ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಮುಂಬರುವ ದಿನಗಳಲ್ಲಿ ಬರ ಪರಿಸ್ಥಿತಿ ಎದುರಿಸಲು ಎಲ್ಲ ಅಧಿಕಾರಿಗಳು ಸಜ್ಜಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್ ಸುರೇಶ್ ರವರು ಎಲ್ಲ ಜಿಲ್ಲಾ ಅಧಿಕಾರಿಗಳಿಗೆ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆ.ಡಿ.ಪಿ) ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಚಿವರು ಇತ್ತೀಚಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲಾಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಪರಾಧದಲ್ಲಿ ಭಾಗಿಯಾದವರ ಹಾಗೂ ಅವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಾಕಿತು ಮಾಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 5% ರಷ್ಟು ಕಡಿಮೆ ಮಳೆ ಆಗಿದೆ. ಆದರೆ ಮಳೆ ಆಗಬೇಕಾದ ಸಮಯಕ್ಕೆ ಆಗಲಿಲ್ಲ ಆದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬಿತ್ತನೆ ಆಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಬರ ಎದುರಿಸುವ ಸಂಬಂಧ ಸಭೆ ನಡೆಸಿ ಸಂಬಂಧಿಸಿದವರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ತಾಲ್ಲೂಕುವಾರು ಟಾಸ್ಕ್ರ್ಸ್ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಗಾಗಿ ರೂ. 9.00 ಕೋಟಿಗಳ ಅನುದಾನ ಬಿಡುಗಡೆಯಗಿದೆ. ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾದಲ್ಲಿ ಸರಿದೂಗಿಸಿಕೊಳ್ಳಲು ಅನುದಾನ ಲಭ್ಯವಿದೆ. ಇಡೀ ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಅಭಾವ ಇರುವುದಿಲ್ಲ. 2-3 ಹಳ್ಳಿಗಳಲ್ಲಿ ಮಾತ್ರ ಅಭಾವ ಉಂಟಾಗಿದ್ದು ಆಯಾ ಹಳ್ಳಿಗಳಲ್ಲಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಸುದೈವದಿಂದ ಈ ವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ ಹಾನಿಗಿಲ್ಲ ಆದರೆ 2 ಜಾನುವಾರು ಜೀವ ಹಾನಿಯಾಗಿದೆ. ಅದಕ್ಕಾಗಿ ಪರಿಹಾರ ವಿತರಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉಂಟಾಗಬಹುದಾದ ಕೊರತೆಯನ್ನು ಅಂದಾಜಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ಉದ್ಭವವಾಗುವ ನೀರಿನ ಕೊರತೆಗನುಗುಣವಾಗಿ ಸಾಕಷ್ಟು ಮೇವು ಕಿಟ್, ಕುಡಿಯುವ ನೀರಿಗಾಗಿ ಅಂರ್ತಜಲ ಕೊಳೆವೆಬಾವಿಗಳನ್ನು ಗುತ್ತಿಗೆ ಪಡೆಯುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಮುಳಬಾಗಿಲು ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ಮಾತನಾಡಿ ಕಳೆದ ಸಭೆಯಲ್ಲಿ ಕೊರಿರುವ ಮಾಹಿತಿಗೆ ಸಂಬಂಧಿತ ಅಧಿಕಾರಿಗಳು ಈ ವರೆಗೆ ಉತ್ತರ ನೀಡಿರುವುದಿಲ್ಲ. ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿರುವ ವ್ಯವಸ್ಥೆಯ ವಿರುದ್ಧ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಮಾದಕ ದ್ರವ್ಯಗಳನ್ನು ಜಪ್ತು ಮಾಡಬೇಕು ಎಂದು ಅವರು ಸೂಚಿಸಿದರು. ಅನೈತಿಕ ಚಟುವಟಿಕೆಗಳಿಗೆ ಕೆಲ ಪೊಲೀಸ್ ಅಧಿಕಾರಿಗಳ ಕುಮ್ಮಕ್ಕು ಇದೆ ಎಂಬ ಆಪಾದನೆಗೆ ಮಾನ್ಯ ಸಚಿವರು ಮುಳಬಾಗಿಲು ಮತ್ತು ಕೆ.ಜಿ.ಎಫ್ ತಾಲ್ಲೂಕುಗಳ 27 ಸ್ಟೇಷನ್ ಗಳ ಅಧಿಕಾರಿ ಸಿಬ್ಬಂದಿಗಳನ್ನು ಸ್ಥಳ ಬದಲಾವಣೆ ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಬಾರ್ ಮತ್ತು ವೈನ್ ಶಾಪ್ಗಳು ನಿಗಧಿತ ಅವಧಿಯ ನಂತರವೂ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದ್ದು ಅಬಕಾರಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಅವರು ತಿಳಿಸಿದರು. ಜಿಲ್ಲೆಯಲ್ಲಿ ಯಾವುದೇ ಹೊಸ ಸಿ.ಎಲ್ 7 ಸ್ಥಾವರಗಳಿಗೆ ಅನುಮತಿ ನೀಡಲಾಗುವುದಿಲ್ಲ. ಈಗಾಗಲೇ ಅನುಮತಿ ಪಡೆದಿರುವ ಸಿ.ಎಲ್ 7 ಸ್ಥಾವರಗಳನ್ನು ಅಬಕಾರಿ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರಗಳು ಬರುತ್ತಿದ್ದು, ಅಬಕಾರಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ 15 ದಿನಗಳೊಳಗಾಗಿ ಸುದೀರ್ಘ ವರದಿ ನೀಡುವಂತೆ ತಿಳಿಸಿದರು. ಜಿಲ್ಲೆಯ ಯುವ ಜನತೆಗೆ ಮಾದಕ ದ್ರವ್ಯಗಳ ಪರಿಣಾಮದ ಬಗ್ಗೆ ಅಬಕಾರಿ ಇಲಾಖೆಯಿಂದ ಹೆಚ್ಚು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತ ಈಗಾಗಲೇ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 53ಸಾವಿರ ಹೆಕ್ಟೇರ್ ಜಮೀನಿನಲ್ಲಿ ಪ್ರಮುಖ ಬೆಳೆಯಾದ ರಾಗಿ ಬಿತ್ತನೆ ಮಾಡಲಾಗಿದೆ. ಶೇ 52% ರಷ್ಟು ಬಿತ್ತನೆ ಆಗಿದೆ. ಹಿಂಗಾರು ಹಂಗಾಮಿನಲ್ಲಿ 2600 ಹೆಕ್ಟೇರ್ ಹುರುಳಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4.7 ಕೋಟಿ ಬೆಳೆ ಪರಿಹಾರವನ್ನು 10700 ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 15ನೆ ನವೆಂಬರ್ ರಂದು 20.92 ಕೋಟಿ ಮೊತ್ತದ ಅನುದಾನ 92000 ಫಲಾನುಭವಿಗಳ ಖಾತೆಗೆ ನೇರವಾಗಿ ವಿತರಿಸಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು. ಸಚಿವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಆಲೂಗಡ್ಡೆ ಬೆಳೆಗೆ ಕಳಪೆ ಬೀಜ ಸರಬರಾಜು ಮಾಡಿದವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಕ್ರಮ ಮರಳು ಸಾಗಣಿಕೆ ವಿಷಯವಾಗಿ ಕೇವಲ ಕೃಷಿ ಉದ್ದೇಶಕ್ಕೆ ಪಿಡಿಓ ಗಳಿಂದ ಅನುಮತಿ ಪಡೆದುಕೊಂಡು ಕೆರೆಗಳಲ್ಲಿ ಮಣ್ಣು ತೆಗೆಯಲು ಸುತ್ತೋಲೆ ಹೊರಡಿಸಲು ಸಿಇಓ ರವರಿಗೆ ಸೂಚಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಎಫ್ ನಲ್ಲಿ ಎಂ.ಆರ್.ಐ ಯಂತ್ರ ಸ್ಥಾಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು. ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತಕ್ಷಣವೇ ತುಂಬುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯವಿರುವ ಕಡೆ ಹೊಸ ನಮ್ಮ ಕ್ಲಿನಿಕ್ ಗಳನ್ನು ಆರಂಬಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈಗಾಗಲೇ 2ನೇ ಕಂತು ಹಣ ಬಿಡುಗಡೆ ಮಾಡಲಾಗಿದ್ದು ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಉಳಿದ 25000 ಫಲಾನುಭವಿಗಳಿಗೆ ಹಣ ತಲುಪುವಂತೆ ಕ್ರಮ ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಯರಗೊಳ್ ಕುಡಿಯುವ ನೀರು ಯೋಜನೆಯಡಿಯಲ್ಲಿ ಕೋಲಾರ ತಾಲ್ಲೂಕಿನ 2500 ಮನೆಗಳಿಗೆ ಇನ್ನೂ ಕುಡಿಯುವ ನೀರು ಬರುತ್ತಿಲ್ಲ, ಮುಂದಿನ 45 ದಿನಗಳಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ವಹಿಸುವಂತೆ ಹಾಗೂ ಮಾಲೂರು ತಾಲ್ಲೂಕಿಗೆ ಸರಬರಾಜು ಮಾಡಲಾಗುವ ಮಾರ್ಗ ಮಧ್ಯೆ ಪೈಪ್ಲೈನ್ಗಳ ಸೋರಿಕೆ ತಡೆಗಟ್ಟಲು ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಕೋಲಾರ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿ, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಸೀರ್ ಅಹಮದ್, ಮಾಲೂರು ಶಾಸಕರಾದ ಕೆ.ವೈ ನಂಜೇಗೌಡ, ಮುಳಬಾಗಿಲು ಶಾಸಕರಾದ ಸಮೃದ್ಧಿ ವಿ. ಮಂಜುನಾಥ್, ಶ್ರೀನಿವಾಸಪುರ ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್ ಅನಿಲ್ ಕುಮಾರ್, ಸರ್ಕಾರದ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳಾದ ಡಾ. ಏಕ್ರೂಪ್ಕೌರ್, ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ನಾರಾಯಣ, ಕೆ.ಜಿ.ಎಫ್ ಪೊಲೀಸ್ ಅಧೀಕ್ಷಕರಾದ ಎಸ್. ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಉಪ ಅರಣ್ಯ ವಿಭಾಗಧಿಕಾರಿಗಳು ಏಡುಕೊಂಡಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.