(www.vknews.in) : ನಿನ್ನೆ ಫುಟ್ಬಾಲ್ ದೈತ್ಯರ ತಂಡವಾದ ಪೋರ್ಚುಗಲನ್ನು ಸೋಲಿಸಿದ ಬಳಿಕ ಆಫ್ರಿಕಾದ ಮೊರಕ್ಕೋ ದೇಶ ಸುದ್ಧಿಯಲ್ಲಿದೆ. ಮೊರಕ್ಕೋ ದೇಶಕ್ಕೂ ನಮ್ಮ ಮಂಗಳೂರಿಗೂ ಒಂದು ಸಂಬಂಧವಿದೆ. ಅದೇನಪ್ಪಾ ಅಂದರೆ ಮಂಗಳೂರನ್ನು ಮೊಟ್ಟ ಮೊದಲ ಬಾರಿಗೆ ಇತಿಹಾಸ ಗ್ರಂಥವೊಂದರಲ್ಲಿ ಮಂಜರೂರ್ ಎಂದು ದಾಖಲಿಸಿದ್ದು ಇದೇ ಮೊರಕ್ಕೋ ಮೂಲದ ವಿಶ್ವ ಸಂಚಾರಿ ವಿದ್ವಾಂಸ ಇಬ್ನ್ ಬತೂತ.
ಮೊರಕ್ಕೋದ ಟ್ಯಾಂಜೀರ್ ನಗರದಿಂದ 1325ರಲ್ಲಿ ವಿಶ್ವ ಸಂಚಾರಕ್ಕೆ ಹೊರಟ ಇಬ್ನ್ ಬತೂತ 1342ರಲ್ಲಿ ನಮ್ಮ ಮಂಗಳೂರಿಗೆ ತಲುಪಿದ್ದರು. ಅವರು ತನ್ನ ವಿಶ್ವಪ್ರಸಿದ್ಧ ರಿಹ್ಲತ್ ಇಬ್ನ್ ಬತೂತದಲ್ಲಿ ಮಂಗಳೂರಿನ ಜನ, ಜನಜೀವನ,_ಬದುಕು, ಸಂಸ್ಕೃತಿ ಇವುಗಳನ್ನೆಲ್ಲಾ ದಾಖಲಿಸಿದ್ದಾರೆ. ಅವರು ತನ್ನ ಗ್ರಂಥದಲ್ಲಿ ಮಂಗಳೂರನ್ನು ಮಂಜರೂರ್ ಎಂದೇ ದಾಖಲಿಸಿದ್ದರು. ಮಂಗಳೂರಿಗೆ ಮಂಜರೂರ್ ಎಂಬ ಹೆಸರು ಕೊಟ್ಟವರು ಅರಬ್ಬರೇ ಆಗಿದ್ದಾರೆ.
1400 ವರ್ಷಗಳ ಹಿಂದೆ ಇಸ್ಲಾಂ ಧರ್ಮ ಪ್ರಚಾರಕ್ಕೆಂದು ಮಂಗಳೂರಿಗೆ ಆಗಮಿಸಿದ್ದ ಪ್ರವಾದಿ ಮುಹಮ್ಮದ್ (ಸ್ವ.ಅ)ರ ಸಹಚರರಾದ ಮಾಲಿಕ್ ಬಿನ್ ದೀನಾರ್ (ರ) ಮತ್ತವರ ಹತ್ತು ಮಂದಿ ಸಹಚರರು ಮಂಗಳೂರಿನ ಬಂದರ್ನಲ್ಲಿ ಒಂದು ಮಸೀದಿಯನ್ನು ನಿರ್ಮಿಸಿದರು. ಅದು ಭಾರತದ ಐದನೇ ಮಸೀದಿ ಮತ್ತು ಕರ್ನಾಟಕದ ಎರಡನೇ ಮಸೀದಿ.ಈ ಮಸೀದಿಯನ್ನು ಬ್ಯಾರಿಗಳು ತಲೆ ತಲಾಂತರಗಳಿಂದ ಬೆಲಿಯೆ ಪಳ್ಳಿ ಎನ್ನುತ್ತಾರೆ. 1790ರ ಸುಮಾರಿಗೆ ಆ ಮಸೀದಿಯನ್ನು ನವೀಕರಣ ಮಾಡಿಸಿದ ಹಝ್ರತ್ ಟಿಪ್ಪು ಸುಲ್ತಾನರು ಅದಕ್ಕೆ ಮಸ್ಜಿದ್ ಝೀನತ್ ಬಕ್ಷ್ ಎಂದು ಹೆಸರಿಟ್ಟರು.ಇದು ಭಾರತದ ಅತೀ ಸುಂದರ ಮಸೀದಿಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವಂತಹದ್ದು.
ಅವರು ಬಳಸಿದ್ದ ಮಂಜರೂರ್ ಎಂಬ ಹೆಸರನ್ನು ಇತಿಹಾಸ ಗ್ರಂಥವೊಂದರಲ್ಲಿ ಪ್ರಸಿದ್ಧಿಗೆ ತಂದವರು ಇದೇ ಮೊರಕ್ಕೊದಾ ಇಬ್ನ್ ಬತೂತ. ಇಬ್ನ್ ಬತೂತ ಮಂಗಳೂರಿಗೆ ಬಂದ ಕಾಲಕ್ಕೆ ಮಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮುಸ್ಲಿಮರಿದ್ದರು.ಆಗ ಬದ್ರುದ್ದೀನುಲ್ ಮಅ್ಬರೀ ಎಂಬ ವಿದ್ವಾಂಸರು ಮಂಗಳೂರಿನ ಖಾಝಿಯಾಗಿದ್ದರು.ಆ ಕಾಲದಲ್ಲಿಯೇ ಮಂಗಳೂರಿನಲ್ಲಿ ದರ್ಸ್ ಗಳಿದ್ದವು. ದರ್ಸ್ಗಳೆಂದರೆ ಇಸ್ಲಾಮಿಕ್ ಫಿಲಾಸಫಿ ಮತ್ತು ಧರ್ಮಶಾಸ್ತ್ರ ಕಲಿಸುವ ಉನ್ನತ ಶಾಲೆಗಳು.ಹೀಗೆ ನಮ್ಮ ಮಂಗಳೂರನ್ನು ಮೊಟ್ಟ ಮೊದಲ ಬಾರಿ ಜಗತ್ತಿಗೆ ವಿಸ್ತೃತವಾಗಿ ಪರಿಚಯಿಸಿದವರು ಮೊರಕ್ಕೋದ ಟ್ಯಾಂಜೀರ್ ನಗರದ ವಿಶ್ವ ಸಂಚಾರಿ ವಿದ್ವಾಂಸ ಇಬ್ನ್ ಬತೂತ..
ಇಂತಹ ಇಬ್ನ್ ಬತೂತರ ದೇಶ ಮೊರಕ್ಕೊ ನಿನ್ನೆ ಫುಟ್ಬಾಲ್ ಜಗತ್ತಿನಲ್ಲೊಂದು ವಿಸ್ಮಯವನ್ನೇ ಸೃಷ್ಟಿಸಿದೆ. ಮೊರಕ್ಕೋ ಈ ಬಾರಿ ಫುಟ್ಬಾಲ್ ಜಗತ್ತಿನ ದೊರೆಯಾಗಲಿ ಎಂದು ಹಾರೈಸೋಣ.
-ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.