ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್):ಶಿಡ್ಲಘಟ್ಟ ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ನಾಗರಿಕರು ಸಹಕಾರ ನೀಡಬೇಕೆಂದು ನಗರಸಭೆಯ 16ನೇ ವಾರ್ಡಿನ ಸದಸ್ಯ ಕೃಷ್ಣಮೂರ್ತಿ ಮನವಿ ಮಾಡಿದರು.
ನಗರದಲ್ಲಿ 16 ನೇ ವಾರ್ಡಿನಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದ ಅವರು ನಗರಸಭೆಯ ಸದಸ್ಯರಾದ ಬಳಿಕ ನಗರಸಭೆಯ ಪೌರಾಯುಕ್ತರೊಂದಿಗೆ ಸಮಾಲೋಚನೆ ನಡೆಸಿ 16 ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು,ರಸ್ತೆ-ಚರಂಡಿ ನಿರ್ಮಾಣ,ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ ಅದಕ್ಕೆ ಪೂರಕವಾಗಿ ನಾಗರಿಕರು ಸಹಕಾರ ನೀಡುತ್ತಿದ್ದಾರೆ ಎಂದರು.
ನಗರೋತ್ಥಾನ ಹಂತ-03ರ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯೋಜನೆಯನ್ನು ರೂಪಿಸಲಾಗಿದ್ದು ಹಂತ ಹಂತವಾಗಿ ಕುಡಿಯುವ ನೀರಿನ ಅಭಾವವನ್ನು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಜನಜಾಗೃತಿ ಮೂಡಿಸಿ ಪ್ರತಿಯೊಂದು ಮನೆಯಲ್ಲೂ ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಲು ಮನವರಿಕೆ ಮಾಡುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಮೊಹ್ಮದ್ ಹಫೀಝ್,ವಾರ್ಡಿನ ದಾದಾಪೀರ್(ದಾದು),ಪರ್ವೀಝ್ ಪಾಷ,ಫಯಾಝ್ ಮೌಲಾ,ಅಕ್ಬರ್, ತಬ್ರೇಝ್(ತಬ್ಬು),ಝಹೀರ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು…
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ನಡೆದ ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಸೋಲಿಗೆ ನೈತಿಕ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ಗುಂಡೂರಾವ್ ನೀಡಿರುವ ರಾಜಿನಾಮೆಯನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಕೆಪಿಸಿಸಿ ಸದಸ್ಯ ಎಲ್.ಜಯಸಿಂಹ,ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷ ಪಲಿಚೇರ್ಲು ಪಿ.ಆರ್.ಪ್ರಕಾಶ್ ಆಗ್ರಹಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು ವಿಧಾನಸಭೆಯ ಉಪ ಚುನಾವಣೆಯಲ್ಲಿ ಜನ ನೀಡಿರುವ ತೀರ್ಪಿಗೆ ತಲೆಬಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ಗುಂಡೂರಾವ್ ರಾಜಿನಾಮೆ ನೀಡಿರುವುದು ಕಾರ್ಯಕರ್ತರಿಗೆ ನೋವುಂಟು ಮಾಡಿದೆ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲು ಅವಕಾಶ ಕಲ್ಪಿಸಿಲ್ಲ ಆದರೂ ಸಹ ಐತಿಹಾಸಿಕ ಹಿನ್ನೆಲೆಯುಳ ಕಾಂಗ್ರೇಸ್ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಈ ಹಿಂದೆ ಕಾಂಗ್ರೇಸ್ ಪಕ್ಷ ಉತ್ತಮ ಸಾಧನೆ ಮಾಡಿರುವುದು ಯಾರು ಮರೆಯಬಾರದೆಂದಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೇಸ್ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕರ ಸರಬರಾಜು ಖಾತೆ ಸಚಿವರಾಗಿ ಸಲ್ಲಿಸಿರುವ ಸೇವೆಯನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃಧ್ಧಿಗೆ ಶ್ರಮಿಸಿ ಪಕ್ಷ ಸಂಘಟನೆಯನ್ನು ಪರಿಣಾಮಕಾರಿಯಾಗಿ ಮಾಡಿರುವ ದಿನೇಶ್ ಗುಂಡೂರಾವ್ ಅವರು ಕೂಡಲೇ ರಾಜಿನಾಮೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದ್ದಾರೆ ಇಲ್ಲದಿದ್ದ ಪಕ್ಷದಲ್ಲಿ ಕೆಪಿಸಿಸಿ ಕಚೇರಿಯ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಣಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ದಿಬ್ಬೂರಹಳ್ಳಿ ಪೋಲಿಸ್ಠಾಣಾ ವ್ಯಾಪ್ತಿಯ ಕೋಟಗಲ್ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೋಟಗಲ್ ಗ್ರಾಮದ ಸರಸ್ವತಿ(27) ನವ್ಯಶ್ರೀ(9) ಹಾಗೂ 3 ವರ್ಷದ ನಿತ್ಯಶ್ರೀ ಮೃತಪಟ್ಟ ನತದೃಷ್ಟರು.
ತಡ ರಾತ್ರಿ ಸುಮಾರು ಗಂಟೆಯಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದಿಂದ ಕೃಷಿ ಹೊಂಡದಿಂದ ಶವಗಳನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ ರಾತ್ರಿ ತಾಯಿ ಹಾಗೂ ಒಂದು ಮಗುವಿನ ಶವ ದೊರೆತಿದ್ದು ಇಂದು ಬೆಳಗ್ಗೆ ಇನ್ನೊಂದು ಮಗುವಿನ ಶವ ದೊರೆತಿದೆ.
ಮೃತ ಸರಸ್ವತಿಯ ಗಂಡ ನರಸಿಂಹಮೂರ್ತಿ ಘಟನೆ ನಂತರ ಪರಾರಿಯಾಗಿದ್ದಾರೆ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಂಜನ್ ಕುಮಾರ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಮೂಲತಃ ಶೆಟ್ಟಹಳ್ಳಿ ಗ್ರಾಮದ ಸರಸ್ವತಿ ಮತ್ತು ಕೋಟಗಲ್ ಗ್ರಾಮದ ನರಸಿಂಹಮೂರ್ತಿಗೆ ಕಳೆದ 10 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳ ಜನನ ಆಗಿದ್ದರಿಂದ ವಂಶ ಬೆಳೆಯಲು ಗಂಡು ಮಗುವಿಲ್ಲವೆಂದ ಪತಿ ನರಸಿಂಹಮೂರ್ತಿ ಮತ್ತು ಆತನ ಕುಟುಂಬ ಸದಸ್ಯರು ಚಿತ್ರಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ ಆರಂಭದಲ್ಲಿ ದಂಪತಿಗಳು ಅನೂನ್ಯವಾಗಿದ್ದರು ಆದರೇ ವಂಶ ಉಧ್ಧಾರಕನ ವಿಚಾರದಲ್ಲಿ ಪತಿ-ಪತ್ನಿಗಳ ಮಧ್ಯೆ ನಡೆಯುತ್ತಿದ್ದ ಜಗಳ ನಿನ್ನೆ ಸಾವಿನಲ್ಲಿ ಅಂತ್ಯಗೊಂಡಿದೆ.
ವೃತ್ತಿಯಲ್ಲಿ ಚಾಲಕ ಇನ್ನಿತರೆ ಕೆಲಸಗಳನ್ನು ಮಾಡುತ್ತಿದ್ದ ನರಸಿಂಹಮೂರ್ತಿ ಎರಡು ಹೆಣ್ಣು ಮಕ್ಕಳು ಹುಟ್ಟಿದ ಬಳಿಕ ಪತ್ನಿ ಸರಸ್ವತಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ ಹಲವು ಬಾರಿಗೆ ಸರಸ್ವತಿಯ ಪೋಷಕರು ಕುರಿಗಳನ್ನು ಮಾರಾಟ ಮಾಡಿ 20-30 ಸಾವಿರ ರೂಗಳನ್ನು ನೀಡಿ ಕಳುಹಿಸಿರುವ ಘಟನೆಗಳು ಸಹ ನಡೆದಿದೆ ಒಮ್ಮೆ ಸರಸ್ವತಿಯನ್ನು ಗಂಡ ನರಸಿಂಹಮೂರ್ತಿ,ಮೈದ ನರಸಿಂಹಪ್ಪ,ಅತ್ತೆ ಲಕ್ಷ್ಮೀನರಸಮ್ಮ,ಮಾವ ಕುಳ್ಳಪ್ಪ ಸೇರಿಕೊಂಡು ಚಿತ್ರಹಿಂಸೆ ನೀಡಿದರಲ್ಲದೆ ಬಾಯಿಯಲ್ಲಿ ಬಟ್ಟೆ ತುರುಕಿ ಕೊಲೆಗೆ ಯತ್ನಿಸಿದರು ಎಂದು ಮೃತ ಸರಸ್ವತಿಯ ಸಹೋದರ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ರಾಜಿಸಂಧಾನ: ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿಸಂಧಾನ ಮಾಡಿ ಪತಿ-ಪತ್ನಿಯನ್ನು ಒಂದುಗೂಡಿಸಿ ಬರುತ್ತಿದ್ದರು ಆದರೇ ರಾತ್ರಿ ಗಂಡ,ಮೈದ,ಅತ್ತೆ,ಮಾವ ಸೇರಿ ಕೊಲೆ ಮಾಡಿ ಕೃಷಿ ಹೊಂಡದಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿ ದಿಬ್ಬೂರಹಳ್ಳಿ ಪೋಲಿಸ್ಠಾಣೆಯಲ್ಲಿ ಕೃಷ್ಣಮೂರ್ತಿ ದೂರು ದಾಖಲಿಸಿದರಲ್ಲದೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ನಾಡ/ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ತಹಶೀಲ್ದಾರ್ ಎಂ.ದಯಾನಂದ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಶಿವಕುಮಾರ್ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿ ಗಮನಸೆಳೆದರು.
ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಉತ್ಸಾಹ ತೋರಿಸಿದ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಾಗರಿಕರಿಂದ ನಿರೀಕ್ಷಿತ ಬೆಂಬಲ ದೊರೆತ್ತಿಲ್ಲ ಕೇವಲ ಬೆರಳೆಣಿಕೆಷ್ಟು ಮಂದಿ ಸರ್ಕಾರಿ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾಥ್ ನೀಡಿದರು ಇನ್ನೂಳಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ಸೆಟ್ನೊಂದಿಗೆ ಭಾಗವಹಿಸಿ ಗಮನಸೆಳೆದರು.
ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಭುವನೇಶ್ವರಿ ತಾಯಿಯ ಮರವಣಿಗೆ ಚಾಲನೆ ನೀಡಿದರು ನಂತರ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಮತ್ತು ತಮಿಳು ಭಾಷಿಗರ ಹಾವಳಿ ಹೆಚ್ಚಾಗಿದೆ ಎಕ್ಕಡ-ಎನ್ನಡ ಮಧ್ಯೆದಲ್ಲಿ ಕನ್ನಡವನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ಕನ್ನಡ ಭಾಷೆ,ನೆಲ,ಜಲ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಹೋರಾಟ ಮಾಡುವಂತಹ ಪರಿಸೈಇತಿ ನಿರ್ಮಾಣಗೊಂಡಿರುವುದು ನೋವಿನ ಸಂಗತಿಯೆಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ನಾಡನ್ನು ಸುತ್ತುವರೆದ ಆಂಧ್ರ ತಮಿಳುನಾಡುಗಳ ತೆಲುಗು ಹಾಗೂ ತಮಿಳು ಭಾಷೆಗಳು ನಮ್ಮ ಕನ್ನಡ ಭಾಷೆ ಹಾಗೂ ಕನ್ನಡ ಭಾಷಿಕರ ಮೇಲೆ ಹೆಚ್ಚೆಚ್ಚೆ ಪ್ರಭಾವ ಬೀರುತ್ತಿವೆ ಎಂದ ಶಾಸಕರು ಕನ್ನಡ ಭಾಷಾಭಿಮಾನಗಳಾದ ನಾವೆಲ್ಲರು ಒಂದಾಗಿ ಪ್ರತಿಯೊಬ್ಬರಿಗೆ ಕನ್ನಡ ಭಾಷೆಯನ್ನು ಕಲಿಸಿ ನಾಡಿನಲ್ಲಿ ಕನ್ನಡಪರ ವಾತಾವರಣವನ್ನು ಸೃಷ್ಠಿಸಬೇಕೆಂದು ಕರೆ ನೀಡಿದರು.
ನಾಡಿನ ಸಾಧು ಸಂತರು ದಾರ್ಶನಿಕರ ವೇಷ ಭೂಷಣಗಳು ಸಭಿಕರ ಗಮನಸೆಳೆದರೆ ಶಾಲಾ ಮಕ್ಕಳು ನಡೆಸಿಕೊಟ್ಟು ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ಪ್ರತಿಭಾವಂತರನ್ನು ಪುರಸ್ಕರಿಸಲಾಯಿತು, ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಅನಂದ್ ಕುಮಾರ್, ಬಿಇಒ ಶ್ರೀನಿವಾಸ್, ಶಿರಸ್ತೆದಾರ ಮಂಜುನಾಥ್, ರಾಜಸ್ವ ನಿರೀಕ್ಷಕ ವಿಶ್ವನಾಥ್,ರೈತ ಸಂಘ ಹಾಗೂ ಹಸಿರುಸೇನೆ(ದಿ.ಪುಟಣಯ್ಯ ಬಣದ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ,ತಾಲೂಕು ಅಧ್ಯಕ್ಷ ರವಿಪ್ರಕಾಶ್, ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣದ) ಅಧ್ಯಕ್ಷ ತಾದೂರು ಮಂಜುನಾಥ್, ಭಕ್ತರಹಳ್ಳಿ ಪ್ರತೀಶ್,ಬೆಳ್ಳೂಟಿ ಕೆಂಪಣ್ಣ,ತಾಲೂಕು ಕಸಾಪ ಅಧ್ಯಕ್ಷ ತ್ಯಾಗರಾಜ್,ಎಸ್.ವಿ.ನಾಗರಾಜ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸಮಾಜದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳಿಂದ ದೇಶದಲ್ಲಿ ತಾಯಂದಿರ ಮರಣ, ಶಿಶುಮರಣ ಹೆಚ್ಚಾಗುತ್ತಿದೆ ಜೊತೆಗೆ ಹುಟ್ಟು ಮಕ್ಕಳ ಅಪೌಷ್ಟಿಕತೆ, ಅಂಗವಿಕಲತೆಗೆ ನೇರವಾದ ಕಾರಣವಾಗುತ್ತಿದೆ ಎಂದು ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕ ಬಿ.ಜಿ. ನಾಗರಾಜ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್, ಟಿಡಿಹೆಚ್-ಇಮೇಜ್ ಯೋಜನೆ, ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡತನ ಇನ್ನಿತರೆ ಕಾರಣಗಳಿಂದ ಬಾಲ್ಯ ವಿವಾಹ ಮಾಡುತ್ತಿದ್ದಾರೆ ಆದರೇ ಬಾಲ್ಯ ವಿವಾಹಗಳಿಂದ ಆಗುವ ದುಷ್ಟಪರಿಣಾಮಗಳ ಕುರಿತು ಪೋಷಕರಿಗೆ ಅರಿವು ಮೂಡಿಸುವ ಕೆಲಸ ವ್ಯಾಪಕವಾಗಿ ಮಾಡಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಪಿಡಿಓ ತನ್ವೀರ್ ಅಹಮದ್ ಮಾತನಾಡಿ ಯಾವುದೇ ಕಾರಣಕ್ಕೂ ಮಕ್ಕಳು ತಮ್ಮ ಬಾಲ್ಯದಿಂದ ವಂಚಿತರಾಗಬಾರದೆಂದು ಮಕ್ಕಳ ಹಕ್ಕುಗಳ ಒಡಂಬಡಿಕೆ ಹೇಳುತ್ತದೆ ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹಗಳು ಮಕ್ಕಳ ಎಲ್ಲಾ ಹಕ್ಕುಗಳ ಉಲ್ಲಂಗನೆಗೆ ಕಾರಣವಾಗುತ್ತದೆ ಸಮದಾಯದಲ್ಲಿರುವ ಮಕ್ಕಳ ರಕ್ಷಣೆ ಗ್ರಾಮ ಪಂಚಾಯತಿಯ ಕರ್ತವ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಗ್ರಾಮಗಳನ್ನು ಬಾಲ್ಯವಿವಾಹ ಮುಕ್ತ ಗ್ರಾಮವಾಗಿ ಮಾಡುವ ಪಣತೊಟ್ಟಿದ್ದೇವೆ, ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ವಿ.ಮಹೇಶ್ ಮಾತನಾಡಿ ಬಾಲ್ಯ ವಿವಾಹಗಳು ಮಕ್ಕಳ ಬದುಕಿಗೆ ಮಾರಕ ಯಾವುದೇ ಕಾರಣಕ್ಕೂ ಇವುಗಳನ್ನು ಪ್ರೋತ್ಸಾಹಿಸಬಾರದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಬಾಲ್ಯ ವಿವಾಹಗಳನ್ನು ನಿಲ್ಲಿಸಲು ಪ್ರಯತ್ನಸಬೇಕೆಂದರು.
ಟಿ.ಡಿ.ಹೆಚ್ ಇಮೇಜ್ ಯೋಜನೆಯ ಜಿಲ್ಲಾ ಅಧಿಕಾರಿ ಅಶೋಕ್ ಕುಮಾರ್ ಮಾತನಾಡಿ ಯಾವುದೇ ಬಾಲ್ಯ ವಿವಾಹಗಳು ಶಿಕ್ಷಾರ್ಹ ಅಪರಾದ, ಬಾಲ್ಯ ವಿವಾಹ ಮಾಡಿದ ತಂದೆ,ತಾಯಿ, ಪೋಷಕರು, ಪುರೋಹಿತ, ಕಲ್ಯಾಣ ಮಂಟಪದ ಮಾಲೀಕ ಅದಕ್ಕೆ ಸಹಕರಿಸಿದ ಎಲ್ಲರನ್ನು ಜೈಲಿಗೆ ಕಳುಹಿಸಬಹುದು. ಇದಕ್ಕಾಗಿ 1 ಲಕ್ಷದವರೆಗೆ ದಂಡ ಮತ್ತು 2 ವರ್ಷದವರೆಗೆ ಸಜೆಯ ಶಿಕ್ಷೆಯನ್ನು ವಿಧಿಸಬಹುದು ಬಾಲ್ಯ ವಿವಾಹಕ್ಕೆ ಒಳಗಾಗುವ ಮಕ್ಕಳಿಗೆ ಆಗುವಂತಹ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಮತ್ತು ಸಮುದಾಯ ನೆರವಾಗಬೇಕೆಂದರು.
ತಾಲ್ಲೂಕು ಪಂಚಾಯಿತಿಯ ಸದಸ್ಯೆ ವಹಿದಾ ಸಮೀವುಲ್ಲಾ ಜಾಥಗೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಅಂಕ ಕಲಾ ತಂಡದ ಸದಸ್ಯರು ಜಾಗೃತಿ ಗೀತೆಗಳನ್ನು ಹಾಡಿದರೆ, ಈ.ತಿಮ್ಮಸಂದ್ರದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬಾಲ್ಯ ವಿವಾಹದ ಕುರಿತು ಜಾಗೃತಿ ನಾಟಕವನ್ನು ಪ್ರದರ್ಶಿಸಿದರು, ಉಕ್ಕಿನ ಮುನಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಜಯಂತಿ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮ ಆಚರಣೆ ಮಾಡಿದರಲ್ಲದೆ ಐಕ್ಯತೆ ಕಾಪಾಡಲು ಪ್ರತಿಜ್ಞೆ ವಿಧಿ ಭೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ ದೇವರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ವೈದ್ಯಾಧಿಕಾರಿಗಳಾದ ವಿ.ಮುರಳಿ, ದಿಬ್ಬೂರಗಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಮಾಂಜನೇಯ, ವಿವಿಧ ಶಾಲೆಗಳ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಚೈಲ್ಡ್ ರೈಟ್ಸ್ಟ್ ಟ್ರಸ್ಟ್ ಮತ್ತು ಇಮೇಜ್ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯ ನಾಡು ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ನಾಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಾಡ/ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಸಾಮಾನ್ಯವಾಗಿ ನಾಡ/ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಬಳಿಕ ವಿವಿಧ ಕನ್ನಡಪರ ಸಂಘಟನೆಗಳಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಪ್ರದಾಯವನ್ನು ಮುರಿದು ಹಾಕಿದ ತಾಲೂಕು ದಂಡಾಧಿಕಾರಿ ಎಂ.ದಯಾನಂದ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ತಾಲೂಕು ಕಚೇರಿಯ ಬದಲಿಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಅದಕ್ಕಾಗಿ ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ಆರೋಗ್ಯ ನಿರೀಕ್ಷಕ ಆಂಜಿನಪ್ಪ ಅವರ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ವೇದಿಕೆಯನ್ನು ತಯಾರಿಸಲಾಗಿದೆ ಶಿಷ್ಠಾಚಾರದಂತೆ ಆಹ್ವಾನಿತರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಇನ್ನೂಳಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗತ್ತದೆ.
ಹೊಸ ಸಂಪ್ರದಾಯಕ್ಕೆ ನಾಂದಿ: ಕನ್ನಡ ರಾಜ್ಯೋತ್ಸವವನ್ನು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಇದೇ ಮೊದಲ ಬಾರಿಗೆ ಹಳೇ ಸಂಪ್ರದಾಯಗಳಿಗೆ ಮಂಗಳ ಹಾಡಿ ತಹಶೀಲ್ದಾರ್ ಎಂ.ದಯಾನಂದ್ ಮತ್ತು ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಾದರಿಯಲ್ಲಿ ನಾಡ ಹಬ್ಬವನ್ನು ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳುವ ಜೊತೆಗೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ ವಿಶೇಷ ಕಾಳಜಿವಹಿಸಲಾಗಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಿ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಲಹೆ-ಸೂಚನೆಗಳನ್ನು ಪಡೆದುಕೊಂಡು ನಾಡ/ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ನಾಡ ಹಬ್ಬವನ್ನು ಆಚರಿಸಲಾಗುತ್ತಿದೆ ಬೆಳಿಗ್ಗೆ 9 ಗಂಟೆಗೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಧ್ವಜರೋಹಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಲಿದ್ದಾರೆ ಬಳಿಕ ಕನ್ನಡಪರ ಸಂಘಟನೆಗಳ ಸದಸ್ಯರು-ಪದಾಧಿಕಾರಿಗಳೊಂದಿಗೆ ನೆಹರು ಕ್ರೀಡಾಂಗಣವರೆಗೆ ಮೆರವಣಿಗೆ ನಡೆಯಲಿದೆ.
ಗ್ರಾಮ ಪಂಚಾಯಿತಿಗಳಿಂದ ಸ್ತಬ್ಧಚಿತ್ರ: ನಾಡಿನ ಭಾಷೆ,ಕಲೆ,ಸಂಸ್ಕøತಿಯನ್ನು ಪ್ರತಿಬಿಂಬಿಸುವ ಜನಾಕರ್ಷಕ ಸ್ತಬ್ಧಚಿತ್ರಗಳನ್ನು ಸಿದ್ದಪಡಿಸಲು ತಾಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಅವರಿಗೆ ಜವಾಬ್ದಾರಿವಹಿಸಲಾಗಿದೆ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಒಂದೊಂದು ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಕನ್ನಡ ಅಭಿಮಾನಿಗಳು ಗಮನಸೆಳೆಯಲು ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ ಒಟ್ಟಾರೇ ಇದೇ ಮೊದಲ ಬಾರಿಗೆ ಅದ್ದೂರಿಯಾಗಿ ನಾಡ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಕ್ಷಣಗಣನೆ ಆರಂಭವಾಗಿದೆ.
ಕಂದಾಯ ಅಧಿಕಾರಿಗಳ ಸಾಥ್: ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ನಾಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಉತ್ಸುಕರಾಗಿರುವ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸಾಥ್ ನೀಡುತ್ತಿದ್ದಾರೆ ಹಾಗೆಯೇ ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ ನಗರದ ನೆಹರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲಾಗಿದೆ ಶಾಲಾ ವಿದ್ಯಾರ್ಥಿಗಳಿಗೆ ನಾಡ ಹಬ್ಬದ ಹಿರಿಮೆಯನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮವನ್ನು ನೆರವೇರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸೂಕ್ತ ಬಂದೋಬಸ್ತ್: ಮರವಣಿಗೆ ವೇಳೆಯಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ಯಾವುದೇ ರೀತಿಯ ಅಡಚಣೆಯಾಗದಿರಲು ಆರಕ್ಷಕ ವೃತ್ತ ನಿರೀಕ್ಷಕ ಆನಂದ್ ಕುಮಾರ್ ಅವರ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಸ್ವತಃ ಸಿಪಿಐ ಆನಂದ್ ಕುಮಾರ್ ಮತ್ತು ತಹಶೀಲ್ದಾರ್ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿ ಸಿದ್ದತೆಗಳನ್ನು ಪರಿಶೀಲಿಸಿದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸಮಾಜದಲ್ಲಿ ಜಾತಿ ಮತ ಭೇದ ಮರೆತು ಶಿಕ್ಷಣ ಪಡೆದಾಗ ಮಾತ್ರ ಮುಖ್ಯವಾಹಿನಿಗೆ ಬರಲಿಕ್ಕೆ ಸಾಧ್ಯವಾಗುತ್ತದೆ ಎಂದು ಪಿಎಸ್ಐ ವಿ.ಹರೀಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ದಲಿತ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿ ಮಳ್ಳೂರು, ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತಿಯ ವಿಚಾರದಲ್ಲಿ ಕೀಳರಿಮೆ ಇಟ್ಟುಕೊಳ್ಳಬೇಡಿ, ವೃತ್ತಿಯಾಧಾರಿತವಾಗಿ ಬಂದಿರುವ ಜಾತಿ ಪದ್ಧತಿಗೆ ಇಂದು ಹೆಚ್ಚಿನ ಮಹತ್ವ ಸಿಗುತ್ತಿಲ್ಲ ನಾಗರಿಕ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಕಡೆಗೆ ಎಲ್ಲರೂ ಚಿಂತನೆ ನಡೆಸಬೇಕು ಎಂದರು.
ಸಮಾಜದಲ್ಲಿ ಹೇಗೆ ನಡೆದುಕೊಳ್ಳುತ್ತೀರೋ ಅದರ ಆಧಾರದಲ್ಲಿ ನಿಮಗೆ ಗೌರವ ಸಿಗುತ್ತದೆ ಮೌಡ್ಯತೆಗಳನ್ನು ಬಿಡಬೇಕು. ಮದ್ಯವ್ಯಸನಿಗಳಾಗಿ ಬದುಕಿನಲ್ಲಿ ಸಂಕಷ್ಟಗಳನ್ನು ತಂದುಕೊಳ್ಳುವ ಬದಲಿಗೆ ಅದನ್ನು ಬಿಟ್ಟು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆಯಬೇಕು. ಸರ್ಕಾರ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿದೆ ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಜಾಗೃತಿಯ ಕೊರತೆಯಿಂದಾಗಿ ಸಾಕಷ್ಟು ಮಂದಿ ತಮ್ಮ ಮಕ್ಕಳ ಶಿಕ್ಷಣವನ್ನು 10 ನೇ ತರಗತಿಗೆ ಸೀಮಿತಗೊಳಿಸುತ್ತಿದ್ದಾರೆ ಅವರನ್ನು ಶೈಕ್ಷಣಿಕವಾಗಿ ಮುಂದುವರೆಯಲು ಸಂಘ ಸಂಸ್ಥೆಗಳು ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕೆಂದರು.
ಹಳ್ಳಿಗಳಲ್ಲಿ ದ್ವೇಷಭಾವನೆ ಬಿಟ್ಟು ಐಕ್ಯತೆಯಿಂದ ಜೀವನ ಮಾಡಬೇಕು. ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು. ಸಾರಿಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ, ಅಕ್ರಮವಾಗಿ ಮದ್ಯಮಾರಾಟ ಮಾಡುವವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಮಾತನಾಡಿ, ಹಳ್ಳಿಗಳಲ್ಲಿ ಜನರು ತಾವು ವಾಸಮಾಡುವ ಮನೆಗಳ ಸುತ್ತಮುತ್ತಲಿನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರಲ್ಲಿ ಪರಿವರ್ತನೆ ಕಾಣಿಸುತ್ತಿಲ್ಲ ಇದರಿಂದ ಜನರು ಆನಾರೋಗ್ಯಕ್ಕೆ ಒಳಗಾಗುವುದರ ಜೊತೆಗೆ ಇತರೆ ಜನರನ್ನು ಸಂಕಷ್ಟಕ್ಕೆ ದೂಡುತ್ತಿರಿ, ಪ್ರತಿಯೊಬ್ಬರು ಶೌಚಾಲಯಗಳು ಉಪಯೋಗ ಮಾಡಬೇಕು. ಸರ್ಕಾರದ ಸೌಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಹಿಳೆಯರು ಇಂತಹ ಸಭೆಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಜಾಗೃತರಾಗಬೇಕು. ಮಹಿಳೆಯರ ರಕ್ಷಣೆಗಾಗಿ ಕಾನೂನಿನಲ್ಲಿ ಮಾರ್ಗಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಮದ್ಯವ್ಯಸನಿಗಳಾಗಿ ನಿಮ್ಮ ಬದಕುನ್ನು ಅಂಧಕಾರಕ್ಕೆ ತಳ್ಳಬೇಡಿ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಮಾತನಾಡಿ, ದಲಿತರ ಕಾಲೋನಿಗಳಲ್ಲಿ ಇಂತಹ ಸಭೆಗಳನ್ನು ನಡೆಸುವುದರಿಂದ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುವುದರ ಜೊತೆಗೆ ಅವರು ಪ್ರಜ್ಞಾವಂತರಾಗಲಿಕ್ಕೆ ಅವಕಾಶವಾಗಲಿದೆ ಎಂದರು.
ಮುಖಂಡ ಶಿವಣ್ಣ ಮಾತನಾಡಿ, ಜನರು ಆರೋಗ್ಯವಂತಾಗಬೇಕು, ಅವರ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹ ಸಭೆಗಳ ಮೂಲಕ ಕೊಡುವ ಮಾಹಿತಿಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಎ.ಎಸ್.ಐ. ನಾರಾಯಣಸ್ವಾಮಿ, ಶಿವಶಂಕರ್, ಕರವಸೂಲಿಗಾರ ನಾಗರಾಜ್, ಮುನಿಕೃಷ್ಣಪ್ಪ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ದಿಬ್ಬೂರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಸ್.ಎನ್.ರಾಜು ಹಾಗೂ ಉಪಾಧ್ಯಕ್ಷರಾಗಿ ಬಿ.ಜೆ.ಗಣೇಶ್ ಅವರೋಧವಾಗಿ ಆಯ್ಕೆಯಾದರು.
5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ 12 ಮಂದಿ ನಾಮಪತ್ರ ಸಲ್ಲಿಸಿ ಇಬ್ಬರು ನಾಮಪತ್ರ ವಾಪಸ್ಸು ಪಡೆದ ಕಾರಣ ಈ ಕೆಳಕಂಡವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರರ ಕ್ಷೇತ್ರದಿಂದ ಡಿ.ಸಿ.ಆಂಜಿನೇಯರೆಡ್ಡಿ(ಸಾಮಾನ್ಯ), ಡಿ.ಎಸ್.ಎನ್.ರಾಜು(ಸಾಮಾನ್ಯ), ಶಿವಣ್ಣ(ಸಾಮಾನ್ಯ), ಕೆ.ವಿ.ಶಂಕರ್ನಾರಾಯಣ(ಸಾಮಾನ್ಯ), ಬಿಜೆ.ಪ್ರಕಾಶ್ (ಹಿಂದುಳಿದ ವರ್ಗ ಎ ಮೀಸಲು), ಡಿ.ಪಿ.ನಾಗರಾಜ್ (ಹಿಂದುಳಿದ ವರ್ಗ ಮೀಸಲು), ವೆಂಕಟರಮಣಪ್ಪ(ಪರಿಶಿಷ್ಟ ಪಂಗಡ ಮೀಸಲು), ತಿಮ್ಮಪ್ಪ (ಪರಿಶಿಷ್ಟ ಜಾತಿ ಮೀಸಲು), ಬಿ.ಜೆ.ಗಣೇಶ್ (ಸಾಲಗಾರರಲ್ಲದ ಕ್ಷೇತ್ರ) ಹಾಗೂ ಠೇವಣಿದಾರರ ಕ್ಷೇತ್ರದಿಂದ ತಿಮ್ಮನಾಯಕನಹಳ್ಳಿ ಕೆ.ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ವನಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿಬ್ಬೂರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ ಆದ ಡಿ.ಎಸ್.ಎನ್.ರಾಜು ಮಾತನಾಡಿ ಕ್ಷೇತ್ರದ ಶಾಸಕರ ವಿ.ಮುನಿಯಪ್ಪ ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಉಪಾಧ್ಯಕ್ಷ ನಾಗರಾಜ್ ಅವರ ಸಹಕಾರದಿಂದ 33 ಸ್ವಸಹಾಯ ಮಹಿಳಾ ಸಂಘಗಳಿಗೆ ಸುಮಾರು 1 ಕೋಟಿ ರೂಗಳ ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಇದೀಗ 140 ಜನ ರೈತರಿಗೆ ಸುಮಾರು ಒಂದೂವರೆ ಕೋಟಿ ರೂಗಳ ಕೆಸಿಸಿ ಸಾಲ ವಿತರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಸ್ವಸಹಾಯ ಮಹಿಳಾ ಸಂಘಗಳ ಮುಖಾಂತರ ಪ್ರತಿಯೊಬ್ಬ ಮಹಿಳೆಯರಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದೆಂದ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಮುಂದುವರೆಯಲು ಸಹಕರಿಸಿದ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸಹಕಾರಿ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಶಿಡ್ಲಘಟ್ಟ ನಗರ ಸಹಿತ ತಾಲೂಕಿನಾದ್ಯಂತ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಡಿಸಿಸಿ ಬ್ಯಾಂಕಿನ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುವುದೆಂದು ಶಾಸಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಭರವಸೆ ನೀಡಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ನಗರಸಭೆ ಜಿಲ್ಲಾ ಕೌಶಲ್ಯ ಉದ್ಯಮಶೀಲತೆ, ಜೀವನೋಪಯೋಗಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಬೀದಿ ವ್ಯಾಪಾರಿಗಳ 1 ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು-ಸ್ವಸಹಾಯ ಮಹಿಳಾ ಸಂಘ ಸಂಸ್ಥೆಗಳು ಮತ್ತು ಬೀದಿಬದಿಯ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಆರ್ಥಿಕವಾಗಿ ಸದೃಡರಾಗಲು ಹೆಚ್ಚಿನ ಸಹಾಯ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ರಸ್ತೆ ಬದಿ ವ್ಯಾಪಾರಸ್ತರು ಸಂಘಟಿತರಾಗಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಸಮಿತಿಗಳನ್ನು ರಚಿಸಕೊಳ್ಳಬೇಕೆಂದು ಸಲಹೆ ನೀಡಿದ ಶಾಸಕರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಅಭಿವೃಧ್ಧಿ ಹೊಂದಬೇಕೆಂದರಲ್ಲದೆ ಅಕ್ಟೋಬರ್ 30 ರಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಬೀದಿ ವ್ಯಾಪಾರಿಗಳ ಸಮಾವೇಶವನ್ನು ಆಯೋಜಿಸಿದ್ದು ಈ ಸಮಾವೇಶದಲ್ಲಿ ಅರ್ಹ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗುವುದು ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವಿಭಜಿತ ಜಿಲ್ಲೆಗಳ ಎಲ್ಲಾ ಶಾಸಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೂಳಲಿದ್ದಾರೆಂದರು.
ನಗರಸಭೆಯ ಪೌರಾಯುಕ್ತ ಶ್ರಿಕಾಂತ್ ಮಾತನಾಡಿ ಬೀದಿ ವ್ಯಾಪಾರಿಗಳಿಗೆ ಖಾಯಂ ನೆಲೆ ಕಲ್ಪಿಸಲು ತರಬೇತಿ ನೀಡಲಾಗುತ್ತಿದ್ದು, ನಗರದಲ್ಲಿ 279 ಬೀದಿ ವ್ಯಾಪಾರಿಗಳನ್ನು ಗುರುತಿಸಿದ್ದು, ಇವರ ಚುನಾವಣೆ ನಡೆಸಿ ಪದಾದಿಕಾರಿಗಳನ್ನು ಆಯ್ಕೆ ಮಾಡಿ 21 ಲಕ್ಷ ರೂಗಳ ವೆಚ್ಚದಲ್ಲಿ ಯೋಜನೆಯ ವಿವರಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೀದಿಬದಿಯ ವ್ಯಾಪಾರಸ್ಥರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು, ನಗರಸಭಾ ಸದಸ್ಯ ಅನಿಲ್, ನಗರಸಭಾ ಸಮುದಾಯದ ಅಭಿವೃಧ್ಧಿ ಅಧಿಕಾರಿ ಸುಧಾ, ಬೀದಿಬದಿಯ ವ್ಯಾಪಾರಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸಮಾಜದಲ್ಲಿರುವ ಪ್ರತಿಯೊಬ್ಬರಲ್ಲಿ ಒಂದೆಲ್ಲಾ ಒಂದು ರೀತಿಯ ಕಲೆ ಅಡಗಿರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಕೇವಲ ಇಲಾಖೆಗಳಿಂದ ಮಾತ್ರವಲ್ಲದೆ ಸಂಘ ಸಂಸ್ಥೆಗಳಿಂದ ಆಗಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಜಿ.ಕೆ.ಲಕ್ಷ್ಮಿದೇವಮ್ಮ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲ ಭವನ ಸೊಸೈಟಿ ಆಶ್ರಯದಲ್ಲಿ 2019-20ನೇ ಸಾಲಿನ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲೆ ಯಾರೊಬ್ಬರ ಸ್ವತ್ತಲ್ಲ ಅದು ಎಲ್ಲರಲ್ಲೂ ಅಡಗಿರುತ್ತದೆ ಅಂತಹ ಪ್ರತಿಭೆಯನ್ನ ಗುರ್ತಿಸಿ ಪ್ರೋತ್ಸಾಹಿಸಬೇಕೆಂದರು ಪೋಷಕರು ತಮ್ಮ ಮಕ್ಕಳನ್ನು ಓದು ಬರೆಯಲು ಒತ್ತಾಯಿಸುವುದನ್ನು ಬಿಡಬೇಕು, ಮಕ್ಕಳ ಆಸಕ್ತಿ ಏನೆಂದು ಗುರ್ತಿಸಿ ಅದಕ್ಕೆ ತಕ್ಕಂತೆ ಅವರಿಗೆ ಅವಕಾಶಗಳನ್ನು ಒದಗಿಸಿಕೊಡಬೇಕು. ಅದು ಬಿಟ್ಟು ಅವರ ಮೇಲೆ ಇನ್ನಿಲ್ಲದ ಒತ್ತಡ ಹಾಕಿದರೆ ಮಕ್ಕಳು ಖಿನ್ನತೆಗೆ ಒಳಗಾಗುವ ಸಂಭೌ ಹೆಚ್ಚಾಗಿರುತ್ತದೆ ಹಾಗಾಗಿ ಮಕ್ಕಳನ್ನು ಓದು ಬರೆಯುವ ಜತೆಗೆ ಕ್ರೀಡೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಅದು ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಾದರೆ ಸಾಲದು ಮನೆಗಳಲ್ಲೂ ಆ ಕೆಲಸ ಆಗಬೇಕಿದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಪ್ರತಿಭಾ ಕಾರಂಜಿ, ಕಲಾಶ್ರೀ ಇನ್ನಿತರೆ ಅನೇಕ ಕಾರ್ಯಕ್ರಮಗಳು ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಹೊರಸೂಸಲು ಉತ್ತಮ ವೇದಿಕೆಯಾಗಿದೆ ಎಂದ ಅವರು ಪ್ರತಿ ವರ್ಷವೂ ಈ ಕಲಾಶ್ರೀ ಕಾರ್ಯಕ್ರಮವನ್ನು 9 ರಿಂದ 16 ವರ್ಷದ ವಯಸಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡು ವ್ಯಾಪಕ ಪ್ರಚಾರವನ್ನು ಕೊಡುತ್ತಿದ್ದರೂ ಭಾಗವಹಿಸುವವರ ಸಂಖ್ಯೆ ತೀರಾ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಾದರೂ ಈ ರೀತಿ ಆಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಲಿ ಎಂದು ಆಶಿಸಿದರು.
ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ಕಥೆ, ಕವನ, ಪ್ರಬಂಧ ರಚನೆ ಸ್ಪರ್ಧೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಯಕ್ಷಗಾನ, ಜನಪದ ನೃತ್ಯ, ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ, ಯಕ್ಷಿಣಿ ಪ್ರದರ್ಶನ ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಜ್ಞಾನ ಮಾದರಿ ತಯಾರಿಕೆ ಹಾಗೂ ವಿವರಣೆ ಸ್ಪರ್ಧೆಗಳು ನಡೆದವು.
ನಗರ ಸೇರಿದಂತೆ ತಾಲೂಕಿನ ವಿವಿದ ಶಾಲೆಗಳಿಂದ ಆಗಮಿಸಿದ್ದ ವಿಜೇತ ಸ್ರ್ಪಗಳಿಗೆ ಬಹುಮಾನ ಹಾಗೂ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಸಹಾಯಕ ಶಿಶು ಯೋಜನಾಕಾರಿ ಮಹೇಶ್, ಮೇಲ್ವಿಚಾರಕಿ ಗಿರಿಜಾಂಬಿಕೆ, ಸಂದೀಪ್,ಅಮಜದ್, ತೀರ್ಪುಗಾರರಾಗಿ ಶಿಕ್ಷಕ ವೆಂಕಟರೆಡ್ಡಿ, ಸಂಗೀತ ಶಿಕ್ಷಕ ರಾಮಮೂರ್ತಿ, ವಿಜ್ಞಾನ ಶಿಕ್ಷಕಿ ನಳಿನ, ಚಿತ್ರಕಲೆ ಶಿಕ್ಷಕ ಶೈನ್ ಮತ್ತಿತರರು ಭಾಗವಹಿಸಿದ್ದರು.
ಇಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ.
– ಸಂಪಾದಕೀಯ ಮಂಡಳಿ
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.