(www.vknews.in) ಧಾರವಾಡ : “ಲೋಕಕಲ್ಯಾಣನ್ನೇ ಬಯಸಿ ಎಲ್ಲರೂ ವಿದ್ಯಾವಂತರಾಗಬೇಕೆನ್ನುವ ಉದಾತ್ತ ಚಿಂತನೆಯ ಹಂಬಲದೊಂದಿಗೆ ಅಕ್ಷರ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ತಮ್ಮ ಸಂಪೂರ್ಣ ಆಸ್ತಿ-ಸಂಪತ್ತನ್ನು ತ್ಯಾಗಮಾಡಿರುವ ಶಿರಸಂಗಿ ಲಿಂಗರಾಜರ ಸಾಧನೆ ಇಂದಿಗೂ ಮಾತನಾಡುತ್ತದೆ” ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಅಮ್ಮಿನಬಾವಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ 162ನೇ ಜಯಂತಿ ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿರಸಂಗಿ ಲಿಂಗರಾಜರ ದೂರದೃಷ್ಟಿಯ ಪ್ರಗತಿಪರ ಆಲೋಚನೆಗಳ ನೆಲೆಯಲ್ಲಿ ಹುಟ್ಟಿಕೊಂಡ ಹಲವಾರು ಶಿಕ್ಷಣ ಸಂಸ್ಥೆಗಳು ಇಂದು ಕೋಟ್ಯಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಇಂಬು ನೀಡಿದ್ದನ್ನು ಮರೆಯುವಂತಿಲ್ಲ. ಧರ್ಮ, ಶಿಕ್ಷಣ, ಸಂಘಟನೆ ಮತ್ತು ಕೃಷಿ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಿದ್ದ ಶಿರಸಂಗಿ ಲಿಂಗರಾಜರು, ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿ ಆ ಸಂಸ್ಥೆ ವಿಸ್ತೃತವಾಗಿ ವಿಕಾಸಗೊಳ್ಳಲು ಕಾರಣರಾಗಿದ್ದಾರೆ ಎಂದರು.
ಭಾರತವು ದೇವಭೂಮಿ ಎಂಬುದನ್ನು ಅಖಂಡ ವಿಶ್ವಕ್ಕೇ ಪರಿಚಯಿಸುವ ಮೂಲಕ ಭಾರತೀಯ ಹಿಂದೂ ಸಂಸ್ಕೃತಿಯ ಆದರ್ಶ ಮೌಲ್ಯಗಳ ಅನುಪಾಲನೆಯ ಬದುಕಿನ ಪಥವನ್ನು ಮುಂದಿನ ಪೀಳಿಗೆ ಅನುಸರಿಸಬೇಕೆಂದು ಬಯಸಿದ್ದ ಸ್ವಾಮಿ ವಿವೇಕಾನಂದರ ಬದುಕಿನ ಸಾಧನೆಯೂ ಕೂಡಾ ನಿರಂತರ ಮಾತನಾಡುತ್ತದೆ ಎಂದೂ ಅಭಿನವ ಶಾಂತಲಿಂಗ ಸ್ವಾಮೀಜಿ ನುಡಿದರು.
ಮುಖ್ಯ ಅತಿಥಿಗಳಾಗಿದ್ದ ಅಮ್ಮಿನಬಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ಹುಬ್ಬಳ್ಳಿ ನಿರಾಮಯಾ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷ ಬಸವರಾಜ ತಿದಿ, ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ, ಶ್ರೀಶಾಂತೇಶ್ವರ ಪ್ರೌಢ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಎಂ. ಹಂಚಿನಾಳ ಮಾತನಾಡಿದರು. ಬಸವರಾಜ ಭಂಡಿವಾಡ, ಮಹಾಂತೇಶ ಬೆಟಗೇರಿ, ಚನ್ನಬಸಪ್ಪ ಪೂಜಾರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಿವಪ್ಪ ಹಂಚಿನಾಳ ಅಧ್ಯಕ್ಷತೆವಹಿಸಿದ್ದರು.
*ಪ್ರತಿಭಾ ಪುರಸ್ಕಾರ* : ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ 10 ಜನ ಜಾಣ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಬಿ.ಸಿ. ಕೊಳ್ಳಿ, ಮುತ್ತಪ್ಪ ಹನಸಿ, ಶಿವಯೋಗಿ ಹಕಾರಿ, ಡಾ. ಈರಣ್ಣ ಭಾವಿಕಟ್ಟಿ, ನಿಂಗಪ್ಪ ಮಾದಿಗ್ಗೊಂಡ, ಚಂಬಣ್ಣ ಹನಸಿ, ಬಸವರಾಜ ಕುಸೂಗಲ್ಲ, ಧರ್ಮಣ್ಣ ಉಂಡೋಡಿ, ಜಗನ್ನಾಥ ಕುಸೂಗಲ್ಲ, ಮಹಾದೇವಪ್ಪ ಹಾವೇರಿ, ಮಹಾಂತೇಶ ಅಕ್ಕೋಜಿ, ಮಲ್ಲಪ್ಪ ಬೂದಿಹಾಳ, ಬಸವರಾಜ ಬೆಳದೊಡಿ, ರವಿ ಇಂದೂರ, ಬಸವರಾಜ ಕವಲೂರ, ರಾಜು ಮುಂದಿನಮನಿ, ಚಿದಾನಂದ ಹಕಾರಿ, ಉಮೇಶ ಭಂಡಿವಾಡ, ಮಂಜುನಾಥ ಹಂಚಿನಾಳ ಇತರರು ಇದ್ದರು. ವಿಜಯಶ್ರೀ ಭಾವಿಕಟ್ಟಿ ಸ್ವಾಗತಿಸಿದರು. ನಾಗವೇಣಿ ಹಾವೇರಿ ನಿರೂಪಿಸಿದರು. ಭವ್ಯ ಬೆಟಗೇರಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.