(www.vknews. in) ಸಂಭ್ರಮ – ವಿಷಾದ…….ಇದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸಮಯವೂ ಹೌದು…….
1947 – 2024 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ್ನು ಅತ್ಯಂತ ನೋವು, ವಿಷಾದ, ಖಿನ್ನತೆಗೆ ದೂಡಿದ್ದಾರೆ. ಈ ದೇಶದ ವ್ಯವಸ್ಥೆಯಲ್ಲಿ ಈ ಮುಖವೂ ಇದೆ.
ಮೊನ್ನೆ ತುಮಕೂರಿನ ಹಿರಿಯ ಗೆಳೆಯರು ಕರೆ ಮಾಡಿದ್ದರು. ಸುಮಾರು 67 ವರ್ಷದ ಅವರು ವೃತ್ತಿಯಿಂದ ಮೆಡಿಕಲ್ ಸ್ಟೋರ್ಸ್ ನಡೆಸುತ್ತಾರೆ. ಸದಾ ಸಮಕಾಲೀನ ವಿಷಯಗಳ ಬಗ್ಗೆ ಚಿಂತಿಸುತ್ತಾರೆ ಮತ್ತು ತಮ್ಮ ಕೈಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಈಗಲೂ ಮಾಡುತ್ತಲೇ ಇದ್ದಾರೆ.
ಈ ದೇಶದ ಬಹುಸಂಖ್ಯಾತ ಸಣ್ಣ ಪುಟ್ಟ ವ್ಯಾಪಾರ ಮಾಡುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಈಗಲೂ ನಿಜವಾದ ಸ್ವಾತಂತ್ರ್ಯ ಸಿಕ್ಕೇ ಇಲ್ಲ. ಎಲ್ಲಾ ಕಾನೂನುಗಳು, ದೌರ್ಜನ್ಯಗಳು, ತೆರಿಗೆಗಳು, ಬೆಲೆ ಏರಿಕೆಗಳು, ಬಂದ್ ಲಾಕ್ ಡೌನ್ ಗಳು ಎಲ್ಲವೂ ಇವರ ಮೇಲೆಯೇ ಪ್ರಯೋಗ ಮಾಡಲಾಗುತ್ತದೆ. ಭ್ರಷ್ಟಾಚಾರದ ನಿಜವಾದ ದುಷ್ಪರಿಣಾಮ ಬೀರುತ್ತಿರುವುದೇ ಇವರ ಮೇಲೆ.
ರಾಜಕೀಯ, ಆರ್ಥಿಕ ಪರಿಣಾಮಗಳು – ಸಾಮಾಜಿಕ ಅಸಮಾನತೆ – ಖಾಸಗೀಕರಣ – ರೋಗಗಳು ಎಲ್ಲದರಲ್ಲೂ ಇವರೇ ಮೊದಲ ಬಲಿಪಶುಗಳು. ಅತಿವೃಷ್ಟಿ, ಅನಾವೃಷ್ಟಿಗಳು ಇವರ ಮೇಲೆಯೇ ಪರಿಣಾಮ ಬೀರುತ್ತದೆ.
ಶಿಕ್ಷಣ, ಉದ್ಯೋಗ, ಮನರಂಜನೆ ಎಲ್ಲದರಲ್ಲೂ ಇವರೇ ಟಾರ್ಗೆಟ್. ಅಷ್ಟೇ ಏಕೆ ಮನೆ ಮನೆಗಳಲ್ಲಿ ಬಾವುಟ ಹಾರಿಸುವವರೂ ಇವರೇ. ಇವರುಗಳಿಗೆ ತುಂಬಾ ಅನ್ಯಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಾಲ್, ಬಜಾರ್, ಮಾರ್ಟ್ ಗಳು ಈ ವ್ಯಾಪಾರಿಗಳ ಬದುಕನ್ನು ಕಸಿಯುತ್ತಿರುವ ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಸರ್ಕಾರಿ ಅಧಿಕಾರಿಗಳು – ಪೋಲೀಸ್ ದೌರ್ಜನ್ಯ – ಇವರ ಸ್ವಾತಂತ್ರ್ಯವನ್ನು ಕಿತ್ತು ತಿನ್ನುತ್ತಿರುವ ಬಗೆಯನ್ನು ವಿವರಿಸಿದರು.
ಹಾಗೆಯೇ ಅನೇಕ ಜನರು ಲಂಚಕ್ಕಾಗಿ ನಮ್ಮದೇ ಜನರನ್ನು ಪೀಡಿಸುವುದನ್ನು ಕಂಡು ಈ ವ್ಯವಸ್ಥೆಯ ಬಗ್ಗೆ ತುಂಬಾ ನೋವು, ಅಸಹನೆ ವ್ಯಕ್ತಪಡಿಸಿ ಬ್ರಿಟಿಷರೇ ಉತ್ತಮವೇನೋ ಎಂದು ಹತಾಶೆಯಿಂದ ಮಾತನಾಡುತ್ತಾರೆ….
ಜಾತಿ ವ್ಯವಸ್ಥೆಯಿಂದ ಮಡುಗಟ್ಟಿದ ಆಕ್ರೋಶ – ಚುನಾವಣಾ ವ್ಯವಸ್ಥೆಯಿಂದ ಅತ್ಯಂತ ಕೆಳಮಟ್ಟದ ವ್ಯಕ್ತಿಗಳು ಆಯ್ಕೆಯಾಗುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಅಧೋಗತಿಗೆ ಇಳಿದಿರುವ ಬಗ್ಗೆ ಅನೇಕರಿಗೆ ಅಸಮಾಧಾನವಿದೆ.
” ನೊಂದವರ ನೋವ ನೋಯದವರೆತ್ತ ಬಲ್ಲರೋ ” ಎಂಬ ಶರಣರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಹೊಟ್ಟೆ ತುಂಬಿದವರು ದೇಶ ಬಹುದೊಡ್ಡ ಪ್ರಗತಿಯತ್ತ ಸಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಅಭಿಪ್ರಾಯ ಮತ್ತು ಸ್ವಾತಂತ್ರ್ಯವನ್ನು ಗೌರವಿಸೋಣ. ಹಾಗೆಯೇ ಹಸಿದ ಹೊಟ್ಟೆಯವರು ಈ ದೇಶದ ದುಸ್ಥಿತಿಯನ್ನು ಸಾಕ್ಷಿ ಸಮೇತ ತೋರಿಸುತ್ತಾರೆ. ಅದನ್ನು ಸಹ ಗೌರವಿಸಬೇಕು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸಬೇಕು.
ಅಭಿವೃದ್ಧಿ ಮತ್ತು ಬಡತನದ ನಡುವೆ ಸಮನ್ವಯ ಸಾಧಿಸದಿದ್ದರೆ ಬಡವರ ಆತ್ಮಗಳು ಸದಾ ನೋಯುತ್ತಲೇ ಇರುತ್ತವೆ. ಇದು ಕೇವಲ ಆರ್ಥಿಕ ಅಸಮಾನತೆಗೆ ಮಾತ್ರ ಸಂಬಂಧಿಸಿಲ್ಲ. ಸಾಮಾಜಿಕ ಅಸಮಾನತೆಯೂ ಸಹ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ. ಜಾತಿ ಎಂಬ ವ್ಯವಸ್ಥೆ ಈಗಲೂ ಭಾರತೀಯ ಸಮಾಜಕ್ಕೆ ಒಂದು ಶಾಪ ಎಂದೇ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಬದಲಾವಣೆಗಳು 77 ವರ್ಷಗಳ ನಂತರವೂ ಸಾಧ್ಯವಾಗಿಲ್ಲ.
ಸಹಜವಾಗಿಯೇ ಇದರಿಂದ ಶೋಷಣೆಗೆ ಒಳಗಾದವರು ಬದುಕುವ ಮತ್ತು ದೇಶಾಭಿಮಾನದ ಉತ್ಸಾಹ ತೋರಿಸುವುದಿಲ್ಲ. ಅವರನ್ನು ಸಹ ನಾವು ಗಮನಿಸಬೇಕು.
ನಾಗರೀಕತೆ ಮತ್ತು ಜನಸಂಖ್ಯೆಯಿಂದ ಆದ ಬದಲಾವಣೆ ಗಮನಿಸೋಣ,
ಬಡತನ ಹೆಚ್ಚು ಮಾಡುವುದು ನಂತರ ಅದರ ನಿರ್ಮೂಲನೆಗೆ ಪ್ರಯತ್ನಿಸುವುದು,
ವೃದ್ಧರನ್ನು ಮನೆಯಾಚೆ ಹಾಕುವುದು ವೃದ್ದಾಶ್ರಮಗಳನ್ನು ಹೆಚ್ಚಿಸುವುದು,
ನಿರ್ಗತಿಕರನ್ನು ಹೆಚ್ಚಿಸುವುದು ಅನಾಥಾಶ್ರಮಗಳನ್ನು ಸ್ಥಾಪಿಸುವುದು,
ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅವರಿಗಾಗಿ ರಕ್ಷಣಾ ವ್ಯವಸ್ಥೆ ರೂಪಿಸುವುದು,
ವೇಶ್ಯಾವಾಟಿಕೆ ಹೆಚ್ಚುವಂತೆ ಮಾಡುವುದು ನಂತರ ಅವರಿಗೆ ಪುನರ್ ವಸತಿ ಕಲ್ಪಿಸುವುದು,
ಭಷ್ಟಾಚಾರ ಹೆಚ್ಚಾಗಲು ಬಿಡುವುದು ಆಮೇಲೆ ಅದರ ನಿಯಂತ್ರಣಕ್ಕೆ ಮತ್ತೊಂದು ಸಂಸ್ಥೆ ಹುಟ್ಟು ಹಾಕುವುದು,
ಅನಾರೋಗ್ಯಕಾರಿ ವ್ಯವಸ್ಥೆ ಸೃಷ್ಟಿಸುವುದು ನಂತರ ಆಸ್ಪತ್ರೆಗಳನ್ನು ಹೆಚ್ಚಿಸುವುದು,
ಕಳ್ಳತನ, ವಂಚನೆಗಳು ಹೆಚ್ಚಾಗುವಂತೆ ನಡೆದುಕೊಳ್ಳುವುದು ಪೋಲೀಸ್ ಸ್ಟೇಷನ್ ಗಳನ್ನು ಹೆಚ್ಚಿಸುವುದು,
ಕೆರೆಗಳನ್ನು ನಾಶ ಮಾಡುವುದು ನಂತರ ಕೆರೆ ನಿಯಂತ್ರಣ ಪ್ರಾಧಿಕಾರ ರಚಿಸುವುದು,
ಅಂದರೆ ಶಾಸ್ತ್ರ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವವೇ?
ಇದೇನು ಮಕ್ಕಳಾಟವೇ?
145 ಕೋಟಿ ಜನಗಳು ಚುನಾಯಿಸಿದ ಸರ್ಕಾರಗಳಿಗೆ ಜವಾಬ್ದಾರಿ ಇಲ್ಲವೇ?
ಜನರಲ್ಲಿ ಮೌಲ್ಯಯುತ ಜೀವನಮಟ್ಟ ಕಾಪಾಡಿಕೊಳ್ಳಲು ನಮ್ಮನ್ನಾಳುವ ಸರ್ಕಾರಕ್ಕೆ ಇಲ್ಲವೇ ?
ನಾವು ಮತದಾನ ಮಾಡುವುದು ನಿರರ್ಥಕವೇ ? ಅಥವಾ ಕೆಲವೇ ಜನಗಳ ಸುಖಕ್ಕಾಗಿ ರೂಪಿಸಿದ ಪ್ರಜಾಪ್ರಭುತ್ವದ ನಾಟಕವೇ ಇದು ?
ಯಾವುದೋ ಕುಂಟುನೆಪ, ಅನುಕೂಲ ಸಿಂಧು ಸಮರ್ಥನೆ, ಸಿನಿಕತನಗಳಿಗೆ ಇಳಿಯದೆ, ಆತ್ಮಗಳನ್ನು ಮುಟ್ಟಿಕೊಂಡು ಯೋಚಿಸೋಣ,
ಬದಲಾವಣೆಗೆ ಮುನ್ನುಡಿ ಬರೆಯೋಣ,
ಖಂಡಿತವ ಇದು ಅಸಾಧ್ಯವಲ್ಲ,, ಕನಸಲ್ಲ,
ಆ ಸಾಮರ್ಥ್ಯ ಈ ದೇಶದ ನಾಗರೀಕರಿಗೆ ಇದೆ.
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಬದಲಾದರೆ ಇದು ಸಾಧ್ಯ. ಅವಕಾಶಕ್ಕಾಗಿ ಕಾಯೋಣ,……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ. ಎಚ್. ಕೆ. 9844013068……
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.