(www.vknews.in) : ಕಛೇರಿಯಲ್ಲಿ ಕೂತು ಪುಸ್ತಕ ವಾಚನದಲ್ಲಿ ಮಗ್ನನಾಗಿದ್ದಾಗ, ಪರ್ದಾದಿಂದ ಸಂಪೂರ್ಣ ಮುಚ್ಚಿಕೊಂಡಿರುವ, ಸಾಧಾರಣ ವಯಸ್ಸಿನ ಮಹಿಳೆಯೋರ್ವರು ನನ್ನೊಂದಿಗೆ ತುಂಬಾ ಹೊತ್ತು ವಿಚಾರಗಳನ್ನು ಹಂಚಿಕೊಂಡರು. ಅವರು ಅವರ ಕುಟುಂಬದ ಕೆಲವು ನೋವುಗಳನ್ನು ಹಂಚಿಕೊಳ್ಳಲೆಂದೇ ಕಛೇರಿಗೆ ಬಂದಿದ್ದರು. ಮತ್ತೆ ತಡವರಿಸದೆ ನೇರವಾಗಿ ಅವರು ಮಾತಿಗಿಳಿದರು. ನಾನು, ಪತಿ, ಮೂವರು ಗಂಡು ಮಕ್ಕಳಿರುವ ಕುಟುಂಬ ನಮ್ಮದು. ಪತಿ ಹಗಲಿರುಳೂ ತನ್ನನ್ನು ಕಠಿಣ ದುಡಿಮೆಗೊಡ್ಡಿ ನಮ್ಮ ಬದುಕನ್ನು ಹಸನಾಗಿಸುತ್ತಿದ್ದರು.
ನಮ್ಮ ಬೇಕುಬೇಡಗಳನ್ನು ಪೂರೈಸುತ್ತಿದ್ದರು. ನನ್ನನ್ನೂ ಮಕ್ಕಳನ್ನೂ ಅತಿಯಾಗಿ ಪ್ರೀತಿಸುತ್ತಿದ್ದರು… ಮಕ್ಕಳು ಬೆಳೆದು ಕಾಲೇಜು ಮೆಟ್ಟಲೇರಿರುವಾಗ, ನಿಮಗೆ ಈ ಕೂಲಿ ಕೆಲಸಕ್ಕಿಂತ ಯಾವುದಾದರೂ ಮರ್ಯಾದೆಯ ಕೆಲಸ ನಿರ್ವಹಿಸಬಾರದೇ? ಏನಾದರೂ ಬ್ಯುಸಿನೆಸ್ ಮಾಡಿದರೇನು? ದಿನಾ ನಾನವರನ್ನು ಚುಚ್ಚಿ, ಸ್ವಂತ ವ್ಯಾಪಾರಕ್ಕಿಳಿಯುವಂತೆ ಒತ್ತಡ ಹೇರುತ್ತಿದ್ದೆ. ಆದರೆ, ಅವರಿಗದು ನಾಟುತ್ತಿರಲಿಲ್ಲ. ಅವರು ತಮ್ಮ ಅಸಹಾಯಕತೆಯನ್ನು ಅರುಹುತ್ತಿದ್ದರು. ನನ್ನ ಇಬ್ಬರು ಅಕ್ಕಂದಿರನ್ನು ಕಟ್ಟಿಕೊಂಡವರು, ಊರಲ್ಲೇ ವ್ಯಾಪಾರ, ವಹಿವಾಟುಗಳೆಂದು ಪುರುಸೊತ್ತಿಲ್ಲದೆ ಓಡಾಡುತ್ತಿದ್ದರು. ತಂಗಿಯರ ಗಂಡಂದಿರಿಬ್ಬರು ಗಲ್ಫ್ನಲ್ಲಿದ್ದು ಐಷಾರಾಮಿ ಜೀವನ ನಡೆಸುತ್ತಿರುವಾಗ, ನನ್ನವರು ಕೂಲಿ ಕೆಲಸದ ಬದುಕಿಗೆ ಒಗ್ಗಿಕೊಂಡದ್ದು ನನಗಿಷ್ಟವಿರಲಿಲ್ಲ. ನಾನೂ ಮಕ್ಕಳು ಜತೆಗೂಡಿ ಅವರನ್ನು ಚುಚ್ಚುತ್ತಿದ್ದೆವು. ಅಣಕಿಸುತ್ತಿದ್ದೆವು. ವ್ಯಾಪಾರ ನನ್ನಿಂದಾಗದು ರಝಿಯಾ… ಅದಕ್ಕೆ ಧಾರಾಳ ಬಂಡವಾಳ ಬೇಕು.
ನಮ್ಮಂತಹವರು ಹೀಗೆ ಕೂಲಿ ಕೆಲಸ ಮಾಡಿದರೆ, ವಾರಕ್ಕೊಮ್ಮೆಯಾದರೂ ಸಂಬಳ ಪಡೆದು, ಇದ್ದುದ್ದನ್ನು ತಿಂದು ಹಾಯಾಗಿ ಬದುಕ ಬಹುದು. ಮಸೀದಿಯ ಐದು ಹೊತ್ತಿನ ಜಮಾಅತ್ ನಮಾಝಿಗೂ ಭಾಗವಹಿಸಲು ಸಾಧ್ಯವಾಗುತ್ತಿದೆ. ಬರ್ಕತ್ತೂ ಇದೆ. ಹೇಳು, ಅಲ್ಲಾಹನು ನಮಗೇನು ಕಮ್ಮಿ ಮಾಡಿದ್ದಾನೆ? ಇದರಲ್ಲಿ ಮರ್ಯಾದೆಗೇನು ತೊಂದರೆ? ಇನ್ನೊಬ್ಬರ ಮುಂದೆ ಕೈಚಾಚದಂತೆ, ಅಲ್ಲಾಹನು ಸ್ವಾಭಿಮಾನದ ಬದುಕು ನೀಡಿಲ್ಲವೇ? ಮತ್ತೊಬ್ಬರ ಐಷಾರಾಮವನ್ನು ಕಂಡು, ಕೈಯಲ್ಲಿರುವ ಹಕ್ಕಿಯನ್ನು ಚೆಲ್ಲಿ, ಹಾರುವ ಹಕ್ಕಿಯನ್ನು ಹಿಡಿಯಲು ಓಡುವುದು ನನ್ನಿಂದಾಗದು. ಮೂರ್ಖತನವದು. ಸ್ಪರ್ಧೆಯ ಈ ಯುಗದಲ್ಲಿ ವ್ಯಾಪಾರ ಮಾಡುವುದೂ ಅಷ್ಟು ಸುಲಭವಲ್ಲ ರಝಿಯಾ… ಅನುಭವದವರೇ ಮಗುಚಿ ಬೀಳುತ್ತಿದ್ದಾರೆ…
ಕೈಲಾಗದವ ಮೈಪರಚಿಕೊಂಡಂತೆ, ಎಂದು ನಾನವರ ಉಪದೇಶವನ್ನು ಗೇಲಿ ಮಾಡಿದೆ. ನಿಜವಾಗಿ, ಭೌತಿಕತೆಯ ನಾಗಾಲೋಟಕ್ಕೆ ನಾನು ಬಲಿಯಾಗಿದ್ದೆ. ನನ್ನ ಸಹೋದರಿಯರ ಐಷಾರಾಮದ ಬಣ್ಣದ ಬದುಕನ್ನು ಕಂಡು, ನಾನೂ ಜೊಲ್ಲು ಸುರಿಸುತ್ತಿದ್ದೆ. ನನ್ನವರೊಂದಿಗೆ ಕೃತಜ್ಞತೆ ಎಂಬುದು ನನಗಿರಲಿಲ್ಲ. ಈ ಮಧ್ಯೆ ನನ್ನವರು ಎರಡು ಬಾರಿ ತೀವ್ರ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಯಲ್ಲಿ ಕೂತು ಅವರ ಸೇವೆ ಮಾಡಲೂ ನಾನು ಹೋಗಿರಲಿಲ್ಲ. ನನ್ನ ದುಷ್ಟ ಚಿತ್ತ, ಶೈತಾನಿಯತ್ ನನ್ನನ್ನು ನಾಶಪಡಿಸಿತು. ಪಾಪ, ಅವರು ನೋವಿನಿಂದ ಚೀರಾಡಿದರು. ಒದ್ದಾಡಿದರು. ಮೂರನೆಯ ಬಾರಿ ಆಸ್ಪತ್ರೆಗೆ ದಾಖಲಾಗಿ ಎಂಜಿಯೋಗ್ರಾಮ್ ನಡೆಸಿದಾಗ, ಅಪಾಯ ತಪ್ಪಿದ್ದಲ್ಲವೆಂದೂ, ಶಸ್ತ್ರಚಿಕಿತ್ಸೆಯ ತುರ್ತು ಅಗತ್ಯವನ್ನೂ ವೈದ್ಯರು ಒತ್ತಿ ಹೇಳಿದ್ದರು. ಪಾಪ, ಹಣ ಎಲ್ಲಿಂದ ಹೊಂದಿಸುವುದೆಂದು ಅರಿಯಲಾಗದೆ, ಮನೆಗೆ ಬಂದು ದಿನಾ ಮಾತ್ರೆಗಳನ್ನು ನುಂಗಿ ನೀರು ಕುಡಿದರು… ಯಾರ ಮುಂದೆಯೂ ಕೈಯೊಡ್ಡಲಿಲ್ಲ. ಸ್ವಾಭಿಮಾನ ಅವರ ಅಭಿಮಾನದ ಸಂಕೇತವಾಗಿತ್ತು…
ಭವಿಷ್ಯದಲ್ಲಿ ನನಗೆ ನೆರಳಾಗುವ ಮೂವರು ಗಂಡುಮಕ್ಕಳು ನನ್ನ ಮುಂದೆ ಬೆಳೆಯುತ್ತಿದ್ದಾರೆಂಬ ಅಹಂನಲ್ಲಿ ನಾನು ತೇಲಾಡುತ್ತಿದ್ದೆ. ಮಕ್ಕಳ ಬಗ್ಗೆ ಪಕ್ಕದ ಮನೆಯವರ ಮುಂದೆ, ಪ್ರಸ್ತಾಪಿಸಿ ಎದೆಯುಬ್ಬರಿಸಿ, ಕೊಚ್ಚಿಕೊಳ್ಳುತ್ತಿದ್ದೆ. ನಿಜವಾಗಿ ಗಂಡು ಮಕ್ಕಳನ್ನು ನಂಬಿಕೊಂಡೇ ನಾನು ನನ್ನ ಗಂಡನಿಗೆ ಎದುರಾಡುತ್ತಿದ್ದುದು. ಹತ್ತು-ಹಲವು ಕನಸುಗಳನ್ನು ಕಟ್ಟಿಕೊಂಡಿದ್ದೆ. ದಿನಗಳುರುಳಿದಂತೆ, ಮೂವರು ಮಕ್ಕಳು ಪದವಿ ಪಡೆದು, ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡರು. ಮುಂದೆ ಉನ್ನತ ಶಿಕ್ಷಣ ಪಡೆದ ಮತ್ತು ಶ್ರೀಮಂತ ಕುಟುಂಬದಿಂದಲೇ ಅವರ ವಿವಾಹ ನಡೆಸಿ ಕೊಟ್ಟೆವು…
ರಝಿಯಾ… ಕಪಾಟಿನ ಲಾಕರ್ನಲ್ಲಿರುವ ನಿನ್ನ ಚಿನ್ನವನ್ನು ಮಾರಿ, ನನ್ನ ಹೃದಯ ಶಸ್ತ್ರಚಿಕಿತ್ಸೆ ನಡೆಸಬಹುದಿತ್ತೆಂದು ನನ್ನವರು ಅಲವತ್ತು ತೋಡಿಕೊಂಡರು. ಚಿಗುರು ಆಸೆ ವ್ಯಕ್ತಪಡಿಸಿದರು. ಅವರು ಮಹರ್ಗೆ ನೀಡಿದ ಹಾಗೂ ಆ ಬಳಿಕ ನನಗೆ ಉಡುಗೊರೆ ನೀಡಿದ ಚಿನ್ನದ ಹಾರಗಳೆರೆಡೂ ಕಪಾಟಿನಲ್ಲಿತ್ತು… ಮಾರುವುದು ಬೇಡ. ನೀವದನ್ನು ಮೂರು ತಿಂಗಳೊಳಗೆ, ಬಿಡಿಸಿ ಕೊಡುವುದಾದರೆ ಫೈನಾನ್ಸ್ನಲ್ಲೆಲ್ಲಾದರೂ ಅಡವಿಡಿ ಎಂಬ ಷರತ್ತು ವಿಧಿಸಿದೆ. ಆದರೆ, ಬಡ್ಡಿ ವ್ಯವಹಾರದಿಂದ ಸದಾ ದೂರ ಓಡುವ ನನ್ನವರು ಅದನ್ನು ಅಡವಿಡಲು ತಯಾರಾಗಲಿಲ್ಲ… ಮಾರಿದರೆ ಮುಂದೆ ಖರೀದಿಸಲು ಸಾಧ್ಯವಾಗದೆಂದು ನಾನೂ ಪಟ್ಟು ಹಿಡಿದೆ… ನನ್ನ ಜೀವಕ್ಕಿಂತ ನಿನಗೆ ಚಿನ್ನವೇ ದೊಡ್ಡದಾದರೆ, ರಝಿಯಾ. ಪರವಾಗಿಲ್ಲ. ಬೇಡ, ಬಿಡು. ಅಲ್ಲಾಹನು ಕೊಟ್ಟ ಆಯುಷ್ಯದಷ್ಟೇ ಬದುಕುವೆ… ಎಂದವರು ನೋವನ್ನು ಸಹಿಸಿಕೊಂಡು ಸಂಯಮ ಪಾಲಿಸಿದರು.
ಅದೊಂದು ಮಧ್ಯರಾತ್ರಿ ಏನಾಯಿತೋ… ಅವರು ಎದೆನೋವಿನಿಂದ ನರಳುತ್ತಲೇ, ತಟ್ಟನೆ ಸ್ತಬ್ಧ ರಾದರು. ಹೌದು ಮಲಕುಲ್ ಮೌತ್ ಅವರ ಆತ್ಮವನ್ನು ಎತ್ತಿಕೊಂಡು ಹೋದರು. ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್… ಎನ್ನುತ್ತಲೇ, ಆ ಮಾತೆ, ಉಮ್ಮಳಿಸಿ ಬಂದ ದುಃಖವನ್ನು ಅದುಮಿಡಲು ಸಾಧ್ಯವಾಗದೆ, ಬಿಕ್ಕಿಬಿಕ್ಕಿ ಅತ್ತುಬಿಟ್ಟರು. ಮುಖ ಕವಚದ ಎಡೆಯಿಂದ, ಕರವಸ್ತ್ರದಲ್ಲಿ ಕಣ್ಣೀರೊರೆಸಿಕೊಂಡರು. ಕ್ಷಣ ಹೊತ್ತು ಮೌನವಾಗಿ, ಮತ್ತೆ ಮಾತು ಮುಂದುವರಿಸಿದರು… ಆದರೆ, ಸಿದ್ದೀಕ್ ಭಾಯ್… ನಂತರದ ದಿನಗಳಲ್ಲಿ ನನ್ನ ಪಾಪದ ಫಲಗಳನ್ನು ನಾನು ಅನುಭವಿಸಲೇ ಬೇಕಾಯಿತು. ತಲೆಗೆ ಹಾಕಿದ ನೀರು ಪಾದವನ್ನು ಒದ್ದೆಯಾಗಿಸಿತು. ನನ್ನ ಈಗೋ, ಅಹಂಕಾರವನ್ನು ನನ್ನ ಮಕ್ಕಳು, ಸೊಸೆಯಂದಿರು ಜತೆಗೂಡಿ ಹೊಡೆದುರುಳಿಸಿದರು. ನಾನಂತೂ ಸೋತು ಬಿಟ್ಟೆ. ರೆಕ್ಕೆ ಮುರಿದ ಹಕ್ಕಿಯಂತಾದೆ. ಸೊಸೆಯಂದಿರು ನನ್ನ ಜತೆ ತಂಗಲೂ ಸಿದ್ಧರಿರಲಿಲ್ಲ. ಶ್ರೀಮಂತ ಕುಲದಿಂದ ಬಂದ ಅವರಿಗೆ ನಮ್ಮ ಮನೆಯ ಸವಲತ್ತುಗಳು ಹಿಡಿಸುತ್ತಿರಲಿಲ್ಲ. ಮಾತುಮಾತಿಗೂ ಚುಚ್ಚುತ್ತಿದ್ದರು.
ನನ್ನ ಮುಂದೆಯೇ ನನ್ನ ಮಕ್ಕಳನ್ನು ಛೇಡಿಸುತ್ತಿದ್ದರು. ಮೂವರು ಮಕ್ಕಳೂ ಪತ್ನಿಯರ ಗುಲಾಮರಾಗಿ ಬಿಟ್ಟರು. ನನ್ನ ಪ್ರತಿ ಮಾತಿಗೂ ಸಿಡುಕುತ್ತಿದ್ದರು… ತಂದೆ ಬಿಟ್ಟು ಹೋದ ವಾರಸು ಸೊತ್ತಿಗಾಗಿ ಪರಸ್ಪರ ಕಚ್ಚಾಡಿಕೊಂಡು ನಮ್ಮ ಮರ್ಯಾದೆಯನ್ನು ಹರಾಜಾಗಿಸಿದರು. ನಾನು ಜೋಪಾನವಾಗಿಟ್ಟ ಚಿನ್ನವನ್ನೂ ಹಂಚಿಕೊಂಡು, ಹಿಂತಿರುಗಿ ನೋಡದೆ ಪತ್ನಿ ಮಕ್ಕಳನ್ನು ತಬ್ಬಿಕೊಂಡು ಮಕ್ಕಳೂ ಹೊರಟೇ ಬಿಟ್ಟರು. ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಏಕಾಂಗಿಯಾಗಿಸಿ ಬಿಟ್ಟು ಹೋದ ದಯನೀಯ ಕ್ಷಣವದು. ಅಸಹಾಯಕಳಾಗಿ ನಾನು ನೋವು, ಬೇಜಾರಿನಿಂದ ನರಳಿದೆ. ಧಾರಾಳ ಅತ್ತುಬಿಟ್ಟೆ. ನನ್ನ ಪತಿ ಜೀವಂತವಿರುತ್ತಿದ್ದರೆ, ನನ್ನನ್ನು ಖಂಡಿತ ಏಕಾಂಗಿಯಾಗಲು, ಬೀದಿಪಾಲಾಗಿಸಲು ಬಿಡುತ್ತಿರಲಿಲ್ಲ. ನನಗೆ ಆಸರೆಯಾಗುತ್ತಿದ್ದರು. ಅವರು ನಮಗಾಗಿ ಯಂತ್ರದಂತೆ ದುಡಿದರು. ದಣಿವಾರಿಸಿಕೊಳ್ಳಲೂ ಅವರಿಗೆ ಪುರುಸೊತ್ತಿರಲಿಲ್ಲ. ಹೃದಯದ ರೋಗ ಅವರ ಓಡಾಟಕ್ಕೆ ಬ್ರೇಕ್ ಹಾಕಿತ್ತು. ಯಾವ ಹೆಣ್ಣೂ ಈ ದುರವಸ್ಥೆಗೆ ತಲುಪದಿರಲಿ. ಬಾಳಿನ ಸಂಗಾತಿಗೆ ದ್ರೋಹ ಬಗೆಯದಿರಲಿ. ನನ್ನ ಬದುಕಿ ನಿಂದ ಸಮಾಜ ಪಾಠ ಕಲಿಯಲಿ. ನಾನು ಆ ಅಮ್ಮನ ಮಾತನ್ನು ತಡೆದು, ವಿಳಾಸ ಕೇಳಬೇಕೆಂದೆಣಿಸುವಾಗಲೇ, ಆ ಅಮ್ಮ ಹೇಳಿದರು:
ಇಲ್ಲ, ಸಿದ್ದೀಕ್ ಭಾಯ್… ನನ್ನ ವಿಳಾಸ, ಫೋನ್ ನಂಬರ್ ದಯಮಾಡಿ ಕೇಳಬೇಡಿ. ನನಗೆ ಯಾವ ಸಹಾಯವೂ ಬೇಕಾಗಿಲ್ಲ. ಊಟಕ್ಕೆ ಕೊರತೆಯಿಲ್ಲ. ನನ್ನವರಿಗೆ ದ್ರೋಹ ಬಗೆದು, ಮನಸ್ಸು ನೊಂದು ಹೋಗಿದೆ, ಬೆಂದು ಹೋಗಿದೆ. ಪಾಪದ ಫಲದಿಂದ ಅದು ನುಚ್ಚುನೂರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಿಮ್ಮ ಬರಹಗಳನ್ನು ಗಮನಿಸುತ್ತಿದ್ದೇನೆ. ನನ್ನ ಈ ಅಪಲಾಪವನ್ನು ಬರೆದು ವೈರಲ್ ಮಾಡಿ ಅಷ್ಟೇ. ನನ್ನಂತಿರುವ ಈಗೋ ನಾರಿಯರು ತಮ್ಮ ಬದುಕನ್ನು ಇನ್ನಾದರೂ ಸುಧಾರಿಸಿಕೊಳ್ಳಲಿ. ತಿದ್ದಿಕೊಳ್ಳಲಿ. ತಂತಮ್ಮ ಕೌಟುಂಬಿಕ ಬಾಧ್ಯತೆಗಳನ್ನು ನಿರ್ವಹಿಸಿ ದಂಪತಿಗಳು ಸದಾ ಹಾಯಾಗಿರಲಿ. ನಾನು ಬದುಕಿನ ಅಳಿವಿನಂಚಿನಲ್ಲಿದ್ದೇನೆ. ಇಂದೋ ನಾಳೆಯೋ ಮಲಕುಲ್ ಮೌತ್ರ ಕರೆಗೆ ಓಗೊಡಲೇ ಬೇಕು. ದುಆ ಮಾಡಿ. ನಾನು ಬರುತ್ತೇನೆ, ಅಸ್ಸಲಾಮ್ ಅಲೈಕುಮ್… ಎಂದವರೇ ಕಛೇರಿಯ ಮುಂದೆ ಆಟೋಕ್ಕೆ ಕೈತೋರಿಸಿ ಹತ್ತಿ ಹೊರಟೇ ಬಿಟ್ಟರು. ಹೊಸ ಅನುಭವದಿಂದ ನಾನಂತೂ ಅವಕ್ಕಾದೆ. ತಬ್ಬಿಬ್ಬಾದೆ. ನಾನು, ನನ್ನದು, ನನ್ನಿಂದ ಎಂಬ ಈಗೋ, ಇದ್ದ ನೆಮ್ಮದಿಯನ್ನೂ ಸುಟ್ಟು ಭಸ್ಮ ಮಾಡುತ್ತದೆ. ಹೌದು, ಆ ಉಮ್ಮನ ಬದುಕಲ್ಲಿ ಬಹಳಷ್ಟು ಪಾಠಗಳಿವೆ… ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.