(www.vknews. in) ; ದಿನ ಬೆಳಗಾದರೆ ಕೊಲೆ, ಅತ್ಯಾಚಾರ, ದರೋಡೆ, ಅಧಿಕಾರಶಾಹಿತ್ವ, ಭ್ರಷ್ಟಾಚಾರ ಮೊದಲಾದ ಸುದ್ದಿಗಳ ಗದ್ದಲ. ದೇಶದ ಹಿತ ಕಾಯುವ ಉತ್ಪಾದಕ ವಿಷಯಗಳು ಗೌಣವಾಗಿವೆ. ಅಪರಾಧಗಳ ಕುರಿತೇ ದಿನಪೂರ್ತಿ ಹರಟುವ ಮಾಧ್ಯಮಗಳು ಆ ಮೂಲಕ ಉದ್ದೀಪನಗೊಂಡ ಸಾಮಾನ್ಯ ಜನರದ್ದು ಇದೆ ಕಥೆ. ಆರೋಪಿ ಕುರಿತ ವ್ಯಂಗ್ಯ ಅಪಹಾಸ್ಯ ನಿಂದನೆ ಅವಮಾನ ವ್ಯಕ್ತಿನಿಷ್ಠ ತೀರ್ಪು-ತೀರ್ಮಾನ ಇವುಗಳದ್ದೇ ಭರಾಟೆ.
ಅಪರಾಧಿ ಎಂದರೆ ತಪ್ಪಿತಸ್ಥ, ನೈತಿಕ ವ್ಯಾಪ್ತಿಯ ಎಲ್ಲೆ ಮೀರಿದವರು. ಕೊಲ್ಲುವುದು, ಕದಿಯುವುದು, ಸುಳ್ಳು ಹೇಳುವುದು, ಲೈಂಗಿಕ ದುರ್ವರ್ತನೆ ಮಾಡುವುದು ಮತ್ತು ಧೂಮಪಾನ ಮದ್ಯಪಾನದಂತಹ ನಶೆಯೇರಿಸುವ ವಸ್ತುಗಳನ್ನು ಸೇವಿಸುವುದು ಈ ಮುಖ್ಯ ಐದು ಮಿತ್ಯಾಚಾರಗಳೇ ಎಲ್ಲಾ ಬಗೆಯ ಅಪರಾಧಗಳ ಬೇರು. ಇವುಗಳನ್ನು ಮಾಡದಂತೆ ಎಚ್ಚರ ವಹಿಸದ ಮನಸ್ಸುಗಳಿಂದ ಉದ್ದೇಶ ಪೂರಕವಾಗಿಯೂ ಮತ್ತು ಉದ್ದೇಶ ರಹಿತವಾಗಿಯೂ ಜರುಗುವ ಕೃತ್ಯಗಳೇ ಅಪರಾಧಗಳಾಗಿವೆ. ಘನತೆವೆತ್ತ ನಾಗರಿಕರಿಗೆ ಹೆಸರಾಗಿರುವ ಆಧುನಿಕ ಯುಗದ ಈ ಕಾಲಘಟ್ಟದಲ್ಲಿಯೂ ಮನುಷ್ಯರ ಅಜ್ಞಾನ ಮತ್ತು ಅಜಾಗರೂಕತೆಯಿಂದಾಗಿ ಅಪರಾಧಗಳು ದಿನನಿತ್ಯದ ಪ್ರಕ್ರಿಯೆಯಂತೆ ಸಾಮಾನ್ಯವಾಗಿಬಿಟ್ಟಿವೆ.
ಆರಂಭದ ದಿನಗಳಲ್ಲಿ ಅಶಕ್ತ ಜೀವಿಗಳಿಗೆ ಉಳಿಗಾಲವಿರಲಿಲ್ಲ. ಬಲಿಷ್ಟವಾದವು ಮಾತ್ರ ಬದುಕುಳಿಯುತ್ತಿದ್ದವು. ಒಂದು ಇನ್ನೊಂದನ್ನು ಕೊಂದು ಬದುಕುವ ಸ್ಥಿತಿ ಭಯಾನಕ ಹಂತ ತಲುಪಿದಾಗ, ಮಾನವರ ಸಂತತಿಯ ಉಳಿವಿಗಾಗಿ ನೀತಿ ನಿಯಮಗಳನ್ನು ತಾವಾಗಿಯೆ ರೂಪಿಸಿಕೊಂಡರು. ಈ ರೀತಿ ತಾನೂ ಬದುಕಿ ಇತರರೂ ಬದುಕುಳಿಯುವಂತೆ ಯೋಚಿಸಿದ ಪ್ರಾಣಿ ಮಾನವ ಮಾತ್ರ. ಈ ಬಗೆಯ ತನ್ನದೇ ಆದ ಪರಹಿತ ಚಿಂತನೆಯನ್ನು ಛಿದ್ರಗಳಿಸುತ್ತಿರುವುದೂ ಕೂಡ ಇದೇ ಮಾನವ ಪ್ರಾಣಿಯೆ. ಅಪರಾಧಗಳು ಜರುಗದಿರಲಿ ಆ ಮೂಲಕ ಎಲ್ಲರೂ ಎಲ್ಲರ ವೈಯಕ್ತಿಕ ಬದುಕನ್ನು ಗೌರವಿಸುವಂತಾಗಲಿ ಎಂದೇ ಸಾಮಾಜಿಕವಾಗಿ ಕಾನೂನೊಂದು ನಿಸರ್ಗತತ್ವ ಆಧಾರದಲ್ಲಿ ರೂಪಿತವಾಗಿದೆ. ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯುರ್ ಎಂಬ ಮಾತಿನಂತೆ ಬದುಕಿನ ನಾನಾ ಆಯಾಮಗಳಲ್ಲಿ ಅಪರಾಧಗಳಿಂದ ದೂರವಿರುವಂತೆ ಮನುಷ್ಯರಿಗೆ ಕುಟುಂಬ, ಶಾಲೆ ಮತ್ತು ಧಾರ್ಮಿಕ ಸಂಸ್ಥೆಗಳ ಮೂಲಕ ನೈತಿಕತೆಯನ್ನು ಭೋದಿಸಲಾಗುತ್ತದೆ. ಆದಾಗ್ಯೂ ಅಪರಾಧಗಳು ಜರುಗುತ್ತಿರುವುದರಲ್ಲಿ ಅಪರಾಧಿಯ ವ್ಯಕ್ತಿಗತ ಮತ್ತು ಸಮಾಜದ ಸಾಮೂಹಿಕ ಹೊಣೆಗೇಡಿತನದ ಪಾತ್ರವಿರುತ್ತದೆ.
ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಅಪರಾಧಿ ಮತ್ತು ಆರೋಪಿಗಳನ್ನು ನಡೆಸಿಕೊಳ್ಳುವ ಬಗೆ ಹೇಗೆ ಎಂದು ವೃತ್ತಿ ಬದುಕಿನ ಸಂದರ್ಭದಲ್ಲಿ ತರಬೇತುಗೊಳಿಸಲಾಗುತ್ತದೆ. ಆದರೆ ಸಾಮಾನ್ಯ ಜನರು ಈ ಕುರಿತಾದ ತಿಳುವಳಿಕೆಗಳನ್ನು ಸರಿಯಾಗಿ ಹೊಂದದೆ ಆರೋಪಿ ಮತ್ತು ಅಪರಾಧಿಗಳನ್ನು ಮನಸ್ಸೋಇಚ್ಛೆ ನಿಂದಿಸುವುದು ಆ ಮೂಲಕ ಅವರನ್ನು ಅವಮಾನಿಸುವುದರಲ್ಲಿ ತೊಡಗಿರುತ್ತಾರೆ. ಸಾಮಾನ್ಯವಾಗಿ ತಪ್ಪಿತಸ್ಥ ತಾನಲ್ಲದಿದ್ದಾಗ ಬಹುಪಾಲು ಮನುಷ್ಯರ ವರ್ತನೆ ಹೀಗೆಯೇ ಇರುತ್ತದೆ.
ತಪ್ಪುಗಳನ್ನು ಟೀಕಿಸುತ್ತಾ ಮಾತಿನ ನೈತಿಕ ಎಲ್ಲೆಯನ್ನು ಜನರು ಮೀರುತ್ತಿರುವುದಕ್ಕೆ ಪ್ರಸ್ತುತದ ನಿದರ್ಶನಗಳಾಗಿ ಕರ್ನಾಟಕದ ಪ್ರಜ್ವಲ್ ರೇವಣ್ಣನ ಪೆನ್ಡ್ರೈವ್ ಪ್ರಕರಣ, ರೇಣುಕಾಸ್ವಾಮಿ ಹತ್ಯೆ ಪ್ರಕರಣ, ಯಡಿಯೂರಪ್ಪ ಅವರ ಪ್ರಕರಣ ಇತರೆ ರಾಜಕೀಯ ವ್ಯಕ್ತಿಗಳ ಭ್ರಷ್ಟಾಚಾರ ಪ್ರಕರಣ ಮೊದಲಾದವುಗಳು ಪ್ರಕರವಾಗಿ ಕಾಣುತ್ತವೆ. ಇತ್ತೀಚೆಗೆ ಅತೀ ಹೆಚ್ಚು ಚೆರ್ಚೆಗೆ ಗ್ರಾಸವಾಗಿದ್ದ ಪ್ರಕರಣಗಳಿವು. ಸಮಯ ಕಳೆದಂತೆ ಈ ಪ್ರಕರಣಗಳು ಸ್ವಲ್ಪ ತಣ್ಣಗಾಗಿವೆ. ಈಗ ಅಪರಾಧಿ ಮತ್ತು ಆರೋಪಿಗಳನ್ನು ನಡೆಸಿಕೊಳ್ಳುವ ಕುರಿತು ಮಾತನಾಡುವುದು ಸೂಕ್ತ ಸಮಯವೆನಿಸುತ್ತದೆ.
ಈ ಮೇಲಿನ ಪ್ರಕರಣಗಳಲ್ಲಿ ಜಾತಿ, ವರ್ಗ ಮತ್ತು ಅಂತಸ್ತಿನ ಆಧಾರದ ಮೇಲೆ ಆರೋಪಿಗಳ ಪರ ಮತ್ತು ವಿರೋಧದ ಗುಂಪುಗಳೇ ಹುಟ್ಟಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿ ಹೆಸರನ್ನೂ ಗಳಿಸಿಬಿಟ್ಟವು. ಒಂದು, ಆಪ್ತ ಪ್ರೀತಿ ಪಾತ್ರ ವಲಯ ಅಪರಾಧಿಯ ಹೇಯ ಕೃತ್ಯವನ್ನೂ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಕುರುಡು ಅಭಿಮಾನವನ್ನು ಮೆರೆದರೆ ಮತ್ತೊಂದು, ವಿರೋಧಬಾಸವೆನ್ನುವಂತೆ ಕೊಲೆಗಾರನನ್ನ ಕೊಂದೇಬಿಡುವ, ಎನ್ಕೌಂಟರ್ ಮಾಡಿಬಿಡುವ, ಅತ್ಯಾಚಾರಿಯ ಮರ್ಮಾಂಗವನ್ನೇ ಕತ್ತರಿಸಿ ಬಿಡುವ ಕೈಗೆ ಕೈ, ಕಣ್ಣಿಗೆ ಕಣ್ಣು, ತಲೆಗೆ ತಲೆ ಎನ್ನುವ ಅಮ್ಮೂಬಿಯ ಕಾನೂನನ್ನು ಬಹುಪಾಲು ಜನ ಬೆಂಬಲಿಸಿದರು. ಇದು ವ್ಯಕ್ತಿಗತವಾಗಿ ಆಯಾಯಾ ಪರ ವಿರೋಧದ ಗುಂಪಿನ ಸಮಾನಮನಸ್ಕರಿಗೆ ಸರಿ ಎಂದೇ ಭಾಸವಾಗುತ್ತದೆ. ಆದರೆ ಅದಕ್ಕೂ ಮೀರಿದ ಕಾನೂನೊಂದು ನಮ್ಮ ನೆಲದಲ್ಲಿದೆ. ಯಾವ ತಪ್ಪಿಗೆ ಯಾವ ಶಿಕ್ಷೆ ಹಾಗೂ ತಪ್ಪಿನ ಪ್ರಮಾಣ, ಪರಿಣಾಮ ಮತ್ತು ಉದ್ದೇಶ ಇವೆಲ್ಲವನ್ನು ಪರಿಗಣಿಸಿ ಶಿಕ್ಷಿಸುವಂತಹ ಕ್ವಾಂಟಮ್ ಆಫ್ ಪನಿಷ್ಮೆಂಟ್ ಆಧರಿಸಿದ ಕಾನೂನು ಸುವ್ಯವಸ್ಥೆ ಸಂವಿಧಾನದ ರೂಪದಲ್ಲಿ ಅಸ್ಥಿತ್ವದಲ್ಲಿದೆ.
ಇದರ ಎದುರು ಯಾವುದೇ ತರತಮಕ್ಕೂ ಅವಕಾಶವಿಲ್ಲದ ನಿಷ್ಪಕ್ಷಪಾತ ಧೋರಣೆ ಇದೆ. ಅಪರಾಧಿಯನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಲು ಸನ್ನದ್ದವಾಗಿರುವಂತೆಯೇ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ಬಲವಾದ ಆಶಯವನ್ನೂ ಉಸಿರಿಸುವ ಕಾನೂನಿನ ನ್ಯಾಯ ನಿರ್ಣಯಕ್ಕೆ ಹೆಚ್ಚಿನ ಸಮಯವನ್ನೇ ಮೀಸಲು ಕೇಳುತ್ತದೆ. ಈ ನೆಲದ ಕಾನೂನು ಕಾನೂನಷ್ಟೇ ಅಲ್ಲ ಸಹಾನೂಭೂತಿಯ ಪ್ರತೀಕ. ಹಾಗಾಗಿಯೇ ಭಾರತದಲ್ಲಿ ಮರಣದಂಡನೆಯಂತಹ ಶಿಕ್ಷೆಯನ್ನು ವಿಧಿಸುವುದು ವಿರಳಾತೀ ವಿರಳ. ಜನಸಾಮಾನ್ಯರಾದ ನಾವು ಕಾನೂನಲ್ಲಿ ವಿಶ್ವಾಸವಿಡಬೇಕು ಮತ್ತು ನ್ಯಾಯ ನೀಡುವ ಸ್ಥಾನದಲ್ಲಿರುವವರೂ ಕೂಡ ವಿಶ್ವಾಸಾರ್ಹತೆಯ ಉಳಿಸಿಕೊಳ್ಳಬೇಕು.
ಎಲ್ಲಾ ಜನರು ಪರಸ್ಪರ ಪ್ರೀತಿ ದಯೆ ಮತ್ತು ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಮತ್ತು ದುರ್ಬಲರನ್ನು ರಕ್ಷಿಸಬೇಕು ಎಂಬುದು ಬುದ್ಧರ ಆಶಯ. ಲೌಕಿಕ ಬದುಕಿನಲ್ಲಿ ಜನರು ತಪ್ಪು ಮಾಡುತ್ತಾರೆ ಮತ್ತು ಇತರರಿಗೆ ದುಃಖವನ್ನುಂಟು ಮಾಡುತ್ತಾರೆ. ಇಂತಹ ಅಪರಾಧಿಗಳನ್ನು ಸಹ ಸುಧಾರಿಸುವ ನಿಟ್ಟಿನಲ್ಲಿ ಬುದ್ಧತ್ವವು ಪ್ರೇರೇಪಿಸುತ್ತದೆ. ಅಪರಾಧಿಗಳನ್ನು ಕುರಿತು ಬಳಸುವ ಪದಗಳಲ್ಲಿ ನಿಷ್ಠೂರತೆ ಇದ್ದರೂ ಕೂಡ ಒಬ್ಬ ನಾಗರೀಕನನ್ನು ಸಂಬೋಧಿಸುವಂತೆಯೇ ಇರಬೇಕು. ವೈಯಕ್ತಿಕ ದ್ವೇಷಗಳನ್ನು ನೀಗಿಸಿಕೊಳ್ಳುವುದಕ್ಕೆ ಆ ಸಂದರ್ಭವನ್ನು ಬಳಸಿಕೊಳ್ಳಬಾರದು. ಅಪರಾಧಿಗಳನ್ನು ವಿಪರೀತ ಕ್ರೌರ್ಯದಿಂದ ಶಿಕ್ಷಿಸುವುದು ಅಪರಾಧಿ, ಶಿಕ್ಷೆಯನ್ನು ನೀಡುವ ವ್ಯಕ್ತಿ ಹಾಗೂ ಅದಕ್ಕೆ ಸಾಕ್ಷಿಯಾದ ಸಮಾಜ ಈ ಮೂರಕ್ಕೂ ಹಾನಿಕಾರಕ.
ಹಾಗಾಗಿ ಅಪರಾಧಿಯು ತನ್ನನ್ನು ತಾನು ತಿದ್ದಿಕೊಳ್ಳಲು ಶಿಕ್ಷೆ ಅನುವಾಗಬೇಕೇ ಹೊರತು ಶಿಕ್ಷೆಗಾಗಿ ಶಿಕ್ಷೆ ಆಗಬಾರದು. ಸಮಾಜದಲ್ಲಿ ಅವರ ಪುನರ್ವಸತಿಗೆ ಅದು ಆದ್ಯತೆ ನೀಡಬೇಕು. ಅರೇಬಿಕ್ ದೇಶಗಳಲ್ಲಿ ನೀಡುವ ಶಿಕ್ಷೆಗಳು ಸಾರ್ವಕಾಲಿಕವಾಗಿ ಸರಿಯಾದವುಗಳೇ ಆಗಿದ್ದರೆ ಮೊದಲನೇ ದಿನದ ಅಪರಾಧ ಮತ್ತು ಅದಕ್ಕೆ ವಿಧಿಸಿದ ಶಿಕ್ಷೆಯೇ ಕೊನೆಯದಾಗಿರಬೇಕಿತ್ತು ಅಲ್ಲವೆ ? ಹಾಗಾಗಿ ಶಿಕ್ಷಿಸುವುದಷ್ಟೇ ಧ್ಯೇಯವಾಗಿರಬಾರದು. ಎಲ್ಲಾ ಕಾಲಕ್ಕೂ ಎಲ್ಲರೂ ದಯೆ ಪ್ರೀತಿಯನ್ನು ಕಾಪಿಟ್ಟುಕೊಂಡಿರುವ ಗುರಿಯನ್ನು ಹೊಂದಿರಬೇಕು.
ಗೌತಮಬುದ್ಧ 999 ತಲೆ ಕಡಿದ ಅಂಗುಲಿಮಾಲನನ್ನು ಹಾಗೂ ವೇಶ್ಯಾವಾಟಿಕೆಯಿಂದ ಲೈಂಗಿಕ ದುರ್ವರ್ತನೆಯನ್ನೇ ಜೀವನ ಆಧಾರ ಮಾಡಿಕೊಂಡಿದ್ದ ಅಮ್ರಪಾಲಿಯನ್ನು ನಡೆಸಿಕೊಂಡ ಬಗೆಯನ್ನು ನಾವೆಲ್ಲರೂ ಸರಿಯಾಗಿ ಜೀರ್ಣಿಸಿಕೊಳ್ಳಬೇಕು. ನಮ್ಮ ನಿಲುವಿನಂತೆ ಅಂಗುಲಿಮಾಲನ ತಲೆಯನ್ನು ಕಡಿದಿದ್ದರೆ ಅವನಿಂದ ಕೊಲ್ಲಲ್ಪಟ್ಟ ಅಷ್ಟು ಜನಕ್ಕೆ ಮರುಜೀವ ಬರುತ್ತಿರಲಿಲ್ಲ. ವೇಶ್ಯಾವಾಟಿಕೆಯಿಂದಲೇ ಆಮ್ರಪಾಲಿಯನ್ನು ಗುರುತಿಸುತ್ತಾ ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಿದ್ದರೆ ಆಕೆ ಆ ದಾರಿ ಬಿಟ್ಟು ಬರುತ್ತಿರಲಿಲ್ಲ. ಅಲ್ಲಿ ಬುದ್ಧ ತೋರಿದ ಜ್ಞಾನದ ಮಾರ್ಗ ಕರುಣೆ ಪ್ರೀತಿ ಮೈತ್ರಿಗಳು ಅವರ ಪ್ರಾಯಶ್ಚಿತಕ್ಕೆ ಅವಕಾಶ ನೀಡಿದವು. ಅಲ್ಲದೆ ತಮ್ಮ ಹಿಂದಿನ ಕೃತ್ಯವನ್ನು ಮರುಕಳಿಸದಂತೆ ಅದೇ ದುಃಖದಲ್ಲೂ ಉಳಿಯದಂತೆ ಹೊಸ ಮಾನವರಾಗಿ, ಭಿಕ್ಕು-ಭಿಕ್ಕುಣಿಯರಾಗಿ ಶ್ರೇಷ್ಠ ಜೀವನ ಸಾಗಿಸಲು ಅವಕಾಶಗಳು ಸಿಗುತ್ತಿರಲಿಲ್ಲ.
ಅಪರಾಧಿ ಅಥವಾ ಆರೋಪಿ ಯಾರೇ ಆದರೂ ಅವರಿಗೂ ಇರುವ ಕನಿಷ್ಠ ಹಕ್ಕುಗಳನ್ನು ಉಲ್ಲಂಘನೆ ಮಾಡದಂತೆ, ಅವರ ಮಾನಹಾನಿ ಆಗದಂತೆ ಇರುವ ಎಚ್ಚರದ ನಡೆಗೆ ಆಧುನಿಕ ಕಾಲಘಟ್ಟದಲ್ಲಿ ಮಾಧ್ಯಮಗಳಿಗೆ ನಿರ್ಣಾಯಕವಾದ ಮತ್ತು ಬೇಷರತ್ತಾದ ಜವಾಬ್ದಾರಿ ಇದೆ.
ಡಾ. ಅಭಿಲಾಷ ಹೆಚ್ ಕೆ ಸಹಾಯಕ ಪ್ರಾಧ್ಯಾಪಕರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಗೊಟಗೋಡಿ. ಹಾವೇರಿ ಜಿಲ್ಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.