(www.vknews.in) ಕೆಲವು ದಿನಗಳ ಹಿಂದೆಯಷ್ಟೇ ತಾಲ್ಲೂಕು ಕಛೇರಿಗೆ ಬಂದಿದ್ದ ನನ್ನ ಪರಿಚಯಸ್ಥ ರೈತನೊಬ್ಬ ದೂರದಿಂದಲೇ
“ಸೆಕಿಟ್ರಿ ಸಾ….ನಿಂತ್ಕಳಿ ವಸಿ, ಬ್ಯಾಡ್ಗುಳಿಗೆ ಐತ್ವಾರ ಹೋಗಿದ್ರಂತಲ್ಲ ನಮ್ ಗಂಡು ಪೋನಲ್ಲಿ ಹಾಕಿದ್ದು ನೋಡಿದ್ದು ಹೇಳ್ದ ಕಽ ಬುದ್ದ್ಯೋ ಯಾವ್ದ್ ಬಂಡೆತಪಾ ಹೋಗಿದ್ರಿ ಅನ್ನಂಗದ? ನಮ್ಮ ಹೊಂಗನೂರತಪಾ ದೊಡ್ಡ ದೊಡ್ಡ ಬೊಂಬಗಲ್ಗಳ್ ಅವ ಸ್ವಾಮಿ ನೋಡಿದರೇಯಾ?”
ಹ್ಞೂ…ಕಣ್ ಬೊಣ್ಣಾಽ ಹೊನ್ನಮೇಟಿ ಒಂಟಿಕಲ್ಲಿಗೆ ಹೋಗಿದ್ದೆ ಕಣ್ ಬನ್ನಿ ಇನ್ನೇನು ಸಮಚಾರ”?
“ನಮ್ ಹೊಂಗನೂರುತಪಾ ಈ ತರದ್ದೇ ಬಂಡೆಗಳವೆ ಒಂದ್ ಕಿತಾ ಬಂದು ನೋಡಿ” ಎಂದು ಹೇಳಿದ್ದೆ ತಡ ಆ ಬಂಡೆಗಳನ್ನೊಮ್ಮೆ ನೋಡಲೇಬೇಕೆಂಬ ಹೆಬ್ಬಯಕೆ ನನ್ನ ಕಾಡತೊಡಗಿತು ಅದರಲ್ಲೂ ಕುಂತಿಕಲ್ಲು ಮತ್ತು ಆನೆಕಲ್ಲು ಎಂಬ ಹೆಸರು ಕೇಳಿಯೇ ನನ್ನ ಕುತೂಹಲದ ಕಟ್ಟೆ ಒಡೆಯಿತು. ಭಾನುವಾರ ನನ್ನ ಪಾಲಿನ ಹುಡುಕಾಟದ ದಿನ. ಒಂದು ಕಡೆ ಸುಮ್ಮನೆ ಒಂದು ಕಡೆ ಕೂತುಕೊಳ್ಳಲು ನನ್ನಲ್ಲಿನ ಕುತೂಹಲ ಬಿಡುವುದಿಲ್ಲ ಕಾಡು-ಮೇಡುಗಳಲ್ಲಿ ಅಲೆಯುವ ಹುಚ್ಚು ಬಯಕೆಗಳು. ಆ ಹೆಬ್ಬಂಡೆಗಳ ನೋಡಲು ಒಂದು ಭಾನುವಾರ ಸ್ನೇಹಿತ ರೆಮೋನೊಡನೆ ಹೊರಟೆ ಹೊಂಗನೂರು ದೊಡ್ಡ ಗ್ರಾಮ ಇಲ್ಲಿ ಚೋಳರು,ಗಂಗರು,ಹೊಯ್ಸಳರು,ವಿಜಯನಗರ ಸಾಮ್ರಾಜ್ಯದ ಸಾಮ್ರಾಜ್ಯದ ಸಾಮಂತ ಅರಸರು ಮತ್ತು ಮೈಸೂರಿನ ಮಹಾರಾಜರು ಆಳ್ವಿಕೆ ನಡೆಸಿರುವ ಕುರುಹುಗಳನ್ನು ಈ ಗ್ರಾಮದಲ್ಲಿನ ವೀರಗಲ್ಲುಗಳು,ಮಾಸ್ತಿಗಲ್ಲುಗಳು(ಮಹಾಸತಿಗಲ್ಲು) ಶಾಸನಕಲ್ಲುಗಳು ತಿಳಿಸುತ್ತವೆ. ನಮ್ಮೊಂದಿಗೆ ಆಕಸ್ಮಿಕವಾಗಿ ಜೊತೆಯಾದ ಹೊಂಗನೂರಿನ ಜೆ.ಎಂ ಸಿದ್ದರಾಜು ರವರು ಗ್ರಾಮದ ಬಗ್ಗೆ ಮಾಹಿತಿ ನೀಡುತ್ತಾ ಬಂದರು. ಈ ಗ್ರಾಮದಲ್ಲಿ ಹಿಂದೆ ಚೆಂಡುಮಲ್ಲಿಗೆ (ಚೆಂಡ್ಮಲ್ಲಿಗೆ) ಹೂಗಳನ್ನ ಹೆಚ್ಚಾಗಿ ಬೆಳೆಯುತ್ತಿದ್ದರು ಈ ಹಿನ್ನೆಲೆಯಿಂದ ಈ ಗ್ರಾಮದ ಮೂಲ ಹೆಸರು ಜನರ ಬಾಯಲ್ಲಿ *ಚಮ್ಮಾಳಿಗೆ* ಎಂದಿದ್ದಿರಬಹುದೆಂದು ನಮ್ಮ ತಾತ ಹೇಳುತ್ತಿದ್ದರು ಎಂದು ಜೆ.ಎಂ ಸಿದ್ದರಾಜು ಹೇಳಿದರು. ನಾನು ಮುಂದುವರಿದು ನಿಮ್ಮ ಊರಿನ ಬಗ್ಗೆ ಇನ್ಯಾವುದಾದರು ಈ ರೀತಿಯ ಕಥೆಗಳಿದ್ದರೆ ಹೇಳಿ ಎಂದಾಗ ತಮ್ಮ ತಾತನಿಂದ ಎರವಲು ಪದೆದ ಒಂದು ಐತಿಹ್ಯದ ಸ್ಮೃತಿಯನ್ನು ನಮ್ಮೊಂದಿಗೆ ಹಂಚಿಕೊಂಡರು. *”ಈ ಗ್ರಾಮದಲ್ಲಿ ಬಹು ವರ್ಷಗಳ ಹಿಂದೆ ಒಬ್ಬ ಮಂತ್ರವಾದಿ ಇದ್ದನಂತೆ ಅವನ ಅನುಮತಿ ಇಲ್ಲದೇ ದೊಂಬರಾಟದ ಒಂದು ತಂಡ ಹಗ್ಗದ ಮೇಲೆ ಒಬ್ಬ ಮಹಿಳೆಯನ್ನು ನಡೆಸುತ್ತಿದ್ದಾಗ ಮಂತ್ರವಾದಿಯ ಮಂತ್ರದಿಂದ ಹಠಾತ್ತಾಗಿ ಹಗ್ಗ ಹರಿದು ಮಹಿಳೆ ಕೆಳಗೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದಾಗ ಈ ಗ್ರಾಮಕ್ಕೆ ಹೊರಗಿನಿಂದ ಬಂದ ಹೆಣ್ಣು ಮಕ್ಕಳು ಅಭಿವೃದ್ಧಿಯಾಗಲಿ, ಈ ಗ್ರಾಮದ ಹೆಣ್ಣುಗಳು ಮುಂಡೆಯರಾಗಿ ಸ್ವಗ್ರಾಮಕ್ಕೆ ಹಿಂದಿರುಗಲಿ”(?)* ಎಂದು ಶಾಪ ನೀಡಿದಳು ಈ ಗ್ರಾಮದಲ್ಲಿ ಈ ಶಾಪದಂತೆ ಹೊರಗಿನಿಂದ ಬಂದವರು ಅಭಿವೃದ್ಧಿಯಾಗಿದ್ದಾರೆ ಈ ಗ್ರಾಮದವರು ಶಾಪದಂತೆ ಬಹುತೇಕ ಹಿಂದಿರುಗಿದ್ದಾರೆ ಹಾಗಾಗಿ ಎಂಬ ಮಾತು ನಿಜಕ್ಕೂ ನನಗೆ ಆಶ್ಚರ್ಯ ಮೂಡಿಸಿತು.*ದೊಂಬನ ಕೊಂದ ಹೊಂಗನೂರು ಎಂದಾಗಿದೆ.*
ಮಾತು-ಕಥೆ, ಪುರಾಣಗಳು ನಂಬಲಸಾಧ್ಯವಾದ ಐತಿಹ್ಯಗಳ ಕೇಳುತ್ತಾ ಗ್ರಾಮವ ದಾಟಿ ಹೊಂಗನೂರಿನ ಹಿರಿಕೆರೆಯ ಕಡೆಗೆ ಪ್ರಯಾಣ ಬೆಳೆಸಿದೆವು, ಹರಟುತ್ತಾ ನಾನು ಸಿದ್ದರಾಜುರವರನ್ನು ಕುರಿತು □ *”ನಿಮಗೆ ಈ ರೀತಿಯ ಮಾಹಿತಿ ತಿಳಿದುಕೊಂಡು ಹೇಳುವ ಆಸಕ್ತಿ ಇರುವುದು ಹೇಗೆ.?”*
□ *”ನನ್ನ ಮಗಾ ಎಂ.ಎ ಇತಿಹಾಸ ಮಾಡ್ತ್ವನೆ ಸಾ ಹಾಗಾಗಿ ನಮಗೂ ಸ್ವಲ್ಪ ಆಸಕ್ತಿ”*
ಎಂದು ಮಾತನಾಡುತ್ತಾ ಹಿರಿಕೆರೆಯ ಕಡೆ ಬಂದೆವು ಕೆರೆ ನೋಡಲು ತುಂಬಾ ವಿಶಾಲವಾದದ್ದು ಮೂರುತೂಬುಳ್ಳ ಕೆರೆಯದು ಚೋಳರ ಕಾಲದಲ್ಲಿ ಬಲಿಷ್ಟವಾದ ಕಲ್ಲು ಬಂಡೆಗಳನ್ನು ಹಾಕಿ ಕಟ್ಟಿದ ಕೆರೆ ಆ ಕೆರೆಯ ಪಕ್ಕದಲ್ಲಿಯೇ ಹಿರಿಯಮ್ಮ,ಕಿರಿಯಮ್ಮ ದೇವರುಗಳಿರುವುದರಿಂದ ಈ ಕೆರೆಗೆ ಹಿರಿಕೆರೆ ಎಂಬ ಹೆಸರಿದ್ದು ಈ ದೇವರು ಜನರಿಗೆ ಚಿನ್ನ, ಬಣ್ಣ ನೀಡುತ್ತಿದ್ದರು ಎಂಬ ವಾಡಿಕೆ ಇದೆ. ಈ ಹಿರಿಕೆರೆಯ ಅನತಿ ದೂರದಲ್ಲಿಯೇ ಈ ಆನೆಕಲ್ಲು,ಒಂಟಿಕಲ್ಲುಗಳಿವೆ ಆ ಕಲ್ಲುಗಳಿಗೂ ಈ ಬಂಡೆಗಳಿಗೂ ಒಂದು ಚರಿತ್ರೆಗಳಿವೆ. ಈ ಕೆರೆಯನ್ನು ಕಟ್ಟುವ ಕೆಲಸದಾಳುಗಳಿಗೆ ಊಟ ಉಪಚಾರ ಮಾಡಲು ಕುಂತಮ್ಮ ಎಂಬುವಳನ್ನು ನೇಮಿಸಿದ್ದರು ಒಂದು ದಿನ ಕೆರೆಯ ಏರಿಯು ಇದ್ದಕ್ಕಿದ್ದಂತೆ ಒಡೆಯಲು ಆರಂಭವಾದಗ ಅಲ್ಲಿಯೇ ಕಾರವಾಡಿಸುತ್ತಾ ಕುಳಿತ ಕುಂತಮ್ಮ ಕಾರವಾಡಿಸುವ ಕೆಲಸವನ್ನು ಬಿಟ್ಟು ಅಲ್ಲಿಯೇ ಇದ್ದ ಈಜಿ ಮೆಳೆಗೆ ತನ್ನ ಕೈ ಒರೆಸಿ ಕಾರದ ಮೇಲೆ ಒಂದು ಮೊರವನ್ನು ಬೋರಲು ಹಾಕಿ ತನ್ನ ಸೆರಗೊಡ್ಡಿ ಕೆರೆಯನ್ನು ಉಳಿಸಿಕೊಡು ಎಂದು ಬೇಡಿದಾಗ ದೈವವಶಾತ್ ಕೆರೆ ಏರಿಯು ಬಿಗಿಯಾಗಿ ಹಾಗೆಯೇ ಉಳಿಯಿತಂತೆ ಆ ಕುಂತಮ್ಮನಲ್ಲಿ ಸತ್ಯ ಧರ್ಮದಿಂದ ಇದ್ದುದರಿಂದ ಕುಂತಮ್ಮ ಕಲ್ಲಾದಳು ಈಗಲೂ ಆ ಕಲ್ಲು ಬಂಡೆಯ ಮೇಲೆ ಮೊರವನ್ನು ಬೋರಲು ಹಾಕಿದ ರೀತಿಯೇ ಕಲ್ಲು ಬೆಳೆದಿದೆ. ಅಂದಿನಿಂದ ಆ ಕಲ್ಲಿಗೆ ಕುಂತಿಕಲ್ಲು ಎಂದು ಹೆಸರಾಗಿದೆ. ಇಲ್ಲಿ ಕಿತ್ತೋಡ್ನಳ್ಳವು ಇಂದಿಗೂ ಇದೆ. ಈ ಕುಂತಿ ಕಲ್ಲು ಉದ್ಭವ ಕಲ್ಲಾಗಿರದೆ ಯಾವ ಆಧಾರದ ಮೇಲೆಯೂ ಇರದೆ ಒಂದು ಬಂಡೆಗಲ್ಲಿನ ಮೇಲೆ ಏಕಶಿಲಾಯಾಗಿ ಸತ್ಯ ಹೇಗೆ ಯಾವುದೇ ಆಸರೆಯಿಲ್ಲದೆ ನಿಂತಿರುತ್ತದೆಯೇ ಹಾಗೆ ಕಲ್ಲು ನಿಂತಿರುವುದು ಅಮಾವಾಸ್ಯೆ, ಪೌರ್ಣಮಿಯ ದಿನ ಕುಂತಿಕಲ್ಲಿಗೆ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ.
ಕುಂತಿ ಕಲ್ಲಿನಿಂದ ಅನತಿ ದೂರದಲ್ಲಿಯೇ ಒಂದು ಹೆಬ್ಬಂಡೆಯಿದೆ ಅದಕ್ಕೆ ಆನೆಕಲ್ಲು ಎಂಬ ಹೆಸರಿದೆ. ಈ ಆನೆಕಲ್ಲು ಎಂದು ಕರೆಯಲ್ಪಡುವ ಹೆಬ್ಬಂಡೆ ನೋಡಲು ಥ್ಹೇಟ್ ಆನೆಯ ರೂಪವನ್ನೇ ಹೋಲುತ್ತದೆ. ಆ ಹೆಬ್ಬಂಡೆಯ ಹತ್ತಿರದಿಂದ ನೋಡಿದರೆ ಒಂದು ದೈತ್ಯ ಆನೆಯನ್ನು ನೋಡಿದ ಅನುಭವವವೇ ನಮಗಾಗುತ್ತದೆ ಈ ಹಿಬ್ಬಂಡೆಯ ಚರಿತ್ರೆ ಕೇಳಿ ನನಗೆ ಮಹದಾಶ್ಚರ್ಯವಾಯಿತು ಈ ಹಿಂದೆ ಕುಂತಿಕಲ್ಲಿಗೆ ಕಬ್ಬಿಣದ ಸರಪಳಿ ಕಟ್ಟಿ ಆನೆಯಿಂದ ಕಲ್ಲನ್ನು ಎಳೆಯಲು ಪ್ರಯತ್ನಿಸಿದರಂತೆ ಕಲ್ಲು ಒಂದಿನಿತೂ ಮಿಸುಕಾಡದೆಯೇ ಸರಪಳಿ ಕಿತ್ತು ಆನೆ ಮುಗ್ಗರಿಸಿ ಆ ಜಾಗದಲ್ಲಿಯೇ ಕಲ್ಲಾಗಿದೆ ಈ ಕಲ್ಲನ್ನೇ ಸ್ಥಳೀಯರು ಆನೆಕಲ್ಲು ಎಂದು ಕರೆಯುವುದು ಇಲ್ಲಿನ ವಿಶೇಷ ಈ ಹೊಂಗನೂರಿನ ಹಿರಿಕೆರೆಯ ಕುಂತಿಕಲ್ಲು, ಆನೆಕಲ್ಲಿನ ಸುತ್ತ ರಣರೋಚಕ ಇತಿಹಾಸವಿದೆ.
●ಕೆ.ಶ್ರೀಧರ್ (ಕೆ.ಸಿರಿ) ಯುವಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.