧಾನವಾಗಿ ಏರುತ್ತದೆ. ಆ ಮೂಲಕ ದೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ. ರಾಗಿಯಲ್ಲಿ ಇರುವಷ್ಟು ಕ್ಯಾಲ್ಸಿಯಂ ಮತ್ತು ವಿಟಮೀನ್ ಡಿ ಬೇರೆ ಯಾವುದೇ ಆಹಾರ ಸಸ್ಯ ಮೂಲದ ಆಹಾರದಲ್ಲಿ ಇಲ್ಲ. ಇದು ಎಲುಬಿನ ಆರೋಗ್ಯಕ್ಕೆ ಪೂರಕ. ಮೂಳೆ ಸವೆತ ರೋಗ ಇರುವವರಿಗೆ ರಾಗಿ ಅತೀ ಉತ್ತಮ ಆಹಾರವಾಗಿರುತ್ತದೆ. ರಾಗಿ ಆಹಾರ ದೇಹಕ್ಕೆ ತಂಪು ಉಂಟುಮಾಡುತ್ತದೆ. ಒಣಚರ್ಮ ಇರುವವರಿಗೆ ಚರ್ಮದ ಕಾಂತಿ ಹೆಚ್ಚಿಸಿ ಚರ್ಮದ ಸ್ಥಿಗ್ಧತೆ ಮತ್ತು ಹೊಳಪನ್ನು ನೀಡುತ್ತದೆ.
ರಾಗಿಯಲ್ಲಿ ಅಧಿಕ ನಾರಿನಂಶ ಇರುವ ಕಾರಣದಿಂದ ಆಹಾರ ಬೇಗನೆ ಜೀರ್ಣವಾದರೂ, ನಿಧಾನವಾಗಿ ಜೀರ್ಣಂಗ ವ್ಯೂಹದಿಂದ ಹೀರಲ್ಪಡುತ್ತದೆ. ಜೀರ್ಣಾಂಗ ವ್ಯೂಹದ ಸಮಸ್ಯೆಗಳಾದ ಮಲಬದ್ಧತೆ, ಕರುಳು ಕಿರಿ ಕಿರಿ ಇರುವವರಿಗೆ ರಾಗಿ ಉತ್ತಮ ಆಹಾರ. ರಾಗಿ ತಂಪು ನೀಡುವ ಆಹಾರವಾಗಿದ್ದು ಒಮ್ಮೆ ಸೇವಿಸಿದರೆ ಹಲವು ಗಂಟೆಗಳ ಕಾಲ ಮನಸ್ಸಿಗೆ ಮುದ ನೀಡಿ ತಂಪಾಗಿಸುತ್ತದೆ. ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡಿ ಆಯಾಸವನ್ನು ನಿಯಂತ್ರಿಸುತ್ತದೆ.
ಹೇಗೆ ಬಳಸ ಬಹುದು?
1) ರಾಗಿಯನ್ನು ಹೆಚ್ಚು ಸತ್ವಯುತವಾಗಿಸಲು ತೊಳೆದು, ನೆನೆಸಿ, ಮೊಳಕೆ ಬರಿಸಿ, ಹಿಟ್ಟು ಮಾಡಿ ಬಳಸಬಹುದಾಗಿದೆ 2) ಎಳೆಯ ರಾಗಿಯನ್ನು ತರಕಾರಿಯಂತೆ ಬಳಸಬಹುದಾಗಿದೆ. ಎಳೆ ರಾಗಿ ತೆನೆಯನ್ನು ಬೆಂಕಿಯಲ್ಲಿ ಸುಟ್ಟು, ಹಸಿರಾಗಿಯನ್ನು ಬೇರ್ಪಡಿಸಿ, ಉಪ್ಪು, ಮೆಣಸು, ಬೆಳ್ಳುಳಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರ ಮಾಡಿ ಸೇವಿಸಬಹುದಾಗಿದೆ. 3) ರಾಗಿಯನ್ನು ಮುದ್ದೆ ರೂಪದಲ್ಲಿ ಸಾರಿನ ಜೊತೆ ಸೇವಿಸಬಹುದು 4) ರಾಗಿಯನ್ನು, ರೊಟ್ಟಿ, ದೋಸೆ, ಚಪಾತಿಯ ರೂಪದಲ್ಲಿಯೂ ಬಳಸಬಹುದು 5) ರಾಗಿಯಿಂದ ಕೇಕ್ ಮಾಡಿ ಚಾಕೋಲೇಟ್ ಕೇಕಿನಂತೆ ಬಳಸಬಹುದಾಗಿದೆ
ಕೊನೆ ಮಾತು:
ಸಿರಿಧಾನ್ಯಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನ ಪಡೆದಿರುವುದು ರಾಗಿ ಎಂಬ ಪುಟ್ಟ ಧಾನ್ಯ. ತನ್ನಲ್ಲಿರುವ ಅತ್ಯಧಿಕ ಪೋಷಕಾಂಶ ಖನಿಜಾಂಶ ಮತ್ತು ರೋಗ ನಿರೋಧಕ ಶಕ್ತಿಯಿಂದಾಗಿ ಆಹಾರ ರೂಪದ ಔಷಧಿ ಎಂದರೂ ತಪ್ಪಾಗಲಾರದು. ನಿತ್ಯ ರಾಗಿ ಅಂಬಲಿ ಕುಡಿದು, ದಿನ ನಿತ್ಯ ದುಡಿಯುವ ರೈತನ ಬಳಿ ಯಾವ ರೋಗ ಸುಳಿಯದು ಎಂಬ ಸತ್ಯವನ್ನು ನಾವೆಲ್ಲ ಅರಿತು ರಾಗಿಯನ್ನು ಹೆಚ್ಚು ಬಳಸಿದಲ್ಲಿ ನಮ್ಮ ಆರೋಗ್ಯ ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ
ಡಾ|| ಮುರಲೀ ಮೋಹನ್ ಚೂಂತಾರು ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು MDS,DNB,MOSRCSEd(U.K), FPFA, M.B.A
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.