“ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋನ್ ಸಲಾಂ ಶಮ್’ಏ ಬಝ್ಮೇ ಹಿದಾಯತ್ ಪೆ ಲಾಖೋನ್ ಸಲಾಂ”
(www.vknews.in) : ಉತ್ತರ ಭಾರತದ ಮುಸ್ಲಿಮರಲ್ಲಿ ದೊಡ್ಡದೊಂದು ವಿಭಾಗ ದಿನನಿತ್ಯವೂ ಹಾಡುವ ಮಹಾ ಕಾವ್ಯದ ಆರಂಭಿಕ ಸಾಲುಗಳಾಗಿವೆ ಮೇಲಿರುವುದು. ಜಗತ್ತಿನಲ್ಲಿ ಅತೀ ಹೆಚ್ಚಿನ ಜನರು ಹಾಡಲ್ಪಡುತ್ತಿರುವ ಪ್ರವಾದಿ ಪ್ರೇಮ ಕವಿತೆ ಇದಲ್ಲದೇ ಮತ್ತೊಂದಾಗಿರಲಿಕ್ಕಿಲ್ಲ.ಬರೇಲ್ವಿ ಸುನ್ನಿಗಳು ಬಹಳ ಗೌರವದಿಂದ ಎದ್ದು ನಿಂತು ಕೆಲವೊಂದು ನಮಾಝಿನ ನಂತರ ಇದನ್ನು ಗುಂಪಾಗಿ ಹಾಡುತ್ತಾರೆ. ಇದಕ್ಕೆ ರಬೀವುಲ್ ಅವ್ವಲೆಂಬ ಪರಿಗಣನೆಯಿಲ್ಲ,ಶುಕ್ರವಾರ ರಾತ್ರಿಯೆಂಬ ಲೆಕ್ಕವೂ ಇಲ್ಲ.ಅವರಿದನ್ನು ದಿನ ನಿತ್ಯವೂ ಪ್ರೀತಿಯಿಂದ ಹಾಡುತ್ತಲೇ ಇರುತ್ತಾರೆ.
ಭಾರತೀಯ ಉಪಖಂಡದಲ್ಲಿರುವ ಮುಸ್ಲಿಮರಲ್ಲಿ ಬಹುಪಾಲು ಬರೇಲ್ವೀಗಳಾಗಿದ್ದಾರೆ.ಅವರ ಆತ್ಮೀಯ ನಾಯಕ ಮೌಲಾನಾ ಅಹ್ಮದ್ ರಝಾ ಖಾನ್ ರವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರೊಂದಿಗಿರುವ ಅಭೇದ್ಯ ಅನುರಾಗದಿಂದ ರಚಿಸಿದ ಕಾವ್ಯವಾಗಿದೆ ಸಲಾಂ ಬೈತ್ ಅಥವಾ ಮುಸ್ತಫಾ ಜಾನೆ ರಹ್ಮತ್ ಪೆ ಎಂದು ಶುರುವಾಗುವ ಕಾವ್ಯ.ಇದು ಜಗತ್ಪ್ರಸಿದ್ದ ಪ್ರವಾದಿ ಪ್ರೇಮ ಕಾವ್ಯವಾಗಿದೆ. ಭಾರತೀಯ ಉಪಖಂಡದಿಂದ ಜಗತ್ತಿನ ವಿವಿಧ ಭಾಗಗಳಿಗೆ ಬರೇಲ್ವಿ ಸುನ್ನಿಗಳು ವಲಸೆ ಹೋಗಿರುವುದರಿಂದ ಈ ಕವಿತೆಯನ್ನು ಜಾಗತಿಕಮಟ್ಟದಲ್ಲಿ ವ್ಯಾಪಕವಾಗಿ ಹಾಡಲಾಗುತ್ತಿದೆ.ಆಲಾ ಹಝ್ರತ್ ಎಂದು ಕರೆಯಲಾಗುವ ರಝಾ ಖಾನ್ ರಹ್ಮತುಲ್ಲಾಹಿ ಅಲೈಹಿ ರವರ ಸಾಹಿತ್ಯವೂ ಅನುರಾಗಿಗಳಿಗೆ ಹೃದಯ ಸ್ಪರ್ಶಿಯಾಗಿದೆ.ಭಾಷೆ, ಪರಿಕಲ್ಪನೆ ಮತ್ತು ಕಾವ್ಯಾತ್ಮಕ ಶೈಲಿಯಲ್ಲಿ ಉನ್ನತವಾದ ಗುಣಮಟ್ಟವನ್ನು ಹೊಂದಿದೆ.
ಈ ಕಾವ್ಯದಲ್ಲಿ ಬರೋಬ್ಬರಿ ನೂರ ಅರವತ್ತೊಂಬತ್ತು ದ್ವಿಪದಿಗಳಿವೆ.ಮೂವತ್ತೆರಡರವರೆಗಿನ ದ್ವಿಪದಿಗಳು ಪ್ರವಾದಿ ﷺರ ಗುಣ ಸ್ವಭಾವಗಳನ್ನು ಪ್ರಕೀರ್ತಿಸುತ್ತ ಪ್ರವಾದಿ ﷺ ರಿಗೆ ಸಲಾಮನ್ನು ಅರ್ಪಿಸುತ್ತದೆ.ಆಲಾ ಹಝ್ರತ್ ರವರ ಸಾಲುಗಳ ಸೌಂದರ್ಯವೆಂದರೆ ಉರ್ದು ಭಾಷೆಯ ಸೊಬಗಿನ ಮೂಲಕ ಪ್ರಯಾಣಿಸುವಾಗ ಅದರ ಆಸ್ವಾಧನ ತಾಳವಂತೂ ವರ್ಣಾತೀತವಾಗಿದೆ.
“ಫತ್ ಹೇ ಬಾಬ್ ಈ ನುಬುವ್ವತ್ ಪೆ ಬಿಹದ್ ದುರೂದ್ ಖತ್ಮೇ ದೌರ್ ರಿಸಾಲತ್ ಪೆ ಲಾಖೋನ್ ಸಲಾಂ”
ಪ್ರವಾದಿತ್ವದ ಪ್ರಭಾವ ಮತ್ತು ಪೂರ್ತೀಕರಣವನ್ನು ಅದೆಷ್ಟು ಸುಂದರವಾಗಿ ವಿವರಿಸಿದ್ದಾರೆಂದು ನೋಡಿ.
ಮೂವತ್ತೊಂಬತ್ತರಿಂದ ಎಂಬತ್ತರವರೆಗಿನ ಸಾಲುಗಳು ಪ್ರವಾದಿ ﷺರ ಬಾಹ್ಯ ಸೌಂದರ್ಯದ ಕುರಿತಿರುವ ವರ್ಣನೆಗಳಾಗಿವೆ, ಸೂರ್ಯ,ಚಂದ್ರ,ದೀಪಗಳೆಲ್ಲವೂ ಇಲ್ಲಿ ಉಪಮೆಗಳಾಗಿ ಕಾಣಿಸಿಕೊಳ್ಳುತ್ತವೆ.ಎಲ್ಲಾ ಉಪಮೆಗಳು ಸ್ವಲಾತ್ ಮತ್ತು ಸಲಾಮ್ ನೊಂದಿಗೆ ಕೊನೆಗೊಳ್ಳುವ ಸುಂದರವಾದ ಪದವಿನ್ಯಾಸ.
ಎಂಬತ್ತರ ನಂತರದ ಸಾಲುಗಳಲ್ಲಿ ಪ್ರವಾದಿ ﷺ ರ ಜೀವನದ ವಿವಿಧ ಘಟನೆಗಳನ್ನು ದ್ವಿಪದಿಗಳಲ್ಲಿ ಬಹಳ ಸೊಗಸಾಗಿ ಸಂಕ್ಷೇಪಿಸಲಾಗಿದೆ.ಹೃಸ್ವವಾದ ಜೀವನ ಚರಿತ್ರೆ ಸ್ವಹಾಬಾಗಳ ಮತ್ತು ಕುಟುಂಬಸ್ಥರ ವಿಶೇಷತೆ,ವಿಶೇಷಣಗಳು,ಸದ್ಗುಣಶೀಲ ವಂಶಸ್ಥರ ಕಥೆಗಳನ್ನು ಹೇಳುತ್ತಾ ಈ ಕಾವ್ಯ ಮುಕ್ತಾಯವಾಗುತ್ತದೆ.
ಒಮ್ಮೆ ನೀರಿನ ಕೊರತೆ ಎದುರಾದಾಗ, ಪ್ರವಾದಿ ﷺ ರ ಮುಂದೆ ಒಂದು ಪಾತ್ರೆ ನೀರನ್ನು ತಂದಿಟ್ಟರು.ಅದರಿಂದ ಸಾಕಷ್ಟು ಜನರು ಉಝು ಮಾಡಿದರು,ನೀರನ್ನು ಕುಡಿದರು ಮತ್ತು ಅವರವರ ಅಗತ್ಯಕ್ಕಾಗಿ ಬಳಸಿಕೊಂಡರು.ಈ ಘಟನೆ ಸ್ವಹೀಹ್ ಹದೀಸ್’ನಲ್ಲಿ ವರದಿಯಾಗಿದೆ.ಈ ಘಟನೆಯನ್ನು ಆಲಾ ಹಝ್ರತ್ ಅದೆಷ್ಟು ಸುಂದರವಾಗಿ ತನ್ನ ದ್ವಿಪದಿಗಳಲ್ಲಿ ಪೋಣಿಸಿದ್ದಾರೆಂದು ನೋಡಿ.
“ನೂರ್ ಕೇ ಚಸ್ಮೇ ಲೆಹ್ರಯೇ ದರಿಯಾ ಬಹೇ ಉಂಗಲಿಯೋಂಕಿ ಕರಾಮತ್ ಪೇ ಲಾಖೋಂ ಸಲಾಂ..”
ಹೀಗೆ ಸಾಕಷ್ಟು ಘಟನೆಗಳನ್ನು ಬಹಳ ಸೊಗಸಾಗಿ, ಸುಂದರವಾಗಿ ಈ ಪ್ರೇಮಕಾವ್ಯದಲ್ಲಿ ಪೋಣಿಸಿಟ್ಟಿದ್ದಾರೆ ಮಹಾನ್ ಪ್ರವಾದಿ ಪ್ರೇಮಿಯಾದ ಅಹ್ಮದ್ ರಝಾ ಖಾನ್ ಸಾಹೇಬ್.
ಪ್ರತೀ ಸಾಲಿನಲ್ಲೂ ಸೌಂದರ್ಯ ಮತ್ತು ವಾತ್ಸಲ್ಯವನ್ನು ಸಂಯೋಜಿಸುವ ಈ ಕಾವ್ಯವನ್ನು ರಝಾ ಖಾನ್ ರಹ್ಮತುಲ್ಲಾಹಿ ಅಲೈಹಿರವರ ಸಿದ್ಧಾಂತದೊಂದಿಗೆ ವಿರೋಧವಿರುವವರು ಸಹ ಈ ಮದ್ಹ್ ಕಾವ್ಯವನ್ನು ಪ್ರಶಂಶಿಸಿರಿವುದನ್ನು ನಾವು ಕಾಣಬಹುದು.ಒಮ್ಮೆ ದಿಯೋಬಂದ್ ಪಂಗಡದ ಖ್ಯಾತ ವಾಗ್ಮಿ ನಈಮ್ ಬುಟ್ಟ್ ರೌಲಾ ಶರೀಫಿಗೆ ಭೇಟಿ ನೀಡಿದಾಗ ಆವೇಶಭರಿತವಾಗಿ ಮುಸ್ತಫಾ ಜಾನೆ ರಹ್ಮತ್ ಪೆ ಹಾಡಿದರು ಮತ್ತದನ್ನು ಬಹಳ ಗೌರವದಿಂದ ಹಂಚಿಕೊಂಡರು.
ಖ್ಯಾತ ಪಾಕಿಸ್ತಾನಿ ಗಾಯಕ ಆತಿಫ್ ಅಸ್ಲಾಂ ಇತ್ತೀಚಿಗೆ ಈ ಪ್ರೇಮ ಕಾವ್ಯವನ್ನು ಹಾಡಿ ಯೂಟ್ಯೂಬ್’ನಲ್ಲಿ ಅಪ್ಲೋಡ್ ಮಾಡಿದಾಗ ಅದ್ಭುತವೆಂಬಂತೆ ರೆಕಾರ್ಡ್ ವೀವ್ಸ್ ಆಗಿದೆ ಉಂಟಾಗಿದ್ದು.
ಈ ಕಾವ್ಯವನ್ನು ಆಧಾರವಾಗಿಟ್ಟುಕೊಂಡು ಸಾಕಷ್ಟು ವ್ಯಾಖ್ಯಾನಗಳು ಮತ್ತು ಅಧ್ಯಾಯಗಳನ್ನು ಕೂಡಾ ರಚಿಸಲಾಗಿದೆ.ಎಲ್ಲಕ್ಕಿಂತ ಮಿಗಿಲಾಗಿ ಮುಸ್ತಫಾ ಜಾನೆ ರಹ್ಮತ್ ಪೆ ಹಾಡದ ಘಂಟೆಗಳು ಈ ಭೂಮಿ ಮೇಲೆಯೇ ಇಲ್ಲ ಎಂಬುದೇ ವಿಶೇಷ.
✍🏻 ಯಾಸರ್ ಉಮರ್ ಮಾದಾಪುರ ( ಕನ್ವೀನರ್ SKSSF ತ್ವಲಬ ವಿಂಗ್ ಕರ್ನಾಟಕ ರಾಜ್ಯ ಸಮಿತಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.