ಶಿಡ್ಲಘಟ್ಟ.(ವಿಶ್ವಕನ್ನಡಿಗ ನ್ಯೂಸ್): ಸತತ ಬರಗಾಲದಿಂದ ತತ್ತರಿಸುತ್ತಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಹರಿಸುತ್ತಿರುವ ಹೆಚ್ಎನ್ ವ್ಯಾಲಿಯ ನೀರನ್ನು ಮೂರು ಬಾರಿ ಶುದ್ಧೀಕರಣ ಮಾಡಿ ಜನರ ಆರೋಗ್ಯವನ್ನು ಕಾಪಾಡಲು ಸರ್ಕಾರ ವಿಶೇಷ ಆಸಕ್ತಿವಹಿಸಬೇಕೆಂದು ಎಬಿಡಿ ಗ್ರೂಪ್ನ ಅಧ್ಯಕ್ಷ ರಾಜೀವ್ಗೌಡ ಒತ್ತಾಯಿಸಿದರು.
ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ಕೆರೆಗೆ ಬಾಗೀನ ಅರ್ಪಿಸಿ ಮಾತನಾಡಿದ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಸಹಿತ ಜಿಲ್ಲೆಯ 44 ಕೆರೆಗಳಿಗೆ ಹೆಚ್ಎನ್ ವ್ಯಾಲಿಯ ಯೋಜನೆಯ ಮೂಲಕ ನೀರು ಹರಿಸುವ ಕಾರ್ಯಕ್ರಮವನ್ನು ಸರ್ಕಾರ ಮಾಡಿದೆ ಆದರೆ ಕೇವಲ ಎರಡು ಹಂತದಲ್ಲಿ ನೀರು ಶುದ್ಧೀಕರಿಸಿ ಹರಿಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಕರಿಣಾಮ ಬೀರುವ ಆತಂಕ ಮನೆ ಮಾಡಿದ್ದು ಸರ್ಕಾರ ಕೂಡಲೇ ಮೂರು ಹಂತದಲ್ಲಿ ನೀರು ಶುದ್ಧೀಕರಿಸಿ ಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ಮಾಡಿಕೊಂಡು ತೀವ್ರ ಸಮಸ್ಯಾತ್ಮಕ ಗ್ರಾಮಗಳಲ್ಲಿ ತಮ್ಮ ಟ್ರಸ್ಟ್ ಮೂಲಕ ಖರೀದಿ ಮಾಡುವ ರಿಗ್ನಿಂದ ಕೊಳವೆ ಬಾವಿಗಳನ್ನು ಕೊರೆಸಿ ಕುಡಿಯುವ ನೀರು ಪೂರೈಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.
ಕ್ಷೇತ್ರದ ಜನರು ಪ್ರೀತಿ ವಿಶ್ವಾಸವನ್ನು ಬರಮಾಡಿಕೊಂಡು ಮನೆಯ ಮಗನಾಗಿ ಕಾಣುತ್ತಿದ್ದಾರೆ ಅವರ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುತ್ತೇನೆ ದೇಹದಲ್ಲಿ ಕೊನೆಯ ಉಸಿರು ಇರುವತನಕ ಜನಸೇವೆ ಮಾಡಿ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಈಗಾಗಲೇ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಕ್ಷೇತ್ರಾದ್ಯಂತ ಮುಂದುವರಿಸಲಾಗಿದೆ ಜೊತೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ಸಹ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸಕಾಲದಲ್ಲಿ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆ ಲಭಿಸುವ ಸಲುವಾಗಿ ತುರ್ತು ವಾಹನಗಳ ಟೋಲ್ಪ್ರೀ ನಂಬರ್ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಚಿತ್ರನಟ ಧನುಷ್, ಗ್ರಾಪಂ ಸದಸ್ಯೆ ರತ್ನಮ್ಮ, ಮುಖಂಡರಾದ ಮುನಿನಾರಾಯಣಪ್ಪ, ನರೇಂದ್ರ, ದ್ಯಾವಣ್ಣ, ದೇವರಾಜ್, ಶ್ರೀನಿವಾಸ್, ಮುರಳಿಧರ್,ನಂದಕುಮಾರ್,ನವೀನ್,ಹಿರೇಬಲ್ಲ ಕೃಷ್ಣಪ್ಪ,ಕೊತ್ತನೂರು ಪ್ರಭಾಕರ್,ಭಕ್ತರಹಳ್ಳಿ ಮಂಜುನಾಥ್,ಆನೂರು ಚಲಪತಿ ಮತ್ತಿತರರು ಉಪಸ್ಥಿತರಿದ್ದರು.
ವರದಿ:ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.