(www.vknews.in) : ಮಗ ಹಝ್ರತ್ ಇಬ್ರಾಹೀಮರ ಕೈಹಿಡಿದು ತಂದೆ ತಾರಹ್ರವರು ಮನೆಗೆ ಕರಕೊಂಡು ಹೋದರು. ಮನೆ ತಲುಪಿದ ಕೂಡಲೇ ಮಗನನ್ನು ತನ್ನ ಹತ್ತಿರ ಕುಳ್ಳಿರಿಸಿ ಹೇಳಿದರು. “ನನ್ನ ಕಂದಾ, ನನಗೆ ನಿನ್ನಲ್ಲಿ ಒಂದೆರಡು ಮಾತು ಹೇಳಲಿಕ್ಕಿದೆ. ನಿನ್ನಲ್ಲಿ ನಾನು ಕಾಲುಹಿಡಿದು ಬೇಡಿಕೊಂಡು ಹೇಳುತ್ತೇನೆ. ನೀನು ಮುಂದಕ್ಕೆ ಈ ರೀತಿ ಮಾಡಬಾರದು. ನಿನ್ನ ಟೊಳ್ಳು ವಾದವನ್ನು ಬಿಟ್ಟು ನನ್ನೊಂದಿಗೆ ಸಹಕರಿಸಬೇಕು. ನಿನ್ನ ಸಹೋದರರು ಮಾಡುವಂತೆ ನೀನು ಕೂಡ ವಿಗ್ರಹ ಮಾರಾಟ ಮಾಡಲು ಮಾರುಕಟ್ಟೆಗೆ ಹೋಗಬೇಕು. ಬೀದಿ ಬೀದಿ ಸುತ್ತಾಡಿ ಮಾರಾಟ ಉತ್ತಮ ಮಾಡಬೇಕು” ಎಂದು.
ತಡಮಾಡದೆ ಹಝ್ರತ್ ಇಬ್ರಾಹೀಮರು “ನನಗೆ ಕೋಪವಿರುವ ಒಂದು ವಸ್ತುವನ್ನು ನಾನು ಹೇಗೆ ಮಾರಾಟ ಮಾಡುವುದು?” ಎಂಬ ಮರು ಪ್ರಶ್ನೆ ಕೇಳಿ ತಂದೆಯನ್ನು ಮತ್ತೂ ಕುಪಿತನಾಗುವಂತೆ ಮಾಡಿದರು. ತಂದೆ ತಾರಹ್ “ಹಾಗಾದರೆ ನೀನು ಅದನ್ನು ಮಾರಾಟ ಮಾಡುವುದಿಲ್ಲವಾ?” ಎಂದು ಕೇಳಿದರು. ಬಳಿಕ ತಂದೆ ತಾರಹ್ರವರು ಒಂದು ದೊಡ್ಡ ಮತ್ತು ಒಂದು ಚಿಕ್ಕ ವಿಗ್ರಹವನ್ನು ಮಗನಲ್ಲಿ ಕೊಟ್ಟು ಅದಕ್ಕೆ ಒಂದೊಂದು ಬೆಲೆ ಹೇಳಿ ಮಾರಾಟ ಮಾಡಲು ಹೇಳಿದರು. ಅವರದನ್ನು ಕೈಯಲ್ಲಿ ಹಿಡಿದುಕೊಂಡು “ಓ ತಂದೆಯವರೇ, ಈ ಜೀವವಿಲ್ಲದ ವಸ್ತು ನಿಮಗೆ ಆಹಾರ ಕೊಡುತ್ತದೆಯೆಂದು ನಂಬಿ ನೀವು ಅದಕ್ಕೆ ಆರಾಧನೆ ಮಾಡುತ್ತೀರಿ. ಇದು ಮಹಾ ತಪ್ಪು. ಹೀಗೆಯೇ ಮುಂದುವರಿದರೆ ಮುಂದಕ್ಕೆ ನಿಮಗೆ ಘೋರ ಶಿಕ್ಷೆ ಬರಲಿದೆ” ಎಂದು ತಾಕೀತು ಮಾಡಿದರು.
ಮಗನ ಈ ಉಪದೇಶ ಕೇಳಿದಾಗ ಕೆಂಡದಂತಾದ ತಾರಹ್ರವರು ಹೇಳಿದರು. “ನೀನು ಹೀಗೆಯೇ ಮುಂದುವರಿದರೆ ನಿನ್ನನ್ನು ನಾನು ಕಲ್ಲೆಸೆದು ಓಡಿಸುತ್ತೇನೆ. ಮತ್ತೆ ಈಕಡೆ ಕಾಣಬಾರದು” ಎಂದು. ಆಗ ಮಗ “ಪರವಾಗಿಲ್ಲ… ನಿಮಗೆ ಅಲ್ಲಾಹನು ಕ್ಷಮಿಸಲು ನಾನು ಅವನಲ್ಲಿ ಪಾಪಮುಕ್ತಿ ಕೇಳುತ್ತೇನೆ” ಎಂದು ಹೇಳಿ ಮನೆಯ ಎರಡು ಕೆಲಸದವರೊಂದಿಗೆ ಎರಡು ವಿಗ್ರಹಗಳನ್ನು ತೆಗೆದುಕೊಂಡು ಬಜಾರಿಗೆ ಹೋಗಿ ಅಲ್ಲಿ “ಈ ಬಲಹೀನವಾದ, ಮಾತನಾಡಲು ಬಾರದ, ಒಂದು ನೊಣ ಕೂಡ ಶರೀರದಲ್ಲಿ ಕುಳಿತರೆ ಅದನ್ನು ಓಡಿಸಲು ಶಕ್ತಿಯಿಲ್ಲದ ಈ ವಿಗ್ರಹಗಳನ್ನು ಯಾರು ಖರೀದಿಸುತ್ತೀರಿ?” ಎಂದು ಏರುದನಿಯಿಂದ ಹೇಳಿ ಜನರ ಗಮನ ಸೆಳೆಯುತ್ತಿದ್ದರು. ತಂದೆ ತಾರಹ್ರವರಿಗೆ ಸಮಾಜದಲ್ಲಿ ಮತ್ತು ನಮ್ರೂದನ ಬಳಿ ಬಹಳ ಗೌರವ ಇದ್ದ ಕಾರಣ ಇದನ್ನು ನೋಡುತ್ತಿದ್ದ ಸಾರ್ವಜನಿಕರು ಮಗ ಇಬ್ರಾಹೀಮರಲ್ಲಿ ಏನನ್ನೂ ಹೇಳದೇ ಸುಮ್ಮನಾಗುತ್ತಿದ್ದರು.
ಹೀಗೆಯೇ ಬಜಾರಿನಲ್ಲಿ ಕುಳಿತಿರುವಾಗ ಒಬ್ಬಳು ಮುದುಕಿ ಬಂದು ಹೇಳಿದರು. “ಈ ಎರಡು ವಿಗ್ರಹಗಳಲ್ಲಿ ಒಳ್ಳೆಯ ಶಕ್ತಿ ಇರುವ ಒಂದು ವಿಗ್ರಹವನ್ನು ನನಗೆ ಕೊಡು” ಆಗ ಹಝ್ರತ್ ಇಬ್ರಾಹೀಮರು ಹೇಳಿದರು. “ಇದರಲ್ಲಿ ಒಂದರಲ್ಲಿ ಕಟ್ಟಿಗೆ ಜಾಸ್ತಿ ಇದೆ. ಇದನ್ನು ತೆಗೆದುಕೊಳ್ಳಿ” ಎಂದು. ಮಹಿಳೆ ಹೇಳಿದರು. “ನನಗೆ ಕಟ್ಟಿಗೆ ಜಾಸ್ತಿ ಇರುವುದು ಗಂಜಿ ಮಾಡಲು ಒಲೆಗೆ ಇಡಲಿಕ್ಕೆ ಅಲ್ಲ. ನನಗೆ ಆರಾಧನೆ ಮಾಡಲು. ಯಾಕೆಂದರೆ, ಈ ಹತ್ತಿರದಲ್ಲಿ ನನ್ನ ಮನೆಯಿಂದ ನಾನು ಉಡುವ ಉಡುಪೆಲ್ಲಾ ಕಳವಾಗಿತ್ತು.
ಅದರೊಂದಿಗೆ ನಾನು ಆರಾಧಿಸುವ ನನ್ನ ಒಂದು ವಿಗ್ರಹ ಕೂಡ ಕಳವಾಗಿದೆ. ಈಗ ನಾನು ಒಂದು ಹೊಸ ವಿಗ್ರಹ ಖರೀದಿಸಿ ಅದಕ್ಕೆ ಆರಾಧನೆ ಮಾಡಿ ಮೊದಲು ಕಳವಾದ ನನ್ನ ವಸ್ತುಗಳು ಮತ್ತು ವಿಗ್ರಹ ಪುನಃ ನನಗೆ ಸಿಗುವಂತೆ ಆಗಬೇಕು” ಆಗ ಹಝ್ರತ್ ಇಬ್ರಾಹೀಮರು ಅವರಲ್ಲಿ ಹೇಳಿದರು. “ನೀನು ಆರಾಧಿಸುತ್ತಿರುವುದು ನಿಜವಾದ ದೈವ ಆಗಿದ್ದರೆ ನಿನ್ನ ಸಾಮಾನುಗಳನ್ನು ಮತ್ತು ಸ್ವಂತವನ್ನು ರಕ್ಷಣೆ ಮಾಡುತ್ತಿದ್ದನು. ಆದರೆ ಅದು ನಿಜವಾದ ದೈವ ಅಲ್ಲ. ಏನೇ ಇರಲಿ. ನಿನಗೆ ಈಗ ಕಳವಾದ ವಸ್ತುಗಳನ್ನು ಪುನಃ ಮರಳಿ ದೊರಕಿಸಿ ಕೊಟ್ಟರೆ ನಾನು ನಂಬುವ ಲೋಕ ರಕ್ಷಕನಾದ ಅಲ್ಲಾಹನಲ್ಲಿ ನೀನು ನಂಬಿಕೆ ಇಡುತ್ತಿಯಾ?” ಎಂದು ಕೇಳಿದರು. ಅದಕ್ಕೆ ಅವರು “ಒಕೆ.. ಖಂಡಿತಾ ನಂಬಿಕೆ ಇಡುತ್ತೇನೆ” ಎಂಬ ಭರವಸೆ ಕೊಟ್ಟರು.
ಮಹಿಳೆಯ ಬೇಡಿಕೆಯನ್ನು ಹಝ್ರತ್ ಇಬ್ರಾಹೀಮರು ಅಲ್ಲಾಹನ ಮುಂದಿಟ್ಟು ದುಆ ಮಾಡಿದರು. ಕೂಡಲೇ ಮಲಕ್ ಜಿಬ್ರೀಲರು ಕಳವಾದ ಸಾಮಾನುಗಳನ್ನು ತಂದು ಕೊಟ್ಟರು. ಹಝ್ರತ್ ಇಬ್ರಾಹಿಮರ ಬಳಿಯಲ್ಲೇ ಕುಳಿತಿದ್ದ ಮಹಿಳೆ ತನ್ನ ಕಳವಾದ ಬಟ್ಟೆ ಬರೆಗಳನ್ನು ತೆಗೆದುಕೊಂಡು ವಿಗ್ರಹವನ್ನು ಮಾತ್ರ ತುಳಿದು ತುಂಡು ತುಂಡು ಮಾಡಿದರು. ನಂತರ ಕಲಿಮ ಹೇಳಿ ಇಸ್ಲಾಮ್ ಸ್ವೀಕಾರ ಮಾಡಿದರು. ಬಳಿಕ ಆಕೆ ಪೇಟೆಗೆ ಹೋಗಿ ಜನ ಜಂಗುಳಿ ಇರುವಲ್ಲಿ “ಇನ್ನು ಯಾರೂ ವಿಗ್ರಹಗಳನ್ನು ಆರಾಧಿಸಬೇಡಿ. ಎಲ್ಲರೂ ಏಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ನಮ್ರೂದನು ನಮ್ಮ ದೈವವಲ್ಲ. ಆತ ಅಲ್ಲಾಹನ ಸೃಷ್ಟಿ ಮಾತ್ರ” ಎಂದು ಘೋಷಣೆ ಮಾಡ ತೊಡಗಿದರು.
ಊರಿನ ಒಬ್ಬಳು ಮಹಿಳೆ ಬಹಿರಂಗವಾಗಿ ಚಕ್ರವರ್ತಿ ನಮ್ರೂದನಲ್ಲದ ಬೇರೊಂದು ದೈವ ಇದೆಯೆಂದು ಹೇಳಿ ನಮ್ರೂದನಿಗೆ ಸವಾಲು ಹಾಕುವ ವಿಷಯ ಆತನಿಗೆ ತಿಳಿಯಿತು. ಕೂಡಲೇ ಆತ ಅವಳನ್ನು ತನ್ನ ಸನ್ನಿಧಿಗೆ ಹಾಜರು ಪಡಿಸಲು ಹೇಳಿದನು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.