ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ , ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಇಂದು ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕಾರ್ಮಿಕರ ಇಲಾಖೆ , ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ , ಕೋಲಾರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅತೀ ಕಡಿಮೆ ಹಣದಲ್ಲಿ ಅಕ್ರಮವಾಗಿ ದುಡಿಸಿಕೊಳ್ಳಬಹುದು ಎಂಬ ದುರುದ್ದೇಶದಿಂದ ಮಾಲೀಕರು ಇಂತಹ ಬಾಲ ಕಾರ್ಮಿಕರನ್ನು ನೇಮಿಸಿಕೊಂಡು ಅವರನ್ನು ಬೇಕರಿ , ಗ್ಯಾರೇಜ್ , ಹೊಟೇಲ್ , ಕಾರ್ಖಾನೆಗಳು , ಸಿರಿವಂತರ ಮನೆಗಳಲ್ಲಿ ಕೆಲಸದಾಳುಗಳಾಗಿ , ಕಟ್ಟಡ ನಿರ್ಮಾಣ ಕಾರ್ಮಿಕರಾಗಿ , ಕೃಷಿ ಜಮೀನಿನಲ್ಲಿ ಕೂಲಿಗಳಾಗಿ , ಅಂಗಡಿ ಮಳಿಗೆಗಳಲ್ಲಿ , ಗಾಮೆರ್ಂಟ್ಸ್ಗಳಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವ ಕೆಲಸಗಳನ್ನು ಮಾಡಿಸುತ್ತಿದ್ದು , ಇಂತಹ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ನಿರ್ಮೂಲನೆಗೊಳಿಸಬೇಕು ಎಂದು ತಿಳಿಸಿದರು. ಹಾಗೂ ಅಗತ್ಯ ರೀತಿಯಲ್ಲಿ ಜಾಗೃತಿ ಮೂಡಿಸಲು ವಿಶ್ವ ಕಾರ್ಮಿಕ ಸಂಘಟನೆಯು 2002 ರಿಂದ ವಿಶ್ವದ ಎಲ್ಲೆಡೆ ಶ್ರಮಿಸುತ್ತಿರುವ ಬಾಲ ಕಾರ್ಮಿಕರ ರಕ್ಷಣೆಗಾಗಿ ಜಗತ್ತಿನ ಗಮನ ಸೆಳೆಯುವ ಹಿನ್ನೆಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಜೂನ್ 12 ರಂದು ಬಾಲ ಕಾರ್ಮಿಕ ವಿರೋಧಿದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಎನ್. ಬಾಲಚಂದ್ರ ಭಟ್ ಅವರು ಮಾತನಾಡಿ , ಬಾಲ್ಯದಲ್ಲಿ ಆಟವಾಡುತ್ತ ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಒಂದು ಸಾಮಾಜಿಕ ಪಿಡುಗು , ಕಟ್ಟಡಗಳ ಕೆಲಸಗಳಲ್ಲಿ , ಅಂಗಡಿ ಮಳಿಗೆಗಳಲ್ಲಿ , ಗಾಮೆರ್ಂಟ್ಸ್ಗಳಲ್ಲಿ , ಬೇಕರಿಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮ ಬರೀ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ವರ್ಷದ 365 ದಿನ ಹಾಗೂ 24×7 ನಮ್ಮ ಸುತ್ತಮುತ್ತಲು ಬಾಲಕಾರ್ಮಿಕರಾಗಿ ದುಡಿಯುತ್ತಿರುವಂತಹ ಮಕ್ಕಳು ಕಂಡುಬಂದಲ್ಲಿ ಅವರ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಮುನೇಗೌಡ ಅವರು ಮಾತನಾಡಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿರಬೇಕು. ದೇಶದ ಉತ್ತಮ ನಾಗರಿಕರಾಗಲಿ ಎಂಬುದೇ ಇದರ ಉದ್ದೇಶ . ಅರ್ಹತೆಗಿಂತ ಕಡಿಮೆ ವಯಸ್ಸಿನ ಬಾಲಕರನ್ನು ದುಡಿಸಿಕೊಳ್ಳುವುದು ಬಾಲ ಕಾರ್ಮಿಕ ಪದ್ಧತಿಯಾಗುತ್ತದೆ. ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ್ ಎಸ್ ಹೊಸಮನಿ ಅವರು ಎಲ್ಲಾ ಶಾಲಾ ಮಕ್ಕಳಿಗೂ ಪ್ರಮಾಣ ವಚನವನ್ನು ಬೋಧಿಸಿದರು. ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶುಕ್ಲಾಕ್ಷ ಪಾಲನ್ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ.ಎಂ , ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ.ವಿ , ಜಿಲ್ಲಾ ಕಾರ್ಮಿಕರ ಅಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿ ಶಬಾನಾ ಅಜ್ಜಿ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.