(www.vknews. in) ಭಾನುವಾರ, ದಿನಾಂಕ 29 ಸೆಪ್ಟೆಂಬರ್ 2024 ಸಂಘನಿಕೇತನದಲ್ಲಿ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮದಿನಾಚರಣೆ ‘ಅಮೃತೋತ್ಸವ 2024’
ಮಂಗಳೂರು: ನಗರದ ಸಂಘನಿಕೇತನದಲ್ಲಿ ದಿನಾಂಕ 29.9.2024 ರ ಭಾನುವಾರದಂದು ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 71 ನೆಯ ಅವತರಣೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಜರುಗಲಿರುವವು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ನಗರದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕರಾವಳಿ ಕರ್ನಾಟಕದ ವಿವಿಧ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ನೂರಾರು ಮಂದಿ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಂದು ಬೆಳಗ್ಗೆ 9.00 ಗಂಟೆಗೆ ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಸಾರಥ್ಯದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಲಿದೆ. ಮಾತಾ ಅಮೃತಾನಂದಮಯಿ ಸೇವಾಸಮಿತಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನೂತನ ಸೇವಾ ಸಮಿತಿಗಳ ಪದಗ್ರಹಣ ಸಮಾರಂಭ ಕೂಡ ಜರುಗಲಿರುವುದು. ಈ ಸಂದರ್ಭದಲ್ಲಿ ವಿಭಿನ್ನವಾದ ಮಾದರಿಯ ‘ಕಥಾಮೃತ’ ಎಂಬ ವಿಶೇಷ ಹರಿಕಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪೆರ್ಲ ಅವರು ತಿಳಿಸಿದರು.
‘ಅಮೃತೋತ್ಸವ-2024’ ರ ಸಭಾ ಕಾರ್ಯಕ್ರಮವು ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರ ಉಪಸ್ಥಿತಿಯಲ್ಲಿ ಜರುಗಲಿದ್ದು ಮುಖ್ಯ ಅತಿಥಿಯಾಗಿ ಅದಾನಿ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕಿಶೋರ್ ಆಳ್ವ ಮತ್ತು ಗೌರವಾನ್ವಿತ ಅತಿಥಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾಗವಹಿಸಲಿರುವರು. ಮಠದ ಸಮಾಜಸೇವಾ ಯೋಜನೆಗಳ ಅಂಗವಾಗಿ ವಸ್ತ್ರದಾನ ಹಾಗೂ ಅಮೃತ ಆರೋಗ್ಯ ಸೇವೆಗಳ ವಿತರಣೆ ಕೂಡ ಇರುತ್ತದೆ ಎಂದರು.
ಮಂಗಳೂರಿನ ಮಠ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು ಆ ಕಾರಣವಾಗಿ ಈ ವರ್ಷದ ಕಾರ್ಯಕ್ರಮಗಳು ಅತ್ಯಂತ ವಿಶೇಷದ್ದಾಗಿದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಮಹಾಪ್ರಸಾದ ವಿತರಣೆ ಇರುತ್ತದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸುವಂತೆ ಡಾ. ಪೆರ್ಲ ಅವರು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿಯ ಉಪಾಧ್ಯಕ್ಷ ಸುರೇಶ್ ಅಮೀನ್, ಖಜಾಂಚಿ ರಾಮನಾಥ್ ನಾಯಕ್, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ದೇವದಾಸ್ ಪುತ್ರನ್ ಮತ್ತು ಸೇವಾ ಸಮಿತಿಯ ಉಡುಪಿ ಘಟಕದ ಅಧ್ಯಕ್ಷ ಯೋಗೀಶ್ ಕೊಡವೂರು ಉಪಸ್ಥಿತರಿದ್ದರು.
ಡಾ. ದೇವದಾಸ ಪುತ್ರನ್ ಸ್ವಾಗತಿಸಿದರು. ಯೋಗೀಶ್ ಕೊಡವೂರು ವಂದನೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.