ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಇಂದು ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನ ಎಂಬುವುದು ಮರೆಯಾಗಿದೆ, ಆದರೆ ಅಧ್ಯಯನಶೀಲತೆ ಮತ್ತು ಜ್ಞಾನ ಮಾತ್ರ ಒಬ್ಬ ಉತ್ತಮ ಪತ್ರಕರ್ತನನ್ನು ರೂಪಿಸಬಲ್ಲದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ “ಹಿರಿಯರ ಸ್ಮರಣೆ ಮತ್ತು ಗ್ರಂಥಗಳ ಹಸ್ತಾಂತರ” ಸಮಾರಂಭವನ್ನು ( ದಿ.ಜಿ.ನಾರಾಯಣಸ್ವಾಮಿ ಅವರ ಸ್ಮರಣೆ) ಉದ್ಘಾಟಿಸಿ ಅವರು ಮಾತನಾಡಿ, ಇಂದು ಪತ್ರಿಕಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಎಂಬುದು ಇಲ್ಲವಾಗಿ ಅದರಲ್ಲಿ ಅಧುನಿಕ ತಂತ್ರಜ್ಞಾನದ ವಾಟ್ಸ್ ಆ್ಯಪ್ ಯುನಿರ್ಸಿಟಿ ಪದವೀದರರೇ ಹೆಚ್ಚಾಗಿದ್ದು, ಕಾಪಿ-ಪೇಸ್ಟ್ ಸುದ್ಧಿಗಳೇ ರಾರಾಜಿಸುತ್ತಿರುವುದನ್ನು ಕಾಣುವಂತಾಗಿದೆ ಎಂದರು.
ಪತ್ರಿಕೋದ್ಯಮದಲ್ಲಿ ಅಧ್ಯಯನ ಜ್ಞಾನ ಮತ್ತು ಸಂಸ್ಕಾರ ಎಂಬುವುದು ದಾರಿದೀಪಗಳಾಗಿದೆ. ಪತ್ರಕರ್ತರ ಯಾವುದೇ ಪ್ರಶ್ನೆಗೊ ಮುನ್ನ ಆ ವಿಷಯದ ಬಗ್ಗೆ ಮಾಹಿತಿ ಹೊಂದಿರಬೇಕು, ಪ್ರಮಾಣಿಕತೆ, ನೈತಿಕತೆ ಹೊಂದಿದವರು ನೇರ ಮತ್ತು ನಿಷ್ಟೂರವಾದಿಗಳಾಗಿದ್ದು ದಿಟ್ಟತನದಿಂದ ಯಾರಿಗೂ ಹೆದರದೆ ಯಾವುದೇ ಮುಲಾಜಿಲ್ಲದೆ ದಿಟ್ಟತನದಿಂದ ಪ್ರಶ್ನಿಸುತ್ತಾರೆ ಎಂಬುವುದಕ್ಕೆ ನಮ್ಮ ಮಾರ್ಗದರ್ಶಕರಾಗಿರುವ ದಿವಂಗತ. ಜಿ.ನಾರಾಯಣಸ್ವಾಮಿ ಹಾಗೂ ದಿ.ಕೆ.ಕೃಷ್ಣ ಸ್ವಾಮಿಯವರಲ್ಲಿ ಕಾಣಬಹುದಾಗಿತ್ತು ಎಂದು ತಮ್ಮ ಅನುಭವಗಳನ್ನು ನೆನಪಿಸಿಕೊಂಡರು. ದಿ.ಜಿ.ನಾರಾಯಣಸ್ವಾಮಿ ಅವರ ಪುತ್ರ ಹಾಗೂ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರಾದ ಎನ್.ಜಗನ್ನಾಥ್ ಪ್ರಕಾಶ್ ಮಾತನಾಡಿ, ನಮ್ಮ ತಂದೆ ಜಿ.ನಾರಾಯಣಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಪಟ್ಟಾಭಿರಾಮನ್ ಅವರೊಂದಿಗೆ ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ನೇರ, ನಿಷ್ಟೂರವಾದಿಗಳಾಗಿದ್ದರು. ಅವರಲ್ಲಿ ಸ್ವಾರ್ಥತೆ ಎಂಬುವುದು ಇರಲಿಲ್ಲ ಎಂಬುವುದಕ್ಕೆ ತಮ್ಮ ಕುಟುಂಬಕ್ಕೆ ಅಗಲಿ, ಮಕ್ಕಳಿಗೆ ಅಗಲಿ ತಮ್ಮ ವೃತ್ತಿಯನ್ನು ದರ್ಬಳಿಸಿ ಕೊಂಡಿಲ್ಲ ಎನ್ನುವುದೇ ನಿದರ್ಶನ ಎಂದರು.
ಜಿಲ್ಲೆ ಪ್ರಗತಿ, ಅಭಿವೃದ್ದಿಗಾಗಿ ಸರ್ಕಾರದೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಯಾವುದೇ ಅಧಿಕಾರಿಯಾಗಲಿ ಶಿಷ್ಟಾಚಾರಗಳನ್ನು ಮೀರಿ ವರ್ತಿಸಿದರೆ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡು ಬೆವರಿಳಿಸುತ್ತಿದ್ದರು ಎಂದು ತಮ್ಮ ಗಮನಕ್ಕೆ ಬಂದ ಕೆಲವು ಉದಾಹರಣೆಗಳನ್ನು ನೀಡಿದ ಅವರು, ಸಾರ್ವಜನಿಕರ ಸೇವೆಗೆ ಹಾಗೂ ಅಬಿವೃದ್ದಿಗಾಗಿ ಸದಾ ಸಿದ್ದರಿದ್ದರು. ಎಂ.ವಿ.ಕೃಷ್ಣಪ್ಪ ಅವರೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ಇಂದು ಬಿ.ಇ.ಎಂ.ಎಲ್. ಕಾರ್ಖಾನೆ ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗಲು ನಮ್ಮ ತಂದೆಯವರು ಬರೆದ ಸುದ್ದಿಗಳು ದೆಹಲಿಯಲ್ಲಿ ಪ್ರತಿಧ್ವನಿಸಿದ ಹಿನ್ನಲೆಯಲ್ಲಿ ಕೆ.ಜಿ.ಎಫ್.ನಲ್ಲಿ ಬೆಮಲ್ ಸ್ಥಾಪನೆಗೆ ಕಾರಣವಾಯಿತು ಎಂದು ವಿವರಿಸಿದರು.
ನಮ್ಮ ತಂದೆಯವರು ನೇರ, ನಿಷ್ಟೂರವಾದಿಗಳ ಜೂತೆಗೆ ಶಿಸ್ತು, ಸತ್ಯತೆ ಹಾಗೂ ಸಮಯ ಪಾಲನೆ ಇತ್ತು. ಯಾವುದೇ ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡದೆ ಪ್ರತಿಪಾದನೆಗಳನ್ನು ಮಾಡಲು ಹೋಗುತ್ತಿರಲಿಲ್ಲ. ಅವರ ಮಾತಿನಲ್ಲಿ ಮೌಲ್ಯಗಳು ನೈಜತೆಯಿಂದ ಕೂಡಿತ್ತು ಎಂದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ 100 ವರ್ಷ ಪೂರೈಸಲಿರುವ ನಮ್ಮ ತಂದೆಯ ನೆನಪಿನಾರ್ಥವಾಗಿ ಇಬ್ಬರು ಪತ್ರಕರ್ತರ ಆರ್ಹ ಮಕ್ಕಳ ಶಿಕ್ಷಣಾಭ್ಯಾಸದ ವೆಚ್ಚವನ್ನು ಭರಿಸಲು ಚಿಂತಿಸಿದ್ದು, ಈ ಕುರಿತು ನಮ್ಮ ಕುಟುಂಬದವರೊಂದಿಗೆ ಪ್ರಸ್ತಾಪಿಸಿ ಘೋಷಿಸುತ್ತೇನೆಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಸ್ತಾವಿಕ ನುಡಿಗಳನ್ನಾಡಿ, ನಮಗೆ ನೆರವಾದವರನ್ನು ನೆನಪಿಸಿ ಕೃತಜ್ಞತೆಯನ್ನು ಪುಣ್ಯ ಸ್ಮರಣೆಯ ಮೂಲಕ ಸಲ್ಲಿಸುವುದು ಮಾನವೀಯತೆಯ ಧರ್ಮವಾಗಿದೆ. ಅದನ್ನು ನಾವುಗಳು ಬಹಳ ತಡವಾಗಿ ಮಾಡುತ್ತಿದ್ದೇವೆ. ಇಂದು ಪತ್ರಕರ್ತರ ಸಂಘದ ಕಟ್ಟಡದಲ್ಲಿ ನಾವಿರಲು ದಿ.ಜಿ.ನಾರಾಯಣಸ್ವಾಮಿ, ಕೆ.ಆರ್. ಕೃಷ್ಣಸ್ವಾಮಿ ಅವರೇ ಮೂಲ ಕಾರಣ. ಅಂದಿನ ಪುರಸಭೆ ಅಧ್ಯಕ್ಷರಾದ ಸಾ.ಮಾ.ರಂಗಪ್ಪನವರಿಗೆ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಾತಿ ಮಾಡಲು ತಿಳಿಸಿದ ಹಿನ್ನಲೆಯಲ್ಲಿ ನಮಗೆ ನಿವೇಶನ ಮಂಜೂರಾಯಿತು ಎಂದರು.
ಪ್ರತಿ ವರ್ಷ ಅ.06 ರಂದು ಜಿ.ನಾರಾಯಣಸ್ವಾಮಿಗಳ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅವರನ್ನು ಸ್ಮರಿಸುವ ಕಾರ್ಯ ಮಾಡೋಣವೆಂದರು.
ತಮ್ಮ ವೃತ್ತಿಯಲ್ಲಿ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಅವರ ಆದರ್ಶ, ಮಾರ್ಗದರ್ಶನಗಳು ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಯಾವುದೇ ಅಂಜಿಕೆ ಇಲ್ಲದೆ ಯಾರನ್ನು ಲೆಕ್ಕಿಸದೆ ಮುನ್ನಗ್ಗುವ ಒಂಟಿ ಸಲಗದಂತೆ ಇದ್ದರು, ನಾರಾಯಣಸ್ವಾಮಿಯವರು ಬರುತ್ತಿದ್ದಾರೆಂದರೆ ವಾತವರಣವೇ ಬದಲಾಗುತ್ತಿದ್ದವು ಅದು ಅಧಿಕಾರಿಗಳ ಸಭೆಯಾಗಲಿ, ಜನಪ್ರತಿನಿಧಿಗಳ ಸಭೆಯಾಗಲಿ ಎಲ್ಲರೂ ಎಚ್ಚರಿಕೆಯಿಂದ ಇರುತ್ತಿದ್ದರು ಎಂದು ನೆನಪಿಸಿಕೊಂಡರು
ಕಿರಿಯ ಪತ್ರಕರ್ತರನ್ನು ತಿದ್ದಿ, ತೀಡಿ, ಆತ್ಮೀಯತೆಯತೆ ರೂಪುಗೊಳಿಸುತ್ತಿದ್ದರು. ಅವರು ತಮ್ಮ ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ಹೊತ್ತು ವರದಿಗಳನ್ನು ಮಾಡುತ್ತಿದ್ದರು. ಅವರು ಮನೆಯಲ್ಲಿ ಪುಸ್ತಕದ ಬಂಡಾವರನ್ನೆ ಕಾಣಬಹುದಿತ್ತು ಅವರ ಆಸ್ತಿ ಎಂದರೆ ಪುಸ್ತಕಗಳೇ ಆಗಿದ್ದು ಹೆಚ್ಚಾಗಿ ಅಧ್ಯಯನಗಳನ್ನು ಮಾಡುತ್ತಿದ್ದರು. ಸರ್ವೋದಯ ನಾಯಕ ಕೆ.ಪಟ್ಟಾಭಿರಾಮನ್ ಒಡನಾಡಿಗಳಾಗಿ ಕೋಲಾರದ ಅಭಿವೃದ್ದಿಗೆ ಒಂದೇ ಬಂಡಿಯ ಎರಡು ಚಕ್ರಗಳಾಗಿದ್ದರು ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ದಿ.ಜಿ.ನಾರಾಯಣಸ್ವಾಮಿ ಮತ್ತು ಕೆ.ಆ.ರ್. ಕೃಷ್ಣಸ್ವಾಮಿ ಮುಂತಾದ ಹಿರಿಯರ ಆದರ್ಶ, ಮಾರ್ಗದರ್ಶನಗಳನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು, ಅವರ ವರದಿಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತಿದ್ದವು, ಕೂಡಲೇ ಕ್ರಮಕೈಗೊಳ್ಳುತ್ತಿದ್ದವು. ಅವರ ಕಾಲದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಗೌರವಗಳು ಸಿಗುತ್ತಿದ್ದವು ಅದೇ ರೀತಿ ಮಾದ್ಯಮಗಳು ಮೌಲ್ಯಯುತವಾಗಿದ್ದವು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ನುಡಿದಂತೆ ನಡೆಯುವವರು ಕಳೆದ ಸಭೆಯಲ್ಲಿ ತಿಳಿಸಿದಂತೆ ರಾಜ್ಯದ 5500 ಮಂದಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ, ಜಾಹಿರಾತುಗಳ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಎಲ್ಲವನ್ನು ಮಾಡಿದ್ದಾರೆ. ಇದರ ಜೊತೆಗೆ ಕೋಲಾರ ಜಿಲ್ಲೆ ಗಡಿ ಜಿಲ್ಲೆಯಾಗಿದ್ದು ವಿಶೇಷವಾಗಿ ಮಾಸಿಕವಾಗಿ ಕನಿಷ್ಠ ಒಂದು ಜಾಹಿರಾತು ನೀಡುವಂತಾಗಬೇಕು. ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ 25 ಲಕ್ಷ ರೂ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಚಿಂತಕ ಜಯಸಿಂಹ, ಹೆಚ್.ಎ.ಪುರುಷೋತ್ತಮ್, ಜಿ.ನಾರಾಯಣಸ್ವಾಮಿ ಅವರುಗಳ ಜೊತೆಗಿದ್ದ ತಮ್ಮ ನೆನಪುಗಳನ್ನು ಹಂಚಿಕೊಂಡರು. ತ್ರಿಚಕ್ರವಾಹನಗಳ ಸಂಘದ ರಾಜ್ಯ ಮುಖಂಡ ಕೆ.ವಿ.ಸುರೇಶ್ಕುಮಾರ್ ಮಾತನಾಡಿ, ದಿ.ಜಿ.ನಾರಾಯಣಸ್ವಾಮಿ ಅವರ ಸ್ಮರಣಾರ್ಥವಾಗಿ ದತ್ತಿನಿಧಿ ಸ್ಥಾಪಿಸಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕೆಂಬ ಸಲಹೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪ್ರರ್ತಕರ್ತರ ಸಂಘದ ಹಿರಿಮೆಯನ್ನು ಗಟ್ಟಿಗೊಳಿಸಿರುವ ಕೀರ್ತಿ ದಿ.ಜಿ.ನಾರಾಯಣಸ್ವಾಮಿ ಅವರಿಗೆ ಸಲ್ಲಬೇಕು, ಅವರನ್ನು ಅಗಲಿ ನಾವುಗಳು ಸುಮಾರು 3 ದಶಕಗಳಾದರೂ ಅವರ ನೆನಪುಗಳು ಇನ್ನು ಜೀವಂತವಾಗಿ ಹಚ್ಚ ಹಸಿರಾಗಿದೆ. ಕಳೆದ 25 ವರ್ಷಗಳಿಂದ ಪತ್ರಕರ್ತರ ಸಂಘವು ಜಿ.ನಾರಾಯಣಸ್ವಾಮಿ ಮತ್ತು ಕೆ.ಆರ್. ಕೃಷ್ಣಸ್ವಾಮಿ ಹೆಸರಿನಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪ್ರತಿಭಾವಂತ ಪತ್ರಕರ್ತರಿಗೆ ನೀಡುತ್ತಿದೆ ಎಂದರು.
ಕೈವಾರ ಕ್ಷೇತ್ರವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಹಾಗೂ ಕೋಟಿ ಲಿಂಗೇಶ್ವರ ಪ್ರವಾಸಿ ತಾಣವಾಗಿ ಗುರುತಿಸಿದ ಕೀರ್ತಿ ಜಿ.ನಾರಾಯಣಸ್ವಾಮಿ ಅವರು ಪುತ್ರ ಹಾಗೂ ನಿವೃತ್ತ ವಾರ್ತಾ ಇಲಾಖೆಯ ಸಹಾಕಯ ನಿರ್ದೇಶಕ ಎನ್.ಜಗನ್ನಾಥ್ ಪ್ರಕಾಶ್ ಅವರಿಗೆ ಸಲ್ಲಬೇಕು ಎಂದ ಅವರು ಜೆ.ಪಿ ಎಂದೇ ಪ್ರಚಲಿತ ಜಗನ್ನಾಥ್ ಪ್ರಕಾಶ್ ಅವರ ವರದಿಗಳು ಹಾಗೂ ಕೆ.ವಿ.ಪ್ರಭಾಕರ್ ಅವರನ್ನು ನಮ್ಮ ಪತ್ರಕರ್ತರಿಗೆ ಮಾದರಿಯಾಗಿ ಪರಿಗಣಿಸಿ ಅವರ ಹಾದಿಯಲ್ಲಿ ಸಾಗುವಂತಾಗಬೇಕೆಂದು ಕಿವಿ ಮಾತು ಹೇಳಿದ ಅವರು ವೇದಿಕೆ ಮೇಲಿದ್ದವರಿಗೆ ವಂದಿಸಿದರು. ಇದೇ ಸಂದರ್ಭದಲ್ಲಿ ಕೈವಾರ ಕ್ಷೇತ್ರದ ತಳಗವಾರ ಆನಂದ್ ಮತ್ತು ಲಕ್ಷ್ಮೀನಾರಾಯಣ ಅವರು ಎನ್. ಜಗನ್ನಾಥ್ ಪ್ರಕಾಶ್ ದಂಪತಿಗಳನ್ನು ಸನ್ಮಾನಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಕೋ.ನಾ. ಪ್ರಭಾಕರ್ ಪ್ರಾರ್ಥಿಸಿ, ಸಿ.ಜಿ.ಮುರಳಿ ಜಿ.ನಾರಾಯಣಸ್ವಾಮಿ ಅವರ ಕಿರು ಪರಿಚಯ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಜಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿ.ನಾರಾಯಣಸ್ವಾಮಿ ಅವರ ಕುಟುಂಬ ಸೇರಿದಂತೆ ನಗರದ ಹಾಗೂ ಎಲ್ಲಾ ತಾಲೂಕು ಪತ್ರಕರ್ತರು ಹಾಗೂ ಬಲಿಜ ಸಮುದಾಯದ ಮುಖಂಡರು, ಅಭಿಮಾನಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.