ಮಂಗಳೂರು (www.vknews.in) : ಭವಿಷ್ಯದ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷ ಗಳನ್ನು ಬಿಟ್ಟು ದೇಶ ಆಳುವುದು ಕಷ್ಟ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಅವರು ಜೆಡಿಎಸ್ ಪಕ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತವನ್ನು ವಿರೋಧಿಸಿ ರಾಜ್ಯದಾದ್ಯಂತ ಆಯೋಜಿಸಲುದ್ದೇಶಿಸಿರುವ ಸ್ವಾಭಿಮಾನದ ಅಭಿಯಾನಕ್ಕೆ ಚಾಲನೆ ನೀಡಲು ದ.ಕ. ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ, ಆದರೆ ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲು ಸಾಧ್ಯವಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿಯೂ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೊಂದಿರುವುದು ಸ್ಪಷ್ಟವಾಗಿದೆ ಎಂದರು. ಜಾತ್ಯತೀತ ಶಕ್ತಿಗಳು ಒಂದು ಗೂಡಬೇಕು. ಈ ನಿಟ್ಟಿನಲ್ಲಿ ನಾನು ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದೇನೆ. ಬಿಜೆಪಿ – ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ನಡುವೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಜನತಾದಳವನ್ನು ಸಂಘಟಿಸಲು ರಾಜ್ಯದ ಪ್ರತಿ ಜಿಲ್ಲೆಗೆ ಪ್ರವಾಸ ಕೈಗೊಳ್ಳುತ್ತೇನೆ, ಮುಂದೆ ರಾಜ್ಯದಲ್ಲೂ ಜೆಡಿಎಸ್ ಪಕ್ಷ ಆಡಳಿತ ನಡೆಸಲು ಸರಕಾರಕ್ಕೆ ಬೆಂಬಲಿಸಬೇಕಾದ ಸನ್ನಿವೇಶ ಎದುರಾದರೆ ಜಾತ್ಯತೀತ ಶಕ್ತಿಗಳಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಕರಾವಳಿಯಲ್ಲಿ ಒಂದಲ್ಲ ಒಂದು ಸಮಸ್ಯೆ ಸೃಷ್ಟಿ ಮಾಡುವ ಶಕ್ತಿಗಳು ಬಹಳ ಹಿಂದಿನಿಂದಲೂ ಇರುವುದನ್ನು ಗಮನಿಸಿದ್ದೇನೆ . ಈ ಶಕ್ತಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದೆ. ನಾನು ಧರ್ಮದ ಹೆಸರಿನಲ್ಲಿ ವೈಷಮ್ಯ ಸೃಷ್ಟಿ ಮಾಡಿ ರಾಜಕೀಯ ಲಾಭ ಇದುವರೆಗೂ ಪಡೆದಿಲ್ಲ ಎಂದು ಅವರು ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ರಾಜ್ಯದ ಸಂಸದರು ಒಂದು ಗೂಡಬೇಕು, ತಮಿಳುನಾಡು ರಾಜ್ಯದ ಎಲ್ಲಾ ಸಂಸದರು ತಮ್ಮ ರಾಜ್ಯದ ನೀರು ಅಥವಾ ಇತರ ವಿಚಾರಗಳು ಬಂದಾಗ ಪಕ್ಷ ಭೇದ ಮರೆತು ಒಂದಾಗಿ ಸಂಸತ್ತಿನಲ್ಲಿ ಮುಗಿ ಬೀಳುತ್ತಾರೆ, ನಮ್ಮ ರಾಜ್ಯದ ಸಂಸದರು ವಿವಿಧ ಯೋಜನೆಗಳ ಬಗ್ಗೆ ಒಗ್ಗಟ್ಟಿನ ಪ್ರದರ್ಶನ ಮಾಡುವುದಿಲ್ಲ ಎಂದು ದೇವೇಗೌಡ ಬೇಸರಿಸಿದರು.
ಬಿಜೆಪಿಯಲ್ಲಿ ಮೋದಿ ಒಬ್ಬರೇ ಕಾಣುತ್ತಾರೆ. ಪಂಚ ರಾಜ್ಯದ ಚುನಾವಣೆಯ ಫಲಿತಾಂಶವನ್ನು ಕಾದು ನೋಡಬೇಕಾಗಿದೆ. ಮೋದಿ, ಎಲ್ಲವನ್ನೂ ಕೇಳುತ್ತಾರೆ ಆದರೆ ನಾವು ನೀಡಿದ ಸಲಹೆಗೆ ಸೂಕ್ತ ಸ್ಪಂದನ ನೀಡುವುದಿಲ್ಲ ಎಂದರು.
ತೊಕ್ಕೊಟ್ಟುವಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸ್ವಾಭಿಮಾನದ ಅಭಿಯಾನಕ್ಕೆ ಚಾಲನೆ ಕೊಟ್ಟು ಸಾರ್ವಜನಿಕರನ್ನುದ್ದೇಶಿಸಿ ದೇವೆಗೌಡರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಾನ್ಯ ಬಿ.ಎಂ. ಫಾರೂಕ್ ಪ್ರಸ್ತುತ ನಡೆಯುತ್ತಿರುವ ಹಿಜಾಬ್ ದ್ವೇಷ, ವಿದ್ಯಾರ್ಥಿಗಳ ಮೇಲೆ ಬಿತ್ತುತ್ತಿರುವ ಕೋಮು ದ್ವೇಷ, ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೋಮು ಪ್ರಚೋದಿತ ಹೇಳಿಕೆಗಳು ಹಾಗೂ ಉಳ್ಳಾಲ ಹಾಗೂ ಸುರತ್ಕಲ್ ಕ್ಷೇತ್ರದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಿರುವ ಯುಜಿಡಿ ಕಾರ್ಯಕ್ರಮದ ಬಗ್ಗೆ ಕಿಡಿಕಾರಿದರು.
ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ್ ರನ್ನು ದೇವೇಗೌಡರ ಮೂಲಕ ಸನ್ಮಾನಿಸಲಾಯಿತು. ಹಾಗೂ ಇದೆ ಸಂಧರ್ಭದಲ್ಲಿ “ಭಾರತಾಂಬೆಯ ಮಣ್ಣಿನ ಮಗ” ಎಂಬ ಆಲ್ಬಮ್ ಗೀತೆಯನ್ನು ದೇವೇಗೌಡರ ಮೂಲಕ ಬಿಡುಗಡೆ ಮಾಡಿಸಲಾಯ್ತು.
ಈ ಸಂಧರ್ಭದಲ್ಲಿ ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜೆಡಿಎಸ್ ಮುಖಂಡರಾದ ಎಂ.ಬಿ. ಸದಾಶಿವ, ಸುಶೀಲ್ ನೊರೊನ್ಹಾ, ಇಕ್ಬಾಲ್ ಅಹ್ಮದ್ ಮುಲ್ಕಿ, ಮುಹಮ್ಮದ್ ಕುಂಞ, ಸುಮತಿ ಹೆಗ್ಡೆ, ಅಮರಶ್ರೀ ಅಮರನಾಥ ಶೆಟ್ಟಿ, ರಿಯಾಝ್ ಹೆಚ್. ಕಾರ್ನಾಡ್, ನಝೀರ್ ಉಳ್ಳಾಲ, ಖಲೀಲ್ ಉಳ್ಳಾಲ, ದಿನಕರ್ ಉಳ್ಳಾಲ, ಡಿ.ಪಿ. ಹಮ್ಮಬ್ಬ, ಬಶೀರ್ ಕೈಕೋ, ಮೋಹನದಾಸ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಅಕ್ಷಿತ್ ಸುವರ್ಣ, ಕನಕದಾಸ್, ಪುಷ್ಪರಾಜನ್, ಫೈಝಲ್, ಅಶ್ರಫ್ ಕಲ್ಲೇಗ, ರತ್ನಾಕರ ಸುವರ್ಣ, ನೂರುಲ್ಲ ಶೇಕ್, ಹಾರೂನ್ ರಶೀದ್, ನಝೀರ್ ಸಾಮಣಿಗೆ, ರಮಾನಾಥ್ ಪೈ, ಉಮೇಶ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷರಾದ ಜಾಕೇ ಮಾಧವಗೌಡರು ಸ್ವಾಗತ ಭಾಷಣ ಮಾಡಿದರು, ನಝೀರ್ ಉಳ್ಳಾಲ ರವರು ಧನ್ಯವಾದವಿತ್ತರು, ಎಂ.ಬಿ. ಸದಾಶಿವ ಕಾರ್ಯಕ್ರಮವನ್ನು ಸಂಯೋಜಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.