ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕಳಪೆ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರಗಳ ಮಾರಾಟ ಕಂಡು ಬಂದಲ್ಲಿ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ, ಕೃಷಿ ಪರಿಕರ ಮಾರಾಟಗಾರರಿಗೆ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋಲಾರ ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಕೃಷಿ ರೈತರ ಪ್ರಮುಖ ಆದಾಯ ಮೂಲವಾಗಿರುತ್ತದೆ. ರೈತರು ಉತ್ತಮ ಫಸಲು ಪಡೆಯಲು ಆಧುನಿಕ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ರಸಗೊಬ್ಬರ, ಬಿತ್ತನೆಬೀಜ ಮತ್ತು ಕೀಟನಾಶಕಗಳ ಬಳಕೆ ಪ್ರಮುಖವಾಗಿರುತ್ತದೆ.
ಜಿಲ್ಲೆಯಲ್ಲಿ 440 ಸಂಖ್ಯೆಯ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿದ್ದು, ಬೆಳೆಗಳಿಗೆ ಅವಶ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ ಕೃಷಿ ಪರಿಕರ ಮಾರಾಟಗಾರರಿಗೆ ಸಂಬಂಧಿಸಿದ ಕಾನೂನುಗಳಾದ. ಅಗತ್ಯ ವಸ್ತುಗಳ ಅಧಿನಿಯಮ 1955, ಬೀಜಗಳ ಅಧಿನಿಯಮ 1966, ಬೀಜಗಳ ನಿಯಮಗಳ 1968, ಬೀಜಗಳ ನಿಯಂತ್ರಣ ಆದೇಶ 1983, ರಸಗೊಬ್ಬರ ಆದೇಶ 1973, ಕೀಟನಾಶಕ ಅಧಿನಿಯಮ 1968, ಕೀಟನಾಶಕ ನಿಯಮಗಳು, 1971 ಪ್ರಕಾರ ಯಾವುದೇ ಉಲ್ಲಂಘನೆಗಳನ್ನು ಮಾಡದೆ ಪಾಲನೆ ಮಾಡಬೇಕು ಎಂದು ಹೇಳಿದರು.
ರೈತರಿಗೆ ಬೇಕಾದ ಅಗತ್ಯ ರಸಗೊಬ್ಬರಗಳನ್ನು ದಾಸ್ತಾನು ಮಾಡಿ ಸಕಾಲದಲ್ಲಿ ವಿತರಣೆ ಮಾಡಬೇಕಾಗಿದ್ದು, ನಿಗಧಿಪಡಿಸಿದ ದರಗಳಿಂದ ಹೆಚ್ಚಿನ ದರಗಳಿಗೆ ಮಾರಾಟ ಮಾಡಬಾರದು. ದಾಸ್ತಾನು ಮತ್ತು ಮಾರಾಟ ದರಗಳನ್ನು ಎಲ್ಲಾ ಮಾರಾಟ ಮಳಿಗೆಗಳ ಬಳಿ ಎದ್ದು ಕಾಣುವಂತೆ ಪ್ರದರ್ಶನ ಮಾಡಬೇಕು. ರೈತರು ಖರೀದಿಸುವ ಪರಿಕರಗಳಿಗೆ ರಶೀದಿಯನ್ನು ತಪ್ಪದೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಗೆ ನಿಗಧಿಯಾಗಿರುವ ರಸಗೊಬ್ಬರ ದಾಸ್ತಾನನ್ನು ಮಾರಾಟಗಾರರು ಪಡೆದುಕೊಂಡು ಸೂಕ್ತ ಕಾಲದಲ್ಲಿ ವಿತರಣೆ ಮಾಡಿ ಪಿ.ಒ.ಎಸ್. ಯಂತ್ರದಲ್ಲಿ ತಪ್ಪದೇ ನಮೂದಿಸುವುದು. ಯಾವುದೇ ವ್ಯತ್ಯಾಸವಾದಲ್ಲಿ ಸಂಬಂಧ ಪಟ್ಟವರ ಪರವಾನಿಗೆಯನ್ನು ರದ್ದುಪಡಿಸಲಾಗುವುದು. ಜಿಲ್ಲೆಗೆ ನಿಗಧಿಪಡಿಸಿದ/ಸರಬರಾಜಾದ ರಸಗೊಬ್ಬರ ಹೊರ ರಾಜ್ಯಗಳಿಗೆ ಸಾಗಾಣಿಕೆ/ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ ಅವರು ಮಾತನಾಡಿ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್ ಸ್ವಾಮಿನಾಥನ್ ರವರ ಕ್ರಾಂತಿಯಿಂದಾಗಿ ಹೆಚ್ಚು ಇಳುವರಿ ಕೊಡುವ ಆಧುನಿಕ ಬೇಸಾಯ ಪದ್ಧತಿಯನ್ನು ರೈತರು ಅಳವಡಿಸಿಕೊಂಡಿದ್ದರು, ಆದರೆ ಪ್ರಸ್ತುತ ಭೂಮಿಯಲ್ಲಿನ ಫಲವತ್ತತೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವಾರು ರೈತರು ಸಾವಯವ ಬೇಸಾಯ ಪದ್ಧತಿಗೆ ಮರಳುತ್ತಿದ್ದಾರೆ.
ರಸಗೊಬ್ಬರಗಳಿಂದ ಅಥವಾ ಬೆಳೆಗಾಗಿ ಉಪಯೋಗಿಸುವ ರಸಾಯನಿಕಗಳಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ರಸಗೊಬ್ಬರಗಳ ಬಳಕೆ ಬಗ್ಗೆ ರೈತರಿಗೆ ಮಾರಾಟಗಾರರು ಸೂಕ್ತ ಮಾರ್ಗದರ್ಶನವನ್ನು ನೀಡುವುದರ ಮೂಲಕ ಮಣ್ಣು ಉಳಿಸುವ ಕಾರ್ಯವನ್ನು ಹಾಗೂ ದೇಶ ಸೇವೆಯಲ್ಲಿ ಭಾಗಿಯಾಗಬೇಕು. ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಯಾಗದಂತೆ ಅಕ್ರಮ ರಸಗೊಬ್ಬರ ದಾಸ್ತಾನು ಮಾಡುವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಕೃಷಿ ಪರಿಕರ ಮಾರಾಟಗಾರರು ಸರ್ಕಾರವು ಆಗಿಂದಾಗ್ಯ ಹೊರಡಿಸುವ ಅಧಿಸೂಚನೆಗಳು ಹಾಗೂ ನಿಯಮಾವಳಿಗಳನ್ನು ಅರಿತು ಜವಾಬ್ದಾರಿಯಿಂದ ರೈತರ ಬೆನ್ನಲುಬಾಗಿ ನಿಲ್ಲಬೇಕು ಎಂದು ತಿಳಿಸಿದರು.
ಇದಕ್ಕೂ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಫೂಟ್ಸ್ ತಂತ್ರಾಂಶದಲ್ಲಿ ರೈತರ ಪಹಣಿ ಜೋಡಣೆ ಹಾಗೂ ಇ.ಕೆ.ವೈ.ಸಿ ಆಂದೋಲನದ ಅಂಗವಾಗಿ ಸ್ಥಬ್ಧ ಚಿತ್ರಕ್ಕೆ ಚಾಲನೆ ನೀಡಿದರು ಮತ್ತು ಸಂಬಂಧಿತ ಪೋಸ್ಟರ್ಗಳನ್ನು ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ ವಣಿಕ್ಯಾಳ್, ಜಂಟಿ ಕೃಷಿ ನಿರ್ದೇಶಕರಾದ ಎಂ.ಆರ್ ಸುಮಾ, ನಿವೃತ್ತ ಡೀನ್ ರಾಜೇಗೌಡ, ರೇಷ್ಮೆ, ತೋಟಗಾರಿಕೆ ಹಾಗೂ ಕೃಷಿ ಮಾರಾಟ ಮಂಡಳಿಯ ಅಧಿಕಾರಿ ಸಿಬ್ಬಂಧಿಗಳು, ಕೃಷಿ ಪರಿಕರಗಳ ಮಾರಾಟಗಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.