(www.vknews.in) : ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಜುಲೈ1 ರಿಂದ 10 ಕೆಜಿ ಆಹಾರಧಾನ್ಯವನ್ನು ನೀಡಬೇಕಾಗಿತ್ತು, ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರೆಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಬಡವರಿಗೆ ಅಕ್ಕಿ ಕೊಡುವ ವಿಷಯದಲ್ಲಿ ರಾಜ್ಯದಲ್ಲಿರುವ ಬಿಜೆಪಿಯವರು ಕೇಂದ್ರದೊಂದಿಗೆ ಮಾತನಾಡಿ ಅಕ್ಕಿ ಕೊಡಿಸಬೇಕಿತ್ತು. ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಹಾಗೂ ರಾಜ್ಯ ಆಹಾರ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಕ್ಕಿ ಸರಬರಾಜು ಮಾಡಲು ಮನವಿ ಮಾಡಲಾಯಿತು.
ಜುಲೈ 1 ರಿಂದ ಅಕ್ಕಿ ನೀಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ರಾಜ್ಯಕ್ಕೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇಷ್ಟು ಪ್ರಮಾಣದ ಅಕ್ಕಿಯನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ರಚಿಸಿದ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಹಿಂದೆ ನಮ್ಮ ಸರ್ಕಾರ ಜನರಿಗೆ 7 ಕೆಜಿವರೆಗೆ ಅಕ್ಕಿ ಪೂರೈಸಲಾಗುತ್ತಿತ್ತು. ಈಗ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿಯೂ ಅಕ್ಕಿಯ ದರ ಹೆಚ್ಚಾಗಿದೆ ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.