ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಇದೊಂದು ವಿಶೇಷ ರೀತಿಯ ಕೃತಕ ಹಲ್ಲಿನ ಸೆಟ್ ಆಗಿರುತ್ತದೆ. ಸಾಮಾನ್ಯವಾಗಿ ಹಾಕಿ ತೆಗೆಯಬಹುದಾದ ಹಲ್ಲಿನ ಸೆಟ್ ಮಾಡಲು ಎಕ್ರಲಿಕ್ ಎಂಬ ವಸ್ತುವನ್ನು ಬಳಸುತ್ತಾರೆ. ಆದರೆ ಈ ಎಕ್ರಲಿಕ್ ವಸ್ತುವಿಗೆ ತನ್ನದೇ ಆದ ಋಣಾತ್ಮಕ ಗುಣಗಳಿದ್ದು ಕೆಲವೊಂದು ಸಂದರ್ಭಗಳಲ್ಲಿ ಇದನ್ನು ಬಳಸಲು ಸಾಧ್ಯವಾಗುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ನೈಲಾನ್ ಪ್ಲೆಕ್ಸಿಬಲ್ ಡೆಂಚರ್ ಬಳಸಲಾಗುತ್ತದೆ. ಇದು ಬಹಳ ತೆಳುವಾದ ಥರ್ಮೊಪ್ಲಾಸ್ಟಿಕ್ ವಸ್ತವಾಗಿದ್ದು ಎಕ್ರಲಿಕ್ನಂತೆ ಗಡುಸಾಗಿರದೆ ಬಹಳ ಪ್ಲೆಕ್ಸಿಬಲ್ ಇರುವ ಕಾರಣದಿಂದಾಗಿ ಅದಕ್ಕೆ ಪ್ಲೆಕ್ಸಿಬಲ್ ಅಥವಾ ಬಾಗಿಸಬಹುದಾದ ಡೆಂಚರ್ ಎಂಬ ಅನ್ವರ್ಥನಾಮ ಬಂದಿರುತ್ತದೆ. ಎಲ್ಲ ವಯಸ್ಸಿನ ವ್ಯಕ್ತಿಗಳಿಗೆ ಈ ಪ್ಲೆಕ್ಸಿಬಲ್ ನೈಲಾನ್ ವಸ್ತು ಬಳಸಿ, ಕಳೆದು ಹೋದ ಹಲ್ಲನ್ನು ಪುನರ್ ಪ್ರತಿಷ್ಠಾಪಿಸಲಾಗುತ್ತದೆ. ನಮ್ಮ ಬಾಯಿಯಲ್ಲಿನ ನೈಸರ್ಗಿಕ ಹಲ್ಲುಗಳು ಆಕಸ್ಮಿಕವಾಗಿ ಕಳೆದು ಹೋದಾಗ ಅಥವಾ ಅಪಘಾತದಿಂದ ಬಿದ್ದು ಹೋದಾಗ ಅಂತಹ ಜಾಗಕ್ಕೆ ತೆಗೆಯಬಹುದಾದ ಹಲ್ಲಿನ ಡೆಂಚರ್ ಅಥವಾ ಶಾಶ್ವತವಾಗಿ ತೆಗೆಯಲಾಗÀದಂತ ಹಲ್ಲುಗಳನ್ನು ಕೂರಿಸಲಾಗುತ್ತಿದೆ.
ಈಗೀಗ ಇಪ್ಲಾಂಟ್ ಎಂಬ ಹೊಸತಾದ ವ್ಯವಸ್ಥೆ ಮುಖಾಂತರ ಕಳೆದು ಹೋದ ಹಲ್ಲಿನ ಜಾಗಕ್ಕೆ ಟೈಟಾನಿಯಂ ಲೋಹದಿಂದ ತಯಾರಿಸಿದ ಇಪ್ಲಾಂಟ್ನ್ನು ಎಲುಬಿನೊಳಗೆ ಕೂರಿಸಿ ಅದಕ್ಕೆ ಹಲ್ಲಿನ ಜೋಡಿಸುವ ವ್ಯವಸ್ಥೆಯೂ ಹೆಚ್ಚು ಜನಪ್ರಿಯವಾಗಿದೆ. ಆದರೆ ಇದಕ್ಕೆ ಹೆಚ್ಚಿನ ವೆಚ್ಚ ತಗಲುವ ಕಾರಣದಿಂದಾಗಿ ಹೆಚ್ಚಿನ ಜನರು ಸಾಂಪ್ರದಾಯಕವಾದ ತೆಗೆದುಹಾಕಬಹುದಾದ ಎಕ್ರಲಿಕ್ ಡೆಂಚರ್ ಹಾಗೂ ಪ್ಲ್ಲೆಕ್ಸಿಬಲ್ ಡೆಂಚರ್ನ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ.
ಪ್ಲೆಕ್ಸಿಬಲ್ ಡೆಂಚರ್ಗಳ ಪ್ರಯೋಜನಗಳು ಏನು? 1. ಈ ಪ್ಲೆಕ್ಸಿಬಲ್ ಡೆಂಚರ್ಗಳು ನಮ್ಮ ದೇಹದ ಜೀವಕೋಶಗಳಿಗೆ ಹಾಗೂ ಅಂಗಾಂಗಗಳಿಗೆ ಬೇಗನೆ ಒಗ್ಗಿಕೊಳ್ಳುತ್ತದೆ. ಇದರ ಬಣ್ಣ ಬದಲಾಗುವುದೇ ಇಲ್ಲ. 2. ಬಹಳ ಕಡಿಮೆ ತೂಕವಿದ್ದು, ಬಳಸಲು ಬಹಳ ಅನುಕೂಲಕರವಾಗಿರುತ್ತದೆ. ಹೆಚ್ಚು ಕಾಲ ಬಾಳಿಕೆ ಬರುತ್ತದೆ 3. ಈ ಪ್ಲೆಕ್ಸಿಡೆಂಚರ್ಗಳಿಗೆ ಸರಿಗೆಯಿಂದ ಮಾಡಿದ ಚೂಪಾದ ಕ್ಲಾಸ್ಪ್ಗಳ ಅಗತ್ಯವಿರುವುದಿಲ್ಲ. 4. ಬಾಯಿಯ ವಸಡು ಹಾಗೂ ದಂತದಾರ ಎಲುಬಿನಲ್ಲಿ ‘ಅಂಡರ್ಕಟ್’ ಇದ್ದರೂ ಸರಾಗವಾಗಿ ಹಾಕಿ ತೆಗೆದು ಮಾಡಲು ಸಾಧ್ಯವಿದೆ. 5. ಹಲ್ಲಿನ ಸುತ್ತಲಿನ ಎಲುಬು ಮತ್ತು ವಸಡುಗಳಿಗೆ ಬಹಳ ಸುಲಭವಾಗಿ ಕಚ್ಚಿ ಕುಳಿತುಕೊಳ್ಳುತ್ತದೆ ಮತ್ತು ಆಹಾರ ಸಿಕ್ಕಿಹಾಕಿಕೊಳ್ಳುವುದಿಲ್ಲ. 6. ಈ ಪ್ಲೆಕ್ಸಿ ಡೆಂಚರ್ ತೆಳು ಗುಲಾಬಿ ಬಣ್ಣದಾಗಿದ್ದು ನಮ್ಮ ವಸಡಿನ ಬಣ್ಣಕ್ಕೆ ಹೆಚ್ಚು ತಾಳೆಯಾಗುತ್ತದೆ. ಇದರಲ್ಲಿ ಬಣ್ಣವಿಲ್ಲದ ಟ್ರಾನ್ಸ್ಪರೆಂಟ್ ಅಂದರೆ ಪ್ಲೆಕ್ಸಿ ಡೆಂಚರ್ ಕೂಡಾ ಲಭ್ಯವಿದೆ. ಈ ಕಾರಣದಿಂದ ಈ ಪ್ಲೆಕ್ಸಿ ಡೆಂಚರ್ ಹೆಚ್ಚು ಸಹಜವಾಗಿ ಸ್ವಾಭಾವಿಕವಾಗಿ ಕಾಣಿಸುತ್ತದೆ. 7. ಈ ಪ್ಲೆಕ್ಸಿ ಡೆಂಚರ್ ಸಾಮಾನ್ಯವಾಗಿ ತುಂಡಾಗುವುದೇ ಇಲ್ಲ. ನೈಲಾನ್ ಎಂಬ ಪ್ಲಾಸ್ಟಿಕ್ನಿಂದ ಮಾಡಲಾದ ಈ ಪ್ಲೆಕ್ಸಿ ಡೆಂಚರ್ ಹೆಚ್ಚು ಬೆಂಡಾಗುವ ಸಾಮಥ್ರ್ಯ ಹೊಂದಿರುತ್ತದೆ. ಕೆಳಗೆ ಬಿದ್ದರೂ ತುಂಡಾಗುವುದಿಲ್ಲ. 8. ಆಹಾರವನ್ನು ಜಗಿಯಲು ಈ ಪ್ಲೆಕ್ಸಿ ಡೆಂಚರ್ ಹೆಚ್ಚು ಆರಾಮದಾಯಕವಾಗಿರುತ್ತದೆ ಮತ್ತು ಮಾತನಾಡಲು ಹೆಚ್ಚು ಸಹಾಯಕಾರಿ ಹಾಗೂ ಸುಲಲಿತವಾಗಿ ಮಾತನಾಡಲು ಸಾಧ್ಯವಿದೆ.
ಏನು ತೊಂದರೆಗಳು? 1. ಸಾಮಾನ್ಯ ಎಕ್ರಲಿಕ್ ಡೆಂಚರ್ಗಳಿಗೆ ಹೋಲಿಸಿದಲ್ಲಿ ಈ ಪ್ಲೆಕ್ಸಿ ಡೆಂಚರ್ನಲ್ಲಿ ದಂತಕಿಟ್ಟ ಅಥವಾ ಕ್ಯಾಲಿಕುಲಸ್ ಹೆಚ್ಚು ಕಂಡುಬರುತ್ತದೆ. 2. ಈ ಪ್ಲೆಕ್ಸಿ ಡೆಂಚರ್ ತುಂಡಾಗುವುದಿಲ್ಲವಾದರೂ, ಕಾರಣಾಂತರದಿಂದ ತುಂಡಾದಲ್ಲಿ ಪುನಃ ರಿಪೇರಿ ಮಾಡಲು ಸಾಧ್ಯವಿಲ್ಲ. ಸಾಂಪ್ರದಾಯಕ ಎಕ್ರಲಿಕ್ ಡೆಂಚರ್ನ್ನು ಸರಿಪಡಿಸಲು ಸಾಧ್ಯವಿದೆ. 3. ಎಕ್ರಲಿಕ್ ಡೆಂಚರ್ಗೆ ಹೋಲಿಸಿದಲ್ಲಿ ಈ ಪ್ಲೆಕ್ಸಿ ಡೆಂಚರ್ ತಯಾರಿಸಲು ಹೆಚ್ಚು ಖರ್ಚು ತಗಲುತ್ತದೆ. 4. ಈ ಪ್ಲೆಕ್ಸಿ ಡೆಂಚರ್ಗಳಿಗೆ ಸಾಮಾನ್ಯ ಎಕ್ರಲಿಕ್ ಡೆಂಚರ್ಗಳಿಗಿಂತಲೂ ಹೆಚ್ಚು ಪಾಲನೆ ಮತ್ತು ಪೋಷಣೆ ಅಗತ್ಯ. ನಿರಂತರವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕಾಗುತ್ತದೆ. ಹಲ್ಲು ಶುಚಿಗೊಳಿಸುವ ದ್ರಾವಣದಲ್ಲಿ ಈ ಪ್ಲೆಕ್ಸಿ ಡೆಂಚರನ್ನು ಗಂಟೆಗಳ ಕಾಲ ಮುಳುಗಿಸಿ ಇಟ್ಟು ಶುಚಿತ್ವ ಕಾಪಾಡಬೇಕಾದ ಅನಿವಾರ್ಯತೆ ಇರುತ್ತದೆ. 5. ಇದು ಹಾಕಿ ತೆಗೆಯಬಹುದಾದ ಡೆಂಚರ್ ಎಂಬ ಕಾರಣದಿಂದ ಕೆಲವರು ಈ ಪ್ಲೆಕ್ಸಿ ಡೆಂಚರನ್ನು ಇಷ್ಟಪಡುವುದಿಲ್ಲ.
ಎಲ್ಲಿ ಬಳಸಬಹುದು? 1. ಬಾಯಿಯ ದವಡೆಯ ಎರಡೂ ಭಾಗದಲ್ಲಿ ಅಂಡರ್ಕಟ್ ಇದ್ದಲ್ಲಿ ಸಾಂಪ್ರದಾಯಕ ಎಕ್ರಲಿಕ್ ಡೆಂಚರ್ ಮಾಡಲು ಸಾಧ್ಯವಾಗದು. ಅಲ್ಲಿ ಪ್ಲೆಕ್ಸಿ ಡೆಂಚರ್ ಹೆಚ್ಚು ಉಪಯುಕ್ತ. 2. ಎಕ್ರಲಿಕ್ ವಸ್ತುವಿಗೆ ಅಲರ್ಜಿ ಹೊಂದಿದವರಿಗೆ ಪ್ಲೆಕ್ಸಿ ಡೆಂಚರ್ ಸೂಕ್ತ 3. ಡೆಂಚರ್ ಇಂಪ್ಲಾಂಟ್ ಬಳಸಲು ಸೂಕ್ತ ಎಲುಬಿನ ಸಾಂಧ್ರತೆ ಮತ್ತು ಗಾತ್ರ ಇಲ್ಲದಿದ್ದಾಗ ಪ್ಲೆಕ್ಸಿ ಡೆಂಚರ್ ಬಳಸಬಹುದು 4. ಕಳೆದು ಹೋದ ಹಲ್ಲುಗಳ ಬದಲಾಗಿ ರೋಗಿಗಳಿಗೆ ಶಾಶ್ವತ ಹಲ್ಲುಗಳು ಬೇಡವಿದ್ದಾಗ ಅಥವಾ ಲೋಹದ ಕ್ಲಾಸ್ಪ್ ಬಳಸಲು ಇಷ್ಟವಿಲ್ಲದಿದ್ದಲ್ಲಿ ಪ್ಲೆಕ್ಸಿ ಡೆಂಚರ್ ಸೂಕ್ತ. ಕೊನೆ ಮಾತು: ಕಳೆದು ಹೋದ ಹಲ್ಲನ್ನು ತಕ್ಷಣವೇ ಕೃತಕ ಹಲ್ಲುಗಳ ಮುಖಾಂತರ ಪುನರ್ ಜೋಡಣೆ ಮಾಡಿಸಲೇ ಬೇಕು. ಇಲ್ಲವಾದಲ್ಲಿ ಅಕ್ಕ ಪಕ್ಕದ ಹಲ್ಲುಗಳು ಬಾಗಿಕೊಂಡು ಅಥವಾ ಮೇಲಿನ ಹಲ್ಲುಗಳು ಜಾರಿಕೊಂಡು ಹಲವಾರು ವಸಡು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ತೆಗೆಯಲಾರದಂತೆ ಜೋಡಿಸಬಹುದಾದ ಹಲ್ಲುಗಳಿಗೆ ಮೊರೆ ಹೋಗುತ್ತಾರೆ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ತೆಗೆದು ಹಾಕಬಹುದಾದ ಹಲ್ಲುಗಳನ್ನು ಬಳಸಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹಾ ಸಂದರ್ಭಗಳಲ್ಲಿ ಎಕ್ರಲಿಕ್ ಡೆಂಚರ್ ಹಾಗೂ ಪ್ಲೆಕ್ಸಿಬಲ್ ಡೆಂಚರ್ ಹೆಚ್ಚು ಸಹಾಯಕಾರಿ. ಸಾಂಪ್ರದಾಯಕ ಎಕ್ರಲಿಕ್ ಡೆಂಚರ್ಗಿಂತ ಪ್ಲೆಕ್ಸಿಬಲ್ ಡೆಂಚರ್ ಹೆಚ್ಚು ಸರಳ, ಸುಂದರ ಮತ್ತು ದೇಹದ ಅಂಗಾಂಗಗಳಿಗೆ ಹೊಂದಿಕೊಳ್ಳುತ್ತದೆ. ಈ ಪ್ಲೆಕ್ಸಿಬಲ್ ಡೆಂಚರ್ ತುಂಡಾಗುವುದಿಲ್ಲ್ಲ. ಬಣ್ಣ ಕಳೆದುಕೊಳ್ಳುವುದಿಲ್ಲ ಮತ್ತು ಹೆಚ್ಚು ಬಾಳಿಕೆ ಬರುತ್ತದೆ. ಈ ಕಾರಣದಿಂದ ಸಾಂಪ್ರದಾಯಕ ಎಕ್ರಲಿಕ್ ಡೆಂಚರ್ಗಳಿಗಿಂತ ಈ ಪ್ಲೆಕ್ಸಿಬಲ್ ಡೆಂಚರ್ ಹೆಚ್ಚು ಹೆಚ್ಚು ಜನಪ್ರಿಯವಾಗಿದೆ ಎಂದರೂ ತಪ್ಪಾಗಲಾರದು.
ಡಾ|| ಮುರಲೀ ಮೋಹನ್ಚೂಂತಾರು ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.