ನನ್ನ ಸ್ನೇಹಿತ ಮನೆ ಮುಂದೆ ಒಂದು ಬಳ್ಳಿ ನೆಟ್ಟಿದ್ದರು. ಅದು ಎತ್ತರವಾಗಿ ಬೆಳೆದು ನಿಂತಿತ್ತು. ಎರಡು ಜೋಡಿ ಹಕ್ಕಿಗಳು ಬಂದು ಜಾಗ ಪರಿವೀಕ್ಷಣೆ ನಡೆಸಿ ಅಲ್ಲಿ ತಮ್ಮ ಕನಸಿನ ಅರಮನೆ ಕಟ್ಟಲು ನಿರ್ಧರಿಸಿದವು. ಗೂಡು ಕಟ್ಟಲು ಬೇಕಾದ ಸಾಮಾನು ಸರಂಜಾಮುಗಳನ್ನು ಹೆಕ್ಕಿ ತಂದು ಒಂದು ಮನೆ ಮಾಡಿಯೇ ಬಿಟ್ಟವು. ಹಕ್ಕಿಗಳ ನಡೆನುಡಿಯನ್ನು ಸೂಕ್ಷ್ಮವಾಗಿ ನನ್ನ ಸ್ನೇಹಿತ ವೀಕ್ಷಿಸುತ್ತಾ ಕಾಮೆರಾದಲ್ಲಿ ಸೆರೆ ಹಿಡಿಯಲು ಹೋದಾಗ ಹಾರಿ ಹೋದವು. ಬರಲೇ ಇಲ್ಲ. ನನ್ನ ಸ್ನೇಹಿತನಿಗೆ ಆದ ಆತಂಕ ಅಷ್ಟಿಷ್ಟಲ್ಲ. ನನ್ನಿಂದ ಇಂತಹ ತಪ್ಪಾಗಿ ಹೋಯಿತಲ್ಲ, ಎಷ್ಟು ಕಷ್ಟ ಪಟ್ಟು ಮನೆ ಕಟ್ಟಿ ಅವರು ಸಂಸಾರ ಮಾಡಲಿಲ್ಲವಲ್ಲ ಎಂಬ ದುಃಖ ಕಾಡತೊಡಗಿತು. ತನ್ನ ಅಂಗಡಿಗೆ ಹೋದರೂ ಇದೇ ಚಿಂತೆ. ಪುನಃ ಪುನಃ ಮನೆಗೆ ಕರೆ ಮಾಡಿ, ಹಕ್ಕಿಗಳು ಇನ್ನೂ ಬಂದಿಲ್ಲವೇ ಎಂಬ ದುಃಖಭರಿತ ಪ್ರಶ್ನೆ. ಆದರೆ ಹಕ್ಕಿಗಳು ಮಾತ್ರ ಬರಲೇ ಇಲ್ಲ. ನನ್ನ ಸ್ನೇಹಿತ ಪರಿಸರ ಪ್ರೇಮಿ. ರಾತ್ರಿ ಮಲಗುವ ಮುನ್ನ ದೇವರಲ್ಲಿ ಕ್ಷಮೆಯಾಚಿಸುತ್ತಾ, ಪ್ರಾರ್ಥಿಸುತ್ತಾ ಮಲಗಿಕೊಂಡರಂತೆ. ಕನಸಲ್ಲೂ ಅದೇ ಚಿಂತೆ ಕಾಡಿರಬೇಕು. ಬೆಳಕು ಹರಿಯಿತು. ಮತ್ತೆ ಹಕ್ಕಿಗಳ ಅರಮನೆಗಳ ಕಡೆ ಗಮನ ಹರಿಸಿದರು. ಆ ದಿನ ಒಂದು ವಿಸ್ಮಯ ಕಾದಿತ್ತು. ಹಕ್ಕಿ ಬಂದು ಒಂದು ಮೊಟ್ಟೆ ಇಟ್ಟಿತು. ಜೋಡಿ ಹಕ್ಕಿಗಳ ನವಯುಗ ಪ್ರಾರಂಭವಾಗುತ್ತಿರುವದನ್ನು ನೋಡಿ ಮನದಲ್ಲೇ ಆನಂದಭಾಷ್ಪದ ಸುರಿಮಳಿಯಾಗತೊಡಗಿತು. ಆ ಸಂಭ್ರಮದ ಘಳಿಗೆಯನ್ನು ಪದಪುಂಜಗಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ನನ್ನ ಸ್ನೇಹಿತ ನನಗೆ ಪ್ರಶ್ನಿಸಿದರು…ಒಂದು ಸಂಸಾರ ಕಟ್ಟಲು ಹಕ್ಕಿಗಳಲ್ಲಿ ಎಷ್ಟು ಶ್ರದ್ಧೆ ಭಕ್ತಿ ಪ್ರೀತಿ ವಾತ್ಸಲ್ಯ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಂಡ ರೀತಿ, ಸಹಿಷ್ಣುತೆ ನಮ್ಮ ಮಾನವ ಸಮಾಜದಲ್ಲಿ ಏಕಿಲ್ಲ? ಇಂದು ಅಧಿಕವಾಗಿ ಸಂಸಾರಗಲ್ಲಿ ಪ್ರೀತಿ ಪ್ರೇಮ, ಶಾಂತಿ, ಹೊಂದಾಣಿಕೆ ಎಂಬ ಪದಗಳು ಹುಡುಕಿದರೂ ಸಿಗದಂತಾಗಿವೆ. ಆ ಮೂಕ ಪಕ್ಷಿಗಳಲ್ಲಿರುವ ತಿಳುವಳಿಕೆ, ಸಾಮರಸ್ಯ ನಮ್ಮಲ್ಲಿ ಏಕೆ ಇಲ್ಲ ?
ನಾವೆಲ್ಲರೂ ಈ ಸಂಸಾರವೆಂಬ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಆದರೆ ಅನ್ಯೋನ್ನವಾಗಿ ಬದುಕಲು ಪ್ರಯತ್ನಿಸುತ್ತಿಲ್ಲವೇಕೆ ? ದೋಣಿ ದಡ ಸೇರುವ ಮುನ್ನವೇ ಮುಳುಗಿ ಹೋಗುವ ಸಾಧ್ಯತೆಗಳೇ ಹೆಚ್ಚಾಗಿ ಹೋಗಿವೆ. ಏಕೆ ?
ನನ್ನ ಸ್ನೇಹಿತನ ಹಲವಾರು ಪ್ರಶ್ನೆಗಳಿಗೆ ಉತ್ತರ ನನ್ನ ಬಳಿ ಇಲ್ಲ. ಆದರೆ ನಾವು “ನಾನು” ಎಂಬ ಅಹಂ ಬಿಟ್ಟು , ಸಂಸಾರದ ಸೋಲು ಗೆಲುವುಗಳಿಗೆ, ಕಷ್ಟ ಸುಖಗಳಿಗೆ ಹೊಂದುಕೊಂಡು ಹೋಗಲು ಸ್ವಲ್ಪ ಪ್ರಯತ್ನ ಪಟ್ಟರೂ, ಎಷ್ಟೋ ಸಂಸಾರಗಳು ಛಿದ್ರವಾಗುವುದರಿಂದ ತಪ್ಪಿಸಬಹುದು. ಅಲ್ಲವೇ ? ಎಲ್ಲರ ಬದುಕಲ್ಲಿ ಹೊಸಬೆಳಕು ಮೂಡಲಿ ಎಂದು ಪ್ರಾರ್ಥಿಸೋಣ ಮತ್ತು ಪ್ರಯತ್ನಿಸೋಣ.
– Zabiulla Khan
ತಮಿಳುನಾಡಿನ ಆರ್ಕಾಟಿನಲ್ಲಿ ಸುಮಾರು ಮುನ್ನೂರು ವರ್ಷಗಳ ಹಿಂದೆ ಓರ್ವ ಸೂಫಿಸಂತ ವಾಸವಾಗಿದ್ದರು. ಅವರ ಹೆಸರು ಹಜ್ರತ್ ಟೀಪು ಮಸ್ತಾನ್ ಔಲಿಯಾ. ಆರ್ಕಾಟ್ ಪ್ರದೇಶವನ್ನು ಆಗ ನವಾಬ್ ಸಾದತ್ ಆಳುತ್ತಿದ್ದನು. ಅವನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಯಾವ ವೈದ್ಯರು ಗುಣಪಡಿಸಲು ಪ್ರಯತ್ನಿಸಿದರೂ ಔಷಧಿ ಫಲ ಕೊಡಲಿಲ್ಲ. ನವಾಬನಿಗೆ ಇದು ಚಿಂತೆಯ ವಿಷಯವಾಗಿತ್ತು. ಆತನ ಹಿತೈಷಿಗಳು ಹಜ್ರತ್ ಟೀಪು ಮಸ್ತಾನ್ ಗುರುಗಳ ಬಳಿ ಹೋಗಲು ಸಲಹೆ ಕೊಟ್ಟರು. ನವಾಬನು ಗುರುಗಳಿಗೆ ತಾಯಿಯ ಅನಾರೋಗ್ಯದ ವಿಷಯ ತಿಳಿಸಿದನು. ಗುರುಗಳು ಹೇಳಿದರು: ನೀನು ಚಿಕ್ಕವನಿದ್ದಾಗ ನಿನ್ನ ತಂದೆ ತೀರಿಕೊಂಡರು. ರಾಜ್ಯಭಾರವನ್ನೆಲ್ಲ ನಿನ್ನ ತಾಯಿಯವರೇ ನೋಡಿಕೊಳ್ಳುತ್ತಿದ್ದರು. ನಿನ್ನ ತಾಯಿಯವರು ಕುದುರೆಗಳನ್ನು ಕಟ್ಟಲು ಜಾಗಬೇಕೆಂದು ಅಲ್ಲಿಯ ಬಹಳ ಮರಗಳನ್ನು ಕತ್ತರಿಸಿಬಿಟ್ಟರು. ಆ ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ನಿನ್ನ ತಾಯಿಗೆ ಶಾಪ ಹಾಕಿವೆ. ಆದುದರಿಂದ ಅವರ ಖಾಯಿಲೆ ಗುಣಮುಖವಾಗುತ್ತಿಲ್ಲ. ನವಾಬ ಆ ಶಾಪದಿಂದ ಮುಕ್ತಿ ಹೇಗೆ ಪಡೆಯಬಹುದು ಎಂದು ಕೇಳಿದ. ಒಂಬತ್ತು ಲಕ್ಷ ಗಿಡಮರಗಳನ್ನು ನೆಡೆಸಲು ಗುರುಗಳು ಸೂಚಿಸಿ ಪ್ರಾರ್ಥನೆ ಮಾಡಿದರು. ನವಾಬ ಹಾಗೆಯೇ ಮಾಡಿದ. ಅವನ ತಾಯಿ ಗುಣಮುಖಗೊಂಡರು.
ಇಂದು ನಾವು ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ಗಿಡಮರಗಳನ್ನು ನಾಶ ಪಡಿಸುತ್ತಿದ್ದೇವೋ ಊಹೆಗೂ ನಿಲುಕದು. ಜಾಗತಿಕ ತಾಪಮಾನ ಏರಿಕೆಗೆ ಕಾರಣಕರ್ತರು ಯಾರು? ವಾಯುಮಾಲಿನ್ಯ ಮಾಡುತ್ತಿರುವವರು ಯಾರು? ಸರಿಯಾದ ಸಮಯಕ್ಕೆ ಮಳೆ ಬಾರದಿರಲು ಕಾರಣಗಳೇನು? ಉತ್ತರ ನಮಗೆ ಗೊತ್ತಿದ್ದರೂ ನಾವು ಮೂಕರಾಗಿದ್ದೇವೆ. ಆ ಮೂಕ ಪ್ರಾಣಿಪಕ್ಷಿಗಳ ಶಾಪವೋ ಏನೋ ಇಂದು ನಾವು ಪ್ರಕೃತಿ ವಿಕೋಪಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಬಲಿಯಾಗುತ್ತಿದ್ದೇವೆ. ಆದರೂ ಮಾನವನಿಗೆ ಬುದ್ಧಿ ಮಾತ್ರ ಬಂದಿಲ್ಲ. ಮುಂದಿನ ಪೀಳಿಗೆಗಳ ಗತಿ ಏನಾಗುವುದೋ ಸಮಯವೇ ಉತ್ತರ ಕೊಡಲಿದೆ.
ಪ್ರವಾದಿ ಮುಹಮ್ಮದ್ (ಸ) ಗಿಡಮರಗಳನ್ನು ಬೆಳೆಸಲು ಪ್ರೇರಿಪಿಸಿದರೂ ಅದನ್ನು ನಾವು ಇಂದು ಪಾಲಿಸುತ್ತಿಲ್ಲ ಏಕೆ?
– ಜಬೀವುಲ್ಲಾ ಖಾನ್
ನಾವು ಸಾಮಾನ್ಯವಾಗಿ ದರ್ಗಾಗಳ ಹತ್ತಿರ ಹಸಿರು ಬಣ್ಣದ ಧ್ವಜಸ್ತಂಭವನ್ನು ಕಾಣುತ್ತೇವೆ. ಹಸಿರು ಬಣ್ಣದ ಬಾವುಟ ಹಾರುತ್ತಿರುವುದನ್ನು ನೋಡುತ್ತೇವೆ. ಆ ಬಾವುಟ ಪಾಕಿಸ್ತಾನದ ಬಾವುಟವಲ್ಲ. ಹಾಗಾದರೆ ಆ ಬಾವುಟ ಯಾವುದಿರಬಹುದು ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಆ ಬಾವುಟ ಬೇರಾರದೂ ಅಲ್ಲ, ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಎಂಬ ಮಹಾನ್ ಹಿರಿಯ ಸೂಫಿ ಗುರುವಿನ ನಿಶಾನೆಯೇ ಅದಾಗಿದೆ. ಪ್ರಪಂಚದಲ್ಲಿ ಎಲ್ಲೆಲ್ಲಿ ಸೂಫಿ ಸಂತರ ಸಮಾಧಿ ಇದೆಯೋ ಅಲ್ಲೆಲ್ಲ ನಾವು ಆ ಹಸಿರು ಬಾವುಟವನ್ನು ಕಣಬಹುದು. ಅದು ಸೂಫಿ ಸಾಮ್ರಾಜ್ಯದ ಜೀವಂತ ಗುರುತು. ಹಿಂದಿನ ಕಾಲದಲ್ಲಿ ಪ್ರತೀ ರಾಜನಿಗೂ ತನ್ನದೇ ಆದ ಲಾಂಛನ ಮತ್ತು ಬಾವುಟ ಇರುತ್ತಿತ್ತು. ಯುದ್ಧ ಕಾಲದಲ್ಲಿ ತಮ್ಮ ಗುರುತಿನ ಚಿಹ್ನೆಯಾಗಿ ಅದನ್ನು ಬಳಸಲಾಗುತ್ತಿತ್ತು ಮತ್ತು ಕೋಟೆಗಳ ಮೇಲೂ ತಮ್ಮದೇ ಆದ ಪ್ರತ್ಯೇಕ ಬಾವುಟಗಳು ರಾರಾಜಿಸುತ್ತಿದ್ದವು. ಅವರ ಪತನದ ನಂತರ ಆ ಕೋಟೆಯ ಮೇಲೆ ಯಾರು ದಿಗ್ವಿಜಯ ಸಾಧಿಸುತ್ತಿದ್ದರೋ ಅವರ ಬಾವುಟವನ್ನು ಹಾರಿಸಲಾಗುತ್ತಿತ್ತು.
ರಾಜರುಗಳ ಯುಗ ಮುಗಿದ ಮೇಲೆ ಪ್ರಜಾಪ್ರಭುತ್ವದ ಯುಗ ಪ್ರಾರಂಭವಾಯಿತು. ಪ್ರತಿಯೊಂದು ದೇಶಕ್ಕೂ, ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಆದ ಬಾವುಟ ಮತ್ತು ಚಿಹ್ನೆಗಳಿವೆ. ಆ ಬಾವುಟಗಳÀಲ್ಲಿ ತಮ್ಮದೇ ಆದ ಬಣ್ಣಗಳಿವೆ. ಅವು ತಮ್ಮ ಭಾವನೆಗಳನ್ನು ಇಡೀ ಪ್ರಪಂಚಕ್ಕೆ ಸಾರುತ್ತವೆ.
ಭಾರತದ ಆಟಗಾರ ಹೊರದೇಶಗಳಿಗೆ ಹೋಗಿ ಆಡಿದರೆ, ಭಾರತದ ಪರವಾಗಿರುವವರು ಭಾರತದ ಬಾವುಟದಿಂದ ತಮ್ಮ ಗುರುತನ್ನು ವೀಕ್ಷಕರಿಗೆ ತೋರಿಸುವುದನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಬಾವುಟಕ್ಕೆ ಸಂವಿಧಾನದಲ್ಲಿ ತನ್ನದೇ ಆದ ಸ್ಥಾನಮಾನಗಳಿವೆ. ಒಟ್ಟಿನಲ್ಲಿ ಬಾವುಟ, ಗುರುತಿನ ಚಿಹ್ನೆ ಅಥವಾ ನಿಶಾನೆ ಎಂದು ಹೇಳಬಹುದು. ಪ್ರಪಂಚದಲ್ಲಿ ಶೃಂಗ ಸಭೆಗಳು ನಡೆದರೂ ಆ ಸಭೆಯಲ್ಲಿ ಭಾಗವಹಿಸುವವರ ಪ್ರತಿಯೊಂದು ದೇಶದ ಬಾವುಟ ಗೌರವದಿಂದ ಹಾರಿಸಲಾಗಿರುತ್ತದೆ. ಬಾವುಟವನ್ನು ನೋಡಿ ಯಾವ ಯಾವ ದೇಶಗಳು ಸಭೆಯಲ್ಲಿ ಹಾಜರಾಗಿವೆ ಎಂದು ತಿಳಿದುಕೊಳ್ಳಬಹುದು.
ಬೇರೆ ದೇಶದ ಬಾವುಟವನ್ನು ನಾವು, ನಮ್ಮ ದೇಶದ ಬಾವುಟವನ್ನು ಬೇರೆಯವರು ಇದು ನಮ್ಮ ರಾಷ್ಟ್ರಧ್ವಜ ಎಂದು ಹೇಳುವಹಾಗಿಲ್ಲ. ಅದು ಸಂವಿಧಾನದ ಕಾನೂನಿನ ವಿರುದ್ಧವಾಗುತ್ತದೆ.
ಸೂಫಿಸಂತರು ಸಹ ತಮ್ಮ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. ಪ್ರಾಪಂಚಿಕ ಸಾಮ್ರಾಜ್ಯಗಳಿಗೆ, ದೇಶಗಳಿಗೆ ಸರಹದ್ದುಗಳಿವೆ. ಆದರೆ ಸೂಫಿ ಸಾಮ್ರಾಜ್ಯಕ್ಕೆ ಸರಹದ್ದುಗಳಿಲ್ಲ. ಪ್ರೀತಿಯ ಸಾಮ್ರಾಜ್ಯಕ್ಕೆ ಸರಹದ್ದುಗಳಿಂದ ಬಂಧಿಸಲು ಸಾಧ್ಯವೆ? ಖಂಡಿತ ಇಲ್ಲ. ಸೂಫಿ ಸಂತರ ಪ್ರೀತಿಯ ಮತ್ತು ಆಧ್ಯಾತ್ಮಿಕ ಸಾಮ್ರಾಜ್ಯ ಇಡೀ ಪ್ರಪಂಚದಲ್ಲಿ ವ್ಯಾಪಿಸಿದೆ. ಇದಕ್ಕೆ ಮುಖ್ಯ ಕಾರಣ ಅವರು ದೇಶಗಳ ಮೇಲೆ ಆಡಳಿತ ನಡೆಸುತ್ತಿರಲಿಲ್ಲ. ಅದರ ಬದಲಾಗಿ ಅವರು ಆಡಳಿತ ನಡೆಸುತ್ತಿದ್ದುದು ಮನಸ್ಸುಗಳ ಮೇಲೆ. ಆದುದರಿಂದಲೇ ಅವರದು ಅಮರ ಸಾಮ್ರಾಜ್ಯ. ಈ ಪ್ರಪಂಚ ಇರುವವರೆಗೂ, ನಂತರವೂ ಅವರ ಸಾಮ್ರಾಜ್ಯ ಚಿರಂಜೀವಿಯಾಗಿ ಉಳಿದಿರುತ್ತದೆ. ಶರೀರಕ್ಕೆ ಸಾವು, ಆತ್ಮಕ್ಕೆ ಸಾವು ಉಂಟೆ? ಅದನ್ನು ಕೋಣೆಗಳಲ್ಲಿ ಬಂಧಿಸಿಡಲು ಸಾಧ್ಯವೇ?
ಸೂಫಿ ಸಂತರಲ್ಲಿ ಪ್ರಮುಖ ನಾಲ್ಕು ಪರಂಪರೆಗಳು ಅಥವಾ ಮನೆತನಗಳಿವೆ. ಖಾದಿರಿ, ಚಿಶ್ಟಿಯಾ, ಸುಹರ್ವದಿಯಾ ಮತ್ತು ನಕ್ಷ್ ಬಂದಿಯಾ. ಖದಿರಿಯಾ ಮನೆತನದವರು ತಮ್ಮನ್ನು ಹಸಿರು ಮತ್ತು ಕಪ್ಪು ಬಣ್ಣಗಳಿಂದ ಗುರುತಿಸಿಕೊಳ್ಳುತ್ತಾರೆ. ಖಾದಿರಿ ಗುರುಗಳು ಅಥವಾ ಸೂಫಿಗಳು ಹಸಿರು ಪೇಟವನ್ನು ಧರಿಸಿರುತ್ತಾರೆ. ಅವರನ್ನು ಗುಂಪಿನಲ್ಲಿ ನೋಡಿದಾಕ್ಷಣ ಇವರು ಖಾದಿರಿ ಮನೆತನದವರು ಎಂದು ಗುರುತಿಸಬಹುದು. ಚಿಶ್ಟಿಯಾ ಮನೆತನದವರು ತಮ್ಮನ್ನು ಕಾವಿ ಬಣ್ಣದಿಂದ ಗುರುತಿಸಿಕೊಳ್ಳುತ್ತಾರೆ. ಚಿಶ್ಟಿಯಾ ಮನೆತನದ ಗುರುಗಳು ಕಾವಿ (ಕೇಸರಿ) ಬಣ್ಣದ ಪೇಟವನ್ನು ಧರಿಸಿರುತ್ತಾರೆ. ಹೀಗೆ ರಫಾಯಿ ಮನೆತನದವರು ಬಿಳಿ ಬಣ್ಣದಿಂದ ಗುರುತಿಸಲ್ಪಡುತ್ತಾರೆ. ಆ ಮನೆತನಕ್ಕೆ ಸಂಬಂಧಿಸಿದ ಅನುಯಾಯಿಗಳು ಆ ಪ್ರತ್ಯೇಕ ಬಣ್ಣದ ಟೋಪಿಗಳನ್ನು ಧರಿಸಿರುತ್ತಾರೆ.
ಹ. ಅಬ್ದುಲ್ ಖಾದಿರ್(ರ) ಹುಟ್ಟಿದ್ದು ಪರ್ಶಿಯಾ ದೇಶದಲ್ಲಿ. ನಾವು ಇರುವುದು ಕರ್ನಾಟಕದಲ್ಲಿ. ಅವರು ಸ್ವರ್ಗವಾಸಿಯಾಗಿ ನೂರಾರು ವರ್ಷಗಳು ಕಳೆದಿವೆ. ಆದರೆ ಅವರ ಧ್ವಜ ಪ್ರತಿ ಊರಲ್ಲಿ ರಾರಾಜಿಸುತ್ತಿದೆ. ಸೂಫಿಸಂತರ ಸಾಮ್ರಾಜ್ಯಕ್ಕೆ ಸಾವಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಸಾಕ್ಷಿ ಬೇಕೆ? ಸೂಫಿಸಂತರು ಒಂದೇ ರಾಜ್ಯದ ಅಥವಾ ದೇಶದ ಸ್ವತ್ತಲ್ಲ. ಅವರು ಜನ್ಮತಾಳಿರುವುದು ಇಡೀ ವಿಶ್ವದ ಮಾನವಕುಲದ ಉದ್ಧಾರಕ್ಕಾಗಿ. ಹೃದಯದಿಂದ ಹೃದಯಕ್ಕೆ ಅವರ ಆಧ್ಯಾತ್ಮಿಕ ಜ್ಞಾನ ಹರಿಯುತ್ತಾ ಬರುತ್ತಿದೆ. ಹೀಗೆ ಹರಿಯುತ್ತಾ ಮುಂದೆ ಸಾಗುತ್ತಿರುತ್ತದೆ. ಆದರೆ ನಾವು ಮಾತ್ರ ಈ ಪ್ರಪಂಚದಲ್ಲಿ ಇರುವುದಿಲ್ಲ. ದೇವರು ಎಲ್ಲರಿಗೂ ಸತ್ಯ ಗುರುವಿನ ಸಾನ್ನಿಧ್ಯ ಕಲ್ಪಿಸಲಿ ಎಂದು ಪ್ರಾರ್ಥಿಸುತ್ತೇನೆ.
ಪರ್ಶಿಯಾ ದೇಶದ ಗಿಲಾನ್ (ಜಿಲಾನ್) ಎಂಬ ಊರಲ್ಲಿ ಅವರ ಜನ್ಮ. ಇಸವಿ 1077ರಲ್ಲಿ ಆಯಿತು. ಅವರ ತಂದೆಯ ಹೆಸರು ಅಬು ಸಾಲೆಹ್(ರ) ಮತ್ತು ತಾಯಿ ಸಯ್ಯಿದ ಫಾತಿಮಾ(ರ). ತಂದೆಯವರು ದೇವರಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದರು. ತನ್ನ ಜೀವನವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದರು. ನದಿಯ ತೀರದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಒಂದು ದಿನ ಹೀಗೆ ಕುಳಿತಿರುವಾಗ ಒಂದು ಸೇಬು ನದಿಯಲ್ಲಿ ತೇಲಿಕೊಂಡು ಬರುತ್ತಿತ್ತು. ಇವರಿಗೆ ಹಸಿವಾಗಿದ್ದ ಕಾರಣ ಆ ಸೇಬನ್ನು ಎತ್ತಿಕೊಂಡು ತಿಂದರು. ತಿಂದ ನಂತರ ಬಹಳ ಚಿಂತೆಗೆ ಒಳಗಾದರು. ಈ ಸೇಬು ಯಾರ ತೋಟದ್ದೋ? ಮಾಲೀಕನ ಅನುಮತಿ ಇಲ್ಲದೆಯೇ ನಾನು ಆ ಸೇಬನ್ನು ತಿಂದುಬಿಟ್ಟೆನಲ್ಲ, ನನ್ನಿಂದ ಒಂದು ತಪ್ಪು ನಡೆದುಹೋಯಿತಲ್ಲ. ದೇವರಿಗೆ ನಾನು ಏನೆಂದು ಉತ್ತರ ಕೊಡಲಿ ಎಂದು ಕೊರಗತೊಡಗಿದರು. ನದಿಯ ತೀರದಲ್ಲಿ ಯಾರ ಸೇಬಿನ ತೋಟವಿರಬಹುದು? ಆ ಮಾಲೀಕನನ್ನು ಹುಡುಕಿ ಕ್ಷಮೆ ಕೇಳಬೇಕು ಎಂದು, ಅದೇ ನದಿಯ ತೀರದಿಂದ ನಡೆದುಕೊಂಡು ಸೇಬು ಹರಿದುಬಂದ ದಿಕ್ಕಿನಲ್ಲಿ ಮುಂದುವರೆದರು. ಕೊನೆಗೂ ಒಂದು ಸೇಬಿನತೋಟ ಸಿಕ್ಕಿತು. ತೋಟದ ಒಳಗೆ ಹೋದರು. ಅಲ್ಲಿದ್ದ ವ್ಯಕ್ತಿಯನ್ನು ಕಂಡು ನಾನು ತೋಟದ ಮಾಲೀಕರೊಂದಿಗೆ ಮಾತನಾಡಬೇಕು ಎಂದರು. ನಾನೇ ಮಾಲಿಕ ಬಂದ ವಿಷಯ ಏನು ಹೇಳಿ ಎಂದರು. ನಿಮ್ಮ ತೋಟದಿಂದ ಒಂದು ಸೇಬು ಹರಿದು ಬರುತ್ತಿತ್ತು ನನಗೆ ಹಸಿವಾಗಿತ್ತು. ಅದನ್ನು ನಾನು ತಿಂದುಬಿಟ್ಟೆ. ದಯವಿಟ್ಟು ಅದರ ಬೆಲೆ ಹೇಳಿ ಎಂದರು. ತೋಟದ ಮಾಲಿಕ ಅಬ್ದುಲ್ಲಾ ಸೋಮಿ(ರ) ಇವರ ಈ ದಕ್ಷತೆ ನೋಡಿ ಮಾರುಹೋದರು. ಇಂತಹ ವ್ಯಕ್ತಿಯನ್ನು ತನ್ನ ಬಳಿ ಉಳಿಸಿಕೊಳ್ಳಲು ಇಚ್ಛಿಸಿ, ನೀವು ಆ ಸೇಬಿನ ಬೆಲೆ ತೀರಿಸಬೇಕಾದರೆ ನನ್ನ ತೋಟದಲ್ಲಿ ಒಂದು ವರ್ಷ ಕೆಲಸ ಮಾಡಬೇಕು ಎಂದರು. ಈ ಶಿಕ್ಷೆಯನ್ನು ಅವರು ಹೃತ್ಪೂರ್ವಕವಾಗಿ ಒಪ್ಪಿಕೊಂಡರು. ಒಂದು ವರ್ಷ ಮುಗಿದ ನಂತರ ಪುನಃ ಹಲವು ವರ್ಷ ಅದೇ ಶಿಕ್ಷೆ ಮುಂದುವರೆಯಿತು. ಆ ತೋಟದ ಮಾಲೀಕರು ಇವರ ಪ್ರಾಮಾಣಿಕತೆ, ಸೃಜನಶೀಲತೆ, ನಿಷ್ಕಳಂಕ ವ್ಯಕ್ತಿತ್ವ, ಸಂಯಮ ಮೂರ್ತಿ, ನಿಸ್ಪøಹ ನಿಸ್ವಾರ್ಥ ಸೇವೆಯನ್ನು ನೋಡಿ, ನಿಮ್ಮ ಸೇವೆಯಿಂದ ನಾನು ಸಂತುಷ್ಟನಾದೆ, ನಿಮಗೆ ಒಂದು ಬಹುಮಾನ ಕೊಡಬೇಕು ಎಂದಿದ್ದೇನೆ ಎಂದರು. ಅವರಿಗೆ ಯಾವ ಆಸೆಯೂ ಇರಲಿಲ್ಲ ಆದರೂ ಮಾಲೀಕರ ಅಪ್ಪಣೆಯನ್ನು ಸ್ವೀಕರಿಸಿಕೊಂಡರು. ಅಬ್ದುಲ್ಲಾ ಸೋಮಿ(ರ) ಹೇಳಿದರು- ‘ನನಗೆ ಒಬ್ಬಳು ಮಗಳಿದ್ದಾಳೆ, ಅವಳಿಗೆ ಕಣ್ಣಿಲ್ಲ, ಕೈಕಾಲುಗಳ ಅಂಗವಿಕಲೆ, ಮೂಕಿ ಅವಳನ್ನು ನೀವು ಮದುವೆ ಮಾಡಿಕೊಳ್ಳಬೇಕು’ ಎಂದರು. ಆಗ ಅಬು ಸಾಲೆಹ್(ರ) ಮಾಲೀಕರ ಮಗಳಾದ ಸಯ್ಯಿದಾ ಫಾತಿಮಾ(ರ)ರವರನ್ನು ಮದುವೆ ಮಾಡಿಕೊಂಡರು. ಮಾಲೀಕರ ಮಗಳು ಅತಿ ಸುಂದರವಾಗಿರುವುದು ಅವರಿಗೆ ಮದುವೆಯ ನಂತರ ತಿಳಿಯಿತು. ತನ್ನ ಮಾವನ ಹತ್ತಿರ ಬಂದು- ‘ನೀವು ಹೇಳಿದ ಹಾಗೆ ನಿಮ್ಮ ಮಗಳಿಲ್ಲವಲ್ಲ’ ಎಂದರು. ಮಾವ- ‘ನಾನು ಹೇಳಿದ್ದು ಸತ್ಯವೆ. ಆಕೆ ತನ್ನನ್ನು ಮದುವೆ ಆಗುವ ಗಂಡನ್ನು ಒಂದು ಸಲವೂ ನೋಡಿಲ್ಲ. ತನ್ನ ಕೈಕಾಲುಗಳಿಂದ ದೇವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲಿಲ್ಲ, ತನ್ನ ಬಾಯಿಯಿಂದ ದೇವರಿಗೆ ಇಷ್ಟವಿಲ್ಲದ ಯಾವ ಮಾತನ್ನೂ ಆಡಲಿಲ್ಲ. ಆಕೆಯ ತಂದೆ ತೀರಿಹೋಗಿದ್ದಾರೆ, ಅವಳನ್ನು ನಾನು ಮತ್ತು ಅವಳ ತಾಯಿ, ಬೆಳೆಸಿದ್ದೇವೆ’ ಎಂದರು.
ಇಂತಹ ಸತ್ಯವಂತ ತಂದೆ-ತಾಯಿಯ ಸುಪುತ್ರರೇ ಹ. ಅಬ್ದುಲ್ ಖಾದಿರ್ ಜೀಲಾನಿ(ರ). ಕೆಲವು ವರ್ಷಗಳ ನಂತರ ಇವರ ತಂದೆಯೂ ಸಹ ಸ್ವರ್ಗವಾಸಿಯಾದರು. ಹ. ಅಬ್ದುಲ್ ಖಾದಿರ್ರವರನ್ನು(ರ) ಸಾಕುವ ಜವಾಬ್ದಾರಿಯೆಲ್ಲ ಅವರ ತಾಯಿ ಮೇಲೆ ಬಿದ್ದಿತು.
ಹ. ಅಬ್ದುಲ್ ಖಾದಿರ್ರವರಿಗೆ(ರ) ಓದುವ ಆಸೆ ಬಹಳವಾಗಿತ್ತು. ತನ್ನ ಮುಂದಿನ ವಿದ್ಯಾಭ್ಯಾಸ ಮುಂದುವರೆಸಲು ತಾಯಿಯನ್ನು ಕೇಳಿದರು. ಆಗ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕಾದರೆ ಬಾಗ್ದಾದ್ ಪಟ್ಟಣಕ್ಕೆ ಹೋಗಬೇಕಾಗಿತ್ತು. ಮಗ ಚಿಕ್ಕವನು ಆದರೂ ಅವರ ತಾಯಿ ತನ್ನ ಪ್ರೀತಿಯ ಸುಪುತ್ರನನ್ನು ಹೆಚ್ಚಿನ ವಿದ್ಯಾಭ್ಯಾಸ ಪಡೆದುಕೊಳ್ಳಲು ಬಾಗ್ದಾದ್ಗೆ ಕಳುಹಿಸಲು ಸಿದ್ಧರಾದರು. ಆಗ ಬಾಲಕನಿಗೆ ಸುಮಾರು 10 ವರ್ಷ ವಯಸ್ಸಾಗಿತ್ತು. ಮಗನನ್ನು ಬಾಗ್ದಾದ್ಗೆ ಕಳುಹಿಸುವಾಗ, ನಲವತ್ತು ಚಿನ್ನದ ನಾಣ್ಯಗಳನ್ನು ಬಾಲಕನ ಅಂಗಿಯಲ್ಲಿ ಯಾರಿಗೂ ಕಾಣದಹಾಗೆ ಹೊಲಿದಿಟ್ಟು, ಬಾಗ್ದಾದ್ನಲ್ಲಿ ತೆಗೆದು ಖರ್ಚು ಮಾಡಿಕೋ ಎಂದರು. ‘ಯಾರಿಗೂ ಎಂದೂ ಸುಳ್ಳು ಹೇಳಬೇಡ, ಸತ್ಯವನ್ನೇ ನುಡಿ’- ಎಂದು ಉಪದೇಶ ಮಾಡಿ, ಮುದ್ದಾಡಿ ಕಳುಹಿಸಿಕೊಟ್ಟರು.
ಆ ಕಾಲದಲ್ಲಿ ಒಂದೂರಿನಿಂದ ಇನ್ನೊಂದೂರಿಗೆ ಒಂಟಿಯಾಗಿ ಯಾರೂ ಹೋಗುತ್ತಿರಲಿಲ್ಲ. ಆದುದರಿಂದ ಅವರ ತಾಯಿ ತನ್ನ ಮಗುವನ್ನು ಬಾಗ್ದಾದ್ಗೆ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಒಂದು ಗುಂಪಿನೊಂದಿಗೆ ಜೊತೆಗೂಡಿಸಿ ಕಳುಹಿಸಿದರು. ದಾರಿಯಲ್ಲಿ ಡಕಾಯಿತರು ಅವರ ಕಾರ್ವಾನನ್ನು(ಅಚಿಡಿಚಿvಚಿಟಿ) ಲೂಟಿ ಮಾಡಿದರು. ಎಲ್ಲರನ್ನೂ ಜಪ್ತಿಮಾಡಿ ಇದ್ದದ್ದನ್ನೆಲ್ಲಾ ಡಕಾಯಿತರು ಲೂಟಿ ಮಾಡಿಕೊಂಡರು. ಬಾಲಕ ಅಬ್ದುಲ್ ಖಾದಿರನನ್ನು(ರ) ನೋಡಿ ‘ನಿನ್ನ ಬಳಿ ಏನಿದೆ’ ಎಂದು ಕೇಳಿದಾಗ, ನನ್ನ ಬಳಿ 40 ಚಿನ್ನದ ನಾಣ್ಯಗಳಿವೆ ಎಂದು ಹೇಳಿದರು. ಒಬ್ಬ ಡಾಕು ಹುಡುಗ ತಮಾಷೆ ಮಾಡುತ್ತಿರಬಹುದು ಎಂದುಕೊಂಡ. ತನ್ನ ಅಂಗಿಯಲ್ಲಿ ಬಾಲಕನ ತಾಯಿ ನಾಣ್ಯಗಳನ್ನು ಹೊಲಿದಿರುವ ಜಾಗವನ್ನು ತೋರಿಸಿದರು. ಆಗ ಆ ಡಕಾಯಿತ ಬಾಲಕನನ್ನು ತನ್ನ ಸರದಾರನ ಬಳಿ ಕರೆದುಕೊಂಡು ಹೋದನು. ‘ನೀನು ಸತ್ಯ ಹೇಳದೇ ಹೋಗಿದ್ದಿದ್ದರೆ ನಮಗೆ ನಿನ್ನ ಬಳಿ ಇರುವ ನಾಣ್ಯಗಳ ಬಗ್ಗೆ ಗೊತ್ತಾಗುತ್ತಿರಲೇ ಇಲ್ಲ; ನೀನು ಹಾಗೆಯೇ ಸುಮ್ಮನಿದ್ದು ನಾಣ್ಯಗಳನ್ನು ಕಾಪಾಡಿಕೊಳ್ಳಬಹುದಿತ್ತಲ್ಲ’ ಎಂದು ಸರದಾರ ಹೇಳಿದ. ‘ನನ್ನ ತಾಯಿ ಎಷ್ಟು ಸಂಕಷ್ಟದಲ್ಲಿದ್ದರೂ ಸತ್ಯದ ಮಾರ್ಗ ಬಿಡಬಾರದು ಎಂದು ಉಪದೇಶ ಮಾಡಿದ್ದಾರೆ. ಆದುದರಿಂದ ನಾನು ಸತ್ಯವನ್ನೇ ಹೇಳುತ್ತಿದ್ದೇನೆ’ ಎಂದರು. ಹುಡುಗನ ಈ ಗುಣವನ್ನು ನೋಡಿ ಸರದಾರನ ಮನಸ್ಸು ಕರಗಿ ನೀರಾಗಿಹೋಯಿತು. ಆತನ ಜೀವನದ ಪರಿಯೇ ಬದಲಾಯಿತು. ಆತ ಅಳತೊಡಗಿದನು. ಆತನಿಗೆ ಸತ್ಯ ಮಾರ್ಗದ ದರ್ಶನ ಬಾಲಕ ಹ. ಅಬ್ದುಲ್ ಖಾದಿರ್ರವರಿಂದ ಆಯಿತು. ಆತ ಎಲ್ಲರೊಂದಿಗೂ ಕ್ಷಮೆ ಯಾಚಿಸಿ ತಾನು ಲೂಟಿ ಮಾಡಿದ್ದ ಎಲ್ಲವನ್ನೂ ಹಿಂತಿರುಗಿಸಿ, ನಾನು ಇಂದಿನಿಂದ ಸನ್ಮಾರ್ಗದಲ್ಲಿ ನಡೆಯುತ್ತೇನೆಂದು ಪ್ರಮಾಣ ಮಾಡಿದನು. ಅವನ ಸಂಗಡಿಗರೂ ಸಹ ಒಳ್ಳೆಯ ಮಾರ್ಗದತ್ತ ಪರಿವರ್ತನೆಗೊಂಡರು. ಒಂದು ಅನ್ವೇಷಣೆಯ ಪ್ರಕಾರ ಭಾರತ ದೇಶ ಭ್ರಷ್ಟಾಚಾರದಲ್ಲಿ 87ನೇ ಸ್ಥಾನ ಪಡೆದಿದೆ. (ಡಿಸೆಂಬರ್-2010 ಅPI ಖeಠಿoಡಿಣ (ರಿಪೋರ್ಟ್) 2010 ಹಗರಣಗಳ ವರ್ಷವೆಂದೇ ಪ್ರಖ್ಯಾತಿ ಪಡೆಯಿತು. (ಭೂಹಗರಣ, ಆದರ್ಶ ಹಗರಣ, ಐಪಿಎಲ್ ಹಗರಣ, ಲಾಭದಾಯಕ ಹುದ್ದೆ ತೆರಿಗೆ ವಂಚನೆ, 2ಜಿ ತರಂಗಾಂತರಗಳ ಹಗರಣ ಇತ್ಯಾದಿ) ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ. ಸತ್ಯವಿರಲಿ, ಸತ್ಯದ ನೆರಳೂ ಸಹ ದೂರ ದೂರದವರೆಗೂ ಕಾಣುತ್ತಿಲ್ಲ. ಪ್ರತಿ ನಿಮಿಷ ಪರರ ಸ್ವತ್ತನ್ನು ನುಂಗಲು ನಾವು ಪ್ರಯತ್ನಿಸುತ್ತಿದ್ದೇವೆ. ಹೀಗೇ ಮುಂದುವರೆದರೆ ಇನ್ನೊಂದು ಸುನಾಮಿ ಬರುವುದರಲ್ಲಿ ಸಂಶಯವೇ ಇಲ್ಲ. ಸೂಫಿಸಂತರ ಮಾರ್ಗವನ್ನು ಅನುಸರಿಸಿ ದೇಶದಲ್ಲಿ ಶಾಂತಿ ನೆಲೆಸುವಂತಾಗಬೇಕು. ಮಕ್ಕಳಿಗೆ ಸತ್ಯವಂತರ ಕಥೆಗಳನ್ನು ಹೇಳಿ ಅವರಿಗೆ ಒಳ್ಳೆಯ ದಾರಿಯನ್ನು ತೋರಿಸುವಂತಾಗಬೇಕು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು.
ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಆಧ್ಯಾತ್ಮಿಕ ವಿದ್ಯೆಯನ್ನು ಆಗಿನ ಕಾಲದ ಪ್ರಮುಖ ಆಧ್ಯಾತ್ಮಿಕ ಗುರುಗಳಾಗಿದ್ದ ಶೇಕ್ ಹಮ್ಮಾದ್ ಬಿನ್ ಮುಸ್ಲಿಂ(ರ) ಮತ್ತು ಶೇಕ್ ಕಾಜಿ ಅಬು ಸಯೀದ್ ಮುಬಾರಕ್ ಅಲ್ ಮಕ್ಜೂಮಿ(ರ)ರವರಿಂದ ಪಡೆದುಕೊಂಡರು. 25 ವರ್ಷ ದೇವರ ಧ್ಯಾನದಲ್ಲಿದ್ದರು. 40 ವರ್ಷ ಇಷಾ ವಜೂನಿಂದ ಬೆಳಗಿನ ಫಜರ್ ಪ್ರಾರ್ಥನೆ ಮಾಡಿರುವರು. (ವಜೂ- ನಮಾಜ್ ಮಾಡುವ ಮುನ್ನ ಶರಿಅತ್ ಪ್ರಕಾರ ನೀರಿನಿಂದ ಕೈಕಾಲು ಮುಖ ತೊಳೆಯುವುದು. (ವಜೂ ಮುರಿದುಹೋಗುವ ನಿಯಮಗಳಲ್ಲಿ ನಿದ್ದೆಯೂ ಒಂದಾಗಿದೆ) (ವಜೂ- ಂbಟuಣioಟಿ) ನಿದ್ದೆ ಮಾಡುವುದರಿಂದ ವಜೂ ಮುರಿದುಹೋಗುತ್ತದೆ. ಪುನಃ ನಮಾಜ್ ಮಾಡಬೇಕಾದರೆ ವಜೂ ಮಾಡಬೇಕಾಗುತ್ತದೆ. ಹ. ಅಬ್ದುಲ್ ಖಾದಿರ್ ಜೀಲಾನಿ(ರ) ರಾತ್ರಿಯ ನಮಾಜ್ ಇಷಾಗಾಗಿ ಮಾಡಿದ ವಜೂನಿಂದ ಬೆಳಗಿನ ನಮಾಜನ್ನು 40 ವರ್ಷ ಮಾಡಿದ್ದಾರೆ. ಅಂದರೆ 40 ವರ್ಷ ಅವರು ನಿದ್ದೆ ಮಾಡದೆ ಸೃಷ್ಟಿಕರ್ತನ ಧ್ಯಾನದಲ್ಲಿ ವ್ಯಸ್ಥರಾಗಿದ್ದರು ಎಂದರ್ಥ.) 15 ವರ್ಷ ಇಡೀ ರಾತ್ರಿ ಪವಿತ್ರ ಕುರ್ಆನ್ ಪಠಣ ಮಾಡಿದ್ದಾರೆ. ಎಷ್ಟೋ ದಿನ ಏನೂ ತಿನ್ನದೆಯೇ ತನ್ನ ‘ನಾನನ್ನು’ ಕೊಂದಿದ್ದಾರೆ. ಒಂದು ವರ್ಷ ನೀರನ್ನೇ ಕುಡಿಯದೆ ಅವರು ತನ್ನ ‘ನಾನು’ ಅನ್ನು ಪರೀಕ್ಷೆಗೆ ಒಳಪಡಿಸಿದ್ದರು ಎಂದು ಅಬುಲ್ ಮಸೂದ್ ಬಿನ್ ಅಬು ಬಕ್ರ್ ಹರೀಮಿ(ರ) ಹೇಳಿದ್ದಾರೆ, ಒಂದು ವರ್ಷ ಏನನ್ನೂ ತಿನ್ನದೆ ಕೇವಲ ನೀರನ್ನೇ ಸೇವಿಸಿಯೂ ಸಹ ಕಾಲ ಕಳೆದಿರುವುದುಂಟು. ಸಾವಿರಾರು ಜನರಿಗೆ ದಾನಿಯಾಗಿದ್ದ ಕರುಣಾಮಯಿ ತಮ್ಮ ಸ್ವಂತ ಜೀವನ ಯಾವ ರೀತಿ ನಡೆಸಿದ್ದಾರೆಂದು ನೋಡಿದಾಗ ತನ್ನ ‘ನಾನು’ ಅನ್ನು ಯಾವ ರೀತಿ ಪಳಗಿಸಿರಬಹುದು ಎಂದು ಆಶ್ಚರ್ಯವಾಗುತ್ತದೆ.
ಸಾಧನೆಯಲ್ಲಿ ತಲ್ಲೀನವಾದಾಗ ಅವರಿಗೆ ಕೊಂಚವೂ ಪ್ರಪಂಚದ ಅರಿವೇ ಇರುತ್ತಿರಲಿಲ್ಲ. ಹಲವಾರು ಸಲ ಅವರ ಸ್ವಂತ ಪರಿಸ್ಥಿತಿಯ ಬಗ್ಗೆಯೂ ಅವರಿಗೆ ಗಮನವಿರುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದೂರಿನಿಂದ ಇನ್ನೊಂದೂರಿಗೆ ಹೋಗಿ, ನಾನು ಎಲ್ಲಿದ್ದೆ, ಇಲ್ಲಿಗೆ ಹೇಗೆ ಬಂದೆ ಎಂದು ಆಶ್ಚರ್ಯ ಪಡುತ್ತಿದ್ದರು. ಅವರು ಆಧ್ಯಾತ್ಮಿಕ ಸ್ಥಿತಿಯಲ್ಲಿ ಎಷ್ಟು ಮುಳುಗಿ ಹೋಗುತ್ತಿದ್ದರೆಂದರೆ ಅವರ ಶರೀರದ ಬಗ್ಗೆ ಪರಿಜ್ಞಾನವೇ ಇರುತ್ತಿರಲಿಲ್ಲ. ಅವರು ಈ ಸ್ಥಿತಿಯಲ್ಲಿ ಎಲ್ಲೂ ನಿಲ್ಲದೆ ಸತತವಾಗಿ 12 ದಿನ ಓಟವೂ ಮಾಡಿದುಂಟು. ಅವರು ಸಾಮಾನ್ಯ ಸ್ಥಿತಿಗೆ ತಲುಪಿದಾಗ ಇಂತಹ ಘಟನೆಗಳನ್ನು ನೋಡಿ ಚಕಿತಗೊಳ್ಳುತ್ತಿದ್ದರು. “ನೀವು ಅಬ್ದಲ್ ಖಾದಿರ್, ನಿಮ್ಮೊಂದಿಗೆ ಈ ಘಟನಾವಳಿಗಳು ಸರ್ವೇಸಾಮಾನ್ಯ, ಅದನ್ನು ನೋಡಿ ಚಕಿತಪಡಬೇಕಾಗಿಲ್ಲ ಎಂದು ಜನ ಹೇಳಿರುವುದುಂಟು.
ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಅನೇಕ ಪುಸ್ತಕಗಳನ್ನು ಬರೆದರು. ಅದರಲ್ಲಿ ಮುಖ್ಯವಾಗಿ ಅಲ್ ಗುನ್ಯಾ-ಲಿ-ತಾಲಿಬಿ ತರೀಖ್ ಅಲ್ ಹಖ್. ಇದನ್ನು ಗುನ್ಯತುತ್ತಾಲಿಬಿನ್ ಎಂದು ಸಹ ಹೇಳುತ್ತಾರೆ. ನಾನು 8ನೇ ತರಗತಿಯಲ್ಲಿದ್ದಾಗ ನನಗೆ ಅರಬ್ಬಿ ಓದುವುದನ್ನು ಕಲಿಸಿದ ಗುರುಗಳು ಈ ಪುಸ್ತಕದ ವಿಷಯವನ್ನು ಹೇಳುತ್ತಿದ್ದರು. 20 ವರ್ಷ ಕಳೆದರೂ ಆ ಪುಸ್ತಕದ ಹೆಸರು ಮಾತ್ರ ನಾನು ಮರೆತಿಲ್ಲ. ಈ ಪುಸ್ತಕ ಮನುಷ್ಯನನ್ನು ಸನ್ಮಾರ್ಗದತ್ತ ಕರೆದೊಯ್ಯುತ್ತದೆ ಎಂದು ವಿದ್ವಾಂಸರು ಹೇಳಿದ್ದಾರೆ.
‘ಫತುಹ್-ಅಲ್-ಗೈಬ್’ (ನಿರಾಕಾರನ ಸಂದೇಶಗಳು) ಎಂಬ ಪುಸ್ತಕದಲ್ಲಿ ಅವರ 78 ಪ್ರವಚನಗಳಿವೆ. ಪ್ರವಚನಗಳು ಚಿಕ್ಕದಾಗಿದ್ದರೂ ಬಹಳ ಪ್ರಭಾವಶಾಲಿಯಾಗಿವೆ. ‘ಅಲ್-ಫತ್ಹ ಅರ್ರಬ್ಬಾನಿ’ (ಮಹಾನ್ ದಿವ್ಯ ದರ್ಶನ) – ಇದರಲ್ಲಿ ಅವರ 62 ದೊಡ್ಡ ಪ್ರವಚನಗಳಿವೆ. ಇದನ್ನು ಅವರು ಬಾಗ್ದಾದ್ ಮದ್ರಸಾದಲ್ಲಿ ಕೊಟ್ಟಿದ್ದರು.
‘ಜಲಾಅಲ್ ಖವಾತಿರ್’ – ಇದರಲ್ಲಿ 45 ಪ್ರವಚನಗಳಿವೆ. ಇದನ್ನೂ ಸಹ ಮದ್ರಸಾದಲ್ಲಿ ಹೇಳಲಾಗಿತ್ತು.
‘ಮಲ್ಫುಜಾತ್’ (ಹೇಳಿಕೆಗಳು) – ಇದರಲ್ಲಿ ಅವರು ಆಗಾಗ ಹೇಳಿದ ಮಾತುಗಳು ಮತ್ತು ಸಂದೇಶಗಳಿವೆ.
‘ಖಂಸತ ಅಶಾರ ಮಕ್ತುಬಾನ್’ (15 ಪತ್ರಗಳು) – ಪರ್ಶಿಯಾ ಭಾಷೆಯಲ್ಲಿ ಹ. ಅಬ್ದಲ್ ಖಾದಿರ್(ರ) ತನ್ನ ಒಬ್ಬ ಶಿಷ್ಯನಿಗೆ ಬರೆದ 15 ಪತ್ರಗಳು.
“ನಿಮ್ಮ ಸ್ವಂತ ‘ನಾನು’ವಿನಿಂದ ಹೊರಬನ್ನಿ ಮತ್ತು ಅದರಿಂದ ನಿಮ್ಮನ್ನು ದೂರಪಡಿಸಿಕೊಳ್ಳಿ. ನಿಮ್ಮ ಒಡೆತನ ಅಥವಾ ಸೌಮ್ಯ ಪ್ರವೃತ್ತಿಯಿಂದ ಕಳಚಿಕೊಳ್ಳಲು ಅಭ್ಯಾಸ ಮಾಡಿ ಮತ್ತು ಎಲ್ಲವನ್ನೂ ದೇವರಿಗೆ ಒಪ್ಪಿಸಿ. ಈತನು ನಿಮಗೆ ಯಾವ ಆಜ್ಞೆಗಳನ್ನು ಪಾಲಿಸಲು ಹೇಳಿದ್ದಾನೋ, ಯಾವುದನ್ನು ನಿಷೇಧಿಸಿದ್ದಾನೋ ಅದಕ್ಕೆ ಗೌರವ ಕೊಟ್ಟು ನಿಮ್ಮ ಹೃದಯದ ಬಾಗಿಲಿಗೆ ಈತನ ಕಾವಲುಗಾರರಾಗಿ, ಏಕೆಂದರೆ ಹೊರದೂಡಲ್ಪಟ್ಟ ಭಾವೋದ್ವೇಗ ಪುನಃ ನಿಮ್ಮ ಹೃದಯದೊಳಗೆ ಬರಬಾರದು.
“ಆಸೆಗಳಿಗೆ ಗುಲಾಮರಾಗುವುದು ಮತ್ತು ಮೌನ ಸಮ್ಮತಿಯಿಂದಿರುವುದು ಹೃದಯದಲ್ಲಿ ಅದರ ಸೇರ್ಪಡೆಗೆ ಎಡೆಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ಅದರ ಪ್ರಚೋದನೆಗೆ ಒಳಗಾಗದೆ ವಿರೋಧಿಸಿ ಹೃದಯದಿಂದ ಅದನ್ನು ಹೊರದೂಡಬಹುದು. ಆದುದರಿಂದ ಆತನ ಇಚ್ಛೆಗೆ ವಿರುದ್ಧವಾದದ್ದನ್ನು ಇಚ್ಛಿಸಲು ಪ್ರಯತ್ನಿಸಬೇಡ. ಆ ನಿನ್ನ ಸ್ವಂತ ಇಚ್ಛೆ ಏನೇ ಇರಲಿ, ಅದು ನಿನ್ನ ಅವಿವೇಕತನದ ಕಣಿವೆ. ಅಲ್ಲಿ ನಿನಗೆ ಸಾವು ಮತ್ತು ಸರ್ವನಾಶ ಕಾದಿದೆ ಮತ್ತು ಅವನ ದೃಷ್ಟಿಗೆ ಬೀಳುವುದು ಮತ್ತು ಅವನಿಂದ ದೂರಾಗುವುದಾಗಿದೆ. ಸದಾ ಆತನ ಆಜ್ಞೆಗಳನ್ನು ಪರಿಪಾಲಿಸು. ಸದಾ ಆತನ ತಡೆಯಾಜ್ಞೆಗಳನ್ನು ಗೌರವಿಸು. ಮತ್ತು ಸದಾ ಅವನ ಅಧಿಕೃತ ಆಜ್ಞೆಗೆ ಏನಿದೆಯೋ ಅದನ್ನು ಸಲ್ಲಿಸು. ಅವನೊಂದಿಗೆ ಸೃಷ್ಟಿಯ ಯಾವ ಭಾಗವನ್ನು ಅವನೊಂದಿಗೆ ಜೊತೆಗೂಡಿಸಬೇಡ. (ಅಂದರೆ ಅವನಿಗೆ ಸರಿಸಮಾನರು ಯಾರು ಇಲ್ಲ ಎಂದರ್ಥ). ನಿನ್ನ ಇಚ್ಛೆ, ನಿನ್ನ ಆಸೆಗಳು ಮತ್ತು ನಿನ್ನ ಇಂದ್ರಿಯ ಸುಖದ ಹಸಿವುಗಳು ಎಲ್ಲವೂ ಆತನ ಸೃಷ್ಟಿಗೆ ಸೇರಿದ್ದು. ಆದುದರಿಂದ ಇದರಲ್ಲಿ ಯಾವುದಾದರೂ ನೀನು ಅವನೊಂದಿಗೆ ಜೊತೆಗೂಡಿಸಿದರೆ ನೀನು ದೇವರ ನಂಬುಗನಾಗುವೆ. (ಅಂದರೆ ದೇವರ ಆರಾಧನೆ ಹೊರತುಪಡಿಸಿ ಮನಸ್ಸಿನಲ್ಲಿ ಬೇರೆ ವಸ್ತುಗಳ ಆರಾಧನೆಯನ್ನು ಮಾಡುತ್ತಿದ್ದರೆ, ಅಂದರೆ ತನ್ನ ಆಸೆಗಳ ಗುಲಾಮನಾಗಿದ್ದರೆ ಆತ ದೇವರ ನಂಬುಗನಾಗುತ್ತಾನೆ) ದೇವರು ಹೇಳಿದ್ದಾನೆ :
ಯಾರು ತನ್ನ ದೇವರನ್ನು ಸೇರಲು ಭರವಸೆ ಇಡುತ್ತಾರೋ ಅವರು ಸತ್ಕಾರ್ಯ ಮಾಡಲಿ ಮತ್ತು ದೇವರೊಂದಿಗೆ ಯಾರನ್ನು ಹೋಲಿಸದಿರಲಿ (18: 110’ – ಪುತುಹ್ ಅಲ್ಗೈಬ್(ಹ.ಅಬ್ದುಲ್ ಖಾದಿರ್(ರ))
‘ಗೌಸ್-ಎ-ಆಜಮ್’ ಅವರ ಬಿರುದುಗಳಲ್ಲಿ ಪ್ರಮುಖವಾದುದು. ಷೇಖ್ ಅಥವಾ ಮುರ್ಶಿದ್ಗಳ(ಗುರು) ‘ಹಿರಿಯ ಗುರು’ ‘ಸಂತ ಸಾಮ್ರಾಜ್ಯದ ಚಕ್ರವರ್ತಿ’ ಎಂದೂ ಸಹ ಇವರನ್ನು ಕರೆಯಲಾಗುತ್ತದೆ. ಸಹಾಬಿ, ತಾಬಯೀನ್, ತಬತಾಬಯೀನ್, ಗೌಸ್, ಕುತುಬ್ ಮತ್ತು ಅಬ್ದಾಲ್ – ಇವು ಸೂಫಿ ಸಂತರ ದರ್ಜೆಗಳು. ಪ್ರವಾದಿವರ್ಯರ ಸಹಚರರನ್ನು ಸಹಾಬಿ ಎನ್ನುತ್ತೇವೆ. ಸಹಾಬರ ಹಿಂಬಾಲಕರನ್ನು ತಾಬಯೀನ್, ಇವರ ಹಿಂಬಾಲಕರನ್ನು ತಬತಾಬಯೀನ್ ಎನ್ನುತ್ತಾರೆ. ಇವರ ನಂತರ ಶರಿಅತ್ನಲ್ಲಿ ಪಾಂಡಿತ್ಯ ಪಡೆದು, ಆಧ್ಯಾತ್ಮದಲ್ಲಿ ಉತ್ತುಂಗ ತಲುಪಿದ್ದರೆ ಅವರನ್ನು ಆ ಕಾಲದ ‘ಗೌಸ್’ ಎಂಬ ದರ್ಜೆ ಅಥವಾ ಬಿರುದಿನಿಂದ ಪರಿಚಯಿಸಲಾಗುತ್ತಿತ್ತು. ಹೀಗೆಯೇ ಅವರ ದರ್ಜೆಯ ನಂತರ ಕುತುಬ್ ಮತ್ತು ಅಬಾಲ್ ಬರುತ್ತಾರೆ.
ಇವರ ಆಧ್ಯಾತ್ಮಿಕ ವಂಶವೃಕ್ಷ ಹ.ಅಲಿ(ರ)ರವರನ್ನು ಹಿಂಬಾಲಿಸುತ್ತದೆ. ರಕ್ತ ಸಂಬಂಧದಲ್ಲೂ ಸಹ ಇವರ ಮೂಲ ಹ. ಅಲಿ(ರ) ಮತ್ತು ಹ. ಫಾತಿಮಾ(ರ) ರವರೆಗೂ ತಲುಪುತ್ತದೆ.
ತಂದೆಯ ಪೀಳಿಗೆ ತಾಯಿಯ ಪೀಳಿಗೆ
ಹ. ಅಲಿ(ರ) ಹ. ಫಾತಿಮಾ(ರ)
ಹ. ಇಮಾಮ್ ಹಸನ್(ರ) ಹ. ಇಮಾಮ್ ಹುಸೇನ್(ರ)
ಹ. ಇಮಾಮ್ ಮಥ್ನಿ(ರ) ಹ. ಇಮಾಮ್ ಜೈನುಲ್ ಆಬಿದೀನ್(ರ)
ಹ. ಅಬ್ದುಲ್ ಮಹ್ದ್(ರ) ಹ. ಇಮಾಮ್ ಮುಹಮ್ಮದ್ ಬಾಖಿರ್(ರ)
ಹ. ಮೂಸ ಅಲ್ ಜಾವ್ನ್(ರ) ಹ. ಇಮಾಮ್ ಜಾಫರ್ ಸಾದಿಖ್(ರ)
ಹ. ಅಬ್ದುಲ್ಲಾ ಢಾನಿ(ರ) ಹ. ಇಮಾಮ್ ಮೂಸ ಕಾಜಿಂ(ರ)
ಹ. ಮೂಸ ಥಾನಿ(ರ) ಹ. ಶೇಕ್ ಅಲಿ ರಜಾ(ರ)
ಹ. ದಾವೂದ್(ರ) ಹ. ಅಬು ಅಲಾವುದ್ದೀನ್(ರ)
ಹ. ಮಹಮ್ಮದ್(ರ) ಹ. ಕಮಾಲುದ್ದೀನ್ ಈಸಾ(ರ)
ಹ. ಯಾಯ್ಹಾ ಅಜ್ಜಾಹಿದ್(ರ) ಹ. ಅಬುಲ್ ಅತಾ ಅಬ್ದುಲ್ಲಾ(ರ)
ಹ. ಅಬಿ ಅಬ್ದಿ ಲ್ಲೈ(ರ) ಹ. ಶೇಕ್ ಸಯ್ಯದ್ ಮಹ್ಮಮೂದ್(ರ)
ಹ. ಅಬು ಸಾಲೆಹ್ ಮೂಸ(ರ) ಹ. ಸಯ್ಯದ್ ಮುಹಮ್ಮದ್(ರ)
ಹ. ಸಯ್ಯದ್ ಅಬು ಜಮಾಲ್(ರ) ಹ. ಸಯ್ಯದ್ ಅಬ್ದುಲ್ಲಾ ಸೋಮಿ(ರ)
ಹ. ಸಯ್ಯದ್ ಅಬ್ದುಲ್ಲಾ ಸೋಮಿರವರು ತನ್ನ ಮಗಳ ವಿವಾಹವನ್ನು ಹ. ಅಬು ಸಾಲೆಹ್ ಮೂಸರವರೊಂದಿಗೆ ಮಾಡಿದರು. ಈ ಮಹಾನ್ ದಂಪತಿಗಳ ಸುಪುತ್ರನೇ ಹ. ಅಬ್ದುಲ್ ಖಾದಿರ್ ಜೀಲಾನಿ.
ಹ. ಮುಹಿಯುದ್ದೀನ್ ಅಬು ಮುಹಮ್ಮದ್ ಅಬ್ದುಲ್ ಖಾದಿರ್ ಜೀಲಾನಿ(ರ)
ಹ. ಅಬ್ದುಲ್ ಖಾದಿರ್ರವರು ಶರಿಅತ್ ಪರಿಪಾಲಕರಾಗಿದ್ದರು. ಆಧ್ಯಾತ್ಮದಲ್ಲಿ ಶಿಖರ ಮುಟ್ಟಿದ್ದರು. ಕೆಲವು ಸಮಯ ದೇವರ ಆರಾಧನೆಯಲ್ಲಿ ಎಷ್ಟು ಮಗ್ನರಾಗುತ್ತಿದ್ದರೆಂದರೆ ಅವರಿಗೆ ಜ್ಞಾನ ತಪ್ಪಿಹೋಗುತ್ತಿತ್ತು. ಎಷ್ಟೋ ಸಲ ಈ ಪರಿಸ್ಥಿತಿಯಲ್ಲಿ ಇವರು ನಿಧನರಾಗಿ ಹೋಗಿದ್ದಾರೆ ಎಂದು ಜನರು ಭಾವಿಸಿ ಅವರನ್ನು ಹೆಣದ ಹಲಗೆಯ ಮೇಲೆ ಮಲಗಿಸಿ ಸ್ನಾನ ಮಾಡಿಸಿರುವುದುಂಟು. ಅವರು ತಮ್ಮ ಅವಸ್ಥೆಯಿಂದ ಆ ಸಮಯದಲ್ಲಿ ಎಚ್ಚರಗೊಂಡಾಗ ಜನರಿಗೆ ಮತ್ತು ಇವರಿಗೆ ಆಶ್ಚರ್ಯವಾಗುತ್ತಿತ್ತು. 25 ವರ್ಷ ಅವರು ಇರಾಕಿನ ಕಾಡುಮೇಡುಗಳು ದೇವನ ಆರಾಧನೆಯಲ್ಲಿ ಅಲೆದರು. ನಂತರ ಪಟ್ಟಣಕ್ಕೆ ಬಂದು ಜನರಿಗೆ ಆಧ್ಯಾತ್ಮ ಜ್ಞಾನೋದಯ ಮಾಡುತ್ತಿದ್ದರು. ಅವರು ಪ್ರವಚನ ಮಾಡುವಾಗ ಈಗಿರುವಂತೆ ಮೈಕ್ಗಳು ಇರಲಿಲ್ಲ. ಅವರ ಪ್ರವಚನ ಕೇಳಲು ಸಹಸ್ರಾರು ಮಂದಿ ಸೇರುತ್ತಿದ್ದರು. ಪ್ರವಚನ ಕೇಳಲು ಮೊದಲನೆಯ ಪಂಕ್ತಿಯಲ್ಲಿ ಕುಳಿತಿರುವವರಿಗೆ ಎಷ್ಟು ಶುದ್ಧವಾಗಿ ಕೇಳಿಸುತ್ತದೆಯೋ, ಅತಿ ದೂರ, ಕೊನೆಯ ಪಂಕ್ತಿಯಲ್ಲಿ ಕುಳಿತಿರುವವರಿಗೂ ಅಷ್ಟೇ ಶುದ್ಧವಾಗಿ ಇವರ ಧ್ವನಿ ಕೇಳಿಸುತ್ತಿತ್ತು. ಹಿರಿಯರು ಹೇಳುತ್ತಾರೆ – ಅವರ ಪ್ರವಚನ ಕೇಳಲು 10 ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಿದ್ದರಂತೆ. ದೂರ ದೂರದವರೆಗೆ ಜನ ಕುಳಿತು ಪ್ರವಚನ ಕೇಳುತ್ತಿದ್ದರಂತೆ. ಮೈಕ್ ಇಲ್ಲದೆಯೇ ಪರಿಶುದ್ಧವಾಗಿ ಎಲ್ಲರಿಗೂ ಧ್ವನಿ ಕೇಳಿಸುವುದೆಂದರೆ ನಮ್ಮಂಥವರಿಗೆ ಆಶ್ಚರ್ಯ ಹುಟ್ಟಿಸುವಂಥಹ ಸಂಗತಿಯೆ. ಆದರೆ ದೇವರ ಸ್ನೇಹಿತರಿಗೆ ಯಾವುದೇ ಪವಾಡ ದೊಡ್ಡ ವಿಷಯವಲ್ಲ.
ಅವರು ಸೂಫಿಯಲ್ಲದೆ ವ್ಯಾಪಾರಿಯೂ ಸಹ ಆಗಿದ್ದರು. ಸರಕು ಸರಬರಾಜು ಮಾಡಲು ಅವರದೇ ಸ್ವಂತ, ಆಗಿನ ಕಾಲದ ದೋಣಿಗಳಿದ್ದವು. ಒಂದು ದಿನ ಹ. ಅಬ್ದುಲ್ ಖಾದಿರ್ರವರು ಪ್ರವಚನ ಮಾಡುತ್ತಿರುವಾಗ ಒಬ್ಬ ವ್ಯಕ್ತಿ ಬಂದು ಅವರಿಗೆ ವಿಷಯ ತಿಳಿಸುತ್ತಾನೆ. “ಸ್ವಾಮಿ, ಸಾಮಾನುಗಳ ಸಮೇತ ನಿಮ್ಮ ದೋಣಿಗಳು ಮುಳುಗಿ ಹೋದವಂತೆ.” ಆಗ ಸಂತರು ಏನೂ ಪ್ರತಿಕ್ರಿಯೆ ತೋರದೆ ತಮ್ಮ ಪ್ರವಚನ ಮುಂದುವರೆಸುತ್ತಾರೆ. ಕೆಲ ಸಮಯದ ನಂತರ ಪುನಃ ಒಬ್ಬ ವ್ಯಕ್ತಿ ಬಂದು “ನಿಮ್ಮ ದೋಣಿಗಳಿಗೆ ಏನೂ ನಷ್ಟವಾಗಿಲ್ಲವಂತೆ” ಎನ್ನುತ್ತಾನೆ. ಆಗಲೂ ಸಂತರು ಏನೂ ಹೇಳದೆ ತಮ್ಮ ಪ್ರವಚನ ಮುಂದುವರೆಸಿದರು.
ನಾವು ನಷ್ಟವಾದಾಗ ಅಥವಾ ಲಾಭವಾದಾಗ ಏನು ಮಾಡುತ್ತೇವೆ, ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಸಂತರ ವರ್ತನೆಯಿಂದ ತಿಳಿದುಬಂದ ವಿಷಯವೆಂದರೆ, ಅವರಿಗೆ ಪ್ರಾಪಂಚಿಕ ವಿಷಯಗಳು ದುಃಖ ಅಥವಾ ಸಂತೋಷ ನೀಡುತ್ತಿರಲಿಲ್ಲ. ಪ್ರಪಂಚವನ್ನು ಅವರು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಏನು ಆಗಬೇಕೆಂದಿದೆಯೋ ಅದು ದೇವರ ಇಚ್ಛೆಯಂತೆ ನಡೆದೇ ನಡೆಯುತ್ತದೆ ಎಂಬ ದೇವರಲ್ಲಿ ಅಪಾರ ನಂಬಿಕೆಯನ್ನೂ ಸಹ ಆ ಘಟನೆ ನಮ್ಮಲ್ಲಿ ಹುಟ್ಟಿಸುತ್ತದೆ. ಸೂಫಿಸಂತರ ಪ್ರಾರ್ಥನೆಗಳಿಂದ ನಮ್ಮ ಕಷ್ಟಗಳು ದೂರವಾಗುತ್ತವೆ. ಅದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅವರು ದೇವರ ಪ್ರಿಯರು. ರಾಜರುಗಳು ಸಹ ಸೂಫಿಸಂತರ ಆಶೀರ್ವಾದ ಪಡೆದು ಯುದ್ಧಗಳಿಗೆ ಹೋಗುತ್ತಿದ್ದರು. ಇದರಲ್ಲಿ ಅವರ ರಾಜಕೀಯವಿದ್ದರೂ ಸಂತರಲ್ಲಿ ಅಪಾರ ನಂಬಿಕೆ ಇತ್ತು ಎಂದು ತಿಳಿಯುತ್ತದೆ. ಚರಿತ್ರೆಯ ಪುಟಗಳಲ್ಲಿ ಅಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.
ಮುಸ್ಲಿಂ ವರ್ಷದ ನಾಲ್ಕನೆ ತಿಂಗಳು ಸಂತರ ಜಯಂತಿಯನ್ನು ಆಚರಿಸಲಾಗುತ್ತದೆ. ಅದಕ್ಕೆ ಕರ್ನಾಟಕದ ಹಳ್ಳಿ ಭಾಷೆಯಲ್ಲಿ ‘ಗ್ಯಾರ್ವೀ’ (ಹನ್ನೊಂದನೆಯ) ಎಂದು ಕರೆಯಲಾಗುತ್ತದೆ. ದಿನಾಂಕ 11ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಕೆಲವರು ಆ ಇಡೀ ತಿಂಗಳಲ್ಲಿ ಯಾವುದಾದರೂ ಒಂದು ದಿನ ಜಯಂತಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸುವವರು ಅನ್ನದಾನ ಮಾಡುತ್ತಾರೆ. ಮಲೇಶಿಯಾ, ಥೈಲ್ಯಾಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶ, ಅಮೇರಿಕ ಮುಂತಾದ ದೇಶಗಳಲ್ಲಿ ವರ್ಷಕ್ಕೊಮ್ಮೆ ಅವರ ಜಯಂತಿಯನ್ನು, ಧ್ಯಾನ, ಕೀರ್ತನೆಗಳ ಸಭೆಗಳನ್ನು ನಡೆಸುವ ಮೂಲಕ ಆಚರಿಸುವುದು ಜಾರಿಯಲ್ಲಿದೆ.
Zabiulla Khan
ನಮ್ಮಂಥ ಸಾಮಾನ್ಯ ಜನರಲ್ಲಿ ನಡೆ ಮತ್ತು ನುಡಿಯಲ್ಲಿ ವಿಭಿನ್ನತೆ ಇರುವುದುಂಟು. ಕೆಲವೊಮ್ಮೆ ನಾವು ನುಡಿದ ಹಾಗೆ ನಡೆಯುವುದಿಲ್ಲ. ನುಡಿಯುವುದು ಬಹಳ ಸುಲಭ ಆದರೆ ನಡೆಯುವುದು ಕಷ್ಟ ಸಾಧ್ಯದ ಕೆಲಸ. ಪ್ರತಿದಿನ ನಾವು ಮಾಧ್ಯಮಗಳಲ್ಲಿ ನೋಡುತ್ತೇವೆ, ಕೇಳುತ್ತೇವೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಭಾಷೆ ತಪ್ಪುತ್ತಾರೆ. ಮನಸ್ಸಿನಲ್ಲಿರುವುದೊಂದು ಜನರ ಮುಂದೆ ಹೇಳುವುದೇ ಒಂದು. ಕೆಲವೊಮ್ಮೆ ಬಾಯಿಯಿಂದ ಹೇಳುವುದೇ ಒಂದು, ಆದರೆ ನಡೆಯುವುದೇ ಒಂದು. ತಮ್ಮ ಅಂತರಂಗ ಬಹಿರಂಗದ ಜೊತೆ ಮೋಸ ಮಾಡುತ್ತದೆ. ತಮ್ಮ ಬಹಿರಂಗ ಸಮಾಜದ ಜೊತೆ ಮೋಸ ಮಾಡುತ್ತಿದೆ. ಹೊರಗೆ ನೋಡಲು ಕನ್ನಡಿಯಂತೆ ಪರಿಶುದ್ಧ ಚಾರಿತ್ರ್ಯ.
ಒಂದಿನ ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಪ್ರವಾದಿವರ್ಯರ ಸನ್ನಿಧಿಗೆ ಬರುತ್ತಾರೆ. ನನ್ನ ಮಗು ತುಂಬಾ ಸಿಹಿ ತಿನ್ನುತ್ತೆ, ಮಗುವಿಗೆ ಸ್ವಲ್ಪ ಬುದ್ಧಿವಾದ ಹೇಳಿ ಎನ್ನುತ್ತಾಳೆ. ಆಗ ಪ್ರವಾದಿವರ್ಯರು ಮೂರು ದಿನದ ನಂತರ ಬನ್ನಿ ಎಂದು ಕಳಿಸುತ್ತಾರೆ. ಮೂರು ದಿನ ಕಳೆದ ಬಳಿಕ ಆಕೆ ಪುನಃ ಮಗುವಿನೊಂದಿಗೆ ಬರುತ್ತಾಳೆ. ಆಗ ಪ್ರವಾದಿವರ್ಯರು ಮಗುವಿಗೆ ಸಿಹಿ ತಿನ್ನಬೇಡ ಎಂದು ಹೇಳಿದರು. ಆಗ ಮಹಿಳೆ ಕೇವಲ ಇಷ್ಟನ್ನು ಹೇಳುವುದಕ್ಕೆ ಮೂರು ದಿನ ತೆಗೆದುಕೊಂಡಿದ್ದೇಕೆ? ಅಂದೇ ಈ ಮಾತನ್ನು ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ಪ್ರವಾದಿವರ್ಯರು ನನಗೂ ಸಿಹಿ ಇಷ್ಟ. ನೀನು ಕೇಳಿದಾಗ ನಾನು ಸಿಹಿ ತಿನ್ನುವುದನ್ನು ಬಿಟ್ಟಿರಲಿಲ್ಲ. ಮೂರು ದಿನ ಸಿಹಿ ಬಿಡುವುದನ್ನು ಅಭ್ಯಾಸ ಮಾಡಿ ನಂತರ ಮಗುವಿಗೆ ತಿಳಿಹೇಳಿದ್ದೇನೆ ಎಂದು ನುಡಿಯುತ್ತಾರೆ. ಪ್ರವಾದಿವರ್ಯರ ಹದೀಸಿನ ಈ ಸಾರಾಂಶ ನಮಗೆ ಎಷ್ಟು ಸೂಕ್ಷ್ಮವಾದ ಪಾಠ ಹೇಳಿಕೊಡುತ್ತದೆ ಸ್ವಲ್ಪ ಯೋಚಿಸಿ.
ಪ್ರವಾದಿವರ್ಯರ ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರಲಿಲ್ಲ. ತಾನು ಮಾಡದ ಯಾವುದನ್ನೂ ಪರರಿಗೆ ಮಾಡಲು ಪ್ರೇರೇಪಿಸುತ್ತಿರಲಿಲ್ಲ.
ಓದುಗರಿಗೆ ದಾರಿದೀಪವಾಗುವಂತೆ ಹಲವರು ಹದೀಸ್(ಪ್ರವಾದಿವರ್ಯರ ವಚನಗಳು)ಗಳನ್ನು ಶಮ್ಸ್ ಪೀರ್ಜಾದಾ ಬರೆದಿರುವ ‘ವಚನಗಳು’ ಎಂಬ ಪುಸ್ತಕದಿಂದ ಆರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ವಾಸ್ತವದಲ್ಲಿ ಹದೀಸ್ಗಳು ಪವಿತ್ರ ಕುರ್ಆನ್ನ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು. ತರುವಾಯ ಅವು ಬುಖಾರಿ, ಮುಸ್ಲಿಂ, ತಿರ್ಮದಿ, ಅಬೂದಾವೂದ್, ನಸಾಈ, ಇಬ್ನುಮಾಜಃ, ಅಹ್ಮದ್ ಮುಂತಾದ ಹದೀಸ್ ಸಂಗ್ರಹ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು.
ಪ್ರವಾದಿವರ್ಯರು(ಸ) ಓರ್ವ ಪರ್ದಾಧಾರಿ ಕನ್ಯೆಗಿಂತಲೂ ಹೆಚ್ಚು ಲಜ್ಜೆಯುಳ್ಳವರಾಗಿದ್ದರು.
-ಅಬು ಸಈದ್ ಖುದ್ರಿ-ಬುಖಾರಿ.
ಲಜ್ಜೆ ಅಥವಾ ನಾಚಿಕೆಯು ಒಂದು ಶ್ರೇಷ್ಠ ನೈತಿಕ ಮೌಲ್ಯವಾಗಿದೆ. ಒಬ್ಬ ವ್ಯಕ್ತಿಯಲ್ಲಿ ಈ ಗುಣ ಇದ್ದರೆ ಅವನು ದುಷ್ಕøತ್ಯಗಳನ್ನು ಮಾಡಲು ಅಸಹ್ಯ ಪಡುವನು. ಅವನು ದುಷ್ಕøತ್ಯಗಳನ್ನು ನೋಡಲೂ ಸಹ ಇಷ್ಟಪಡಲಾರನು. ಆದ್ದರಿಂದ ಈ ಗುಣ ಮನುಷ್ಯನ ವ್ಯಕ್ತಿತ್ವ ಮತ್ತು ಚಾರಿತ್ರ್ಯವನ್ನು ಸುರಕ್ಷಿತವಾಗಿಡುವ ಸಾಧನವಾಗುತ್ತದೆ. ಮಹಿಳೆಯರ ಪಾಲಿಗೆ ಈ ಗುಣವೇ ಅವರ ಶೃಂಗಾರವಾಗಿದೆ.
ಈಗಿನ ಪ್ರಪಂಚದಲ್ಲಿ ನಮ್ಮ ಸುತ್ತಮುತ್ತಲ ಪರಿಸರ ಹೇಗಿದೆ ಎಂಬುದನ್ನು ಸ್ವಲ್ಪ ವೀಕ್ಷಿಸಿ. ಹಿರಿಯರ ಕಿರಿಯರ ಭೇದಭಾವವಿಲ್ಲದೆ ಕಿಂಚಿತ್ತೂ ನಾಚಿಕೆಯಿಲ್ಲದೆ ಅಶ್ಲೀಲ ಮಾತುಗಳನ್ನು ಆಡುತ್ತೇವೆ. ಅಶ್ಲೀಲ ಜಾಹಿರಾತುಗಳನ್ನು, ಚಿತ್ರಗಳನ್ನು, ಹಾಡುಗಳನ್ನು ಶಾಲೆಯ ಮಕ್ಕಳೂ ಸಹ ಯಾರ ಭಯವಿಲ್ಲದೆ ವೀಕ್ಷಿಸುತ್ತಾರೆ. ದಿನಗಳು ಕಳೆದಂತೆ ನಾಚಿಕೆಯ ಕೊಲೆಯಾಗುತ್ತಿದೆ. ಪ್ರಪಂಚದ ಎಲ್ಲಾ ಧರ್ಮದ ಜನರು ಈ ಪಿಡುಗಿಗೆ ಬಲಿಯಾಗಿದ್ದಾರೆ. ದೇವರ ಭಯದಿಂದ ಮಾತ್ರ ನಾಚಿಕೆ ಹುಟ್ಟಲು ಸಾಧ್ಯ.
ನಾಚಿಕೆಯ ಗುಣವು ಪ್ರವಾದಿವರ್ಯರಲ್ಲಿ(ಸ) ಗರಿಷ್ಠ ಪ್ರಮಾಣದಲ್ಲಿತ್ತು. ಅವರು ಲಜ್ಜೆ ಮತ್ತು ಸಂಕೋಚದ ಸಾಕಾರ ಮೂರ್ತಿಯಂತಿದ್ದರು. ಯಾವುದಾದರೂ ವಸ್ತು ಅವರಿಗೆ ಅಪ್ರಿಯವೆನಿಸಿದರೆ ಅವರ ಪ್ರಭಾವವು ತಕ್ಷಣವೇ ಅವರ ಮುಖಭಾವದಲ್ಲಿ ಕಾಣುತ್ತಿತ್ತು. ಅವರು ಇತರರ ಮುಂದೆಯಾಗಲಿ ಸಭೆಯಲ್ಲಾಗಲಿ ಯಾರಿಗೂ ರೋಚಕವಾಗುವಂತಹ ಮಾತುಗಳನ್ನು ಆಡುತ್ತಿರಲಿಲ್ಲ.
ನಾನು ಹತ್ತು ವರ್ಷ ಪ್ರವಾದಿ ಮುಹಮ್ಮದ್ರ(ಸ) ಸೇವಕನಾಗಿದ್ದೆ. ಅವರೆಂದೂ ನನಗೆ ‘ಉಫ್’ ಎಂದು ಹೇಳಿದ್ದಿಲ್ಲ. ಯಾವುದೇ ಕಾರ್ಯದ ಕುರಿತು ಅದನ್ನೇಕೆ ಮಾಡಿದೆ ಎಂದಾಗಲಿ ಯಾವುದೇ ಕಾರ್ಯ ಮಾಡದಿದ್ದರೆ ಅದನ್ನೇಕೆ ಮಾಡಿಲ್ಲ ಎಂದಾಗಲಿ ಅವರು ಕೇಳಿದ್ದಿಲ್ಲ.
-ಹ. ಅನಸ್(ರ) – ತಿರ್ಮದಿ
ಇದು ಪ್ರವಾದಿವರ್ಯರ(ಸ) ಉನ್ನತ ಚಾರಿತ್ರ್ಯದ ಕುರಿತು, ಹತ್ತು ವರ್ಷ ಅವರ ಸೇವೆಯಲ್ಲಿದ್ದ ಓರ್ವ ತರುಣನ ಸಾಕ್ಷ್ಯ. ಪ್ರವಾದಿವರ್ಯರು(ಸ) ತಮ್ಮ ವೈಯಕ್ತಿಕ ವಿಷಯಗಳಲ್ಲಿ ಅತ್ಯಂತ ಗಂಭೀರರೂ ಸೌಜನ್ಯಶೀಲರಾಗಿದ್ದರು. ಸಣ್ಣ ಪುಟ್ಟ ವಿಷಯಗಳ ಕುರಿತು ಅವರೆಂದೂ ವಿಚಾರಿಸುತ್ತಿರಲಿಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ.
ಓದುಗರಲ್ಲಿ ಕೆಲವರು ಯಜಮಾನರಾಗಿರಬಹುದು. ಅಥವಾ ಆಳಾಗಿ ಕೆಲಸ ನಿರ್ವಹಿಸುತ್ತಿರಬಹುದು. ಒಂದು ಸ್ವಲ್ಪವೂ ಹೆಚ್ಚು ಕಡಿಮೆಯಾದರೆ ಯಜಮಾನರ ವರ್ತನೆ ಅಥವಾ ಆಳಿನ ವರ್ತನೆ ಹೇಗಿರಬಹುದೆಂದು ನೀವು ಕಣ್ಣಾರೆ ನೋಡಿದ್ದೀರಿ. ಯಜಮಾನ ಆಳುಗಳೊಂದಿಗೆ ಎಷ್ಟು ಸಹನೆಯಿಂದಿರಬೇಕು, ಎಷ್ಟು ಪ್ರೀತಿ ತೋರಿಸಬೇಕು ಎಂಬುದು ಈ ಹದೀಸ್ನಿಂದ ಕಲಿತುಕೊಳ್ಳ ಬೇಕಾಗುತ್ತದೆ. ಎಲ್ಲರೂ ಸಮಾಜದಲ್ಲಿ ಸರಿಸಮಾನರು, ಯಾರ ಮೇಲೆ ದೌರ್ಜನ್ಯವೆಸಗಬಾರದು ಎಂಬ ಪಾಠ ತಿಳಿದುಕೊಳ್ಳಬೇಕಾಗುತ್ತದೆ.
ಪ್ರವಾದಿ ಮುಹಮ್ಮದರೊಡನೆ(ಸ) ಯಾವುದೇ ವಸ್ತು ಕೇಳಿದಾಗ ಅವರು ಎಂದೂ ಕೊಡಲು ನಿರಾಕರಿಸಿದ್ದಿಲ್ಲ.
-ಹ. ಜಾಬಿರ್(ರ) ಬುಖಾರಿ
ಇದು ಪ್ರವಾದಿವರ್ಯರು(ಸ) ಎಷ್ಟು ವಿಶಾಲ ಹೃದಯಿ, ಕೊಡುಗೈ ದಾನಿ ಮತ್ತು ಉನ್ನತ ಚಾರಿತ್ರ್ಯದವರಾಗಿದ್ದರು ಎಂಬುದನ್ನುಸೂಚಿಸುತ್ತದೆ ಎಂದೂ ಯಾರಿಗೂ ‘ಇಲ್ಲ’ ಎಂದು ಹೇಳದೆ ಇರಲು ಅಸಾಮಾನ್ಯ ಔನ್ನತ್ಯವಿರುವ ಅತ್ಯಂತ ಶ್ರೇಷ್ಠ ವ್ಯಕ್ತಿಗೆ ಮಾತ್ರ ಸಾಧ್ಯ.
ಕಷ್ಟ ಎನ್ನುವುದು ಬಡವರಿಗೆ, ಶ್ರೀಮಂತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬರುತ್ತದೆ. ನಮಗೆ ಸಹಾಯ ಮಾಡುವ ಅರ್ಹತೆಯಿದ್ದರೂ ಸಹಾಯ ಮಾಡದೆ ಇರುವುದು, ಬಹಳ ನಾಚಿಕೆ ಪಡುವಂಥದ್ದು. ಎರಡು ರೂಪಾಯಿಯ ವಸ್ತುವನ್ನು ಸಹ ಕೊಡಲು ಜನ ಹಿಂದು ಮುಂದು ನೋಡುತ್ತಾರೆ. ಸಾಯುವಾಗ 200 ಕೋಟಿ ಬಂಗಲೆ ಇದ್ದರೂ ಅದನ್ನು ಬಿಟ್ಟು ಹೋಗಬೇಕು ಎನ್ನುವುದನ್ನು ಮರೆತು ಬದುಕುತ್ತಿದ್ದಾರೆ. ಪರರಿಗೆ ಆದಷ್ಟು ಸಹಾಯ ಮಾಡಿ ಎನ್ನುವುದೇ ಮೇಲಿನ ಹದೀಸ್ ತಾತ್ಪರ್ಯವಾಗಿದೆ.
ಒಮ್ಮೆ ಜನರು ಒಂದು ಆಡನ್ನು ದಿಬ್ಬ ಮಾಡಿದರು. ಪ್ರವಾದಿವರ್ಯರು(ಸ) “ಅದರಲ್ಲಿ ಏನೆಲ್ಲಾ ಉಳಿದಿದೆ?” ಎಂದು ಕೇಳಿದರು “ಕೈಯ ಹೊರತು ಬೇರೇನೂ ಉಳಿದಿಲ್ಲ” ಎಂದು ನಾನು ಉತ್ತರಿಸಿದೆ. ಆಗ ಪ್ರವಾದಿವರ್ಯರು ಹೇಳಿದರು – “ಕೈಯ ಹೊರತು ಬೇರೆಲ್ಲಾ ಉಳಿಯಿತು.” -ಹ. ಆಯಿಶಾ(ರ) ತಿರ್ಮದಿ
ಅದನ್ನು ದಿಬ್ಬ ಮಾಡಿದ ಬಳಿಕ ಮಾಂಸವನ್ನೆಲ್ಲಾ ದಾನ ಮಾಡಲಾಗಿತ್ತು. ಕೇವಲ ಅದರ ಕೈ ಅಥವಾ ಮುಂದಿನ ಕಾಲೊಂದರ ಮಾಂಸವನ್ನು ಮಾತ್ರ ದಾನ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಪ್ರವಾದಿವರ್ಯರು(ಸ) ದೇವರ ಮಾರ್ಗದಲ್ಲಿ ಅವನ ಮೆಚ್ಚುಗೆಗಾಗಿ ದಾನ ಮಾಡಲಾದ ಸಂಪತ್ತೇ ನಿಜವಾದ ಉಳಿತಾಯ. ಏಕೆಂದರೆ ಅದು ಪರಲೋಕವೆಂಬ ಬ್ಯಾಂಕಿನಲ್ಲಿ ಸಂಗ್ರಹವಾಗುತ್ತದೆ. ಇಲ್ಲಿ ದಾನ ಮಾಡಿದ ವ್ಯಕ್ತಿಗೆ ಅಲ್ಲಿ ಅದರ ಪೂರ್ಣ ಪ್ರತಿಫಲ ದೊರೆಯುತ್ತದೆ. ಎಂಬ ವಾಸ್ತವಿಕತೆಯನ್ನು ತಿಳಿಸಿದರು.
ಕೋಟ್ಯಾಂತರ ರೂಪಾಯಿಗಳ ಮಾಂಸವನ್ನು ನಮ್ಮ ದೇಶ ರಫ್ತು ಮಾಡುತ್ತಿದೆ. ಪ್ರಾಣಿಗಳ ಚರ್ಮ ಸಹ ಬಹಳ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಎಲ್ಲಾ ವಸ್ತುಗಳ ಬೆಲೆಗಳು ಆಕಾಶಕ್ಕೇರಿವೆ. ಒಂದು ಕೆ.ಜಿ. ಅಕ್ಕಿಯ ಬೆಲೆ 40 ರೂಪಾಯಿ ಆದರೆ, ಒಂದು ಕೆ.ಜಿ ಮಾಂಸದ ಬೆಲೆ 340 ರೂಪಾಯಿ ಆಗಿದೆ. ಒಬ್ಬ ಕೂಲಿ ಆಳಿನ ಸಂಪಾದನೆ ದಿನಕ್ಕೆ 180 ರೂಪಾಯಿ. ಸಂಸಾರ ನಡೆಸುವುದು ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಿದೆ. ಯಾವ ಸರ್ಕಾರವೂ ಬಡವರಿಗೆ 100 ಗ್ರಾಂ ಮಾಂಸ ಇದುವರೆಗೂ ಹಂಚಿಲ್ಲ. ಬಡವರು ಮಾಂಸ ತಿನ್ನಲು ಬಯಸಿದರೆ ಅವರಿಗೆ ದಾನದ ರೀತಿಯಲ್ಲೇ ಸರಿ, ಮಾಂಸವನ್ನು ಕೊಡಿಸಿ. ನಮ್ಮ ದೇಶದಲ್ಲಿ ಇನ್ನೂ ಮನುಷ್ಯತ್ವ ಸತ್ತಿಲ್ಲ ಎಂದು ನಂಬಿದ್ದೇನೆ.
ಪ್ರವಾದಿ ಮುಹಮ್ಮದ್(ಸ) ನಿರಂತರ ಹಲವು ಇರುಳುಗಳನ್ನು ಹಸಿವಿನ ಸ್ಥಿತಿಯಲ್ಲೇ ಕಳೆಯುತ್ತಿದ್ದರು. ಅವರು ಸಾಮಾನ್ಯವಾಗಿ ತಿನ್ನುವ ರೊಟ್ಟಿಯು ಜೋಳದ್ದಾಗಿರುತ್ತಿತ್ತು. ಆದರೂ ಪ್ರವಾದಿ(ಸ) ಮತ್ತವರ ಮನೆಯವರಿಗೆ ರಾತ್ರಿಯ ಭೋಜನ ಲಭ್ಯವಾಗುತ್ತಿರಲಿಲ್ಲ.
– ಹ. ಇಬ್ನು ಅಬ್ಬಾಸ್ (ರ) – ತಿರ್ಮದಿ
ಪ್ರವಾದಿ(ಸ) ಮಲಗಲು ಬಳಸುತ್ತಿದ್ದ ಹಾಸಿಗೆಯು ಚರ್ಮದ್ದಾಗಿತ್ತು. ಅದರೊಳಗೆ ಖರ್ಜೂರದ ಎಲೆಗಳನ್ನು ತುಂಬಲಾಗಿತ್ತು.
-ಹ. ಆಯಿಶಾ(ರ) ತಿರ್ಮದಿ
ರಾಜನಂತೆ ಬದುಕುವ ಎಲ್ಲಾ ಅವಕಾಶಗಳಿದ್ದರು ಒಬ್ಬ ಫಕೀರನಂತೆ ಬದುಕಿದ ಇತಿಹಾಸದ ಅತ್ಯಂತ ಮಹಾನ್ ವ್ಯಕ್ತಿಯ ಬದುಕಿನ ಒಂದು ಪುಟ್ಟ ದೃಶ್ಯವಿದು. ಆಹಾರ, ವಸ್ತ್ರ, ವಸತಿ ಹೀಗೆ ಎಲ್ಲ ವಿಷಯಗಳಲ್ಲೂ ಪ್ರವಾದಿವರ್ಯರು ಸರಳತೆ ಮತ್ತು ಅನೌಪಚಾರಿಕತೆಯನ್ನು ಇಷ್ಟ ಪಡುತ್ತಿದ್ದರು. ತಮಗೆ ಸಿಕ್ಕಿದುದರಲ್ಲೇ ತೃಪ್ತಿ ಪಡುತ್ತಿದ್ದರು. ಸಿಕ್ಕಿದುದರಲ್ಲೂ ಬಹಳಷ್ಟನ್ನು ಉದಾರವಾಗಿ ಇತರರಿಗೆ ಕೊಟ್ಟು ಬಿಡುತ್ತಿದ್ದರು. ಆದ್ದರಿಂದಲೇ ಅವರ ಬಳಿ ಎಂದೂ ಸಂಪತ್ತು ಸಂಗ್ರಹವಾಗಲಿಲ್ಲ. ಅವರ ನಿತ್ಯದ ಆಹಾರದಲ್ಲಿ ಜೋಳದ ರೊಟ್ಟಿ ಮತ್ತು ಖರ್ಜೂರದಂತಹ ತೀರಾ ಸಾಮಾನ್ಯ ವಸ್ತುಗಳು ಮಾತ್ರ ಇರುತ್ತಿದ್ದವು. ಆದರೆ ಕೆಲವೊಮ್ಮೆ ಇವು ಕೂಡಾ ಲಭ್ಯವಾಗುತ್ತಿರಲಿಲ್ಲ. ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗಬೇಕಾಗುತ್ತಿತ್ತು. ಅವರ ಉಡುಗೆ-ತೊಡುಗೆಗಳು ಕೂಡಾ ತೀರಾ ಸರಳವಾಗಿದ್ದವು. ಆ ಕಾಲದ ಪದ್ಧತಿಯಂತೆ ಸಾಮಾನ್ಯವಾಗಿ ಒಂದು ಲುಂಗಿ ಮತ್ತು ಒಂದು ಹೊದಿಕೆಯನ್ನು ಮಾತ್ರ ಧರಿಸುತ್ತಿದ್ದರು. ಹಾಗೆಯೇ ಅವರ ಹಾಸಿಗೆ ಕೂಡ ಖರ್ಜೂರದ ಎಲೆಗಳಿಂದ ನಿರ್ಮಿತವಾಗಿತ್ತು. ಪ್ರವಾದಿವರ್ಯರು(ಸ) ಈ ಲೋಕದಿಂದ ತೆರಳುವಾಗ ಯಾವುದೇ ಧನವನ್ನು ಸಂಗ್ರಹಿಸಿ ಬಿಟ್ಟುಹೋಗಲಿಲ್ಲ. ಅವರ ರಕ್ಷಾ ಕವಚ ಕೂಡಾ ಒಬ್ಬ ಯಹೂದಿಯ ಬಳಿ ಒತ್ತೆ ಇಡಲ್ಪಟ್ಟಿತ್ತು. ಸರಳತೆ, ಅನೌಪಚಾರಿಕತೆ ಮತ್ತು ನಿರಪೇಕ್ಷತೆಗೆ ಎಷ್ಟೊಂದು ಉತ್ತಮ ಆದರ್ಶವಾಗಿದ್ದರು!
ಪ್ರವಾದಿವರ್ಯರು(ಸ) ಎಂತಹ ಸ್ಥಿತಿಯಲ್ಲಿ ಈ ಲೋಕದಿಂದ ತೆರಳಿದರೆಂದರೆ ಅವರೆಂದೂ ಒಂದು ದಿನದಲ್ಲಿ ಎರಡು ಬಾರಿ ಹೊಟ್ಟೆ ತುಂಬುವಷ್ಟು ರೊಟ್ಟಿಯನ್ನಾಗಲೀ ಕೊಬ್ಬಿನ ಆಹಾರ ಪದಾರ್ಥಗಳನ್ನಾಗಲೀ ತಿಂದಿರಲಿಲ್ಲ.
-ಹ. ಆಯಿಶಾ(ರ)-ಮುಸ್ಲಿಂ
ಪ್ರವಾದಿ ಮುಹಮ್ಮದ್ರವರ(ಸ) ಮನೆಯವರಾದ ನಾವು ಕೆಲವೊಮ್ಮೆ ತಿಂಗಳುಗಟ್ಟಲೆ ಮನೆಯಲ್ಲಿ ಒಲೆ ಉರಿಯದಂತಹ ಸ್ಥಿತಿಯಲ್ಲಿ ಕಳೆಯಬೇಕಾಗುತ್ತಿತ್ತು. ನಾವು ಕೇವಲ ಖರ್ಜೂರ ಮತ್ತು ನೀರನ್ನು ಸೇವಿಸಿ ಬದುಕುತ್ತಿದ್ದೆವು.
ನಮ್ಮ ಜೀವನವನ್ನು ಸ್ವಲ್ಪ ಕಲಕಿ ನೋಡೋಣ. ಮದುವೆ ಮುಂಜಿ ಅಥವಾ ನಮ್ಮ ಸಮಾರಂಭಗಳಲ್ಲಿ ವಿಧವಿಧವಾದ ಭೋಜನಗಳನ್ನು ಅವಶ್ಯಕತೆಗಿಂತ ಹೆಚ್ಚಾಗಿ ತಯಾರಿಸಿ ಕೊನೆಗೆ ಅದನ್ನು ಕಸದ ತೊಟ್ಟಿಯಲ್ಲಿ ಬಿಸಾಡುತ್ತೇವೆ. ಸಮಾರಂಭಗಳಲ್ಲಿ ಬಡವರಿಗೆ ಆಹ್ವಾನವಿಲ್ಲ. ಮರ್ಯಾದೆ ಕಳೆದುಹೋಗುತ್ತದೆ ಎನ್ನುವ ಭಯ. ನಾಲ್ಕು ದಿನಗಳ ಬಾಳಿನಲ್ಲಿ ಸಾವನ್ನೇ ಮರೆತಿರುವ ಜನ. ಸಮಾರಂಭಗಳ ವಿಷಯ ಹಾಗಿರಲಿ, ಮನೆಗಳಲ್ಲಂತೂ ಇನ್ನೂ ಕೆಟ್ಟ ವಾತಾವರಣ. ಪಕ್ಕದ ಮನೆಯವರು ಒಂದು ಬೆಂಕಿಕಡ್ಡಿ ಕೇಳಿದರೂ ಕೊಡದ ಜನ. ತಮ್ಮ ಪ್ರಿಡ್ಜ್ಗಳಲ್ಲಿ ಆಹಾರ ಕೊಳೆಯುತ್ತಿದ್ದರೂ ಬಡವರಿಗೆ ಸಹಾಯಹಸ್ತ ಚಾಚದ ಕೈಗಳು. ದೇವರು ಸಾಕಷ್ಟು ಕೊಡುತ್ತಿದ್ದರು. ಇನ್ನೂ ಬೇಕೆನ್ನುವ, ಮುಗಿಯಲಾರದ ಆಸೆಗಳು.
ಹೆಂಡತಿಯ ಪ್ರೀತಿ ಬಡತನದಲ್ಲಿ ತಿಳಿಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕಷ್ಟಕಾಲದಲ್ಲಿ ಅವಳಿಗೆ ಸಂಸಾರ ನಡೆಸಲು ಸಹನಾಶಕ್ತಿ ಇರುವುದಿಲ್ಲ. ಎರಡು ಹೊತ್ತು ಊಟ ಸಿಗದೆ ಹೋದಾಗ ಮನೆ ಬಿಟ್ಟು ಓಡಿಹೋಗುವಳು. ಮಕ್ಕಳು ಬೀದಿಪಾಲಾದರೂ ಚಿಂತೆ ಇಲ್ಲ.
ನಮ್ಮ ದೇಶದಲ್ಲಿ ಬಡತನ ರೇಖೆಯ ಕೆಳಗೆ ಲಕ್ಷಾಂತರ ಜನರು ಬದುಕುತ್ತಿದ್ದಾರೆ. ಎಲ್ಲಾ ತೊಂದರೆಗಳನ್ನು ಸರ್ಕಾರವೇ ನಿವಾರಿಸಲು ಸಾಧ್ಯವಿಲ್ಲ. ಬಡತನ ನಿವಾರಿಸಲು ಪ್ರಜೆಗಳು ಸಹ ಆದಷ್ಟು ಮುಂದೆ ಬರಬೇಕು.
ಸೂಫಿ ಸಂತರಲ್ಲಿ ಪ್ರವಾದಿವರ್ಯರ(ಸ) ಗುಣವಿತ್ತು. ಈಗಲೂ ಇದೆ. ಅವರು ತಾವು ತಿನ್ನದೆಹೋದರೂ ಪರರಿಗೆ ತಮ್ಮ ಪಾಲಿನ ಅನ್ನವನ್ನು ತಿನ್ನಿಸುತ್ತಾರೆ. ಕೈಲಾದಷ್ಟು ಸಹಾಯ ಮಾಡುತ್ತಾರೆ. ಇನ್ನು ಮುಂದೆ ಹಸಿದವರಿಗೆ ನಾವು ಸಹ ಸಹಾಯ ಮಾಡೋಣ.
ಒಮ್ಮೆ ಪ್ರವಾದಿ ಮುಹಮ್ಮದ್(ಸ) ಒಂದು ಚಾಪೆಯಲ್ಲಿ ಮಲಗಿದ್ದರು. ಎದ್ದಾಗ ಅವರ ಶರೀರದಲ್ಲಿ ಚಾಪೆಯ ಗುರುತುಗಳಿದ್ದವು. ಇದನ್ನು ಕಂಡು ನಾವು, ದೇವರ ಸಂದೇಶ ವಾಹಕರೇ, ನಾವು ತಮಗಾಗಿ ಮೃದುವಾದ ಹಾಸಿಗೆಯನ್ನು ತಂದೊದಗಿಸಿದರೆ ತೊಂದರೆ ಏನಿದೆ? ಎಂದು ಕೇಳಿದೆವು. ಆಗ ಅವರು ಹೇಳಿದರು- “ಈ ಲೋಕದೊಂದಿಗೆ ನನಗೇನು ಸಂಬಂಧ? ನನಗೆ ಲೋಕದ ಜೊತೆಗೆ ಇರುವ ಸಂಬಂಧ ಒಬ್ಬ ಪ್ರಯಾಣಿಕನು ಯಾವುದಾದರೂ ಮರದ ನೆರಳಲ್ಲಿ ಸ್ವಲ್ಪ ಹೊತ್ತು ತಂಗಿ ಆ ಬಳಿಕ ಅದನ್ನು ಬಿಟ್ಟು ಹೊರಟು ಹೋಗುವಷ್ಟು ಮಾತ್ರ”
-ಹ. ಅಬ್ದುಲ್ಲಾ ಖಾನ್ ಮಸ್ಊದ್ – ತಿರ್ಮದಿ
ಮನುಷ್ಯನು ಆರಾಮಪ್ರಿಯನಾಗಿ ಬಿಟ್ಟಾಗ ಲೋಕವು ಅವನ ಮೇಲೆ ಸವಾರಿ ಮಾಡತೊಡಗುತ್ತದೆ. ಆ ಬಳಿಕ ಅವನು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವ ವಿಷಯದಲ್ಲಿ ಕರ್ತವ್ಯ ಪ್ರಜ್ಞೆಯನ್ನು ತೋರಿಸುವ ಬದಲು ಸೋಮಾರಿತನವನ್ನು ಪ್ರದರ್ಶಿಸಲಾರಂಭಿಸುತ್ತಾನೆ. ಪ್ರವಾದಿವರ್ಯರು(ಸ) ಸ್ವಾಭಾವಿಕವಾಗಿಯೇ ಶ್ರಮಜೀವಿಯಾಗಿದ್ದರು. ಕಠಿಣ ದುಡಿಮೆಯನ್ನು ಇಷ್ಟ ಪಡುವವರಾಗಿದ್ದರು. ಅವರ ಜೀವನ ಒಬ್ಬ ಯೋಧನ ಜೀವನವಾಗಿತ್ತು. ಬದುಕಿನ ಸೌಲಭ್ಯಗಳ ವಿಷಯದಲ್ಲಿ ಅವರು ಸಿಕ್ಕಿದುದರಲ್ಲಿ ತೃಪ್ತಿ ಪಡುವ ನಿಲುವಿನವರಾಗಿದ್ದರು. ಯಾವುದೇ ಬಗೆಯ ಔಪಚಾರಿಕತೆಯನ್ನು ಅವರು ಮೆಚ್ಚುತ್ತಿರಲಿಲ್ಲ. ಈ ಲೋಕದಲ್ಲಿ ಮನುಷ್ಯನ ಜೀವನ ಹೇಗಿರಬೇಕೆಂಬ ಬಗ್ಗೆ ಅವರು ನೀಡಿರುವ ಉದಾಹರಣೆಯು ಒಂದು ದೊಡ್ಡ ವಾಸ್ತವಿಕತೆಯನ್ನು ವಿವರಿಸುತ್ತದೆ. ಈ ವಾಸ್ತವಿಕತೆಯು ಒಬ್ಬ ಮನುಷ್ಯನಿಗೆ ಸರಿಯಾಗಿ ಮನವರಿಕೆಯಾಗಿ ಬಿಟ್ಟರೆ ಅವನೆಂದೂ ಈ ಲೋಕದ ಸುಖಭೋಗ ಮತ್ತು ಸೌಲಭ್ಯಗಳ ಹಿಂದೆ ಅಲೆಯಲಾರನು. ಸಿಕ್ಕಿದುದರಲ್ಲಿ ಸಂತೃಪ್ತಿಯಾಗಿ ತನ್ನ ಕರ್ತವ್ಯಗಳಿಗೆ ನಿಷ್ಠನಾಗಿ ಬಾಳುವನು.
ನಾನು ಹ. ಆಯಿಶಾರೊಡನೆ(ರ) “ಪ್ರವಾದಿವರ್ಯರು(ಸ) ಮನೆಯಲ್ಲಿರುವಾಗ ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದೆ, ಅವರು ಹೇಳಿದರು- “ಅವರು ಮನೆಯವರ ಸೇವೆಯಲ್ಲಿ ನಿರತರಾಗಿರುತ್ತಿದ್ದರು ಮತ್ತು ನಮಾಜ್ನ ಸಮಯವಾದಾಗ ನಮಾಜ್ಗಾಗಿ ಎದ್ದು ಹೊರಡುತ್ತಿದ್ದರು.”
-ಹ. ಅಸ್ವದ್ – ಬುಖಾರಿ
ಲೋಕದಲ್ಲಿ ಪ್ರವಾದಿವರ್ಯರಿಗಿಂತ(ಸ) ಉನ್ನತ ಸ್ಥಾನಮಾನದ ವ್ಯಕ್ತಿ ಬೇರೆ ಯಾರಿದ್ದಾರೆ? ಇಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಕೂಡಾ ತಮ್ಮ ಮನೆಯವರ ಕೆಲಸ ಕಾರ್ಯಗಳಲ್ಲಿ ನೆರವಾಗುವುದನ್ನು ಮತ್ತು ತಮ್ಮ ಮನೆಯವರಿಗೆ ಸೇವೆ ಸಲ್ಲಿಸುವುದನ್ನು ಕೀಳಾದ ಕೆಲಸವೆಂದು ಪರಿಗಣಿಸಲಿಲ್ಲ. ನಿಜವಾಗಿ ಸೇವೆಯು ಮನುಷ್ಯನ ಸ್ಥಾನಮಾನ ಹೆಚ್ಚಿಸುತ್ತದೆಯೇ ಹೊರತು ಕಡಿಮೆಗೊಳಿಸುವುದಿಲ್ಲ. ಅಹಂಕಾರಿಗಳು ಮಾತ್ರ ಸೇವೆಯನ್ನು ತಮಗೆ ಕುಂದೆಂದು ಪರಿಗಣಿಸುತ್ತಾರೆ. ವಿನಯಶೀಲ ಮನುಷ್ಯನು ತನ್ನ ಜೊತೆಗಾರರಿಗೆ ಸೇವೆ ಸಲ್ಲಿಸುವ ಮೂಲಕ ಅವರ ಮನಸ್ಸನ್ನು ಗೆಲ್ಲುತ್ತಾನೆ. ಅವರ ಪ್ರೀತಿ ಗೌರವಗಳಿಗೆ ಪಾತ್ರನಾಗುತ್ತಾನೆ.
ಪ್ರವಾದಿ ಮುಹಮ್ಮದ್ರವರ(ಸ) ರಕ್ಷಾ ಕವಚವು 60 ಬೊಗಸೆ ಜೋಳಕ್ಕಾಗಿ ಒಬ್ಬ ಯಹೂದಿಯ ಬಳಿ ಒತ್ತೆ ಇಡಲ್ಪಟ್ಟ ಸ್ಥಿತಿಯಲ್ಲಿ ಅವರು ನಿಧನರಾದರು.
-ಹ. ಆಯಿಶಾ – ಬುಖಾರಿ
ಪ್ರವಾದಿವರ್ಯರು ನಿಧನರಾಗುವ ವೇಳೆಗೆ ಸಂಪೂರ್ಣವಾಗಿ ಅರಬ್ ದೇಶಗಳು ಇಸ್ಲಾಮೀ ಆಧಿಪತ್ಯಕ್ಕೆ ಅಧೀನವಾಗಿತ್ತು. ಪ್ರವಾದಿವರ್ಯರ(ಸ) ಅಸಂಖ್ಯಾತ ಸಂಗಡಿಗರು ಅವರಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿ ಬಿಡಲು ಉತ್ಸುಕರಾಗಿದ್ದರು. ಆದರೂ ಪ್ರವಾದಿವರ್ಯರು(ಸ) ಎಷ್ಟೊಂದು ಸ್ವಾಭಿಮಾನಿ, ಎಷ್ಟೊಂದು ಉದಾರಿ ಹಾಗೂ ಎಷ್ಟು ಸರಳರಾಗಿದ್ದರೆಂದರೆ ಅವರು ತಮ್ಮ ವೈಯಕ್ತಿಕ ಬಳಕೆಗಾಗಿ ಚಿಕ್ಕಾಸನ್ನೂ ಸಂಗ್ರಹಿಸಿಡಲಿಲ್ಲ.
ಪ್ರವಾದಿವರ್ಯರು(ಸ) ಹೀಗೆ ಹೇಳಿರುವರು- “ನಿಮ್ಮ ಪೈಕಿ ಯಾರ ಚಾರಿತ್ರ್ಯವು ಅತ್ಯುತ್ತಮವಾಗಿದೆಯೋ ಅವರೇ ನಿಮ್ಮ ಪೈಕಿ ಅತ್ಯುತ್ತಮರು.”
-ಹ. ಅಬ್ದುಲ್ಲಾ ಬಿನ್ ಅಮ್ರ್(ರ)-ಮುಸ್ಲಿಂ
ಒಬ್ಬ ಮನುಷ್ಯನ ಸ್ಥಾನಮಾನವು ಅವನ ಚಾರಿತ್ರ್ಯದ ಆಧಾರದಲ್ಲೇ ನಿರ್ಧರಿಸಲ್ಪಡಬೇಕು ಮತ್ತು ಚಾರಿತ್ರ್ಯವೇ ಒಬ್ಬ ಮನುಷ್ಯನನ್ನು ಪರೀಕ್ಷಿಸುವ, ಅಳೆಯುವ ಮಾನದಂಡವಾಗಿರಬೇಕು. ಈ ಯುಗದಲ್ಲಿ ಚಾರಿತ್ರ್ಯ ಮತ್ತು ನೈತಿಕತೆಗಳ ಬೆಲೆ ಅರಿತಿರುವವರ ಸಂಖ್ಯೆ ಕಡಿಮೆ. ದೇವ ಭಯದ ವಿಶೇಷತೆಯೇನೆಂದರೆ ಅದು ಮನುಷ್ಯನನ್ನು ದೇವನು ಮೆಚ್ಚದಂತಹ ದುಷ್ಕøತ್ಯಗಳಿಂದ ದೂರವಿಡುತ್ತದೆ. ಸದಾ ಒಳಿತಿನ ಮಾರ್ಗದಲ್ಲೇ ನಡೆಯುವಂತೆ ಅವನನ್ನು ಪ್ರೇರೇಪಿಸುತ್ತದೆ. ಸಚ್ಚಾರಿತ್ರ್ಯವು ಮನುಷ್ಯನನ್ನು ತನ್ನ ಸಹಜೀವಿಗಳೊಂದಿಗೆ ಅತ್ಯುತ್ತಮವಾಗಿ ವರ್ತಿಸಲು ಹಾಗೂ ಅವರಿಗೆ ಸಂಬಂಧಿಸಿದ ತನ್ನ ಬಾಧ್ಯತೆಗಳನ್ನು ಈಡೇರಿಸಲು ಪ್ರೇರೇಪಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಬಾಯಿ ಮತ್ತು ತನ್ನ ಗುಪ್ತಾಂಗವನ್ನು ನಿಯಂತ್ರಣದಲ್ಲಿಡದಿದ್ದರೆ ಮತ್ತು ಅವುಗಳನ್ನು ಧರ್ಮಬಾಹಿರವಾದ ಕಾರ್ಯಗಳಿಗಾಗಿ ಬಳಸಿದರೆ ಈ ಅಂಗಗಳೇ ಅವನನ್ನು ನರಕಕ್ಕೆ ಕಳುಹಿಸಲು ಪರ್ಯಾಪ್ತವಾಗುತ್ತದೆ. ಅಂತಹ ವ್ಯಕ್ತಿ ಚಾರಿತ್ರ್ಯಹೀನವಾಗಿ ಅನೈತಿಕ ಚಟುವಟಿಕೆಗಳಲ್ಲಿ ನಿರತನಾಗಿ ಬಿಡುತ್ತಾನೆ. ಆದುದರಿಂದ ತಮ್ಮ ಬಾಯಿ ಮತ್ತು ಗುಪ್ತಾಂಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬಯಸುವವರು ತಮ್ಮಲ್ಲಿ ದೇವ ಭಯ ಮತ್ತು ಸಚ್ಚಾರಿತ್ರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು- “ಖಂಡಿತವಾಗಿಯೂ ದೇವರು ನಿಮ್ಮ ರೂಪಗಳನ್ನೂ ಸಂಪತ್ತನ್ನೂ ನೋಡುವುದಿಲ್ಲ. ಅವನು ನಿಮ್ಮ ಮನಸ್ಸುಗಳನ್ನು ನಿಮ್ಮ ಕರ್ಮಗಳನ್ನು ನೋಡುತ್ತಾನೆ.”
-ಹ. ಅಬೂಹುರೈರ:(ರ) -ಮುಸ್ಲಿಂ
ಒಬ್ಬ ವ್ಯಕ್ತಿ ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬುದು ಅವನು ನೋಡಲು ಎಷ್ಟು ಸುಂದರವಾಗಿದ್ದಾನೆ ಅಥವಾ ಅವನ ಬಳಿ ಸಂಪತ್ತು ಎಷ್ಟಿದೆ ಎಂಬುದನ್ನು ಅವಲಂಬಿಸಿಲ್ಲ. ನಿಜವಾಗಿ ಇದು ಮನಸ್ಸಿನ ಸ್ಥಿತಿ ಮತ್ತು ಅವನ ಕರ್ಮಗಳ ಗುಣಮಟ್ಟದ ಆಧಾರದಲ್ಲಿ ಮಾತ್ರ ನಿರ್ಣಯಿಸಲ್ಪಡುತ್ತದೆ. ಯಾರಾದರೂ ತಮ್ಮ ವರ್ಣ, ಸೌಂದರ್ಯ ಅಥವಾ ಶ್ರೀಮಂತಿಕೆಯ ಬಗ್ಗೆ ಅಭಿಮಾನ ಪಡುತ್ತಾರೆಂದರೆ ಅದೊಂದು ಅರ್ಥಹೀನ ಅಭಿಮಾನವೆನಿಸುವುದು. ಏಕೆಂದರೆ, ಚಾರಿತ್ರ್ಯದ ಸೌಂದರ್ಯವೇ ನಿಜವಾದ ಸೌಂದರ್ಯವೂ ಸದ್ಗುಣಗಳ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯೂ ಆಗಿದೆ. ದೇವರ ದೃಷ್ಟಿಯಲ್ಲಿ ಮನುಷ್ಯನ ಶ್ರೇಷ್ಠತೆಯು ಅವನ ಮನ:ಸ್ಥಿತಿ ಹಾಗೂ ಕರ್ಮಗಳನ್ನು ಅವಲಂಬಿಸಿದೆ. ನಿಷ್ಕಳಂಕ ಮನಸ್ಸು ಹಾಗೂ ಸದ್ಗುಣ ಸಂಪನ್ನ ಚಾರಿತ್ರ್ಯ ಉಳ್ಳವನೇ ದೇವರ ದೃಷ್ಟಿಯಲ್ಲಿ ಪುರಸ್ಕಾರ ಯೋಗ್ಯನಾಗಿರುತ್ತಾನೆ. ಈ ವೈಶಿಷ್ಟ್ಯಗಳಿಲ್ಲದ ಒಬ್ಬ ವ್ಯಕ್ತಿ ಎಷ್ಟೇ ಸುಂದರನಾಗಿದ್ದರೂ ಆರ್ಥಿಕವಾಗಿ ಎಷ್ಟೇ ಶ್ರೀಮಂತನಾಗಿದ್ದರೂ ದೇವರ ದೃಷ್ಟಿಯಲ್ಲಿ ಅವನಿಗೆ ಯಾವ ಬೆಲೆಯೂ ಇಲ್ಲ.
ಪ್ರವಾದಿವರ್ಯರು(ಸ) ಹೀಗೆ ಹೇಳಿರುವರು – “ಸತ್ಯವನ್ನು ಅನುಸರಿಸಿರಿ,ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ, ಒಳಿತು ಸ್ವರ್ಗದೆಡೆಗೆ ಒಯ್ಯುತ್ತದೆ. ಮನುಷ್ಯನು ಸತ್ಯವನ್ನೇ ಹೇಳುತ್ತಾ, ಸತ್ಯವನ್ನೇ ಅನುಸರಿಸುತ್ತಾ ಇದ್ದರೆ ಕೊನೆಗೊಮ್ಮೆ ಅಲ್ಲಾಹನ(ದೇವರ) ಬಳಿ ಅವನನ್ನು ಪರಮ ಸತ್ಯವಂತ ಎಂದು ಬರೆದಿಡಲಾಗುತ್ತದೆ. ಸುಳ್ಳಿನಿಂದ ದೂರವಿರಿ. ಸುಳ್ಳು ಕೆಡುಕಿನೆಡೆಗೆ ಕೊಂಡೊಯ್ಯುತ್ತದೆ ಮತ್ತು ಕೆಡುಕು ನರಕದೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯನು ಸುಳ್ಳನ್ನೇ ಹೇಳುತ್ತಿದ್ದರೆ ಮತ್ತು ಸುಳ್ಳನ್ನೇ ಅನುಸರಿಸುತ್ತಿದ್ದರೆ ಕೊನೆಗೊಮ್ಮೆ ದೇವರ ಬಳಿ ಅವನನ್ನು ಪರಮ ಸುಳ್ಳುಗಾರ ಎಂದು ಬರೆದಿಡಲಾಗುತ್ತದೆ.”
-ಹ. ಅಬ್ದುಲ್ಲಾ ಬಿನ್ ಮಸ್ಊದ್(ರ) – ಮುಸ್ಲಿಂ
ಇಸ್ಲಾಮೀ ನೀತಿಶಾಸ್ತ್ರದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಮೂಲಭೂತ ಮಹತ್ವವಿದೆ. ಸತ್ಯವು ಸಚ್ಚಾರಿತ್ರ್ಯದ ತಳಹದಿಯಾಗಿದೆ. ಸದಾ ಸತ್ಯವನ್ನೇ ಹೇಳುವವನು ಮತ್ತು ಸತ್ಯವನ್ನು ಅಂಗೀಕರಿಸಲು ಸದಾ ಸಿದ್ಧನಾಗಿರುವವನು ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಇರುತ್ತಾನೆ. ನಮ್ಮ ಕೋರ್ಟ್ಗಳಲ್ಲಿ ಗ್ರಂಥದ ಮೇಲೆ ಕೈಯಿಟ್ಟು ಆಣೆ ಮಾಡುತ್ತಾರೆ, ಆದರೆ ನುಡಿಯುವುದೆಲ್ಲಾ ಶುದ್ಧ ಸುಳ್ಳು. ಇನ್ನೂ ಕೆಲವರು ಸುಳ್ಳು ಹೇಳುವುದನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಸುಳ್ಳು ಹೇಳಿ ಪರರಿಗೆ ಟೋಪಿ ಹಾಕುತ್ತಾರೆ. ತಾನು ಮಹಾ ಬುದ್ಧಿವಂತ ಎಂಬ ಭ್ರಮೆಯಲ್ಲಿ ಮುಳುಗಿರುತ್ತಾರೆ. ಸುಳ್ಳು ಮನಷ್ಯನಲ್ಲಿ ದುಷ್ಟ ಭಾವನೆಗಳನ್ನು ಬೆಳೆಸುತ್ತದೆ. ಅವು ಅವನನ್ನು ಅತ್ಯಂತ ಹೀನಚಾರಿತ್ರ್ಯದವನನ್ನಾಗಿ ಮಾರ್ಪಡಿಸುತ್ತದೆ.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು: “ಮನುಷ್ಯರ ಮೇಲೆ ಕರುಣೆ ತೋರದ ವ್ಯಕ್ತಿಯ ಮೇಲೆ ಅಲ್ಲಾಹನು (ದೇವರು) ಕರುಣೆ ತೋರಿಸುವುದಿಲ್ಲ.”
-ಹ. ಜಾಬಿರ್ ಬಿನ್ ಅಬ್ದುಲ್ಲಾ (ರ) -ಬುಖಾರಿ.
ಈ ಸಂಕ್ಷಿಪ್ತ ಹಾಗೂ ಪ್ರಭಾವಶಾಲಿ ವಚನಗಳಲ್ಲಿ ಜನರಿಗೆ, ಅವರು ತಮ್ಮ ಸಹಜೀವಿ ಮನುಷ್ಯರ ಜೊತೆ ಕರುಣೆ ಹಾಗೂ ವಾತ್ಸಲ್ಯದೊಂದಿಗೆ ವರ್ತಿಸಬೇಕೆಂದು ಪ್ರೇರಣೆ ಕೊಡಲಾಗಿದೆ. ವಿಶ್ವಾನುಗ್ರಹಿ ಎಂಬ ಬಿರುದಾಂಕಿತ ಪ್ರವಾದಿವರ್ಯರು(ಸ) ಮಾನವ ಕುಲಕ್ಕೆ ಸಾರ್ವತ್ರಿಕ ಕರುಣೆಯ ಧೋರಣೆಯನ್ನು ಬೋಧಿಸಿದರು. ಅವರ ಬೋಧನೆಯಂತೆ ಒಬ್ಬ ಮನುಷ್ಯನು ಯಾವ ಮತ-ಧರ್ಮಕ್ಕೆ ಸೇರಿದವನಾಗಿದ್ದರೂ ಮನುಷ್ಯನೆಂಬ ನೆಲೆಯಲ್ಲಿ ಕರುಣೆ ಮತ್ತು ವಾತ್ಸಲ್ಯಕ್ಕೆ ಅರ್ಹನಾಗಿರುತ್ತಾನೆ. ಜನರೊಂದಿಗೆ ಕ್ರೂರವಾಗಿ ವರ್ತಿಸಿ, ಅನ್ಯಾಯವೆಸಗಿ, ಮಾನವೀಯ ಸಂಬಂಧಗಳನ್ನು ಮುರಿದುಕೊಳ್ಳುವುದರಿಂದ ದೇವರು ತನ್ನ ಕರುಣೆಯ ಸಂಬಂಧವನ್ನು ಮುರಿದುಕೊಳ್ಳುತ್ತಾನೆ. ಮನುಷ್ಯನ ಕರ್ಮ ಮತ್ತು ವರ್ತನೆ ಯಾವ ರೀತಿ ಇರುವುದೋ ಅದೇ ರೀತಿ ಫಲಿತಾಂಶವನ್ನು ಅವನು ಪಡೆದುಕೊಳ್ಳುವನು. ಕರುಣೆಯಿಂದ ವಂಚಿತನಾಗಿರುವ ವ್ಯಕ್ತಿ ಒಳಿತಿನಿಂದಲೇ ವಂಚಿತನಾಗಿದ್ದಾನೆಂದು ಅರ್ಥ. ಇಂತಹ ಕರುಣೆಯಿಲ್ಲದ ವ್ಯಕ್ತಿ ಮಾನವಕುಲದ ಪಾಲಿಗೆ ಹಾನಿಕಾರಕನಾಗುತ್ತಾನೆ.
ಒಮ್ಮೆ ದಾರಿಯಲ್ಲಿ ಪ್ರವಾದಿವರ್ಯರ(ಸ) ಸಹಚರರು ಹಕ್ಕಿಯ ಗೂಡಿನಿಂದ ಎರಡು ಮರಿಗಳನ್ನು ಹಿಡಿದು ತಮ್ಮ ಜೊತೆಯಲ್ಲಿ ತಂದರು. ತಾಯಿ ಹಕ್ಕಿ ಗೂಡಲ್ಲಿ ತನ್ನ ಮರಿಗಳನ್ನು ಕಾಣದೆ ಹುಡುಕಾಡತೊಡಗಿತು. ಆ ಹಕ್ಕಿ ಹಾರುತ್ತ ಬಂದು ಪ್ರವಾದಿವರ್ಯರ (ಸ) ತಲೆ ಮೇಲೆ ಕಿರುಚಾಡುತ್ತ ಹಾರತೊಡಗಿತು. ಆಗ ಪ್ರವಾದಿವರ್ಯರು(ಸ) ಯಾರು ಈ ಹಕ್ಕಿಯ ಮರಿಗಳನ್ನು ಎತ್ತ್ತಿಕೊಂಡು ಬಂದಿದ್ದು ಎಂದು ಕೇಳಿ, ತಕ್ಷಣ ಹಿಂತಿರುಗಿಸುವಂತೆ ಆದೇಶಿಸಿದರು. ಸಹಚರರು ಹಾಗೆಯೇ ಮಾಡಿದರು. ಪ್ರವಾದಿವರ್ಯರು(ಸ) ಕೇವಲ ಮನುಷ್ಯ ಸಮಾಜಕ್ಕೆ ಮಾತ್ರ ಕರುಣೆ ತೋರಿಸುವುದಷ್ಟೇ ಅಲ್ಲ, ಪ್ರಾಣಿ ಸಮಾಜದ ಮೇಲೂ ಕರುಣೆ ತೋರಿಸಬೇಕು ಎಂದು ಹೇಳಿಕೊಟ್ಟರು. (10/10/10 ಕಿಖಿಗಿ – ಆಡಿ. ಖಿಚಿhiಡಿuಟ ಕಿಚಿಜಡಿi)
ಇಂದು ಪ್ರಪಂಚದಲ್ಲಿ ಭಯೋತ್ಪಾದನೆಯ ಬಿರುಗಾಳಿ ಭುಗಿಲೆದ್ದಿದೆ. ಅಮೆರಿಕದ ಈಃI ಪ್ರಕಾರ (ಈbi.gov) ಮುಸ್ಲಿಂ ಭಯೋತ್ಪಾದಕರು 6% ಇದ್ದರೆ ಉಳಿದ 94% ಭಾಗ ಮುಸ್ಲಿಮೇತರರು ಆಗಿದ್ದಾರೆ. ಲ್ಯಾಟಿನೋಸ್ 42%, ಎಕ್ಸ್ಟ್ರೀಮ್ ಲೆಫ್ಟ್ ವಿಂಗ್ ಗ್ರೂಪ್ಸ್ 24%, ಯಹೂದಿ ಎಕ್ಸಿಟ್ರೀಮಿಸ್ಟ್ 7%, ಕಮ್ಯುನಿಸ್ಟ್ 5% ಮತ್ತು ಉಳಿದ ಭಯೋತ್ಪಾದಕ ಸಂಘಟನೆಗಳು 16% ಭಾಗವಾಗಿದ್ದಾರೆ. (Souಡಿಛಿe : ಆಚಿiಟಥಿ ಖಿiಣಚಿಟಿ – Sಚಿbಡಿiಟಿಚಿ Pಚಿಡಿಞ)
ಭಯೋತ್ಪಾದಕರು ಯಾವುದೇ ದೇಶದವರಾಗಿರಲಿ, ಯಾವುದೇ ಜಾತಿಗೆ ಸೇರಿದವರಾಗಿರಲಿ ಅವರು ಭಯೋತ್ಪಾದಕರೆ. ಭಯೋತ್ಪಾದಕರ ಧರ್ಮವಿಲ್ಲ. ಏಕೆಂದರೆ ಯಾವುದೇ ಧರ್ಮ ನೀವು ಅಮಾಯಕರ ಕೊಲೆ ಮಾಡಿ ಎಂದು ಹೇಳುವುದಿಲ್ಲ. ನಾಲ್ಕು ದಿನದ ಈ ಪ್ರಪಂಚದಲ್ಲಿ ಶಾಂತಿಯಿಂದ ಬಾಳುವುದನ್ನು ಕಲಿತುಕೊಳ್ಳಬೇಕು. ತನ್ನ ಕುತಂತ್ರಗಳಿಗೆ ಧರ್ಮದ ಪಟ್ಟ ಕಟ್ಟಿ, ಧರ್ಮಗಳ ಹೆಸರನ್ನು ಬಲಿ ತೆಗೆದುಕೊಳ್ಳುವುದು ಸರಿಯಲ್ಲ. ಶ್ರೀ ಕೃಷ್ಣ ಯುದ್ಧ ಮಾಡಿದ್ದು ನ್ಯಾಯಕ್ಕಾಗಿ, ಪ್ರವಾದಿವರ್ಯರು(ಸ) ಯುದ್ಧ ಮಾಡಿದ್ದು ನ್ಯಾಯಕ್ಕಾಗಿ. ಅದಕ್ಕೆ ತನ್ನದೇ ಆದ ಚರಿತ್ರೆ ಇದೆ. ನಕ್ಸಲರ, ಸಿಖ್ಖರ, ಎಲ್ಟಿಟಿಯವರ ಹೋರಾಟದ ಫಲ ಏನಾಯಿತು, ಏನಾಗುತ್ತಿದೆ ಎಂದು ಆಗಲೇ ಪ್ರಪಂಚ ಕಂಡಿದೆ. ಬಂದೂಕಿನಿಂದ ಶಾಂತಿ ಹುಟ್ಟುವುದಿಲ್ಲ. ಯುದ್ಧ ಯುದ್ಧವನ್ನು ಸೃಷ್ಟಿಸುತ್ತದೆ. ನಷ್ಟ ಯಾರಿಗೆ? ಜನಸಾಮಾನ್ಯರಿಗೆ ಮಾತ್ರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಜನಸಾಮಾನ್ಯರ ಗೋಳು ಕೇಳುವವರಾರು? ದೇವರೇ ಪ್ರಪಂಚದಲ್ಲಿ ಶಾಂತಿ ನೆಲೆಸುವಂತೆ ಮಾಡು. ಪ್ರವಾದಿವರ್ಯರು(ಸ) ತಾವು ಜಯಗೊಳಿಸಿದ ದೇಶಗಳ ಜನರ ಮೇಲೆ ಕರುಣೆಯಿಂದ ವರ್ತಿಸಬೇಕು, ಅವರನ್ನು ಇಸ್ಲಾಮ್ ಧರ್ಮ ಸೇರಲು ಬಲಾತ್ಕರಿಸಬಾರದು, ಅವರ ಆಸ್ತಿ-ಪಾಸ್ತಿ ಕೊಳ್ಳೆಹೊಡೆಯಬಾರದು. ಅವರ ಪವಿತ್ರ ಸ್ಥಳಗಳನ್ನು ಹಾಳು ಮಾಡಬಾರದು. ಜನರ ಸ್ಥಾನಮಾನಕ್ಕೆ ಧಕ್ಕೆಯುಂಟುಮಾಡಬಾರದು. ಅನ್ಯಾಯವಾಗಿ ವರ್ತಿಸಬಾರದು. ಅವರ ಹಕ್ಕುಗಳನ್ನು ಕಬಳಿಸಬಾರದು. ಬಡಬಗ್ಗರಿಂದ ತೆರಿಗೆ ತೆಗೆದುಕೊಳ್ಳಬಾರದು. ವೃದ್ಧರಿಗೆ ಸಹಾಯ ಧನ ನೀಡಬೇಕು. ಅವರ ಹಬ್ಬ-ಹರಿದಿನಗಳಲ್ಲಿ ಅಡಚಣೆ ಮಾಡಬಾರದು. ಅವರು ವಾದ್ಯ ಬಾರಿಸಿದರೆ ತಡೆಯಬಾರದು. ಅವರು ತಮ್ಮ ಹಿಂದಿನ ರಾಜ್ಯಾಡಳಿತದಲ್ಲಿ ಹೇಗೆ ಸುಖ ಶಾಂತಿಯಿಂದ, ನೆಮ್ಮದಿಯಿಂದ, ಸ್ವತಂತ್ರವಾಗಿ ಬದುಕುತ್ತಿದ್ದರೋ ಅದೇ ರೀತಿ ಬದುಕಲು ಅವಕಾಶಗಳನ್ನು ಕಲ್ಪಿಸಬೇಕು ಎಂದು ಆದೇಶ ಹೊರಡಿಸಿದರು. ಇಂತಹ ಕರುಣೆಯುಳ್ಳ ಕರುಣಾಮಯಿಗೆ ಕೋಟಿ ಕೋಟಿ ಸಲಾಮು. (11/10/10 – ಕಿಖಿಗಿ – ಆಡಿ. ಖಿಚಿhiಡಿuಟ ಕಿಚಿಜಡಿi)
ಪ್ರವಾದಿವರ್ಯರು(ಸ) ಹೇಳಿದ್ದಾರೆ : “ಅಲ್ಲಾಹನು (ದೇವರು) ಪುನರುತ್ಥಾನದ ದಿನದಂದು, ‘ಆದಮನ ಪುತ್ರನೇ! ನಾನು ರೋಗಿಯಾಗಿದ್ದೆ. ನೀನು ನನ್ನ ಸಂದರ್ಶನ ಮಾಡಲಿಲ್ಲ’ ಎನ್ನುವನು. ಆಗ ಮನುಷ್ಯನು ‘ನನ್ನ ಪ್ರಭೂ! ನಾನದೆಂತು ನಿನ್ನ ಸಂದರ್ಶನ ಮಾಡಬಲ್ಲೆ? ನೀನಾದರೋ ಸಕಲ ವಿಶ್ವದ ಒಡೆಯನಾಗಿರುವೆ’ ಎಂದು ಹೇಳುವನು. ಆಗ ದೇವರು ‘ನನ್ನ ಇಂತಿಂತಹ ದಾಸನು ರೋಗಪೀಡಿತನಾಗಿದ್ದನು. ಆದರೆ ನೀನು ಅವನ ಸಂದರ್ಶನ ಮಾಡಲಿಲ್ಲ. ನೀನು ಅವನ ಸಂದರ್ಶನಕ್ಕೆ ಹೋಗಿರುತ್ತಿದ್ದರೆ ಅಲ್ಲಿ ನನ್ನನ್ನು ಕಾಣುತ್ತಿದ್ದೆ ಎಂಬುದು ನಿನಗೆ ತಿಳಿದಿರಲಿಲ್ಲವೇ?’ ‘ಆದಮನ ಪುತ್ರನೇ! ನಾನು ನಿನ್ನಿಂದ ಆಹಾರ ಬೇಡಿದ್ದೆ. ಆದರೆ ನೀನು ನನಗೆ ಉಣಬಡಿಸಲಿಲ್ಲ’ ಎಂದು ಹೇಳಿದನು. ಆಗ ಮನುಷ್ಯನು ‘ನನ್ನ ಪ್ರಭೂ ನಿನಗೆ ನಾನು ಹೇಗೆ ಉಣಿಸಲಿ. ನೀನಂತೂ ಸಕಲ ವಿಶ್ವದ ಒಡೆಯನಾಗಿರುವೆ’ ಎನ್ನುವನು. ಆಗ ದೇವರು, ‘ನಿನಗೆ ತಿಳಿದಿಲ್ಲವೇ, ನನ್ನ ಇಂತಿತಹ ದಾಸನು ನಿನ್ನಿಂದ ಆಹಾರ ಕೇಳಿದ್ದನು. ಆದರೆ ನೀನು ಅವನಿಗೆ ಆಹಾರ ನೀಡಲಿಲ್ಲ. ನೀನು ಅವನಿಗೆ ಉಣಬಡಿಸಿದ್ದರೆ ಅದನ್ನು (ಅದರ ಫಲವನ್ನು) ಇಂದು ನನ್ನ ಬಳಿ ಕಾಣುತ್ತಿದ್ದೆ. ‘ಆದಮನ ಪುತ್ರನೇ! ನಾನು ನಿನ್ನಿಂದ ನೀರು ಕೇಳಿದ್ದೆ, ಆದರೆ ನೀನು ನನಗೆ ನೀರು ಕುಡಿಸಲಿಲ್ಲ’- ಎಂದು ಹೇಳುವನು. ಆಗ ಮನುಷ್ಯನು ‘ನನ್ನ ಪ್ರಭೂ, ನಾನು ಅದಾವ ರೀತಿಯಲ್ಲಿ ನಿನಗೆ ನೀರು ಕುಡಿಸಬಲ್ಲೆ? ನೀನಾದರೋ ಸಕಲ ವಿಶ್ವದ ಒಡೆಯನಾಗಿರುವೆ’ ಎನ್ನುವನು. ಆಗ ದೇವರು ಹೇಳುವನು ‘ನನ್ನ ಇಂತಿಂತಹ ದಾಸನು ನಿನ್ನಿಂದ ನೀರು ಕೇಳಿದ್ದನು. ಆದರೆ ನೀನು ಅವನಿಗೆ ನೀರು ಕುಡಿಸಲಿಲ್ಲ. ನೀನು ಅವನಿಗೆ ನೀರು ಕುಡಿಸಿದ್ದಿದ್ದರೆ ಇಂದು ಅದನ್ನು (ಅದರ ಫಲವನ್ನು) ನನ್ನ ಬಳಿ ಕಾಣುತ್ತಿದ್ದೆ.’
-ಹ. ಅಬೂಹುರೈರಃ(ರ) – ಮುಸ್ಲಿಂ
ಇದೊಂದು ಕುದ್ಸಿ ಹದೀಸ್ (ದೇವ ವಚನವನ್ನು ತಿಳಿಸುವ ಪ್ರವಾದಿ ವಚನ) ಆಗಿದೆ. ದೇವರು ಸಕಲ ಅಗತ್ಯಗಳಿಂದಲೂ, ದೌರ್ಬಲ್ಯಗಳಿಂದಲೂ ಸಂಪೂರ್ಣ ಮುಕ್ತನಾಗಿದ್ದು ಪರಮ ಪಾವನನಾಗಿರುವನು. ರೋಗವಾಗಲೀ, ಹಸಿವಾಗಲೀ ಅವನನ್ನು ಬಾಧಿಸುತ್ತಿರಲಿಲ್ಲ. ಪ್ರಸ್ತುತ ಹದೀಸ್ನಲ್ಲಿ ದೇವರು ಅನುಸರಿಸಿರುವ ವಿಶಿಷ್ಟ ಧಾಟಿಯು ಇದರಲ್ಲಿ ಪ್ರಸ್ತಾಪಿಸಲಾಗಿರುವಂತಹ ಸತ್ಕಾರ್ಯಗಳಿಗೆ ಅವನ ದೃಷ್ಟಿಯಲ್ಲಿ ಎಷ್ಟು ಮಹತ್ವವಿದೆ ಎಂಬುದನ್ನು ಸೂಚಿಸುತ್ತದೆ. ರೋಗಿಯ ಸಂದರ್ಶನ, ಬಡವನಿಗೆ ಉಣಬಡಿಸುವುದು, ಬಾಯಾರಿದವನಿಗೆ ನೀರು ಕುಡಿಸುವುದು ಇವೆಲ್ಲಾ ದೇವರು ಮೆಚ್ಚುವ ಮತ್ತು ಗೌರವಿಸುವ ಸತ್ಕರ್ಮಗಳಾಗಿವೆ. ದಾಸರಾದ ನಾವು ಕೂಡಾ ಈ ಕಾರ್ಯಗಳ ಮಹತ್ವವನ್ನು ಅರಿಯುವವರಾಗಿರಬೇಕು ಮತ್ತು ಕೇವಲ ದೇವರ ಸಂಪ್ರೀತಿಗಾಗಿ ಈ ಕಾರ್ಯಗಳನ್ನು ಮಾಡಬೇಕು. ಇವುಗಳ ಮೂಲಕ ನಾವು ಅವನ ಸಂಪ್ರೀತಿಯನ್ನೂ, ಸಾಮೀಪ್ಯವನ್ನೂ ಸಂಪಾದಿಸಬಹುದು.
ರೋಗಿಯ ಸಂದರ್ಶನ ಮತ್ತು ಆರೈಕೆಯು ಮಾನವೀಯ ಅನುಕಂಪದ ಕಾರ್ಯವಾಗಿದೆ. ಹಾಗೆಯೇ ಹಸಿದವರಿಗೆ ಉಣಬಡಿಸುವುದು ಮತ್ತು ಬಾಯಾರಿದವರಿಗೆ ನೀರು ಕುಡಿಸುವುದು ಮಾನವೀಯ ಹಾಗೂ ಸಮಾಜ ಸೇವೆಯ ಕಾರ್ಯಗಳಾಗಿವೆ. ಆದರೆ ಇವೆಲ್ಲಾ ಆಡಂಬರಕ್ಕಾಗಿ ಅಥವಾ ಔಪಚಾರಿಕವಾಗಿ ಮಾಡಬೇಕಾದ ಕೆಲಸಗಳಲ್ಲ. ಕೆಲ ರಾಜಕೀಯ ವ್ಯಕ್ತಿಗಳು ರೋಗಿಗಳ ಬಳಿ ಹೋಗಿ, ಎರಡು ಕಿತ್ತಲೆ, ಎರಡು ಸೇಬು ಕೊಟ್ಟು ತನ್ನ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಹಾಕಿಸಿ, ನಾನು ಮಹಾ ಸಮಾಜಸೇವಕ ಎಂದು ಪ್ರಚಾರ ಮಾಡಿಕೊಳ್ಳುತ್ತಾರೆ.
ರೋಗಗಳಿಂದ ಬಳಲುತ್ತಿರುವ ಜನರು ಪಟ್ಟಣಗಳ ಆಸ್ಪತ್ರೆಗಳಿಗೆ ಸೇರುವುದು ಸಹಜ. ರೋಗಿಗಳು ನಮ್ಮ ನೆಂಟಸ್ಥರೂ ಆಗಿರಬಹುದು. ರೋಗಿಯ ಉಸ್ತುವಾರಿ ಪಟ್ಟಣದ ಆಸ್ಪತ್ರೆಗಳಲ್ಲಿ ಅಷ್ಟು ಸುಲಭವಲ್ಲ. ಅಸಹಾಯಕತೆ ಅವರಿಗೆ ಕಾಡುತ್ತಿರುತ್ತದೆ. ಹೊಸ ವಾತಾವರಣ ಬೇರೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಸಹಾಯಹಸ್ತ ಚಾಚುವುದು ಕೇವಲ ಪುಣ್ಯದ ಕೆಲಸವಲ್ಲ, ಮಾನವೀಯತೆಯ ಹಕ್ಕೂ ಸಹ ಆಗುತ್ತದೆ. ರೋಗಿಗೆ ರಕ್ತ ಬೇಕೋ, ಆಹಾರ ಬೇಕೋ, ಹಣ ಬೇಕೋ ಅಥವಾ ಕೇವಲ ನನ್ನವರು ಎಂಬ ಸಹಾಯ ಬೇಕೋ – ಎಂಬುದನ್ನು ಅರಿತುಕೊಳ್ಳ ಬೇಕು. ಅರಿತುಕೊಳ್ಳಲು ಸಂದರ್ಶನ ಮುಖ್ಯ. ಅಲ್ಲಿ ಹೋದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಭಯ ಬೇರೆ. ನಿಮಗೆ ನಾಳೆ ಅದೇ ರೋಗ ಬರಬಹುದು. ಆಗ ನಿಮಗೆ ಸ್ವಲ್ಪ ಬುದ್ಧಿ ಬರಬಹುದು. ಹೋದ ಕಾಲ ಮತ್ತೆ ಬರುವುದಿಲ್ಲ. ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ.
ಹಳೇ ಕಾಲದಲ್ಲಿ ಊರಿನ ಶ್ರೀಮಂತರು ಬಡಬಗ್ಗರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಊರಲ್ಲಿ ಬಾವಿಯನ್ನು ತೋಡಿಸುತ್ತಿದ್ದರಂತೆ. ಈಗ ಏನಾಗುತ್ತಿದೆ ನಿಮಗೇ ಗೊತ್ತು. ಎಲ್ಲಿ ಹೋಯಿತು ಆ ಸಮಾಜಸೇವೆಯ ಭಾವನೆ! ಈಗ ಕಲ್ಪನೆಗೆ ಕೂಡ ಬರುತ್ತಿಲ್ಲ. ಬೀದಿ ನಲ್ಲಿಗಳ ಹತ್ತಿರ ನೂರಾರು ಬಿಂದಿಗೆಗಳು, ನೀರಿಗಾಗಿ ಕಿತ್ತಾಟ, ಇದೇ ಪ್ರತಿದಿನದ ಗೋಳಾಗಿಹೋಗಿದೆ. ಕೆಲವು ಕಡೆ ಒಂದು ಬಿಂದಿಗೆ ನೀರು 5 ರೂಪಾಯಿಗೆ ಮಾರಾಟವಾಗುತ್ತಿದೆ. ಸಮಾಜಸೇವೆ ಮಾಯವಾಗಿದೆ. ಒಂದು ದಿನ ನಾವೂ ಮಾಯವಾಗಬೇಕು ಎಂಬುದನ್ನು ಮರೆತರೆ ಸರಿಯೇ?
ನಾಲ್ಕನೇ ಕಲೀಫರಾದ ಹ. ಅಲಿ(ರ)ರವರ ಮನೆಗೆ ಏಳು ದಿನಗಳು ಕಳೆದರೂ ಯಾರೂ ಬರಲಿಲ್ಲವಂತೆ. ಆಗ ಹ. ಅಲಿರವರು(ರ) ಕಣ್ಣೀರು ಸುರಿಸಿ, ಏಕೆ ಯಾರೂ ಅತಿಥಿ ಬರುತ್ತಿಲ್ಲ? ಅತಿಥಿ ಸತ್ಕಾರದ ಭಾಗ್ಯ ಏಕೆ ಸಿಗುತ್ತಿಲ್ಲ? ಎಂದು ಕೊರಗಿದರಂತೆ. ಪ್ರತಿದಿನ ಒಬ್ಬ ಅತಿಥಿಯನ್ನು ಕರೆದು, ಅವರ ಮನೆಯಲ್ಲಿ ಊಟ ಉಣಬಡಿಸುತ್ತಿದ್ದರಂತೆ.
ಮನೆಗಳ ಮುಂದೆ ಹಿಂದಿನ ಕಾಲದಲ್ಲಿ ‘ಅತಿಥಿ ದೇವೋಭವ’ ಎಂದು ಬರೆಯಲಾಗುತ್ತಿತ್ತು. ಈಗ ‘ನಾಯಿ ಇದೆ ಎಚ್ಚರಿಕೆ’ ಎಂದು ಬರೆಯಲಾಗುತ್ತಿದೆ. ಅಂದು ಕಡು ಬಡತನದಲ್ಲೂ ಜನ ಅತಿಥಿ ಸತ್ಕಾರ ಬಿಡುತ್ತಿರಲಿಲ್ಲ. ಇಂದು ನಮ್ಮ ಬಳಿ ದೇವರು ಕೊಟ್ಟಿರುವ ಎಲ್ಲಾ ಸೌಕರ್ಯಗಳಿವೆ. ಆದರೆ ಅನ್ನದಾನ ಮಾಡುವ ಮನಸ್ಸು ಕಲ್ಲಾಗಿಹೋಗಿದೆ.
ಮೇಲಿನ ಹದೀಸ್ನಲ್ಲಿ ಜನಸೇವೆಯ ಮಹತ್ವವನ್ನು ಎತ್ತಿ ತೋರಿಸಲಾಗಿದೆ. ಆತ್ಮವಿಮರ್ಶೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಪುನಃ ಏನೂ ಪಡೆಯಲು ಇಚ್ಛಿಸದೆ ಕೊಡುವವನೇ ಸೂಫಿ. ಪ್ರಾಪಂಚಿಕ ಆಸೆಗಳನ್ನು ಮನಸ್ಸಿನಿಂದ ಕಿತ್ತೊಗೆದವನೇ ಸೂಫಿ ಎಂದು ಹ. ಇಬ್ರಾಹಿಂ ಆದಂ(ರ)ರವರು ಹೇಳಿದ್ದಾರೆ.
ಬಡವರ ಮುರಿದ ಹೃದಯಗಳಲ್ಲಿ ದೇವರಿದ್ದಾನೆ ಎಂದು ಹ. ಅಬ್ದುಲ್ ಖಾದಿರ್ ಜೀಲಾನಿ(ರ) ಹೇಳಿದ್ದಾರೆ.
ಇಂತಹ ಮಹಾನ್ ಸೂಫಿಗಳು ಪ್ರವಾದಿವರ್ಯರಿಂದ(ಸ) ಅದೆಂತಹ ಸಮಾಜಸೇವೆಯ ಪಾಠವನ್ನು ಕಲಿತಿದ್ದರು ಎಂದು ಅರಿವಾಗುತ್ತದೆ.
ಪ್ರವಾದಿವರ್ಯರು(ಸ) ತಮ್ಮ ತೋರು ಬೆರಳು ಮತ್ತು ನಡು ಬೆರಳನ್ನು ಎತ್ತಿ ತೋರಿಸುತ್ತಾ, “ಅನಾಥರನ್ನು ಪೋಷಿಸುವವನು ಮತ್ತು ನಾನು ಸ್ವರ್ಗದಲ್ಲಿ ಈ ರೀತಿ ಇರುವೆವು ಎಂದು ಹೇಳಿದರು. – ಸಹಲ್ ಬಿನ್ ಸಅದ್
ಈ ಹದೀಸ್ನಲ್ಲಿ ಪ್ರವಾದಿವರ್ಯರು(ಸ) ಅನಾಥ ರಕ್ಷಕರಿಗೆ ಸ್ವರ್ಗದ ಸುವಾರ್ತೆ ನೀಡಿದರು. ತೋರು ಬೆರಳು ಮತ್ತು ನಡು ಬೆರಳುಗಳು ಪರಸ್ಪರ ಬಹಳ ನಿಕಟವಾಗಿರುವಂತೆ, ತಾವು ಮತ್ತು ಅನಾಥ ಸಂರಕ್ಷಕರು ಸ್ವರ್ಗದಲ್ಲಿ ಪರಸ್ಪರ ಬಹಳ ನಿಕಟರಾಗಿರುವೆವೆಂದು ಅವರು ಹೇಳಿರುವರು.
ಅನಾಥ ಮಕ್ಕಳು ದುರ್ಬಲರಾಗಿದ್ದು ಸಾಮಾನ್ಯವಾಗಿ ಅವರಿಗೆ ಸಂರಕ್ಷಣೆಯ ತೀವ್ರ ಅವಶ್ಯಕತೆ ಇರುತ್ತದೆ. ಅವರ ರಕ್ಷಣೆ ಮತ್ತು ಪೋಷಣೆ ಬಹಳ ಪುಣ್ಯದ ಕಾರ್ಯವಾಗಿದೆ. ಪವಿತ್ರ ಕುರ್ಆನ್ನಲ್ಲಿ ಅಲ್ಲಲ್ಲಿ ಅತ್ಯಂತ ಪರಿಣಾಮಕಾರಿ ಮಾತುಗಳಲ್ಲಿ ಅನಾಥರಿಗೆ ಅವರ ಹಕ್ಕುಗಳನ್ನು ನೀಡಬೇಕೆಂದು ಮತ್ತು ಅವರಿಗೆ ನೆರವಾಗಬೇಕೆಂದು ಬೋಧಿಸಲಾಗಿದೆ. ಸ್ವತ: ಪ್ರವಾದಿವರ್ಯರು(ಸ) ಅನಾಥರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು. ‘ಅನಾಥ ರಕ್ಷಕ’ ಎಂಬುದು ಅವರಿಗಿರುವ ಪ್ರಮುಖ ಬಿರುದುಗಳಲ್ಲಿ ಒಂದಾಗಿದೆ.
ನನ್ನೊಡನೆ ಪ್ರವಾದಿವರ್ಯರು(ಸ) ಹೀಗೆ ಹೇಳಿದರು : ‘ನೀವೆಲ್ಲಿದ್ದರೂ ದೇವರನ್ನು ಭಯಪಡಿರಿ. ಕೆಡುಕಿನ ಬಳಿಕ ಒಳಿತನ್ನು ಮಾಡಿ ಆ ಮೂಲಕ ಕೆಡುಕನ್ನು ಅಳಿಸಿರಿ. ಜನರೊಂದಿಗೆ ಸೌಜನ್ಯದಿಂದ ವರ್ತಿಸಿರಿ’
-ಹ. ಅಬೂದರ್(ರ) – ತಿರ್ಮದಿ
ಇದು ಪ್ರವಾದಿವರ್ಯರ(ಸ) ಒಂದು ಪ್ರಾಮುಖ್ಯ ಹಾಗೂ ಅತ್ಯಂತ ವಿಶಾಲಾರ್ಥವುಳ್ಳ ಬೋಧನೆಯಾಗಿದೆ. ನೀವೆಲ್ಲಿದ್ದರೂ ದೇವನಿಗೆ ಭಯಪಡಿರಿ, ಎಂದರೆ ನೀವು ಭೂಮಿಯ ಯಾವ ಭಾಗದಲ್ಲಿದ್ದರೂ, ಬಾನಲ್ಲಿ ಹಾರುತ್ತಿರುವಾಗಲೂ, ಜಲದಲ್ಲಿ ಪ್ರಯಾಣಿಸುತ್ತಿರುವಾಗಲೂ, ಏಕಾಂತದಲ್ಲಿ ಇರುವಾಗಲೂ, ಜನರ ಜೊತೆಗಿರುವಾಗಲೂ, ಮನೆಯಲ್ಲೂ, ಪೇಟೆಯಲ್ಲೂ, ಅಂಗಡಿಯಲ್ಲೂ, ಕಛೇರಿಯಲ್ಲೂ, ರಾಜಕೀಯ ಕ್ಷೇತ್ರದಲ್ಲೂ, ಶ್ರೀಮಂತಿಕೆಯಲ್ಲಿ ಇರುವಾಗಲೂ, ದಾರಿದ್ರ್ಯದಲ್ಲಿರುವಾಗಲೂ, ಯೌವನದಲ್ಲೂ, ವೃದ್ಧಾಪ್ಯದಲ್ಲೂ ಎಲ್ಲೆಲ್ಲೂ ಅನುಕ್ಷಣವೂ ದೇವರಿಗೆ ಅಂಜುತ್ತಿರಬೇಕು. ಅವನ ಕ್ರೋಧಕ್ಕೆ ಪಾತ್ರರಾಗುವ ಯಾವ ಪಾಪಕರ್ಮಗಳನ್ನೂ ಮಾಡಬಾರದು.
ಈ ರೀತಿ ದೇವನಿಗೆ ಅಂಜುತ್ತಾ, ಅವನು ಮೆಚ್ಚದ ಕಾರ್ಯಗಳಿಂದೆಲ್ಲಾ ದೂರವಿರುತ್ತಾ ಎಚ್ಚರಿಕೆಯ, ದೇವಭಕ್ತಿಯ ಜೀವನ ಸಾಗಿಸುವಾಗಲೂ ಮನುಷ್ಯನಿಂದ ಏನಾದರೂ ತಪ್ಪುಗಳು ಸಂಭವಿಸಬಹುದಾದ ಸಾಧ್ಯತೆಗಳಿವೆ. ಒಂದುವೇಳೆ ಅಂತಹ ತಪ್ಪೇನಾದರೂ ಸಂಭವಿಸಿಬಿಟ್ಟರೆ ಮನುಷ್ಯನು ಆ ತಪ್ಪಿನ ಪ್ರಭಾವವನ್ನು ಅಳಿಸಲಿಕ್ಕಾಗಿ ಅದರ ಬೆನ್ನಿಗೇ ಸತ್ಕರ್ಮಗಳನ್ನು ಮಾಡಬೇಕು. “ವಾಸ್ತವದಲ್ಲಿ ಪುಣ್ಯಕಾರ್ಯಗಳು ಪಾಪಕರ್ಯಗಳನ್ನು ದೂರೀಕರಿಸುತ್ತವೆ” ಎಂದು ಪವಿತ್ರ ಕರ್ಆನ್ನಲ್ಲೂ ಹೇಳಲಾಗಿದೆ (11 : 114)
ಆನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತನ್ನ ಬಂಧು ಬಳಗ ಆಗಿರಬಹುದು, ಸ್ನೇಹಿತರಾಗಿರಬಹುದು, ಅಕ್ಕ ಪಕ್ಕದ ಮನೆಯವರಾಗಿರಬಹುದು, ಹಿರಿಯರು-ಕಿರಿಯರಾಗಿರಬಹುದು, ದೇಶದ, ಪರದೇಶದ ಪ್ರಜೆಗಳಾಗಿರಬಹುದು ಒಟ್ಟನಲ್ಲಿ ಎಲ್ಲರೊಂದಿಗೂ ಸೌಜನ್ಯದಿಂದ ನಡೆದುಕೊಳ್ಳಿ ಎಂದು ಹೇಳಲಾಗಿದೆ.
ಪ್ರವಾದಿವರ್ಯರು(ಸ) ಹೀಗೆಂದಿರುವರು : “ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ದೇವರು ಅವನ ಕೃತ್ಯವನ್ನು ಗೌರವಿಸುವನು ಮತ್ತು ಅವನನ್ನು ಕ್ಷಮಿಸಿಬಿಡುವನು.”
-ಹ. ಅಬೂಹುರೈರಃ (ರ) – ಮುಸ್ಲಿಂ
ದಾರಿಯಲ್ಲಿ ಬಿದ್ದಿರುವ ಮುಳ್ಳು, ಮೊಳೆ, ಗಾಜು ಅಥವಾ ಇನ್ನೇನಾದರೂ ಆ ದಾರಿಯಲ್ಲಿ ನಡೆಯುವ ಜನರಿಗೆ ಯಾರಿಗಾದರೂ ಚುಚ್ಚಿ ಅವರಿಗೆ ನೋವಾಗಬಹುದು, ರಕ್ತ ಬರಬಹುದು ಅಥವಾ ಬೇರಾವುದೋ ರೀತಿಯಲ್ಲಿ ಅಪಾಯಕಾರಿಯಾಗಬಹುದು. ಇಂತಹ ಸಂಭವನೀಯ ಕಷ್ಟದಿಂದ ಜನರನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಒಬ್ಬ ವ್ಯಕ್ತಿ ಆ ಅಪಾಯಕಾರಿ ವಸ್ತುವನ್ನು ದಾರಿಯಿಂದ ಸರಿಸಿದರೆ ಅದೊಂದು ಮನುಷ್ಯತ್ವದ ಗೌರವಾರ್ಹ ಪುಣ್ಯಕಾರ್ಯ ಎನಿಸಿಕೊಳ್ಳುತ್ತದೆ. ಅದು ಆ ಒಬ್ಬ ವ್ಯಕ್ತಿಯ ಪಾರಲೌಕಿಕ ಮೋಕ್ಷಕ್ಕೂ ಕಾರಣವಾಗಿಬಿಡುತ್ತದೆ.
ದೇವನಿಷ್ಠೆ ಮತ್ತು ಜನಸೇವಾ ಭಾವನೆ ಇಲ್ಲದ ವ್ಯಕ್ತಿಗಳ ವರ್ತನೆಯು ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಇಂದು ಅಂತಹ ವರ್ತನೆಗಳನ್ನು ಪ್ರತಿದಿನ ನಾವು ಎಲ್ಲೆಲ್ಲೂ ಕಾಣುತ್ತಿದ್ದೇವೆ. ಬಾಳೆಯಹಣ್ಣು ತಿಂದು ಸಿಪ್ಪೆ ಬೀದಿಗೆಸೆಯುತ್ತಾರೆ. ಅದರಿಂದ ಯಾರಾದರೂ ಜಾರಿ ಬಿದ್ದರೂ ಪರವಾಗಿಲ್ಲ. ಬೇರೆಯವರ ತೊಂದರೆಯಿಂದ ನನಗೇನಾಗಬೇಕಾಗಿದೆ, ನಾನು ಚೆನ್ನಾಗಿದ್ದರೆ ಸಾಕು – ಎಂಬ ಭಾವನೆಗಳು ದಿನೇ ದಿನೇ ಹೆಚ್ಚಾಗಿ ಬೆಳೆಯುತ್ತಾ ಹೋಗುತ್ತಿವೆ. ಇದಕ್ಕೆ ಮೂಲಕಾರಣ ಮನಸ್ಸಿನಲ್ಲಿ ದೇವರ ಭಯ-ಭಕ್ತಿ ಇಲ್ಲ. ಜನಸೇವೆಯ ಜ್ಞಾನ ಕಿಂಚಿತ್ತೂ ಇಲ್ಲ.
ತನ್ನ ಮನೆಯ ಕಸವನ್ನು ಬೀದಿಯಲ್ಲಿ ಬಿಸಾಡುತ್ತಾರೆ. ಎಲೆಯಡಿಕೆ, ಗುಟಕ ತಿಂದು ಬೀದಿಯಲ್ಲೇ ಉಗಿಯುತ್ತಾರೆ. ಸಾರ್ವಜನಿಕ ಜಾಗದಲ್ಲಿ ಬಿಂದಾಸಾಗಿ ಧೂಮಪಾನ ಮಾಡುತ್ತಾರೆ. ಮನುಷ್ಯನು ಎಷ್ಟು ಹೊಣೆಗೇಡಿ ಮತ್ತು ನಿಶ್ಚಿಂತನಾಗಿದ್ದಾನೆಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ. ಇದಕ್ಕೆದುರಾಗಿ ಪ್ರವಾದಿವರ್ಯರ(ಸ) ಬೋಧನೆಗಳು ಪ್ರತಿಯೊಬ್ಬ ವ್ಯಕ್ತಿಯನ್ನೂ ಜವಾಬ್ದಾರಿಯುತನಾದ, ಮಾನವೀಯ ಕಳಕಳಿಯುಳ್ಳ ಸಜ್ಜನನಾಗಿ ಮಾರ್ಪಡಿಸುತ್ತದೆ.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು : “ಹಸಿದವನಿಗೆ ಉಣಬಡಿಸಿರಿ, ರೋಗಿಯನ್ನು ಸಂದರ್ಶಿಸಿರಿ ಮತ್ತು ಕೈದಿಯನ್ನು ಬಿಡುಗಡೆಗೊಳಿಸಿರಿ.”
-ಹ. ಅಬೂಮೂಸಾ ಅಶ್ಅರಿ(ರ) – ಬುಖಾರಿ
ಮನುಷ್ಯನು ಇತರರು ಕಷ್ಟದಲ್ಲಿರುವಾಗ ಅವರಿಗೆ ನೆರವಾಗಬೇಕು. ಇತರರ ಸಂಕಷ್ಟಗಳನ್ನು ತನ್ನ ಸಂಕಷ್ಟಗಳೆಂದು ಪರಿಗಣಿಸಬೇಕು ಮತ್ತು ಅವನ ಈ ಕಾಳಜಿ ತನ್ನ ಆಪ್ತರಿಗೆ ಮತ್ತು ಸ್ವಜಾತಿ ಬಾಂಧವರಿಗೆ ಮಾತ್ರ ಮೀಸಲಾಗಿರದೆ ತನ್ನವರು ಪರರೆಂಬ ಭೇದವಿಲ್ಲದೆ, ಜಾತಿ ಮತ ಪಕ್ಷಪಾತಗಳಿಲ್ಲದೆ ಸರ್ವರಿಗೂ ಅನ್ವಯಿಸುವಂತಿರಬೇಕು.
ಹಸಿದನಿಗೆ ಉಣಬಡಿಸಬೇಕು. ರೋಗಿಯನ್ನು ಸಂದರ್ಶಿಸಿರಿ ಎಂಬ ಮಾತಿನಲ್ಲಿ ರೋಗಿಯ ಯೋಗಕ್ಷೇಮ ವಿಚಾರಿಸಬೇಕು, ಅವನ ಸೇವೆ ಮತ್ತು ಆರೈಕೆ ಮಾಡಬೇಕು ಎಂಬ ಅರ್ಥವೂ ಸೇರಿದೆ. ಇನ್ನು ಕೈದಿಗಳನ್ನು ಬಿಡುಗಡೆಗೊಳಿಸುವುದೆಂದರೆ, ನಿರಪರಾಧಿಗಳಾಗಿದ್ದು ಯಾವುದಾದರೂ ಕಾರಣಗಳಿಂದ ಬಂಧಿಸಲ್ಪಟ್ಟವರನ್ನು ಸೂಕ್ತ ರೀತಿಯಲ್ಲಿ ಬಿಡಿಸಿಕೊಳ್ಳಲು ಶ್ರಮಿಸಬೇಕು ಎಂದರ್ಥ.
ಪ್ರವಾದಿವರ್ಯರು(ಸ) ಹೇಳಿದರು : “ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯಾಗಿದೆ”
-ಹ. ಅಬೂಹುರೈರಃ (ರ) – ಬುಖಾರಿ.
ನನ್ನ ಹತ್ತಿರ ಕಾರು, ಬಂಗಲೆ, ಹಣ, ಆಸ್ತಿ, ಅಂತಸ್ತು ಎಲ್ಲಾ ಇದೆ ಆದರೆ ಮನಃಶಾಂತಿಯೇ ಇಲ್ಲ – ಇಂಥ ಮಾತುಗಳನ್ನು ಕೇಳಿರುವುದುಂಟು. ಈ ಲೋಕದಲ್ಲಿ ಅದೆಷ್ಟೋ ಜನ ಶ್ರೀಮಂತರು ಅನೇಕ ಬಗೆಯ ಚಿಂತೆಗಳಲ್ಲಿ ನರಳುತ್ತಿರುವುದನ್ನು ನಾವು ಕಾಣುತ್ತೇವೆ. ಸಾಕಷ್ಟು ಸಂಪತ್ತಿದ್ದರೂ ಅವರು ಯಾವುದೋ ಅಸಮಾಧಾನ ಮತ್ತು ಅತೃಪ್ತಿಯಿಂದ ಕೊರಗುತ್ತಿರುತ್ತಾರೆ.
ಇದಕ್ಕೆ ತದ್ವಿರುದ್ಧವಾಗಿ ಮನಸ್ಸಿನ ಶ್ರೀಮಂತಿಕೆ ಪಡೆದವನು ತನ್ನ ಬಳಿ ಏನಿದೆಯೋ ಅದರಲ್ಲೇ ತೃಪ್ತನಾಗಿರುವುದರಿಂದ ತಾನು ಬಡವನೆಂಬ ಭಾವನೆ ಅವನಲ್ಲಿ ಮೂಡುವುದಿಲ್ಲ. ಅವನ ಈ ಮನೋಭಾವವು ಅವನಿಗೆ ಮನಃಶಾಂತಿಯನ್ನು ತಂದುಕೊಡುತ್ತದೆ. ಇಂತಹ ಮನೋಭಾವದವರು ದಾರಿದ್ರ್ಯದಲ್ಲೂ ದೊರೆಗಳಂತೆ ಬಾಳುತ್ತಾರೆ.
ಪ್ರವಾದಿ (ಸ) ಹೀಗೆ ಹೇಳಿದರು : “ದೇವರು ಶುದ್ಧ ವಸ್ತುಗಳನ್ನು ಮಾತ್ರ ಸ್ವೀಕರಿಸುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಶುದ್ಧ ಸಂಪಾದನೆಯಿಂದ ಕೇವಲ ಒಂದು ಖರ್ಜೂರದಷ್ಟು ದಾನ ಮಾಡಿದರೂ ದೇವರು ಅವನ ದಾನವನ್ನು ಬಲಗೈಯಿಂದ ಸ್ವೀಕರಿಸುತ್ತಾನೆ ಮತ್ತು ನೀವು ನಿಮ್ಮ ಈ ಕರುವನ್ನು ಪೋಷಿಸುವಂತೆ ಅವನು ಅದನ್ನು ಪೋಷಿಸುತ್ತಾನೆ. ಕೊನೆಗೆ ಅದು (ಆ ಸಾಮಾನ್ಯ ದಾನವು ಬೆಳೆದು) ಬೆಟ್ಟದಷ್ಟು ದೊಡ್ಡದಾಗುತ್ತದೆ.
ಕೆಲವರು ಅನ್ಯಾಯದಿಂದ ಸಂಪಾದನೆ ಮಾಡಿದ ಹಣದಿಂದ ದಾನ ಮಾಡುತ್ತಾರೆ. ಆನರು ತನ್ನನ್ನು ದಾನಶೂರನೆಂದು ಕರೆಯಬೇಕು ಎಂಬ ಅಭಿಲಾಷೆಯಿಂದ ದಾನ ಮಾಡುತ್ತಾರೆ. ಇಂತಹ ದಾನ ದೇವರಿಗೆ ಇಷ್ಟವಿಲ್ಲ. ಒಬ್ಬ ವ್ಯಕ್ತಿಗೆ ದೊಡ್ಡ ಮೊತ್ತಗಳನ್ನು ದಾನವಾಗಿ ಕೊಡುವ ಸಾಮಥ್ರ್ಯವಿಲ್ಲದಿದ್ದರೆ ಅವನು ತನಗೆ ಸಾಧ್ಯವಿರುವಷ್ಟನ್ನೂ ದಾನ ಮಾಡಬೇಕು. ದೇವರು ದಾನದ ಪ್ರಮಾಣ ನೋಡಲ್ಲ, ದಾನ ಕೊಡುವವನ ಮನೋಭಾವ ನೋಡುತ್ತಾನೆ. ಪ್ರಾಮಾಣಿಕ ಸಂಕಲ್ಪದಿಂದ ಕೊಡುವ ದಾನಕ್ಕೆ ದೇವರ ದೃಷ್ಟಿಯಲ್ಲಿ ಬಹಳ ಗೌರವವಿದೆ. ಅಂತಹ ದಾನ ಬಹಳ ಸಮೃದ್ಧಿದಾಯಕವಾಗಿರುತ್ತದೆ.
ಪ್ರವಾದಿ (ಸ) ಹೀಗೆ ಹೇಳಿದರು : “ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ. ಏಕೆಂದರೆ ಸ್ತ್ರೀಯನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ ಮತ್ತು ಅತಿ ಹೆಚ್ಚು ವಕ್ರತೆಯು ಪಕ್ಕೆಲುಬಿನ ಮೇಲಿನ ಭಾಗದಲ್ಲಿರುತ್ತದೆ. ನೀವು ಅದನ್ನು ತೀರಾ ನೇರಗೊಳಿಸಲು ಹೊರಟರೆ ಅದು ಮುರಿದುಹೋಗುವುದು. ಮತ್ತು ಅದರ ಪಾಡಿಗೆ ಬಿಟ್ಟರೆ ಅದು ವಕ್ರವಾಗಿಯೇ ಉಳಿಯುವುದು. ಆದ್ದರಿಂದ ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ.”
ಸ್ತ್ರೀಯ ಸ್ವಭಾವದ ದೌರ್ಬಲ್ಯವನ್ನು ಇಲ್ಲಿ ಪಕ್ಕೆಲುಬಿಗೆ ಹೋಲಿಸಲಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಭಾವುಕರಾಗಿ ಇರುತ್ತಾರೆ. ದೇವನು ಮಹಿಳೆಯರಿಗೆ ಪುರುಷರಿಗಿಂತ ಭಿನ್ನವಾದ ಕೆಲವು ನೈಸರ್ಗಿಕ ಕರ್ತವ್ಯಗಳನ್ನು ವಹಿಸಿಕೊಟ್ಟಿದ್ದು, ಆ ಕರ್ತವ್ಯಗಳ ನಿರ್ವಹಣೆಯಲ್ಲಿ ಆಕೆಯ ಆ ಭಾವುಕತೆ ಆಕೆಗೆ ಸಹಾಯವಾಗುತ್ತದೆ. ಗರ್ಭಧಾರಣೆ, ಪ್ರಸವ, ಮಗುವಿನ ಪೋಷಣೆ ಮುಂತಾದ ನೈಸರ್ಗಿಕವಾಗಿ ಸ್ತ್ರೀಯ ಮೇಲೆಯೇ ಇರುವ ಜವಾಬ್ದಾರಿಗಳು ವಸ್ತುತಃ ಅತ್ಯಂತ ತ್ರಾಸದಾಯಕವಾಗಿವೆ. ಆದರೆ ಸ್ತ್ರೀಯರಲ್ಲಿ ಧಾರಾಳ ಪ್ರಮಾಣದಲ್ಲಿರುವ ಭಾವನೆಗಳು ಈ ಸಂಕಷ್ಟಗಳನ್ನು ಸಹಿಸುವಲ್ಲಿ ಆಕೆಗೆ ಸಹಾಯಕವಾಗಿವೆ.
ಈ ರೀತಿ ಭಾವುಕತೆ ಒಂದು ಸಾಮಥ್ರ್ಯವೆಂಬುದು ನಿಜವಾದರೂ ಮನುಷ್ಯನು ತನ್ನ ಅನೇಕ ಸಾಮಥ್ರ್ಯಗಳನ್ನು ತಪ್ಪಾಗಿ ಬಳಸುವಂತೆ, ಸ್ತ್ರೀಯೂ ಕೆಲವೊಮ್ಮೆ ತನ್ನ ಭಾವನಾತ್ಮಕ ಸಾಮಥ್ರ್ಯಗಳನ್ನು ತಪ್ಪಾಗಿ ಬಳಸುವುದುಂಟು. ಭಾವನೆಗಳು ಬುದ್ಧಿಯನ್ನು ಮೀರುವಷ್ಟು ತೀವ್ರವಾಗಿಬಿಟ್ಟಾಗ ತೀರಾ ಸರಳ ವಿಷಯಗಳೂ ಜಗಳಕ್ಕೆ ಕಾರಣವಾಗುತ್ತವೆ. ಒಬ್ಬ ಸ್ತ್ರೀಯು ತನ್ನ ಸ್ವಾಭಾವಿಕ ಸಮತೋಲನವನ್ನು ಉಳಿಸಿಕೊಳ್ಳಲು ಮತ್ತು ತನ್ನನ್ನು ಸರಿಯಾಗಿ ತರಬೇತಿ ಗೊಳಿಸಲು ಪ್ರಯತ್ನಿಸದಿದ್ದರೆ ಅದರಿಂದ ಅಸಂತುಲಿತಗೊಳ್ಳುವ ಆಕೆಯ ಭಾವನೆಗಳು ಅವಳ ಸ್ವಭಾವದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇಂತಹ ದೌರ್ಬಲ್ಯವನ್ನೇ ಈ ಹದೀಸ್ನಲ್ಲಿ ಪಕ್ಕೆಲುಬಿನ ವಕ್ರತೆಗೆ ಹೋಲಿಸಲಾಗಿದೆ. ಮಹಿಳೆಯ ದೌರ್ಬಲ್ಯಗಳನ್ನು ಗಮನದಲ್ಲಿಟ್ಟು ಆಕೆಯ ಸ್ವಭಾವವನ್ನು ಬಲವಂತವಾಗಿ ತಿದ್ದಲೆತ್ನಿಸುವ ಬದಲು ಆಕೆಯೊಂದಿಗೆ ಸೌಮ್ಯತೆ, ಕ್ಷಮಾಶೀಲತೆ ಮತ್ತು ಔದಾರ್ಯದಿಂದ ವರ್ತಿಸಬೇಕು ಎಂದು ಈ ಹದೀಸ್ನಲ್ಲಿ ಪುರುಷರಿಗೆ ಬೋಧಿಸಲಾಗಿದೆ. ಹಾಗೆಯೇ, ಪುರುಷನು ಸ್ತ್ರೀಯ ಗುಣವನ್ನರಿತು ನಿಭಾಯಿಸಿಕೊಂಡು ಹೋಗಲು ಕಲಿಯದಿದ್ದರೆ ವಿಚ್ಛೇದನದ ಗತಿ ಬಂದೀತು ಎಂಬ ಎಚ್ಚರಿಕೆಯನ್ನು ಪುರುಷರಿಗೆ ನೀಡಲಾಗಿದೆ.
ಪ್ರವಾದಿ (ಸ) ಹೀಗೆ ಹೇಳಿರುವರು : “ದೇವರು ತನ್ನ ಗೌರವವನ್ನು ಉಳಿಸಬೇಕೆಂಬ ದೃಷ್ಟಿಯಿಂದ ನಿಮ್ಮಲ್ಲೊಬ್ಬನು ಹಗ್ಗ ಹಿಡಿದುಕೊಂಡು ಕಟ್ಟಿಗೆಯ ಹೊರೆಯನ್ನು ಹೊತ್ತು ತಂದು ಮಾರುತ್ತಾರೆಂದರೆ ಅದು ಜನರ ಬಳಿ ಬೇಡುತ್ತಾ ತಿರುಗುವುದಕ್ಕಿಂತ ಉತ್ತಮ. ಹಾಗೆ ಬೇಡಿದಾಗ ಜನರು ಅವನಿಗೆ ಕೊಡಲೂ ಬಹುದು, ಕೊಡದಿರಲೂ ಬಹುದು.”
-ಝುಖೈರ್ ಬಿನ್ ಅವ್ವಾಮ್(ರ) – ಬುಖಾರಿ.
ಜನರೊಂದಿಗೆ ಬೇಡುವ ಅಭ್ಯಾಸ ಬಹಳ ಕೆಟ್ಟದು. ಅದರಿಂದ ಮನುಷ್ಯನ ಸ್ವಾಭಿಮಾನವು ಘಾಸಿಗೊಳ್ಳುತ್ತದೆ. ಆದ್ದರಿಂದ ಪ್ರವಾದಿವರ್ಯರು (ಸ) ಜನರಿಗೆ ಭಿಕ್ಷೆಯಿಂದ ದೂರವಿರಬೇಕೆಂದು ಮತ್ತು ಶ್ರಮಪಟ್ಟು ದುಡಿದು ಸಂಪಾದನೆ ಮಾಡಬೇಕೆಂದು ಬೋಧಿಸಿದ್ದಾರೆ. ಸಂಪಾದನೆಯ ಮಾರ್ಗವೊಂದು ಧರ್ಮಬದ್ಧವಾಗಿರುವ ತನಕ ಆ ಮಾರ್ಗವನ್ನು ಅವಲಂಬಿಸುವ ಬಗ್ಗೆ ಯಾರೂ ಸಂಕೋಚ ಪಡಬಾರದು. ಶ್ರಮಪಟ್ಟು ದುಡಿಯುವುದು ಅಭಿಮಾನಾರ್ಹವೇ ಹೊರತು ಲಜ್ಜಾಸ್ಪದ ಕ್ರಿಯೆಯಲ್ಲ.
ಇಂದಿನ ರಾಜಕೀಯ ರಂಗದಲ್ಲಿ ರಾಜಕೀಯ ವ್ಯಕ್ತಿಗಳು ಅವ್ಯವಹಾರಿಕವಾಗಿ ಕೋಟ್ಯಾಂತರ ರೂಪಾಯಿ ಸ್ನಾನ ಮಾಡುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಬೇಲಿಯೇ ಎದ್ದು ಹೊಲವನ್ನು ಮೇಯುವ ಕಾಲ ಬಂದಿದೆ. ನಾಡಿನ ಪ್ರಜೆಗಳು ಅಸಹಾಯಕರಾಗಿ ತಬ್ಬಲಿಗಳಂತೆ ಮಾಧ್ಯಮಗಳು ಪ್ರಕಟಿಸುತ್ತಿರುವ ಕಟುಸತ್ಯವನ್ನು ನೋಡುತ್ತಿದ್ದಾರೆ. ಅಂಥ ಹಣ, ಅಂಥ ಕುರ್ಚಿ ಶಾಶ್ವತವೇ? ಇಲ್ಲ. ಇಂತಹ ಶ್ರೀಮಂತ ರಾಜಕೀಯ ಭಿಕ್ಷುಕರಿಗೆ ಕಿಂಚಿತ್ತೂ ಸ್ವಾಭಿಮಾನವಿಲ್ಲ. ಅವರಿಗಿಂತ ನಮ್ಮ ನಾಡಿನ ಕೂಲಿ ಆಳುಗಳೇ ಮೇಲು.
ಪ್ರವಾದಿವರ್ಯರು (ಸ) ಹೇಳಿರುವರು : “ಕಾರ್ಮಿಕನ ಬೆವರು ಆರುವುದಕ್ಕಿಂತ ಮುಂಚೆ ಅವನ ವೇತನವನ್ನು ಕೊಟ್ಟುಬಿಡಿ.”
-ಹ. ಅಬ್ದುಲ್ಲಾ ಬಿನ್ ಉಮರ್ (ರ) – ಇಬ್ನುಮಾಜಃ.
ಶ್ರಮಿಕನ ಶ್ರಮದ ವೇತನವನ್ನು ಕೊಡುವುದರಲ್ಲಿ ವಿಳಂಬ ಮಾಡುವುದು ಕೂಡಾ ತಪ್ಪೆಂದು ಪ್ರವಾದಿ (ಸ) ತಿಳಿಸಿರುವರು. ಗಾರೆಕೆಲಸದವರನ್ನು ಮನೆ ಕಟ್ಟಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತೇವೆ. ಎಷ್ಟೋ ಜನ ಅವರ ಕೂಲಿಯನ್ನು ಕೊಡುವುದಿಲ್ಲ. ಯಜಮಾನರ ಹತ್ತಿರ ಅವರು ಹತ್ತು ಸಲ ತಿರುಗಬೇಕಾಗುತ್ತದೆ. ಏನಾದರೂ ಒಂದು ನೆಪ ಹೇಳಿ ಅವರಿಗೆ ಬರಿಗೈಯಲ್ಲಿ ಕಳಿಸುತ್ತಿರುತ್ತಾರೆ. ಇಂತಹ ಅನೇಕ ಪ್ರಸಂಗಗಳನ್ನು ನಾವು ಕಾಣುತ್ತೇವೆ. ಯಾರಿಂದಾದರೂ ಏನೇ ಕೆಲಸ ತೆಗೆದುಕೊಂಡರೆ ಅವರ ಕೂಲಿಯನ್ನು ಚಾಚೂ ತಪ್ಪದೇ ಅವರಿಗೆ ದುಃಖ ಕೊಡದೇ ಅತಿ ಶೀಘ್ರವಾಗಿ ಕೊಟ್ಟುಬಿಡಬೇಕು ಎಂಬ ತಾಕೀತು ಈ ಹದೀಸ್ನಲ್ಲಿದೆ. ಕಾರ್ಮಿಕನ ವೇತನ ಕೊಡದೇ ಹೋದರೆ ಪರಲೋಕದಲ್ಲೂ ಅದರ ವಿಚಾರಣೆ ನಡೆಯುವುದು.
ಪ್ರವಾದಿವರ್ಯರು (ಸ) ಹೇಳಿರುವರು : “ಒಬ್ಬ ಮಹಿಳೆಯನ್ನು ಒಂದು ಬೆಕ್ಕಿನ ವಿಷಯದಲ್ಲಿ ಯಾತನೆಗೆ ಒಳಪಡಿಸಲಾಯಿತು. ಏಕೆಂದರೆ ಆಕೆ ಒಂದು ಬೆಕ್ಕನ್ನು ಬಂಧಿಸಿದ್ದಳು. ಆ ಬೆಕ್ಕು ಅದೇ ಸ್ಥಿತಿಯಲ್ಲಿ ಸತ್ತುಹೋಯಿತು. ಇದೇ ಕಾರಣಕ್ಕಾಗಿ ಆಕೆ ನರಕಾಗ್ನಿಗೆ ತಳ್ಳಲ್ಪಟ್ಟಳು. ಆಕೆ ಆ ಬೆಕ್ಕಿಗೆ ಸ್ವತಃ ತಾನೂ ಆಹಾರ ಕೊಡುತ್ತಿರಲಿಲ್ಲ ಮತ್ತು ಅದು ಭೂಮಿಯ ಹುಳು ಇತ್ಯಾದಿ ಜೀವಿಗಳನ್ನು ತಿಂದುಕೊಳ್ಳುವಂತಾಗಲು ಅದನ್ನು ಮುಕ್ತಗೊಳಿಸಿ ಬಿಡುತ್ತಲೂ ಇರಲಿಲ್ಲ.”
-ಹ. ಅಬ್ದುಲ್ಲಾ ಬಿನ್ ಉಮರ್ (ರ) – ಬುಖಾರಿ.
ಪ್ರವಾದಿವರ್ಯರ (ಸ) ಶಿಕ್ಷಣಗಳಲ್ಲಿ ಕಾರುಣ್ಯದ ಕಲ್ಪನೆ ಎಷ್ಟೊಂದು ವಿಶಾಲವಾಗಿದೆಯೆಂದರೆ ಪ್ರಾಣಿಗಳು ಕೂಡಾ ಅದರ ವೃತ್ತಿಯಿಂದ ಹೊರಗಿಲ್ಲ. ಇಲ್ಲಿ ಪ್ರಾಣಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡಬಾರದೆಂದು ಬೋಧಿಸಲಾಗಿದೆ. ಹಾಗೆಯೇ ಯಾವುದಾದರೂ ಪ್ರಾಣಿಯನ್ನು ಕಟ್ಟಿಹಾಕಿ ಅನ್ನ ನೀರು ಕೊಡದೆ ಸಾಯಿಸುವುದು ಘೋರ ಪಾಪವೆಂದು ತಿಳಿಸಲಾಗಿದೆ.
ಪ್ರವಾದಿ(ಸ) ಹೀಗೆ ಹೇಳಿರುವರು : “ಪ್ರತಿಕ್ರಿಯೆಯ ರೂಪದಲ್ಲಿ ಹಿತಮಾಡುವವನು ಸಂಬಂಧಿಕರಿಗೆ ಹಿತ ಮಾಡುವವನಲ್ಲ. ವಾಸ್ತವದಲ್ಲಿ ತನಗೆ ಅಹಿತ ಮಾಡಲಾಗಿದ್ದರೂ ತಾನು ಹಿತವನ್ನುಂಟು ಮಾಡುವುದೇ ಸಂಬಂಧಿಕರಿಗೆ ಹಿತ ಮಾಡುವವನಾಗಿದ್ದಾನೆ.”
-ಹ. ಅಬ್ದುಲ್ಲಾ ಬಿನ್ ಅಮ್ರ್ – ಬುಖಾರಿ.
ಅಂದರೆ ಮನುಷ್ಯನಿಗೆ ಸ್ವತಃ ತನ್ನ ಕರ್ತವ್ಯಗಳ ಅರಿವಿರಬೇಕು ಮತ್ತು ಇತರರು ಏನು ಮಾಡಿದರೂ ತಾನು ತನ್ನ ಕರ್ತವ್ಯವನ್ನು ನೆರವೇರಿಸಬೇಕೆಂಬ ಪ್ರಜ್ಞೆ ಇರಬೇಕು. ಅವನ ಸಂಬಂಧಿಕರು ಅವನ ವಿಷಯದಲ್ಲಿ ತಮಗಿರುವ ಕರ್ತವ್ಯಗಳನ್ನು ಮರೆತಿದ್ದರೂ, ಅವರ ಹಕ್ಕುಗಳನ್ನು ಕಡೆಗಣಿಸಿದ್ದರೂ ಅವನು ಮಾತ್ರ ಅವರ ಹಕ್ಕುಗಳನ್ನು ಕಡೆಗಣಿಸಬಾರದು. ಇತರರ ಸದ್ವರ್ತನೆಗೆ ಪ್ರತಿಯಾಗಿ ಸದ್ವರ್ತನೆ ತೋರುವುದು ಮಹತ್ಸಾಧನೆಯಲ್ಲ. ಆದರೆ ಇತರರ ದುರ್ವರ್ತನೆಯನ್ನು ಕಡೆಗಣಿಸಿ ತಾನು ಅವರ ಜೊತೆ ಸದ್ವರ್ತನೆ ತೋರುವುದು ಮತ್ತು ಅವರಿಗೆ ಹಿತವನ್ನುಂಟು ಮಾಡುವುದು ಮಹತ್ಸಾಧನೆಯಾಗಿದೆ. ದೇವರಿಗೆ ಇಷ್ಟವಾದ ವರ್ತನೆ ಇದುವೇ ಆಗಿದೆ.
ಒಮ್ಮೆ ಒಬ್ಬ ವ್ಯಕ್ತಿಯು ಪ್ರವಾದಿವರ್ಯರ (ಸ) ಬಳಿ ಬಂದು, ‘ದೇವರ ಸಂದೇಶ ವಾಹಕರೇ! ನನ್ನ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರು ಯಾರು?’ ಎಂದು ಪ್ರಶ್ನಿಸಿದನು. ಆಗ ಅವರು, ‘ನಿನ್ನ ತಾಯಿ’ ಎಂದುತ್ತರಿಸಿದರು. ‘ಇವರ ಬಳಿಕ ಯಾರು?’ ಎಂದು ಆ ವ್ಯಕ್ತಿ ಪ್ರಶ್ನಿಸಿದನು. ‘ನಿನ್ನ ತಾಯಿ’ ಎಂದು ಪ್ರವಾದಿ (ಸ) ಉತ್ತರಿಸಿದರು. ಆ ವ್ಯಕ್ತಿ ಪುನಃ ಆ ಬಳಿಕ ಯಾರು? ಎಂದು ಕೇಳಿದನು. ಪ್ರವಾದಿವರ್ಯರು (ಸ) ‘ನಿನ್ನ ತಾಯಿ’ ಎಂದು ಉತ್ತರಿಸಿದರು. ‘ಅವರ ಬಳಿಕ ಯಾರು?’ ಎಂದು ಅವನು ಮತ್ತೆ ಪ್ರಶ್ನಿಸಿದನು. ಆಗ ಪ್ರವಾದಿ(ಸ) ‘ನಿನ್ನ ತಂದೆ’ ಎಂದು ಉತ್ತರಿಸಿದರು.
-ಹ. ಅಬುಹುರೈರಃ (ರ) – ಬುಖಾರಿ.
ಹೆತ್ತವರೊಂದಿಗೆ ಅತ್ಯುತ್ತಮವಾಗಿ ವರ್ತಿಸಬೇಕು. ಪವಿತ್ರ ಕುರ್ಆನ್ನಲ್ಲಿ ಪದೇ ಪದೇ ಆದೇಶಿಸಲಾಗಿದೆ. ಹಾಗೆಯೇ ತಾಯಿಯು ತನ್ನ ಮಗುವಿಗಾಗಿ ಸಹಿಸುವಂತಹ ಕಷ್ಟಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲೇ ಪ್ರವಾದಿವರ್ಯರು (ಸ) ಸದ್ವರ್ತನೆಯ ವಿಷಯದಲ್ಲಿ ತಾಯಿಯ ಹಕ್ಕು ತಂದೆಗಿಂತಲೂ ಹೆಚ್ಚಿನದು ಎಂಬುದನ್ನು ಮನವರಿಕೆ ಮಾಡಿಕೊಡಲು ತಾಯಿಯನ್ನು ಮೂರುಸಲ ಪ್ರಸ್ತಾಪಿಸಿದ್ದಾರೆ.
ಈಗಿನ ಸಮಾಜದಲ್ಲಿ ತುತ್ತು ಕೊಟ್ಟವಳಿಗಿಂತ ಮುತ್ತು ಕೊಡುವವಳಿಗೆ ಹೆಚ್ಚಿನ ಆದ್ಯತೆ. ತಾಯಿಯ ಮಾತಿಗೆ ಬೆಲೆ ಕೊಡುವುದಿರಲಿ, ತಾಯಿ ದರ್ಜೆಗೇ ಬೆಲೆ ಇಲ್ಲ. ಹೆಂಡತಿ ಹೇಳಿದ್ದೇ ಸರಿ. ಸಾಂಸಾರಿಕ ಜಗಳದಲ್ಲಿ ಎಷ್ಟೋ ಸಂಸಾರಗಳು ಒಡೆದು ನುಚ್ಚುನೂರಾಗಿ ಹೋಗಿವೆ. ಸಮಸ್ಯೆಯನ್ನು ಒಂದೇ ದೃಷ್ಟಿಕೋನದಿಂದ ಕಾಣುವುದೇ ಇದಕ್ಕೆ ಕಾರಣ. ಸಮಸ್ಯೆಯನ್ನು ಕೂಲಂಕಶವಾಗಿ ಶಾಂತಿಯಿಂದ ಪರಿಶೀಲಿಸಿದರೆ ತಾಯಿಯ ಮಹತ್ವ ಅರಿತುಕೊಳ್ಳಲು ಸುಲಭವಾಗುವುದು. ತಂದೆ-ತಾಯಿಯನ್ನು ಅರಿತುಕೊಳ್ಳಬೇಕಾದರೆ ನಾವು ಅವರ ವಯಸ್ಸನ್ನು ದಾಟಬೇಕಂತೆ. ಆದರೆ ಆಗ ಕಾಲ ಮೀರಿಹೋಗಿರುತ್ತೆ. ಅವರು ನಮ್ಮನ್ನು ಅಗಲಿ ಅಂತಿಮ ಪ್ರಯಾಣ ಮಾಡಿರಬಹುದು. ಪಶ್ಚಾತ್ತಾಪ ಪಟ್ಟರೆ ಆ ಕಾಲ ಮತ್ತೆ ಬರಲು ಸಾಧ್ಯವೇ? ನಮಗೆ ಬುದ್ಧಿ ಬರುವಷ್ಟರಲ್ಲಿ ಎಲ್ಲಾ ಶೂನ್ಯವಾಗಿಹೋಗಿರುತ್ತದೆ. ಅಂತಹ ಸಂದರ್ಭಗಳು ನಮ್ಮ ಜೀವನದಲ್ಲಿ ಬಾರದೇ ಹೋಗಲಿ. ಹೊಸ್ತಿಲಲ್ಲಿ ಅಂತಹ ಸಮಸ್ಯೆಗಳು ನಿಮ್ಮ ಮುಂದಿದ್ದರೆ ಈಗಲೇ ಬಗೆಹರಿಸಿ. ನಿಮ್ಮ ಅಹಂ ಸೋತರೂ ಪರವಾಗಿಲ್ಲ. ತಂದೆ-ತಾಯಿಯ ಪ್ರೀತಿಯನ್ನು, ಅವರ ಗೌರವವನ್ನು ಸೋಲಲು ಬಿಡಬೇಡಿ. ಅವರ ಋಣವಂತೂ ನಾವು ತೀರಿಸಲು ಸಾಧ್ಯವಿಲ್ಲ. ಕೊನೇಪಕ್ಷ ಎರಡು ಪ್ರೀತಿಯ, ವಾತ್ಸಲ್ಯದ, ವಿಶ್ವಾಸದ ಮಾತುಗಳನ್ನು ಆಡಿ ಅವರ ಮನಸ್ಸಿಗೆ ಸಂತೃಪ್ತಿಯಾದರೂ ಕೊಡಲು ಪ್ರಯತ್ನಿಸಿ. ಆಗಲೇ ನಿಮ್ಮ ಜೀವನ ಸಾರ್ಥಕ. ಒಂದು ದಿನವಾದರೂ ನಿಮ್ಮ ತಂದೆ-ತಾಯಿಗೆ ಒಂದು ಜೊತೆ ಬಟ್ಟೆನೋ, ಎಲ್ಲಾದರೂ ಪ್ರವಾಸವೋ, ಔತಣಕೂಟವೋ ಏರ್ಪಡಿಸಿ ನೋಡಿರಿ. ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅವರು ನಿಮ್ಮಿಂದ ಪ್ರೀತಿ ಬಿಟ್ಟು ಏನೂ ಬಯಸುವುದಿಲ್ಲ. ಅದನ್ನೂ ಸಹ ಕೊಡದೆ ಅವರ ಮನಸ್ಸಿಗೆ ನೋವು ಕೊಡುವುದು ಸರಿಯೇ? ಐದು ನಿಮಿಷ ಸ್ವಲ್ಪ ಯೋಚಿಸಿ ನೋಡಿ. ಇಂದಿನಿಂದಲೇ ಖುಷಿ ನೀಡುವಂಥ ಏನಾದರೊಂದು ಕೆಲಸ ಮಾಡಲು ಪ್ರಾರಂಭಿಸಿಕೊಳ್ಳಿ.
ಪ್ರವಾದಿ (ಸ) ಹೀಗೆ ಹೇಳಿದರು : “(ಮಲ್ಲ ಯುದ್ಧದಲ್ಲಿ) ಜನರನ್ನು ಅಪ್ಪಳಿಸುವವನು ಬಲಾಢ್ಯನಲ್ಲ; ಕೋಪ ಬಂದಾಗ ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವನೇ ನಿಜವಾದ ಬಲಾಢ್ಯ.”
ಎಸ್.ಪಿ. ಸಾಂಗ್ಲಿಯಾನರವರು IPS ಅಧಿಕಾರಿಯಾಗಿದ್ದರು. ರಂಜಾನ್ ತಿಂಗಳು. ನಾವು ಹಣ್ಣು-ಹಂಪಲುಗಳನ್ನು ಹಂಚಲು ಬೆಂಗಳೂರಿನ ಹಳೇ ಜೈಲಿಗೆ ಹೋದೆವು. ಜೈಲಿನೊಳಗೆ ಗೋಡೆಯ ಮೇಲೆ ಇಂತಹುದೇ ಒಂದು ವಾಕ್ಯ ಕನ್ನಡದಲ್ಲಿ ಬರೆಯಲಾಗಿತ್ತು. ಅದರ ತಾತ್ಪರ್ಯ- ಕೋಪವನ್ನು ಯಾರು ತಡೆದುಕೊಳ್ಳುವನೋ ಅವನೇ ಶೂರ ಎಂದಾಗಿತ್ತು. ಪ್ರಪಂಚದಲ್ಲಿ ಎಷ್ಟು ಅನಾಹುತಗಳು ನಡೆಯುತ್ತವೋ ಅದಕ್ಕೆ ಕೋಪವೇ ಮುಖ್ಯ ಕಾರಣವಾಗಿದೆ. ಕೋಪ ಹೊರಗಡೆ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುವಲ್ಲ. ಅದು ನಮ್ಮಲ್ಲೇ ಜನ್ಮ ಪಡೆಯುವ ಸೈತಾನವಾಗಿದೆ.
ಒಬ್ಬ ಕೋಪ ಬಂದಾಗ ಸಂಯಮ ಕಳೆದುಕೊಳ್ಳದೆ ಸಂತುಲಿತವಾಗಿ ವರ್ತಿಸುತ್ತಾನೆಂದರೆ ಅವನು, ತನ್ನನ್ನು ಪ್ರಚೋದಿಸುವ ಸೈತಾನನನ್ನು ಸೋಲಿಸಿ ಕೆಡವಿಹಾಕಿದ್ದಾನೆಂದೇ ಅರ್ಥ. ನಿಜವಾಗಿ ಶಕ್ತಿಶಾಲಿ ಅಥವಾ ಬಲಾಢ್ಯ ಎಂಬ ಬಿರುದು ಇಂತಹವರಿಗೆ ಸಲ್ಲಬೇಕು.
ಮನುಷ್ಯ ಯಾವ ಸ್ಥಿತಿಯಲ್ಲೂ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋಗದೆ, ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬುದೇ ಈ ಹದೀಸ್ನಿಂದ ಸಿಗುವ ಪಾಠವಾಗಿದೆ.
ಪ್ರವಾದಿ (ಸ) ಹೀಗೆ ಹೇಳಿರುವರು : “ಮನುಷ್ಯನ ಬಳಿ ಎರಡು ಕಣಿವೆ ತುಂಬಾ ಸಂಪತ್ತಿದ್ದರೂ ಅವನು ಮೂರನೆಯದಕ್ಕಾಗಿ ಹಾತೊರೆಯುತ್ತಾನೆ. ಮನುಷ್ಯನ ಹೊಟ್ಟೆಯನ್ನು ಮಣ್ಣೂ ಮಾತ್ರ ತುಂಬಬಲ್ಲದು. ತನ್ನ ಕಡೆ ಮರಳುವವರ ಕಡೆಗೆ ದೇವರು ಗಮನಹರಿಸುತ್ತಾನೆ. – ಹ. ಇಬ್ನು ಅಬ್ಬಾಸ್ (ರ) – ಬುಖಾರಿ.
ಇದು ಮನುಷ್ಯನ ಲೋಭ ಮತ್ತು ದುರಾಸೆಯ ಬಗ್ಗೆ ನೀಡಲಾಗಿರುವ ಒಂದು ಉಪಮೆಯಾಗಿದೆ. ಸಂಪತ್ತಿನ ಆಸೆಗೆತುತ್ತಾದ ವ್ಯಕ್ತಿಗೆ ಎಷ್ಟು ಸಿಕ್ಕಿದರೂ ತೃಪ್ತಿಯಾಗುವುದಿಲ್ಲ. ಅವನು ಮತ್ತಷ್ಟನ್ನು ಸಂಗ್ರಹಿಸುವ ಆತುರದಲ್ಲಿ ಅವಿಶ್ರಾಂತವಾಗಿ ದುಡಿಯುತ್ತಾನೆ. ಶ್ರೇಷ್ಠ ಉದ್ದೇಶಗಳಿಗಾಗಿ ದೇವನು ತನಗೆ ನೀಡಿರುವ ಜೀವನವನ್ನೆಲ್ಲಾ ಕೇವಲ ಧನ ಸಂಪಾದನೆಗಾಗಿ ಮುಡಿಪಿಟ್ಟುಬಿಡುತ್ತಾನೆ. ಧನ ಸಂಪಾದನೆಯ ಮತ್ತಿನಲ್ಲಿ ಅವನಿಗೆ ತನ್ನ ಜೀವನಕೊಂದು ಉದ್ದೇಶವೂ ಇದೆ ಎಂಬುದೇ ಮರೆತು ಹೋಗುತ್ತದೆ. ಇಂತಹ ವ್ಯಕ್ತಿಯು ತನ್ನ ಜೀವನದ ನಿಜ ಉದ್ದೇಶದಲ್ಲಿ ವಿಫಲನಾಗುತ್ತಾನೆ. ಶ್ರಮವೆಲ್ಲಾ ನಿರರ್ಥಕವೆಂಬುದು ಅವನಿಗೆ ಪರಲೋಕದಲ್ಲಿ ಮನವರಿಕೆಯಾಗುತ್ತದೆ. ಮನುಷ್ಯನ ಹೊಟ್ಟೆಯನ್ನು ಮಣ್ಣು ಮಾತ್ರ ತುಂಬಬಲ್ಲದು ಎಂದರೆ, ಮನುಷ್ಯನ ಲೋಭ ಮತ್ತು ದುರಾಸೆ ಕೊನೆಗೊಳ್ಳುವುದು ಅವನು ಸತ್ತು ಗೋರಿ ಸೇರಿದಾಗ ಮಾತ್ರ ಎಂದರ್ಥ.
ಸಾಮ್ರಾಟ ಸಿಕಂದರ್ ತಾನು ಸತ್ತಾಗ ತನ್ನ ಎರಡು ಕೈಗಳನ್ನು ಶವ ಬಟ್ಟೆಯ ಆಚೆ ಕಾಣುವಂತೆ ಇಡಬೇಕು ಎಂದು ತನ್ನ ಮಂತ್ರಿಗೆ ಹೇಳಿದ್ದನು. ಆತ ಸತ್ತಾಗ ಹಾಗೆಯೇ ಮಾಡಲಾಯಿತು. ಇದರಿಂದ ಸಿಗುವ ಅರ್ಥ – “ನಾನು ದೇಶಗಳ ಅಧಿಪತಿಯಾಗಿದ್ದರೂ, ಅರಮನೆಗಳ ಅರಸನಾಗಿದ್ದರೂ, ಸಾವಿರಾರು ಸೈನಿಕರ ಸೇನೆಗೆ ಒಡೆಯನಾಗಿದ್ದರೂ ಈ ಪ್ರಪಂಚದಿಂದ ಬರಿಗೈಯಲ್ಲೇ ಹೋಗಬೇಕು” ಎಂದಾಗಿತ್ತು. ಮನಸ್ಸು ಕಲಕಿಸುವಂಥ ಉದಾಹರಣೆಯನ್ನು ಪ್ರಪಂಚಕ್ಕೆ ತೋರಿಸಿ ಹೊರಟುಹೋದನು.
ಪ್ರವಾದಿ (ಸ) ನನ್ನ ಹೆಗಲ ಮೇಲೆ ಕೈಯಿಟ್ಟು ಹೀಗೆ ಹೇಳಿದರು : “ಲೋಕದಲ್ಲಿ ನೀವು ವಿದೇಶೀಯರಂತೆ ಅಥವಾ ಒಬ್ಬ ಪ್ರಯಾಣಿಕನಂತೆ ಬದುಕಿರಿ.”
ತನ್ನ ನಾಡನ್ನು ಬಿಟ್ಟು ಯಾವುದಾದರೂ ತಾತ್ಕಾಲಿಕ ಉದ್ದೇಶದಿಂದ ಬೇರೊಂದು ದೇಶಕ್ಕೆ ಹೋದವನು ಅಲ್ಲಿ ಅಪರಿಚಿತತೆಯನ್ನು ಅನುಭವಿಸುತ್ತಾನೆ. ಹೊಸ ಪರಕೀಯ ಪರಿಸರಕ್ಕೆ ಬಗ್ಗಿ ಹೋಗಲು ಅವನಿಗೆ ಕಷ್ಟವಾಗುತ್ತದೆ. ತನ್ನ ತಾಯ್ನಾಡಿನ ನೆನಪು ಅವನನ್ನು ಕಾಡುತ್ತಲಿರುತ್ತದೆ. ಅಲ್ಲದೆ ಹೊಸ ನಾಡಿನಲ್ಲಿ ತಾನು ಕೇವಲ ಕೆಲವೇ ದಿನ ಇರಬೇಕಾಗಿರುವುದರಿಂದ ಅವನು ಅಲ್ಲಿಯ ಸೌಲತ್ತುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಇರಲು ಅನಿವಾರ್ಯವಾಗಿ ಎಷ್ಟು ಬೇಕೋ ಅಷ್ಟು ಸಿಕ್ಕರೆ ಸಾಕು ಅವನು ಸಂತೃಪ್ತನಾಗುತ್ತಾನೆ.
ಇದೇ ರೀತಿ ಪರಲೋಕವೇ ತನ್ನ ನೈಜನೆಲೆಯೆಂದೂ, ಇಹಲೋಕವು ಕೇವಲ ಒಂದು ತಾತ್ಕಾಲಿಕ ನಿವಾಸವೆಂದೂ ಭಾವಿಸುವ ವ್ಯಕ್ತಿಯು ಎಂದೂ ಲೌಕಿಕ ಸುಖಗಳಿಗೆ ಮಾರುಹೋಗಲಾರನು. ಜಗತ್ತಿನ ಆಕರ್ಷಣೆಗಳು ಅವನನ್ನು ಸಮ್ಮೋಹಗೊಳಿಸಲಾರವು. ಅವನು ಲೋಕದಲ್ಲಿ ಸುಖಲೋಲುಪನಾಗುವ ಬದಲು ಇದ್ದುದರಲ್ಲಿ ತೃಪ್ತಿಪಡುವನು. ಲೌಕಿಕವಾಗಿ ಅವನು ಕೇವಲ ಜೀವನದ ನೈಜ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಮಾತ್ರ ಶ್ರಮಿಸುವನು.
ಪ್ರಯಾಣಿಕನ ಬಳಿ ವಸ್ತುಗಳ ಹೊರೆ ಹಗುರವಾಗಿರುವಷ್ಟೇ ಪ್ರಯಾಣವು ಸುಗಮವಾಗಿರುತ್ತದೆ. ಇದೇ ರೀತಿ ಪರಲೋಕದ ಕಡೆಗೆ ಪ್ರಯಾಣಿಸುತ್ತಿರುವ ಮನುಷ್ಯನ ಮೇಲೆ ಲೌಕಿಕ ಸಂಪತ್ಸಾಧನಗಳ ಹೊರೆ ಎಷ್ಟು ಇರುವುದೋ ಅಷ್ಟೇ ಅವನ ಪ್ರಯಾಣವು ಸುಲಭ ಹಾಗು ಸುಖಮಯವಾಗಿರುವುದು.
ಇಸ್ಲಾಮ್ ಲೌಕಿಕ ಪ್ರಗತಿಯನ್ನು ವಿರೋಧಿಸುವುದಿಲ್ಲ. ಅದು ಲೌಕಿಕ ಪ್ರಗತಿಯ ಜೊತೆ ಮನುಷ್ಯನು ವೈಚಾರಿಕ, ನೈತಿಕ ಮತ್ತು ಕರ್ಮಗಳ ಕ್ಷೇತ್ರವು ವಿಕಾಸಗೊಳ್ಳುತ್ತಾ ಹೋಗಬೇಕು ಮತ್ತು ಅವೆಲ್ಲಾ ಮನುಷ್ಯನನ್ನು ಅವನ ನೈಜ ಗುರಿಯಾಗಿರುವ ಪಾರಲೌಕಿಕ ಯಶಸ್ಸಿನೆಡೆಗೆ ಒಯ್ಯಲು ಸಮರ್ಥವಾಗಬೇಕೆಂದು ಆಶಿಸುತ್ತದೆ. ಮೇಲ್ನೋಟಕ್ಕೆ ಪ್ರಗತಿಯಂತೆ ಕಾಣಿಸಿಕೊಂಡು ಒಳಗಿನಿಂದ ಮನುಷ್ಯನನ್ನು ವೈಚಾರಿಕತೆಯೂ, ನೈತಿಕವಾಗಿಯೂ ಕ್ರಿಯಾತ್ಮಕವಾಗಿಯೂ ಅಧೋಗತಿಗೆ ತಳ್ಳುವಂತಹ ಮತ್ತು ಅಂತಿಮವಾಗಿ ಮನುಷ್ಯನನ್ನು ವಿನಾಶದ ಹಳ್ಳಕ್ಕೆ ತಳ್ಳುವಂತಹ ‘ಪ್ರಗತಿ’ಯನ್ನು ಅದು ವಿರೋಧಿಸುತ್ತದೆ.
ಕೆಲ ಮದ್ರಸಾಗಳು, ಖಾನ್ಖಾಹಗಳು ಮತ್ತು ಆಶ್ರಮಗಳು ‘ಕಳ್ಳರ ಸಂತೆ’ ಆಗಿಬಿಟ್ಟಿವೆ. ಮದ್ರಸಾಗಳಿಗೆ ತಲುಪಬೇಕಾದ ಉಚಿತ ಅಕ್ಕಿ ಮೂಟೆಗಳು, ಬೇರೆಯವರ ಮನೆಗಳಿಗೆ ಸಾಗುತ್ತಿವೆ. ಆ ಬಡ ಮಕ್ಕಳಿಗೆ ಸಿಗಬೇಕಾದ ಆ ಹಕ್ಕು ಯಾರೋ ಹೊಡೆದು ತಿನ್ನುತ್ತಿದ್ದಾರೆ. ‘ಫತ್ವಾ’ಗಳು ಸಹ ಹಣಕ್ಕೆ ಮಾರಾಟವಾಗುತ್ತಿವೆ. ಖಾನ್ಖಾಹಗಳು ಆಧ್ಯಾತ್ಮಿಕ ಮಾರುಕಟ್ಟೆಗಳಾಗಿ ಬಿಟ್ಟವೆ. ಆಶ್ರಮಗಳು ಫಾರಿನ್ ಫಂಡ್ ಬ್ಯಾಂಕುಗಳಾಗಿ ಮಾರ್ಪಟ್ಟಿವೆ. ಸ್ವಾಮಿಗಳು ಸ್ತ್ರೀಭಕ್ತರಾಗಿ ಹೋಗಿದ್ದಾರೆ. ರಾಜಕೀಯದವರಂತೂ ಕೇಳಲೇಬೇಡಿ. ರೈತರ ಭೂಮಿ ಕಬಳಿಸುತ್ತಿದ್ದಾರೆ. ಅರಾಜಕತೆ ತಾಂಡವಾಡುತ್ತಿದೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಲಂಚದ ಹೆಸರು ಕೇಳಿಬರುತ್ತಿದೆ. ಕೋಟ್ಯಾಂತರ ರೂಪಾಯಿಗಳನ್ನು ರಾಜಕೀಯ ವ್ಯಕ್ತಿಗಳು ಅವ್ಯವಹಾರಗಳನ್ನು ನಡೆಸಿ ಸಂಪಾದಿಸುತ್ತಿದ್ದಾರೆ. – ಇಂತಹ ನೂರಾರು ವಿಷಯಗಳನ್ನು ಪ್ರತಿ ಬೆಳಗ್ಗೆ ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಎಲ್ಲರ ಗುರಿ ಒಂದೇ ಸಂಪತ್ತು ಸಂಪತ್ತು ಸಂಪತ್ತು.
ಯಾವ ಧರ್ಮವೂ ಅನೈತಿಕತೆಯ ಪಾಠವನ್ನು ಹೇಳಿಕೊಡುವುದಿಲ್ಲ. ಆನರ ಮನಸ್ಸು ಕಲ್ಲಾಗಿಹೋಗಿದೆ. ಮನುಷ್ಯತ್ವ ಸತ್ತು ಎಷ್ಟೋ ಶತಮಾನಗಳು ಕಳೆದುಹೋಗಿವೆ. ಎಲ್ಲಾ ಯುಗಗಳಲ್ಲೂ ಧರ್ಮ ಜನರನ್ನು ಸನ್ಮಾರ್ಗದ ಕಡೆಗೆ ಒಯ್ಯಲು ಪ್ರಯತ್ನಿಸುತ್ತದೆ. ನಾವು ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡಿದ್ದೇವೆ. ಸತ್ಯ ಕಾಣುವುದೇ ಇಲ್ಲ. ಕೆಲವರು ಅಷ್ಟೋ ಇಷ್ಟೋ ತಗ್ಗಿ ಬಗ್ಗಿ ನಡೆಯುತ್ತಾರೆ. ಬಹುಶಃ ಆದುದರಿಂದಲೇ ಅಲ್ಪ ಸ್ವಲ್ಪ ನ್ಯಾಯ, ನೀತಿ, ಧರ್ಮ ಈ ಭೂಮಿ ಮೇಲೆ ಉಳಿದಿರಬಹುದು ಎಂದು ಕಾಣುತ್ತದೆ.
ಪ್ರವಾದಿವರ್ಯರ (ಸ) ಪ್ರೀತಿಯಲ್ಲಿ ಬೆಂದಿರುವ ಸೂಫಿ ಸಂತರು ಎಂದೂ ಸನ್ಮಾರ್ಗವನ್ನು ಕೈ ಬಿಡುವುದಿಲ್ಲ. ಈ ಯುಗದಲ್ಲಿ ಅಂಥವರು ಕೋಟಿಗೊಬ್ಬರೂ ಸಿಗುವುದು ಕಷ್ಟ.
‘ಇಸ್ಲಾಮ್: ದ ಮಿಸ್ ಅನ್ಡರ್ಸ್ಟುಡ್ ರಿಲೀಜನ್’ (1955 ಮೇ) ಎಂಬ ಗ್ರಂಥದಲ್ಲಿ ಜೇಮ್ಸ್ ಮಿಷನೇರ್ ಹೀಗೆ ಬರೆದಿರುವರು. “ಇತಿಹಾಸದಲ್ಲಿ ಇಸ್ಲಾಮಿನಷ್ಟು ವೇಗವಾಗಿ ಹರಡಿದ ಧರ್ಮ ಬೇರೊಂದಿಲ್ಲ. ಈ ಧರ್ಮದ ಅಲೆಯನ್ನು ಖಡ್ಗದ ಮೂಲಕ ಹರಡಲಾಗಿದೆಯೆಂದು ಪಶ್ಚಿಮದಲ್ಲಿ ಭಾವಿಸಲಾಗುತ್ತಿದೆ. ಆದರೆ ಆಧುನಿಕ ವಿದ್ವಾಂಸರು ಯಾರೂ ಈ ಕಲ್ಪನೆಯನ್ನು ಸ್ವೀಕರಿಸುವುದಿಲ್ಲ. ಮುಹಮ್ಮದ್ ದೈವಿಕ ಪ್ರೇರಣೆಯಿಂದ ಇಸ್ಲಾಮನ್ನು ಕಲಿಸಿದರು. ಅವರು ಮೂರ್ತಿಯನ್ನು ಪೂಜಿಸುವ ಅರೇಬಿಯಾದ ಬುಡಕಟ್ಟಿನಲ್ಲಿ ಜನಿಸಿದರು. ಹುಟ್ಟಿನಲ್ಲೇ ಅನಾಥರಾಗಿದ್ದರು. ಅವರು ಯಾವಾಗಲೂ ಬಡವರು, ನಿರ್ಗತಿಕರು, ವಿಧವೆಯರು, ಅನಾಥರು, ಗುಲಾಮ ಹಾಗೂ ಕೆಳ ವರ್ಗದವರ ಬಗ್ಗೆ ಚಿಂತಾಕ್ರಾಂತರಾಗಿದ್ದರು.’
ಬರ್ನಾರ್ಡ್ ಷಾ ಹೀಗೆ ಹೇಳಿರುವರು: ‘ಮುಹಮ್ಮದರು ಇಂದು ಜೀವಂತವಾಗಿರುತ್ತಿದ್ದರೆ, ಮಾನವ ನಾಗರಿಕತೆಯನ್ನು ನಾಶಗೊಳಿಸುವ ಎಲ್ಲಾ ಸಮಸ್ಯೆಗಳನ್ನು ಪರಿ ಹರಿಸುವಲ್ಲಿ ಸಫಲರಾಗುತ್ತಿದ್ದರು. ಮುಂದಿನ ಶತಮಾನದಲ್ಲಿ ಯಾವದೇ ಧರ್ಮಕ್ಕೆ ಇಂಗ್ಲೆಂಡ್ ಅಥವಾ ಯೂರೋಪನ್ನು ಆಳುವ ಅವಕಾಶ ಇದ್ದರೆ ಅದು ಇಸ್ಲಾಮ್ ಧರ್ಮಕ್ಕಾಗಿದೆ. ನಾನು ಅವರ ಬಗ್ಗೆ ಕಲಿತೆ. ಅವರ ವ್ಯಕ್ತಿತ್ವ ಬೆರಗುಗೊಳಿಸುವಂತಹದ್ದು. ನನ್ನ ಅಭಿಪ್ರಾಯದಂತೆ ಅವರನ್ನು ಮಾನವ ಕುಲದ ವಿಮೋಚಕರೆಂದೇ ಕರೆಯಬೇಕು.’
‘ಹಿಸ್ಟರಿ ಆಫ್ ದ ಇಸ್ಲಾಮಿಕ್ ಪೀಪಲ್ಸ್’ ಎಂಬ ಗ್ರಂಥದಲ್ಲಿ ಡಾ| ಗುಸ್ತವ್ ವೈಲ್ ಹೀಗೆ ಬರೆದಿರುವರು: ‘ಮುಹಮ್ಮದ್ರು ಜನರಿಗೆ ಪ್ರಕಾಶಿಸುವ ಉದಾಹರಣೆಯಾಗಿದ್ದರು. ಅವರ ಗುಣ ನಡತೆ ಪವಿತ್ರವಾಗಿದ್ದು, ಕಳಂಕ ರಹಿತವಾಗಿತ್ತು. ಅವರ ಮನೆ, ವಸ್ತ್ರ, ಆಹಾರ ಇತ್ಯಾದಿಗಳು ಸರಳತೆಯ ವೈಶಿಷ್ಟ್ಯದಿಂದ ತುಂಬಿತ್ತು. ಅವರು ಎಷ್ಟೊಂದು ನಿರಾಡಂಬರರಾಗಿದ್ದರೆಂದರೆ ಅವರು ತಮ್ಮ ಸಂಗಾತಿಗಳಿಂದ ಸನ್ಮಾನವನ್ನು ಸ್ವೀಕರಿಸುತ್ತಿರಲಿಲ್ಲ. ಅವರು ತಮ್ಮ ಸ್ವಂತ ಕೆಲಸಗಳನ್ನು ಗುಲಾಮರಿಂದ ಮಾಡಿಸುತ್ತಿರಲಿಲ್ಲ. ಅವರನ್ನು ಯಾರೂ ಯಾವುದೇ ಸಮಯದಲ್ಲಿ ಕಾಣಬಹುದಾಗಿತ್ತು. ಅವರು ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಅವರ ಜನಾಂಗದ ಕ್ಷೇಮಾಭಿವೃದ್ಧಿಯ ಕಾರ್ಯಾತುರ ಅವರನ್ನು ಮಿತಿಯಿಲ್ಲದ ಔದಾರ್ಯವಂತ ಹಾಗೂ ಉದಾರರನ್ನಾಗಿ ಮಾಡಿತ್ತು.
‘ದ ಲೈಫ್ ಆಂಡ್ ಟೀಚಿಂಗ್ ಆಫ್ ಮುಹಮ್ಮದ್’ (1932) ಎಂಬ ಕೃತಿಯಲ್ಲಿ ಅನ್ನೀಬೆಸೆಂಟ್ ಹೀಗೆ ಬರೆಯುತ್ತಾರೆ, ‘ಅರೇಬಿಯಾದ ಆ ಮಹಾನ್ ಪ್ರವಾದಿಯ ಜೀವನ ಸಂದೇಶವನ್ನು ಯಾರಾದರೂ ಅಧ್ಯಯನ ಮಾಡಿದರೆ ಅವರು ಅದರಿಂದ ಪ್ರಭಾವಿತರಾಗದೇ ಇರಲಾರರು. ಸೃಷ್ಟಿಕರ್ತನೊಂದಿಗಿರುವ ಅವರ ಭಯ ಭಕ್ತಿ ನೋಡಿದರೆ ಅವರು ನಿಶ್ಚಯವಾಗಿಯೂ ಓರ್ವ ಶ್ರೇಷ್ಠ ಸೃಷ್ಟಿಕರ್ತನ ಮಹಾನ್ ಪ್ರವಾದಿಯಾಗಿದ್ದರು ಎಂದು ತಿಳಿಯುತ್ತದೆ ಮತ್ತು ನಿಮಗೆ ತಿಳಿದಿದೆಯಾದರೂ ಅವರ ಬಗ್ಗೆ ತಿಳಿಸಲು ತುಂಬಾ ವಿಶೇಷತೆಗಳು ಇವೆ. ಅವರ ಚಾರಿತ್ರ್ಯವನ್ನು ಪುನಃ ಪುನಃ ಅಧ್ಯಯನ ನಡೆಸಿದಾಗ ಆ ಅರೇಬಿಯಾದ ಮಹಾನ್ ಅಧ್ಯಾಪಕರ ಜೀವನದ ಹೊಸ ಹೊಸ ರಂಗಗಳು ಕಂಡುಬರುತ್ತವೆ.’
ಮಹಾತ್ಮಗಾಂಧಿ ತಮ್ಮ ‘ಯಂಗ್ ಇಂಡಿಯಾ'(1924)ದಲ್ಲಿ, ‘ಮಿಲಿಯಗಟ್ಟಲೆ ಮಾನವ ಹೃದಯದಲ್ಲಿ ಅಚ್ಚೊತ್ತಿರುವ ಓರ್ವ ಉತ್ಕøಷ್ಟ ವ್ಯಕ್ತಿಯ ಜೀವನ ವಿಧಾನವನ್ನು ನಾನು ಅರಿಯಲು ಇಚ್ಛಿಸುತ್ತೇನೆ. ಅವರ ಸಂದೇಶದಲ್ಲಿ ಖಡ್ಗವು ಯಾವ ಸ್ಥಾನವನ್ನೂ ಗಳಿಸಲಿಲ್ಲವೆಂಬುದು ನನ್ನಲ್ಲಿ ಇನ್ನೂ ಹೆಚ್ಚು ನಂಬಿಕೆಯನ್ನುಂಟುಮಾಡಿತು. ಅದು ಸರಳತೆಯ ಪರಾಕಾಷ್ಠೆಯಾಗಿತ್ತು. ಅತಿ ಪ್ರಾಮುಖ್ಯತೆ ಮತ್ತು ನಿಖರತೆಯೊಂದಿಗೆ ವಾಗ್ದಾನಗಳನ್ನು ನೆರವೇರಿಸುವ, ತನ್ನನ್ನು ಯಾವುದೇ ಔನ್ನತ್ಯಕ್ಕೇರಿಸಬಯಸದ, ತನ್ನ ಗೆಳೆಯರ ಮತ್ತು ಅನುಚರರ ಬಗೆಗಿನ ಅವರ ಅರ್ಪಣಾಭಾವ, ತನ್ನ ಪ್ರಭುವಿನ ಮೇಲಿನ ಪರಿಪೂರ್ಣ ವಿಶ್ವಾಸ ಮತ್ತು ತನ್ನ ದೌತ್ಯದ ಬಗ್ಗೆ ಇದ್ದ ಅಚಲವಾದ ವಿಶ್ವಾಸವು ಅವರ ಎಲ್ಲ ಅಡಚಣೆಗಳನ್ನು ಎದಿರಿಸುವಂತೆ ಮಾಡಿತ್ತು. ಇದಾಗಿದೆ ಎಲ್ಲವನ್ನು ಅತಿ ಜಯಿಸಿದ್ದು, ಬದಲಾಗಿ ಖಡ್ಗವಲ್ಲ. ನಾನು ಪ್ರವಾದಿ ಜೀವನ ಚರಿತ್ರೆಯ 2ನೆಯ ಭಾಗವನ್ನು ಓದಿ ಮುಗಿಸಿದಾಗ ಆ ಶ್ರೇಷ್ಠ ಜೀವನದ ಬಗ್ಗೆ ಇನ್ನಷ್ಟು ಓದಲು ಇಲ್ಲವೆಂದು ಖಿನ್ನನಾದೆ.’
ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ |
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ |
ಆಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ ||
ನಾನು ಹೋಗುತ್ತಿದ್ದ ದಾರಿಯಲಿ
ಒಂದೆಡೆ ಗಿಡಮರಗಳ ಸಾಲು, ಒಂದೆಡೆ ಮಸಣ
ಕಾಲಿಗೇನೋ ತಾಕಿದಂತಾಯಿತು
ಅದು ಬೇರೇನಲ್ಲ ಶವದ ಮೂಳೆ
ನನಗೆ ಹೇಳಿತು – ಓ ನಡೆಯುವವನೆ
ತಗ್ಗಿ ಬಗ್ಗಿ ನಡೆ, ಒಮ್ಮೆ ನಾನೂ ಮನುಷ್ಯನಾಗಿದ್ದೆ
ಇದೇ ನಿನ್ನ ನೈಜ ನೆಲೆ.
ಯಾರನ್ನೂ ದ್ವೇಷಿಸಬೇಡಿ, ಎಲ್ಲರನ್ನೂ ಪ್ರೀತಿಸಿ
“ಜಮಾತೆ ಅಹ್ಲೇ ಸುನ್ನತ್ ಕರ್ನಾಟಕ” ಸಂಘಟನೆಯ ಬೆಂಗಳೂರು ಶಾಖೆಯನ್ನು ಇಂದು ಅದರ ಅಧ್ಯಕ್ಷರಾದ ಹಜ್ರತ್ ತನ್ವೀರ್ ಹಾಶಿಮಿರವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಅನೇಕ ಮಂದಿ ಸಂಘಟನೆಗೆ ಸೇರ್ಪಡೆಗೊಂಡರು. ಅವರಿಗೆ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಜಾಗೃತಿ ಮತ್ತು ಶಿಸ್ತು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಬೆಳೆಸುವುದು, ಪ್ರೀತಿ ವಿಶ್ವಾಸದ ವಾತಾವರಣವನ್ನು ಬಲಪಡಿಸುವುದು, ಮಾನವೀಯ ನೆಲೆಯಲ್ಲಿ ಪರಸ್ಪರ ಆದರ, ಗೌರವದ ಸಂಸ್ಕೃತಿಯನ್ನು ಪೋಷಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಯುವ ಜನಾಂಗದ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಮತ್ತು ತರಬೇತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ತಲಾಕ್, ವರದಕ್ಷಿಣೆ, ಗುಟ್ಕಾ , ಮದ್ಯಪಾನ ಮತ್ತು ಮಾದಕ ವ್ಯಸನ ಮುಂತಾದ ಅನಿಷ್ಟಗಳಿಂದ ಯುವ ಜನಾಂಗವನ್ನು ದೂರವಿಡಲಿಕ್ಕಾಗಿ ಜಾಗೃತಿ ಅಭಿಯಾನವನ್ನು ನಡೆಸಬೇಕಾಗಿದೆ. ದೇಶಪ್ರೇಮ ಹಾಗೂ ಸಂವಿಧಾನಕ್ಕೆ ಭದ್ದತೆಯ ಭಾವನೆಗಳನ್ನು ಪೋಷಿಸಿ ದೇಶದ ರಕ್ಷಣೆ ಹಾಗೂ ಸಮೃದ್ಧಿಗಾಗಿ ಎಲ್ಲ ಬಗೆಯ ತ್ಯಾಗ ಬಲಿದಾನಗಳನ್ನು ನೀಡುವುದಕ್ಕೆ ಸಜ್ಜಾಗಿರುವಂತೆ ಸಮಾಜವನ್ನು ಪ್ರೋತ್ಸಾಹಿಸಬೇಕಾಗಿದೆ. ದ್ವೇಷದ ಭಾವನೆಗಳನ್ನು ಇಲ್ಲವಾಗಿಸಿ ಎಲ್ಲೆಡೆ ಪ್ರೀತಿ ವಿಶ್ವಾಸದ ಭಾವನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಎಲ್ಲ ಬಗೆಯ ಅನಿಷ್ಟಗಳಿಂದ ಮುಕ್ತಗೊಳಿಸಿ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ತರುವ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ.
ಯಾರನ್ನೂ ದ್ವೇಷಿಸಬೇಡಿ, ಎಲ್ಲರನ್ನೂ ಪ್ರೀತಿಸಿ – ಎಂಬ ಸೂಫಿ ಸಂತ ಹಜ್ರತ್ ಖ್ವಾಜ ಮೊಯಿನುದ್ದೀನ್ ಚಿಷ್ಟಿರವರ(ರ) ಭವ್ಯ ಆದೇಶವೇ ಈ ಸಂಘಟನೆಯ ಆದೇಶವಾಗಿದೆ.
ಒಮ್ಮೆ ಹಜ್ರತ್ ಬಾಬಾ ಫರೀದರಿಗೆ(ರ) ಓರ್ವರು ಕತ್ತರಿಯನ್ನು ಕಾಣಿಕೆಯಾಗಿ ಕೊಟ್ಟರು. ಅವರು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಅದರ ಬದಲು ಸೂಜಿ ದಾರ ಕೊಡು ಎಂದರು. ಕತ್ತರಿಯ ಕೆಲಸ ಬೇರ್ಪಡಿಸುವುದು. ಸೂಜಿಯ ಕೆಲಸ ಜೋಡಿಸುವುದು. ಹಾಗೇ ನಾವು ಮನಸ್ಸುಗಳನ್ನು ಜೋಡಿಸುವಂತಹ ಕೆಲಸ ಮಾಡಬೇಕೇ ಹೊರತು, ದ್ವೇಷದ ಅಗ್ನಿಯಿಂದ ಅವನ್ನು ವಿಚ್ಚೇದಿಸಬಾರದು. ಎಲ್ಲರು ಸಮಾನರು, ಪ್ರತಿಯೊಬ್ಬರಿಗೂ ಗೌರವ ಕೊಡಬೇಕು. ಈ ನಡುವೆ ಆನ್ಲೈನ್ ನಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಪ್ರಚಾರವಾಗುತ್ತಿವೆ. ಗಾಳಿ ಮಾತುಗಳಿಗೆ ಬಲಿಯಾಗಬಾರದು. ಬೇರೆಯವರಿಗೆ ಸಹಾಯ ಮಾಡಿದರೆ ಅವರು ಅತ್ಯುತ್ತಮ ಮನುಷ್ಯರಾಗಲು ಸಾಧ್ಯ. ನೀವೆಲ್ಲ ಉತ್ತಮ ಪ್ರಜೆಗಳಾಗಿ ಸಂಘಟನೆಯನ್ನು ಬಲಪಡಿಸುತ್ತೀರಿ ಎಂದು ನಂಬಿದ್ದೇನೆ. ಸಂಘನೆಯ ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡಿ, ಕೊನೆಗೆ ದುವಾ ಮಾಡಿ ತನ್ನ ಭಾಷಣವನ್ನು ಅಧ್ಯಕ್ಷರು ಮುಗಿಸಿದರು.
ಸಭೆಯಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಅವರಲ್ಲಿ ಮುಖ್ಯವಾಗಿ ಮುಫ್ತಿ ಮಹಮ್ಮದ್ ಅಲಿ ಖಾಝಿ, ಉಸ್ಮಾನ್ ಷರೀಫ್, ಮೌಲಾನಾ ಹಸ್ಸಾನ್ ಆಮೀರಿ, ಸಿಕಂದರ್, ಸಯ್ಯದ್ ಝಬಿವುಲ್ಲಾ, ಮೌಲಾನಾ ಮುಸ್ತಫಾ ಕಮಾಲ್, ಸಯ್ಯದ್ ನಜೀರ್
(www.vknews.com) :
ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಜಗದಲಿ ರೋಸಿಹೋದ ಆನಾಥ ಮನಸ್ಸುಗಳಲ್ಲಿ ಸಿಟ್ಟು ನಾಳೆಯೋ ನಾಳಿದ್ದೋ… ಮುಕ್ತಿಯ ಕನಸು.
ಕ್ರಾಂತಿಯ ಕನಸು ಭ್ರಮೆ ಪ್ರಕೃತಿಯೂ ಮೂಕ ಏನಾಗುವುದೋ ಈ ಬನದ ಭವಿಷ್ಯ ಪ್ರತಿಯೊಂದು ಕೊಂಬೆಯ ಮೇಲೆ ಕುಳಿತಿದೆ ವಿಷಸರ್ಪ ಆದರೂ ಕತ್ತಲೆಯ ಹಾದಿಯಲ್ಲಿ ಆಸೆ ಆಕಾಂಕ್ಷೆಗಳ ದೀಪ ಎದುರಾಗುವ ಪ್ರತಿ ನೆರಳಲ್ಲೂ ನ್ಯಾಯಕ್ಕಾಗಿ ಹುಡುಕಾಟ.
(www.vknews.com) : ಅಪ್ಪಾಜಿ…! ನೀವು ಚಪಾತಿ ತಿನ್ನುವ ಮುನ್ನ ಅದರ ನಾಲ್ಕು ಭಾಗಗಳನ್ನಾಗಿ ಏಕೆ ಮಾಡುತ್ತೀರಿ?
ಒಳ್ಳೆಯ ಪ್ರಶ್ನೆ ಮಗನೇ…!
ನಾವು ಒಟ್ಟಾಗಿ ಕುಳಿತು ಭೋಜನ ಮಾಡುವಾಗ ಯಾರ ಹೊಟ್ಟೆಯಲ್ಲಿ ಎಷ್ಟು ಹಸಿವಿದೆ ಎಂದು ನಮಗೆ ತಿಳಿಯದು. ಯಾರಿಗೆ ಹಸಿವು ಹೆಚ್ಚಾಗಿದೆ ಅವರು ಚಪಾತಿಯ ಹೋಳನ್ನು ತೆಗೆದುಕೊಳ್ಳಲಿ ಎಂದು ಗುರುವರ್ಯರು ಮಾಡಿರುವ ಪದ್ಧತಿ. ಮನೆಯಲ್ಲಿ ಅಮ್ಮನ ಹತ್ತಿರ ಕೇಳಿ ಚಪಾತಿ ಪಡೆದುಕೊಳ್ಳಬಹುದು. ಹೊರಗೆ ಸ್ನೇಹಿತರ ಜೊತೆ , ನೆಂಟರ ಜೊತೆ ಹಾಗೆ ಮಾಡಲು ಸಾಧ್ಯವೇ ? ನಾಚಿಕೆ ಆಗುತ್ತದೆ ಅಲ್ಲವೇ ಪುಟ್ಟಾ…! ಬೇರೆಯವರು ಸಂಕೋಚವೂ ಪಡಬಾರದು, ಹೊಟ್ಟೆ ತುಂಬ ತಿನ್ನಲಿ ಎಂಬ ರಹಸ್ಯ ಈ ಅಭ್ಯಾಸದ ಹಿಂದಿದೆ.
ಇನ್ನೊಂದು ವಿಷಯ ಏನೆಂದರೆ, ನಾನು ಕಡಿಮೆ ತಿಂದರೂ ಪರವಾಗಿಲ್ಲ, ಬೇರೆಯವರು ಸುಖವಾಗಿರಬೇಕು, ಅವರಿಗೆ ಯಾವ ರೀತಿಯ ಅನಾನುಕೂಲವೂ ಆಗಬಾರದು. ಎಲ್ಲವೂ ನನಗೆ ಬೇಕು ಎಂದು ಬಯಸಬಾರದು, ಬೇರೆಯವರ ಬಗ್ಗೆಯೂ ಚಿಂತಿಸಬೇಕು. ಈ ವಿಷಯ ಕೇವಲ ಚಪಾತಿಗೆ ಸೀಮತವಾಗಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಎಲ್ಲರ ಬಗ್ಗೆ ಕಾಳಜಿವಹಿಸಬೇಕು. ಉದಾಹರಣೆಗೆ ಆಸ್ತಿ ಹಂಚಿಕೆಯಲ್ಲಿ ಕೆಲವರು ಸ್ವಾರ್ಥಿಗಳಾಗಿ ಬಿಡುತ್ತಾರೆ. ಎಲ್ಲರಿಗು ಸಮನಾದ ಪಾಲು ಹಂಚುವುದಿಲ್ಲ. ಹೆಣ್ಣು ಮಕ್ಕಳಿಗಂತೂ ಕೊಡುವುದೇ ಇಲ್ಲ. ದೇವರಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಷ್ಠೆಯಿಂದ ಕರ್ಮಗಳನ್ನು ಪಾಲಿಸುತ್ತಿರುತ್ತಾರೆ. ಆದರೆ ಮನುಷ್ಯರಿಗೆ ಸಂಬಂಧಿಸಿದ ವಿಷ್ಯಗಳಲ್ಲಿ ನಿಯ್ಯತ್ತು ಬದಲಾಯಿಸಿ ಬಿಡುತ್ತಾರೆ. ಪೋಷಕರ ಖರ್ಚಿಗೆ ನಯಾ ಪೈಸೆ ಕೊಡಲ್ಲ. ಊರಿಗೆ ಅನ್ನದಾನ ಮಾಡುತ್ತಿರುತ್ತಾರೆ. ಮನೆಯಲ್ಲಿರುವವರ ಮದುವೆ ಮಾಡಿಸುವುದಿಲ್ಲ, ಪರರ ಸಾಮೂಹಿಕ ಮದುವೆಗಳಿಗೆ ಸಾರಥಿಯಾಗಿರುತ್ತಾರೆ. ಶ್ರೀಮಂತರನ್ನು ಕಂಡರೆ ಒಂದು ವ್ಯವಹಾರ ಮಾಡುತ್ತಾರೆ, ಬಡವರ ಜೊತೆ ನಡೆದುಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಅತಿಥಿಗಳ ಮುಂದೆ ನಡೆದುಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ಅವರು ಹೊರಟ ನಂತರ ಮಾತನಾಡಿಕೊಳ್ಳುವ ಪರಿಯೇ ಬೇರೆ. ಮನುಷ್ಯ ತನ್ನ ಬಣ್ಣಗಳನ್ನು ಬದಲಾಯಿಸುತ್ತಿರುತ್ತಾನೆ. ನಮ್ಮ ದೃಷ್ಟಿಗೆ ಕಾಣುವ ಮನುಷ್ಯ, ನಿಜವಾದ ಮನುಷ್ಯನಲ್ಲ. ನಮ್ಮ ಅಂತರಂಗವೇ ನಿಜವಾದ ನಾವು.
ಜನ ಸಾಮಾನ್ಯರು, ರೈತರು, ಬಡಬಗ್ಗರು ದೇಶದಲ್ಲಿ ಪರದಾಡುತ್ತಿದ್ದಾರೆ. ನ್ಯಾಯವಾದಿಗಳು, ಮಂತ್ರವಾದಿಗಳು, ಪತ್ರಕರ್ತರು, ವೈದ್ಯರು, ಶಿಕ್ಷಕರು, ಮೀಡಿಯಾ ಚಾನಲ್ ಗಳು, ರಾಜಕೀಯ ವ್ಯಕ್ತಿಗಳು, ಸ್ವಾಮೀಜಿಗಳು, ಪೊಲೀಸರು – ಎಲ್ಲರು ತನ್ನ ನೈಜ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ.
ದುರಾಡಳಿತ ಅನ್ಯಾಯ ಗುಂಡಾಗಿರಿ ಹೆಡೆ ಎತ್ತಿವೆ
ದಕ್ಷತೆ ನ್ಯಾಯ ನೀತಿ ಬದುಕಿದ್ದು ಸತ್ತಿವೆ
ಮೋಸ ವಂಚನೆ ಕೊಲೆ ದರೋಡೆ ಭುಗಿಲೆದ್ದಿವೆ
ಮನುಷ್ಯತ್ವ ಮಾನವೀಯತೆ ಸಹನೆ ನೆಲ ಕಚ್ಚಿವೆ
ಇದಕೆಲ್ಲಾ ಮುಖ್ಯ ಕಾರಣ ಸ್ವಾರ್ಥ. ಗೊತ್ತಾಯಿತೇ …!
ತುಂಬಾ ಥ್ಯಾಂಕ್ಸ್ ಅಪ್ಪಾಜಿ…
ಒಂದು ಚಪಾತಿಯ ಸಮಾನಾಂತರ 4 ಭಾಗಗಳ್ಳನ್ನು ಏತಕ್ಕೆ ಮಾಡುತ್ತಾರೆ ಎಂದು ತಿಳಿದುಕೊಂಡೆ.
ನಾನು ನಿಸ್ವಾರ್ಥಿಯಾಗಿ ಬದುಕಲು ಇಚ್ಛಿಸುತ್ತೇನೆ. ಆಶೀರ್ವದಿಸಿ.
ನಮ್ಮ ಜಾಲತಾಣದ ಇನ್ಸಾಗ್ರಾಂ,ಪೇಜ್ Follow ಮಾಡಿ ಮತ್ತು ಶೇರ್ ಮಾಡಿ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆಯಿರಿ
ನಮ್ಮ ಪೇಜ್ ನ್ನು Follow ಮಾಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ...
https://www.instagram.com/vknews_media/
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.