ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಮಾನವ ಸಮುದಾಯ ಒಂದೇ ತಂದೆ,ತಾಯಿಯರ ಸಂತತಿಗಳಾಗಿದ್ದು ಪರಸ್ಪರ ಪ್ರೀತಿ, ವಿಶ್ವಾಸದ ಸಹಬಾಳ್ವೆ ನಡೆಸಿ ಮಾದರಿಯಾಗಬೇಕಾದವರು ಎಂದು ಖ್ಯಾತ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಕೋಡಿಹಾಳ ಹೇಳಿದ್ದಾರೆ. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ಪುತ್ತೂರು ಕೆಎಂಜೆ ಸಭಾಂಗಣದಲ್ಲಿ ನಡೆದ “ಕರ್ನಾಟಕ ಭಾವೈಕ್ಯತಾ ಪರಿಷತ್” ಲೋಕಾರ್ಪಣೆ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಭಾರತ ದೇಶದಲ್ಲಿ ವಾಸಿಸುವ ಎಲ್ಲಾ ಸಮುದಾಯದ ಜನರು ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಸಾಮರಸ್ಯ ಮತ್ತು ಏಕತೆಯಿಂದ ಜೀವಿಸಿದರೆ ಭಾವೈಕ್ಯತೆಯ ಭಾರತ ನಿರ್ಮಾಣ ಸಾಧ್ಯ,ಲೇಖಕರು, ಕವಿಗಳು ಭಾವೈಕ್ಯತೆ ಸ್ಥಾಪಿಸಲು ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಖ್ಯಾತ ವಾಗ್ಮಿ ಕೆ.ಎಂ.ಇಖ್ಬಾಲ್ ಬಾಳಿಲ” ಸಮಾಜ ಎಂಬುದು ಸರ್ವ ಧರ್ಮ ಬಾಂಧವರ ಸಮ್ಮಿಲನವಾಗಿದೆ. ಇಲ್ಲಿ ಹಿಂದೂ,ಮುಸ್ಲಿಂ, ಕ್ರೈಸ್ತ, ಜೈನ,ಬುದ್ಧ ಎಂಬ ತಾರತಮ್ಯವಿಲ್ಲ. ಎಲ್ಲರೂ ಏಕೋದರ ಸಹೋದರ, ಸಹೋದರಿಯರಿಗೆ ಸಮಾನ. ಭಾವೈಕ್ಯತೆಯ ನಾಡು ಕಟ್ಟಲು ಎಲ್ಲಾ ಸಮಾಜ ಬಾಂಧವರು ಮುಂದೆ ಬರಬೇಕಾದದ್ದು ವರ್ತಮಾನ ಕಾಲದ ಅನಿವಾರ್ಯತೆಯಾಗಿದ್ದು ದ್ವೇಷ ಭಾವನೆಗಳನ್ನು ಬಿಟ್ಟು ಪ್ರೀತಿ ಭಾವದೊಂದಿಗೆ ಶಾಂತಿ, ಸೌಹಾರ್ದತೆಯ ಸಹಬಾಳ್ವೆ ನಡೆಸಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.
“ಭಾವೈಕ್ಯತಾ ಕವಿ ಸಂಗಮ” ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎ.ಅಬ್ದುಲ್ ಅಝೀಝ್ ಪುಣಚ ” ಪ್ರಾಚೀನ ಕಾಲದಿಂದಲೂ ವಿವಿಧ ಸಮುದಾಯಗಳು ಭಾರತದಲ್ಲಿ ಸಾಮರಸ್ಯದ ಸಹಬಾಳ್ವೆ ನಡೆಸುತ್ತಿದ್ದಾರೆ. ನಂಬಿಕೆ,ಸಿದ್ದಾಂತ,ವೇಷಭೂಷಣ,ಭಾಷೆ ಬೇರೆಬೇರೆಯಾದರೂ ಭಾರತೀಯರು ಎಂಬ ನೆಲೆಯಲ್ಲಿ ವಿವಿಧತೆಗಳಲ್ಲಿ ಏಕತೆಯನ್ನು ಮೈಗೂಡಿಸಿಕೊಂಡು ಒಂದಾಗಿ ಬದುಕುತ್ತಿದ್ದಾರೆ. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಭಾರತೀಯ ಸಮುದಾಯದ ನಡುವೆ ಭಿನ್ನಾಭಿಪ್ರಾಯಗಳು ರೂಪುಗೊಂಡಿದ್ದು ಹಿಂದಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಸರ್ವ ಜನರೂ ಹೃದಯ ವೈಶಾಲ್ಯತೆಯನ್ನು ಬೆಳೆಸಿ ಭಾರತದ ಅಖಂಡತೆ ಮತ್ತು ಏಕತೆಗಾಗಿ ಒಟ್ಟಾಗಿ ಶ್ರಮಿಸಬೇಕು.
ಕವನ,ಬರಹಗಳ ಮೂಲಕ ಲೇಖಕರು, ಕವಿಗಳು ಭಾವೈಕ್ಯತೆಯ ಭಾರತ ಕಟ್ಟಲು ಪಣ ತೊಟ್ಟರೆ ನಮ್ಮ ಪೂರ್ವಿಕರು ನಿಸ್ವಾರ್ಥ ಮನೋಭಾವದಿಂದ ಕಟ್ಟಿ ಬೆಳೆಸಿದ ಭವ್ಯ ಭಾರತದ ವರ್ತಮಾನ ಮತ್ತು ಭವಿಷ್ಯ ಉಜ್ವಲವಾಗಬಹುದು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹೇಮನಾಥ ಶೆಟ್ಟಿ ಕಾವು ಅವರು” ಸಮಾಜದಲ್ಲಿ ಭಾವೈಕ್ಯತೆ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಎಲ್ಲಾ ರೀತಿಯ ಗೊಂದಲಗಳನ್ನು ನೀಗಿಸಲು ಇಂಥಾ ಸಮ್ಮಿಲನಗಳು ಅಗತ್ಯ. ಭಾವೈಕ್ಯತೆ ಸ್ಥಾಪಿಸುವಲ್ಲಿ ಲೇಖನಿಯ ಪಾತ್ರ ಇದ್ದರೆ ನಾಡು ಸೌಹಾರ್ದತೆಯ ಬೀಡಾಗಬಹುದು. ಇಂದಿನ ಕವಿ ಸಂಗಮ ನನಗೂ ಕವನ ಬರೆಯಲು ಸ್ಪೂರ್ತಿ ನೀಡಿದೆ ಎಂದರು. ಕನ್ನಡ ಪರ ಹೋರಾಟಗಾರ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿ” ಜಗತ್ತಿನಲ್ಲಿ ಹಲವು ಸಿದ್ಧಾಂತ ಅನುಸರಿಸುವವರಿದ್ದರೂ ಎಲ್ಲರೂ ಪರಸ್ಪರ ಸಹೋದರ, ಸಹೋದರಿಯರು ಎಂಬ ವಿಶ್ವ ಭ್ರಾತೃತ್ವ ಭಾವ ನಮ್ಮ ನಡುವಿನ ವೈಶಿಷ್ಟ್ಯತೆಯಾಗಿದೆ. ಎಲ್ಲಾ ಸಮುದಾಯ ಬಾಂಧವರು ಅರಿತು ಬಾಳಿದರೆ ಇಡೀ ಜಗತ್ತು ನೆಮ್ಮದಿಯ ತಾಣವಾಗಬಹುದು ಎಂದರು.
ಸಾಮಾಜಿಕ ಮುಖಂಡ ಎ.ಬಿ.ಮೊಹಿದೀನ್ ಕಳಂಜ ಮಾತನಾಡಿ” ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಾದ್ಯಂತ ಭಾವೈಕ್ಯತೆಯ ಸಂದೇಶ ಸಾರುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಇಂದು ಹೊಸ ಪ್ರಯೋಗಕ್ಕಿಳಿದಿದೆ. “ಕರ್ನಾಟಕ ಭಾವೈಕ್ಯತಾ ಪರಿಷತ್” ಮೂಲಕ ನಾವೆಲ್ಲರೂ ಸುಂದರ ಸಮಾಜ ನಿರ್ಮಾಣಕ್ಕೆ ಪರಸ್ಪರ ಕೈ ಜೋಡಿಸಬೇಕು. ಲೇಖಕರ,ಕವಿಗಳ ಉತ್ಸಾಹ ಕಾಣುವಾಗ ನನಗೂ ಕವನ ಬರೆಯುವ ಆಸಕ್ತಿ ಮೂಡಿದೆ ಎಂದರು.
ಖ್ಯಾತ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ” ಮನುಷ್ಯ ಸಂಬಂಧ ಪವಿತ್ರವಾದುದು. ಕೆಲವು ವರ್ಷಗಳ ಹಿಂದೆ ನಮ್ಮ ನಡುವೆ ಯಾವುದೇ ರೀತಿಯ ಬೇಧಭಾವಗಳು ಇರಲಿಲ್ಲ. ಕೊಡು ಕೊಳ್ಳುವಿಕೆಯ ಮೂಲಕ ನಾವೆಲ್ಲರೂ ಸಾಮರಸ್ಯದ ಬದುಕು ಸಾಗಿಸಿದವರು. ಈ ಭಾವೈಕ್ಯತೆ ನೆಲೆನಿಲ್ಲಬೇಕಾದರೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜಕ್ಕೆ ಒಳಿತಿನ ಸಂದೇಶಗಳನ್ನು ನೀಡಬೇಕು ಎಂದರು.
ಚಂದ್ರಾವತಿ ರೈ ಪಾಲ್ತಾಡು,ಮಮತಾ ಡಿ.ಕೆ.ಅನಿಲಕಟ್ಟೆ, ನಂದಿತಾ ಕೆ.ವಿಟ್ಲ, ಪ್ರೇಮಾ ಕೆ.ವಿಟ್ಲ, ಝುನೈಫ್ ಕೋಲ್ಪೆ,ಪೆರುಮಾಳ್ ಲಕ್ಷ್ಮಣ್ ಐವರ್ನಾಡು,ಜಯರಾಮ ಪಡ್ರೆ,ಹೃದಯ ಕವಿ ಮನ್ಸೂರ್ ಮುಲ್ಕಿ,ರೇಖಾ ಸುದೇಶ್ ರಾವ್, ನವೀನ್ ಪುತ್ತೂರು, ಎಂ.ಎ.ಮುಸ್ತಫಾ ಬೆಳ್ಳಾರೆ,ಎ.ಹಿತೇಶ್ ಕುಮಾರ್,ಎಸ್.ಎನ್.ಭಟ್ ಸೈಪಂಗಲ್ಲು,ರಕ್ಷಿತಾ ಸುರೇಶ್ ಜೋಗಿಬೆಟ್ಟು,ಪೂವಪ್ಪ ನೇರಳಕಟ್ಟೆ,ಅಪೂರ್ವ ಕಾರಂತ್ ದರ್ಬೆ,ಚಂದ್ರಮೌಳಿ ಪಾಣಾಜೆ,ವಿಜಯಕುಮಾರ್ ಕಾಣಿಚ್ಚಾರ್,ದಿಲೀಪ್ ವೇದಿಕ್ ಕಡಬ ಮೊದಲಾದವರು ಕವನ ವಾಚನ ಮಾಡಿದರು.
ಸಾಮಾಜಿಕ ಮುಂದಾಳು ಅಬೂಬಕರ್ ಮುಲಾರ್,ಯುವ ಉದ್ಯಮಿ ಇಖ್ಬಾಲ್ ಕೋಲ್ಪೆ,ಸಮಾಜಸೇವಕ ಅಶ್ರಫ್ ಪೆರ್ಲಂಪಾಡಿ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಖ್ಯಾತ ಬರಹಗಾರ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಪೂರ್ವ ಕಾರಂತ್ ದರ್ಬೆ ಕೃತಜ್ಞತೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.