ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): 300 ವರ್ಷಗಳ ದಾಸ್ಯದಿಂದ ಮುಕ್ತವಾಗಿ ಕತ್ತಲೆಯಿಂದ ಝಗಮಗಿಸುವ ಬೆಳಕಿನತ್ತ ಸಾಗಿ ಇಂದು ಗಣರಾಜ್ಯೋತ್ಸವನ್ನು ಹಾಗೂ ಸಂವಿಧಾನ ಹಬ್ಬವನ್ನು ಆಚರಿಸುತ್ತಿದ್ದು, ಇದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ಬಡತನ,ಹಸಿವು, ರಸ್ತೆಗಳು, ವಿದ್ಯುತ್ ಹಾಗೂ ಗಡಿಯ ಗುರುತಿರದ ಹಾಗೂ ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ ಬ್ರಿಟಿಷರ ದಾಸ್ಯದಿಂದ ಹೊರಬಂದು ನಮ್ಮದೇ ಆದ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಇಂದು ಹೊಂದಿದ್ದೇವೆ. ಇದಕೆಲ್ಲ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ಕಾರಣವಾಗಿದೆ ಎಂದರು. ಪ್ರತಿಯೊಬ್ಬರು ಚುನಾವಣೆಗೆ ನಿಂತ ವ್ಯಕ್ತಿಗಳ ಬಗ್ಗೆ ಅರಿತು ಪ್ರಜಾವಂತರಾಗಿ ಮತ ಚಲಾಯಿಸಬೇಕೆಂದರು. ಜಿಲ್ಲೆಯಲ್ಲಿ ಒಟ್ಟು 12,78,183 ಮತದಾರರಿದ್ದು, ಸಂವಿಧಾನ ನೀಡಿರುವ ಹಕ್ಕನ್ನು ತಪ್ಪದೇ ಚಲಾಯಿಸಿ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ ಎಸ್. ಹೊಸಮನಿ ಅವರು ಮಾತನಾಡಿ 2011 ರಿಂದ ಮತದಾರ ದಿನಾಚರಣೆ ಜಾರಿಗೆ ಬಂದಿದ್ದು, ಯಾವುದೇ ಚುನಾವಣೆಯಲ್ಲಾಗಲಿ ಭಾರತ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಿದಾಗ ಮಾತ್ರ ನಿಜವಾದ ಮತದಾನದ ಮಹತ್ವ ನೀಡದಂತಾಗುತ್ತದೆ. ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದ್ದು, ಕೇವಲ 96 ಕೋಟಿ ಜನರು ಮಾತ್ರ ಮತ ಚಲಾಯಿಸುತ್ತಿದ್ದಾರೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರದ ಪ್ರತಿಯೊಬ್ಬರು ಕಸವನ್ನು ಬೇರ್ಪಡಿಸಿ ಚಾಚೂ ತಪ್ಪದೇ ಕಸದ ಗಾಡಿಗೆ ಹಾಕಬೇಕೆಂದು ತಿಳಿಸಿದರು. ಕಸವನ್ನು ಬೀದಿಗೆ ತರದಂತೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು. ಕಳೆದ ನಾಲೈದು ತಿಂಗಳಿಂದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರನ್ನೊಳಗೊಂಡ ತಂಡ ತುಂಬಾ ಪರಿಶ್ರಮದಿಂದ ಮತದಾರರ ಪಟ್ಟಿಯನ್ನು ಸಿದ್ಧ ಮಾಡಿದ್ದಾರೆ. ಕೆಲವೊಂದು ಬೂತುಗಳನ್ನು ವರ್ಗಾಯಿಸಿದ್ದು ಮತ್ತು ಕೆಲವು ಬೂತ್ಗಳನ್ನು ಸೇರ್ಪಡೆಗೊಳಿಸಿದ್ದೇವೆ ಎಂದು ತಿಳಿಸಿದರು. 51 ಪೋಲಿಂಗ್ ಬೂತ್ ಗಳಿದ್ದು, ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಮಕ್ಕಳು ಪ್ರತಿನಿತ್ಯ ಪೇಪರ್ ಓದುವುದನ್ನು ರೂಢಿಸಿಕೊಳ್ಳಿ ಸಮಾಜ, ನಾಡು ದೇಶದಲ್ಲಿ ಜರುಗುವ ಜ್ವಲಂತ ಸಮಸ್ಯೆಗಳನ್ನು ಅರಿಯಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 1950 ಜನವರಿ 25 ರಂದು ಭಾರತ ಚುನಾವಣಾ ಆಯೋಗ ಸ್ಥಾಪಿಸಿದ ದಿನವಾಗಿದ್ದು, ಅದರ ಸವಿನೆನಪಿಗಾಗಿ ಮತದಾರರ ಚುನಾವಣಾ ದಿನವನ್ನಾಗಿ ಆಚರಿಸಲಾಗುತ್ತದೆ. 2011 ರಿಂದ ಭಾರತದಾದ್ಯಂತ ಈ ಮತದಾನ ದಿನಾಚರಣೆಯನ್ನು ಆರಂಭಿಸಲಾಯಿತು. ಮತದಾನ ದಿನದ ಮಹತ್ವ ತಿಳಿಸುವ ಹಾಗೂ ಮತದಾನವನ್ನು ಗುರುತಿಸುವುದು ಮತದಾನದ ಉದ್ದೇಶವಾಗಿದೆ ಎಂದರು. ರಾಜ ಪ್ರಭುತ್ವ, ನಿರಂಕುಶ ಪ್ರಭುತ್ವ ಹಾಗೂ ಸರ್ವಾಧಿಕಾರವಿದ್ದ ದಶಕದಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದರು. ಪ್ರಜಾಪ್ರಭುತ್ವ ರಾಷ್ಟ್ರಗಳ ಉದಯವಾದ ನಂತರ ಮತದಾನದ ಹಕ್ಕನ್ನು ನೀಡಲಾಯಿತು. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದರು.
ಕಳೆದ ಆರು ತಿಂಗಳಿಂದ ಕೋಲಾರ ಜಿಲ್ಲೆಯಲ್ಲಿ ಆರೋಗ್ಯಕರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಕಾಲೇಜುಗಳಿಗೆ ಭೇಟಿ ನೀಡಿದ್ದೇವೆ. ಸ್ವೀಪ್ ಸಮಿತಿ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕೋಲಾರದಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಮತದಾನವಾಗುವಂತೆ ಸಾರ್ವಜನಿಕರಿಗೆ ತಿಳಿಸಿದರು. ಶತಯುಷಗಳಾದ ಕೋಗಿಲ ಹಳ್ಳಿಯ ರಾಮಕೃಷ್ಣಪ್ಪ, ಗಾಜಲದಿನ್ನೆ ನೆಲ್ಲಟ್ಟಿ ನಾರಾಯಣವರನ್ನು ಸನ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ಸಂಜೀವಿನಿ ಸಂಘ ಸ್ವ-ಸಹಾಯ ಗುಂಪಿನಿಂದ ವಾಹನ ಚಾಲನಾ ತರಬೇತಿ ಪಡೆ ಶ್ರೀಮತಿ ದೀಪಾ ಮತ್ತು ಸುಮಿತ್ರ ಅವರಿಗೆ ಚಾಲನಾ ಪ್ರಮಾಣ ಪತ್ರ ವಿತರಿಸಲಾಯಿತು. ಮತದಾನದ ದಿನಾಚರಣೆ ನಿಮಿತ್ತ ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದು, ಪ್ರಬಂಧ ಭಿತ್ತಿಪತ್ರ ಹಾಗೂ ಕಿರು ವೀಡಿಯೋಗಳನ್ನು ತಯಾರಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ನೀಡಲಾಯಿತು. ಆರಂಭದಲ್ಲಿ ಡಿ.ಡಿ.ಪಿ.ಐ ರಾಮಚಂದ್ರಪ್ಪ ಸ್ವಾಗತಿಸಿದರು. ಗೋವಿಂದಗೌಡರು ವಂದಿಸಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪನ್ಯಾಸಕರು ಶಾಲಾ ಶಿಕ್ಷಕರು ವಿವಿಧ ಶಾಲೆಗಳ ವಿದ್ಯಾರ್ಥಿಗಳ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.