(www.vknews. in) ; ಹೀಗೊಂದು ಹಜ್ ನ ಅನುಭವ ಪಾಠ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾಗುವ ಹಜ್ಜಾಜಿಗಳ ಸಾಲಿನಲ್ಲಿ ತಮ್ಮ ಮನೆಯವರು,ಸಂಬಂಧಿಕರು ಸಿಲುಕದಿರಲಿ ಎಂಬ ಸದುದ್ದೇಶದಿಂದ. ನಿಮಗೆ ತಿಳಿದಿರಲಿ, ಹಜ್ ಕರ್ಮದ ಕೆಲವು ಪ್ರಮುಖ ದಿನಗಳಲ್ಲಿ ಮತ್ತು ಪ್ರದೇಶಗಳಲ್ಲಿ ಹಜ್ಜಾಜಿಗಳ ಪಾಡು ತಮ್ಮನ್ನು ತಾವು ಮಾತ್ರ (ನಫ್ಸಿ ನಫ್ಸಿ) ಆಗಿರುತ್ತದೆ.
ಸಾಕಷ್ಟು ಸ್ವಯಂಸೇವಾ ಕಾರ್ಯಕರ್ತರು ಸೇವೆ ಸಲ್ಲಿಸಿದರೂ, ಪ್ರಮುಖವಾಗಿ ಅರಫಾ ದಿವಸ ಮಗ್ರಿಬ್ ನಂತರ ಮುಝ್ದಲಿಫಾ, ಅಲ್ಲಿಂದ ಜಮರಾತ್ ನಂತರ ಮುಂದುವರಿದು ಇಫಾಳ ತವಾಫ್ ಗೆ ಹರಮ್ ಗೆ ಹೋಗುವ ಸಮಯದಲ್ಲಿ ಹಾಗೂ ಜಮರಾತ್ ಗಳಿಗೆ ಹೋಗಿ ಹಿಂತಿರುಗುವಾಗ (ಈ ಸಮಯದಲ್ಲಿ ಸೌದಿ ಅಧಿಕಾರಿಗಳು ಜನದಟ್ಟಣೆ ನಿಯಂತ್ರಣ ಮಾಡಲು ಈ ಪ್ರದೇಶಗಳ ದಾರಿಗಳಲ್ಲಿ ಎಲ್ಲಾ ಕಡೆ ವಾಹನ ಸಂಚಾರ ನಿಷೇಧ ಮಾಡುತ್ತಾರೆ. ಹಾಜಿಗಳು ಒಂದೋ ಮೆಟ್ರೋ ರೈಲಿಗೆ ಸುಮಾರು 3 ಗಂಟೆಗಳ ಕಾಲ ತಮ್ಮ ಸರದಿಯಲ್ಲಿ ಕಾಯಬೇಕು. ಇಲ್ಲ ಹಲವು ಕಿಲೋಮೀಟರ್ ತನಕ ನಡೆದು ಹೋಗಬೇಕು) ಒಂದೋ ಹಾಜಿಗಳು ಈ ಸನ್ನಿವೇಶಕ್ಕೆ ಮಾನಸಿಕವಾಗಿಯೂ ದೈಹಿಕವಾಗಿಯೂ ಶಕ್ತವಾಗಿರಲೇಬೇಕು.
ಸಾಂಪ್ರದಾಯಿಕವಾಗಿ ವೃದ್ಧರು, ಅಶಕ್ತರು, ಒಂಟಿ ಮಹಿಳೆಯರು ಇರುವ ತಂಡದಲ್ಲಿ ಒಬ್ಬನೇ ಒಬ್ಬ ಯುವಕ ಅಥವಾ ಅನುಭವಸ್ಥ ಹಜ್ಜಾಜಿ ಇರುವುದೇ ಇಲ್ಲ. ಮಾತ್ರವಲ್ಲ ಈ ಸಂದರ್ಭವು ಹಲವು ಸಂಘಟನೆಗಳ ಸ್ವಯಂಸೇವಕರು ಮದೀನಾ ಹಾಗೂ ಮಿನಾ- ಅಝೀಝಿಯಾ- ಮಕ್ಕಾದದಲ್ಲಿ ತಮ್ಮಿಂದಾಗುವ ಶ್ಲಾಘನೀಯ ಸೇವೆ ಮಾಡುತ್ತಿರುತ್ತಾರೆ. ಅದರೂ ಕೆಲವೊಂದು ಸಂಧರ್ಭಗಳಲ್ಲಿ ಸ್ಯಯಂಸೇವಕರಿಗೆ ಅಶಕ್ತ ಹಾಜಿಗಳಗೆ ತಕ್ಷಣ ಸೇವೆ ಸಲ್ಲಿಸಲು ಅಸಾಧ್ಯ.
ಮೇಲೆ ಸೂಚಿಸಿದ ಅಶಕ್ತ ಹಾಜಿಗಳು, ಮಹಿಳೆಯರಿಗೆ ದಾರಿ ತಪ್ಪುವುದು. ಈ ಸಂಧರ್ಭದಲ್ಲಿ ಅವರಿಗೆ ಸ್ಥಳೀಯ ಅಧಿಕಾರಿಗಳಲ್ಲಿ ಮಾತನಾಡಲು ಭಾಷೆಯೂ ತಿಳಿದಿರುವುದಿಲ್ಲ. ಸಹಾಯಕ್ಕೆ ತಕ್ಷಣ ಯಾರೂ ಸಿಗುವುದೂ ಇಲ್ಲ. ನನ್ನ ಅನುಭವದಲ್ಲಿ ಈ ಸಂಧರ್ಭಗಳಲ್ಲಿ ಹಾಜಿಗಳು ಭಯದಿಂದ ಅಳುತ್ತಾ ಬಿಸಿಲ ಬೇಗೆಯಲ್ಲಿ ಒಂದು ಮೂಲೆಯಲ್ಲಿ ಕುಳಿತದ್ದನ್ನು ಕಂಡಿದ್ದೇವೆ. ನಮ್ಮ ಸ್ವಯಂ ಸೇವಕರು ಇವರು ಇಂಡಿಯನ್ ಹಾಜಿಗಳು ಎಂದು ಮನವರಿಕೆಯಾದಾಗ ಅವರಿಗೆ ಸಾಂತ್ವನ ನೀಡಿ ಅವರ ಸೂಕ್ತ ಪ್ರದೇಶಕ್ಕೆ ತಲುಪಿಸಿದ್ದೇವೆ..
ನಮ್ಮ ಅನುಭವದ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ
ದಯವಿಟ್ಟು ಊರಿನಿಂದ ಇನ್ನು ಮುಂದೆ ಹಜ್ ಗೆ ವಯಸ್ಕರು,ರೋಗಿಗಳು, ಮಹಿಳೆಯರನ್ನು ಹಜ್ ಗೆ ಕಳುಹಿಸುವಾಗ ಕನಿಷ್ಟ ಒಂದು ತಂಡದಲ್ಲಿ (ಕವರ್ ನಂಬರಲ್ಲಿ) ಸೌದಿ ಅರೇಬಿಯಾದಲ್ಲಿ ಈ ಮೊದಲು ಉದ್ಯೋಗ ಯಾ ಉಮ್ರಾ ಮಾಡಿ ಅನುಭವ ಇರುವ ಯಾ ಕನಿಷ್ಠ ಅಲ್ಪ ಸ್ವಲ್ಪ ಅರಬಿ ತಿಳಿದಿರುವ ಯಾರಾದರೂ ಇದ್ದರೆ ಉತ್ತಮ, ಇಲ್ಲಾ ಕನಿಷ್ಠ ತಮ್ಮ ಆಪ್ತ ಸಂಬಂಧಿಕರಾದ ಯುವಕರು ಯಾ ಮಧ್ಯಮ ವಯಸ್ಸಿನವರನ್ನು ಅವರ ಜತೆಯಾಗಿ ಕಳುಹಿಸಿ..
ಅದೇ ರೀತಿ ಭಾರತೀಯ ಹಜ್ ಕಮಿಟಿಯೂ ಕೂಡಾ ಸಾಕಷ್ಟು ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕನಿಷ್ಠ ನೂರು ಹಾಜಿಗಳಿಗೆ ಒಬ್ಬ ಅಮೀರ್ (ಖಾದಿಮುಲ್ ಹಜ್ಜಾಜ್) ನೇಮಿಸಬೇಕು..ಮತ್ತು ತಮ್ಮ ಖಾದಿಮ್ ಯಾರೆಂದು ಊರಿನಲ್ಲೇ ಪರಿಚಯಿಸಿ ಅವರು ಊರಿನಿಂದ ಮದೀನಾ- ಮಕ್ಕಾ ಗೆ ಹೋಗಿ ಹಿಂತಿರುಗಿ ಬರುವ ತನಕ ಇಂಡಿಯನ್ ಹಜ್ ಮಿಶನ್ ಮೂಲಕ ಹಾಜಿಗಳಿಗೆ ತಮ್ಮಿಂದಾಗುವ ಎಲ್ಲಾ ಸೇವೆ ನೀಡುತ್ತಿರಬೇಕು. (ಪ್ರಸಕ್ತ ಒಂದು ವಿಮಾನಕ್ಕೆ ಒಬ್ಬ ಖಾದಿಮ್ ಎಂಬುದು ಎಲ್ಲಾ ಹಾಜಿಗಳಿಗೂ ಸೇವೆ ಸಲ್ಲಿಸಲು ಅನಾನುಕೂಲ.. ಹಲವು ಹಾಜಿಗಳಿಗೆ ತಮ್ಮ ಖಾದಿಮ್ ಯಾರೆಂದು ಗೊತ್ತಿರುವುದೇ ಇಲ್ಲ) ಹಾಜಿಗಳು ತಮ್ಮ ಖಾದಿಮ್ – ಹಜ್ ಮಿಶನ್ ಮೂಲಕ ಸಮನ್ವಯದ ಕೊರತೆಯಿಂದಲೂ (Miss Communication) ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಜ್ ಮಾಡಿ ಊರಿಗೆ ಹಿಂತಿರುಗುವ ಹಾಜಿಗಳಲ್ಲಿ ನಮ್ಮ ವಿನಂತಿ.. ಹಜ್ಜಾಜಿಗಳು ಹಜ್ ಪೂರ್ಣಗೊಂಡ ಧನ್ಯತಾ ಭಾವದೆಡೆ ತಾವು ಊರಿಗೆ ಹೋದ ನಂತರ ತಾವು ಎದುರಿಸಿದ ಸಂಕಷ್ಟ, ಸವಾಲುಗಳ ಬಗ್ಗೆ ದೂರನ್ನು ಭಾರತೀಯ ಹಜ್ ಕಮಿಟಿ ಯಾ ಸಂಬಂಧಪಟ್ಟ ಆಧಿಕಾರಿಗಳಿಗೆ ಲಿಖಿತವಾಗಿ ದೂರು ಕೊಡಬೇಕು ಯಾ ತಮ್ಮಲ್ಲಿರುವ ಫೋಟೋ, ವೀಡಿಯೋಗಳ ದಾಖಲೆಗಳ ಮೂಲಕ ಇಮೇಲ್ ಮೂಲಕವಾದರೂ ಕಳುಹಿಸಲು ಹಿಂಜರಿಯಬಾರದು.. ಹೆಚ್ಚಿನ ಹಾಜಿಗಳಿಗೆ ನಾವು ಈ ಬಗ್ಗೆ ಮೊದಲು ಮನವರಿಕೆ ಮಾಡಿಕೊಟ್ಟರೂ ಊರಿಗೆ ಹೋದ ನಂತರ ಎಲ್ಲರೂ ಮರೆತುಬಿಡುತ್ತಾರೆ..ಆದರೆ ತಮ್ಮ ಸಣ್ಣ ಪ್ರಯತ್ನ ಮುಂಬರುವ ಲಕ್ಷಾಂತರ ಹಾಜಿಗಳಿಗೆ ಉಪಯುಕ್ತ ವಾಗುವುದೆಂಬುದನ್ನು ಮರೆಯಬಾರದು..
ಖಾಸಗಿ ಟೂರ್ ಗಳಲ್ಲಿ 7 ರಿಂದ 10 ಲಕ್ಷಗಳವರೆಗೆ ಖರ್ಚು ಮಾಡಿ ಬರುವ ಹಾಜಿಗಳಿಗೆ ಆಯಾ ಟೂರ್ ಅಮೀರ್ ಗಳ ನೇತೃತ್ವದಲ್ಲಿ ಅಶಕ್ತ ಹಾಜಿಗಳಿಗೆ ಉತ್ತಮ ಸೇವೆ ಸಿಗುವುದೆಂದು ಹಾಜಿಗಳಿಂದ ಕೇಳಿದ್ದೇವೆ..ಆದರೂ ಬಡ ಹಾಗೂ ಮಧ್ಯಮ ವರ್ಗದವರಿಗೆ ಇದು ದುಬಾರಿ ಖರ್ಚು..
ಅಲ್ ಹಂದುಲಿಲ್ಲಾಹ್ ಈ ವರ್ಷದ ಹಜ್ ಯಾವುದೇ ಗಂಭೀರವಾದ ಅಪಘಾತ-ಅವಘಡಗಳಿಲ್ಲದೇ ಸುಗಮವಾಗಿ ನಡೆದಿದೆ.. ಸರ್ವ ಶಕ್ತನಾದ ಅಲ್ಲಾಹನು ಈ ಬಾರಿ ಹಜ್ ಗೆ ಬಂದ ಎಲ್ಲಾ ಹಾಜಿಗಳ ಹಜ್ ಮಕ್ಬೂಲ್ ಹಾಗೂ ಮಬ್ರೂರ್ ಆಗಿ ಸ್ವೀಕರಿಸಲಿ..ಆಮೀನ್..
ಕೊನೆಯದಾಗಿ ಮಾಧ್ಯಮ ಮಿತ್ರರಲ್ಲಿ ಹಾಗೂ ಓದುಗರಲ್ಲಿ ಒಂದು ವಿನಂತಿ..ನಾವು ಏನಾದರೂ ಈ ವಿಷಯದಲ್ಲಿ ಮಾಧ್ಯಮ ಮೂಲಕ ಹಾಗೂ ಜಾಲತಾಣಗಳಲ್ಲಿಯೂ ಸಂಬಂಧಪಟ್ಟವರ ಗಮನಕ್ಕೆ ತಂದು ಮುಂಬರುವ ವರ್ಷಗಳಲ್ಲಿಯಾದರೂ ಹಜ್ ಗೆ ಬರುವ ಹಾಜಿಗಳಿಗೆ ಈ ಸಮಸ್ಯೆಗಳಿಗೆ ಪರಿಹಾರವಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಿಂದಾಗುವ ಪ್ರಯತ್ನ ಪಡೋಣ..
✍️ ಮುಹಮ್ಮದ್ ಸಲೀಮ್ ಜಿ.ಕೆ, ಮದೀನಾ ಮುನವ್ವರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.