(www.vknews.in) : ನೂರಾರು ವರ್ಷಗಳಿಂದ ನಾಟಕಗಳ ಪ್ರದರ್ಶನ ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿದೆ. ಚಿತ್ರಮಂದಿರಗಳು ಬೆಳೆದಂತೆ ಕಾಲಕ್ರಮೇಣ ನಾಟಕಗಳ ಪ್ರದರ್ಶನ ಕ್ಷೀಣಿಸುತ್ತಾ ಹೋಯಿತು. ತಂತ್ರಜ್ಞಾನ ಬೆಳೆದಂತೆ ಹಂತ ಹಂತವಾಗಿ ಮನೆಗಳಿಗೆ ಟಿ.ವಿ.ಗಳು ಬಂದವು. ಟೆಲಿಫೋನು, ಟಿ.ವಿ., ರೇಡಿಯೋ ಶ್ರೀಮಂತರ ಮನೆಗಳಲ್ಲಿ ಮಾತ್ರ ನೋಡಲು ಸಿಗುತ್ತಿತ್ತು. ನನಗೆ ಈಗಲೂ ಆ ದಿನಗಳು ಜ್ಞಾಪಕಕ್ಕೆ ಬರುತ್ತವೆ; ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ಅಂತ್ಯಕ್ರಿಯೆ ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗಿತ್ತು. ಬಡವರ ಮನೆಗಳಲ್ಲಿ ಟಿ.ವಿ. ಇರಲಿಲ್ಲ. ನಮ್ಮ ಊರಿನ ಶ್ರೀಮಂತರೊಬ್ಬರು, ಮನೆಯ ಆಚೆ ಟಿ.ವಿ. ತಂದು ಸುತ್ತಮುತ್ತಲ ಊರಿನ ಜನರೆಲ್ಲಾ ನೋಡುವಂತೆ ವ್ಯವಸ್ಥೆ ಮಾಡಿದ್ದರು. ಜನರು ಕಣ್ಣೀರು ಸುರಿಸುತ್ತ ಇಂದಿರಾಗಾಂಧಿಯ ಅಂತಿಮ ದರ್ಶನ ಮಾಡಿದರು.
ದಿನಗಳು ಉರುಳಿದಂತೆ ಕಪ್ಪು ಬಿಳುಪು ಟಿ.ವಿ. ಹೋಗಿ ಬಣ್ಣದ ಟಿ.ವಿ. ಗಳ ಭರಾಟೆ ಪ್ರಾರಂಭವಾಯಿತು. ರೇಡಿಯೊಗಳಿಗಿಂತ ಟೇಪ್ ರೆಕಾರ್ಡರುಗಳಿಗೆ ಬೇಡಿಕೆ ಹೆಚ್ಚಾಯಿತು. ಚಿತ್ರಮಂದಿರಗಳಲ್ಲಿಯೇ ಚಲನಚಿತ್ರಗಳನ್ನು ನೋಡುವ ಅನಿವಾರ್ಯತೆ ದೂರವಾಗಿ ವಿ.ಸಿ.ಆರ್. ಗಳು ಮಾರುಕಟ್ಟೆಗೆ ಬಂದವು. ಆಡಿಯೋ ವಿಡಿಯೋ ಕ್ಯಾಸೆಟ್ಟುಗಳ ಮಾರಾಟ ಹೆಚ್ಚಾಗತೊಡಗಿತು. ಕೆಲವು ವರ್ಷಗಳು ಉರುಳಿದ ನಂತರ ವಿ.ಸಿ.ಆರ್. ಗಳು ಹೋಗಿ ಸಿ.ಡಿ. ಮತ್ತು ಡಿ.ವಿ.ಡಿ. ಪ್ಲೇಯರುಗಳು ಬಂದವು. ರೇಡಿಯೋ ಕಳದೇ ಹೋಯಿತೇನೋ ಎನ್ನುವಷ್ಟರಲ್ಲಿ ಫ್.ಎಂ. ರೋಡಿಯೊಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟವು. ಪುನಃ ರೋಡಿಯೋಗಳಿಗೆ ಮರು ಜೀವನ ಸಿಕ್ಕಿತೇನೋ ಎನ್ನುವಷ್ಟರಲ್ಲಿ, ತಂತಿ ದೂರವಾಣಿಗಳು ಮಾಯವಾಗಿ ಮೊಬೈಲ್ ಮತ್ತು ಕಂಪ್ಯೂಟರ್ ಯುಗ ಮುಗಿಲು ಮುಟ್ಟಿತು. ಪೇಜರ್ ಎಂಬ ಉಪಕರಣದ ಮೂಲಕ ಎಸ್.ಎಂ.ಎಸ್. ಸಂದೇಶಗಳನ್ನು ಕಳುಹಿಸಲು ಕೆಲವು ಸೇವಾ ಕಂಪನಿಗಳು ಪ್ರಾರಂಭವಾದವು. ಮೊಬೈಲುಗಳಲ್ಲೇ ಎಲ್ಲಾ ಸೌಲಭ್ಯಗಳು ಸಿಗುವಂತಾಗಿ ಪೇಜರ್ ಮೂಲೆಗುಂಪಾಯಿತು. ಎಂಪಿ3 – ಎಂಪಿ4 ಗಳತ್ತ ಜನರ ಗಮನ ಹೋಯಿತು.
ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಜನರ ಜೀವನ ಶೈಲಿಯೇ ಬದಲಾಗುತ್ತಾ ಹೋಗುತ್ತಿದೆ. ಡಿಜಿಟಲ್ ಸೇವೆಗಳು ಉತ್ತುಂಗಕ್ಕೆ ಬೆಳೆಯಲು ಕರೋನ ಮಹಾಮಾರಿಯ ಕಾಲಘಟ್ಟ ಭಾರತದ ಮಾರುಕಟ್ಟೆಗೆ ಬಯಸದೆ ಬಂದ ಭಾಗ್ಯದಂತಾಗಿ ಹೋಯಿತು. ಉದ್ಯೋಗಪತಿಗಳು ಇದರ ಲಾಭವನ್ನು ಪಡೆದುಕೊಂಡರು. ಮೊಬೈಲುಗಳ ಮತ್ತು ಕಂಪ್ಯೂಟರುಗಳ ಬಳಕೆ ಬಹುಶಃ ಎಂದೂ ಈ ಮಟ್ಟಕ್ಕೆ ವಿಶೇಷವಾಗಿ ಸಾಮಾನ್ಯ ಜನರಲ್ಲಿ ಬಳಕೆಯಾಗಿರಲಿಲ್ಲ. ಇಂದು ಇಂಟರ್ನೆಟ್ ಇಲ್ಲದೆ ಜನರು ಬದುಕಲು ಸಾಧ್ಯವಿಲ್ಲವೇನೋ ಎನಿಸುತ್ತದೆ. ನೆಟ್ ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ನಂತಹ ಅನೇಕ ವಿ.ಎಸ್.ಎಸ್. ಸ್ಟ್ರೀಮಿಂಗ್ ಓ.ಟಿ.ಟಿ. ಸೇವೆಗಳು ಚಲನಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟವು. ಕಿರುತೆರೆಗಳಲ್ಲಿ ನಟಿಸಲು ಹಿಂಜರಿಯುತ್ತಿದ್ದ ನಟ ನಟಿಯರು ಸಣ್ಣ ಪರದೆಗೆ ಮನ್ನಣೆ ನೀಡಲಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಮನೆ ಟಿವಿಗಳ ಗಾತ್ರ ರೂಪುರೇಷೆ ಹೆಚ್ಚಾದಂತೆ ಸಿನಿಮಾ ಮಂದಿರಗಳೇ ಮುಚ್ಚಿ ಹೋಗಬಹುದೇನೋ…! ಈಗಾಗಲೇ ಈ ಪ್ರಶ್ನೆ ಸಿನೆರಂಗಕ್ಕೆ ಕಾಡುತ್ತಿದೆ.
ಇಂಟರ್ನೆಟ್ ಇಂದಿನ ಪ್ರಪಂಚಕ್ಕೆ ಬಹಳ ಉಪಯೋಗಕಾರಿ ನಿಜ. ಆದರೆ ಅದರ ಕಪ್ಪು ಮುಖವೂ ಇದೆ. ಹಸು ಹಾಲು ಮತ್ತು ಗೊಬ್ಬರ ಎರಡೂ ಕೊಡುತ್ತದೆ. ಹಾಲನ್ನು ಕುಡಿಯುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು. ಗೊಬ್ಬರವನ್ನೂ ತಿನ್ನುತ್ತೇವೆ ಎಂದರೆ ಏನು ಮಾಡುವುದು? ಇಂದಿನ ಯುವಜನತೆ ಮೊಬೈಲ್ ಆಪ್ ಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ರೀತಿ ನೋಡಿದರೆ, ಅದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ ಎಂಬಂತೆ ಕಾಣುತ್ತದೆ. ಮನುಷ್ಯರ ಭಾವನೆಗಳ ಕನ್ನಡಿಯಂತೆ ವಾಟ್ಸ್ಆಪ್ ಮತ್ತು ಸಾಮಾಜಿಕ ಜಾಲತಾಣಗಳು ಕಂಡು ಬರುತ್ತಿವೆ. ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಹಿನ್ನೆಲೆ ತಿಳಿದುಕೊಳ್ಳಬೇಕಾದರೆ ಪೊಲೀಸರು ಆ ವ್ಯಕ್ತಿಯ ಮೊಬೈಲ್ ಮತ್ತು ಫೇಸ್ ಬುಕ್ ಖಾತೆಯನ್ನು ಹುಡುಕಾಡುತ್ತಾರೆ. ಕಾಮ, ಕ್ರೋಧ, ಲೋಭ, ಮದ, ಮೋಹ, ಮಾತ್ಸರ್ಯ ಮತ್ತು ನವರಸಗಳು – ಎಲ್ಲವೂ ನಿಂತಲ್ಲೇ ಕುಂತಲ್ಲೇ ಬೆರಳಂಚಲಿ ಉಂಟು. ಎಲ್ಲಾ ಚಟುವಟಿಗಳ ಪಾತ್ರಧಾರಿ ಮತ್ತು ಸೂತ್ರಧಾರಿ ಬೇರಾರು ಅಲ್ಲ, ನಮ್ಮ ನಿಮ್ಮ ಅಂತರಂಗ ಮತ್ತು ಬಹಿರಂಗವಾಗಿದೆ. ಮೊಬೈಲ್ ಗೀಳಿಗೆ ಅದೆಷ್ಟು ಕೋಟ್ಯಂತರ ತಲೆಗಳು ಇನ್ನೂ ಬಲಿಯಾಗಬೇಕಾಗಿದೆಯೋ… ಮನಸ್ಸುಗಳನ್ನು ಕಸದ ತೊಟ್ಟಿಗಿಂತ ಕಡೆಯಾಗಿ ಮಾರ್ಪಾಟುಗೊಳಿಸಲಾಗುತ್ತಿದೆ.
ಒಂದು ದೇಶದ ಉನ್ನತಿ ತಡೆಯಬೇಕಾದರೆ ಪರದೇಶಿ ಶತ್ರುಗಳ ಕೈವಾಡವೇ ಬೇಡ. ಆ ದೇಶದ ಯುವ ಪೀಳಿಗೆಯ ದಿಕ್ಕು ತಪ್ಪಿಸಿದರೆ ಸಾಕು. ಅದೇ ಆನ್ ಲೈನ್ ಪ್ರಪಂಚ ಮಾಡುತ್ತಿರುವುದು. ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಸಮಾಜಕ್ಕೆ ದೇಶಕ್ಕೆ ಒಳಿತು ಮಾಡಬೇಕಿದ್ದ ಬುದ್ಧಿವಂತ ಯುವ ಪೀಳಿಗೆ ತಮಗೆ ತಿಳಿದೊ ತಿಳಿಯದೊ ದುರ್ಮಾರ್ಗದ ರೈಲನ್ನು ಹತ್ತಿ ಸಾಗುತ್ತಿದ್ದಾರೆ. ಮೊಬೈಲ್ ಹ್ಯಾಕ್, ಅಕೌಂಟ್ ಹ್ಯಾಕ್, ಡೇಟಾ ಹ್ಯಾಕ್, ವೈರಸ್ ಅಟ್ಯಾಕ್, ಬ್ಲೂ ಟೂಟ್, ವಯರ್ಲೆಸ್, ವೈಫೈ, ಸೈಬರ್ ಕ್ರೈಮ್ ಇತ್ಯಾದಿ – ಈ ಪದಗಳೇ ಕೇಳಿರಲಿಲ್ಲ. ಇನ್ನು ಹತ್ತು ವರ್ಷಗಳ ನಂತರ ಈ ಪದಗಳು ಮಾಯವಾಗಿ ಹೊಸ ಪದಗಳು ಬಳಕೆಗೆ ಬರಬಹುದೇನೋ. ಅಂತರ್ಜಾಲ ಮೋಸದ ಜಾಲವಾಗಿ ಹರಡುತ್ತಿದೆ.
ಮಕ್ಕಳು ಅತಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬಾರದು. ಅದರಿಂದ ಅನೇಕ ದುಷ್ಪರಿಣಾಮಗಳು ಆಗುತ್ತವೆ ಎಂದು ನಾವು ಹೇಳುತ್ತೇವೆ. ಆದರೆ ನಾವೇ ಅವರಿಗಿಂತ ಹೆಚ್ಚಾಗಿ ಅನಾವಶ್ಯಕ ಮೊಬೈಲ್ ಬಳಕೆ ಮಾಡುತ್ತೇವೆ. ಅದರಿಂದ ನಮ್ಮ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ ಹೊರತು ಲಾಭವೇನೂ ಆಗಲ್ಲ. ಅಶ್ಲೀಲ ಚಾಟ್ ಮಾಡುವುದರಿಂದ, ರೀಲ್ಸ್ ನೋಡುವುದರಿಂದ, ಟೈಲರ್ ಮೇಡ್ ನ್ಯೂಸ್ ನೋಡುವುದರಿಂದ, ಬೆಟ್ಟಿಂಗ್ ಕಟ್ಟುವುದರಿಂದ, ಟೊಳ್ಳು ಸ್ಟೇಟಸ್ ಹಾಕುವುದರಿಂದ ಯುವ ಪೀಳಿಗೆಗೆ ಲಾಭವಾಗುತ್ತದೆಯೇ ? ಟೈಮ್ ಪಾಸ್ ಹೆಸರಲ್ಲಿ ಲೈಫ್ ಪಾಸ್ ಆಗಿ ಹೋಗಬಾರದು. ಬಿಟ್ಟ ಬಾಣ, ಆಡಿದ ಮಾತು, ಹೋದ ಸಮಯ ಮತ್ತೆ ಬರಲ್ಲ ಎಂದು ಹಿರಿಯರು ಹೇಳುತ್ತಾರೆ.
ಇನ್ನಡುವೆ ಮೊಬೈಲುಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವ ಗೀಳು ಅತಿ ಹೆಚ್ಚಾಗಿ ಹೋಗಿದೆ. ಅದನ್ನು ರೋಗವೆಂದೇ ಪರಿಗಣಿಸಬಹುದು. ತಿಂದಿದ್ದು, ತೇಗಿದ್ದು, ಸುತ್ತಿದ್ದು, ಬಿದ್ದಿದ್ದು, ಮಲಗಿದ್ದು – ಒಂದೇ ಎರಡೇ …! ಎಲ್ಲಾ ರೀತಿಯ ಸ್ಟೇಟಸ್ಸುಗಳು, ಫೋಟೋಗಳು, ವೀಡಿಯೋಗಳು ಹಂಚಿಕೊಳ್ಳಲಾಗುತ್ತದೆ. ಅವಳ ಸ್ಟೇಟಸ್ ನೋಡ್ದಾ? ಹೊಸ ಕಾರು. ಸಕ್ಕತ್ ಸೀರೆ ಕಣೇ. ಬೇರೆಯವರ ಸ್ಟೇಟಸ್ಸುಗಳನ್ನು ಎರಡು ಮೂರು ಸಲ ನೋಡಿ ಮೇಲಿಂದ ಕೆಳಗಿನವರೆಗೂ ಕಣ್ಣುಗಳಲ್ಲೇ ಸ್ಕ್ಯಾನ್ ಮಾಡಿ, ಸುಪ್ತ ಮನಸ್ಸಿನಲ್ಲೇ ಏನೇನೋ ವಿಷಯಗಳ ಬಗ್ಗೆ ವಗ್ಗರಣೆ ಹಾಕಿಬಿಡುತ್ತಾರೆ. ಪರದೇಶಕ್ಕೆ ಹೋಗಿಬಿಟ್ಟರಂತೂ ಕೇಳಲೇ ಬೇಡಿ, ವಿಡಿಯೋಗಳ ಸುರಿಮಳೆಯೇ ಸರಿ.
ನಾವು ಖುಷಿಯಾಗಿ ಜೀವನ ನಡೆಸುತ್ತಿದ್ದೇವೆ ಎಂದು ತೋರಿಸಲು ಕೆಲವರು ಸ್ಟೇಟಸ್ಸುಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ ವಿಷಯ ಅದರ ತದ್ವಿರುದ್ಧವಾಗಿರುತ್ತದೆ. ಟೊಳ್ಳು ತೋರಿಕೆಯಿಂದ ಮನ ಶಾಂತಿ ಸಿಗುವುದಿಲ್ಲ. ಬಹುಶಃ ಸ್ಟೇಟಸ್ಸುಗಳಲ್ಲಿ ಇರುವ ಎಲ್ಲವೂ ಸತ್ಯವೇ ಎಂದು ಭಾವಿಸಿಕೊಳ್ಳೋಣ. ಅದರಿಂದ ಏನು ಲಾಭ ? ಬೇರೆಯವರು ಅಸೂಯೆ ಪಡುತ್ತಾರೆ ಅಥವಾ ಅವರಿಗೆ ಕೀಳರಿಮೆ ಕಾಡುತ್ತದೆ. ಮನಸ್ಸಿನಲ್ಲೇ ಕೊರಗುತ್ತಾರೆ. ಬೇರೆಯವರನ್ನು ಉರಿಸಲೆಂದೇ ಕೆಲವರು ಸ್ಟೇಟಸ್ ಹಾಕಿಕೊಳ್ಳುತ್ತಾರೆ. ಅವರವರ ಅಂತರಂಗ ಅವರವರ ನಿಯ್ಯತ್ತು ಅವರವರಿಗೆ ಬಿಟ್ಟಿದ್ದು. ಸ್ಟೇಟಸ್ಸುಗಳನ್ನು ನೋಡಿ ಎಷ್ಟೋ ಮನೆಗಳು ಕಳ್ಳರ ಪಾಲಾಗಿವೆ. ಈಗ ನಾವು ಇಂತಹ ಜಾಗದಲ್ಲಿದ್ದೇವೆ, ಇಂತಹ ಘನ ಕಾರ್ಯದಲ್ಲಿದ್ದೇವೆ – ಹೀಗೆ ಅನೇಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸುತ್ತಾ ಹೋದರೆ, ನಿಮ್ಮ ಗುಟ್ಟು ನೀವೇ ರಟ್ಟು ಮಾಡಿದಂತಾಗುತ್ತದೆ. ಎಲ್ಲರ ಕಣ್ಣು, ನಿಯ್ಯತ್ತು, ಭಾವನೆಗಳು, ಎಲ್ಲಾ ಸಮಯದಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಇಂದಿನ ಮಿತ್ರ ನಾಳೆ ಶತ್ರು ಆಗಬಹುದು. ನಿಮ್ಮ ಗೌಪ್ಯತೆಯನ್ನು ಮರ್ಯಾದೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಾಜು ಹಾಕಬೇಡಿ.
ಪ್ರವಾದಿ ಮುಹಮ್ಮದರ(ಸ) ಒಂದು ಮಾತನ್ನು ಇಲ್ಲಿ ಸ್ಮರಿಸಲು ಇಚ್ಛಿಸುತ್ತೇನೆ; ” ಅಪ್ನಿ ಜಿಂದಗಿ ಅಪ್ನೆ ತಕ್ ರಖೋ” “ನಿಮ್ಮ ಜೀವನ ನಿಮ್ಮಷ್ಟಕ್ಕೆ ಇಟ್ಟುಕೊಳ್ಳಿ”. ಇಂದಿನ ಸಮಾಜಕ್ಕೆ ಈ ಮಾತು ಎಷ್ಟು ಅನ್ವಯವಾಗುತ್ತದೆ ನೋಡಿ..! ನಮ್ಮ ಜೀವನವನ್ನು ಬೀದಿ ಪಾಲು ಮಾಡುತ್ತಿರುವವರು ಯಾರು ? ನಾವೇ. ಅದರಿಂದ ಲಾಭವೆಷ್ಟು ನಷ್ಟವೆಷ್ಟು ಎಂದು ಯೋಚಿಸಿ. ನಿಮ್ಮ ರಹಸ್ಯ ಕಾಪಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಮೋಸ ಮಾಡಬೇಡಿ. ಮೋಸ ಹೋಗಬೇಡಿ. ಮುಂಬರುವ ಜೀವನದ ತಂತ್ರಜ್ಞಾನದ ಪುಟಗಳು ಇನ್ನೂ ಬಾಕಿ ಇವೆ… ಮುಂದಿನ ಹತ್ತು ವರ್ಷಗಳಲ್ಲಿ ಅನೇಕ ಬದಲಾವಣೆಗಳು ಪ್ರಪಂಚದಲ್ಲಿ ಆಗುವ ಸಾಧ್ಯತೆಗಳು ಉಂಟು ಎಂದು ಹಿರಿಯರು ಹೇಳುತ್ತಾರೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.