(ವಿಶ್ವ ಕನ್ನಡಿಗ ನ್ಯೂಸ್) : ಇದೇನು ಇವನು ನಮ್ಮ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು ಪ್ರವಾಸಿಗಳು ತಪ್ಪೆಣಿಸಬೇಡಿ. ನಿಮ್ಮ ಮೇಲಿರುವ ಪ್ರೀತ್ಯಾದರದಿಂದ ಒಬ್ಬ ಸಹೋದರ ಹೇಳುವ ಹಿತನುಡಿ ಎಂದು ಭಾವಿಸಿ ಬಿಡಿ, ಪ್ಲೀಸ್.
ಇದು ಕೆಳಗೆ ನೀಡಲಾಗಿರುವ ವೀಡಿಯೋ ದಲ್ಲಿರುವ ಒಬ್ಬರ ಅನುಭವ ಮಾತ್ರವಲ್ಲ. ಈ ವ್ಯಕ್ತಿ ನಲ್ವತ್ತು ವರ್ಷಗಳ ಕಾಲ ದುಬೈಯಲ್ಲಿ ದುಡಿದು ಕುಟುಂಬವನ್ನು ಮೇಲೆ ತಂದಿದ್ದಾರೆ. ಇದೀಗ ಎಪ್ಪತ್ತೈದರ ಹರೆಯದಲ್ಲಿ ಬರಿಗೈ ದಾಸನಾಗಿ ಅಂಗಡಿಯ ದಿಣ್ಣೆಯ ನಿವಾಸಿಯಾಗಿದ್ದಾರೆ. ನಾವು, ನಮ್ಮವರು, ನಮ್ಮ ಮಡದಿ ಮಕ್ಕಳು ಎಂಬ ಪ್ರೀತಿ ವಿಶ್ವಾಸ ಇರಬೇಕಾದ್ದೆ. ಆದರೆ ಅತಿಯಾಗಬಾರದು, ತನ್ನ ಸ್ವಂತಿಕೆಯನ್ನು ಮರೆಯಬಾರದು.
ಕೊಡಗಿನಲ್ಲಿ ಒಬ್ಬರ ಅನುಭವ ಇದೇ ರೀತಿ ಶೋಚನೀಯವಾಗಿದೆ. ಗಲ್ಳ್ ನಲ್ಲಿ ದುಡಿದ ಸಂಪಾದನೆಯನ್ನೆಲ್ಲ ಊರಿಗೆ ಕಳಿಸಿ ಆಸ್ತಿ ಖರೀದಿ ಮಾಡಿದ್ದಾರೆ. ಆದರೆ ಅವರು ವಿದೇಶದಲ್ಲಿರುವುದರಿಂದ ಊರಲ್ಲಿರುವ ಸಂಬಂಧಿಕರ ಹೆಸರಲ್ಲಿ ಆಸ್ತಿಗಳನ್ನು ಬರೆಸಿಕೊಂಡಿದ್ದರು. ವಯಸ್ಸಾಗುತ್ತಾ ಬಂತು. ಇನ್ನು ಊರಲ್ಲೇ ಇದ್ದುಕೊಂಡು ಆರಾಮವಾಗಿ ಬದುಕೋಣ ಎಂಬ ಆಸೆ ಹೊತ್ತುಕೊಂಡು ಊರಿಗೆ ಬಂದರು. ಆದರೆ ಸಂಬಂಧಿಕರು ಆಸ್ತಿಯನ್ನು ಇವರ ಹೆಸರಿಗೆ ಮಾಡಲೊಪ್ಪಲಿಲ್ಲ! ಏನೇ ಪಂಚಾತಿಕೆ ನಡೆಸಿದರೂ ಅದೆಷ್ಟೋ ಹಿರಿಯ ಉಲಮಾಗಳ ಮಧ್ಯಸ್ಥಿಕೆಯಲ್ಲಿ ಚರ್ಚೆ ನಡೆದರೂ ಸಂಬಂಧಿಕರು ಜಗ್ಗಲಿಲ್ಲ. ತಾನು ಬಿಸಿಲ ದಾವಾನಿಲದಲ್ಲಿ ಬೆಂದು ದುಡಿದ ಸಂಪಾದನೆಯ ಫಲವನ್ನು ತನ್ನ ಕಣ್ಮುಂದೆಯೇ ಪರರು ತಿನ್ನುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲುವುದೊಂದೇ ಅವರ ಗತಿಯಾಗಿತ್ತು.
ಬಂಟ್ವಾಳ ತಾಲೂಕಿನ ಒಂದು ಪೇಟೆಯಲ್ಲಿ ಲಕ್ಷಾಂತರ ರೂ ಬಾಡಿಗೆ ಬರುವ ಕಟ್ಟಡವೊಂದಿದೆ. ಈ ಕಟ್ಟಡಕ್ಕೆ ಹಾಕಿದ್ದ ಹಣ ಗಲ್ಪ್ ನಲ್ಲಿ ಒಬ್ಬ ಯುವಕ ದುಡಿದು ಕಳಿಸಿದ್ದಾಗಿತ್ತು. ಒಬ್ಬನ ಮೇಲೆ ವಿಶ್ವಾಸವಿಟ್ಟು ಹಣ ಕಳಿಸುತ್ತಾ ಇದ್ದ. ಈತ ಅವನನ್ನು ಪುಸಲಾಯಿಸಿ, ಹಣ ಕಳಿಸ್ತಾ ಇರು, ಇಲ್ಲಿ ನನ್ನ ಹೆಸರಲ್ಲಿ ಜಾಗ ಖರೀದಿಸಿ ಬಿಲ್ಡಿಂಗ್ ಹಾಕುತ್ತೇನೆ, ಕೊನೆಗೆ ನಿನ್ನ ಹೆಸರಿಗೆ ಹಸ್ತಾಂತರಿಸುತ್ತೇನೆ ಎಂದು ಹೇಳಿದ್ದ ಭೂಪ ಆ ಯುವಕನನ್ನು ಮುಂಡಾ ಮೋಚಿದ್ದ. ಇದರಲ್ಲಿ ಆ ಯುವಕನ ಪೆದ್ದುತನ ಅವನಿಗೆ ಮುಳುವಾಗಿತ್ತು. ಯಾರಲ್ಲೂ ಅತಿ ವಿಶ್ವಾಸ ತರವಲ್ಲ.
https://youtu.be/yo8KlgJ_0ko
ದುಡಿದದ್ದನ್ನೆಲ್ಲ ನನ್ನ ಕುಟುಂಬ ಎಂಬ ವಾತ್ಸಲ್ಯದಿಂದ ಖರ್ಚು ಮಾಡುವವರು ಮುಂದೆ ತನಗೆ ಅಸಹಾಯಕ ಪರಿಸ್ಥಿತಿ ಬರಲಿದೆ ಎಂಬ ಪ್ರಜ್ಞೆ ಇಟ್ಟುಕೊಂಡು, ಮಿತಖರ್ಚು ಮಾಡಿ ಸಂಪಾದನೆಯನ್ನು ಉಳಿಸಿ ತಾನು ಬದುಕಿರುವ ಕಾಲದ ವರೆಗೆ ಸ್ವಾವಲಂಭಿಯಾಗಿ ಬದುಕುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರವಾಸಿಗಳಲ್ಲಿ ಈ ಬುದ್ದಿ ಉಳ್ಳವರೂ ಇದ್ದಾರೆ. ಆದರೆ ಅಧಿಕ ಮಂದಿ ಇಂತಹ ಯೋಚನೆ ಇಲ್ಲದವರು.
– ಡಿ. ಐ. ಅಬೂಬಕರ್, ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.