(www.vknews.in) : ನೀವೆಷ್ಟೇ ಒಳ್ಳೆಯವರಾಗಿದ್ದರೂ ಕೌಟುಂಬಿಕ ವಿವಾದಗಳನ್ನು ಕೋರ್ಟಿಗೆ ಎಳೆದೊಯ್ದ ಬಳಿಕ, ಅಲ್ಲಿ ನೀವು ನಿಮ್ಮ ವಕೀಲರು ಹೇಳಿ ಕೊಟ್ಟದ್ದನ್ನೇ ಪುನರಾವರ್ತಿಸಬೇಕಾಗುತ್ತದೆ. ಎದುರು ಕಕ್ಷಿಯ ಕೊರಳಿಗೆ ಹಾಕಿದ ಉರುಳು ಬಿಗಿಗೊಳಿಸಬೇಕಾದರೆ ಕಸರತ್ತು ನಡೆಸಲು ನೀವು ನಿರ್ಬಂಧಿತರಾಗುತ್ತೀರಿ. ಆವಾಗ ನೀವು ನಿಮ್ಮ ಆಶಯ, ಆದರ್ಶಗಳನ್ನೆಲ್ಲ ಬಲಿ ಕೊಡಬೇಕಾಗುತ್ತದೆ. ಸುಳ್ಳಿಗೆ ಸಾಕ್ಷಿ ನಿಲ್ಲಬೇಕಾಗುತ್ತದೆ. ನೀವು ನಯಾ ಪೈಸೆ ವರದಕ್ಷಿಣೆ ಕೊಡದಿದ್ದರೂ, ವರನ ವಿರುದ್ಧ ಕೇಸನ್ನು ಜಯಿಸಬೇಕಾದರೆ ವರದಕ್ಷಿಣೆ ಹಿಂಸೆ, ದೈಹಿಕ ಹಿಂಸೆ, ಮಾನಸಿಕ ಕಿರುಕುಳ… ಮತ್ತಿತರ ಆಪಾದನೆಗಳನ್ನು ಆತ ಮೇಲೆ ಹೊರಿಸಬೇಕಾಗುತ್ತದೆ. ಎದುರು ಕಕ್ಷಿಯ ಅವಸ್ಥೆಯೂ ಇಷ್ಟೇ. ಪತ್ನಿ ಮತ್ತು ಆಕೆಯ ಮನೆಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೇರಿ, ಕುಣಿಕೆಯನ್ನು ಬಿಗಿಗೊಳಿಸಬೇಕಾಗುತ್ತದೆ. ಒಟ್ಟಿನಲ್ಲಿ ಓಡುವವನೂ ಓಡಿಸುವವನೂ ಅಲ್ಲಿ ಸಮಾನರು. ಓಡಿಓಡಿ ಎರಡೂ ಕಡೆಯವರು ಬಹಳಷ್ಟು ದಣಿಯುತ್ತಾರೆ. ಬಹಳಷ್ಟು ಕಳೆದುಕೊಳ್ಳುತ್ತಾರೆ. ಸುಸ್ತಾಗುತ್ತಾರೆ. ಕೊನೆಗೆ ಸಾಕುಸಾಕಾಗಿ ನೊಂದು ಹೋಗುತ್ತಾರೆ.
ಆದರೆ ಯುದ್ಧ ರಂಗದಿಂದ ಹಿಂದೆ ಸರಿಯುವುದೂ ಅಷ್ಟು ಸಲೀಸಲ್ಲ. ಅದರ ಕಾನೂನು, ಕಾಯಿದೆಗಳು ಬೇರೆಯೇ ಇದೆ. ಪರಸ್ಪರ ಮಾತುಕತೆ, ಕುಟುಂಬದ ಹಿರಿಯರನ್ನು ಸಮೀಪಿಸಿ ಪಂಚಾತಿಕೆಗಳಿಂದ ಸರಿಪಡಿಸ ಬೇಕಾದುದನ್ನು ಪೋಲಿಸ್, ಕೋರ್ಟ್ ಕಛೇರಿಗೆ ಎಳೆದೊಯ್ದುದರ ಅಡ್ಡಪರಿಣಾಮವದು. ಹಾಗೆಯೇ ಸುಳ್ಳಾರೋಪಗಳಲ್ಲೇ ಹೊರಳಾಡಿದ ಮನಸ್ಸುಗಳು ಮತ್ತೆ ಒಂದಾಗಲು ಸಾಧ್ಯವೇ? ಅವರೊಳಗೆ ದಯೆ, ಅನುಕಂಪ ಮತ್ತೆ ಚಿಗುರೊಡೆಯಲು ಸಾಧ್ಯವೇ? ಆದ್ದರಿಂದ ಕೌಟುಂಬಿಕ ತಗಾದೆಗಳನ್ನು ಸುಧಾರಿಸಿಕೊಂಡು, ಸಂಭಾಳಿಸಿಕೊಂಡು ಮುನ್ನಡೆಸುವುದು ಬುದ್ಧಿವಂತಿಕೆ ಯಾಗಿದೆ. ಅಲ್ಲಿ ಕೆಲವೊಂದನ್ನು ಕಂಡರೂ ಕಾಣದಂತೆ ನಟಿಸಬೇಕಾಗುತ್ತದೆ. ಸಿಟ್ಟು ಬರುತ್ತದೆ ನಿಜ. ಆದರೂ ಸಂಯಮ ಪಾಲಿಸಿ ನುಂಗಿಕೊಳ್ಳಬೇಕು. ಹೌದು, ಮದುವೆಯಾಗಿ ಎರಡ್ಮೂರು ತಿಂಗಳಲ್ಲೇ ವರನಿಗೆ ದಾಂಪತ್ಯ ಜೀವನ ಸಾಕುಸಾಕಾದುದು, ಆಕೆ ಬರುವಾಗ ತಂದ ಬಣ್ಣ ಮತ್ತು ಚಿನ್ನದ ಕೊರತೆ ಖಂಡಿತ ಕಾರಣವಲ್ಲ. ಹನಿಮೂನ್ಗೆ ಹೋಗದ್ದೂ ನೆಪವಲ್ಲ. ಹಾಗೆಯೇ ಒಂದು ಮಗುವನ್ನು ಹಡೆದಾಗಲೇ ದಾಂಪತ್ಯ ಜೀವನ ಭಾರವಾದುದು ಮತ್ತು ನೀವು ತ್ವಲಾಕ್ ಕೊಡಿ. ಮಗುವನ್ನು ನಾನೇ ಸಾಕುತ್ತೇನೆಂದು ಘರ್ಜಿಸಿದ್ದಾಕೆಯೂ ಇಂದು ತವರು ಮನೆಯವರಿಗೂ ಭಾರವಾಗಿದ್ದಾಳೆ.
ಅವಸರದ ನಿರ್ಧಾರವಾಯಿತೆಂದು ಖೇದಿಸುತ್ತಿದ್ದಾಳೆ. ಇಲ್ಲ, ಜೀವ ಹೋದರೂ ನಿನಗೆ ತ್ವಲಾಕ್ ಕೊಡಲಾರೆ. ನಿನ್ನ ಅಹಂಕಾರಕ್ಕೆ ತಕ್ಕ ಪ್ರತೀಕಾರ ನೀಡುವೆನೆಂದವನೂ ಗಲ್ಫ್ ಉದ್ಯೋಗಕ್ಕೆ ತೆರಳಲಾಗದೆ ಕೋರ್ಟ್, ಕಛೇರಿ ಅಲೆದಾಡುತ್ತಿದ್ದಾನೆ. ಏನೇನೋ ಕಿತಾಪತಿಗಳನ್ನು ಹೇಳಿಕೊಟ್ಟು ನಂಬಿಸಿ, ಇಬ್ಬರ ಹಿಂದೆ ಜೋತು ಬಿದ್ದವರಲ್ಲಿ ಇಂದು ಒಬ್ಬರೂ ಇಲ್ಲ. ಅವರು ಅವರವರ ಕುಟುಂಬದೊಂದಿಗೆ ಹಾಯಾಗಿದ್ದಾರೆ. ಒಟ್ಟಿನಲ್ಲಿ ಮಲ್ಲಯುದ್ಧವನ್ನು ಜಯಿಸಿದವರು ಶಕ್ತಿಶಾಲಿಗಳಲ್ಲ. ಸಿಟ್ಟು ಬಂದಾಗ ಸಹನೆ, ಸಂಯಮ ಪಾಲಿಸುವವರೇ ನಿಜವಾದ ಶಕ್ತಿಶಾಲಿಗಳೆಂಬ ಪ್ರವಾದಿ ವಚನ ಹೆಚ್ಚೆಚ್ಚು ನೆನಪಿಸಿಕೊಂಡರೆ, ಅನೇಕ ಅನಾಹುತಗಳನ್ನು ತಡೆಯಬಹುದು.
ಬಹುತೇಕ ಕೌಟುಂಬಿಕ ದೂರುಗಳನ್ನು ಆಲಿಸುವಾಗ ನಿಜಕ್ಕೂ ಸಾಕು ಸಾಕಾಗುತ್ತದೆ. ಹಲವೊಮ್ಮೆ ಬೇಜಾರಾಗುತ್ತದೆ. ಬರೀ ಸಣ್ಣಪುಟ್ಟ ಸಿಲ್ಲಿ ವಿಷಯಗಳು. ಒಂದಷ್ಟೂ ತಗ್ಗಲು, ಬಗ್ಗಲು, ಕ್ಷಮಿಸಲು ತಯಾರಿಲ್ಲದ ಈಗೋ ಜೋಡಿಗಳು. ಏನಾದರೂ ಒಂದು ಸಮಸ್ಯೆ ಘಟಿಸಿದರೆ, ಅದುವರೆಗೂ ಪರಸ್ಪರರಿಂದ ಅನುಭವಿಸಿದ ಪ್ರೀತಿ, ಪ್ರೇಮ, ಒಳಿತುಗಳೆಲ್ಲವನ್ನೂ ಮಣ್ಣುಪಾಲು ಮಾಡುತ್ತಾರೆ. ಅಲ್ಲಿ ಎಲ್ಲವೂ ನೆಗೆಟಿವ್ ಆಗಿಯೇ ಕಾಣುತ್ತದೆ. ಇದು ಸಂಬಂಧಗಳನ್ನು ಮತ್ತಷ್ಟು ಹಳಸುತ್ತದೆಯೇ ಹೊರತು ಸುಧಾರಿಸುವುದಿಲ್ಲ.
ಯಾವುದೇ ಅಸಮಾಧಾನ, ಮನಸ್ತಾಪಗಳು ಬೀದಿ ರಂಪಾಟವಾಗದಿರಲಿ. ಹಿಂದೆ ಪ್ರವಚನವೊಂದನ್ನು ಆಲಿಸಿದ್ದೆ. ದಂಪತಿಗಳ ಭದ್ರತೆಯ ಕುರಿತು ಬಹಳ ಮನೋಜ್ಞವಾಗಿ ಅದರಲ್ಲಿ ವಿವರಿಸಲಾಗಿತ್ತು. ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದವರು ವಿಜಯಿಗಳಲ್ಲ. ವಿಶ್ವಕಪ್ ಜಯಿಸಿದವರೂ ವಿಜಯಿಗಳಲ್ಲ. ಕುಟುಂಬವನ್ನು ಜಯಿಸಿದವರೇ ನಿಜವಾದ ವಿಜಯಿಗಳು. ತನ್ನ ಬಾಳ ಸಂಗಾತಿಯ ಮೇಲೆ ಅನುಕಂಪ, ದಯೆ ತೋರಿಸುವ ಮತ್ತು ಪರಸ್ಪರ ಕ್ಷಮಿಸುವ ಜೋಡಿಗಳೇ ಜಗತ್ತನ್ನು ಜಯಿಸಿದವರು. ಹೃದಯದ ಅಂತರಾಳದಲ್ಲಿ ಸ್ವರ್ಣಾಕ್ಷರಗಳಲ್ಲಿ ನಮೂದಿಸಬೇಕಾದ ಮಾತದು.
ಮುಂದುವರಿಯುವುದು…
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.