(www.vknews. in) ; ಪ್ರಾಸ್ಟೇಟ್ ಎನ್ನುವುದು ಪುರುಷರ ಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿಯಾಗಿದ್ದು, ವೀರ್ಯ ಉತ್ಪಾದನೆ ಮಾಡಿ ಶೇಖರಿಸಿಡುತ್ತದೆ. ಜೊತೆಗೆ ವೀರ್ಯಾಣುಗಳಿಗೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ. ಮೂತ್ರ ಪಿಂಡದ ಕೆಳಭಾಗದಲ್ಲಿ ಚಿಕ್ಕ ಬಟಾಣಿ ಕಾಳಿನಷ್ಟು ಗಾತ್ರದ ಈ ಗ್ರಂಥಿ ಸಂತನೋತ್ಪತ್ತಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ವಯಸ್ಸು ಹೆಚ್ಚಾದಂತೆ ಈ ಪ್ರಾಸ್ಟೇಟ್ ಗ್ರಂಥಿ ಹಿಗ್ಗುತ್ತಾ ಹೋಗುತ್ತದೆ. ನಲವತ್ತು ವರ್ಷದ ಬಳಿಕ ಈ ಗ್ರಂಥಿಯ ನಿಧಾನವಾಗಿ ಹಿಗ್ಗುತ್ತದೆ ಮತ್ತು ಸೌಮ್ಯ ಸ್ವರೂಪದ ಊತಕ್ಕೆ ಒಳಗಾಗುತ್ತದೆ. ಈ ಪ್ರಾಸ್ಟೇಟ್ ಗ್ರಂಥಿಯು ಹಿಗ್ಗಿಕೊಂಡು ದೊಡ್ಡದಾದಾಗ ಮೂತ್ರ ಚೀಲದ ಮೇಲೆ ಒತ್ತಡ ಬಿದ್ದು ಸರಾಗವಾಗಿ ಮೂತ್ರದ ಹರಿಯುವಿಕೆಗೆ ತೊಂದರೆ ಉಂಟಾಗಬಹುದು. ಪ್ರಾಸ್ಟೇಟ್ ಗ್ರಂಥಿ ಹಿಗ್ಗುವಿಕೆಗೆ ಅತಿ ಸಾಮಾನ್ಯ ಕಾರಣಗಳೆಂದರೆ ಪ್ರಾಸ್ಟೇಟ್ ಗ್ರಂಥಿಯ ಉರಿಯೂತ ಅಥವಾ ಪ್ರಾಸ್ಟೇಟಿಸ್, ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಅಥವಾ ಬಿನೈನ್ ಪ್ರಾಸ್ಟೇಟ್ ಹೈಪರ್ ಟ್ರೋಪಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ವೈದ್ಯರು ರೋಗಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ರೋಗದ ಲಕ್ಷಣವನ್ನು ಅವಲೋಕಿಸಿ ರೋಗದ ಲಕ್ಷಣಗಳನ್ನು ತಾಳೆ ಹಾಕಿ ರೋಗದ ನಿರ್ಣಯಕ್ಕೆ ಬರುತ್ತಾರೆ.
ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಇದ್ದರೆ ಈ ಕೆಳಗಿನ ಸಮಸ್ಯೆಗಳು ಕಂಡುಬರುತ್ತದೆ. 1. ಮೂತ್ರ ವಿಸರ್ಜನೆಗೆ ಕಷ್ಟವಾಗುವುದು 2. ಬಹಳ ನಿಧಾನವಾಗಿ ಅಥವಾ ಬಿಟ್ಟು ಬಿಟ್ಟು ಮೂತ್ರ ಬರುವುದು 3. ರಾತ್ರಿ ಹೊತ್ತು ಪದೇ ಪದೇ ಮೂತ್ರ ಬರುತ್ತದೆ 4. ಮೂತ್ರ ಮಾಡುವಾಗ ಪೂರ್ತಿಯಾಗಿ ಮೂತ್ರ ಚೀಲವನ್ನು ಖಾಲಿ ಮಾಡಲು ಸಾಧ್ಯವಾಗದೇ ಇರುವುದು 5. ಮೂತ್ರ ಮಾಡುವಾಗ ನೋವು ಮತ್ತು ಉರಿಯೂತ ಇರುತ್ತದೆ 6. ಮೂತ್ರದಲ್ಲಿ ರಕ್ತ ಅಥವಾ ವೀರ್ಯದಲ್ಲಿ ರಕ್ತ ಕಂಡುಬರುತ್ತದೆ 7. ವೀರ್ಯಾ ಸ್ವಲನದ ಸಂದರ್ಭದಲ್ಲಿ ನೋವು ಇರುವುದು 8. ಬೆನ್ನಿನ ಭಾಗ ನೋವು, ತೊಡೆ ಅಥವಾ ಸೊಂಟದ ಭಾಗ ನೋವು ಕಂಡು ಬರುವುದು
ಏನಿದು PSA ? ಪ್ರಾಸ್ಟೇಟ್ ಸ್ಪೆಸಿಪಿಕ್ ಆಂಟಿಜಿನ್ ಎನ್ನುವುದು ಒಂದು ರೀತಿಯ ಪ್ರೊಟೀನ್ ಆಗಿದ್ದು ಪ್ರಾಸ್ಟೇಟ್ ಗ್ರಂಥಿಯಿಂದ ಉತ್ಪಾದಿಸಲ್ಪಡುತ್ತದೆ. ಈ ಪ್ರೊಟೀನನ್ನು ಪ್ರಾಸ್ಟೇಟ್ ಗ್ರಂಥಿ ನೇರವಾಗಿ ರಕ್ತಕ್ಕೆ ಬಿಡುಗಡೆ ಮಾಡುವುದರಿಂದ ರಕ್ತದಲ್ಲಿ ಈ PSA ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತದೆ. ಈ PSA ಅದರ ರಕ್ತದಲ್ಲಿನ ಪ್ರಮಾಣ 40 ವರ್ಷದೊಳಗೆ 0 ಯಿಂದ 2.5 ng/ml ಇರುತ್ತದೆ. 60 ವರ್ಷದೊಳಗಿನವರಿಗೆ 0 ರಿಂದ 4 ng/ml ಒಳಗೆ ಇರತಕ್ಕದು. 60 ವರ್ಷದ ಮೇಲಿನವರಿಗೆ 4 ng/ml ಗಿಂತ ಜಾಸ್ತಿ ಇದ್ದಲ್ಲಿ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಪ್ರಾಸ್ಟೇಟ್ ಗ್ರಂಥಿಯ ಸೋಂಕು, ಹೆಚ್ಚಾದ ವಯಸ್ಸು, ಮೂತ್ರನಾಳದ ಸೋಂಕಿನಿಂದಲೂ ಈ PSA ಪ್ರಮಾಣ ಹೆಚ್ಚಾಗಬಹುದು. ರಕ್ತದಲ್ಲಿನ PSA ಪ್ರಮಾಣ ಮತ್ತು ರೋಗಿಯ ರೋಗದ ಲಕ್ಷಣಗಳನ್ನು ತಾಳೆ ಹಾಕಿ ರೋಗ ನಿರ್ಣಯವನ್ನು ನುರಿತ ವೈದ್ಯರು ಮಾಡುತ್ತಾರೆ. ಅದೇ ರೀತಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ, ರೋಗಿ ಚಿಕಿತ್ಸೆ ಹೇಗೆ ಸ್ಪಂದಿಸುತ್ತಾರೆ ಎಂದು ತಿಳಿಯಲು ರಕ್ತದಲ್ಲಿ PSA ಪ್ರಮಾಣವನ್ನು ತಿಳಿಯಲಾಗುತ್ತದೆ. ಮುಂದುವರಿದ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ನಲ್ಲಿ ಈ PSA ಪ್ರಮಾಣ 500 ರಿಂದ 600ರವರೆಗೆ ಏರುವ ಸಾಧ್ಯತೆ ಇದೆ. ಸರಿಯಾದ ಚಿಕಿತ್ಸೆ ನೀಡಿದಲ್ಲಿ ಈ PSA ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. PSA ಪ್ರಮಾಣ ಕಡಿಮೆಯಾದರೆ ರೋಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದರ್ಥ. ಚಿಕಿತ್ಸೆ ಹೊರತಾಗಿಯೂ PSA ಪ್ರಮಾಣ ಏರುತ್ತಿದ್ದಲ್ಲಿ ಚಿಕಿತ್ಸೆ ಪರಿಣಾಮಕಾರಿಯಾಗಿಲ್ಲ ಎಂದು ತಿಳಿಯಲಾಗುತ್ತದೆ.
PSA ಪ್ರಮಾಣ ಕಡಿಮೆ ಇದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಇಲ್ಲ ಎಂದರ್ಥವಲ್ಲ. ಸುಮಾರು 15 ಶೇಕಡಾ ಪುರುಷರಲ್ಲಿ PSA ಪ್ರಮಾಣ 4 ng/ml ಗಿಂತ ಕಡಿಮೆ ಇದ್ದರೂ ಪ್ರಾಸ್ಟೇಟ್ ಗ್ರಂಥಿಯ ಬಯೊಪ್ಸಿ ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದೇ ರೀತಿ ಬಾರ್ಡರ್ ಲೈನ್ ಅಂದರೆ PSA ಪ್ರಮಾಣ 4 ರಿಂದ 10 ng/ml ನಲ್ಲಿ ಇದ್ದಲ್ಲಿ ಪ್ರತಿ 4 ರಲ್ಲಿ ಒಬ್ಬ ಪುರುಷನಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ. ಅದೇ ರೀತಿ 10 ಕ್ಕಿಂತ ಜಾಸ್ತಿ PSA ಪ್ರಮಾಣ ಇದ್ದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೇವಲ 10 ಕ್ಕಿಂತ ಜಾಸ್ತಿ PSA ಇದ್ದಲ್ಲಿ ವೈದ್ಯರು ಕ್ಯಾನ್ಸರ್ ಎಂದು ಏಕಾಏಕಿ ಪೋಷಿಸುವುದಿಲ್ಲ. ರೋಗಿಯ ದೇಹ ಪ್ರಕೃತಿ, ತೂಕ, ವಯಸ್ಸು ಇತರ ರೋಗಗಳ ಉಪಸ್ಥಿತಿ, ರೋಗದ ಚಿಹ್ನೆಗಳು ಮತ್ತು ರೋಗಿಯ ತೊಂದರೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ರೋಗ ನಿರ್ಣಯಕ್ಕೆ ಬರುತ್ತದೆ. ದೇಹದ ತೂಕ ಹೆಚ್ಚಾದಾಗಲೂ PSA ಪ್ರಮಾಣ ಏರುವ ಸಾಧ್ಯತೆ ಇರುತ್ತದೆ. ಅಗತ್ಯವಿದ್ದಲ್ಲಿ ಬಯೋಪ್ಸಿ ಪರೀಕ್ಷೆ ಮಾಡಿ ಪ್ರಾಸ್ಟೇಟ್ ಗ್ರಂಥಿಯು ಕ್ಯಾನ್ಸರ್ನ್ನು ದೃಢಪಡಿಸಲಾಗುತ್ತದೆ. ಈಗ ಅತ್ಯಾದುನಿಕ ಸಲಕರಣಿಗಳು ಲಭ್ಯವಿದ್ದು, ಬಯೋಪ್ಸಿಗನ್ ಎಂಬ ವಿಶೇಷ ಸಲಕರಣೆ ಬಳಸಿ ಉದ್ದ ಮತ್ತು ದಪ್ಪಾದಾಗ ಸೂಜಿಯನ್ನು ಪ್ರಾಸ್ಟೇಟ್ ಗ್ರಂಥಿಗೆ ತೂರಿಸಿ ಅಗತ್ಯವಿರುವ ಜೀವಕೋಶಗಳ ತುಂಡನ್ನು ಸಂಗ್ರಹಿಸಿ ಕ್ಯಾನ್ಸರ್ ಇರುವಿಕೆಯನ್ನು ದೃಢಪಡಿಸಲಾಗುತ್ತದೆ.
ಸಾಮಾನ್ಯವಾಗಿ ಗುದಧ್ವಾರದ ಮುಖಾಂತರ ಈ ಗನ್ನಿನ ಸೂಜಿಯನ್ನು ತೂರಿಸಲಾಗುತ್ತದೆ. ಸಾಮಾನ್ಯ ಸ್ಥಳೀಯ ಅರಿವಳಿಕೆ ಚುಚ್ಚು ಮದ್ದು ನೀಡಿ 10 ನಿಮಿಷದಲ್ಲಿ ಬಯೋಪ್ಸಿ ಪರೀಕ್ಷೆ ಮಾಡುತ್ತಾರೆ. ಸಾಮಾನ್ಯವಾಗಿ ಈ ಬಯೋಪ್ಸಿ ಪರೀಕ್ಷೆ ಮಾಡುವ ಎರಡರಿಂದ ಮೂರು ಗಂಟೆಗಳ ಮೊದಲು ಆಹಾರ ಸೇವಿಸದೆ ಇರಬೇಕಾಗುತ್ತದೆ. ಬಯೋಪ್ಸಿ ಬಳಿಕ ಅಲ್ಪ ಪ್ರಮಾಣದಲ್ಲಿ ಗುದದ್ವಾರದಲ್ಲಿ ಮತ್ತು ಮೂತ್ರದಲ್ಲಿ ರಕ್ತ ಸ್ರವಿಸುವ ಸಾಧ್ಯತೆ ಇರುತ್ತದೆ.
ಕೊನೆ ಮಾತು: ಪುರುಷರಲ್ಲಿ ಮಾತ್ರ ಕಾಣಿಸಿಕೊಳ್ಳುವ ಪ್ರಾಸ್ಟೇಟ್ ಕ್ಯಾನ್ಸರ್, ಭಾರತ ದೇಶವೊಂದರಲ್ಲಿಯೇ ವಾರ್ಷಿಕವಾಗಿ 1 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ. ಬಹಳ ನಿಧಾನವಾಗಿ ಬೆಳೆಯುವ ಈ ಗಡ್ಡೆ ಹೆಚ್ಚಿನ ಸಂದರ್ಭಗಳಲ್ಲಿ ನಿರುಪದ್ರವಿ ಕೇವಲ 5 ರಿಂದ 10 ಶೇಕಡಾ ಪ್ರಾಸ್ಟೇಟ್ ಕ್ಯಾನ್ಸರ್ಗಳು ಬಹಳ ವೇಗವಾಗಿ ಬೆಳೆಯುತ್ತದೆ ಮತ್ತು ದೇಹದ ಇತರ ಭಾಗಕ್ಕೆ ಹರಡುತ್ತದೆ ಹಾಗೂ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಇರುತ್ತದೆ. ಯಾವ ನಿರ್ದಿಷ್ಟ ಕಾರಣದಿಂದ ಈ ಪ್ರಾಸ್ಟೇಟ್ ಕ್ಯಾನ್ಸರ್ ಬರುತ್ತದೆ ಎಂದು ಇನ್ನೂ ತಿಳಿದಿಲ್ಲ. ಆದರೆ ಜೀವಕೋಶಗಳ ನ್ಯೂಕ್ಲಿಯಸ್ನಲ್ಲಿನ DNA ತಂತುಗಳಲ್ಲಿ ಉಂಟಾದ ಮ್ಯುಟೀಷನ್ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಇಳಿ ವಯಸ್ಸಿನಲ್ಲಿ ಹೆಚ್ಚು ಕಂಡುಬರುತ್ತದೆ. ಕಪ್ಪು ವರ್ಣಿಯರಲ್ಲಿ ಹೆಚ್ಚು ಕಾಡುತ್ತದೆ. ಅನುವಂಶೀಯವಾಗಿಯೂ ಕುಟುಂಬಗಳಲ್ಲಿ ಬಳುವಳಿಯಾಗಿ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.
ದೇಹದ ತೂಕ ಜಾಸ್ತಿ ಇರುವವರಿಗೆ ಈ ಕ್ಯಾನ್ಸರ್ ಬೇಗ ಬರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ, ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಒಮ್ಮೆ ಈ ಕ್ಯಾನ್ಸರ್ ಪ್ರಾಸ್ಟೇಟ್ ಗ್ರಂಥಿಯಿಂದ ಹೊರಚೆಲ್ಲಿದರೆ, ಹತ್ತಿರದ ಬೆನ್ನುಹುರಿ, ಮೂತ್ರ ಚೀಲಕ್ಕೆ ಹರಡಬಹುದು. ಅದೇ ರೀತಿ ಲಿಂಫಾಟಿಕ್ ವ್ಯವಸ್ಥೆ ಮತ್ತು ರಕ್ತದ ಮೂಲಕ ದೇಹದೆಲ್ಲೆಡೆ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಸರ್ಜರಿ ಮುಖಾಂತರ ಪ್ರಾಸ್ಟೇಟ್ ಗ್ರಂಥಿಯನ್ನು ತೆಗೆಯಲಾಗುತ್ತದೆ. ದೇಹದ ಇತರ ಭಾಗಕ್ಕೆ ಹರಡಿದ ಬಳಿಕ ಸರ್ಜರಿ ಸಾಧ್ಯವಿಲ್ಲ. ಆಗ ಕಿಮೋಥೆರಪಿ ಮತ್ತು ಇತರ ಚಿಕಿತ್ಸೆಗಳ ಅತ್ಯಗತ್ಯ. ರೇಡಿಯೋಥೆರಪಿ ಚಿಕಿತ್ಸೆ ಕೂಡ ಅಗತ್ಯವಿರುತ್ತದೆ. ಯಾವ ಚಿಕಿತ್ಸೆ ಯಾವಾಗ ಹೇಗೆ ಮಾಡಬೇಕು ಎನ್ನುವುದನ್ನು ವೈದ್ಯರೇ ನಿರ್ಧರಿಸುತ್ತಾರೆ. ತಜ್ಞ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಪಡೆದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗಬಹುದು
ಡಾ|| ಮುರಲೀ ಮೋಹನ್ಚೂಂತಾರು MDS,DNB,MOSRCSEd (UK) MBA, FPFA
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.