(www.vknews.in) : ಹಝ್ರತ್ ಸ್ವಾಲಿಹರನ್ನು ಕೊಲ್ಲಲು ಅವರ ಮನೆಯನ್ನು ಸುತ್ತುವರಿದ ಒಂಬತ್ತು ಮಂದಿಯನ್ನು ಮಲಕ್ ಜಿಬ್ರೀಲರು ಬಂದು ತಡೆದರು. ಮಾತ್ರವಲ್ಲ ಎಲ್ಲರನ್ನೂ ನಿಮಿಷದಲ್ಲೇ ಕಲ್ಲೆಸೆದು ಕೊಂದರು.
ಮಾರನೆಯ ದಿನ ಒಂಬತ್ತು ಮಂದಿ ಒಂದೇ ಜಾಗದಲ್ಲಿ ಹಝ್ರತ್ ಸ್ವಾಲಿಹರ ಮನೆ ವಠಾರದಲ್ಲಿ ಸತ್ತು ಬಿದ್ದಿರುವುದನ್ನು ಕಂಡಾಗ ಸಮೂದ್ ಜನಾಂಗವರು ಪರಸ್ಪರ ಹೇಳ ತೊಡಗಿದರು. “ಇದು ನಮ್ಮ ಸ್ವಾಲಿಹನ ಕೆಲಸ. ಇವನನ್ನು ಹೇಗಾದರೂ ಸರಿ ಮಾಡಬೇಕು” ಎಂದು. ಬಳಿಕ ಅವರು ಹಝ್ರತ್ ಸ್ವಾಲಿಹರನ್ನು ಪುನಃ ಕೊಲ್ಲಲು ಬಂದರು. ಆಗ ಮಸೀದಿಯಲ್ಲಿದ್ದ ಪ್ರವಾದಿ ಸ್ವಾಲಿಹ್ರವರಲ್ಲಿ ಅಲ್ಲಾಹನು ಅಲ್ಲಿಂದ ಹೊರಹೋಗಿ ಒಂದು ಕಡೆ ಅಡಗಿ ಕುಳಿತು ಕೊಳ್ಳಲು ಹೇಳಿದನು. ಅವರು ಹೊರಗೆ ಅವಿತುಕೊಂಡರು. ಇತ್ತ ಶತ್ರುಗಳು ಬಂದಾಗ ಮಸೀದಿಯು ಖಾಲಿಯಾಗಿತ್ತು.
ಈ ಘಟನೆಯ ಬಳಿಕ ಒಂದು ದಿನ ಅವರ ಮುಖವೆಲ್ಲಾ ಒಂದು ತರ ಕೆಂಪಾಯಿತು. ಬಳಿಕ ಕಪ್ಪಾಗ ತೊಡಗಿತು. ಆಗ ಅವರಿಗೆ ಅಲ್ಲಾಹನ ಶಿಕ್ಷೆ ಶೀಘ್ರದಲ್ಲೇ ಬರಲಿದೆಯೆಂದು ತಿಳಿಯಿತು. ಕೂಡಲೇ ಅವರು ಶರೀರಕ್ಕೆ ನೋವು ತಗಲದ ಚರ್ಮದ ಬಟ್ಟೆಗಳನ್ನು ಧರಿಸಿ ದೊಡ್ಡ ದೊಡ್ಡ ಬಾವಿಗಳನ್ನು ಮಾಡಿ ಅದರಲ್ಲಿ ಅವಿತುಕೊಂಡರು.
ಮಾರನೆಯ ದಿನ ಅಲ್ಲಾಹನು ಹಝ್ರತ್ ಜಿಬ್ರೀಲರನ್ನು ಬೆಂಕಿಯ ಜ್ವಾಲೆಯನ್ನು ಅವರ ಮೇಲೆ ಎಸೆಯಲು ಕಳುಹಿಸಿದನು. ಈ ಪ್ರಕ್ರಿಯೆ ಎಂಟು ದಿನಗಳ ತನಕ ಮುಂದುವರಿಯಿತು. ಇದರಿಂದ ಅವರು ಸುಟ್ಟು ಬೂದಿಯಾದರು. ಬಳಿಕ ಅವರು ಭೂಮಿಯ ಒಂದು ಭಾಗದಿಂದ ಎತ್ತಿ ಅಲುಗಾಡಿಸಿದರು. ಆಗ ಅವರ ಬಿಡಾರಗಳು ಬಿದ್ದು ನಾಶವಾಯಿತು.
ಒಂದು ವಾರದ ಬಳಿಕ ಈ ಪ್ರಕ್ರಿಯೆ ನಿಂತಿತು. ಜನಜೀವನ ಸಾಮಾನ್ಯ ಗತಿಗೆ ಬಂತು. ನಂತರ ಕೆಲವು ವರ್ಷಗಳು ಕಳೆದು ಹಝ್ರತ್ ಸ್ವಾಲಿಹರು ಮತ್ತು ಇತರ ಮುಅ್ಮಿನುಗಳು ಅಲ್ಲಿಂದ ಬಿಟ್ಟು ಫಲಸ್ತೀನಿಗೆ ವಲಸೆ ಹೋದರು. ವಫಾತಾಗುವ ತನಕ ಅಲ್ಲೇ ಇದ್ದರು.
ಪ್ರವಾದಿ ಸ್ವಾಲಿಹರ ವಫಾತಿನ ನಂತರ ಅವರ ಜನಾಂಗವು ಯಮನಿಗೆ ಪಲಾಯನ ಗೈದರು. ಅಲ್ಲಿ ಹೋಗಿ ಅವರು ಎರಡು ಪಂಗಡಗಳಾಗಿ ವಿಭಜನೆಯಾಗಿ ವಾಸ ಮಾಡಲು ಶುರುಮಾಡಿದರು. ಒಂದು ಪಂಗಡವು ಯಮನಿನ ಹಳರಮೌತ್ ಎಂಬ ಜಾಗದಲ್ಲೂ ಮತ್ತೊಂದು ಪಂಗಡ ಅಲ್ಲೇ ಅದ್ನ್ ಎಂಬಲ್ಲಿಯೂ ವಾಸ ಮಾಡಲು ಆರಂಬಿಸಿದರು.
ಆದ್ ಗೋತ್ರಕ್ಕೆ ಮತ್ತು ಸಮೂದ್ ಗೋತ್ರಕ್ಕೆ ಬಂದ ನೈಸರ್ಗಿಕ ಅನಾಹುತ ತಮಗೆ ಬರಬಾರದೆಂಬ ಉದ್ದೇಶದಿಂದ ಹಳರಮೌತಿನಲ್ಲಿ ವಾಸ ಆರಂಬಿಸಿದ ಪಂಗಡದ ಅರಸ ಜುಂದು ಬಿನ್ ಆದ್ ಎಂಬವನು ಅಲ್ಲಿ ಒಂದು ದೊಡ್ಡ ಅರಮನೆಯನ್ನು ಕಟ್ಟಿಸಿದನು. ಅರಮನೆಯೆಂದರೆ, ಸಾಮಾನ್ಯ ಅರಮನೆಯಾಗಿರಲಿಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ನಿರ್ಮಿಸುವ ಗಗನಚುಂಬಿ ಕಟ್ಟಡಗಳಿಗೆ ಸವಾಲಾಗುವಂತಹ ಎಲ್ಲಾ ಸೌಖರ್ಯಗಳಿರುವ ಒಂದು ಅರಮನೆಯಾಗಿತ್ತು. ಇದರ ಬಗ್ಗೆ ಅಲ್ಲಾಹನು ಅವನ ಪವಿತ್ರ ಕುರ್ಆನಿನಲ್ಲಿ “ಬಹಳ ಎತ್ತರವಾದ ಬಲಿಷ್ಕ ಕೋಟೆ ಎಂದು ಬಣ್ಣಿಸಿದ್ದಾನೆ. ಆತನಿಗಾದರೆ ಅಲ್ಲಾಹನು ಅಸಾಮಾನ್ಯ ಶಕ್ತಿ ಕೂಡ ಕೊಟ್ಟಿದ್ದನು. ದೊಡ್ಡ ಗಾತ್ರದ ಮರಗಳನ್ನು ಆನೆಯಂತೆ ಒಂದು ಕೈಯಿಂದ ಎಳೆದು ತೆಗೆಯುತ್ತಿದ್ದನು. ಒಂದು ಕೈಯಿಂದ ಬೃಹದಾಕಾರದ ಬಂಡೆಗಳನ್ನು ಎತ್ತುತ್ತಿದ್ದನು. ರಾಕ್ಷಸ ಸಮಾನವಾದ ಈತ ಸುಮಾರು ಏಳುನೂರಕ್ಕಿಂತಲೂ ಹೆಚ್ಚು ಹೆಣ್ಮಕ್ಕಳನ್ನು ಮದುವೆಯಾಗಿದ್ದನು.
ರಾತ್ರಿ ಹಗಲು ಎಂಬ ವ್ಯತ್ಯಾಸವಿಲ್ಲದೆ ಜಾನುವಾರುಗಳಂತೆ ಅವರೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗುತ್ತಿದ್ದನು. ಇದರಲ್ಲಿ ಸಾವಿರಾರು ಮಕ್ಕಳು ಕೂಡ ಹುಟ್ಟಿದ್ದವು. ಒಟ್ಟಿನಲ್ಲಿ ಈತನ ಮಕ್ಕಳು ಮತ್ತು ಮೊಮ್ಮಕ್ಕಳಾಗಿ ಒಂದು ಮಹಾ ಸಾಮ್ರಾಜ್ಯವೇ ಸೃಷ್ಟಿಯಾದಾಗ ಈತನು ಈ ಜಗತ್ತು ತನ್ನದೆಂದು ಭಾವಿಸಿದನು. ತನ್ನ ಪತ್ನಿಯರೊಂದಿಗೆ ತನ್ನ ಅರಮನೆಯ ಮೇಲ್ಛಾವಡಿಯಲ್ಲಿ ಸಂಜೆಯ ವೇಳೆ ವಿರಾಮಕ್ಕೆ ಕುಳಿತರೆ ಅರಮನೆಯ ಎದುರಲ್ಲಿ ಇತರ ಯಾರೂ ನಡೆದು ಹೋಗಬಾರದಿತ್ತು. ಹೋದರೆ ಕೂಡಲೇ ಅವರನ್ನು ಹಿಡಿದು ಕಶಾಪು ಮಾಡುತ್ತಿದ್ದ. ಎಷ್ಟರತನಕವೆಂದರೆ ಈತನ ಅರಮನೆಯ ಎದುರಲ್ಲಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಒಂದು ಮಹಾ ಕಾಳಿಂಗ ಸರ್ಪವನ್ನು ಕೂಡ ಇಟ್ಟಿದ್ದನು. ಅದರ ಬುಸುಗುಟ್ಟಿಗೆ ಕೆಲವೊಮ್ಮೆ ದಾರಿಹೋಕರು ಬೆಚ್ಚಿ ನಡುಗುತ್ತಿದ್ದರು. ಒಟ್ಟಿನಲ್ಲಿ ಅಹಂಕಾರದಲ್ಲಿ ಮಿತಿಮೀರಿದಾಗ ಅಲ್ಲಾಹನು ಹಝ್ರತ್ ಜಿಬ್ರೀಲರನ್ನು ಕಳುಹಿಸಿ ಒಂದು ಘರ್ಜನೆ ಮಾಡಲು ಹೇಳಿದರು. ಅವರ ಆ ಮಹಾ ಘರ್ಜನೆಗೆ ಈತ ಮತ್ತು ಈತನ ಪರಿವಾರವು ಸತ್ತು ಹೋಯಿತು.
ಅದ್ನ್ ನಲ್ಲಿ ವಾಸವಾಗಿದ್ದ ಮತ್ತೊಂದು ಪಂಗಡ ಹಝ್ರತ್ ಸ್ವಾಲಿಹರು ಕಲಿಸಿದ ಧರ್ಮ ನೀತಿಯನ್ನು ಪಾಲಿಸಿಕೊಂಡು ನಡೆಯುವವರಾಗಿದ್ದರು. ಬೇಸಿಗೆ ಕಾಲದಲ್ಲಿ ಮಳೆಯಿಲ್ಲದೆ ಕೆಲವೊಮ್ಮೆ ಇವರಿಗೆ ನೀರಿಗೆ ಬಹಳ ತೊಂದರೆಯಾಗುತ್ತಿತ್ತು. ಆಗ ಅವರು ದೂರ ದೂರದ ಊರಿನಿಂದ ನೀರು ತರುತ್ತಿದ್ದರು. ಈ ವೇಳೆಯಲ್ಲಿ ಅಲ್ಲಾಹನು ಅವರಿಗೊಂದು ಬಾವಿಯನ್ನು ಕೊಟ್ಟು ಹೇಳಿದನು. “ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸದಾಚಾರಿಗಳಾಗಿ ನಡೆದರೆ ಆ ಬಾವಿಯಲ್ಲಿ ನಾನು ನಿಮಗೆ ನೀರಿಗೆ ಕೊರತೆ ಮಾಡೆನು. ದಿಕ್ಕಾರಿಗಳಾಗಿ ನಡೆದರೆ ನೀರನ್ನು ಬತ್ತಿಸುವೆನು ” ಎಂದು.
ಈ ಸಂದರ್ಭದಲ್ಲಿ ಇವರನ್ನು ಆಡಳಿತ ಮಾಡುತ್ತಿದ್ದ ಒಬ್ಬ ಒಳ್ಳೆ ಗುಣನಡತೆಯ ಅರಸನಿದ್ದನು. ಒಂದು ದಿನ ಆತ ಮರಣಹೊಂದಿದನು. ಈ ಕಾರಣದಿಂದ ಬಹಳ ಬೇಸರದಲ್ಲಿದ್ದ ಇವರ ಬಳಿ ಒಮ್ಮೆ ಇಬ್ಲೀಸನು ಬಂದು ಹೇಳಿದನು. ” ನೀವ್ಯಾಕೆ ಇಷ್ಟೊಂದು ಬೇಸರದಿಂದಿದ್ದೀರಿ!” ಅದಕ್ಕೆ ತಮ್ಮ ಮರಣ ಹೊಂದಿದ ಅರಸನ ಬಗ್ಗೆ ಹೇಳಿದರು. ಆಗ ಆತ ಹೇಳಿದ. “ಉಫ್.. ಅರಸ ಸಾಯಲಿಲ್ಲ. ಆತ ಇದ್ದಾನೆ. ಆತ ನಿಮಗೆ ಇಷ್ಟೆಲ್ಲಾ ಸೌಕರ್ಯಗಳನ್ನು ಮಾಡಿಕೊಟ್ಟೂ ನೀವು ಆತನನ್ನು ಆರಾಧನೆ ಮಾಡದ್ದರಲ್ಲಿ ಆತನಿಗೆ ಬೇಸರವಾಗಿ ಊರು ಬಿಟ್ಟಿದ್ದಾನೆ” ಎಂದು.
ಬಳಿಕ ಇಬ್ಲೀಸನು ಈ ಅರಸನ ರೂಪದಲ್ಲಿ ಒಂದು ಮೂರ್ತಿ ಮಾಡಿ ಅರಸ ಕುಳಿತುಕೊಳ್ಳುವ ಸಿಂಹಾಸನದಲ್ಲಿ ತಂದು ಕುಳ್ಳಿರಿಸಿ ಇವರಲ್ಲಿ ಹೇಳಿದನು. “ನೀವು ಅರಮನೆಗೆ ಹೋಗಿರಿ. ನಾನು ಹೇಗೆಲ್ಲಾ ಮಾಡಿ ಅರಸನನ್ನು ಅರಮನೆಗೆ ತಂದಿದ್ದೇನೆ. ನೀವು ಹೋಗಿ ಅವರಲ್ಲಿ ಮಾತನಾಡಿ ಬನ್ನಿರಿ” ಎಂದು.
ಇತ್ತ ಇಬ್ಲೀಸನು ಮೊದಲೇ ತನ್ನ ಸಂತಾನದಿಂದ ಒಂದು ಶೈತಾನನನ್ನು ಅದರೊಳಗೆ ಫಿಕ್ಸ್ ಮಾಡಿದ್ದನು. ಅಲ್ಲದೆ ಸಾಮಾನ್ಯವಾಗಿ ಇರುವಂತೆ ಗೌರವಕ್ಕೆ ಒಂದು ಪರದೆಯನ್ನೂ ಹಾಕಿದ್ದನು. ಅರಮನೆ ತಲುಪಿದ ಪ್ರಜೆಗಳು ಅರಸನ ಪ್ರತಿಮೆಯ ಎದುರಲ್ಲಿ ಕುಳಿತಾಗ ಅರಸನು ಕೇಳಿದನು. “ಪ್ರಜೆಗಳೇ, ನೀವ್ಯಾಕೆ ಇಷ್ಟು ಬೇಸರದಿಂದ ಇದ್ದೀರಿ? ನಿಮಗೆ ಏನಾಗಿದೆ?” ಆಗ ಅವರು ಅರಸನು ಇಷ್ಟು ದಿನ ಅರಮನೆಯಿಂದ ಅಗೋಚರವಾದದ್ದರ ಬಗ್ಗೆ ಹೇಳಿದರು. ಆ ವೇಳೆ ಅರಸನು “ನಾನು ಸುಮಾರು ನಾಲ್ಕುನೂರು ವರ್ಷಗಳಿಂದ ನಿಮ್ಮ ಆಡಳಿತ ಮಾಡುತ್ತಿದ್ದೇನೆ. ನಿಮಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಕೂಡ ಮಾಡಿ ಕೊಟ್ಟಿದ್ದೇನೆ. ಆದರೆ ನೀವು ನನ್ನನ್ನು ಪ್ರೀತಿಸಿದ್ದೀರೇ ಹೊರತು ಆರಾಧಿಸಲಿಲ್ಲ.
ಒಬ್ಬನೇ ಒಬ್ಬ ಒಂದು ಸುಜೂದು ಕೂಡ ನನಗೆ ಮಾಡಲಿಲ್ಲ. ಗಮನಾರ್ಹ ಸಂಗತಿಯೆಂದರೆ, ಈಗ ಅಲ್ಲಾಹನು ನನಗೆ ದೈವಿಕ ಉಡುಪನ್ನು ಉಡಿಸಿ ಅವನ ಸಂಗಾತಿಯನ್ನಾಗಿ ಮಾಡಿದ್ದಾನೆ. ಇನ್ನು ಮುಂದಕ್ಕೆ ನಾನು ತಿನ್ನುವುದಿಲ್ಲ, ಕುಡಿಯುವುದಿಲ್ಲ ಮತ್ತು ನಿದ್ರೆ ಮಾಡುವುದಿಲ್ಲ. ಆದ್ದರಿಂದ ನೀವು ನನಗೆ ಆರಾಧನೆ ಮಾಡಬೇಕು. ಅಲ್ಲಾಹನಾಗಿ ನಡೆಯುವ ಎಲ್ಲಾ ಕೆಲಸಗಳು ನನ್ನಿಂದ ನಡೆಯುತ್ತದೆ. ನಾವಿಬ್ಬರೂ ಪರಸ್ಪರ ಯಾವಾಗಲೂ ಸಂಪರ್ಕದಲ್ಲಿದ್ದೇವೆ”
ಆಗ ಅವರು ಹೇಳಿದರು. “ಪ್ರಭು.., ನಿಮ್ಮ ಶಬ್ದ ಕೇಳಿ ನಮಗೆ ಬಹಳ ಸಂತೋಷವಾಯಿತು. ಆದರೆ ಮುಖ ಕಾಣಲಿಲ್ಲ. ನಿಮ್ಮ ಆ ಮುಖವನ್ನು ಒಮ್ಮೆ ನೋಡಬೇಕು” ಎಂದರು. ಕೂಡಲೇ ಇಬ್ಲೀಸನು ಆ ಹಾಕಿದ ಪರದೆಯನ್ನು ತೆಗೆದನು. ನೋಡುವಾಗ ರಿಯಲಿ ಅರಸ. ಅವರಿಗೆ ಕೆಲವು ದಿನಗಳಿಂದ ಕಾಣೆಯಾಗಿದ್ದ ಅರಸ ಅಲ್ಲಾಹನ ಸಂಗಾತಿಯಾಗಿ ಬಂದು ಅವನ ಮುಖ ನೋಡಿದಾಗ ಬಹಳ ಸಂತೋಷವಾಯಿತು. ಎಡ ಬಲ ನೋಡದೆ ಎಲ್ಲರೂ ಸಾಷ್ಟಾಂಗ ಮಾಡಿದರು. ಆದರೆ ಅವರ ಮಧ್ಯೆ ಇದ್ದ ಹಂದಲಃ ಬಿನ್ ಸ್ವಫ್ವಾನ್ ಎಂಬವರು ಸಾಷ್ಟಾಂಗ ಮಾಡದೆ ಈ ಜನತೆಯಿಂದ ಬೇರ್ಪಟ್ಟು ಪವಿತ್ರ ಹರಮ್ ಶರೀಫಿನತ್ತ ಹೋಗಿ ಅಲ್ಲಿ ಮೊದಲಿನಂತೆಯೇ ಏಕ ಅಲ್ಲಾಹನನ್ನು ಆರಾಧಿಸುವಲ್ಲಿ ತೊಡಗಿದರು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ. ಮುಂದುವರಿಯುವುದು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.