#ನೆನಪಿಗಾಗಿ..
(www.vknews.in) : ಗೋಧ್ರೋತ್ತರವಾಗಿ ಸಂಘಪರಿವಾರದ ಸಂಘಟನೆಗಳು ತಕ್ಷಣವೇ ಗುಜರಾತಿನಾದ್ಯಂತ ವ್ಯವಸ್ಥಿತವಾಗಿ ಕೋಮುಗಲಭೆಗಳನ್ನು ನಡೆಸಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸಾವಿರಾರು ಅಮಾಯಕ ಮುಸ್ಲಿಂ ಕುಟುಂಬಗಳು ಮತ್ತು ಅವರಿಗೆ ನೆರವು ನೀಡುತ್ತಿದ್ದ ಹಿಂದೂಗಳ ಮೇಲೆ ತೀವ್ರ ದಾಳಿ ನಡೆಸಲಾಯಿತು. ಗುಜರಾತಿನಲ್ಲಿ ಮುಸ್ಲಿಮರ ಮೇಲಾದ ಜನಾಂಗೀಯ ಮಾರಣಹೋಮ ಸ್ವತಂತ್ರ ಭಾರತದ ಚರಿತ್ರೆಯ ಪುಟಗಳಲ್ಲಿ ಒಂದು ಕರಾಳ ಅಧ್ಯಾಯವಾಗಿ ಸೇರ್ಪಡೆಯಾಯಿತು. 1984 ರಲ್ಲಿ ನಡೆದಿದ್ದ ಸಿಖ್ಖರ ಮಾರಣಹೋಮದ ನಂತರ ದೇಶದಲ್ಲಿ ನಡೆದ ಮತ್ತೊಂದು ಭೀಕರ ನರಸಂಹಾರ ಪ್ರಕರಣ ಅಂದರೆ 2002 ರ ಗುಜರಾತ್ ನರಸಂಹಾರ. ಇಂತಹ ಭೀಕರ ನರಹತ್ಯೆ, ಸಾಮೂಹಿಕ ಅತ್ಯಾಚಾರಗಳಿಗೆ ಬಲಿಯಾದ ಕುಟುಂಬವೊಂದರ ಮಹಿಳೆಯೇ ನತದೃಷ್ಟೆ ಬಿಲ್ಕೀಸ್ ಬಾನು.
ಅಹಮದಾಬಾದ್ನಿಂದ 200 ಕಿಲೋಮೀಟರ್ ದೂರದಲ್ಲಿರುವ ದಾಹೋದ್ ಜಿಲ್ಲೆಯಲ್ಲಿರುವ ರಾಧಿಕಾಪುರ ಬಿಲ್ಕೀಸ್ ಬಾನುವಿನ ಹುಟ್ಟೂರು. ಫೆಬ್ರವರಿ 28 ರಂದು ಶುರುವಾಗಿದ್ದ ಕೋಮುಗಲಭೆ ರಾಧಿಕಾಪುರವನ್ನು ಪ್ರವೇಶಿಸಿ ಆಕೆಯ ನೆರೆಯ ಹೊರೆಯ 60 ಮುಸಲ್ಮಾನರ ಮನೆಗಳಿಗೆ ಬೆಂಕಿ ಇಡಲಾಗಿತ್ತು. ಊರಿನಲ್ಲಿದ್ದರೆ ಸಾವು ಖಚಿತ ಎಂದರಿತ ಬಿಲ್ಕೀಸ್ ಬಾನುವಿನ ಕುಟುಂಬ ಭಯದಿಂದಲೇ ಸಾವನ್ನು ಬೆನ್ನ ಹಿಂದೆ ಬೇತಾಳದಂತೆ ಕಟ್ಟಿಕೊಂಡು ಸುರಕ್ಷಿತ ಸ್ಥಳ ಹುಡುಕುತ್ತಾ ಓಡುವುದರಲ್ಲಿತ್ತು.
ಆಗ ಬಿಲ್ಕೀಸ್ ಬಾನು ಐದು ತಿಂಗಳ ಗರ್ಭಿಣಿ. ಬಗಲಲ್ಲಿ ಮೂರುವರೆ ವರ್ಷದ ಮಗಳು ಸಾಲೇಹ. ಒಟ್ಟು 15 ಜನ ಕುಟುಂಬ ಸದಸ್ಯರೊಂದಿಗೆ ಸುರಕ್ಷಿತ ಸ್ಥಳಕ್ಕಾಗಿ ಓಟ ನಿಲ್ಲಿಸುವಂತಿರಲಿಲ್ಲ. ಸಾವು ಬೆನ್ನ ಹಿಂದೆ ಅಟ್ಟಿಸಿಕೊಂಡು ಬರುತ್ತಿತ್ತು. ಒಂದೆಡೆಯಿಂದ ಮತ್ತೊಂದೆಡೆಗೆ ಪರಾರಿಯಾಗುತ್ತಲೇ, ತಲೆಮರೆಸಿಕೊಂಡಿದ್ದಾಗಲೇ ಆಕೆಯ ತಂಗಿ ಶಮೀಮ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸುತ್ತಮುತ್ತಲ ಅಡವಿ ಗಿಡ ಮರಗಳ ನೆರಳಿನಲ್ಲಿ ಅಡಗಿಕೊಳ್ಳುತ್ತಿದ್ದ ಆಕೆಯ ಕುಟುಂಬ ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ಪ್ರದೇಶ ತಲುಪಿ ಪ್ರಾಣ ಉಳಿಸಿಕೊಳ್ಳಬೇಕಿತ್ತು. ಹೆದ್ದಾರಿಗಳನ್ನು ತುಳಿಯುವಂತಿರಲಿಲ್ಲ. ಒಳನಾಡಿನ ಕಚ್ಚಾ ದಾರಿಗಳಲ್ಲಿಯೇ ಸಾಗಬೇಕಿತ್ತು. ಪ್ರಾಣ ಉಳಿಸಿಕೊಳ್ಳುವ ಈ ಭಯದ ಪಯಣದಲ್ಲಿ ಕರುಣೆ ಸಹಾನುಭೂತಿಯುಳ್ಳ ಹಿಂದೂಗಳು ಕೆಲವೊಂದು ಕಡೆ ಆಕೆಯ ಕುಟುಂಬವನ್ನು ಕಾಪಾಡಿದ್ದುಂಟು. ಮಾರ್ಗಮಧ್ಯೆ ಲಾರಿಯೊಂದನ್ನು ಹತ್ತಿದರು. ಅದರಲ್ಲಿ ಬಚ್ಚಿಟ್ಟುಕೊಂಡು ಹೊರಟ ಬಿಲ್ಕೀಸ್ ಕುಟುಂಬ ಪನ್ನಿವೇಲ್ ಎಂಬ ಹಳ್ಳಿಯನ್ನು ಸೇರಿದ್ದರೆ ಕುಟುಂಬದ 17 ಜನರ ಪ್ರಾಣ ಉಳಿಯುತ್ತಿದ್ದವೇನೋ?
ಆದರೆ ಹಾಗಾಗಲಿಲ್ಲ ರಣಧಿಕಪುರ ಗ್ರಾಮ ತಲುಪುತ್ತಿದ್ದಂತೆ ಈ ಕುಟುಂಬ ಪಯಣಿಸುತ್ತಿದ್ದ ಲಾರಿಯನ್ನು 2 ಟ್ರಕ್ಕುಗಳು ಅಡ್ಡಹಾಕಿದವು. ಏಕಾಏಕಿ ದಾಳಿ ಮಾಡಿದ 20 ರಿಂದ 30 ಜನರು, ಲಾರಿಯಲ್ಲಿದ್ದ ಕುಟುಂಬವನ್ನು ಧರಧರನೆ ಕೆಳಗೆ ಎಳೆದು ತಂದರು. ಈ ಕುಟುಂಬ ನೋಡ ನೋಡುತ್ತಿದ್ದಂತೆ ಕಣ್ಣ ಮುಂದೆ ಸುಯ್ಯಂತ ಹೋಗೋ ತಲವಾರುಗಳು. ಹೆಂಗಸರ ಜಡೆ ಹಿಡಿದು ಎಳೆದಾಡುತ್ತಿದ್ದಾಗ ಆ ಹೆಂಗಸರಿಗಾಗುವ ನೋವು. ಗಂಡಸರಿಗೆ ಬೆನ್ನ ಹಿಂದೆ ಅಟ್ಟಾಡಿಸಿ ಹೊಡೆಯುವಾಗ ಅವರ ಕೂಗಾಟ, ಚೀರಾಟ, ನೋವಿನ ಆರ್ತನಾದ. ಅಬ್ಬಬ್ಬಾ! ಆ ಬೀಭತ್ಸ ಕ್ಷಣ ನಮ್ಮಿಂದ ಊಹಿಸಿಕೊಳ್ಳಲಾಗದು.
ಆಗ ಒಬ್ಬ ಬಂದು ಬಿಲ್ಕೀಸ್ ಬಾನು ಕೈಯಲ್ಲಿದ್ದ ಮೂರು ವರ್ಷದ ಮಗಳು ಸಾಲೇಹಳನ್ನು ಕಸಿದುಕೊಂಡು ಕ್ಷಣಮಾತ್ರದಲ್ಲೇ ನೆಲಕ್ಕೆ ಜಜ್ಜಿ ಅಪ್ಪಚ್ಚಿ ಮಾಡಿದ. ಆತನೇ ಎರಡು ದಿನಗಳ ಹಿಂದಷ್ಟೇ ಜನ್ಮ ನೀಡಿದ್ದ ಬಿಲ್ಕೀಸ್ ಬಾನುವಿನ ತಂಗಿ ಶಮೀಮಳ ಎರಡು ದಿನದ ಮಗುವನ್ನು ಬಗಲಿನಿಂದ ಕಿತ್ತುಕೊಂಡು ಲಾರಿಗೆ ಅಪ್ಪಳಿಸಿದ. ನಂತರ ಅವಳನ್ನು ಬಿಡದೆ ಕುಟುಂಬದ ಒಟ್ಟು ಏಳು ಹೆಂಗಸರನ್ನು ಹಿಡಿದು ಸಾಮೂಹಿಕ ಅತ್ಯಾಚಾರ ಮಾಡಿ 14 ಜನರನ್ನು ಕೊಂದರು.
ಬಿಲ್ಕೀಸಳ ಕುಟುಂಬ ಪಯಣಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅವಳ ಕುಟುಂಬದ ಮೇಲೆ ದಾಳಿ ಮಾಡಿದವರು ಹೊರಗಿನ ಅಪರಿಚಿತರೇನಲ್ಲ. ಎಲ್ಲರೂ ಅವಳ ಊರಿನ ಚಿರಪರಿಚಿತ ವ್ಯಕ್ತಿಗಳೇ! ಆಕೆಯ ಮೇಲೆ ಅತ್ಯಾಚಾರವೆಸಗಿದವರ ಪೈಕಿ ಒಬ್ಬ ದಿನಾಲೂ ಮನೆಗೆ ಹಾಲು ಕೊಡಲು ಬಂದಾಗ ಬಿಲ್ಕಿಸಳನ್ನು ‘ಬೇಟಿ'(ಮಗಳು) ಎಂದು ಕರೆಯುತ್ತಿದ್ದ. ಆತನ ಮಗ ಹಾಲು ಕೊಡಲು ಮನೆಗೆ ಬಂದಾಗ ಆಕೆಯನ್ನು ಬಾಯ್ತುಂಬ ‘ದೀದಿ’ ಎಂದು ಕರೆಯುತ್ತಿದ್ದ. ಇನ್ನೊಬ್ಬ ಆಕೆಯ ಕುಟುಂಬ ವೋಟು ಹಾಕಿ ಗೆಲ್ಲಿಸಿದ ಗ್ರಾಮ ಪಂಚಾಯತ್ ಸದಸ್ಯೆಯ ಗಂಡ. ಮತ್ತೊಬ್ಬ ತನ್ನ ಮನೆಯ ಪಕ್ಕದ ಡಾಕ್ಟರನ ಮಗ. ಬಹುದಿನಗಳವರೆಗೆ ಬಿಲ್ಕೀಸಳಿಗೆ ಕಾಡಿದ ಪ್ರಶ್ನೆ ಇವರೆಲ್ಲಾ ಬೇಟಿ, ದೀದಿ, ಬೆಹನ್ ಎಂದು ಕರೆಯುತ್ತಿದ್ದವರು ಅತ್ಯಾಚಾರ ಮಾಡುವಾಗ ಕ್ರೂರಿಗಳೇಕೆ ಆದರೂ? ಅತ್ತು ಕರೆದು ನಾನೂ ನಿಮ್ಮ ತಂಗಿ, ಮಗಳಂತೆ ಎಂದು ಬೇಡಿಕೊಂಡರು ಈ ಕ್ರೂರಿಗಳಿಗೇಕೆ ಕರುಣೆ ಬರಲಿಲ್ಲ?
ಬಿಲ್ಕೀಸ್ ಬಾನು ಸತ್ತಿರಲಿಲ್ಲ..
ಬಿಲ್ಕೀಸ್ ಬಾನು 5 ತಿಂಗಳ ಗರ್ಭವತಿಯಾಗಿದ್ದು ಆಕೆಯನ್ನು ಮತ್ತು ಅವಳ ತಾಯಿ ಸೇರಿದಂತೆ ಇತರ ನಾಲ್ಕು ಮಹಿಳೆಯರ ಮೇಲೆ ಅತ್ಯಂತ ಹೇಯವಾಗಿ ಸಾಮೂಹಿಕ ಅತ್ಯಾಚಾರವೆಸಗಲಾಯಿತು. ಬಿಲ್ಕೀಸಳ ಕಣ್ಣೆದುರೇ ಆಕೆಯ ಮೂರುವರೆ ವರ್ಷದ ಕರುಳಕುಡಿ ಸಾಲೇಹಳ ತಲೆಬುರುಡೆಯನ್ನು ಒಬ್ಬ ಮತಾಂಧ ನೆಲಕ್ಕೆ ಜಜ್ಜಿ ಕೊಂದರೆ, ಮತ್ತೊಂದು ಗುಂಪು ಅವಳ ಮೇಲಿನ ಬಟ್ಟೆಗಳನ್ನು ಹರಿದು ಚಿಂದಿ ಮಾಡಿತ್ತು. ಐದು ತಿಂಗಳ ಗರ್ಭಿಣಿ ಎಂದು ಆಕೆ ಅಲವತ್ತುಕೊಂಡಳು. ನೀವೆಲ್ಲಾ ನನ್ನ ಅಣ್ಣಂದಿರು ಚಿಕ್ಕಪ್ಪಂದಿರಿದ್ದಂತೆ ಎಂದು ಗುಜರಾತಿ ಭಾಷೆಯಲ್ಲಿ ಎಷ್ಟೇ ಗೋಗರೆದರೂ ಕ್ರೂರಿಗಳಿಗೆ ಯಾವ ಕರುಣೆಯೂ ಬರಲಿಲ್ಲ.
ಗರ್ಭವತಿಯಾಗಿದ್ದ ಆಕೆಯನ್ನು ಒಬ್ಬನ ಮೇಲೆ ಮತ್ತೊಬ್ಬನಂತೆ ಬರೋಬ್ಬರಿ 22 ಬಾರಿ ಅತ್ಯಾಚಾರವೆಸಗಿ ಚಾಕು-ಚೂರಿಗಳಿಂದ ಇರಿದು ಮೈತುಂಬ ಗಾಯಗೊಳಿಸಿದರು. ಎರಡು ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಅವಳ ತಂಗಿ ಶಮೀಮಳನ್ನು ಬಿಡದೇ ಅತ್ಯಾಚಾರ ಮಾಡಿ ಕೊನೆಗೆ ಅವಳನ್ನು ಕೊಂದು, ಗುಂಪಿನಲ್ಲಿದ್ದ ಇನ್ನೊಬ್ಬ ಆಕೆಯ ತಾಯಿಯ ಗಂಟಲನ್ನು ಎರಡು ಕೈಗಳಿಂದ ಬಗೆದು ಸೀಳಿಬಿಟ್ಟ! ಮತಾಂಧ ಉದ್ರಿಕ್ತ ಗುಂಪು ಮೇಲೆರಗಿ ದಾಳಿ ಆರಂಭಿಸಿದ ಒಂದು ಗಂಟೆಯೊಳಗೆ ಮನೆ ಮಂದಿಯ ದೇಹವೆಲ್ಲಾ ಛಿದ್ರವಾಗಿ ರಕ್ತದ ಮಡುವಿನಲ್ಲಿ ಚೆಲ್ಲಾಡಿತ್ತು. ಕತ್ತಿ, ಮಚ್ಚು, ದೊಣ್ಣೆಗಳನ್ನು ಹಿಡಿದು ಬಿಲ್ಕೀಸ್ ಬಾನುವಿನ ಕುಟುಂಬಸ್ಥರನ್ನು ಮರಗಳನ್ನು ಕತ್ತರಿಸುವ ಹಾಗೇ ಕತ್ತರಿಸಿ ಸಾಯಿಸಿದ್ದರು.
ಇಷ್ಟೆಲ್ಲಾ ಮುಗಿಸಿದ ನಂತರ ಬಿಲ್ಕೀಸ್ ಸತ್ತಿದ್ದಾಳೆಂದು ತಿಳಿದು ಗಲಭೆಕೋರರು ಅವಳನ್ನು ಅಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋದರು. ಅದೃಷ್ಟವಶಾತ್ ಬಿಲ್ಕೀಸ್ ಬಾನು ಬದುಕಿ ಉಳಿದಿದಿದ್ದಳು. ಎಚ್ಚರ ಬಂದಾಗ ಪೂರ್ಣ ಬೆತ್ತಲಾಗಿರುವುದು ತಿಳಿಯಿತು. ಸುತ್ತಮುತ್ತ ಕೊಚ್ಚಿ ಹಾಕಲಾಗಿದ್ದ ತನ್ನದೇ ಕುಟುಂಬದ ರಕ್ತಸಿಕ್ತ ಕಳೇಬರಗಳು. ಬೆತ್ತಲಾಗಿಯೇ ನಿರ್ಜನ ಪ್ರದೇಶದಲ್ಲಿ ನಡೆಯುತ್ತಾ ನಡೆಯುತ್ತಾ ಅತಿಯಾದ ದುಃಖ, ಭೀತಿಯಲ್ಲಿಯೇ ಗುಡ್ಡ ಹತ್ತಿ ಚಳಿಯಲ್ಲಿಯೇ ರಾತ್ರಿ ಕಳೆದಳು. ಹೊಟ್ಟೆಗೆ ಹಸಿವಾಗಿತ್ತು ಬಾಯಿಗೆ ನೀರಡಿಕೆಯಾಗಿತ್ತು. ಸುತ್ತಮುತ್ತಾ ಯಾರು ಇಲ್ಲ. ಆಕಸ್ಮಾತ್ ಯಾರಾದರೂ ಸಿಕ್ಕರೆ ನಂಬುವಂತೆ ಇರಲಿಲ್ಲ ಉಳಿದಿದ್ದ ಪ್ರಾಣ ಕಳೆದುಕೊಳ್ಳುವ ಭೀತಿ. ದೇವನ ನಾಮಸ್ಮರಣೆ ಮಾಡುತ್ತಾ ಭಯದಿಂದಲೇ ನೀರಿಗಾಗಿ ತೇಕುತ್ತಾ… ತೇಕುತ್ತಾ… ಹೆಜ್ಜೆ ಹಾಕಿದಳು. ಕೊಳವೆ ಬಾವಿಯೊಂದರ ಬಳಿ ನೀರು ಸೇದುತ್ತಿದ್ದ ಆದಿವಾಸಿ ಹೆಣ್ಣು ಮಗಳು ಬಟ್ಟೆಗಳನ್ನು ತೊಡಿಸಿದಳು.
ವಿದ್ಯಾವಂತೆ ಅಲ್ಲದಿದ್ದರೂ ಬಿಲ್ಕೀಸ್ ಬಾನು ವಿವೇಚನೆಯಿಂದ ಮೊಟ್ಟ ಮೊದಲಿಗೆ ಲಿಂಖೇಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಆಕೆಯ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿ ಆರೋಪಿಗಳ ಹೆಸರುಗಳನ್ನು FIR ನಲ್ಲಿ ಸೇರಿಸಲು ನಿರಾಕರಿಸಿದರು. FIR ನಲ್ಲಿ ಹೆಸರುಗಳನ್ನು ಸೇರಿಸಲೇಬೇಕೆಂದು ಒತ್ತಾಯಿಸಿದರೆ ವಿಷದ ಇಂಜೆಕ್ಷನ್ ನೀಡಿ ಸಾಯಿಸುವುದಾಗಿ ಬೆದರಿಕೆ ಒಡ್ಡಿದರು. ಆದರೆ ಕುಟುಂಬವನ್ನು ಕಳೆದುಕೊಂಡಿದ್ದ ಬಿಲ್ಕೀಸ್ ನ್ಯಾಯ ಪಡೆಯಲೇಬೇಕೆಂದು ಪಣ ತೊಟ್ಟಳು. ಸವಾಲುಗಳನ್ನೆಲ್ಲಾ ಎದುರಿಸಿ ಗೃಹರಕ್ಷಕದಳದ ಸಿಬ್ಬಂದಿಯೊಬ್ಬರ ಸಹಾಯದಿಂದ ದೂರು ದಾಖಲಿಸಿದಳು. ಅತ್ಯಾಚಾರ ಪ್ರಕರಣಗಳಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆಯಾಗಬೇಕೆಂಬ ನಿಯಮವಿದ್ದರೂ ಬಿಲ್ಕಿಸ್ಳನ್ನು ಗೋಧ್ರಾ ಪರಿಹಾರ ಕ್ಯಾಂಪಿಗೆ ಹೋದ ನಂತರವೇ ತಪಾಸಣೆ ಮಾಡಿಸಿದ್ದು. ದೂರು ದಾಖಲಿಸಿದ ಒಂದು ವರ್ಷದವರೆಗೂ ತಾವೇ ತನಿಖೆ ಕೈಗೊಂಡು ನಂತರ ಆಕೆಯ ಹೇಳಿಕೆಯ ಸ್ಥಿರವಾಗಿಲ್ಲ ಎಂದು ಹೇಳಿ ತನಿಖೆಯನ್ನು ಅವಸರದಲ್ಲಿ ಮುಗಿಸಲು ಯತ್ನಿಸಿದ ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿ ಬಿಟ್ಟರು.
ಸುಪ್ರೀಂ ಕದ ತಟ್ಟಿದ ಗಟ್ಟಿಗಿತ್ತಿ..
2003ರಲ್ಲಿ ಬಿಲ್ಕೀಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕದತಟ್ಟಿ ನಂತರ ಸುಪ್ರೀಂಕೋರ್ಟ್ ಮೊರೆ ಹೋದಳು. ಕಿರುಕುಳ, ಬೆದರಿಕೆಗಳಿಂದ ಎರಡು ವರ್ಷಗಳಲ್ಲಿ ಇಪ್ಪತ್ತು ಬಾರಿ ಮನೆಯನ್ನು ಬದಲಿಸಿದಳು. ಗುಜರಾತ್ ರಾಜ್ಯ ಸರ್ಕಾರದ ಬಗ್ಗೆ ತನ್ನ ಅವಿಶ್ವಾಸವನ್ನು ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ 2004 ರಲ್ಲಿ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿ ಸಿಬಿಐ ತನಿಖೆಗೆ ಆದೇಶಿಸಿತು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಿಬಿಐ ಮೊದಲ ಬಾರಿಗೆ ಪ್ರಕರಣದ ಎಲ್ಲಾ ಆರೋಪಿಗಳನ್ನು 2004 ರ ಜನೆವರಿಯಲ್ಲಿ ಬಂಧಿಸಿತು.
ಶವಗಳ ಮಹಜರು ನಡೆದಿರುವುದಿಲ್ಲ. ಕೊಳೆಯಲು ಬಿಟ್ಟಿರುತ್ತಾರೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷಿ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರ ಜೈವಿಕ ಸ್ಯಾಂಪಲ್ಗಳನ್ನು ಸಂಗ್ರಹಿಸಿರುವುದಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನ್ ಮಾಡಲಾಗುತ್ತದೆ. ಮರು ಪರೀಕ್ಷೆಗಾಗಿ ಕೊಲೆಯಾದವರ ದೇಹಗಳನ್ನು ಗೋರಿಗಳಿಂದ ಹೊರತೆಗೆದಾಗ ಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಗುರುತು ಸಿಗಬಾರದೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಮಹತ್ವದ ಸಾಕ್ಷಿ ಪುರಾವೆಗಳನ್ನು ತಿದ್ದಿ ನಾಶಮಾಡಿದ ಏಳು ಮಂದಿ ಪೊಲೀಸರು ಮತ್ತು ವೈದ್ಯರು ಬಂಧನಕ್ಕೊಳಗಾದರು. 2005 ರಲ್ಲಿ ಬಾಂಬೆ ಕೆಳ ನ್ಯಾಯಾಲಯ 20 ಆರೋಪಿಗಳ ಪೈಕಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 2002 ರ ಗುಜರಾತ್ ನರಮೇಧದಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಮೊಟ್ಟ ಮೊದಲ ಶಿಕ್ಷೆಯ ತೀರ್ಪು ಇದಾಗಿತ್ತು.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್ಕೀಸ್ ಬಾನುವಿನ ಮೊದಲ ದೂರನ್ನು ದಾಖಲಿಸಲು ನಿರಾಕರಿಸಿದಕ್ಕಾಗಿ ಬಾಂಬೆ ಹೈಕೋರ್ಟ್, ಲಿಂಖೇಡ್ ಪೊಲೀಸ್ ಠಾಣೆಯ ಅಧಿಕಾರಿ ಸೋಮಾಭಾಯಿ ಗೋರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತು. ಅಷ್ಟೇ ಅಲ್ಲ ಬಾಂಬೆ ಹೈಕೋರ್ಟ್ ನರೇಂದ್ರ ಮೋದಿಯವರನ್ನು “ಆಧುನಿಕ ನಿರೋ” ಎಂದು ಕಟು ಶಬ್ದಗಳಲ್ಲಿ ಟೀಕಿಸಿತು. ಚರಿತ್ರೆಯಲ್ಲಿ ಇಟಲಿಯ ರೋಮ್ ನಗರವನ್ನು ಆಳುತ್ತಿದ್ದ ಅರಸ ನಿರೋ ರೋಮ್ ನಗರ ಹೊತ್ತು ಉರಿಯುತ್ತಿದ್ದಾಗ ‘ಪಿಟೀಲು’ ಬಾರಿಸುತ್ತಿದ್ದನಂತೆ. ಅವನಂತೆಯೇ ಮೋದಿ ಕೂಡ ಇಡೀ ಗುಜರಾತ್ ರಾಜ್ಯ ಬೆಂಕಿಗೆ ಸಿಲುಕಿ ಹೊತ್ತು ಉರಿಯುತ್ತಿದ್ದಾಗ ಗಲಭೆ ನಿಯಂತ್ರಿಸದೇ ಕುಮ್ಮಕ್ಕು ನೀಡಿದ್ದಕ್ಕಾಗಿ “ಆಧುನಿಕ ನಿರೋ” ಎಂದು ಜರಿಯಿತು. ಅಷ್ಟೇ ಏಕೆ, ನರೇಂದ್ರ ಮೋದಿಗೆ ಅಮೇರಿಕಾಕ್ಕೆ ಕಾಲಿಡದಂತೆ ಅಮೇರಿಕಾದ ಆಡಳಿತ ನಿರ್ಬಂಧ ವಿಧಿಸಿಬಿಟ್ಟಿತು.
ಬಿಲ್ಕೀಸ್ ಬಾನು 2002 ರ ಗುಜರಾತಿನಲ್ಲಿ ನಡೆಸಲಾದ ನರಮೇಧದ ಒಂದು ಅಧ್ಯಾಯವಷ್ಟೇ! ಸಾವಿರಾರು ಮಹಿಳೆಯರು ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದರು. ಅಸಂಖ್ಯಾತ ಮುಸ್ಲಿಮರು ಕಗ್ಗೊಲೆಯಾದರು. ಒಬ್ಬ ಮುಸ್ಲಿಂ ಆಗಿ ಇಸ್ಲಾಂ ಎಂದರೆ ಶಾಂತಿ ಎಂಬ ಅನ್ವರ್ಥವಾಗಿರುವ ಬಿಲ್ಕೀಸ್ ಬಾನು ಮಹಿಳೆಯಾಗಿ ಬತ್ತದ ಭರವಸೆ, ಛಲ ಬಿಡದ ಹೋರಾಟಗಾರ್ತಿ. ಅಂತಃಕರಣ ಹಾಗೂ ಹೃದಯ ವಿಶಾಲತೆಯ ಸಾಕಾರಮೂರ್ತಿ ಆದಳು.
ಇದೀಗ ಆ ಅತ್ಯಾಚಾರಿ ಹಂತಕರೆಲ್ಲ ಸನ್ನಡತೆಯ ಖೈದಿಗಳಾಗಿದ್ದರೆಂದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಡುಗಡೆಗೊಂಡಿದ್ದಾರೆ. ಅದೇನೆ ಇರಲಿ, ಈ ದೇಶದಲ್ಲಿ ಮುಸಲ್ಮಾನರಿಗೆ ನ್ಯಾಯವೆನ್ನುವುದು ಕಗ್ಗತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕನ್ನು ಹುಡುಕಿದಂತೆ.
– ಸಂಗ್ರಹ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.