ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮೂಡಬಿದಿರೆ ತಾಲೂಕಿನ ರಾಯಿ ಎಂಬಲ್ಲಿ ಬಸ್ ಕಂಡಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮುಲರಪಟ್ನ ನಿವಾಸಿ ಇಸಾಕ್ (45) ಹಲ್ಲೆಗೊಳಗಾದ ವ್ಯಕ್ತಿ.
ಬುಧವಾರ ಬೆಳಗ್ಗೆ ಇಸಾಕ್ ಅವರು ಬಿ.ಸಿ.ರೋಡಿನಿಂದ ಮೂಡಬಿದ್ರೆಗೆ ಹೋಗಲು ‘ಮಹಾ ಗಣೇಶ’ ಎಂಬ ಖಾಸಗಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಇಸಾಕ್ ಬಳಿ ಬ್ಯಾಗ್ ಹಿಡಿದುಕೊಳ್ಳುವಂತೆ ನೀಡಿದ್ದಾರೆ. ಅವರ ಮನವಿಯಂತೆ ಇಸಾಕ್ ಬ್ಯಾಗ್ ತೆಗೆದುಕೊಂಡು ಮಹಿಳೆ ಇಳಿಯುವ ಜಾಗ ತಲುಪಿದಾಗ ಬ್ಯಾಗ್ ಹಿಂದಿರುಗಿಸಿದ್ದಾರೆ.
ಮಹಿಳೆ ಬಸ್ಸಿನಿಂದ ಇಳಿದ ಸ್ವಲ್ಪ ಹೊತ್ತಿನಲ್ಲೇ ಬಸ್ ಕಂಡಕ್ಟರ್, ಇಸಾಕ್ ಬಳಿ ಬಂದು ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ, ಮಹಿಳೆಯ ಮೈ ಮುಟ್ಟಿದ್ದೀರಿ ಎಂದು ಸುಳ್ಳು ಆರೋಪ ಮಾಡಿದ್ದಾನೆ. ಮಾತ್ರವಲ್ಲ ಬಸ್ಸಿನಿಂದ ಇಸಾಕ್ ಅವರನ್ನು ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಈ ಮಧ್ಯೆ ಕೆಲವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಅಲ್ಲಿಗೆ ಕರೆಸಿ ಆ ಗುಂಪಿಗೆ ಇಸಾಕ್ ಅವರನ್ನು ಹಸ್ತಾಂತರಿಸಿ ಬಸ್ ಕಂಡೆಕ್ಟರ್ ಬಸ್’ನೊಂದಿಗೆ ತೆರಳಿದ್ದಾನೆ.
ಬಸ್ ಕಂಡಕ್ಟರ್ ಕರೆಸಿದ ಸಂಘಪರಿವಾರಕ್ಕೆ ಸೇರಿದ ಆ ಗುಂಪು ಇಸಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ನಿರಂತರವಾಗಿ ಹಲ್ಲೆ ನಡೆಸಿದ್ದರಿಂದ ಇಸಾಕ್ ತೀವ್ರ ಅಸ್ವಸ್ಥರಾಗಿದ್ದಾರೆ. ಇದನ್ನು ಕಂಡ ಸಂಘಪರಿವಾರದ ಕಾರ್ಯಕರ್ತರು ಇಸಾಕ್ ಅವರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಸಾಕ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹಲ್ಲೆಯಿಂದ ಇಸಾಕ್ ಅವರ ಬೆನ್ನು ಕೈ ಕಾಲುಗಳಲ್ಲಿ ದೊಡ್ಡಮಟ್ಟದ ಗಾಯಗಾಗಿದ್ದು, ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ತೀವ್ರ ನೋವು ಇದ್ದರೂ ವೈದ್ಯರಲ್ಲಿ ಅದನ್ನು ತೋರಿಸದಂತೆ ಪೊಲೀಸರು ಇಸಾಕ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವೈದ್ಯರು ಕೂಡ ಇಸಾಕ್ ಅವರ ಅಂಗಿ ತೆಗೆದು ಪರಿಶೀಲನೆ ನಡೆಸಿಲ್ಲ. ಕೇವಲ ರಕ್ತದೊತ್ತಡ ಪರೀಕ್ಷೆ ಮಾಡಿ ಇಸಾಕ್ ಅವರನ್ನು ಪೊಲೀಸರು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬಳಿಕ ವಿಷಯ ತಿಳಿದ ಇಸಾಕ್ ಅವರ ಕುಟುಂಬದವರು ಠಾಣೆಗೆ ಬಂದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಮನವಿ ಮಾಡಿದಾಗ, ಹಾಗೆ ಮಾಡಲು ನಮಗೆ ಮುಕ್ತ ಸ್ವಾತಂತ್ರ್ಯವಿಲ್ಲ ಎಂದು ಬಂಟ್ವಾಳ ಠಾಣೆ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಪೊಲೀಸರು ಇಸಾಕ್ ಅವರಿಂದ ಹೇಳಿಕೆ ಪಡೆದು ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ತ ಕುಟುಂಬವು ಈಗ ಆತಂಕದಲ್ಲಿದ್ದು, ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.