(ವಿಶ್ವ ಕನ್ನಡಿಗ ನ್ಯೂಸ್) : ವಿಶ್ವದಲ್ಲಿ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಅಗ್ರಗಣ್ಯ ಸ್ಥಾನ ಅನಾಯಾಸವಾಗಿ ಹೃದಯ ಸಂಬಂಧಿ ರೋಗಗಳಿಗೆ ದೊರಕಿದ ಹಾಗೂ ಕಳೆದ 50 ವರ್ಷಗಳಿಂದ ಅಗ್ರಸ್ಥಾನದಲ್ಲಿಯೇ ವಿರಾಜಮಾನವಾಗಿದೆ. ಎರಡನೇ ಸ್ಥಾನ ಕ್ಯಾನ್ಸರ್ಗೆ ದೊರಕಿದೆ, ಮುಂದುವರಿದ ದೇಶಗಳಲ್ಲಿ ಹೃದಯ ಸಂಬಂಧಿ ರೋಗಗಳು 50 ಶೇಕಡಾ ಸಾವಿಗೆ ಕಾರಣವಾಗಿದ್ದರೆ, ಮುಂದುವರಿಯುತ್ತಿರುವ ದೇಶಗಳಲ್ಲಿ ಶೇಕಡಾ 25 ಸಾವಿಗೆ ಹೃದಯ ಸಂಬಂಧಿ ರೋಗಗಳೇ ಕಾರಣ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಒಟ್ಟು ಪ್ರತಿ ಮೂರು ಸಾವಿನಲ್ಲಿ ಒಬ್ಬರು ಹೃದಯದ ಕಾಯಿಲೆ ಕಾರಣದಿಂದ ಸಾವಿಗೀಡಾಗುತ್ತಾರೆ ಎಂದರೆ ತಪ್ಪಾಗಲಾರದು.
ಭಾರತ ದೇಶವೊಂದರಲ್ಲಿಯೇ ಸುಮಾರು 38 ಶೇಕಡಾ ಸಾವಿಗೆ ಹೃದಯ ಸಂಬಂಧಿ ರೋಗಗಳೇ ಕಾರಣ ಎಂದೂ ತಿಳಿದುಬಂದಿದೆ. ಭಾರತ ಈಗಾಗಲೇ ವಿಶ್ವದ ಮಧುಮೇಹ ರೋಗದ ಮತ್ತು ಅಧಿಕ ರಕ್ತ ದೊತ್ತಡ ರೋಗದ ರಾಜಧಾನಿ ಎಂಬ ಕೆಟ್ಟ ಬಿರುದನ್ನು ಪಡೆದುಕೊಂಡಿದೆ. ಈಗಿನ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇದೇ ರೀತಿ ಮುಂದುವರೆದಲ್ಲಿ, ಮುಂದಿನ ಐದು ವರ್ಷಗಳಲ್ಲಿ ಭಾರತಕ್ಕೆ ‘ಹೃದಯಾಘಾತ’ದ ರಾಜಧಾನಿ ಎಂಬ ಬಿರುದು ಅನಾಯಾಸವಾಗಿ ದೊರಕುವ ಎಲ್ಲ ಸಾಧ್ಯತೆಗಳು ಮುಕ್ತವಾಗಿದೆ ಎಂದು ವೈದ್ಯಕೀಯ ದಾಖಲೆಗಳಿಂದ ಹಾಗೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ಅವೆರಡೂ ಇರುವವರಿಗೆ ಹೃದಯ ಸಂಬಂಧಿ ರೋಗ ಕಟ್ಟಿಟ್ಟ ಬುತ್ತಿ ಎಂದೂ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಜೀವನಶೈಲಿ, ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ ಎಂದರೂ ಅತಿಶಯೋಕ್ತಿಯಾಗಲಾರದು.
ಚಳಿಗಾಲದಲ್ಲಿ ಹೃದಯ ರೋಗ ಯಾಕೆ ಗರಿಗೆದರುತ್ತದೆ?
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೃದಯ ರೋಗಗಳ ಸಾಧ್ಯತೆ ಹೆಚ್ಚು ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಯಾಕಾಗಿ ಎಂಬ ಜಿಜ್ಞಾಸೆ ಎಲ್ಲರಲ್ಲೂ ಕಾಡುತ್ತದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳುವುದೇ ಅತಿ ಮುಖ್ಯ ಕಾರಣ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.
1. ಚಳಿಗಾಲದಲ್ಲಿ ಹೃದಯದ ಆಘಾತ ಜಾಸ್ತಿ ಇರುತ್ತದೆ: ನಮ್ಮ ಹೃದಯ ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುತ್ತದೆ. ಈ ಕಾರಣಕ್ಕಾಗಿ ಹೃದಯಕ್ಕೂ ರಕ್ತ ಮತ್ತು ಶಕ್ತಿಯ ಅಗತ್ಯವಿರುತ್ತದೆ. ಇದನ್ನು “ಕೊರೋನರಿ ಆರ್ಟರಿ” ಎಂಬ ರಕ್ತನಾಳಗಳು ಹೃದಯದ ಸ್ನಾಯುಗಳಿಗೆ ನಿರಂತರವಾಗಿ ರಕ್ತ ಒದಗಿಸುತ್ತದೆ. ಈ ರಕ್ತನಾಳಗಳ ಗೋಡೆಯಲ್ಲಿ ಚಿಕ್ಕ ಚಿಕ್ಕ ನುಣುಪಾದ ಸ್ನಾಯುಗಳು ಇರುತ್ತದೆ. ಇದು ಬಹಳ ಉದ್ರೇಕಕಾರಿ ಸ್ನಾಯು ಆಗಿದ್ದು, ಹೊರಗಿನ ಸ್ವಂದನೆಗೆ ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ ಮತ್ತು ತಕ್ಷಣವೇ ಸಂಕುಚಿತವಾಗುತ್ತದೆ. ಈ ರಕ್ತನಾಳವು ಸಂಕುಚಿತವಾದಾಗ ಹೃದಯದ ಗೋಡೆಗಳಿಗೆ ಮತ್ತು ಸ್ನಾಯುಗಳಿಗೆ ರಕ್ತದ ಪೂರೈಕೆ ಕ್ಷಣಿಕವಾಗಿ ನಿಂತುಹೋಗಿ, ಹೃದಯದ ಬೇನೆ ಮತ್ತು ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಈ ಪ್ರಕ್ರಿಯೆ ಹೆಚ್ಚು ಹೆಚ್ಚು ಕಂಡು ಬರುತ್ತದೆ ಎಂದೂ ತಿಳಿದು ಬಂದಿದೆ.
2. ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ: ಚಳಿಗಾಲದಲ್ಲಿ, ಶೀತ ಗಾಳಿಯಿಂದ ಮತ್ತು ತಂಪು ವಾತಾವರಣದಿಂದ, ರಕ್ತನಾಳಗಳು ಬೇಗನೆ ಸಂಕುಚಿತಗೊಳ್ಳುತ್ತದೆ. ಇದರಿಂದ ರಕ್ತನಾಳಗಳಲ್ಲಿ ರಕ್ತದ ಸಂಚಲನೆಗೆ ಪ್ರತಿ ರೋಧ ಉಂಟಾಗುತ್ತದೆ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ರಕ್ತನಾಳಗಳು ಬಹಳ ಬೇಗ ಹೊರಗಿನ ವಾತಾವರಣಕ್ಕೆ ಉದ್ರೇಕಗೊಳ್ಳುತ್ತದೆ. ಇದು ಪರೋಕ್ಷವಾಗಿ ಹೃದಯಾಘಾತವಾಗಲು ಕಾರಣವಾಗುತ್ತದೆ ಎಂದೂ ಅಂದಾಜಿಸಲಾಗಿದೆ
3. ರಸದೂತಗಳ ಏರು ಪೇರು ಮತ್ತು ಸ್ಟೀರಾಯ್ಡ್ಗಳ ಇಳಿಕೆ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗಲು ಕಡಿಮೆ ಮತ್ತು ರಾತ್ರಿ ಜಾಸ್ತಿ ಇರುತ್ತದೆ. ಈ ರೀತಿಯ ಬದಲಾವಣೆಯಿಂದ ರಸದೂತಗಳ ಸ್ರವಿಸುವಿಕೆಯಲ್ಲಿ ಏರು ಪೇರಾಗುತ್ತದೆ. ಸ್ಟೀರಾಯ್ಡ್ಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಈ ಸ್ಟೀರಾಯ್ಡ್ ಇಳಿಕೆ ಹೃದಯಾಘಾತ ಆಗಲು ಪ್ರೆರೇಪಿಸುತ್ತದೆ ಎಂದೂ ಅಂದಾಜಿಸಲಾಗಿದೆ.
4. ಚಳಿಗಾಲದಲ್ಲಿ ಶೀತ ನೆಗಡಿ ಸಾಧ್ಯತೆ ಹೆಚ್ಚು: ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ ನೆಗಡಿ ಹೆಚ್ಚು ಭಾದಿಸುತ್ತದೆ. ”ಪ್ಲೂ” ನೆಗಡಿ ಹೆಚ್ಚು ಕಂಡುಬರುತ್ತದೆ ಹಾಗೂ ರಕ್ತನಾಳಗಳಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಹೆಚ್ಚಾದ ಉರಿಯೂತ ರಕ್ತನಾಳಗಳಲ್ಲಿಯೂ ಕಂಡುಬರುತ್ತದೆ. ಈ ಉರಿಯೂತದಿಂದ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಹೆಪ್ಪುಗಟ್ಟಿದ ರಕ್ತ, ಕೊರೋನರಿ ರಕ್ತನಾಳಗಳಲ್ಲಿ ನಿರಂತರವಾಗಿ ಸರಾಗ ರಕ್ತದ ಚಲನೆಗೆ ಅಡ್ಡಿ ಮಾಡಿ ಹೃದಯಾಘಾತಕ್ಕೆ ಕಾರಣವಾಗಬಹುದು. ಲಸಿಕೆ ತೆಗೆದುಕೊಂಡು ಶೀತ ನೆಗಡಿ ಬರದಂತೆ ಮಾಡಿದಲ್ಲಿ ಹೃದಯಾಘಾತದ ಸಾಧ್ಯತೆ ಶೇಕಡಾ 50 ಎಷ್ಟು ಕುಂಠಿಸುತ್ತದೆ ಎಂದು ತಿಳಿದುಬಂದಿದೆ.
5. ದೈಹಿಕ ವ್ಯಾಯಾಮಕ್ಕೆ ಕಡಿವಾಣವಿರಲಿ ; ಚಳಿಗಾಲದಲ್ಲಿ ದೈಹಿಕ ವ್ಯಾಯಮ ನಿಯಂತ್ರಣದಲ್ಲಿ ಬೇಕು. ಅತಿಯಾದ ದೈಹಿಕ ಕಸರತ್ತು, ವ್ಯಾಯಾಮ ಮತ್ತು ಜಿಮ್ ಚಟುವಟಿಕೆಗೆ ನಿಯಂತ್ರಣ ಹಾಕಬೇಕು. ದೈಹಿಕ ವ್ಯಾಯಾಮ ಹೃದಯದ ಆರೋಗ್ಯಕ್ಕೆ ಅಗತ್ಯ ಆದರೆ ಅತಿಯಾದ ವ್ಯಾಯಾಮ ಹೃದಯಕ್ಕೆ ಮಾರಕವಾಗಬಹುದು. ವಾತಾವರಣದ ಉಷ್ಣತೆ ಕಡಿಮೆ ಇದ್ದಾಗ ಅತಿಯಾದ ಕಸರತ್ತು ಮತ್ತು ದೇಹದಂಡನೆಯಿಂದ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
6. ಆಹಾರದ ಮೇಲೆ ನಿಯಂತ್ರಣವಿರಲಿ: ಸಾಮಾನ್ಯವಾಗಿ ಚಳಿಗಾಲದಲ್ಲಿ, ಆಲಸ್ಯದಿಂದಾಗಿ ದೈಹಿಕ ವ್ಯಾಯಾಮ ಕಡಿಮೆಯಾಗುತ್ತದೆ ಮತ್ತು ಆಹಾರದ ಸೇವನೆ ಹೆಚ್ಚಾಗುತ್ತದೆ. ಇದರಿಂದ ರಕ್ತದೊತ್ತಡ ಜಾಸ್ತಿಯಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಹಬ್ಬಗಳು ಮತ್ತು ರಜಾದಿನಗಳು ಇರುತ್ತದೆ. ಈ ಸಂದರ್ಭದಲ್ಲಿ ದೈಹಿಕ ವ್ಯಾಯಾಮ ತಪ್ಪುತ್ತದೆ. ಕಡಿಮೆ ವ್ಯಾಯಾಮ, ಹೆಚ್ಚಾದ ರಕ್ತದೊತ್ತಡ, ಹೆಚ್ಚಿದ ಮಧುಮೇಹ ಹೆಚ್ಚಿದ ಬೊಜ್ಜು ಇವೆಲ್ಲವೂ ಸದ್ದಿಲ್ಲದೆ ಹೃದಯಾಘಾತಕ್ಕೆ ಮುನ್ನುಡಿ ಬರೆಯುತ್ತದೆ.
ಕೊನೆಮಾತು: ಹೃದಯ ನಮ್ಮ ದೇಹದಲ್ಲಿನ ಅತ್ಯಮೂಲ್ಯವಾದ ಅಂಗವಾಗಿದ್ದು ದಿನದ 24 ಗಂಟೆ ಮತ್ತು ವರ್ಷದ 365 ದಿನವೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ನಾವು ತಿನ್ನುವ ಆಹಾರ, ನಮ್ಮ ಜೀವನ ಶೈಲಿ, ನಮ್ಮ ಕೆಲಸದ ವಾತಾವರಣ ಎಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕವಾಗಿರಬೇಕು. ನಮ್ಮ ಹೃದಯ, ನಮ್ಮ ದೇಹದೊಳಗಿನ ರಸದೂತಗಳ ವೈಪರೀತ್ಯ, ಹೆಚ್ಚಾದ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದಲೂ ಬಹಳಷ್ಟು ತೊಂದರೆ ಅನುಭವಿಸುತ್ತದೆ. ಆಂತರಿಕ ಮತ್ತು ಬಾಹ್ಯ ಕಾರಣಗಳು ನಮ್ಮ ಹೃದಯದ ಕಾರ್ಯಕ್ಷಮತೆಯನ್ನು ಬದಲಿಸುವ ಎಲ್ಲಾ ಸಾಧ್ಯತೆಗಳು ಇದೆ. ಈ ಕಾರಣದಿಂದ ನಾವು ನಮ್ಮ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೂರಕವಾದ ಜೀವನ ಶೈಲಿ, ಆಹಾರ ಪದ್ಧತಿ ಅನುಸರಿಸಬೇಕು. ಚಳಿಗಾಲದಲ್ಲಿ ರಕ್ತನಾಳಗಳು ಮತ್ತು ಸ್ನಾಯುಗಳು ಬೇಗನೆ ಉದ್ರೇಕವಾಗುವ ಕಾರಣದಿಂದ, ಹೃದಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯವಿರುತ್ತದೆ.
— ಡಾ|| ಮುರಲೀ ಮೋಹನ್ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.