ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಯುಪಿ ಮೂಲದ ಗುಫ್ರಾನ್ ಮುಹಮ್ಮದ್ ಅವರ ಮೃತ ದೇಹವನ್ನು ಸ್ವೀಕರಿಸಲು ಕುಟುಂಬ ಸಿದ್ಧರಿರಲಿಲ್ಲ. ಮೃತದೇಹವನ್ನು ಸ್ವಾಧೀನಪಡಿಸಿಕೊಳ್ಳಲು ಯಾರೂ ಬಾರದ ಕಾರಣ ಆರು ತಿಂಗಳ ಬಳಿಕ ದಫನ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಸೌದಿ ಅರೇಬಿಯಾದ ರಿಯಾದ್ ಬಳಿಯ ದವಾದ್ಮಿ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಅವರ ತೋಟದ ನಿವಾಸದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಬೆಂಕಿಯಲ್ಲಿ 31 ವರ್ಷದ ಗುಫ್ರಾನ್ ಮುಹಮ್ಮದ್ ಕಳೆದ ವರ್ಷ ಸೆಪ್ಟೆಂಬರ್ 13 ರಂದು ಮೃತಪಟ್ಟಿದ್ದರು. ಅವರ ಮೃತದೇಹ ಈಗ ಶವಾಗಾರದಲ್ಲಿ ವಾರಸುದಾರರಿಲ್ಲದೆ ಇರಿಸಲಾಗಿತ್ತು.
ದವಾದ್ಮಿಯಲ್ಲಿಯೇ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಕುಟುಂಬದ ಅನುಮತಿಗೆ ಸಹಿ ಹಾಕದ ಕಾರಣ ಅಂತ್ಯಕ್ರಿಯೆ ವಿಳಂಬವಾಯಿತು. ಮೃತದೇಹವನ್ನು ಸ್ವಾಧೀನ ಪಡಿಸಿಕೊಳ್ಳಲು ಸಾಮಾಜಿಕ ಕಾರ್ಯಕರ್ತರು ಕುಟುಂಬಸ್ಥರನ್ನು ಸಂಪರ್ಕಿಸಿದಾಗ ಮೃತದೇಹ ತಮಗೆ ಬೇಡ, ಹಣ ನೀಡದೆ ಸಹಿ ಹಾಕುವುದಿಲ್ಲ ಎಂಬ ನಿಲುವು ತಳೆದರು. ಹಲವು ರೀತಿಯಲ್ಲಿ ಮನವೊಲಿಸಲು ಯತ್ನಿಸಿದರೂ ಮನೆಯವರು ಒಪ್ಪಲಿಲ್ಲ.
ಸೌದಿ ಅರೇಬಿಯಾದಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದರೆ ಕುಟುಂಬಕ್ಕೆ ಸ್ವಲ್ಪ ಸಹಾಯ ಮಾಡುವುದಾಗಿ ಪ್ರಾಯೋಜಕರು ಹೇಳಿದ್ದರು. ಆದರೆ ಹಣ ನೀಡದೇ ಸಹಿ ಮಾಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಪ್ರಾಯೋಜಕರು ಕೂಡ ಪವರ್ ಆಫ್ ಅಟಾರ್ನಿ ಪಡೆಯದೆ ಹಣ ಕಳುಹಿಸುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಇದಾದ ಬಳಿಕ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಕ್ರಮಕೈಗೊಳ್ಳಲು ಮಾರ್ಗೋಪಾಯ ಕೋರಿದ್ದಾರೆ. ಜಿಲ್ಲಾಧಿಕಾರಿಗಳು ನೇರವಾಗಿ ಕುಟುಂಬದವರೊಂದಿಗೆ ಮಾತನಾಡಿ ಪವರ್ ಆಫ್ ಅಟಾರ್ನಿ ಕಳುಹಿಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು. ಇನ್ನೆರಡು ದಿನಗಳಲ್ಲಿ ಮೃತದೇಹವನ್ನು ದಫನ ಮಾಡಲಾಗುವುದು ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.