(www.vknews.in) ; ಮಕರ ಸಂಕ್ರಾತಿ: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರೈತಾಪಿ ವರ್ಗದವರು ಬೆಳೆ ಬೆಳೆದ ಧಾನ್ಯಗಳು ತಮ್ಮ ಮನೆಗೆ ಬಂದಾಗ ಆಚರಿಸುವ ಪ್ರಮುಖವಾದ ಆಚರಣೆಯಾಗಿದ್ದು ನಮ್ಮ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವಿಶೇಷವಾಗಿ ಹಬ್ಬವನ್ನು ಆಚರಿಸುವುದು ವಾಡಿಕೆ. ರಾಶಿಪೂಜೆ, ಮೊದಲು ಮಾಡುವುದು, ಹೋರಿ ಕಿಚ್ಚುಹಾಯಿಸುವುದು ತುಂಬಾ ವಿಶೇಷ ಆಕರ್ಷಣೀಯ ಹಬ್ಬವಾಗಿದೆ ಎಳ್ಳು ಬೆಲ್ಲ ಕೊಟ್ಟು ಪರಸ್ಪರ ಒಬ್ಬರಿಗೊಬ್ಬರು ಶುಭಹಾರೈಸಿಕೊಂಡು ಸಂಭ್ರಮಿಸುವುದು ಹಿರಿಯರ ಪೂಜೆ ಇತ್ಯಾದಿ ಸಂಪ್ರದಾಯಗಳು ಆಧರಣೀಯವಾಗಿದೆ ಇಂತಹ ದೇಸಿಯ ಹಬ್ಬಗಳಲ್ಲಿ ಈ ನಾಡ ಮಣ್ಣಿನ ಸಂಸ್ಕೃತಿಯ ಘಮಲಿರುತ್ತದೆ, ಸಂಬಂಧಗಳ ಗಟ್ಟಿಗೊಳಿಸುವ ಭೂತಕಾಲದ ಮನಸ್ತಾಪಗಳ ಬದಿಗಿರಿಸಿ ಅಥವಾ ಮರೆತು ಹೊಸ ಜೀವನ ತಳಪಾಯ ಹಾಕಿಕೊಳ್ಳುವ ಹೊಸ ವರ್ಷಾಚರಣೆಯ ಪ್ರತಿಬಿಂಬವೇ ಈ ನಮ್ಮ ಸಂಕ್ರಾಂತಿ.
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಚಾಮರಾಜನಗರದ ಬಿಳಿಗಿರಿ ರಂಗನಾಥಸ್ವಾಮಿ, ಕೆ.ಗುಡಿ, ಪುಣಜನೂರಿನಲ್ಲಿನ ಪೋಡುಗಳಲ್ಲಿ ವಾಸಿಸುವ ನಮ್ಮ ಸೋಲಿಗರ ಸಂಸ್ಕೃತಿ ಇಡೀ ದೇಶದ ಗಮನವನ್ನೇ ಸೆಳೆಯುವಂತದ್ದು ಇವರ ಆಚಾರ, ವಿಚಾರ ಸಂಪ್ರದಾಯ ನಾಡ ನಿವಾಸಿಗಳಿಗಿಂತ ಬಲು ವಿಭಿನ್ನ ಹಾಗು ಪರಿಸರಮಯವಾದದ್ದೇ ಎಂದು ಹೇಳಬಹುದು ಕಾಡು ಬಿಟ್ಟು ನಾಡ ಗಡಿಯಲ್ಲಿ ಇವರಿದ್ದರು ಅಷ್ಟಾಗಿ ಆಧುನೀಕತೆಯ ಗಾಳಿ ಇವರಿಗೆ ಬೀಸಿಲ್ಲ ಎಂದೇಳಬಹುದು. ಇವರ ಭಾಷೆ ಕಾಡಿನ ಬಗ್ಗೆ ಇವರಿಗಿರುವ ಮಾಹಿತಿ ಮತ್ತು ನಿಕಟ ಸಂಬಂಧ ಎಂತವರನ್ನು ಚಕಿತಗೊಳಿಸಬಲ್ಲದು. ಕಾಡು ಪ್ರಾಣಿಗಳು ನಿಮಗೆ ಏನು ಮಾಡುವುದಿಲ್ಲವೇ ಎಂದು ಕೇಳಿದಾಗ: “ನಮ್ಮ ಆಯಸ್ಸು ಗಟ್ಟಿ ಇರಬೇಕು ಸ್ಚಾಮಿ, ಮೇಲಿರುವ ಶಿವನ ಆಟದಂತೆ ನಾವು ನಡೆಕೊಳ್ಳಬೇಕಾಗುತ್ತದೆ. ಸುಮ್ಮನೆ ದಾರಿಯಲ್ಲಿ ನಡೆದು ಹೋಗಬೇಕಾದರೆ ಒಂದು ಕಲ್ಲು ಅಟೆದರೆ ಎಡವುತ್ತೇವೆ ಇದು ಅನಿರೀಕ್ಷಿತ ಬೆಳವಣಿಗೆ ಆದರೂ ಶಿವ ನಮ್ಮನ್ನು ಕಾಪಾಡುತ್ತಾನೆ” ಎಂದು ಒಗಟಾಗಿ ಹೇಳಿಬಿಡುತ್ತಾರೆ. ಚಾಮರಾಜನಗರಕ್ಕೆ ಬಂದಾಗಿನಿಂದಲೂ ಇಲ್ಲಿಯವರೆಗೂ ನಾನು ಇವರ ಆಚಾರ ವಿಚಾರ ಮತ್ತು ಜೀವನ ಪದ್ಧತಿಯನ್ನು ಅತೀವ ಕೌತುಕದೊಂದಿಗೆ ನಾನು ವೀಕ್ಷಿಸುತ್ತಾ ಬಂದಿದ್ದೇನೆ ಇವರು ನಿಜಕ್ಕೂ ಕಾಡು ದೇವರ ಮಕ್ಕಳು.
ಇದು ವರ್ಷದ ಮೊದಲ ಹಬ್ಬ, ಜನವರಿ ತಿಂಗಳಲ್ಲಿ ಈ ಹಬ್ಬ ಬರುವುದು, ಈ ಗ್ರಾಮದಲ್ಲಿ ವಿಶೇಷವಾದ ಅವರ ಮನೆಗಳಲ್ಲಿ ನೆಟ್ಟಿರುವ ಕಂಬಗಳಿಗೆ ಮರಗಳಿಗೆ ಸುತ್ತ ಬೂದಿ, ಸುಣ್ಣ ಹಾಗೂ ಕೆಮ್ಮಣ್ಣನ್ನು ಬಳಸುತ್ತಿದ್ದು, ಅಂದರೆ ಮರದ ಸುತ್ತಲು ಬಿಳಿವನ್ನು ಎರಡು ಬಣ್ಣವನ್ನು ಎರಡು ಸಲ ಹಾಕಿ ಮಧ್ಯದಲ್ಲಿ ಮಣ್ಣಿನಿಂದ ಬಣ್ಣವನ್ನು ಹಾಕುವರು. ಇದರ ಜೊತೆಗೆ ದನಕರುಗಳಿಗೆ ಕೊಂಬಿಗೆ ಬಣ್ಣಗಳನ್ನು ಹಾಕಿ ಮನೆಯ ಸೂರಿಗೆ ಅಣ್ಣಾಸೊಪ್ಪು, ಉತ್ತ್ರಾಣೆ ಸೊಪ್ಪು ಬೇವಿನ ಸೊಪ್ಪು ಮೂರನ್ನು ಸೇರಿಸಿ ಹಾಕುತ್ತಾರೆ.ಈ ಹಬ್ಬವನ್ನು ಶಂಖನಗಾತ್ರ ಮೂಳೆ ಕಡಿಯೋದು” ಅಂತ ಹೇಳುತ್ತಾರೆ. ಈ ಹಬ್ಬಕ್ಕೆ ರಂಗಸ್ವಾಮಿ ಶಾಪ ಹಾಕುತ್ತಾರೆ” ಎಂದು ನಂಬಿಕೆ ಇಟ್ಟುಕೊಂಡಿದ್ದಾರೆ, ಏಕೆಂದರೆ, ರಂಗಾಸ್ವಾಮಿಗೆ ಲಕ್ಷ್ಮೀದೇವಿ, ತುಳಸಮ್ಮ, ಕುಸುಮಾಲೆ ಮಾವರು ಹೆಂಡತಿಯರು, ಕುಸುಮಾಲೆ ಸೋಲಿಗರ ಮಗಳು, ಸಂಕ್ರಾಂತಿ ಹಬ್ಬಕ್ಕೆ ಲಕ್ಷ್ಮೀದೇವಿ, ತುಳಸಮ್ಮ ಇಬ್ಬರ ಅವರ ತವರ ಮನೆಯಿಂದ ಎಲ್ಲಾ ತರಹದ ಅಡುಗೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಆದರೆ ಕುಸುಮಾಲೆ: ಬಡವರು, ಮನೆಯಲ್ಲಿ ಹುಟ್ಟಿರುವುದರಿಂದ ರಂಗಪ್ಪ ಕುಸುಮಾಲೆಗೆ ಶಾಪ ಹಾಕುತ್ತಾನೆ. ಬೊಸುಡಿ, ನಿನ್ನ ತವರು ಮನೆಗೆ ಹೋಗದೆ ಹೋದಲ್ಲಿ ಬಡವರ ಮನೆಯಾಗಲಿ, ಶ್ರೀಮಂತರ ಮನೆಯಾಗಲಿ, ನಂಗೆ ನಿಮ್ಮ ಅಪ್ಪನ ಮನೆಯಿಂದ ನಂಗೆ ಒಂದು ಗೆಣಸಿನ ತುಂಡು ತಗೊಂಡು ಬರಲಿಲ್ಲವಲ್ಲ. ನಿನ್ನ ತವರು ಮನೆ ಇನ್ನು ತಿರುಕಹಿಟ್ಟಾಗಲಿ ಇಚ್ಚೋರಿಂದ ಬಂದದ್ದು ಅಚ್ಚೋರಿಂದ ಕಡೆದು ಹೋಗಲಿ ಎಂದು ರಂಗನಾಥ ಸ್ವಾಮಿ ಶಾಪ ಹಾಕುತ್ತಾನೆ. ಆದ್ದರಿಂದ ಹೊಸ ಮೊರಗೆಣಸು ತಂದು ನೆನಕ್ಕಿ ನೆನಗಳ್ಳ, ಮಾಂಸದ ಸಾರು,ಮುದ್ದೆ, ಪೂರಿ, ವಡೆ, ಇದನ್ನೆಲ್ಲನ್ನ ಹಾಕಿ ಜೊತೆಗೆ ಕುಸುಮಾಲೆಗೆ ಬಟ್ಟೆ, ಅರಿಶಿಣ ಕುಂಕುಮ ಬಳೆ, ಇವೆಲ್ಲವನ್ನು ಸುಳಿಬಾಳೆಯ ಎಲೆಯ ಮೇಲೆ ಮಾಡಿರುವ ಅಡುಗೆ ಎಲ್ಲವನ್ನು ಹಾಕುತ್ತಾರೆ . ಈ ರೀತಿ ಮಾಡಿದರೆ ‘ರಂಗನಾಥಸ್ವಾಮಿ ವರ್ಷವನ್ನು ಚೆನ್ನಾಗಿ, ಮಳೆ, ಬೆಳೆ ಎಲ್ಲವನ್ನು ಕೊಟ್ಟು ಸುಖವಾಗಿ ಇಟ್ಟಿರುತ್ತಾನೆಂಬುದು ಈ ಸಮುದಾಯದವರ ದೈವಾರಾಧನೆಯ ನಂಬಿಕೆ.
ಬೆದರೆ ಗೆಣಸು, ಸಾಸಯಿಸೊಪ್ಪು, ಗೀರೆಸೊಪ್ಪು, ಜೀರೆಮೆಣಸಿನಕಾಯಿ, ಸಪ್ಪೆಕಾಯಿ, ಸೌತೆಕಾಯಿ,ಸೌತೆಹಣ್ಣು,ಕುಂಬಳದಕಾಯಿ,ಮೆಲ್ಲವರೆಕಾಯಿ,ಸಪ್ಪೇಕಾಯಿ,ಕಾಡುಬಿದರಿಕೋಳಿಗಳು,ಸೀಗೆ ಸೊಪ್ಪು , ಪಸಲೇಸೊಪ್ಪು, ಕಡ್ಡಿಮಲ್ಲಿಗೆಸೊಪ್ಪು,ಮುಷ್ಟೀಸೊಪ್ಪು,ಅಂಣ್ಣೇಸೊಪ್ಪು,ಗಣಕೇಸೊಪ್ಪು, ಹೊನ್ನಗನಸೊಪ್ಪು, ಇತ್ಯಾದಿ ಸೊಪ್ಪು ಕಾಯಿಯೊಂದಿಗೆ ರಾಗಿರೊಟ್ಟಿ ಎಡೆ ಹಾಕುವುದು, ದೊಡ್ಡ ಸಂಪಿಗೆ, ಮುನೇಶ್ವರ,ಮಹದೇಶ್ವರ,ಜಡೇಸ್ವಾಮಿಗೆ, ಮೀಸಲು ಎಡೆ ಹಾಕಿ ಸಂಕ್ರಾತಿ ಸಂಭ್ರಮಿಸೋದು ಸೋಲಿಗರ ವೈಭವ…
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.