ಕಾಲಕಾಲಕ್ಕೆ ಜಗತ್ತಿನ ಬೇಡಿಕೆ ಮತ್ತು ಬೆದರಿಕೆಗಳನ್ನು ಅರ್ಥೈಸಿಕೊಂಡು ತನ್ನ ಸಮುದಾಯದ ಸುಧಾರಣೆ ಮತ್ತು ಉನ್ನತೀಕರಣಕ್ಕೆ ಶ್ರಮಿಸುವವರೇ ನಿಜವಾದ ಆಲಿಮ್ ಗಳು
I
(www.vknews.com) ; ಕಾಲಕಾಲಕ್ಕೆ ಜಗತ್ತಿನ ಬೇಡಿಕೆ ಮತ್ತು ಬೆದರಿಕೆಗಳನ್ನು ಅರ್ಥೈಸಿಕೊಂಡು ತನ್ನ ಸಮುದಾಯದ ಸುಧಾರಣೆ ಮತ್ತು ಉನ್ನತೀಕರಣಕ್ಕೆ ಶ್ರಮಿಸುವವರೇ ನಿಜವಾದ ಆಲಿಮ್ ಗಳು. ಜಗತ್ತಿನ ಬೆಳವಣಿಗೆಯನ್ನು ಅವಲೋಕಿಸುವ ಚಿತ್ತ, ತನ್ನ ಸಮುದಾಯ ಜನರನ್ನು ಅವುಗಳೊಂದಿಗೆ ಸ್ಪರ್ಧಿಸಲು ತಯಾರಿಗೊಳಿಸುವುದು ಅದಕ್ಕಾಗಿ ಸಮುದಾಯವನ್ನು ವಿಶ್ವಾಸಕ್ಕೆ ಪಡೆದು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡುವುದು, ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ಧಾರಣೆಯೊಂದಿಗೆ ಸಮುದಾಯದ ಸಾಮರ್ಥ್ಯವನ್ನು ಸದುಪಯೋಗ ಪಡಿಸುವುದರ ಜೊತೆಗೆ ಅದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವವರೇ ನಿಜವಾದ ನಾಯಕ.
ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಅವರನ್ನು ಮೂರು ತಾಸುಗಳು ಇಂದು ಬಹಳ ಹತ್ತಿರದಿಂದ ವೀಕ್ಷಿಸಿದಾಗ ಮತ್ತು ಗ್ರಹಿಸಿದಾಗ ನನ್ನಲ್ಲಿ ಹಲವು ಭರವಸೆಗಳು ಜೀವ ಪಡೆಯಿತು. ಮುಸ್ಲಿಂ ಉಮ್ಮತ್ತಿನ ಪ್ರಸ್ತುತ ಸ್ಥಿತಿಗತಿಗಳ ಗ್ರೌಂಡ್ ರಿಯಾಲಿಟಿಯನ್ನು ಅರ್ಥ ಮಾಡುತ್ತಾ ನಾನು ಆತಂಕದಲ್ಲಿರುವಾಗಲೇ ಈ ವ್ಯಕ್ತಿತ್ವ ಹೊಸ ಉತ್ಸಾಹ ಮತ್ತು ಆಶಾವಾದವನ್ನು ನನ್ನಲ್ಲಿ ಬೆಳೆಸಿತು. ಯಾವ ರೀತಿಯ ಆಲಿಮುಗಳ ಅನಿವಾರ್ಯತೆ ಈ ಸಮುದಾಯಕ್ಕಿದೆಯೋ ಆ ಸ್ಥಾನವನ್ನು ತುಂಬುವ ವಿದ್ವತ್ತ್, ಚಿಂತನೆ ಮತ್ತು ಕಾರ್ಯತಂತ್ರಗಳನ್ನು ಈ ಮಹಾನ್ ವ್ಯಕ್ತಿತ್ವ ಒಳಗೊಂಡಿತ್ತು.
ಪುತ್ತೂರಿನ ಕುಂಬ್ರ ಮರ್ಕಝ್ ಮಹಿಳಾ ಕಾಲೇಜಿನ ಡಿಗ್ರಿ ವಿಭಾಗದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಡಾ. ಅಬ್ದುಲ್ ಹಕೀಂ ಅಝ್ಹರಿ ಅವರು ಜಾಗತಿಕ ವಿದ್ವಾಂಸರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಪಾಂಡಿತ್ಯವನ್ನು, ಭಾಷಾಜ್ಞಾನವನ್ನು, ವಿಷಯ ಮಂಡನೆಯ ಪಕ್ವತೆಯನ್ನು ನಿರೂಪಿಸಿದರು. ವಿಜ್ಞಾನ ಜಗತ್ತಿನ ಪೀಳಿಗೆಯ ಬೌದ್ಧಿಕ ಸಾಮರ್ಥ್ಯ ಮತ್ತು ಮಾನಸಿಕ ಯೋಚನೆಗಳಿಗೆ ಪೂರಕವಾಗಿ ಸ್ಪಂದಿಸುವ ಅವರ ಯೋಜನೆಗಳನ್ನು ವಿವರಿಸಿದರು. ಸಮೀಕ್ಷೆಯ ಆಧಾರಿತ ವಸ್ತುಸ್ಥಿತಿಯ ಅವಲೋಕನ, ಅಧ್ಯಯನದ ಮೂಲಕ ಸಮಸ್ಯೆ ಮತ್ತು ಸವಾಲಿನ ಸ್ಪಷ್ಟತೆ, ಅಣ್ವೇಷನೆಯ ಮೂಲಕ ರಚನಾತ್ಮಕ ಮತ್ತು ದೂರದೃಷ್ಠಿಯ ಪರಿಣಾಮಕಾರಿ ಯೋಜನೆಗಳ ನಿರ್ಮಾಣ, ಅಂಕಿ ಅಂಶಗಳ ಮೂಲಕ ಪ್ರಗತಿ ಮತ್ತು ಸ್ಥಿತಿಗತಿಯ ಧಾರಣೆ ಮಾಡುವ ವೈಜ್ಞಾನಿಕ ಚಿಂತನೆಯ ಅವರ ಮಾತುಗಳು ನನ್ನಲ್ಲಂತೂ ಹೊಸ ಚೈತನ್ಯ ತುಂಬಿತು.
ಶಿಕ್ಷಣ ತಜ್ಞರಾಗಿರುವ ಡಾ. ಅಬ್ದುಲ್ ಹಕೀಂ ಅಝ್ಹರಿ ಮುಸ್ಲಿಂ ಸಮುದಾಯದ ಯುವಕ -ಯುವತಿಯರು ಜಾಗತಿಕ ಯುನಿವರ್ಸಿಟಿಗಳಲ್ಲಿ ಪ್ರವೇಶಿಸಿ, ಜಗತ್ತಿನ ಅಭಿವೃದ್ದಿಗೆ ತಮ್ಮ ದೊಡ್ಡ ಕೊಡುಗೆಗಳನ್ನು ನೀಡುವ ಅನಿವಾರ್ಯತೆ ವಿವರಿಸಿದರು. ಪ್ರತಿ ತಾಲೂಕಿನಲ್ಲೂ ರಿಸರ್ಚ್ ಸೆಂಟರ್ ಗಳು, ಶೈಕ್ಷಣಿಕ ಸಮುಚ್ಚಯಗಳು, ಅಖಾಡಮಿಕ್ ಎಕ್ಸಲೆನ್ಸ್ ಗಳನ್ನು ಸೃಷ್ಠಿಸುವ ಗುಣಮಟ್ಟದ ಶಿಕ್ಷಣ ಸಿಗುವ ಪದ್ದತಿಗಳನ್ನು ರೂಪಿಸಬೇಕು ಎಂದರು. ಇರುವಂತಹ ಶಿಕ್ಷಣ ಸಂಸ್ಥೆಗಳನ್ನು ಉನ್ನತೀಕರಿಸಬೇಕು, ಸೌಲಭ್ಯಗಳನ್ನು ವಿಸ್ತರಿಸಬೇಕು, ಜ್ಞಾನದ ಜೊತೆ ಸುಜ್ಞಾನ, ತತ್ವಜ್ಞಾನದ ಜೊತೆ ತಂತ್ರಜ್ಞಾನ, ಸಂಶೊಧನೆಯ ಜೊತೆ ಕೌಶಲ್ಯ, ನೀಡುವ ಮೂಲಕ ನಮ್ಮ ಪೀಳಿಗೆಯನ್ನು ಇಹ-ಪರ ಯಶಸ್ಸುಗೊಳಿಸಲು ಸಮಾರೋಪಾದಿಯ ಕೆಲಸ ನಡೆಯಬೇಕು ಎಂದು ಅವರು ಹೇಳಿದಾಗ ನಾನಂತೂ ಅವರ ಅಭಿಮಾನಿಯಾದೆ.
ಮಹಿಳಾ ಶಿಕ್ಷಣದ ಬಗ್ಗೆ ಅವರು ಮಾತನಾಡುತ್ತಾ, ಮಹಿಳೆಗೆ ಇಸ್ಲಾಂ ನೀಡಿದ ಸ್ಥಾನಮಾನ ಮತ್ತು ಸ್ವಾಂತಂತ್ರ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹೆತ್ತಿರುವುದು, ಹೆಣ್ಣು ಮಗು ಎಂದು ತಿಳಿದಾಗ ಜೀವಂತ ಹೂತು ಹಾಕುತ್ತಿದ್ದ ಮಕ್ಕಾದ ಜನರನ್ನು ಬದಲಾಯಿಸಿದ್ದು, ಹೆಣ್ಣಿಗೆ ಅವರು ಮಹತ್ವ ಸ್ಥಾನವನ್ನು ಕೊಡಲು ಕಾರಣವಾದದ್ದು ಇಸ್ಲಾಮಿನ ಸಂದೇಶ ಮತ್ತು ಭಕ್ತಿಯಾಗಿತ್ತು. ಮುಟ್ಟಾದ ಹೆಣ್ಣನ್ನು ಮನೆಯಿಂದ ಹೊರ ಹಾಕುವ ಸಂಪ್ರದಾಯ ಕೆಲೆವೆಡೆ ಇದೆ, ಪತಿಯ ಚಿತೆಗೆ ಹಾರುವಂತೆ ಒತಾಯಿಸಿ ಹೆಣ್ಣನ್ನು ಕೊಲ್ಲಲಾಗುತ್ತಿತ್ತು ಇಂತಹ ಅನಿಷ್ಠ ಪದ್ದತಿ ಇಸ್ಲಾಮ್ ಹದಿನಾಲ್ಕು ಶತಮಾನದ ಮೊದಲೇ ಇಲ್ಲವಾಗಿಸುವುದಕ್ಕೆ ಮಹಿಳಾ ಮಾನ್ಯತೆ ಎತ್ತಿ ಹಿಡಿದಿತ್ತು. ಮಹಿಳೆಯರಿಗೆ ಕೆಲವು ದೇಶದಲ್ಲಿ ಆಸ್ತಿಯ ಪಾಲು ಇರಲಿಲ್ಲ. ಪಾಶ್ಚಾತ್ಯ ರಾಷ್ಟ್ರದಲ್ಲಿ ಶತಮಾನಗಳು ಈ ಸ್ಥಿತಿ ಇದ್ದವು. ಇಸ್ಲಾಂ ಜಗತ್ತಿನಲ್ಲಿ ಹರಡಿದಾಗ ಮಹಿಳೆಗೆ ಆಸ್ತಿಯಲ್ಲಿ ಪಾಲು ಇದೆ ಎನ್ನುವ ಕಾನೂನು ಎಲ್ಲರಿಗೂ ಅನುಷ್ಠಾನಗೊಳಿಸುವ ಅನಿವಾರ್ಯತೆ ಉಂಟಾಯಿತು ಎಂದು ಹೇಳಿದ ಡಾ. ಅಬ್ದುಲ್ ಹಕೀಂ ಅಝ್ಹರಿಯವರು ಮುಸ್ಲಿಂ ಮಹಿಳೆಯರು ಜಗತ್ತಿಗೆ ನೀಡಿದ ಕೊಡುಗೆ, ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ, ಜಗತ್ತಿನ ಮೊದಲ ಯುನಿವರ್ಸಿಟಿ ಅಲ್ ಖರಾವೀನ್ ನಿರ್ಮಿಸಿದ್ದು ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆ. ಒಂಬತ್ತನೇ ಶತಮಾನದಲ್ಲಿ ಮೊರಕ್ಕೋದಲ್ಲಿ ನಿರ್ಮಿಸಲ್ಪಟ್ಟ ಈ ಶಿಕ್ಷಣ ಸಂಸ್ಥೆಯ ಅತ್ಯಂತ ಹಳೆಯದಾದ ಮತ್ತು ಈಗಲೂ ಚಾಲನೆಯಲ್ಲಿರುವ ಯುನಿವರ್ಸಿಟಿಯಾಗಿ ಗಿನ್ನೆಸ್ ಪುಸ್ತಕದಲ್ಲಿ ಹೆಸರು ಪಡೆದಿದೆ ಎಂದು ಹೇಳಿದರು.
ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಮ್ಮ ಮೊದಲ ಕೊಡುಗೆ, ಇದರ ಪ್ರಯೋಜನ ಮತ್ತು ಉತ್ತಮ ವಿಷಯವನ್ನು ಜನರತ್ತ ತಲುಪಿಸಬೇಕು, ಇಲ್ಲಿನ ಕೆಡುಕು ಮತ್ತು ಸಮಸ್ಯೆಯನ್ನು ಊರಿನಲ್ಲಿ ಹೇಳಿದರೆ ಪರಿಹಾರ ಸಿಗುವುದಿಲ್ಲ ಹಾಗಾಗಿ ಇಲ್ಲಿಗೆ ಬಂದು ಆಡಳಿತದವರಲ್ಲಿ ಅಥವಾ ಉಸ್ತುವಾರಿಗಳಲ್ಲಿ ಹೇಳಬೇಕು, ಅವರು ಸ್ಪಂದಿಸದೇ ಇದ್ದರೆ ನನಗೊಂದು ಮೇಲ್ ಮಾಡಿ ಬಿಡಿ ಎಂದ ಡಾ. ಅಬ್ದುಲ್ ಹಕೀಂ ಅಝ್ಹರಿಯವರು, ಎಲ್ಲವೂ ವ್ಯವಸ್ಥಿತ ಮತ್ತು ದಾಖಲಿತವಾಗಿ ಕೆಲಸ ಮಾಡಬೇಕು. ನಾವು ಈ ಸಣ್ಣ ಸಣ್ಣ ಉದ್ವೇಗ ಮತ್ತು ಉನ್ಮಾದಗಳಿಂದ ಹೊರ ಬಂದು ದೊಡ್ಡ ಯೋಚನೆ ಮಾಡಬೇಕು. ಹತ್ತು – ನೂರು ಎಕರೆಯಲ್ಲಿ ಶೈಕ್ಷಣಿಕ ಸಮುಚ್ಚಯ, ಕೋಟ್ಯಾಂತರ ರುಪಾಯಿ ಯೋಜನೆ, ಲಕ್ಷಾಂತರ ಮಕ್ಕಳ ಅಭಿವೃದ್ದಿ ಹೀಗೆ ನಮ್ಮ ಕನಸು ಮತ್ತು ಕಾರ್ಯಗಳು ದೊಡ್ಡದಾಗಿರಬೇಕು ಎಂದು ನನ್ನನ್ನೂ ಸಭಿಕರನ್ನೂ ಹುರಿದುಂಬಿಸಿದರು.
✍🏻 ಹನೀಫ್ ಪುತ್ತೂರು ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.