ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ನಗರದ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಸಂತೆ ವ್ಯಾಪಾರ ನಡೆಸಲು ಅವಕಾಶ ನೀಡಲು ಇಂದು ದೇವಸ್ಥಾನದಲ್ಲಿ ನಡೆದ ಪ್ರಮುಖರ ತುರ್ತು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂತೆ ವ್ಯಾಪಾರ ಮಾಡಲು ಏಲಂ ಮಾಡುವ ಸ್ಥಳದಲ್ಲಿ ಹಿಂದುಯೇತರರಿಗೆ ಅವಕಾಶ ನೀಡಲಾಗುವುದಿಲ್ಲ, ಹಿಂದುಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದಿನ ಸಭೆಯಲ್ಲಿ ಸಂತೆಯಲ್ಲಿ ಮುಕ್ತ ಅವಕಾಶ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಂತೆ ವ್ಯಾಪಾರಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸುಳ್ಯ ತಾಲೂಕು ಹಿಂದೂ ಹಿತ ರಕ್ಷಣಾ ವೇದಿಕೆ ದೇವಸ್ಥಾನಕ್ಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಿಗೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಹಾಗು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡಿದ್ದರು. ಹಾಗಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ತುರ್ತು ಸಭೆಯಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಕೃಪಾಶಂಕರ ತುದಿಯಡ್ಕ, ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹಿಂದೂ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಚಿದಾನಂದ ವಿದ್ಯಾನಗರ, ಕೇಶವ ನಾಯಕ್ ಸುಳ್ಯ, ಸುನಿಲ್ ಕೇರ್ಪಳ,ನಿಕೇಶ್ ಉಬರಡ್ಕ, ಜಿ.ಜಿ.ನಾಯಕ್, ಗೋಪಾಲಕೃಷ್ಣ, ಲತೀಶ್ ಗುಂಡ್ಯ, ಗಿರೀಶ್ ಕಲ್ಲುಗದ್ದೆ, ರಜತ್ ಅಡ್ಕಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.