(www.vknews.com) : ಇತ್ತೀಚಿಗೆ ಅಫ್ಘಾನ್ ದೇಶದಲ್ಲಿ ಉಂಟಾದ ಹೊಸ ಬೆಳವಣಿಗೆಯ ನಂತರ ತಾಲಿಬಾನಿಗಳನ್ನು ಮುಂದಿಟ್ಟು ಕೊಂಡು ಅಲ್ಲಿನ ದುಸ್ಥಿತಿಗೆ ಇಸ್ಲಾಮೀ ಶರೀಹತ್ ಕಾನೂನು ಕಾರಣ ಎಂದು ಅಪಹಾಸ್ಯ ಮಾಡುವವರು,ಪುಟಘಟ್ಟಲೆ ಬರೆಯುವವರು, ಘಂಟೆ ಗಟ್ಟಲೆ ಭಾಷಣ ಬಿಗಿಯುವವರು, ಟಿವಿಯಲ್ಲಿ ಕುಳಿತು ಡಿಬೆಟ್ ಎಂಬ ಪ್ರಹಸನ ನಡೆಸುವವರು ಸೌದಿ ,ದುಬಾಯಿ ಸೇರಿದಂತೆ ಜಗತ್ತಿನಲ್ಲಿ ಮುಸ್ಲಿಮರೇ ಬಹುಸಂಖ್ಯಾತರಿರುವ ಅಷ್ಟೂ ಸಮೃದ್ದ ರಾಷ್ಟ್ರಗಳ ಬಗ್ಗೆ ದಿವ್ಯ ಮೌನ ತಾಳುತ್ತಿರುವುದು ಯಾಕೆ? ಎಂದು ಮುಲ್ಕಿ ಕೇಂದ್ರೀಯ ಜುಮಾ ಮಸೀದಿಯ ಖತೀಬ್ ಎಸ್ ಬಿ ದಾರಿಮಿಯವರು ತನ್ನ ಸಾಪ್ತಾಹಿಕ ಜುಮಾ ಭಾಷಣದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಭಾರತದ ಲಕ್ಷಾಂತರ ಹಿಂದೂಗಳು ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಎಲ್ಲಾ ಧರ್ಮೀಯರೂ ಗಲ್ಪ್ ರಾಷ್ಟ್ರಗಳಲ್ಲಿ ದುಡಿದು ತಮ್ಮ ಬಾಳನ್ನು ಹಸನಾಗಿಸಿದ್ದಾರೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಅಪರಾಧಗಳು ವಿರಳವಾಗಿದೆ. ಜನರೆಡೆಯಲ್ಲಿ ಶಾಂತಿ ಪ್ರೀತಿ ಅನುಕಂಪ ಸಾಮರಸ್ಯ ತುಂಬಿಕೊಂಡಿದೆ. ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಆಪತ್ಕಾಲದಲ್ಲಿ ಅಲ್ಲಿಂದ ನೆರವು ಹರಿದು ಬರುತ್ತಿದೆ. ನಮ್ಮ ದೇಶದ ಕುಬೇರರು ಅಲ್ಲಿ ಬಂಡವಾಳ ಹೂಡಿ ಲಾಭ ಮಾಡುತ್ತಿದ್ದಾರೆ. ತಾಲಿಬಾನಿಗಳನ್ನು ಮುಂದಿಟ್ಟು ಭಾರತೀಯ ಮುಸ್ಲಿಮರನ್ನು ಚುಚ್ಚುವ ಸ್ವಾರ್ಥ ಕೋಮು ರಾಜಕಾರಣಿಗಳು ನೈತಿಕತೆ – ಧೈರ್ಯ ಇದ್ದರೆ ಈ ಬಗ್ಗೆ ಮಾತಾಡಬೇಕೆಂದು ಆಗ್ರಹಿಸಿದ ಖತೀಬರು ಸತ್ಯವನ್ನು ಮೆರೆಮಾಚಲು ಇಂದಿನ ಸಾಮಾಜಿಕ ಮೀಡಿಯಾದ ಯುಗದಲ್ಲಿ ಸಾಧ್ಯವಿಲ್ಲ ಎಂದರು.
ಮಾನವನ ಗೊತ್ತು ಗುರಿ ಇಲ್ಲದ ಜೀವನಕ್ಕೆ ಒಂದು ಅರ್ಥ ನೀಡುವುದೇ ಶರೀಹತ್ ನಿಯಮದ ಗುರಿಯಾಗಿದ್ದು ಅದನ್ನು ಒಳ್ಳೆಯ ರೀತಿಯಲ್ಲಿ ವ್ಯಾಖ್ಯಾನಿಸಿ ಮಾನವನ ಒಳಿತಿಗಾಗಿ ಬಳಸಿದರೆ ಅಲ್ಲಿ ಸಮೃದ್ದಿ ಉಂಟಾಗುತ್ತದೆ. ಅದೇ ವೇಳೆ ಅದನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ದುರುಪಯೋಗಿಸಿದರೆ ಅದರಿಂದ ನಾಶ ಉಂಟಾಗುತ್ತದೆ ಎಂದು ವ್ಯಾಖ್ಯಾನಿಸಿದ ಖತೀಬರು ರಾಷ್ಟ್ರಗಳ ಸಂವಿಧಾನಗಳು, ಧರ್ಮಗಳ ಸಂಹಿತೆಗಳು ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೊಳಿಸುವವರು ಕೆಟ್ಟವರಾದರೆ ಅದರಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ ಎಂದರಲ್ಲದೇ ಅಂಬೇಡ್ಕರ್ ರವರು ರಚಿಸಿದ ಅಷ್ಟು ಉತ್ತಮವಾದ ನಮ್ಮ ದೇಶದ ಸಂವಿದಾನವನ್ನೇ ದುರ್ವ್ಯಾಖ್ಯಾನ ನಡೆಸಿ ದೇಶದ ಪ್ರಜೆಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿಗಳಿಗೂ ಶರೀಹತ್ ನ ಕಾನೂನು ಎಂದೇಳಿ ಕ್ರೂರತೆಯನ್ನು ಪ್ರಕಟಿಸುವ ತಾಲಿಬಾನಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಖತೀಬರು ಇಂದು ನಮ್ಮ ತಪ್ಪುಗಳನ್ನು ಮೆರೆಮಾಚಲು ಇತರರ ಮೇಲೆ ಸವಾರಿ ಮಾಡುವ ಚಾಳಿ ಬೆಳೆದು ಬರುತ್ತಿದೆ. ಇದು ಮನೆಯೊಳಗಿನ ಗಂಡ ಹೆಂಡಂದಿರಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ತನಕ ಮುಂದುವರೆದಿದೆ. ನಮಗೆ ನಾವು ಸರಿಯಾದರೆ ಇತರರ ಮೇಲೆ ಗೂಭೆಕೂರಿಸುವ ಪರಿಸ್ಥಿತಿ ಉಂಟಾಗುವುದಿಲ್ಲ ಎಂದ ಅವರು ಅದಕ್ಕೊಂದು ಉದಾಹರಣೆಯನ್ನೂ ನೀಡಿದರು.
ಕೆಟ್ಟ ಸ್ವಭಾವವನ್ನು ರೂಡಿಸಿ ಕೊಂಡ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿದ ಸಂಪನ್ಮೂಲ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಕ್ಕಳೇ ನಿಮ್ಮ ಅಭಿವೃದ್ದಿಗೆ ಈ ತನಕ ಅಡ್ಡಿಪಡಿಸುತ್ತಿದ್ದ ನಿಮ್ಮ ಶತ್ರು ಒಳಗೆ ಕೋಣೆಯಲ್ಲಿ ಹೆಣವಾಗಿ ಮಲಗಿದ್ದಾನೆ. ಇನ್ನು ನೀವು ಭಯ ಪಡಪಡುವ ಅಗತ್ಯ ಇಲ್ಲ ಎನ್ನುತ್ತಾ ಪ್ರತಿಯೊಬ್ಬರನ್ನೂ ಒಳಗೆ ಕಳಿಸಿದ. ಅಲ್ಲಿ ನೋಡಿದರೆ ಪೆಟ್ಟಿಗೆಯೊಂದರಲ್ಲಿ ಕನ್ನಡಿಯನ್ನು ಇಡಲಾಗಿತ್ತು. ಸ್ವಂತ ಮುಖ ದರ್ಶಿಸಿ ಬಂದ ವಿದ್ಯಾರ್ಥಿ ಗಳೊಂದಿಗೆ ಸಂಪನ್ಮೂಲ ವ್ಯಕ್ತಿ ಹೇಳಿದ ಮಾತು ತುಂಬಾ ಮಾರ್ಮಿಕವಾಗಿತ್ತು.
ಮಕ್ಕಳೇ ನಿಮ್ಮ ಅಭಿವೃದ್ದಿಗೆ ಅಡ್ಡಿ ಬೇರೆ ಯಾರೂ ಅಲ್ಲ.ಅದು ನೀವೇ ಆಗಿದ್ದೀರಿ. ನೀವು ಮನಸ್ಸು ಮಾಡಿದರೆ ಮಾತ್ರ ನಿಮಗೆ ಅಭಿವೃದ್ದಿ ಸಾದಿಸಬಹುದು. ಬೇರೆಯವರನ್ನು ದೂರಿ ಪ್ರಯೋಜನ ಇಲ್ಲ. ಈ ಉದಾಹರಣೆಯು ಎಲ್ಲಾ ವ್ಯಕ್ತಿಗಳಿಗೂ, ಆಡಳಿತ ನಡೆಸುವವರಿಗೂ, ವಿರೋಧ ಪಕ್ಷದವರಿಗೂ ಹೀಗೇ ಎಲ್ಲಾ ಕ್ಷೇತ್ರದಲ್ಲಿ ದುಡಿಯುವವರಿಗೂ ಅನ್ವಯ ಆಗುತ್ತದೆ ಎಂದ ದಾರಿಮಿಯವರು ನಾವು ನಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಇತರ ವ್ಯಕ್ತಿಗಳ, ಸಂಘಟನೆಗಳ , ದೇಶಗಳ,ಧರ್ಮಗಳ ಮೇಲೆ ಸವಾರಿ ಮಾಡಿ ಖುಷಿ ಪಡುತ್ತೇವೆ ಎಂದು ನುಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.