ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು, ನುಡಿಗೆ ಎಲೆಮರೆ ಕಾಯಿಗಳಂತೆ ಸೇವೆ ಸಲ್ಲಿಸಿ ತಮ್ಮದೇ ಆದ ಕೊಡುಗೆ ನೀಡಿರುವ ಇಬ್ಬರು ಕನ್ನಡ ಪರಿಚಾರಕರಿಗೆ ಕೊಡಮಾಡುವ ಕನ್ನಡ ಪರಿಚಾರಕ ಪ್ರಶಸ್ತಿಗೆ ಹಿರಿಯ ಕನ್ನಡ ಲೇಖಕ ಮತ್ತು ಕನ್ನಡಪರ ಹೋರಾಟಗಾರ ಕೋಲಾರದ ಕೆ. ರಾಜಕುಮಾರ್, ಮತ್ತು ಕನ್ನಡ ಗಾಯಕ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಕೋಲಾರದ ಸುಲೇಮಾನ್ಖಾನ್ ಆಯ್ಕೆಯಾಗಿದ್ದಾರೆ. ಕೋಲಾರದ ಕೆ. ರಾಜಕುಮಾರ್ ವಿದ್ಯಾರ್ಥಿ ದಿಸೆಯಿಂದಲೂ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಅಲ್ಲದೇ ತಮ್ಮ ಬರಹ ಮತ್ತು ಭಾಷಣಗಳ ಮೂಲಕ ಕರ್ನಾಟಕ ರಾಜ್ಯಾದ್ಯಂತ ಅತ್ಯುತ್ತಮ ಕನ್ನಡಪರ ಸಂಪನ್ಮೂಲ ವ್ಯಕ್ತಿಯಾಗಿ ಚಿರಪರಿಚಿತರಾಗಿದ್ದಾರೆ.
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದ ಕೋಲಾರದ ಸುಲೇಮಾನ್ಖಾನ್ ಸರ್ಕಾರಿ ವೃತ್ತಿಯ ಜೊತೆಗೆ ಕನ್ನಡ ಸೇವೆಯನ್ನು ಪ್ರವೃತ್ತಿ ಮಾಡಿಕೊಂಡವರು. ಯಾವುದೇ ಕನ್ನಡಪರ ಕಾರ್ಯಕ್ರಮಗಳಿದ್ದಲ್ಲಿ ಆಹ್ವಾನ ಇರಲಿ ಅಥವಾ ಇಲ್ಲದಿರಲಿ ತಮ್ಮ ಉಪಸ್ಥಿತಿ ಹಾಗೂ ಕನ್ನಡ ಗೀತಗಾಯನದ ಮೂಲಕ ಗಮನ ಸೆಳೆದವರು.ಈ ಇಬ್ಬರು ವಯೋವೃದ್ಧ ಕನ್ನಡಪರ ಹೋರಾಟಗಾರರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ 2ನೇ ವರ್ಷದ ಕನ್ನಡ ಪರಿಚಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5000 ರೂ ನಗದು ಪಾರಿತೋಷಕವನ್ನು ಹೊಂದಿರುತ್ತದೆ.
ಕನ್ನಡ ರಾಜ್ಯೋತ್ಸವ ದಿನಕ್ಕೆ ಪೂರ್ವಭಾವಿಯಾಗಿ ದಿನಾಂಕ 30-10-2024 ರಂದು ಬುಧವಾರ ಬೆಳಗ್ಗೆ 10-30 ಗಂಟೆಗೆ ಕೋಲಾರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮತ್ತು ಖಜಾಂಚಿ ಎ.ಜಿ.ಸುರೇಶ್ಕುಮಾರ್ ತಿಳಿಸಿದ್ದಾರೆ.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎನ್ ಬಿ.ಗೋಪಾಲಗೌಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೆ.ಯು.ಡ.ಬ್ಲ್ಯೂ.ಜೆ ಖಜಾಂಚಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು ಭಾಗವಹಿಸುವರು. ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಿತ್ರರಾದ ತಾವುಗಳು ಆಗಮಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.