(www.vknews. in) ಮಾನಭಂಗ ಯತ್ನ ಆರೋಪಿಗಳಿಗೆ ಪಾಸ್ಪೋರ್ಟ್ ! _ಕೋರ್ಟ್ ವಿಚಾರಣೆ ನಡೆಯುತ್ತಿದ್ದರೂ ಮಂಗಳೂರು ಗ್ರಾಮಾಂತರ ಪೊಲೀಸರಿಂದ ವೆರಿಫಿಕೇಶನ್ !
ಕೋರ್ಟಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಮಾನಭಂಗ ಯತ್ನ ಆರೋಪಿಗಳಿಗೆ ಗ್ರಾಮಾಂತರ ಪೊಲೀಸರು ಯಾವುದೇ ಕೇಸ್ ಇಲ್ಲ ಎಂದು ಪಾಸ್ಪೋರ್ಟ್ ಸಿಗುವಂತೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
_ಬಾಂಗ್ಲಾ ವಲಸಿಗರಿಗೆ ಪಾಸ್ಪೋರ್ಟ್ ನೀಡಿದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲಿ ಕ್ರಿಮಿನಲ್ಗಳಿಗೆ ಪಾಸ್ಪೋರ್ಟ್ ಸಿಗುವಂತೆ ಮಾಡುವಲ್ಲಿ ಪೊಲೀಸರು ಶಾಮೀಲಾಗಿರುವುದು ಆತಂಕಕ್ಕೆ ಕಾರಣವಾಗಿದೆ._
2023ರ ಮೇ 13ರಂದು ಕುಲಶೇಖರ ಬಳಿ ಸಿದ್ದಿಕೀ ಮತ್ತು ನಾಲ್ಕು ಮಂದಿ ವಿರುದ್ದ ಮಾನಭಂಗ ಯತ್ನ ಪ್ರಕರಣ ಕದ್ರಿ (ಪೂರ್ವ) ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 2024ರ ಫೆಬ್ರವರಿ ವೇಳೆ ಪ್ರಕರಣದ 1ನೇ ಆರೋಪಿ ಸಿದ್ದಿಕೀ ಮತ್ತು ನಾಲ್ಕನೇ ಆರೋಪಿಗೆ ಪಾಸ್ಪೋರ್ಟ್ ಮಂಜೂರಾಗಿದೆ.
ಆರೋಪಿಗಳು ಯಾರೂ ತಮ್ಮ ಹೆಸರು ಊರು ಬದಲಾಯಿಸಿ ಪಾಸ್ಪೋರ್ಟ್ಗೆ ಅರ್ಜಿ ನೀಡಿರಲಿಲ್ಲ. ಎಲ್ಲ ಗೊತ್ತಿದ್ದೇ ಗ್ರಾಮಾಂತರ ಪೊಲೀಸರು ವೆರಿಫಿಕೇಶನ್ ಮಾಡಿ ಯಾವುದೇ ಪ್ರಕರಣ ಇಲ್ಲ ಎಂದು ಪಾಸ್ಪೋರ್ಟ್ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಈ ಆರೋಪಿಗಳ ವಿರುದ್ಧ ಮಂಗಳೂರಿನ ಜೆಎಂಎಫ್ಸಿ6ನೇ ಕೋರ್ಟಲ್ಲಿ ವಿಚಾರಣೆ ಆರಂಭವಾಗಿತ್ತು. ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಪಕ್ಕದ ಗ್ರಾಮಾಂತರ ಪೊಲೀಸ್ ಠಾಣೆಯವರಿಗೆ ಮಾಹಿತಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಇಕೋರ್ಟ್ ಸರ್ವಿಸ್ ಅರ್ಜಿದಾರರ ಪಾಸ್ಪೋರ್ಟ್ ವೆರಿಫಿಕೇಶನ್ ವೇಳೆಗೆ ಯಾವುದಾದರೂ ಪ್ರಕರಣ ಇದ್ದರೆ ಅದನ್ನು ಪತ್ತೆ ಹಚ್ಚಲು ಅನುಕೂಲವಾಗುವ ವ್ಯವಸ್ಥೆ ಪೊಲೀಸರ ಬಳಿ ಇದೆ. ಕೋರ್ಟಲ್ಲಿ ವಿಚಾರಣೆಗೆ ಬಾಕಿ ಇದ್ದರೆ “ಇಕೋರ್ಟ್ ಸರ್ವೀಸ್” ಆ್ಯಪ್ ತೆರೆದು ನೋಡಿದರೆ ಕೇಸ್ನ ಎಲ್ಲ ಹಂತದ ವಿವರಗಳು ಇರುತ್ತವೆ._ಸಂತ್ರಸ್ತರು ದೂರು ಕೊಡಲು ಬಂದಾಗ ಎಫ್ ಐಆರ್ ಹಾಕುವ ಮುನ್ನ ಸಾವಿರ ದಾಖಲೆ, ಎವಿಡನ್ಸ್ ಪರಿಶೀಲಿಸುವ ಮಂಗಳೂರಿನ ಪೊಲೀಸರಿಗೆ ಪಾಸ್ಪೋರ್ಟ್ ವೆರಿಫಿಕೇಶನ್ ಮಾಡುವ ಕ್ರಮ ಕಲಿಸಿಕೊಡುವ ಅಗತ್ಯ ಇಲ್ಲ._ ಅಕ್ರಮ ತನಿಖೆ ಯಾವಾಗ? ಗ್ರಾಮಾಂತರ ಇನ್ಸ್ಪೆಕ್ಟರ್ ಶಿವಕುಮಾರ್ ಯಾವುದೇ ಪ್ರಕರಣ ಇಲ್ಲ ಎಂದು ವೆರಿಫಿಕೇಶನ್ ಮಾಡಿ ಸಹಿ ಹಾಕಿದ್ದಾರೆ. ಕೆಳಹಂತದ ಅಧಿಕಾರಿಗಳ ಎಡವಟ್ಟಿಗೆ ಇವರ ಮೇಲಧಿಕಾರಿಗಳೂ ಮುದ್ರೆ ಒತ್ತಿದ್ದಾರೆ _ಪಾಸ್ಪೋರ್ಟ್ ಪಡೆದ ಬಳಿಕ ಇಬ್ಬರು ಆರೋಪಿಗಳು ವಿದೇಶ ಯಾತ್ರೆ ಮಾಡಿ ಕೂಡಾ ಬಂದಿದ್ದಾರೆ._ ಜನಸಾಮಾನ್ಯರು ಪಾಸ್ಪೋರ್ಟ್ ಮಾಡಲು ಪರಿಪಾಟಲು ಪಡೆಯುವ ಹೊತ್ತಲ್ಲಿ ಆರೋಪಿಗಳು ಪ್ರಭಾವ ಬಳಸಿ ಪಾಸ್ಪೋರ್ಟ್ ಮಾಡಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿದೆ ಯಾವ ರೀತಿಯ ಪ್ರಭಾವ ಬೀರಲಾಗಿದೆ ಎನ್ನುವುದು ಇಲಾಖೆ ತನಿಖೆ ನಡೆಸಿದರೆ ಬಹಿರಂಗವಾಗಬಹುದು.
ಕೇಸ್ ಇದ್ದರೆ ಕೋರ್ಟ್ ಅನುಮತಿ ಪಡೆದು ಪಾಸ್ಪೋರ್ಟ್ ಮಾಡಿಸಿ ವಿದೇಶಕ್ಕೂ ಹೋಗಬಹುದು. ಈ ಪ್ರಕರಣದಲ್ಲಿ ಕೋರ್ಟ್ ಅನುಮತಿ ಪಡೆಯಲಾಗಿದೆಯಾ, ಪಾಸ್ಪೋರ್ಟ್ ನಲ್ಲಿ ಕ್ರಿಮಿನಲ್ ಪ್ರಕರಣದ ಉಲ್ಲೇಖ ಇದೆಯಾ ಎಂದು ಪರಿಶೀಲನೆ ಮಾಡಬೇಕು. ಅನುಮತಿ ಪಡೆಯದೆ ಪಾಸ್ಪೋರ್ಟ್ ಮಾಡಿಸಿದ್ದರೆ ಅದು ಅಪರಾಧ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದಾರೆ.
ಕರಾವಳಿಯಲ್ಲಿ ನಕಲಿ ಪಾಸ್ಪೋರ್ಟ್ ದಂಧೆ: ನಕಲಿ ದಾಖಲೆ ನೀಡಿ ಪಾಸ್ಪೋರ್ಟ್ ಮಾಡಿಸಿ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸಿದ ಬಾಂಗ್ಲಾದೇಶದ ಪ್ರಜೆ ಮಾಣಿಕ್ ಹುಸೈನ್ ನನ್ನು ಬಂಧಿಸಿದ ಪ್ರಕರಣದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ವಿಭಾಗದ ಸಿಬ್ಬಂದಿಯ ಸಮಯಪ್ರಜ್ಞೆ ಕಾರಣವಾಗಿದೆ. ಆರೋಪಿಯು ಇಮಿಗ್ರೇಶನ್ ಕೌಂಟರ್ನಲ್ಲಿ ಪಾಸ್ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಹಾಜರುಪಡಿಸಿದಾಗ ಅಲ್ಲಿದ್ದ ಅಧಿಕಾರಿ ಕೆಸಿ ಸರಸ್ವತಿ ಅವರು ಪಾಸ್ ಪೋರ್ಟ್ ಮತ್ತು ದಾಖಲೆ ಪರಿಶೀಲನೆ ವೇಳೆ ಅನುಮಾನಗೊಂಡು ಆರೋಪಿಯನ್ನು ವಿಚಾರಣೆ ಮಾಡಿದಾಗ ಬಾಂಗ್ಲಾದೇಶದ ಪ್ರಜೆ ಎನ್ನುವುದು ಬಹಿರಂಗವಾಯಿತು. ಉಡುಪಿಯಲ್ಲಿ ಭಾರತೀಯ ನಿವಾಸಿ ಪರ್ವೇಝ್ ಎಂಬಾತನ ಮೂಲಕ ಪಾಸ್ ಪೋರ್ಟ್ ಮಾಡಿಸಿರುವುದು ಬೆಳಕಿಗೆ ಬಂದಿದೆ. ಇದೇ ರೀತಿ ಹಲವು ಮಂದಿ ವಿದೇಶಿಯರಿಗೆ ಪಾಸ್ಪೋರ್ಟ್ ಮಾಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಉಗ್ರನಿಗೂ ಪಾಸ್ಪೋರ್ಟ್ ! ಹೈದರಾಬಾದ್ನಲ್ಲಿ ಹತ್ತು ವರ್ಷದ ಹಿಂದೆ ನಡೆದ ಸ್ಪೋಟ ಪ್ರಕರಣದ ಉಗ್ರನಿಗೆ ಮಂಗಳೂರಿಂದ ಪಾಸ್ಪೋರ್ಟ್ ಮಾಡಿಸಲಾಗಿತ್ತು. ಆಗ ಕದ್ರಿ (ಪೂರ್ವ) ಪೊಲೀಸರು ಹೆಸರು ವಿಳಾಸ ವಿಚಾರಣೆ ಮಾಡದೆ ಪಾಸ್ಪೋರ್ಟ್ ವೆರಿಫಿಕೇಶನ್ ಮಾಡಿಸಿದ್ದರು. ಬಳಿಕ ತನಿಖೆ ನಡೆದು ಕರ್ತವ್ಯ ಲೋಪ ಎಸಗಿದ ಪೊಲೀಸರಿಗೆ ಅಮಾನತು ಶಿಕ್ಷೆ ಆಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.