(www.vknews.in) ೮೬ನೆಯ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿದೆ. ಇದು ಕಳೆದ ೨೦೨೦ರಲ್ಲಿ ನಡೆಯಬೇಕಾದ ಸಮ್ಮೇಳನವಾಗಿದ್ದು ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಹಲವಷ್ಟು ಬಾರಿ ಮುಂದೂಡಲಾಗಿದ್ದು ಕೊನೆಗೂ ೨೦೨೩ ಜನವರಿ ೬,೭,೮ರಂದು ನಡೆಯಲಿದೆ. ಈ ನಡುವೆ ಕಸಾಪದ ಚುನಾವಣೆ ನಡೆದು ರಾಜ್ಯಾಧ್ಯಕ್ಷರ ಜೊತೆಗೆ ಜಿಲ್ಲಾಧ್ಯಕ್ಷರುಗಳು ಬದಲಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಮಹೇಶ್ ಜೋಷಿಯವರು ತಮ್ಮ ಅಧಿಕಾರಾವಧಿಯ ಆರಂಭದಲ್ಲಿ ನೂತನ ಕಾನೂನುಗಳನ್ನು ಸೇರ್ಪಡಿಸುವ ಮಾತನ್ನಾಡಿ ಸುದ್ಧಿಯಾಗಿದ್ದರು . ಒಂದೆರಡು ಕಾನೂನನ್ನು ಜನತೆ ತಿರಸ್ಕರಿಸಿದ ಕಾರಣದಿಂದಾಗಿ ಕೈಬಿಡಲಾಯಿತು. ಆದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಿಗೆ ಈ ಮೊದಲು ಇದ್ದಂತೆ ಕವಿತೆ ವಾಚನ ಮಾಡುವ ಕವಿಗಳು ಕನಿಷ್ಠ ಒಂದಾದರೂ ಕವನ ಸಂಕಲನದಂತಹ ಕೃತಿಗಳನ್ನು ರಚಿಸಿರಬೇಕೆಂಬುದನ್ನು ಯಾವಾಗ ತೆಗೆದು ಹಾಕಿದ್ದಾರೋ ಗೊತ್ತಿಲ್ಲದಾಗಿದೆ. ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಯಾವುದೇ ರೀತಿಯ ಕವನ ಸಂಕಲನ ಅಥವಾ ಬೇರಾವುದೇ ಪ್ರಕಾರದ ಕನಿಷ್ಟ ಒಂದೂ ಕೃತಿಯನ್ನು ಸಹ ರಚಿಸದ ಹಾ.ತಿ.ಜಯಪ್ರಕಾಶ್ರವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಕೊಡಗಿನ ಜಿಲ್ಲಾಧ್ಯಕ್ಷರಾದ ಶ್ರೀ ಕೇಶವ ಕಾಮತ್ರವರನ್ನು ಈ ಬಗ್ಗೆ ವಿಚಾರಿಸಿದಾಗ ನೀನೇನು ಮಾಡಿಕೊಳ್ಳುತ್ತೀಯ ಮಾಡಿಕೋ ಎಂಬ ಧಾಷ್ರ್ಟ್ಯದ ಉತ್ತರವನ್ನೇ ನೀಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ಗೆಲುವನ್ನು ಬಯಸಿದವರಿಗಷ್ಟೇ ಮಣೆ ಹಾಕುತ್ತಿರುವ ಇವರ ಬೆಂಬಲಿಗರು ಸಹ ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ವಾಟ್ಸ್ ಅಪ್ ಬಳಗದ ಮೂಲಕ “ಕೊಂದು ಬಿಸಾಕುವಂತಹ” ಮಾತುಗಳಿಂದ ನನ್ನ ಮೇಲೆ ಹರಿಹಾಯ್ದಿದ್ದಾರೆ. ನಿವೃತ್ತ ಏರ್ ಮಾರ್ಷಲ್ ಕೆ.ಸಿ ಇಕಾರ್ಯಪ್ಪನವರು ಗೌರವಾನ್ವಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಪುತ್ರ ಸಾಧಕರಿಗೆ ಸನ್ಮಾನ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ಬಾರಿ ಆಯ್ಕೆಯಾಗಿ ಇದೀಗ ಮೂರನೆಯ ಬಾರಿಗೆ ಸ್ಮಿತಾ ಅಮೃತ್ರಾಜ್ರವರು ಅರೆಭಾಷೆ ವಿಭಾಗಕ್ಕೆ ಆಯ್ಕೆ ಆಗಿದ್ದಾರೆ. ಕೊಡವ ಭಾಷಾ ವಿಭಾಗಕ್ಕೆ ಎನ್.ಪಿ ಕಾವೇರಿಯವರು ಆಯ್ಕೆಯಾಗಿದ್ದಾರೆ ಮತ್ತು ತಮ್ಮ ಗೆಲುವಿಗೆ ಕಂಕಣ ತೊಟ್ಟಿದ್ದ ಟಿ.ಪಿ. ರಮೇಶ್ರವರು ಸಾಧಕರಿಗೆ ಸನ್ಮಾನ ವಿಭಾಗದಲ್ಲಿ ಆಯ್ಕೆ ಆಗಿದ್ದಾರೆ. ಮತ್ತು ವರ್ತಮಾನದ ಮಹಿಳೆ ವಿಭಾಗದ ಔದ್ಯೋಗಿಕ ಮಹಿಳೆಯರ ಸಾಧನೆಗಳು ವಿಭಾಗದಲ್ಲಿ ಶ್ರೀಮತಿ ಛಾಯಾ ಮಂಜಪ್ಪನವರು ಆಯ್ಕೆಯಾಗಿದ್ದಾರೆ. ಆದರೆ ಕೊಡಗಿನಲ್ಲಿ ಕನಿಷ್ಠ ಮೂರಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಬಹಳಷ್ಟು ಕವಿ ಕವಯಿತ್ರಿಯರು ಇದ್ದಾಗ್ಯೂ ಜೀವಮಾನದಲ್ಲಿ ಒಂದೂ ಕೃತಿಯನ್ನು ರಚಿಸಿರದ ಹಾ.ತಿ. ಜಯಪ್ರಕಾಶ್ರವರಿಗೆ ಕವನ ವಾಚನಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಕೃತಿಗಳನ್ನು ರಚಿಸಿರುವ ಕವಿಗಳಿಗೆ ಅನ್ಯಾಯ ಎಸಗಿದಂತಾಗಿದೆ. ಈ ಕುರಿತು ಪ್ರಶ್ನಿಸಿರುವ ಕಾರಣದಿಂದಾಗಿ ಕೊಂದು ಬಿಸಾಕುವಂತಹ ಮಾತುಗಳನ್ನು ವಿರಾಜಪೇಟೆಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು ಆಡಿದ್ದಾರೆ.
ವೈಲೇಶ್. ಪಿ. ಎಸ್. ಕೊಡಗು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.