(www.vknews.in) : 2023 ರ ಕ್ಯಾಲೆಂಡರ್ ವರ್ಷದ ಆರಂಭ ಅತ್ಯಂತ ದುಃಖದ ಪೀಠಿಕೆಯೊಂದಿಗೆ ಆರಂಭ ಗೊಳ್ಳಬಹುದೆಂದು ಯಾರೂ ಊಹಿಸಿರಲಿಕ್ಕಿಲ್ಲ. ನೌಷಾದ್ ಹಾಜಿಯವರು ಅಪಘಾತದಿಂದಾಗಿ ಇಹಲೋಕಕ್ಕೆ ವಿದಾಯ ಹೇಳಿದರು ಎಂಬ ದುಃಖ ವಾರ್ತೆ ಸಿಡಿಲೆರಗಿದಂತೆ ಬಾಸವಾಯಿತು. ಮರಣದ ರುಚಿ ಪ್ರತಿಯೊಬ್ಬನೂ ಸವಿಯಲೇ ಬೇಕು. ಅದಕ್ಕಾಗಿ ಸದಾ ಸಿದ್ಧರಿರಲು ಇಸ್ಲಾಮ್ ಧರ್ಮವು ಅನುಯಾಯಿಗಳನ್ನು ಸದಾ ಎಚ್ಚರಿಸುತ್ತಲೇ ಇದೆ. ಆದರೆ ಈ ವಿಷಯವು ನೌಷಾದ್ ಹಾಜಿಯಂತಹ ವ್ಯಕ್ತಿಗಳಲ್ಲಿ ಇದು ಇಷ್ಟು ಬೇಗ ಯಾಕಾಯಿತು ಎಂಬ ಪ್ರಶ್ನೆ ಕಾಡುವಾಗ ಆ ವ್ಯಕ್ತಿಯ ವಿಶೇಷಣ ಕಣ್ಣ ಮುಂದೆ ಮೂಡಿ ಬರುವುದು ಸಹಜ.
ನೌಷಾದ್ ಹಾಜಿಯವರೊಂದಿಗೆ ನನ್ನ ಒಡನಾಟಕ್ಕೆ ಸುಮಾರು 10 ವರ್ಷಗಳಷ್ಟು ಇತಿಹಾಸ ಇದೆ. 2014 ರಲ್ಲಿ ಮಂಗಳೂರು ಖಾಝಿ ಶೈಖುನ ತ್ವಾಕಾ ಉಸ್ತಾದ್ ಮತ್ತು ಮಂಗಳೂರು ಸೆಂಟ್ರಲ್ ಕಮಿಟಿಯ ಕೆಲವು ಪ್ರಮುಖರು ದುಬೈ ಸಂದರ್ಶನದಲ್ಲಿದ್ದಾರೆ ಎಂದರಿತು ಅವರನ್ನು ಭೇಟಿಯಾಗಲು ಅವರ ವಾಸವಿರುವ ಹೋಟೆಲ್ ಗೆ ನಾವು ಹೋದೆವು. ಅಲ್ಲಿ ಹಲವು ಪ್ರಮುಖರು ಇದ್ದರು. ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ಪ್ರಚಾರಾರ್ಥ ಅವರೆಲ್ಲರೂ ದುಬೈಗೆ ಬಂದಿದ್ದರು. ಅವರೊಂದಿಗೆ ನಗುಮುಖದ ನೌಷಾದ್ ಹಾಜಿ ಕೂಡಾ ಇದ್ದರು. ಅದೇನು ಮೊದಲ ಪರಿಚಯ ಆಗಿರಲಿಲ್ಲ. ಅದಕ್ಕಿಂತ ಮೊದಲೇ ಹಲವು ವೇದಿಕೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಅವರ ಹೆಸರು ಮತ್ತು ಭಾವ ಚಿತ್ರ ನೋಡಲು ಸಾಧ್ಯವಾಗಿತ್ತು. ನೌಷಾದ್ ಹಾಜಿಯವರೊಂದಿಗೆ ಒಡನಾಟ ಅಂದಿನಿಂದ ಆರಂಭವಾಯಿತು. ದುಬೈಯಿಂದ ಊರಿಗೆ ತಲುಪಿದ ತಕ್ಷಣ ಕರೆ ಮಾಡಿ ಯೋಗ ಕ್ಷೇಮ ಕೇಳಿ ದಾರುನ್ನೂರನ್ನು ಬಲಪಡಿಸಬೇಕು ಎಂದು ವಿನಂತಿಸಿದ್ದರು.
ಜನರು ಯೌವನವನ್ನು ಉಪಭೋಗದಿಂದ ಮತ್ತು ರಾಜಕೀಯ ಚಿಂತೆಯೊಂದಿಗೆ ಕಳೆಯುತ್ತಿರುವಾಗ ನೌಷಾದ್ ಹಾಜಿಯವರು ತನ್ನ ಯೌವನವನ್ನು ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯೊಂದಿಗೆ ವ್ಯಯಿಸಿದ್ದರು. ಜನರ ಕಷ್ಟಕ್ಕೆ ಸ್ಪಂದಿಸಿ ತಕ್ಕ ಪರಿಹಾರ ಕಂಡುಹಿಡಿಯಲು ಯಾರ ಬಾಗಿಲನ್ನು ತಟ್ಟಲೂ ಅವರು ಹಿಂಜರಿಯುತ್ತಿರಲಿಲ್ಲ. ವರದಕ್ಷಿಣೆ ಪಿಡುಗಿನಿಂದ ಹೆಣ್ಣು ಮಕ್ಕಳನ್ನು ಮುಕ್ತಗೊಳಿಸಲು ಅವರು ವಿದ್ವಾಂಸರಿಗೆ ಸಲಹೆ ನೀಡಿ ಧಾರ್ಮಿಕ ಮತ ಪ್ರಸಂಗ ಮತ್ತು ಶುಕ್ರವಾರದ ಭಾಷಣಗಳಲ್ಲಿ ಜನರನ್ನು ಎಚ್ಚರಿಸಲು ಮನವಿ ಮಾಡುತ್ತಿದ್ದರು.ಅದಕ್ಕಾಗಿ ‘ನಂಡೆ ಪೆ0ಙಲ್’ ಎಂಬ ಆಂದೋಲನವನ್ನು ಅವರು ಆರಂಭಿಸಿ ವಯಸ್ಸು ಮೂವತ್ತು ದಾಟಿಯೂ ವಿವಾಹ ಭಾಗ್ಯ ಲಭಿಸದ ಹೆಣ್ಣು ಮಕ್ಕಳಿಗೆ (ವಧು ವರರಿಗೆ) ಅತ್ಯಾವಶ್ಯಕ ಚಿನ್ನ, ವಸ್ತ್ರ, ಕೈಖರ್ಚಿನ ಹಣ, ವಿವಾಹದ ಖರ್ಚು ಮತ್ತು ಆಹಾರ ಎಲ್ಲವನ್ನೂ ನೀಡಿ ಸಾಮೂಹಿಕ ವಿವಾಹ ಕಾರ್ಯ ನಡೆಸಿ ನೂರಾರು ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ನೆರವೇರಿಸಿದ ಕೀರ್ತಿ ನೌಷಾದ್ ಹಾಜಿಯವರಿಗೆ ಮಾತ್ರಾ ಸಲ್ಲುತ್ತದೆ. ಅದೇ ರೀತಿ ನೌಷಾದ್ ಹಾಜಿಯವರು ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ಸ್ಥಾಪಕ ಸಮಿತಿಯಲ್ಲಿ ಪ್ರಮುಖರಾಗಿದ್ದರು. ಅದೇ ರೀತಿ ದಾರುಸ್ಸಲಾಮ್ ಎಜುಕೇಶನ್ ಟ್ರಸ್ಟ್ ಬೆಳ್ತಂಗಡಿ ಇದರ ಕೋಶಾಧಿಕಾರಿಯಾಗಿದ್ದರು. ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಮದ್ರಸಾ ಮ್ಯಾನೇಜ್ಮೆಂಟ್ ಇದರ ಸದಸ್ಯರಾಗಿದ್ದು ಕಳೆದ ತಿಂಗಳು ಪ್ರಥಮ ಬಾರಿಗೆ ಅದ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದೇ ರೀತಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ಮಂಗಳೂರು ಇದರ ಸದಸ್ಯರಾಗಿದ್ದರು. ಅದೇ ರೀತಿ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮೂಳೂರು, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್, ಶಂಸುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್, ದಾರುಲ್ ಹಸನಿಯ್ಯಾ ವಿದ್ಯಾ ಸಂಸ್ಥೆ ಸಾಲ್ಮರ, ಹೆಣ್ಣು ಮಕ್ಕಳ ಶರಿಯತ್ ಮತ್ತು ದಅವಾ ಕಾಲೇಜ್ ಕೆಮ್ಮಾರ, ವಾದಿ ತ್ತೈಬಾ ವಿದ್ಯಾ ಸಂಸ್ಥೆ ಕಿನ್ಯಾ, ಶಂಸುಲ್ ಉಲಮಾ ದಾರುಸ್ಸಲಾಮ್ ಮಂಗಳನಗರ, ಶಂಸುಲ್ ಉಲಮಾ ಕಾಲೇಜ್ ಕೈಕಂಬ ಹೀಗೆ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಅದೇ ರೀತಿ ಲೌಕಿಕ ವಿದ್ಯಾ ಕೇಂದ್ರಗಳಿಗೂ ನೌಷಾದ್ ಹಾಜಿಯವರು ಆರ್ಥಿಕ ಸಹಕಾರ ನೀಡುತ್ತಾ ಬಂದಿರುತ್ತಿದ್ದರು.
ನೌಷಾದ್ ಹಾಜಿಯವರಿಗೆ ಧಾರ್ಮಿಕ ವಿದ್ವಾಂಸರೆಂದರೆ ಪಂಚ ಪ್ರಾಣ. ಅವರನ್ನು ಸಂದರ್ಶಿಸುವುದು, ಅವರನ್ನು ಮನೆಗೆ ಆಹ್ವಾನಿಸಿ ಔತಣ ಕೂಟ ಏರ್ಪಡಿಸುವುದು, ಅವರು ಆಗಮಿಸುವ ವೇದಿಕೆ ಎಷ್ಟೇ ದೂರವಾದರೂ ಅಲ್ಲಿಗೆ ಪ್ರಯಾಣಿಸುವುದು ಅವರೊಂದಿಗೆ ಕುಶಲೋಪರಿ ನಡೆಸುವುದು ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಅವರೊಂದಿಗೆ ಸಮಾಲೋಚಿಸುವುದು ಇಂತಹ ಗುಣ ವಿಶೇಷವನ್ನು ಅವರು ಹೊಂದಿದ್ದರು.
ನೌಷಾದ್ ಹಾಜಿಯವರ ಇನ್ನೊಂದು ವಿಶೇಷ ಏನೆಂದರೆ ಅವರು ಪ್ರಯಾಣವನ್ನು ಹೆಚ್ಚು ಇಷ್ಟಪಡುತ್ತಿದ್ದರು. ಬೆಳಿಗ್ಗೆ ಮನೆಯಿಂದ ಹೊರಡದ ದಿನವೇ ಇರುತ್ತಿರಲಿಲ್ಲ. ತನ್ನ ವ್ಯವಹಾರಕ್ಕಿಂತಲೂ ಹೆಚ್ಚು ಸಮಾಜ ಸೇವೆಗಾಗಿ ಅವರು ಪ್ರಯಾಣಿಸುತ್ತಿದ್ದರು. ಉತ್ತರ ಕರ್ನಾಟಕದ ಹಲವು ಕಡೆ ಮದ್ರಸಾ ಸ್ಥಾಪಿಸುವ ಸಲುವಾಗಿ, ಅದೇ ರೀತಿ ಬೆಂಗಳೂರು, ದೆಹಲಿ, ಕೇರಳ ಮೊದಲಾದ ಕಡೆ ಆವಶ್ಯಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಪ್ರಯಾಣಿಸುತ್ತಿಸುತ್ತಿದ್ದರು.ಅದಕ್ಕಾಗಿ ಸಾವಿರಾರು ರೂಪಾಯಿ ಇಂದನ ವೆಚ್ಚವನ್ನು ಭರಿಸುತ್ತಿದ್ದರು. ತನ್ನ ವಾಹನದಲ್ಲಿ ಇತರರನ್ನು ಸಹ ಕರೆದೊಯ್ಯುತ್ತಿದ್ದರು. ಅದೇ ರೀತಿ ಕೊಲ್ಲಿ ರಾಷ್ಟಗಳಿಗೂ ಆಗಾಗ ಭೇಟಿ ನೀಡುತ್ತಿದ್ದರು. ದಾರುನ್ನೂರ್ ವಿದ್ಯಾ ಕೇಂದ್ರದ ಸಲುವಾಗಿ ಹಲವಾರು ಬಾರಿ ದುಬೈಗೆ ಪ್ರಯಾಣ ಕೈಗೊಂಡಿದ್ದರು. ಅದೇ ರೀತಿ ಖತ್ತರ್ ನಲ್ಲಿ ನಾವೆಲ್ಲರೂ ದಾರುನ್ನೂರ್ ವಿಷಯದಲ್ಲಿ ಒಂದಾಗಿದ್ದೆವು. ಅಲ್ಲದೆ ಸೌದಿ ಅರೇಬಿಯಾ ರಾಷ್ಟ್ರಕ್ಕೂ ಪ್ರಯಾಣಿಸುತ್ತಿದ್ದರು.
ಯಾರೇ ಆಮಂತ್ರಿಸಿದರೂ ನೌಷಾದ್ ಹಾಜಿಯವರು ಅವರ ಆಮಂತ್ರಣ ಸ್ವೀಕರಿಸಿ ಅವರ ಮನೆಗೆ ತಲುಪುತ್ತಿದ್ದರು. ಅಲ್ಲಿ ಬಡವ ಬಲ್ಲಿದ ಎಂಬ ಚಿಂತೆಗೆ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಕೆಲವು ಕಡೆ ಆಮಂತ್ರಿಸಿದ ಮನೆಯರಿಗೆ ಸಹಾಯ ಧನ ನೀಡಿ ಬರುತ್ತಿದ್ದರು. ಜಿಲ್ಲೆಯ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳಲ್ಲೂ ಸೂರಲ್ಪಾಡಿಯ ನೌಷಾದ್ ಹಾಜಿ ಚಿರಪರಿಚಿತರು. ಅವರು ತನ್ನ ಕೊನೆಯ ವೇದಿಕೆ ಏರಿದ್ದು ಆತೂರು ಪಕ್ಕದ ಕುದ್ಲೂರ್ ಎಂಬ ಪುಟ್ಟ ಹಳ್ಳಿಯ ಕಾರ್ಯಕ್ರಮವೊಂದಕ್ಕೆ. ಅದರಲ್ಲಿ ಪಾಲ್ಗೊಂಡು ಮಸೀದಿ ನಿರ್ಮಾಣಕ್ಕಾಗಿ ಒಂದು ಉತ್ತಮ ಸಹಕಾರದ ವಾಗ್ಧಾನವನ್ನೂ ನೀಡಿದ್ದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ, ಚಿಕ್ಕಮಗಳೂರು, ಹಾಸನ ಮೊದಲಾದ ಕಡೆ ನೌಷಾದ್ ಹಾಜಿಯವರ ಸಂಪರ್ಕ ಅತಿ ಹೆಚ್ಚಾಗಿ ಇತ್ತು.
ನೌಷಾದ್ ಹಾಜಿಯವರು ಮೃದು ಸ್ವಭಾವದವರು. ಸದಾ ಹಸನ್ಮುಖಿ, ಯಾರೊಂದಿಗೂ ವೈಮನಸ್ಸು ಇಲ್ಲ. ಎಲ್ಲರೊಂದಿಗೆ ಬೆರೆಯುವ ಸ್ವಭಾವ. ಅವರಿರುವ ಸಭೆಯು ಪರಿಪೂರ್ಣವಾಗಿರುತ್ತಿತ್ತು. ಅವರೋರ್ವ ಸಮಾಜ ಸೇವಕರು ಮಾತ್ರವಲ್ಲದೆ ಸಮುದಾಯದ ಮುಖಂಡರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ರಂಝಾನ್ ತಿಂಗಳಲ್ಲಿ ಮತ್ತು ಕೊರೋನಾ ಸಂದರ್ಭಗಳಲ್ಲಿ ಆಹಾರದ ಕಟ್ಟನ್ನು ಸ್ವಂತ ಭುಜದಲ್ಲಿ ಬಡವರ ಬಾಗಿಲಿಗೆ ಹೊತ್ತು ನಡೆಯುತ್ತಿದ್ದರು. ಬಡವರ ಮನೆಗೆ ಭೇಟಿ ನೀಡಿದ ಬಳಿಕ ಸಾಂತ್ವನ ನೀಡುವುದು ಅವರ ಅಭಿರುಚಿಯಾಗಿತ್ತು. ಜನರ ವೈಮನಸ್ಸು ಮತ್ತು ಜಮಾ ಅತ್ ಗಳಲ್ಲಿ ಬರುವ ಬಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡು ಹಿಡಿಯಲು ಪರಿಶ್ರಮಿಸುತ್ತಿದ್ದರು. ಮಸೀದಿ ಮದ್ರಸಾ ಸಂಘ ಸಂಸ್ಥೆಗಳಿಗಾಗಿ ಕಚೇರಿ ಕಚೇರಿ ಅಲೆಯುವುದು, ರಾಜಕೀಯ ನೇತಾರರನ್ನು ಕಂಡು ಪರಿಹಾರಕ್ಕಾಗಿ ಪ್ರಯತ್ನಿಸುವುದು ಇವುಗಳೆಲ್ಲ ಅವರ ಸಾಮಾನ್ಯ ಚಟುವಟಿಕೆಗಳಾಗಿದ್ದವು. ಅವರು ಒಳ್ಳೆಯ ಭಾಷಣಗಾರರಾಗಿದ್ದರು. ಯಾವುದೇ ವೇದಿಕೆಯಲ್ಲಿ ಅಂಜದೆ ವಿಷಯ ಪ್ರಸ್ತಾಪ ಮಾಡುವ ಧೈರ್ಯ ಅವರಿಗಿತ್ತು. ಅವರು ಸಮುದಾಯದ ಸ್ವತ್ತು ಆಗಿದ್ದರು ಅದರೊಂದಿಗೆ ಕುಟುಂಬಕ್ಕೂ ಅವರೊಬ್ಬ ಮಹಾ ಮಾಣಿಕ್ಯದಂತಿದ್ದರು. ಹೆತ್ತವರು ಭಾಗ್ಯವಂತರಾದರೆ ನೌಷಾದ್ ಹಾಜಿಯಂತಹ ಮಕ್ಕಳನ್ನು ಅಲ್ಲಾಹು ಕರುಣಿಸುತ್ತಾನೆ. ತನ್ನ ಮರಣ ಹೊಂದಿದ ತಂದೆ ತಾಯಿಯವರ ಹೆಸರಲ್ಲಿ ಅವರು ಮಾಡಿದ ದಾನಕ್ಕೆ ಲೆಕ್ಕವಿಲ್ಲ.
ನೌಷಾದ್ ಹಾಜಿಯವರು ಹಲವಾರು ಸಲ ನಮ್ಮ ಮನೆಗೆ ಭೇಟಿ ನೀಡಿದ್ದರು. ನನ್ನ ತಾಯಿಯವರ ದುಆ ಕ್ಕೆ ಬಂದವರು ಯಾಸೀನ್ ಓದಿ ತುಂಬಾ ಹೊತ್ತು ದುಆ ಮಾಡಿದ್ದರು. ಅವರು ಸಿಕ್ಕಾಗಲೆಲ್ಲಾ ಹೆಚ್ಚಾಗಿ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ರಾಜಕೀಯ ವಿಷಯದಲ್ಲಿ ತಲೆ ಹಾಕುತ್ತಿರಲಿಲ್ಲ. ಒಳ್ಳೆಯವರ ಸಹವಾಸ ಮತ್ತು ವಿದ್ವಾಂಸರ ಸ್ನೇಹ ಇದು ಅವರ ರಕ್ತದಲ್ಲಿ ಅಡಕವಾಗಿರುವ ಗುಣಗಳಲ್ಲಿ ಒಂದಾಗಿತ್ತು. ಮುಳಾರಪಟ್ಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ಕೆ ನಾವು ಕುಟುಂಬ ಸಮೇತ ಪಾಲ್ಗೊಂಡಿದ್ದೆವು. ಕಾರ್ಯಕ್ರಮವನ್ನು ಸಂಯೋಜಿಸಿದ್ದ ನೌಷಾದ್ ಹಾಜಿಯವರ ಸಮಾಜ ಸೇವೆಯನ್ನು ಹೊಗಳಿ ಅವರನ್ನು ಸನ್ಮಾನಿಸಿ ಆಗಮಿಸಿದ ವಿದ್ವಾಂಸರುಗಳು ಮತ್ತು ಸಾಮಾಜಿಕ ನೇತಾರರು ಮನಸಾರೆ ಶ್ಲಾಘಿಸಿದ್ದರು. 10 ಸಾವಿರದಷ್ಟು ಜನರಿಗೆ ಅನ್ನ ದಾನ ಕೂಡಾ ಆ ದಿನ ಮಾಡಲಾಗಿತ್ತು. ಅವರು ಸಾಮಾಜಿಕ ಕ್ಷೇತ್ರದಲ್ಲಿ ಎಷ್ಟು ಮಗ್ನರಾಗಿದ್ದರೋ ಅವುಗಳನ್ನು ನೋಡಲು ಅವರ ಮನೆಗೆ ಒಂದು ಸಲ ಸಂದರ್ಶಿಸಿದರೆ ಅಲ್ಲಿ ಕಾಣುವ ಸ್ಮರಣಿಕೆಗಳು ಮತ್ತು ಶಾಲುಗಳ ರಾಶಿ ಮನದಟ್ಟು ಮಾಡುತ್ತದೆ.
ನೌಷಾದ್ ಹಾಜಿಯವರು ಯಸ್ ಕೆ ಯಸ್ ಯಸ್ ಯಫ್ ಮತ್ತು ಯಸ್ ವೈ ಯಸ್ ಗಳಲ್ಲಿ ಸಕ್ರಿಯರಾಗಿದ್ದರು. ಸುನ್ನಿ ಸಂದೇಶ ಮಾಸ ಪತ್ರಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾಗಿದ್ದರು. ದಾರುನ್ನೂರ್ ಯೂತ್ ಟೀಂ ಕಾಶಿಪಟ್ಣ ಇದರ ಚೇರ್ಮೇನ್ ಆಗಿ ಇವರನ್ನು ನೇಮಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಮಹಾ ಸಭೆಯಲ್ಲಿ ಪಾಲೊಳ್ಳಲು ನನಗೆ ವ್ಯಯಕ್ತಿಕ ಆಮಂತ್ರಣ ನೀಡಿ ಸಭೆಯಲ್ಲಿ ಆತ್ಮೀಯತೆಯಲ್ಲಿ ಆಲಂಗಿಸಿದ್ದರು. ಮಹಾ ಸಭೆಯ ಪ್ರಾಸ್ತಾವಿಕ ಭಾಷಣವನ್ನು ನೌಷಾದ್ ಹಾಜಿಯವರು ಮಾಡಿದ್ದರು. ಅವರು ಸಂಘ ಸಂಸ್ಥೆಗಳನ್ನು ಮುನ್ನಡೆಸಲು ಬೇಕಾದ ತ್ಯಾಗ ಮನೋಭಾವದ ಬಗ್ಗೆ ಮಾಡಿದ ಸುಮಾರು ೨೦ ನಿಮಿಷಗಳ ಭಾಷಣವು ಎಲ್ಲರನ್ನು ನಿಬ್ಬೆರಗಾಗಿಸಿತ್ತು. ನೌಷಾದ್ ಹಾಜಿಯವರು ಶಾಂತ ಸ್ವಭಾವಿಯಾದರೂ ಅಗತ್ಯ ಸಂದರ್ಭಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಹಿಂಜರಿಯುತ್ತಿರಲಿಲ್ಲ. ಊರಲ್ಲಿ ಕೋಮು ಸೌಹಾರ್ದ ಮತ್ತು ಶಾಂತಿಯ ವಾತಾವರಣಕ್ಕಾಗಿ ಹೆಚ್ಚು ಪ್ರಯತ್ನಿಸುತ್ತಿದ್ದರು.
ನೌಷಾದ್ ಹಾಜಿಯವರು ಆರಿಸಿದ ಕ್ಷೇತ್ರ ಧಾರ್ಮಿಕ ಮತ್ತು ಸಾಮಾಜಿಕ. ಇವೆರಡೂ ವಿಜಯದ ಹಾದಿಗಳು. ಅದರಿಂದಾಗಿ ಅವರ ಪಾರ್ಥವ ಶರೀರವನ್ನು ಕೊನೆಯ ಸಲ ನೋಡಲು ಸಾವಿರಾರು ಜನ ಒಂದುಗೂಡಿದರು. ಪ್ರತಿಯೊಬ್ಬರ ಬಾಯಲ್ಲೂ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಹೊರತು ಅವರ ವಿರುದ್ಧ ಏನೂ ಹೇಳಲು ಇರಲಿಲ್ಲ. ಅವರೊಬ್ಬ ರಾಜಕೀಯ ನೇತಾರರಾಗಿದ್ದರೆ ಹತ್ತು ತಲೆಮಾರಿಗೆ ಬೇಕಾದ ಸಂಪತ್ತನ್ನು ಸೇರಿಸಬಹುದಾಗಿತ್ತು. ಆದರೆ ಅವರು ಸಾಮಾಜಿಕ ನೇತಾರರಾಗಿರುವುದರಿಂದ ನೂರು ತಲೆಮಾರಿಗೆ ಬೇಕಾದ ಒಳಿತನ್ನು ಸಂಪಾದಿಸಲು ಅವರಿಂದ ಸಾಧ್ಯವಾಯಿತು. ಯಾರಿಂದಲೂ ನೌಷಾದ್ ಹಾಜಿ ಆಗಲು ಸಾಧ್ಯವಿಲ್ಲ. ಎಳೆಯ ಪ್ರಾಯದಲ್ಲೇ ಲಕ್ಷಾಂತರ ಹೃದಯದಲ್ಲಿ ನೆಲೆನಿಂತ ನೌಷಾದ್ ಹಾಜಿಗೆ ನೌಷಾದ್ ಹಾಜಿಯೇ ಸರಿಸಾಟಿ. ಮಂದಹಾಸದ ಸರದಾರ ವಿದಾಯ ಹೇಳಿದಾಗ ನಮಗಾಗಿ ಬಾಕಿ ಉಳಿಸಿದ್ದು ಇವಿಷ್ಟೇ ನೆನಪುಗಳು.
ನೌಷಾದ್ ಹಾಜಿಯವರ ಸಹೋದರರು ಮಹಮ್ಮದ್ ಬೆಂಗಳೂರು, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಬ್ದುಲ್ ಸತ್ತಾರ್ ಕೃಷ್ಣಾಪುರ ಮತ್ತು ಶಂಸುದ್ದೀನ್ ಸೂರಲ್ಪಾಡಿ. ಇವರಲ್ಲಿ ಶಂಸುದ್ದೀನ್ ಸೂರಲ್ಪಾಡಿ ನಮ್ಮೊಂದಿಗೆ ದುಬೈ ಯಲ್ಲಿ ಇದ್ದಾರೆ. ಇವರು ಹೆಚ್ಹು ಕಮ್ಮಿ ಅಣ್ಣನ ಹಾದಿಯಲ್ಲಿ ಮುಂದುವರಿಯುತ್ತಿರುವುದು ಆಶಾದಾಯಕ ವಿಷಯ. ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ, ಬಡ ಬಗ್ಗರಿಗೆ ದಾನ ಮಾಡುವುದರಲ್ಲಿ, ಮಸೀದಿ ಮದ್ರಸಾಗಳಿಗೆ ಸಹಕರಿಸುವುದರಲ್ಲಿ, ಎಲ್ಲದರಲ್ಲೂ ಎತ್ತಿದ ಕೈ. ದಾರುನ್ನೂರಿನ ಬೆನ್ನೆಲುಬಿನಂತಿರುವ ಇವರು ಮುಂದೊಂದು ದಿನ ಶಂಸುದ್ದೀನ್ ಸೂರಲ್ಪಾಡಿ ಎಂಬ ಹೆಸರಲ್ಲಿ ಖ್ಯಾತರಾಗುವುದು ನಿಶ್ಚಿತ. ಅಲ್ಲಾಹು ನೌಷಾದ್ ಹಾಜಿಯ ಪಥದಲ್ಲಿ ಸಾಗಿ ಸಮಾಜ ಸೇವೆಯಲ್ಲಿ ಮುಂಪಕ್ತಿಯಲ್ಲಿ ನಿಲ್ಲಲು ಮತ್ತು ಬಡ ಬಗ್ಗರ ಪಾಲಿಗೆ ಆಶಾಕಿರಣವಾಗಲು ಅನುಗ್ರಹಿಸಲಿ ಎಂಬುವುದೇ ನಮ್ಮೆಲ್ಲಾ ಪ್ರಾರ್ಥನೆ.
ನೌಷಾದ್ ಹಾಜಿಯವರಿಗೆ ಮೂರು ಗಂಡು ಎರಡು ಹೆಣ್ಣು ಪುಟ್ಟ ಮಕ್ಕಳು. ಮಡದಿ ಗಂಜಿಮಠದವರು. ಅವರ ಅಗಲುವಿಕೆ ನೋವನ್ನು ತಾಳುವ ಶಕ್ತಿಯನ್ನು ಒಡಹುಟ್ಟಿದವರಿಗೆ,ಮಕ್ಕಳಿಗೆ, ಮಡದಿಗೆ ಮತ್ತು ಅಪಾರ ಬಂಧು ಬಳಗಕ್ಕೆ ಅಲ್ಲಾಹು ನೀಡಲಿ. ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಭಾಗ್ಯ ಶಾಲಿಗಳ ಸಾಲಲ್ಲಿ ಸೇರಿಸಲಿ. ಅಲ್ಲದೆ ಮಕ್ಕಳಲ್ಲಿಯೂ ತಂದೆಯ ಗುಣ ವಿಶೇಷಣಗಳು ಮೇಳೈಸಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ. ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳಿದರು ಒಬ್ಬನ ಮರಣ ನೂರಾರು ಜನರ ಮನಸ್ಸಿಗೆ ನೋವನ್ನು ನೀಡಿ ಎಲ್ಲರೂ ಅವನ ಗುಣಗಾನ ಮಾಡಿದರೆ ಅವನು ವಿಜಯಶಾಲಿಯಾದ ಮತ್ತು ಸ್ವರ್ಗ ಅವನಿಗಾಗಿ ನಿಶ್ಚಿತ. ಒಬ್ಬನ ಸಾವು ಜನರ ಮನಸ್ಸಿಗೆ ಯಾವುದೇ ಪರಿಣಾಮ ಬೀರದೆ ಅವನ ಸಾವು ಸಂಭ್ರಮಿಸಲ್ಪಟ್ಟರೆ ಅವನು ಪರಾಜಿತನಾದ ಮತ್ತು ನರಕವೇ ಅವನ ವಾಸಸ್ಥಳ. ಒಳಿತನ್ನು ಆರಿಸಲು ಅಲ್ಲಾಹು ಅನುಗ್ರಹಿಸಲಿ.
ಬರಹ : ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.